Friday, 29th November 2024

ಭಾರತದ ತೆರಿಗೆ ವ್ಯವಸ್ಥೆಯ ಆಸಕ್ತಿದಾಯಕ ಇತಿಹಾಸ

ವಿದ್ಯಮಾನ

ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡ

ಮೌರ್ಯರ ಕಾಲದ ಅರ್ಥವ್ಯವಸ್ಥೆಯು ಆರನೇ ಒಂದು ಭಾಗದಷ್ಟು ಕೃಷಿ ಉತ್ಪನ್ನಗಳನ್ನು ಮಾತ್ರ ತೆರಿಗೆಯಾಗಿ ಸಂಗ್ರಹಿಸದೇ ನೀರಿನ ಶುಲ್ಕ, ಆಕ್ಟ್ರಾಯ್ ಸುಂಕಗಳು ಮತ್ತು ಕಸ್ಟಮ್ಸ ಸುಂಕಗಳನ್ನು ಸಹ ವಿಧಿಸುತ್ತಿತ್ತು. ಅರಣ್ಯ ಉತ್ಪನ್ನಗಳ ಮೇಲೆ ಮತ್ತು ಲೋಹಗಳ ಗಣಿಗಾರಿಕೆಯಿಂದಲೂ ತೆರಿಗೆಗಳನ್ನು ಸಂಗ್ರಹಿಸಲಾಗುತ್ತಿತ್ತು. ಉಪ್ಪಿನ ತೆರಿಗೆಯು ಆ ಕಾಲದಲ್ಲಿ ಆದಾಯದ ಪ್ರಮುಖ ಮೂಲವಾಗಿತ್ತು.

ಸರಕಾರಗಳು ಜನರ ಆದಾಯ ಮತ್ತು ಸಂಪತ್ತಿನ ಮೇಲೆ ವಿಧಿಸುತ್ತಿರುವ ವಿವಿಧ ತೆರಿಗೆಗಳು ಇತ್ತೀಚಿನವು ಎಂಬುದು ಸಾಮಾನ್ಯರ ನಂಬಿಕೆಯಾಗಿದೆ. ಆದರೆ, ಪ್ರಾಚೀನ ಭಾರತೀಯ ರಾಜ ಪ್ರಭುತ್ವಗಳಲ್ಲಿಯೂ ಸಹ ಆದಾಯದ ಮೇಲಿನ ತೆರಿಗೆಗಳನ್ನು ಒಂದಲ್ಲ ಒಂದು ರೂಪದಲ್ಲಿ ವಿಽಸಲಾಗುತ್ತಿತ್ತು
ಎಂದು ಹೇಳಲು ಸಾಕಷ್ಟು ಪುರಾವೆಗಳನ್ನು ನೀಡಬಹುದಾಗಿದೆ. ಮನು ಸ್ಮೃತಿ, ಕೌಟಿಲ್ಯನ ಅರ್ಥಶಾಸ್ತ್ರ ಕಾಳಿದಾಸನ ರಘುವಂಶಗಳಲ್ಲಿ ವಿವಿಧ ತೆರಿಗೆ ಕ್ರಮಗಳ ವಿಸ್ತೃತವಾದ ಉಖಗಳು ಕಾಣಸಿಗುತ್ತವೆ.

ತೆರಿಗೆಗಳನ್ನು ಪ್ರಜೆಗಳ ಆದಾಯ ಮತ್ತು ವೆಚ್ಚಗಳನ್ನು ಗಮನದಲ್ಲಿರಿಸಿ ನಿರ್ಧರಿಸಬೇಕಾಗುತ್ತದೆಯೇ ಹೊರತು ನಿರಂಕುಶವಾಗಿ ಅಲ್ಲ ಮತ್ತು ರಾಜ ಪ್ರಜೆಗಳ ಮೇಲೆ ತೆರಿಗೆ ವಿಧಿಸಬಹುದಾದರೂ ಅದು ವಿಪರೀತವಾಗಬಾರದು ಎಂದು ಎಂದು ಮಹರ್ಷಿ ಮನು ಸಲಹೆ ನೀಡುತ್ತಾನೆ. ಮನು ಮಹರ್ಷಿಯ ಪ್ರಕಾರ ತೆರಿಗೆಗಳ ಸಂಗ್ರಹದ ಸಂಪೂರ್ಣ ಅನುಪಸ್ಥಿತಿ ಅಥವಾ ಅತಿಯಾದ ತೆರಿಗೆ ಸಂಗ್ರಹಣೆ ಎರಡನ್ನೂ ತಪ್ಪಿಸಿ ರಾಜನಾದವನು ಸಮತ್ವವನ್ನು
ಸಾಧಿಸಬೇಕಾಗುತ್ತದೆ ಮತ್ತು ಪ್ರಜೆಗಳ ದೈನಂದಿನ ಜೀವನದ ಮೇಲೆ ಯಾವುದೇ ಋಣಾತ್ಮಕ ಪ್ರಭಾವ ಬೀರದಂತೆ ತೆರಿಗೆ ಸಂಗ್ರಹವನ್ನು ವ್ಯವಸ್ಥೆ ಗೊಳಿಸಬೇಕು.

ವ್ಯಾಪಾರಿಗಳು ಮತ್ತು ಕುಶಲಕರ್ಮಿಗಳು ತಮ್ಮ ಲಾಭದ ಐದರಲ್ಲಿ ಒಂದು ಭಾಗವನ್ನು ಬೆಳ್ಳಿ ಮತ್ತು ಚಿನ್ನದ ರೂಪದಲ್ಲಿ ಪಾವತಿಸಬೇಕು, ಆದರೆ ಕೃಷಿಕರು ತಮ್ಮ ಉತ್ಪನ್ನದ ಆರರಲ್ಲಿ ಒಂದು, ಎಂಟರಲ್ಲಿ ಒಂದು ಅಥವಾ ಹತ್ತರಲ್ಲಿ ಒಂದು ಭಾಗದಷ್ಟನ್ನು ಅವರವರ ಆರ್ಥಿಕ ಸ್ಥಿತಿಗೆ ಅನುಗುಣವಾಗಿ
ಪಾವತಿಸಬಹುದು ಎಂದು ಅವರು ಹೇಳಿದ್ದರು. ಅಷ್ಟೇ ಅಲ್ಲ, ಕಲಾವಿದರೂ ಸೇರಿದಂತೆ ಸಮಾಜದ ವಿವಿಧ ವರ್ಗದ ಜನರ ಮೇಲೂ ತೆರಿಗೆಗಳನ್ನು
ವಿಧಿಸಬಹುದು ಎನ್ನುವುದು ಅವರ ನಿರ್ಣಯವಾಗಿತ್ತು. ಆ ಕಾಲದಲ್ಲಿ ತೆರಿಗೆಯನ್ನು ಚಿನ್ನದ ನಾಣ್ಯಗಳು, ದನಕರುಗಳು, ಧಾನ್ಯಗಳ ರೂಪದಲ್ಲಿ ಮತ್ತು ವೈಯಕ್ತಿಕ ಸೇವೆಯನ್ನು ಸಲ್ಲಿಸುವ ಮೂಲಕ ಪಾವತಿಸಬಹುದಾಗಿತ್ತು.

ಈ ವಿಷಯದ ಬಗ್ಗೆ ಮನು ತನ್ನ ಸ್ಮೃತಿ ಗ್ರಂಥದಲ್ಲಿ ನೀಡುವ ವಿವರವಾದ ವಿಶ್ಲೇಷಣೆಯನ್ನು ಗಮನಿಸಿದರೆ ಪ್ರಾಚೀನ ಕಾಲದಲ್ಲಿಯೂ ಸಹ ಭಾರತದಲ್ಲಿ ಯೋಜಿತ ತೆರಿಗೆ ವ್ಯವಸ್ಥೆ ಅಸ್ತಿತ್ವದಲ್ಲಿತ್ತು ಎನ್ನುವುದು ಮನದಟ್ಟಾಗುತ್ತದೆ. ಮುಂದುವರೆದು, ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ರಚಿಸಿದ ಕೌಟಿಲ್ಯನ ಅರ್ಥಶಾಸದಲ್ಲಿ ತೆರಿಗೆ ವ್ಯವಸ್ಥೆಯನ್ನು ವಿಸ್ತಾರವಾಗಿ ವಿವರಿಸಲಾಗಿದೆ. ರಾಜನೀತಿಜ್ಞರ ಪ್ರಕಾರ, ಮೌರ್ಯರ ಕಾಲದ ಅರ್ಥವ್ಯವಸ್ಥೆಯು ಆರನೇ ಒಂದು
ಭಾಗದಷ್ಟು ಕೃಷಿ ಉತ್ಪನ್ನಗಳನ್ನು ಮಾತ್ರ ತೆರಿಗೆಯಾಗಿ ಸಂಗ್ರಹಿಸದೇ ನೀರಿನ ಶುಲ್ಕ, ಆಕ್ಟ್ರಾಯ್ ಸುಂಕಗಳು ಮತ್ತು ಕಸ್ಟಮ್ಸ ಸುಂಕಗಳನ್ನು ಸಹ ವಿಧಿಸುತ್ತಿತ್ತು.

ಅರಣ್ಯ  ಉತ್ಪನ್ನಗಳ ಮೇಲೆ ಮತ್ತು ಲೋಹಗಳ ಗಣಿಗಾರಿಕೆಯಿಂದಲೂ ತೆರಿಗೆಗಳನ್ನು ಸಂಗ್ರಹಿಸಲಾಗುತ್ತಿತ್ತು. ಉಪ್ಪಿನ ತೆರಿಗೆಯು ಆ ಕಾಲದಲ್ಲಿ ಆದಾಯದ ಪ್ರಮುಖ ಮೂಲವಾಗಿತ್ತು. ಕೌಟಿಲ್ಯನು ವಿದೇಶಗಳೊಂದಿಗೆ ನಡೆಸಿದ ವ್ಯಾಪಾರ ಮತ್ತು ವಾಣಿಜ್ಯವನ್ನು ಮತ್ತು ಅಂತಹ ವ್ಯಾಪಾರವನ್ನು ಉತ್ತೇಜಿಸಲು ಮೌರ್ಯ ಸಾಮ್ರಾಜ್ಯದ ಕಾರ್ಯನೀತಿಗಳನ್ನು ಅದರಲ್ಲಿ ವಿವರವಾಗಿ ವಿವರಿಸಿದ್ದಾನೆ. ಆ ಕಾಲದಲ್ಲಿ ಚೀನಾ, ಸಿಲೋನ್ ಮತ್ತು ಇತರ ದೇಶಗಳಿಂದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು ಮತ್ತು ಆಮದು ಮಾಡಿಕೊಳ್ಳುವ ಎಲ್ಲ ವಿದೇಶಿ ಸರಕುಗಳ ಮೇಲೆ ‘ವರ್ತನಂ’ ಮತ್ತು ‘ದ್ವಾರೋದಯ’ ಎಂದು ಕರೆಯಲ್ಪಡುವ ಎರಡು ತರಹದ ತೆರಿಗೆಯನ್ನು ಸಂಗ್ರಹಿಸಲಾಗುತ್ತಿತ್ತು.

ಅಷ್ಟೇ ಅಲ್ಲದೇ ಮಾರಾಟ-ತೆರಿಗೆಯನ್ನು ವಿಽಸಲಾಗುತ್ತಿತ್ತು ಮತ್ತು ಕಟ್ಟಡಗಳ ಮಾರಾಟ ಮತ್ತು ಖರೀದಿಯು ಸಹ ತೆರಿಗೆಗೆ ವ್ಯಾಪ್ತಿಗೆ ಒಳಪಟ್ಟಿತ್ತು. ಜೂಜಿನ ಕಾರುಬಾರುಗಳನ್ನೂ ಸಹ ಕೇಂದ್ರೀಕೃತಗೊಳಿಸಿ ಅದರ ಮೇಲೆ ಸುಂಕ ವಸೂಲು ಮಾಡಲಾಗುತ್ತಿತ್ತು. ಯಾತ್ರಾರ್ಥಿಗಳ ಮೇಲೆ ‘ಯಾತ್ರಾವೇತನ’ ಎಂಬ ತೆರಿಗೆಯನ್ನು ವಿಧಿಸಲಾಗುತ್ತಿತ್ತು. ಅಂತೆಯೇ, ಟೋಲ್‌ಗಳು, ರಸ್ತೆ ಸೆಸ್, ದೋಣಿ ಶುಲ್ಕಗಳು ಮುಂತಾಗಿ ಎಲ್ಲವನ್ನೂ ವ್ಯವಸ್ಥಿತವಾಗಿ ನಿಗದಿಪಡಿಸ ಲಾಗಿತ್ತು.

ಕೌಟಿಲ್ಯನ ತೆರಿಗೆಯ ಪರಿಕಲ್ಪನೆಯು ಹೆಚ್ಚು ಕಡಿಮೆ ಆಧುನಿಕ ತೆರಿಗೆ ವ್ಯವಸ್ಥೆಗೆ ಬಹಳವಾಗಿ ಹೋಲುತ್ತದೆ. ತೆರಿಗೆ ಸಂಗ್ರಹಣೆಯಲ್ಲಿ ಇಕ್ವಿಟಿ ಮತ್ತು
ನ್ಯಾಯದ ಮೇಲೆ ಅವರ ಎಲ್ಲ ಒತ್ತು ಇರುತ್ತಿತ್ತು. ಆಗಲೂ ಮಧ್ಯಮ ವರ್ಗದವರಿಗೆ ಹೋಲಿಸಿದರೆ ಶ್ರೀಮಂತರು ಹೆಚ್ಚಿನ ತೆರಿಗೆಯನ್ನು ಪಾವತಿಸ ಬೇಕಾಗಿತ್ತು. ರೋಗಗಳಿಂದ ಬಳಲುತ್ತಿರುವ ಅಥವಾ ಅಪ್ರಾಪ್ತ ವಯಸ್ಕರು ಮತ್ತು ವಿದ್ಯಾರ್ಥಿಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿತ್ತು.
ಸ್ಟ್ಯಾಂಡ್ ಲ್ಯಾಂಡ್ (ಸೀತಾ) ಧಾರ್ಮಿಕ ತೆರಿಗೆಗಳು (ಬಾಲಿ) ಮತ್ತು ನಗದು (ಕಾರಾ) ತೆರಿಗೆಗಳಂತಹ ಇತರ ಮೂಲಗಳು ಸಹ ಆಗ ಇದ್ದವು. ‘ವಣಿಕ್ಪತ್’ ಎನ್ನುವ ರಸ್ತೆಗಳು ಮತ್ತು ಟ್ರಾಫಿಕ್‌ನಿಂದ ಬರುವ ಆದಾಯವನ್ನು ಟೋಲ್‌ಗಳಾಗಿ ಪಾವತಿಸಲಾಗುತ್ತಿತ್ತು.

ವಾರ್ಷಿಕ ಸ್ಥಿರ ತೆರಿಗೆಗಳು ಮತ್ತು ಭದ್ರಾ, ಪದಿಕಾ ಮತ್ತು ವಸಂತಿಕಾದಂತಹ ಅರ್ಧ ವಾರ್ಷಿಕ ತೆರಿಗೆ ಪಾವತಿಯ ಪದ್ಧತಿಯೂ ಆಗ ಇತ್ತು. ಬಿತ್ತಿದ ಭೂಮಿಯ ಉತ್ಪನ್ನಗಳು, ತೈಲ, ಕಬ್ಬು ಮತ್ತು ಪಾನೀಯಗಳ ತಯಾರಿಕೆಯಿಂದ ಬರುವ ಲಾಭಗಳು, ಮದುವೆಯ ಸಂದರ್ಭಗಳಲ್ಲಿ ಬಳಸುವ ಸರಕುಗಳು, ದಾನ ಅಥವಾ ತ್ಯಾಗದ ಕಾರ್ಯಗಳಿಗೆ ಅಗತ್ಯವಾದ ವಸ್ತುಗಳು ಮತ್ತು ವಿಶೇಷ ರೀತಿಯ ಉಡುಗೊರೆಗಳನ್ನು ತೆರಿಗೆಯಿಂದ ವಿನಾಯಿತಿ ನೀಡಲಾಗಿತ್ತು. ಕೌಟಿಲ್ಯನು ಯುದ್ಧದ ಸಮಯದಲ್ಲಿ ಅಥವಾ ಕ್ಷಾಮ ಅಥವಾ ಪ್ರವಾಹದಂತಹ ತುರ್ತು ಪರಿಸ್ಥಿತಿಗಳಲ್ಲಿ ತೆರಿಗೆ ವ್ಯವಸ್ಥೆಯನ್ನು ಹೆಚ್ಚು ಕಠಿಣಗೊಳಿಸಬೇಕು ಮತ್ತು ರಾಜನು ಯುದ್ಧ ಸಾಲಗಳನ್ನು ಸಹ ಸಂಗ್ರಹಿಸಬಹುದು ಎಂದು ಹೇಳಿದ್ದನು.

ತುರ್ತು ಸಂದರ್ಭಗಳಲ್ಲಿ ಭೂ ಆದಾಯವನ್ನು ಆರರಲ್ಲಿ ಒಂದು ಭಾಗದಿಂದ ನಾಲ್ಕರಲ್ಲಿ ಒಂದುಭಾಗದಷ್ಟು ಹೆಚ್ಚಿಸಬಹುದಾಗಿತ್ತು. ಹಾಗಾಗಿ, ವ್ಯಾಪಾರದಲ್ಲಿ ತೊಡಗಿರುವ ಜನರು ಯುದ್ಧದ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ದೇಣಿಗೆಗಳನ್ನು ಪಾವತಿಸಬೇಕಾಗಿತ್ತು. ಈ ಎಲ್ಲ ಸಂಭಾವ್ಯ
ಮೂಲಗಳಿಂದ ರಾಜ್ಯದ ಬೊಕ್ಕಸಕ್ಕೆ ಆದಾಯವನ್ನು ಸಂಗ್ರಹಿಸಲಾಗುತ್ತಿತ್ತಾದರೂ, ಜನರನ್ನು ಶೋಷಿಸುವುದು ಅಥವಾ ಅತಿಯಾಗಿ ತೆರಿಗೆ ವಿಧಿಸುವುದು ಆ ಕಾಲದ ಅರ್ಥವ್ಯವಸ್ಥೆಯ ಆಧಾರ ತತ್ವವಾಗಿರಲಿಲ್ಲ. ಈ ರೀತಿ ಸಂಗ್ರಹವಾದ ಆದಾಯವನ್ನು ಸಮಾಜದ ಅಗತ್ಯಗಳಾದ ರಸ್ತೆಗಳ ನಿರ್ಮಾಣ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಹೊಸ ಗ್ರಾಮಗಳ ಸ್ಥಾಪನೆ ಮತ್ತು ಸಮುದಾಯಕ್ಕೆ ಪ್ರಯೋಜನಕಾರಿಯಾದ ಇತರ ಚಟುವಟಿಕೆಗಳಿಗೆ ಮಾತ್ರ ಖರ್ಚು ಮಾಡಲಾ ಗುತ್ತಿತ್ತು.

ಒಟ್ಟಾರೆಯಾಗಿ ನೋಡುವುದಾದರೆ, ಕೌಟಿಲ್ಯನ ಅರ್ಥಶಾಸವು ಈ ದೇಶದ ಸಾರ್ವಜನಿಕ ಹಣಕಾಸು ಆಡಳಿತದ ಕುರಿತಾಗಿ ವಿವರಿಸುವ ಮೊದಲ ಅಧಿಕೃತ ಮತ್ತು ಆಕರ ಗ್ರಂಥವಾಗಿದೆ ಎಂದು ನಿರ್ವಿವಾದವಾಗಿ ಹೇಳಬಹುದು. ಕೌಟಿಲ್ಯನ ಅರ್ಥಶಾಸ್ತ್ರವು ತೆರಿಗೆ ಮೂಲದ ಆದಾಯಕ್ಕೆ ಸರಿಯಾದ ಪ್ರಾಮುಖ್ಯತೆ ಯನ್ನು ನೀಡಿ ಆ ಮೂಲಕ ಸಾಮ್ರಾಜ್ಯದ ಸಮೃದ್ಧಿ ಮತ್ತು ಸ್ಥಿರತೆಗೆ ದಿಗ್ದರ್ಶನ ನೀಡುವ ಒಂದು ವಿಶಿಷ್ಟ ಪ್ರಯತ್ನವಾಗಿದೆ. ಹಾಗಾಗಿ, ಭಾರತೀಯರಿಗೆ
ಅರ್ಥಶಾಸ ಎಂದರೆ ಅದು ಕೌಟಿಲ್ಯನದು. ಅವನು ಸಾರ್ವಜನಿಕ ಹಣಕಾಸು ಮತ್ತು ತೆರಿಗೆ ವ್ಯವಸ್ಥೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ ಕಾರಣ
ಕೌಟಿಲ್ಯ ಪ್ರತಿಪಾದಿಸಿದ ಅರ್ಥವ್ಯವಸ್ಥೆ ಇಂದಿಗೂ ಭಾರತದ ಆಧುನಿಕ ಅರ್ಥವ್ಯವಸ್ಥೆಗೆ ಮೂಲ ಶಿಲೆಯಾಗಿದೆ.

ಚಾಣಕ್ಯನ ಪ್ರಕಾರ, ಸರಕಾರದ ಸಾಮರ್ಥ್ಯವು ನೇರವಾಗಿ ಅದರ ಖಜಾನೆಯ ಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ. ಖಜಾನೆ ಭರ್ತಿಯಾಗಿದ್ದಾಗಲೇ ಯಾವುದೇ ಸರಕಾರಕ್ಕೆ ಶಕ್ತಿ ಬರುವುದು ಎನ್ನುವುದು ಅವನ ಮತವಾಗಿತ್ತು. ರಾಜನ ಮತ್ತು ಪ್ರಜೆಗಳ ನಡುವಿನ ಸಂಬಂಧ ಕೇವಲ ತೆರಿಗೆಯಾಧಾರಿತ ವಾಗಬಾರದು, ಅವರೀರ್ವರ ಸಂಬಂಧವು ಧರ್ಮದ ಮೇಲೆ ಆಧಾರಿಸಿರಬೇಕು ಎಂದು ಆತ ಹೇಳಿದ್ದ. ಮುಂದುವರೆದು, ರಾಜನು ಪ್ರಜೆಗಳಿಂದ ತೆರಿಗೆಯನ್ನು ಸಂಗ್ರಹಿಸಿದ ಮೇಲೆ ತನ್ನ ಪ್ರಜೆಗಳನ್ನು ಸರ್ವತ್ರ ರಕ್ಷಿಸುವುದು ಅವನ ಕರ್ತವ್ಯವಾಗುತ್ತದೆ. ಹಾಗೊಮ್ಮೆ ರಾಜನು ತಮ್ಮನ್ನು ರಕ್ಷಣೆ ಮಾಡುವಲ್ಲಿ ವಿಫಲನಾದರೆ, ತೆರಿಗೆ ಪಾವತಿಮಾಡುವುದನ್ನು ನಿರಾಕರಿಸುವ ಅಥವಾ ಈಗಾಗಲೇ ಪಾವತಿಸಿದ ತೆರಿಗೆ ಗಳನ್ನು ಮರುಪಾವತಿಸುವಂತೆ ಪ್ರಭುತ್ವವನ್ನು ಒತ್ತಾಯಿಸುವ ಹಕ್ಕು ಪ್ರಜೆಗಳಿಗೆ ಇರಬೇಕು ಎನ್ನುವ ಚಿಂತನೆ ಕೌಟಿಲ್ಯನದಾಗಿತ್ತು.

ಸೌರಮಂಡಲದ ರಾಜ ಎನಿಸಿಕೊಳ್ಳುವ ಸೂರ್ಯ, ತಾನು ಭೂಮಿಯಿಂದ ತೆರಿಗೆ ರೂಪದಲ್ಲಿ ಹೀರುವ ತೇವಾಂಶವನ್ನು ಮಳೆಯರೂಪದಲ್ಲಿ ಸಾವಿರ ಪಟ್ಟು ಹೆಚ್ಚು ತಿರುಗಿ ಭೂಮಿಗೇ ನೀಡುವಂತೆ, ರಘುವಂಶದ ರಾಜನಾದ ದಿಲೀಪನು ಪ್ರಜಾ ಪರಿಪಾಲನೆಗೆ ಬೇಕಾದಷ್ಟು ತೆರಿಗೆಯನ್ನು ಮಾತ್ರ ಸಂಗ್ರಹಿಸುತ್ತಿದ್ದ ಮತ್ತು ಅದಕ್ಕೆ ಸಾವಿರಪಟ್ಟು ಹೆಚ್ಚು ಅನುಕೂಲಗಳನ್ನು ತಿರುಗಿ ಪ್ರಜೆಗಳಿಗೆ ನೀಡುತ್ತಿದ್ದ ಎಂದು ಕವಿ ಕಾಳಿದಾಸ ತನ್ನ ರಘುವಂಶ ಕಾವ್ಯದಲ್ಲಿ ರಾಜಾ ದಿಲೀಪನ ಆಡಳಿತದ ವರ್ಣನೆ ಮಾಡುತ್ತಾನೆ. ಮೊಘಲ್ ಆಕ್ರಮಣಕಾರರು ಅವರ ಆಡಳಿತ ಕಾಲದಲ್ಲಿ ತಮ್ಮದೇ ಆದ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದರು.

ಕುಖ್ಯಾತ ‘ಜೆಝಿಯಾ’ ದೇಶದಲ್ಲಿರುವ ಇಸ್ಲಾಮ್ ಧರ್ಮವನ್ನು ಪಾಲನೆ ಮಾಡದ ಜನರ ಮೇಲೆ ವಿಧಿಸಲಾದ ತೆರಿಗೆಯಾಗಿತ್ತು. ಅನ್ಯಧರ್ಮಗಳ ಪ್ರಭಲ ವಿರೋಧದಿಂದಾಗಿ ನಂತರ ಇದನ್ನು ಅಕ್ಬರ್ ರದ್ದುಗೊಳಿಸಿದ್ದ. ಇಂದು ನಮಗೆ ತಿಳಿದಿರುವ ಆದಾಯ ತೆರಿಗೆಯ ಪರಿಕಲ್ಪನೆಯನ್ನು ಭಾರತದಲ್ಲಿ ಮೊದಲು ೧೮೬೦ ರಲ್ಲಿ ಬ್ರಿಟಿಷರು ಪರಿಚಯಿಸಿದರು. ೧೮೫೭ ರ ದಂಗೆಯಿಂದಾಗಿಸರಕಾರದಿಂದ ಉಂಟಾದ ನಷ್ಟವನ್ನು ಸರಿದೂಗಿಸಲು ಇದನ್ನು ಪರಿಚಯಿಸಲಾಯಿತು ಎಂದು ಹೇಳಲಾಗಿದೆ. ಭಾರತದಲ್ಲಿ ಆದಾಯ ತೆರಿಗೆ ಕಾಯಿದೆಯನ್ನು ಅಧಿಕೃತವಾಗಿ ೧೮೮೬ ರಲ್ಲಿ ಅಂಗೀಕರಿಸಲಾಗಿತ್ತು ಮತ್ತು
ಪ್ರಸ್ತುತ ಇರುವ ಆದಾಯ ತೆರಿಗೆ ಕಾಯಿದೆಯನ್ನು ೧೯೬೧ ರಲ್ಲಿ ಅಂಗೀಕರಿಸಲಾಗಿದೆ.

ರಾಷ್ಟ್ರವು ವಿಕಸನಗೊಳ್ಳುತ್ತಿದ್ದಂತೆ, ಅದರ ಅಗತ್ಯಗಳು ಬದಲಾಗುತ್ತಾ ಸಾಗುತ್ತವೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ರಾಷ್ಟ್ರವು ಅಭಿವೃದ್ಧಿ ಹೊಂದಿ ದಂತೆ, ತೆರಿಗೆ ರಚನೆಯು ಅನೇಕ ಮಜಲುಗಳಲ್ಲಿ ಪರಿಷ್ಕರಣೆಗಳಿಗೆ ಒಳಗಾಗಿದೆ. ಉದಾಹರಣೆಗೆ, ವ್ಯಾಟ, ಅಬಕಾರಿ ಸುಂಕ ಮತ್ತು ಸೇವಾ ತೆರಿಗೆಯಂತಹ ಕೇಂದ್ರ ಮತ್ತು ರಾಜ್ಯ ಪರೋಕ್ಷ ತೆರಿಗೆಗಳನ್ನು ಬದಲಿಸಿದ ಸರಕು ಮತ್ತು ಸೇವಾ ತೆರಿಗೆ (ಎಖS) ಗಳನ್ನು ಕಾಲಕ್ಕೆ ತಕ್ಕಂತೆ ಭಾರತದಲ್ಲಿ ಜಾರಿಗೆ ತರಲಾ ಯಿತು.

ಒಟ್ಟಾರೆಯಾಗಿ ಮಹರ್ಷಿ ಮನು, ಕವಿ ಕಾಳಿದಾಸ ಮತ್ತು ಶಾಸ್ತ್ರಜ್ಞ ಕೌಟಿಲ್ಯ ಮುಂತಾದವರು ಪ್ರತಿಪಾದಿಸಿರುವುದು, ಬಲಾತ್ಕಾರವಾಗಿ ಪ್ರಜೆಗಳಿಂದ ಹೆಚ್ಚಿನ ತೆರಿಗೆ ವಸೂಲಿ ಮಾಡಿ ಆ ಸಂಪತ್ತನ್ನು ಅಂದಾ-ದುಂದಿ ಮಾಡದೇ ಪ್ರಜೆಗಳ ಹಿತಕ್ಕಾಗಿ ಮಾತ್ರ ಬಳಸಬೇಕು ಎನ್ನುವುದಾಗಿತ್ತು. ಆದರೆ ಇಂದು, ಪೆಟ್ರೋಲ್‌ನಂತಹ ಒಂದೇ ವಸ್ತುವಿನಮೇಲೆ ರಾಜ್ಯ ಮತ್ತು ರಾಷ್ಟ್ರಗಳು ಪ್ರತ್ಯೇಕವಾಗಿ ಹೇರುವ ಮೂಲ ಬೆಲೆಗಿಂತ ಅನೇಕ ಪಟ್ಟು ಹೆಚ್ಚಾಗುವಷ್ಟು ತೆರಿಗೆ, ಆಸ್ತಿ, ಆದಾಯ, ಉಳಿತಾಯ ಮತ್ತು ಖರ್ಚು ಇವೆಲ್ಲದರ ಮೇಲೆಯೂ ಜನರ ಮೇಲೆ ವಿಧಿಸುವ ತೆರಿಗೆ, ಉಳ್ಳವರಿಂದ ತೆಗೆದು ಇಲ್ಲದವರಿಗೆ ನೀಡುವ ಭರದಲ್ಲಿ ನಡುವೆ ಇರುವ ಮದ್ಯಮ ವರ್ಗದವರನ್ನು ಅಡಕತ್ತರಿಯ ನಡುವೆ ಇಡುವ ವ್ಯವಸ್ಥೆ, ಇನ್ನು ವಿನಿಯೋಜನೆಯನ್ನು ನೋದಿದರೆ, ಸರಕಾರ ದಲ್ಲಿ ಸದಾ ಅನಿಯಂತ್ರಿತವಾಗಿ ಬೆಳೆಯುತ್ತಿರುವ ಆಡಳಿತಾತ್ಮಕ ಮತ್ತು ಅನುತ್ಪಾದಕ ವೆಚ್ಚಗಳು, ಆದಾಯದ ಶೇ.೨೦ ರಷ್ಟನ್ನು ಬಡ್ಡಿಯನ್ನೇ ತುಂಬು ವಷ್ಟು ಅಭಿವೃದ್ಧಿಯ ಹೆಸರಿನಲ್ಲಿ ಮೈತುಂಬ ಮಾಡಿಕೊಂಡಿರುವ ಸಾಲ, ರಾಜಕೀಯ ಕಾರಣಕ್ಕಾಗಿ ಅಥವಾ ಮತ ಗಳಿಕೆಗಾಗಿ ತರ್ಕಬದ್ಧವಲ್ಲದ ‘ಉಚಿತ ಗ್ಯಾರಂಟಿ’ ಯೋಜನೆಗಳಿಗೆ ವ್ಯಯವಾಗುತ್ತಿರುವ ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣ.

ಈ ಎಲ್ಲ ಅಸಂಗತಗಳನ್ನು ಪರಿಭಾವಿಸಿ ನೋಡಿದರೆ ಇಂದು ನಮ್ಮ ಆರ್ಥಿಕ ಚಿಂತನೆಯ ಅಂತರ್ಗತವಾಗಿರುವ ತೆರಿಗೆ ವ್ಯವಸ್ಥೆ ಮತ್ತು ಅದರ ವಿನಿಯೋಜನೆ ಯಾವಕಡೆಗೆ ಸಾಗುತ್ತಿದೆ ಎನ್ನುವುದು ಸಾಮಾನ್ಯರಿಗೂ ಅರ್ಥವಾಗುತ್ತದೆ. ಹೇಗಿದ್ದರೂ ತಲೆ ತಗ್ಗಿಸಿ ತೆರಿಗೆಯನ್ನು ಪಾವತಿಸುತ್ತಾರೆ ಎಂದು ತೆರಿಗೆ ಪಾವತಿಸುವವರನ್ನು ಆಡಳಿತ ನಡೆಸುವವರು ಲಘುವಾಗಿ ಕಾಣದೇ ಅವರನ್ನು ಗೌರವಿಸುತ್ತಾ ಸಾಲದ ಆಧಾರದ ಮೇಲೆ ನಿಂತಿರುವ ಇಂದಿನ ಆರ್ಥಿಕತೆಯಿಂದ ಆರೋಗ್ಯಕರ ಅಭಿವೃದ್ಧಿ ಪರ ಮತ್ತು ಧಾರ್ಮಿಕವಾಗಿದ್ದ ಪ್ರಾಚೀನ ಆರ್ಥಿಕ ಚಿಂತನೆಗೆ ಮರಳುವ ಕುರಿತು ಸರಕಾರಗಳು ಚಿಂತಿಸಿ
ನಡೆಯುವುದು ಒಳಿತು.

(ಲೇಖಕರು: ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)