Monday, 16th September 2024

ದೃಢನಿಲುವಿಗೆ ಅಂಟಿಕೊಂಡ ಭಾರತ

 

-ಶ್ರೀರಾಮ್ ಚೌಲಿಯಾ

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳನ್ನು ಒಳಗೊಂಡಿರುವ ‘ಬ್ರಿಕ್ಸ್’ ಒಕ್ಕೂಟ ಕಾರ್ಯಾರಂಭ ಮಾಡಿದ್ದು ೨೦೧೦ರಲ್ಲಿ. ಅಂದಿನಿಂದಲೂ, ಒಕ್ಕೂಟದ ಸದಸ್ಯ ರಾಷ್ಟ್ರಗಳ ನಡುವಿನ
ಸಾರ್ವಭೌಮ ಸಮಾನತೆ ಮತ್ತು ಒಮ್ಮತದ ನಿರ್ಣಯವನ್ನು ಆಧರಿಸಿದ ಬಹುಪಕ್ಷೀಯ ಸ್ಥಾಪಿತ ವ್ಯವಸ್ಥೆಯಾಗಿ ಅದನ್ನು ವಿನ್ಯಾಸಗೊಳಿಸಲಾಗಿದೆ. ಇಷ್ಟಾಗಿಯೂ, ಈ ಗುಂಪಿನೊಳಗೆ ಆಂತರಿಕ ಅಸಮ್ಮಿತಿಗಳು ಹಾಗೂ ಭೂರಾಜಕೀಯದ ಅಭಿಪ್ರಾಯಭೇದಗಳ ಒಳಸುಳಿಯೂ ಇದ್ದುದುಂಟು. ವರ್ಷಗಳು ಉರುಳಿದಂತೆ ಚೀನಾ ಉನ್ನತ ಕಾರ್ಯಕ್ಷಮತೆ ಮೆರೆಯತೊಡಗಿ ಒಕ್ಕೂಟದ ಮಿಕ್ಕ ಸದಸ್ಯ ರಾಷ್ಟ್ರಗಳನ್ನು ಕುಬ್ಜವಾಗಿಸುವಷ್ಟರ ಮಟ್ಟಿಗೆ ಭಾರಿ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯನ್ನು ಕ್ರೋಡೀಕರಿಸಿಕೊಂಡಿತು. ಹೀಗಾಗಿ ಚೀನಾವನ್ನು ಈಗ ‘ಅಭಿವೃದ್ಧಿಶೀಲ ದೇಶ’ ಎಂದೋ, ‘ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆ’ ಎಂದೋ ವರ್ಗೀಕರಿಸಲಾಗದು. ಕಾರಣ, ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದ ಎದುರು ವಿವಿಧ ಕಾರ್ಯಕ್ಷೇತ್ರಗಳಲ್ಲಿ ತೊಡೆತಟ್ಟಿ ನಿಲ್ಲ ಬಲ್ಲಂಥ ಮಹಾನ್ ಶಕ್ತಿಶಾಲಿ ರಾಷ್ಟ್ರದ ಸ್ಥಾನಮಾನ ಚೀನಾಕ್ಕೆ
ದಕ್ಕಿಬಿಟ್ಟಿದೆ; ಹೀಗಾಗಿ ಮಿಕ್ಕೆಲ್ಲ ಭೂಖಂಡಗಳಿಗೆ ಕಿರಿಕಿರಿ ಉಂಟುಮಾಡುವ ಇಲ್ಲವೇ ಅವುಗಳೊಂದಿಗೆ ಅಹಂಕಾರ/ ಪ್ರತಿಷ್ಠೆಯಿಂದ ವರ್ತಿಸುವ ಪರಿಪಾಠಕ್ಕೆ ಅದು ಜೋತು ಬಿದ್ದಿದೆ! ಚೀನಾದ ವಿದೇಶಾಂಗ ನೀತಿಯು ಏಕಪಕ್ಷೀಯವೂ ಆಕ್ರಮಣಕಾರಿಯೂ ಆಗಿದ್ದರೂ, ‘ಬ್ರಿಕ್ಸ್’ ಒಕ್ಕೂಟದಲ್ಲಿ ನೆಲೆಗೊಂಡಿರುವ ಕಾರಣದಿಂದಾಗಿ ಅಮೆರಿಕದ ವಿರುದ್ಧ ತಿರಸ್ಕಾರದ ನೋಟ ಬೀರುವುದು ಅದಕ್ಕೆ ಸಾಧ್ಯವಾಗಿದೆ; ಮಾತ್ರವಲ್ಲ, ದಕ್ಷಿಣಾರ್ಧ ಗೋಳದ ಓರ್ವ ವಕ್ತಾರ ಎಂಬಂತೆ ಹಕ್ಕು ಸಾಧಿಸುವುದೂ ಅದಕ್ಕೆ ಸಾಧ್ಯವಾಗಿಬಿಟ್ಟಿದೆ. ಈ ಮಾತಿನ ತಾತ್ಪರ್ಯ ಇಷ್ಟೇ: ಚೀನೀ ಗುಣ-ವೈಶಿಷ್ಟ್ಯಗಳೊಂದಿಗೆ ಅಧಿಕಾರ ರಾಜಕಾರಣದ ಮಹದಾಟವನ್ನಾಡಲು ‘ಬ್ರಿಕ್ಸ್’
ಒಕ್ಕೂಟವು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರಿಗೆ ಒಂದು ಉಪಯುಕ್ತ ‘ಮೀಟುಗೋಲು’ ಆಗಿಬಿಟ್ಟಿದೆ.

ಆದರೆ, ಚೀನಾದ ಇಂಥ ‘ಏಕವ್ಯಕ್ತಿ ಪ್ರದರ್ಶನ’ಕ್ಕೆ ಈಗ ತಡೆ ಒದಗಿದ್ದು, ಭಾರತ ಹೊಸ ಆಟಗಾರನಾಗಿ ಮೈಕೊಡವಿಕೊಂಡು ಎದ್ದಿದೆ. ಸುಮಾರು ೪ ದಶಕದಷ್ಟು ಸುದೀರ್ಘವಾಗಿದ್ದ ಚೀನಾದ ಮ್ಯಾರಥಾನ್ ಕೊನೆಗೊಂಡು ಅದರ ಆರ್ಥಿಕತೆ ಕುಸಿಯತೊಡಗಿದೆ. ಮತ್ತೊಂದೆಡೆ, ಕ್ಷಿಪ್ರ ಆರ್ಥಿಕ ಬೆಳವಣಿಗೆಯನ್ನು ದಾಖಲಿಸುತ್ತಿರುವ ಭಾರತ, ಮುಂಬರುವ ದಶಕದೊಳಗೆ ‘ಬ್ರಿಕ್ಸ್’ ಒಕ್ಕೂಟದ ಮಿಕ್ಕೆಲ್ಲ ಸದಸ್ಯ ರಾಷ್ಟ್ರಗಳನ್ನೂ ಈ ನಿಟ್ಟಿನಲ್ಲಿ ಮೀರಿಸಲಿದೆ ಎಂದು ಅಂದಾಜಿಸಲಾಗಿದೆ. ಏರುಗತಿಯಲ್ಲಿರುವ ತನ್ನ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ), ಆರ್ಥಿಕ ಸಾಮರ್ಥ್ಯ ಹಾಗೂ ಅನುಕೂಲಕರ ಜಾಗತಿಕ ಕಾರ್ಯತಂತ್ರದ ವಾತಾವರಣದ ಕಾರಣದಿಂದಾಗಿ ಭಾರತವು ಸುಸ್ಥಿತಿಯಲ್ಲಿದೆ. ಜತೆಗೆ ಚೀನಾಕ್ಕೆ ಹೋಲಿಸಿದಾಗ ಭಾರತವು ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವಂತೆ ಹಾಗೂ ಅಂತಾರಾಷ್ಟ್ರೀಯ ಭೂರಾಜಕೀಯದ ಸಂರಚನೆಯಲ್ಲಿ ಒಂದು ‘ಪರ್ಯಾಯ ಧ್ರುವ’ವಾಗಿ ತನ್ನನ್ನು ಪ್ರತಿಷ್ಠಾಪಿಸಿಕೊಳ್ಳುತ್ತಿರುವಂತೆ ತೋರುತ್ತಿದೆ. ಜೋಹಾನ್ಸ್ ಬರ್ಗ್‌ನಲ್ಲಿ ಇತ್ತೀಚೆಗೆ ನಡೆದ ‘ಬ್ರಿಕ್ಸ್’ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ‘ಭಾರತವು ೫ ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವತ್ತ ದಾಪುಗಾಲು ಹಾಕುತ್ತಿದೆ’ ಎನ್ನುವ ಮೂಲಕ ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತದ ಆತ್ಮವಿಶ್ವಾಸವನ್ನು ಹೊರಹೊಮ್ಮಿಸಿದ್ದಾರೆ. ಅಷ್ಟೇ ಅಲ್ಲ, ‘ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್ ಆಗಲಿದ್ದು, ದಕ್ಷಿಣಾರ್ಧ ಗೋಳದ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಒದಗಿಸುವ ಓರ್ವ ವಿಶ್ವಾಸಾರ್ಹ ರಾಷ್ಟ್ರವಾಗಲಿದೆ’ ಎಂದೂ ಅವರು ಭರವಸೆ ನೀಡಿದ್ದು ಗಮನಾರ್ಹ. ಒಂದೆಡೆ ಚೀನಾ ಜನಸಂಖ್ಯೆಯ ದೃಷ್ಟಿಯಿಂದಲೂ, ಆರ್ಥಿಕತೆಯ ನೆಲೆಗಟ್ಟಿನಲ್ಲೂ ಕುಸಿಯುತ್ತಾ ಅಮೆರಿಕದ ಎದುರು ಶೀತಲ ಸಮರದಂಥ ಹಣಾಹಣಿಯ ಘಟ್ಟವನ್ನು ಪ್ರವೇಶಿಸಿದ್ದರೆ, ಮತ್ತೊಂದೆಡೆ ಭಾರತವು ಅಂತಾರಾಷ್ಟ್ರೀಯ ಸಮುದಾಯದ ಅವಶ್ಯಕತೆಗಳನ್ನು ಈಡೇರಿಸುವ ಓರ್ವ ವಿಶ್ವಾಸಾರ್ಹ ಮತ್ತು ಹೆಚ್ಚು ಹೊಂದಿಕೊಳ್ಳಬಲ್ಲ ಪಾತ್ರಧಾರಿಯಾಗಿ ತನ್ನನ್ನು ಬಿಂಬಿಸಿಕೊಳ್ಳುತ್ತಿದೆ. ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿಯವರು ‘ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ತೀವ್ರಸ್ವರೂಪದ ಸಹಕಾರದ ಅಗತ್ಯವಿದೆ’ ಎಂದು ಕರೆನೀಡಿದ್ದು ಇದಕ್ಕೊಂದು ನಿದರ್ಶನ.

‘ಬ್ರಿಕ್ಸ್ ಬಾಹ್ಯಾಕಾಶ ಪರಿಶೋಧನಾ ಒಕ್ಕೂಟ’ವೊಂದರ ಅಗತ್ಯವಿದೆ ಎಂಬ ಮೋದಿಯವರ ಪ್ರಸ್ತಾವವು, ಅಭಿವೃದ್ಧಿಶೀಲ ದೇಶಗಳಿಗಾಗಿ ಬಾಹ್ಯಾಕಾಶ ಯಾನದ ಸೌಲಭ್ಯಗಳನ್ನು ನಿರ್ಮಿಸಿಕೊಡುವಲ್ಲಿನ ಭಾರತದ ಸಹಕಾರ ಹಸ್ತಕ್ಕೆ ಮೂರ್ತರೂಪ ನೀಡಬಲ್ಲದು. ಚಂದ್ರನ ದಕ್ಷಿಣ ಧ್ರುವದಲ್ಲಿ ಗಗನನೌಕೆಯನ್ನು ಇಳಿಸಿದ ಮೊದಲ ದೇಶ ಎಂಬ ಇತಿಹಾಸವನ್ನು ಭಾರತ ಸೃಷ್ಟಿಸಿದ ನಂತರ ಈ ಪ್ರಸ್ತಾವಕ್ಕೆ ಅಥವಾ ಪರಿಕಲ್ಪನೆಗೆ
ಹೆಚ್ಚಿನ ತೂಕ ಬಂದಿದೆ ಎಂದರೆ ಅತಿಶಯೋಕ್ತಿಯಲ್ಲ. ಬ್ರಿಕ್ ಶೃಂಗದ ವೇದಿಕೆಯಿಂದ ವಿಶ್ವವನ್ನುದ್ದೇಶಿಸಿ ಮಾತನಾಡಿದ ಮೋದಿಯವರು, ‘ಚಂದ್ರಯಾನ-೩ರ ಯಶಸ್ಸು ಒಂದಿಡೀ ಮನುಕುಲಕ್ಕೆ ಸೇರಿದ್ದು, ಇತರ ರಾಷ್ಟ್ರಗಳು ಕೈಗೊಳ್ಳುವ ಇಂಥದೇ ಚಂದ್ರಯಾನಗಳಿಗೆ ಭಾರತ ನೆರವಾಗಲಿದೆ’ ಎಂದಿದ್ದು ಕೆಲವರ ನೆನಪನ್ನು ದಶಕಗಳಷ್ಟು ಹಿಂದಕ್ಕೆ ಸೆಳೆದೊಯ್ದಿತು. ‘ಬಾಹ್ಯಾಕಾಶ ಪರಿಶೋಧನೆಗಳಿಗೆ ಸಂಬಂಧಿಸಿದ ನಮ್ಮ ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಜನಗಳನ್ನು ವಿಶ್ವದ ಮಿಕ್ಕ ರಾಷ್ಟ್ರಗಳೊಂದಿಗೂ ಹಂಚಿಕೊಳ್ಳುತ್ತೇವೆ’ ಎಂಬುದಾಗಿ ಅಮೆರಿಕದ ಮತ್ತು ಸೋವಿಯತ್ ಒಕ್ಕೂಟದ ಅಂದಿನ ನಾಯಕರು ಬಹಿರಂಗವಾಗಿಯೇ ಪ್ರತಿಜ್ಞೆ ಮಾಡಿದ್ದನ್ನು ಇದು ನೆನಪಿಸಿತು ಎನ್ನಬೇಕು.

ಭಾರತವು ಇತರ ಕಾರ್ಯಕ್ಷೇತ್ರಗಳಲ್ಲೂ ಹೊಂದಿರುವ ತುಲನಾತ್ಮಕ ಪ್ರಯೋಜನಗಳ ಕುರಿತೂ ಈ ವೇಳೆ ಪ್ರಸ್ತಾಪಿಸಿದ ಮೋದಿಯವರು, ಭಾರತದ ಹೆಗ್ಗುರುತು ಎನಿಸಿಕೊಂಡಿರುವ ‘ಯೂನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್’ (ಯುಪಿಐ) ಮಾರ್ಗೋಪಾಯವನ್ನು, ಸಾರ್ವಜನಿಕ ಸರಕುಗಳು ಮತ್ತು ವಾಣಿಜ್ಯ ವಿನಿಮಯಗಳಿಗಾಗಿನ ಕಾರ್ಯಸಾಧ್ಯ ಡಿಜಿಟಲ್ ಮಾಧ್ಯಮವಾಗಿ ಡಜನ್‌ಗೂ ಹೆಚ್ಚು ದೇಶಗಳು ಅಳವಡಿಸಿಕೊಳ್ಳುತ್ತಿವೆ ಎಂದು ಒತ್ತಿಹೇಳಿದರು. ಬ್ರಿಕ್ಸ್ ಒಕ್ಕೂಟದಲ್ಲಿ ಪಾಶ್ಚಾತ್ಯ ರಾಷ್ಟ್ರಗಳ ಶಾಶ್ವತ ವಿರೋಧಿಗಳೆನಿಸಿಕೊಂಡಿರುವ ಚೀನಾ ಮತ್ತು ರಷ್ಯಾ ದೇಶಗಳು, ಡಾಲರ್ ಅವಲಂಬನೆಯಿಂದ ಹಿಂದೆ ಸರಿದು ಅತಿ ಮಹತ್ವಾಕಾಂಕ್ಷೆಯ ‘ಬ್ರಿಕ್ಸ್
ಕರೆನ್ಸಿ’ಗೆ ಒತ್ತು ನೀಡಲು ಒತ್ತಾಯಿಸುತ್ತಿದ್ದರೂ, ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಸಂಯೋಜಿಸಬೇಕೆಂಬ ಭಾರತದ ಸಲಹೆಯು ದಕ್ಷಿಣಾರ್ಧ ಗೋಳದ ಪಾಲಿಗೆ ಹೆಚ್ಚು ಪ್ರಯೋಜನಕಾರಿಯೂ ಪ್ರಾಯೋಗಿಕವೂ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಬ್ರಿಕ್ಸ್ ಒಕ್ಕೂಟದ ರಾಷ್ಟ್ರಗಳಲ್ಲಿ ಹಾಗೂ ಮಿಕ್ಕ ಅಭಿವೃದ್ಧಿಶೀಲ ದೇಶಗಳಲ್ಲಿ ಚೀನಿ ವಿತ್ತೀಯ ಮತ್ತು ಹಣಕಾಸಿನ ಪ್ರಾಬಲ್ಯವನ್ನು ತಡೆಗಟ್ಟುವುದು ಭಾರತದ ಕಾರ್ಯತಂತ್ರದ ಮಾರ್ಗದರ್ಶಿ ಸೂತ್ರವಾಗಿರುವಂತೆ ತೋರುತ್ತದೆ.

ಜಿ-೨೦ ಕೂಟದಲ್ಲಿ ಆಫ್ರಿಕಾದ ದೇಶಗಳಿಗೆ ಕಾಯಂ ಸದಸ್ಯತ್ವ ನೀಡುವುದನ್ನು ಪ್ರಸ್ತಾಪಿಸುವಂಥ ಮಹತ್ವದ ಉಪಕ್ರಮಕ್ಕೂ ಭಾರತದ ಜಿ-೨೦ ಅಧ್ಯಕ್ಷಗಿರಿ ಮುಂದಾಗಿದೆ ಎಂಬುದನ್ನು ನೆನಪಿಸಿ ಆಹ್ವಾನಿತ ಆಫ್ರಿಕನ್ ದೇಶಗಳಿಂದ ಬೆಂಬಲ ದಕ್ಕಿಸಿಕೊಂಡಿದ್ದೂ ಈ ಶೃಂಗಸಭೆಯ ವೇಳೆ ಭಾರತ ನೀಡಿದ ಮತ್ತೊಂದು ಕೊಡುಗೆಯೆನ್ನಬೇಕು. ಇದು ಮಹತ್ವದ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕೆಲ ಆಫ್ರಿಕನ್ ದೇಶಗಳ ಪಾಲಿಗೆ ಕೇವಲ ಬಾಯುಪಚಾರದ ಮಾತುಗಳಾಗಿರದೆ ವಸ್ತುನಿಷ್ಠವಾಗಿದ್ದವು ಎಂಬುದು ಗಮನಾರ್ಹ. ಆಫ್ರಿಕಾ ಒಕ್ಕೂಟವೀಗ ನಿರ್ಣಾಯಕ ಕವಲುದಾರಿಯಲ್ಲಿದೆ. ಭೌತಿಕ ಮೂಲಸೌಕರ್ಯಗಳ ನಿರ್ಮಾಣ
ಯೋಜನೆಗಳಿಗೆ ಅಗತ್ಯವಿರುವ ಭಾರಿ ಹಣವನ್ನು ಸಾಲದ ರೂಪದಲ್ಲಿ ನೀಡಲೊಪ್ಪಿರುವ ಚೀನಾದ ಮೇಲೆ ಆಫ್ರಿಕನ್ನರು ಅವಲಂಬಿತರಾಗಬೇಕಾಗುತ್ತದೆ ಎಂಬ ಗ್ರಹಿಕೆಯೀಗ ಸಮರ್ಥನೀಯವಲ್ಲ. ಏಕೆಂದರೆ ಚೀನಾದ ಆರ್ಥಿಕತೆಯೇ ಈಗ ಕುಸಿಯತೊಡಗಿದೆ. ಜತೆಗೆ, ಆಫ್ರಿಕಾ ದೇಶಗಳಿಗೆ ನೀಡುವ, ತಕ್ಷಣಕ್ಕೆ ಮರುಪಾವತಿಸಲಾಗದ ಸಾಲದಿಂದ ಒದಗುವ ಬೃಹತ್ ನಷ್ಟವನ್ನು ತಡೆದುಕೊಳ್ಳಬಲ್ಲ ಸಾಮರ್ಥ್ಯವೂ ಈಗ ಚೀನಾಕ್ಕಿಲ್ಲ. ಆದರೆ ಈ ವಿಷಯದಲ್ಲಿ ಭಾರತವು ಆಫ್ರಿಕನ್ ದೇಶಗಳಿಗೆ ಪರ್ಯಾಯ ಆಯ್ಕೆಯಾಗಬಲ್ಲದು. ಭಾರತ-ನಿರ್ಮಿತ ೫ಜಿ ಮತ್ತು ೬ಜಿ ದೂರಸಂಪರ್ಕ ಕಾರ್ಯಜಾಲಗಳಿಗೆ ಒಂದು ಜಾಗತಿಕ ಅಸ್ತಿತ್ವವನ್ನು ನೀಡಬಲ್ಲ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ನಿರ್ಮಾಣಕ್ಕೆ ಒತ್ತುನೀಡುವುದೂ ಸೇರಿದಂತೆ ಜೋಹಾನ್ಸ್‌ಬರ್ಗ್ ಶೃಂಗ ಸಭೆಯಲ್ಲಿ ಭಾರತದಿಂದ ಹೊಮ್ಮಿದ ‘ಪೂರ್ವನಿಯಾಮಕ ರಾಜತಂತ್ರ’ವು ಚೀನಾ ಮಾದರಿಗಿಂತ ವಿಭಿನ್ನವಾಗಿದ್ದು ಅಂಥ ದೊಂದು ಪರ್ಯಾಯ ಆಯ್ಕೆಯ ನಸುನೋಟವನ್ನು ನೀಡಿದೆ ಎನ್ನಲಡ್ಡಿಯಿಲ್ಲ.

ಬ್ರಿಕ್ಸ್ ಒಕ್ಕೂಟಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವ ರಾಷ್ಟ್ರಗಳ ಪೈಕಿ ಅರ್ಜೆಂಟೀನಾ, ಈಜಿಪ್ಟ್, ಇರಾನ್, ಸೌದಿ ಅರೇಬಿಯಾ ಮತ್ತು ಅರಬ್ ಸಂಯುಕ್ತ ಗಣರಾಜ್ಯಗಳು ಔಪಚಾರಿಕವಾಗಿ ಭಾರತದ ಕಾರ್ಯತಂತ್ರದ ಸಹಭಾಗಿಗಳೇ ಆಗಿರುವುದು ಕಾಕತಾಳೀಯವೇನಲ್ಲ. ಆರನೆಯ ಆಹ್ವಾನಿತ ರಾಷ್ಟ್ರವಾದ ಎಥಿಯೋಪಿಯಾ, ಬಹುಪಕ್ಷೀಯ ವೇದಿಕೆಗಳಲ್ಲಿ ಭಾರತದೊಂದಿಗೆ ಹೊಂದಿಕೊಂಡು ಹೋಗುತ್ತದೆ. ಚೀನಾ ಪ್ರಣೀತ ‘ಬೆಲ್ಟ್ ಆಂಡ್ ರೋಡ್’ ಉಪಕ್ರಮದಲ್ಲಿ ಈ ಆರೂ ರಾಷ್ಟಗಳು ಸಹಭಾಗಿಗಳಾಗಿವೆ ಎಂದ ಮಾತ್ರಕ್ಕೆ ಈ ಯಾವ ರಾಷ್ಟ್ರವೂ ಚೀನಾದೆಡೆಗೆ ಅತಿದೈನ್ಯತೆಯನ್ನೇನೂ ತೋರಬೇಕಿಲ್ಲ ಮತ್ತು ಈ ಯಾವ ರಾಷ್ಟ್ರವನ್ನೂ ಚೀನಾ
ಲಘುವಾಗಿ ಪರಿಗಣಿಸುವಂತಿಲ್ಲ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತ ಎಷ್ಟರಮಟ್ಟಿಗೆ ಗುರುತಿಸಿಕೊಂಡಿದೆ ಎಂಬುದನ್ನು ಜೋಹಾನ್ಸ್‌ಬರ್ಗ್ ಶೃಂಗಸಭೆ ಸಮರ್ಥವಾಗೇ ಬಿಂಬಿಸಿದೆ. ಬ್ರಿಕ್ಸ್ ಒಕ್ಕೂಟದ ಇತರ ಕೆಲ ಸದಸ್ಯ ರಾಷ್ಟ್ರಗಳಿಗಿಂತ ಚೀನಾ ಈಗಲೂ ಮುಂದಿರುವುದು ದಿಟವೇ; ಆದರೆ ನಿರ್ದಿಷ್ಟ ಮತ್ತು ವಾಸ್ತವಿಕ ಸಾಧನೆಗಳ ಆಧಾರದ ಮೇಲೆ ಮುನ್ನಂದಾಜಿಸಲಾಗಿರುವ ಭಾರತದ ಔನ್ನತ್ಯವು, ಭೂರಾಜಕೀಯದ ಆಡುಂಬೊಲವನ್ನು ಮತ್ತಷ್ಟು ಸಮತಟ್ಟುಗೊಳಿಸಿ ಅದಕ್ಕೆ ಪ್ರಜಾಪ್ರಭುತ್ವದ ಆಯಾಮವನ್ನು ನೀಡಿ ಮತ್ತಷ್ಟು ಜನಪ್ರಿಯಗೊಳಿಸುವ ದಿನಗಳು ದೂರವಿಲ್ಲ.
(ಲೇಖಕರು ಜಿಂದಾಲ್ ಸ್ಕೂಲ್ ಆ- ಇಂಟರ್
ನ್ಯಾಷನಲ್ ಅ-ರ‍್ಸ್‌ನಲ್ಲಿ ವಿಭಾಗದ ಮುಖ್ಯಸ್ಥರು)

Leave a Reply

Your email address will not be published. Required fields are marked *