ಸಂದರ್ಶಕರು: ಹರೀಶ ಕೇರ, ರೂಪಾ ಗುರುರಾಜ್
‘ಪೂರ್ವದ ನೊಬೆಲ್’ ಖ್ಯಾತಿಯ ಶಾ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಆರ್.ಕುಲಕರ್ಣಿ ಸಂದರ್ಶನ
ಶ್ರೀನಿವಾಸ್ ಆರ್.ಕುಲಕರ್ಣಿ ಅವರು ಅಮೆರಿಕದಲ್ಲಿ ನೆಲೆಸಿರುವ, ಕರ್ನಾಟಕದ ಹುಬ್ಬಳ್ಳಿ ಮೂಲದ ಖ್ಯಾತ ಖಗೋಳಶಾಸ್ತ್ರಜ್ಞ. ಖಗೋಳಶಾಸ್ತ್ರದಲ್ಲಿ ನೀಡಿದ ಕೊಡುಗೆಗಾಗಿ 2024ರ ಪ್ರತಿಷ್ಠಿತ ‘ಶಾ’ ಪ್ರಶಸ್ತಿ (Shaw Prize) ಇವರಿಗೆ ಸಂದಿದೆ. ಇದು ‘ನೊಬೆಲ್’ ಆಫ್ ದಿ ಈ ಎಂದೇ ಖ್ಯಾತ. ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿದ್ದ ಅವರು ರಾಯಲ್ ಸೊಸೈಟಿ ಆಫ್ ಲಂಡನ್, ಅಮೆರಿಕದ ಹಾಗೂ ಭಾರತದ ವೈಜ್ಞಾನಿಕ ಅಕಾಡೆಮಿಗಳ ಸದಸ್ಯರೂ ಹೌದು. ಇನೋಸಿಸ್‌ನ ಸುಧಾಮೂರ್ತಿ ಸಹೋದರನೂ ಆಗಿರುವ ಅವರ ಸಂದರ್ಶನ ಇಲ್ಲಿದೆ.
2024ರ ಶಾ ಪ್ರಶಸ್ತಿ ಪುರಸ್ಕೃತರಾದ ನಿಮಗೆ ಅಭಿನಂದನೆಗಳು. ಇದರ ಮಹತ್ವ ಏನು?
ನೊಬೆಲ್ ಪುರಸ್ಕಾರದಲ್ಲಿ ಖಗೋಳಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಿತ ಸೇರ್ಪಡೆ ಆಗಿರಲಿಲ್ಲ. ಈ ಕ್ಷೇತ್ರಗಳ ಮಹತ್ವದ ಮನವರಿಕೆ ಮಾಡಿಕೊಡಲು ಹಾಂಕಾಂಗ್‌ನ ಮನರಂಜನಾ ಮಾಧ್ಯಮ ದೊರೆ ರನ್ ರನ್ ಶಾ
ಎಂಬುವವರು ನೊಬೆಲ್‌ಗೆ ಪೂರಕವಾಗಿ ಈ ಪ್ರಶಸ್ತಿ ಸ್ಥಾಪಿಸಿ ಈ ಮೂರು ಕ್ಷೇತ್ರಗಳಿಗೆ ನೀಡತೊಡಗಿದರು. ಇದರ ಬಹುಮಾನ ಧನದ ಮೊತ್ತ ನೊಬೆಲ್‌ಗಿಂತ ಸ್ವಲ್ಪ ಹೆಚ್ಚು ಇದೆ-1.2 ದಶಲಕ್ಷ ಡಾಲರ್. ಖಗೋಳಶಾಸದಲ್ಲಿ ನಾನು
ನೀಡಿದ ಕೊಡುಗೆ ಗುರುತಿಸಿ ಇದನ್ನು ನನಗೆ ನೀಡಲಾಗಿದೆ.
ಭಾರತ ಸರಕಾರ, ಇಸ್ರೋ ಜತೆಗೆ ಒಟ್ಟಾಗಿ ನೀವು ಏನಾದರೂ ಪ್ರಾಜೆಕ್ಟ್ ಮಾಡಿದ್ದೀರಾ?
ಹೌದು, 30 ಮೀಟರ್‌ನ ವಿಶ್ವದ ಬೃಹತ್ ಆಪ್ಟಿಕಲ್ ಟೆಲಿಸ್ಕೋಪ್ ಪ್ರಾಜೆಕ್ಟ್ ಮಾಡಿದ್ದೆ. 2010ರಲ್ಲಿ ಆಗ ಮನಮೋಹನ್ ಸಿಂಗ್ ಅವರ ಸರಕಾರ ಇತ್ತು. ಈ ವಿಷಯದಲ್ಲಿ ಅಮೆರಿಕ, ಚೀನಾ ಜಪಾನ್‌ಗಿಂತ ನಾವು ಯಾವಾಗಲೂ ಹಿಂದೆ ಬೀಳುತ್ತೇವೆ. ರಿಸ್ಕ್ ತಗೊಂಡು ಮಾಡೋಣ ಎಂದೆವು. ಸಿಂಗ್ ಒಪ್ಪಿದರು, ಅದು ಈಗ ಕೈಗೂಡುತ್ತಿದೆ. ಬೆಂಗಳೂರಿನ ಹತ್ತಿರದ ಹೊಸಕೋಟೆಯಲ್ಲಿ ಬೃಹತ್ ಟೆಲಿಸ್ಕೋಪ್ ಸ್ಥಾಪಿಸುವ ಕೆಲಸ ಆಗುತ್ತಿದೆ. ಕೆಲಸದ ಮೂರನೇ ಒಂದು ಭಾಗ ಆಗಿದೆ. ಆದರೆ ಜಮೀನು ವಿವಾದದಿಂದಾಗಿ ಅದು ಸ್ವಲ್ಪ ಹಿಂದೆ ಬಿದ್ದಿದೆ. ಇದರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಜತೆಗೆ ಇನ್ನೂ 7 ಸಂಸ್ಥೆಗಳು ಸೇರಿಕೊಂಡಿವೆ. ಇದು ಪೂರ್ಣ ವಾದರೆ ನಾವು ಜಪಾನ್, ಅಮೆರಿಕ ಮೊದಲಾದ ರಾಷ್ಟ್ರಗಳನ್ನು ಸರಿಗಟ್ಟುತ್ತೇವೆ. ಇದು ನನಗೆ ತುಂಬಾ ಸಂತೋಷ ನೀಡಿದ ಸಂಗತಿ.
ನಿಮಗೆ ಖಗೋಳಶಾಸ್ತ್ರವನ್ನೇ ಕಲಿಯಬೇಕು ಅನ್ನಿಸಿದ್ದು ಹೇಗೆ?
ಹುಬ್ಬಳ್ಳಿ ಸೆಂಟ್ರಲ್ ಸ್ಕೂಲಿನಲ್ಲಿದ್ದಾಗ ವಿಜ್ಞಾನದಲ್ಲಿ ಆಸಕ್ತಿ ಇತ್ತು. ಧಾರವಾಡ ಯೂನಿವರ್ಸಿಟಿ ಲೈಬ್ರರಿಯಲ್ಲಿ ‘ಸೈಂಟಿಫಿಕ್ ಅಮೆರಿಕನ್’ ಮೊದಲಾದ ಜರ್ನಲ್‌ಗಳನ್ನು ಓದ್ತಾ ಸ್ವಲ್ಪ ಆಸಕ್ತಿ ಬಂತು. ಶಾಲೆಯಲ್ಲಿ ಆ ಸಬ್ಜೆಕ್ಟ್ ಇರಲಿಲ್ಲ. ರಿಸರ್ಚ್ ಮಾಡಬೇಕೆಂಬ ಮನಸಿತ್ತು. ನಮ್ಮ ತಂದೆ ಡಾಕ್ಟರ್. ಅವರು ಒಮ್ಮೆ ಆಪರೇಶನ್ ಥಿಯೇಟರ್‌ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಸಿ ಸೆಕ್ಷನ್ ಮಾಡುವಾಗ ಹರಿದ ರಕ್ತ ನೋಡಿ ತಲೆತಿರುಗಿ ಬಿದ್ದುಬಿಟ್ಟೆ.
ಅಲ್ಲಿಗೆ ಜೀವಶಾಸ್ತ್ರದ ಸಹವಾಸ ಬೇಡ ಅನಿಸಿತು. ಉಳಿದದ್ದು ಫಿಸಿಕ್ಸ್. ಎಂಜಿನಿಯರಿಂಗ್ ಫಿಸಿಕ್ಸ್ ಮಾಡುತ್ತಿದ್ದಾಗ ನನಗೆ ‘ನ್ಯಾಷನಲ್ ಸೈ ಟ್ಯಾಲೆಂಟ್’ ಎಂಬ ಸ್ಕಾಲರ್‌ಶಿಪ್ ದೊರೆಯಿತು. ಹಣಕಾಸಿನ ಜತೆಗೆ ಬೇರೆ ಬೇರೆ ಸಂಸ್ಥೆಗಳಿಗೆ ಹೋಗಿ ಕಲಿಯುವ ಅವಕಾಶ ದೊರೆಯಿತು. ಬೆಂಗಳೂರಿನ ರಾಮನ್ ಇನ್ಸ್‌ಟಿಟ್ಯೂಟ್‌ನಲ್ಲಿ ನಡೆದ ಒಂದು ಪ್ರದರ್ಶನಕ್ಕೆ ಹೋದಾಗ ನನ್ನ ಕ್ಷೇತ್ರ ಇದೇ ಅನಿಸಿತು. ನಂತರ ಬರ್ಕ್ಲಿಗೆ ಹೋಗಿ ರೇಡಿಯೋ ಆಸ್ಟ್ರೋನಮಿ ತೆಗೆದುಕೊಂಡೆ.
ಕಂದು ಕುಬ್ಜಗಳ (Brown Dwarfs) ಬಗೆಗಿನ ನಿಮ್ಮ ಅಧ್ಯಯನ ಮಹತ್ವದ್ದು. ಅದರ ಬಗ್ಗೆ ತಿಳಿಸಿ.
ನಮ್ಮ ಸೂರ್ಯ, ಗುರು ಗ್ರಹ ಇವೆಲ್ಲ ಅನಿಲಗಳ ಮೊತ್ತ. ಸೂರ್ಯನೊಳಗೆ ಇರುವ ಜಲಜನಕ, ಹೀಲಿಯಂ ಮತ್ತಿತರ
ಅನಿಲಗಳು ಗುರುವಿನೊಳಗೂ ಇವೆ. ಆದರೆ ಸೂರ್ಯನಿಂದ ಬೃಹತ್ ಶಕ್ತಿ ಹಾಗೂ ಬೆಳಕು ಹೊಮ್ಮುತ್ತದೆ. ಇದಕ್ಕೆ ಕಾರಣ, ಸೂರ್ಯನಲ್ಲಿ ನ್ಯೂಕ್ಲಿಯರ್ ಫ್ಯೂಶನ್ ಆಗಿ ಜಲಜನಕ ಹೀಲಿಯಂ ಆಗಿ ಪರಿವರ್ತನೆಯಾಗುತ್ತದೆ. ಇದು ಶಕ್ತಿ ಹಾಗೂ ಬೆಳಕನ್ನು ಹೊಮ್ಮಿಸುತ್ತದೆ. ಆದರೆ ಗುರುವೆಂಬ ಅನಿಲದ ಉಂಡೆ ತಣ್ಣಗಾಗುತ್ತ ಹೊರಟಿದೆ. ಭಾರತೀಯ ಮೂಲದ ಶಿವಕುಮಾರ್ ಎಂಬ ಖಗೋಳಶಾಸ್ತ್ರಜ್ಞ ಒಂದು ಪ್ರಮೇಯ ಮಂಡಿಸಿದ್ದರು- ಸೂರ್ಯ ತನ್ನ ಗಾತ್ರದ ಹತ್ತನೇ ಒಂದರಷ್ಟು ಸಣ್ಣದಾದರೆ ಅದರ ಶಕ್ತಿ, ಬೆಳಕು ಅಷ್ಟು ಕಡಿಮೆಯಾಗುತ್ತದೆ. ಅದನ್ನು ಕಂದು ಕುಬ್ಜ ಎನ್ನಲಾಗುತ್ತದೆ. ಇದು ಥಿಯರಿ ಆಗಿ ಇತ್ತು. ನಾವು ಅಧ್ಯಯನದ ಮೂಲಕ 1995ರಲ್ಲಿ ಇದನ್ನು ನಿಜ ಎಂದು
ತೋರಿಸಿದೆವು. ಗುರು ಎಂದರೆ ಸೂರ್ಯನ ಸಾವಿರದ ಒಂದನೇ ಭಾಗ, ಕಂದು ಕುಬ್ಜ ಅಂದರೆ ಹತ್ತನೇ ಒಂದು ಭಾಗ. ನಕ್ಷತ್ರಗಳಲ್ಲಿ ವಿವಿಧ ಹಂತಗಳನ್ನು ರೂಪಿಸಲು ಈ ಅಧ್ಯಯನ ನೆರವಾಯಿತು. ನಕ್ಷತ್ರಗಳ ಅಂತಿಮಹಂತವಾದ ಸೂಪರ್‌ನೋವಾಗಳ ಬಗೆಗೂ ನೀವು ಅಧ್ಯಯನ ಮಾಡಿದ್ದೀರಿ.
ಸೂಪರ್‌ನೋವಾಗಳನ್ನು ಹೇಗೆ ಗುರುತಿಸಲಾಗುತ್ತದೆ?
ಸೂರ್ಯನಿಗಿಂತ ಹತ್ತು ಪಟ್ಟು ಗಾತ್ರದ ನಕ್ಷತ್ರಗಳು ಅಷ್ಟೇ ಪ್ರಮಾಣದ ಶಕ್ತಿ ಉತ್ಪಾದಿಸುತ್ತವೆ. ಆದರೆ ಅವುಗಳ ನ್ಯೂಕ್ಲಿಯರ್ ಫ್ಯೂಶನ್ ಆಗಿ ನ್ಯೂಟ್ರಾನ್ ಸ್ಟಾರ್ ಆಗುತ್ತದೆ. ನ್ಯೂಟ್ರಾನ್ ಸ್ಟಾರ್ ಅಂದರೆ ಅಲ್ಲಿ ಬರೀ ನ್ಯೂಟ್ರಾನ್ ಇರುತ್ತದೆ. ಅದರ ತೂಕ ಸೂರ್ಯನಷ್ಟೇ ಇರಬಹುದು, ಆದರೆ ಗಾತ್ರ ಬೆಂಗಳೂರಿಗಿಂತ ಕಡಿಮೆ ಇರುತ್ತದೆ. ಅಂತಿಮವಾಗಿ ಇದು ಸ್ಪೋಟಿಸುವುದೇ ಸೂಪರ್‌ನೋವಾ. ಇದು ನಕ್ಷತ್ರದ ಕೊನೆಯ ಹಂತ. ಸೂಪರ್ ನೋವಾ ಅನ್ನು ಗುರುತಿಸುವುದು ಹೇಗೆಂದರೆ, ಪ್ರತಿನಿತ್ಯ ಅವುಗಳ ಚಿತ್ರ ತೆಗೆಯುವುದು ಮತ್ತು ಅವುಗಳಲ್ಲಿ ಆಗುವ ಬದಲಾವಣೆ ಗುರುತಿಸುವುದು. ಸ್ಪೋಟಗೊಂಡ ನಂತರದ ನಕ್ಷತ್ರ ಶತಕೋಟಿ ಪಟ್ಟು ಹೆಚ್ಚಿನ ಬೆಳಕು ಸೂಸುತ್ತದೆ. 2015ಕ್ಕೂ ಮೊದಲು ವಿಶ್ವದಲ್ಲಿ ವರ್ಷಕ್ಕೆ ನೂರು ಸೂಪರ್‌ನೋವಾ ಕಾಣಸಿಗುತ್ತಿತ್ತು. ಈಗ ಪ್ರತಿರಾತ್ರಿ ಕನಿಷ್ಠ ೧೦ ಕಾಣಸಿಗುತ್ತದೆ. ಇನ್ನು ನಾವಿರುವ ನಕ್ಷತ್ರಪಥದಲ್ಲಿ (Galaxy) ಸುಮಾರು ನೂರು ವರ್ಷಕ್ಕೊಂದು ಸೂಪರ್‌ನೋವಾ ಸಂಭವಿಸಬಹುದು ಅಷ್ಟೆ.
ಸೂರ್ಯನ ಸೂಪರ್‌ನೋವಾ ಯಾವಾಗ? ಆಗ ಭೂಮಿಯೂ ನಾಶವಾಗುತ್ತದಲ್ಲವೇ?
ನಮ್ಮ ಸೂರ್ಯ ಸೂಪರ್‌ನೋವಾಕ್ಕೆ ಒಳಗಾದರೆ ಅದು ಸೌರವ್ಯೂಹದ ಕೊನೆ ಎನ್ನಬಹುದು. ಅದಕ್ಕೆ ಇನ್ನೂ ಐನೂರು ಕೋಟಿ ವರ್ಷಗಳಾಗಬಹುದು. ಆದರೆ ಅದಕ್ಕೂ ಮೊದಲೇ ನಮ್ಮ ಭೂಮಿ ಬೇರೆ ಬೇರೆ ಕಾರಣಗಳಿಗಾಗಿ ನಾಶ ಆಗುತ್ತದೆ. ಕ್ಷುದ್ರಗ್ರಹಗಳ ಡಿಕ್ಕಿಯಿಂದ ಇರಬಹುದು, ಡೈನೋಸಾರ್‌ಗಳ ನಾಶ ಆದದ್ದು ಹಾಗೆಯೇ. ಕ್ಷುದ್ರ ಗ್ರಹಗಳು ಯಾವಾಗ ಭೂಮಿಗೆ ಅಪ್ಪಳಿಸಬಹುದು ಎಂದು ತಿಳಿಯಲು ನೂರು ಶೇಕಡಾ ನಿಖರ ತಂತ್ರಜ್ಞಾನ
ನಮಗಿನ್ನೂ ಲಭ್ಯವಾಗಿಲ್ಲ.
ಅನ್ಯಗ್ರಹ ಜೀವಿಗಳು ಇದ್ದಾರಾ? ಅದರ ಬಗ್ಗೆ ಅಧ್ಯಯನ ಮಾಡಲು ಅಮೆರಿಕದಲ್ಲಿ ದೊಡ್ಡ
ಮೊತ್ತದ ಹಣ ಹೂಡಲಾಗಿದೆ ಎಂಬುದು ನಿಜವೇ?
ನಿಜ. ಖಾಸಗಿಯವರು ಈ ವಿಚಾರದಲ್ಲಿ ‘ಸೆಟಿ’ (ಸರ್ಚ್ ಫಾರ್ ಎಕ್ಸ್‌ಟ್ರಾ ಟೆರೆಸ್ಟ್ರಿಯಲ್ ಇಂಟೆಲಿಜೆನ್ಸ್) ಎಂಬ ಸಂಸ್ಥೆ ಮಾಡಿಕೊಂಡಿದ್ದಾರೆ. ಅದು ಅತ್ತಲಿಂದ ಬರಬಹುದಾದ ರೇಡಿಯೋ ಸಿಗ್ನಲ್‌ಗಳ ಬಗೆಗೆಲ್ಲ ಅಧ್ಯಯನ ಮಾಡುತ್ತಿದೆ. ಅಮೆರಿಕ ಸರಕಾರ ಅಂಥ ಜೀವಿಗಳಿರಬಹುದಾದ ಗ್ರಹಗಳ ಬಗ್ಗೆ ಅಧ್ಯಯನ ಮಾಡುವತ್ತ ಗಮನ ಕೊಟ್ಟಿದೆ. ಈಗ ನಾವು ದೂರದಿಂದ ಭೂಮಿಯನ್ನು ನೋಡಿದರೆ ಇಲ್ಲಿ ವಿಶಿಷ್ಟ ಅನಿಲಗಳು ಇರುವುದನ್ನು ಹೇಳಬಹುದು- ಆಮ್ಲಜನಕ, ಜಲಜನಕ, ಮೀಥೇನ್ ಹೀಗೆ. ಇಂಥ ಕಾಂಬಿನೇಶನ್ ಜೀವ ಬದುಕುಳಿಯಲು ಅಗತ್ಯ. ನನ್ನನ್ನೂ ಸೇರಿದಂತೆ ತುಂಬಾ ವಿeನಿಗಳು, ಇತರ ಗ್ರಹಗಳಲ್ಲಿ ಜೀವಿಗಳಿರಬಹುದು ಎಂಬುದನ್ನು ನಂಬುತ್ತೇವೆ. ನಮ್ಮ ಗ್ಯಾಲಕ್ಸಿಯ ಇರಬಹುದು. ಆದರೆ ದೂರಪ್ರಯಾಣ ಅಸಾಧ್ಯವಾದ್ದರಿಂದ ಸಂಪರ್ಕಿಸಲು ಸಾಧ್ಯವಾಗಿಲ್ಲ. ನಮ್ಮ ಅತಿ
ಹತ್ತಿರದ ನಕ್ಷತ್ರವೇ ನಮ್ಮಿಂದ ನಾಲ್ಕು ಬೆಳಕಿನ ವರ್ಷಗಳಷ್ಟು ದೂರವಿದೆ. ಇನ್ನು ಜೀವ ಇರುವ ಹತ್ತಿರದ ಇನ್ನೊಂದು ಗ್ರಹ ನಮಗಿಂತ ಸಾವಿರ ಬೆಳಕಿನ ವರ್ಷ ದೂರವಿರಬಹುದು. ಆದರೆ ಅಷ್ಟು ವರ್ಷ ಭೂಮಿಯ ಮೇಲೆ ನಾವೇ ಇರುತ್ತೇವೋ ಇಲ್ಲವೋ ಹೇಳಲಾಗದು. ಇಂದಿಗೆ ಹತ್ತು ಸಾವಿರ ವರ್ಷಗಳ ಹಿಂದೆ ಮನುಷ್ಯರೇ ಈಗಿರುವಂತೆ ಇರಲಿಲ್ಲ. ಜಾಗತಿಕ ತಾಪಮಾನ, ಕ್ಷುದ್ರಗ್ರಹಗಳ ಡಿಕ್ಕಿ ಸೇರಿದಂತೆ ಯಾವುದೇ ಅನಾಹುತ ನಮ್ಮನ್ನು ನಾಶ ಮಾಡಬಹುದು.
ಬಾಹ್ಯಾಕಾಶ ಯೋಜನೆಗಳಂಥ ಕ್ಷೇತ್ರದಲ್ಲಿ ಭಾರತ ತಾಂತ್ರಿಕವಾಗಿ ಸಾಕಷ್ಟು ಮುಂದಿದೆ ಅನಿಸುತ್ತಿಲ್ಲವೇ?
ನಮಗೇನು ಬೇಕು ಎಂಬ ಸ್ಪಷ್ಟ ಕಲ್ಪನೆ ಸರಕಾರಕ್ಕೆ ಇದ್ದಾಗ ಸಾಕಷ್ಟು ಪ್ರಗತಿ ಆಗಿದೆ. ಉದಾಹರಣೆಗೆ 50 ವರ್ಷದ ಹಿಂದೆ ನಮಗೆ ನಮ್ಮದೇ ಸಂಪರ್ಕ ವ್ಯವಸ್ಥೆಗಾಗಿ ಹಾಗೂ ಕೃಷಿ ಸುಧಾರಣೆಗಾಗಿ ಉಪಗ್ರಹಗಳು ಬೇಕು ಅಂದಾಗ ಸರಕಾರ ದೃಢನಿಶ್ಚಯ ಮಾಡಿತು. ಇಸ್ರೋ ಸಾಕಷ್ಟು ಕೆಲಸ ಮಾಡಿತು. ಅದು ರಾಕೆಟ್ ವ್ಯವಸ್ಥೆ, ಸಂಪರ್ಕ ಉಪಗ್ರಹ ವ್ಯವಸ್ಥೆ ಇದರಲ್ಲ ಉತ್ಕೃಷ್ಟತೆ ಸಾಧಿಸಿತು. ಪರಮಾಣು ಶಕ್ತಿಯ ಬಗ್ಗೆಯೂ ಹೀಗೇ ಆಯಿತು. ಆದರೆ ರಿಸರ್ಚ್ ಅನ್ನೋದು ಬೇರೆ. ಸಂಶೋಧನೆ ವಲಯದಲ್ಲಿ ‘ನಂಬರ್ ಒನ್’ಗಿಂತ ಕೆಳಗಿನದಕ್ಕೆ ಜಾಗವೇ ಇಲ್ಲ. ಉದಾಹರಣೆಗೆ
ನಾವು 1995ರಲ್ಲಿ ಕಂದು ಕುಬ್ಜಗಳನ್ನು ಅಮೆರಿಕದಲ್ಲಿ ಕಂಡುಹುಡುಕಿದವು. ಆದರೆ ಒಂದು ವರ್ಷದ ನಂತರ ಭಾರತದಲ್ಲಿ ನಾವು ಇದನ್ನು ಹುಡುಕಿದೆವು ಎಂದರೆ ಅದಕ್ಕೆ ಅರ್ಥವಿಲ್ಲ. ರಿಸರ್ಚ್ ಅನ್ನೋದು ಗ್ಲೋಬಲ್ ಚಟುವಟಿಕೆ. ಅದಕ್ಕೆ ಹಣ ಬೇಕು, ಜತೆಗೆ ಮಿದುಳು ಕೂಡ ಬೇಕು. ನೀವು ಬೆಸ್ಟ್ ಮಿದುಳುಗಳನ್ನು ಹುಡುಕಬೇಕು.
ನಮ್ಮಲ್ಲಿ ಖಗೋಳವಿeನ ಓದಿ ರಿಸರ್ಚ್ ಮಾಡುತ್ತೇನೆ ಅನ್ನುವವರಿಗೆ ದೇಶ ಬಿಟ್ಟು ಹೋಗುವುದು
ಅನಿವಾರ್ಯವಾಗಿದೆಯಾ? ನಿಮ್ಮ ಹಾಗೆ?
ಹಿಂದೆ ನಾವಿದ್ದಾಗ ಖಗೋಳಶಾಸ್ತ್ರ ಶಾಲೆಯಲ್ಲೂ ಕಾಲೇಜಿನಲ್ಲೂ ಇರಲಿಲ್ಲ. ಈಗ ಭಾರತದಲ್ಲೂ ಅದು ಬೆಳೆಯು ತ್ತಿದೆ. ಪುಣೆಯಲ್ಲಿ ಜಿಎಂಆರ್‌ಟಿ, ಲಡಾಖ್‌ನಲ್ಲಿ ಆಪ್ಟಿಕಲ್ ಟೆಲಿಸ್ಕೋಪ್, ಸ್ಪೇಸ್‌ನಲ್ಲಿ ನಮ್ಮದೇ ಆಸ್ಟ್ರೋಸ್ಯಾಟ್ ಎಲ್ಲ ಇವೆ. ಇದೆ. ಥಿಯರಿಟಿಕಲ್ ಖಗೋಳಶಾಸ್ತ್ರ ಬೋಧಿಸುವ ಹಲವು ಸಂಸ್ಥೆಗಳಿವೆ. ಪುಣೆಯಲ್ಲಿ ‘ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರೋನಮಿ’ ಇದೆ. ಆದರೆ ಪ್ರಾಥಮಿಕ ಶಾಲೆಯಲ್ಲಿ ಖಗೋಳಶಾಸ್ತ್ರ ಕಲಿಸುತ್ತಿಲ್ಲ ಅಂತ ಯಾರೋ ಹೇಳಿದರು. ಶಾಲೆಯಿಂದಲೇ ಶುರುಮಾಡಬೇಕು. ಜಪಾನ್, ಕೊರಿಯಾ, ತೈವಾನ್‌ನಂಥ ಸಣ್ಣ ದೇಶಗಳು ತುಂಬಾ ವೇಗದಲ್ಲಿ ಈ ಕ್ಷೇತ್ರದಲ್ಲಿ ಮುಂದುವರಿಯುತ್ತಿವೆ. ಈ ಅಂತರವನ್ನು ಗುರುತಿಸಿ ಸರಿಪಡಿಸಿ ಕೊಳ್ಳಬೇಕು.
ನಮ್ಮ ಶಿಕ್ಷಣ ಪದ್ಧತಿಯಲ್ಲಿ ಯಾವ ಸುಧಾರಣೆ ಮಾಡಿಕೊಳ್ಳಬೇಕು?
ದುರದೃಷ್ಟವಶಾತ್ ನಮ್ಮ ವ್ಯವಸ್ಥೆ ಪ್ರತಿಭೆಯ ಪರವಾಗಿ ಇಲ್ಲ. ಯಾವುದೇ ಭಾರತೀಯ ವಿವಿ ವಿಶ್ವದ ಟಾಪ್ 500 ವಿದ್ಯಾಸಂಸ್ಥೆಗಳ ರ‍್ಯಾಂಕಿಂಗ್‌ನಲ್ಲಿ ಇಲ್ಲ. ಇದೇ ನಾವು ಹಿಂದುಳಿಯಲು ಕಾರಣ. ಇದರ ಬಗ್ಗೆ ಪ್ರಾಮಾಣಿಕ ಚರ್ಚೆ ಆಗಬೇಕು.
ಈ ವಿಶ್ವ, ಬ್ರಹ್ಮಾಂಡವನ್ನೆ ಗಮನಿಸುತ್ತಾ, ಇದರ ಹಿಂದೆ ಒಂದು ‘ಬುದ್ಧಿವಂತ ಮಿದುಳಿನ’ ವಿನ್ಯಾಸ ಇರಬಹುದು ಅನಿಸಿಲ್ವಾ?
ಇಂಥ ಏನೇನೋ ಕಲ್ಪನೆಗಳನ್ನು ನಾವು ಮಾಡಿಕೊಳ್ಳಬಹುದು. ಆದರೆ ಸರಳ ಪ್ರಮೇಯ ಏನು? ಇದು ಸಹಜ ವಿಕಾಸ ಇರಬಹುದಲ್ವಾ? ಡಿಎನ್‌ಎ ಬಗ್ಗೆ ತಿಳಿದುಬಂದಾಗ, ಇದನ್ನು ದೇವರೇ ಮಾಡಿರಬೇಕು ಅಂದರು. ಆದರೆ ಡಾರ್ವಿನ್ ಥಿಯರಿಯಿಂದ ನಮ್ಮ ವಿಕಾಸ ಹೀಗಾಯ್ತು ಅಂತ ಗೊತ್ತಾಯಿತು. ಆಗ, ಇದೆಲ್ಲಕ್ಕೂ ಮೂಲವಾದ ಬ್ಯಾಕ್ಟೀರಿಯಾಗಳೇ ದೇವರ ಸೃಷ್ಟಿ ಅಂದರು. ಇಂಥ ಜನ ಈ ವಾದವನ್ನು ಬಿಡುವುದೇ ಇಲ್ಲ. ನಾವು ಯಾವುದಕ್ಕಾ ದರೂ ವೈಜ್ಞಾನಿಕ ವಿವರಣೆ ಕೊಟ್ಟರೆ ಅದಕ್ಕೂ ಹಿಂದೆ ಚಲಿಸುತ್ತಾರೆ. ವಿಶ್ವ ಸೃಷ್ಟಿಯಾದದ್ದು ಬಿಗ್ ಬ್ಯಾಂಗ್‌ನಿಂದ ಅಂದರೆ ಪ್ರಶ್ನೆ ತೂರಿಬರುತ್ತದೆ- ಅದಕ್ಕೂ ಮೊದಲೇ ಏನಿತ್ತು ಅಂತ. ಇಂಥ ಪ್ರಶ್ನೆ ಪ್ರತಿಯೊಂದಕ್ಕೂ ಬರುತ್ತದೆ. ಆದರೆ ಅರ್ಥಪೂರ್ಣವಾದ ನಿಜವಾದ ಪ್ರಗತಿ ಅಂದರೆ, ಮಹಾಸೋಟದಿಂದ ಈ ವಿಶ್ವ ಶುರುವಾಯಿತು ಅನ್ನುವುದು. ಅದಕ್ಕೆ ಹಿಂದೆ ಯಾವುದೇ ಶಕ್ತಿ ಇದೆ ಅನ್ನುವುದೆಲ್ಲ ಬರಿಯ ಹೇಳಿಕೆಗಳಷ್ಟೇ.
ಇಷ್ಟು ವರ್ಷ ಸಂಶೋಧನೆ ಆಯ್ತು, ಇನ್ನು ಮುಂದಿನ ನಿಮ್ಮ ಯೋಜನೆಗಳೇನು?
ಇಷ್ಟು ವರ್ಷ ತಂಡಗಳಲ್ಲಿ ಸಂಶೋಧನೆ, ಅಧ್ಯಯನ ಮಾಡಿದ್ದೇನೆ. ಈಗ ಏಕವ್ಯಕ್ತಿಯಾಗಿ ಥಿಯರಿಟಿಕಲ್ ರಿಸರ್ಚ್ ಮಾಡುತ್ತಿದ್ದೇನೆ. ಜತೆಗೆ ಟೀಚಿಂಗ್. ಪ್ರತಿವರ್ಷ ಬೇರೆ ಬೇರೆ ವಿಷಯಗಳನ್ನು ಕಲಿಸುತ್ತೇನೆ. ಯಾಕೆಂದರೆ ಅದು ನನಗೂ ಕಲಿಯಲು ಅವಕಾಶ ಮಾಡಿಕೊಡುತ್ತದೆ. ಅಲ್ಟ್ರಾವಯಲೆಟ್ ಸ್ಪೇಸ್ ಮಿಶನ್ ಎಂಬ ವಿಶ್ವದ ಅಧ್ಯಯನ ಮಾಡುವ ಪ್ರಾಜೆಕ್ಟ್ ಬಗ್ಗೆ ಪ್ರಪೋಸಲ್ ಮಾಡುತ್ತಿದ್ದೇನೆ. ಈ ಐಡಿಯಾ ಬಂದದ್ದು ನಾರಾಯಣಮೂರ್ತಿ ಅವರಿಂದ.
ನಿಮ್ಮ ಓದುವಿಕೆಯ ರೀತಿ ಹೇಗೆ, ಯಾವ ಪುಸ್ತಕಗಳನ್ನು ಹೆಚ್ಚಿಗೆ ಓದುತ್ತೀರಿ?
ಸಣ್ಣವರಿದ್ದಾಗ ನಾನು ಮತ್ತು ಸುಧಾ ಲೈಬ್ರರಿಗೆ ಹೋಗಿ ಮುಂಜಾನೆಯಿಂದ ಸಂಜೆವರೆಗೂ ಓದುತ್ತಿದ್ದೆವು. ಸುಧಾಗೆ
ಇನ್ನೂ ಆ ಆಸಕ್ತಿ ಇದೆ. ನನಗೆ ನನ್ನ ಸಬ್ಜೆಕ್ಟ್ ಮೇಲೆ ಆಸಕ್ತಿ ಹೆಚ್ಚಾದಂತೆ ಇತರ ಓದು ಕಡಿಮೆಯಾಯಿತು. ವಿಶೇಷ ವಾಗಿ ಕರೆಂಟ್ ಅಫೇರ‍್ಸ್, ನ್ಯೂಯಾರ್ಕ್ ಟೈಮ್ಸ್, ಇಕಾನಮಿ ಓದುತ್ತಿರುತ್ತೇನೆ. ಇನ್ನೊಂದು ಆಸಕ್ತಿ ಅಂದರೆ ಕಂಪನಿಗಳು, ದೇಶಗಳ ಏಳುಬೀಳು. ಕೆಲವು ಕಂಪನಿಗಳು, ದೇಶಗಳು ಯಾಕೆ ಚೆನ್ನಾಗಿ ಬೆಳೆಯತ್ತವೆ, ಕೆಲವು ಯಾಕೆ ಪತನ ಹೊಂದುತ್ತವೆ- ಈ ವಿಷಯದ ಆಸಕ್ತಿ.
ಆತ್ಮಕತೆ, ಖಗೋಳಶಾಸ್ತ್ರದ ಬಗ್ಗೆ ಗ್ರಂಥ ಬರೆಯುವ ಬಗ್ಗೆ ಯೋಚಿಸಿದ್ದೀರಾ?
ಮುಖ್ಯವಾಗಿ ನಾನು ಪ್ರಾಜೆಕ್ಟ್‌ಗಳ ಜತೆಗೆ ಎಂಜಿನಿಯರಿಂಗ್ ಮಾಡಿದವನು. ನಾವು ಮಾಡಿದ ಪ್ರಾಜೆಕ್ಟ್‌ಗಳೆಲ್ಲವೂ ಉನ್ನತ ಫಲಿತಾಂಶ ನೀಡಿವೆ. ಒಂದು ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವುದು ಎಂದರೆ ಹೊಸ ಕಂಪನಿ ಆರಂಭಿಸಿ ದಷ್ಟೇ ತ್ರಾಸದಾಯಕ. ಪ್ರಾಜೆಕ್ಟ್ ಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಯಶಸ್ವಿಯಾಗಿ ಈಡೇರಿಸುವುದು ಹೇಗೆ ಎಂಬ ಬಗ್ಗೆ ಒಂದು ಕೃತಿ ಬರೆಯಲು ಮುಂದಾಗಿದ್ದೇನೆ. ಆತ್ಮಕತೆ ಬರೆಯುವ ಯೋಚನೆ ಇಲ್ಲ. ಐನ್‌ಸ್ಟೀನ್ ಅಂಥವರಾದರೆ ಬರೆಯಬೇಕು. ನಾನು ಅವರ ಸಾವಿರದ ಒಂದಂಶವೂ ಇಲ್ಲ.
ಭಾರತಕ್ಕೆ ಬಂದಾಗ ಹೇಗಿರುತ್ತೀರಿ? ನಿಮ್ಮ ಸೋದರಿ ಸುಧಾ ಮೂರ್ತಿ ಜತೆಗಿನ ಮಾತುಕತೆಗಳೆಲ್ಲ ಹೇಗಿರುತ್ತವೆ?
ಸಾಮಾನ್ಯವಾಗಿ ಭಾರತದ ಸ್ಥಿತಿಗತಿ, ಇದನ್ನು ಹೇಗೆ ಸುಧಾರಣೆ ಮಾಡಬಹುದು ಇತ್ಯಾದಿಗಳೆಲ್ಲ ಇರುತ್ತವೆ. ಇನ್ನೊಂದು, ನಮ್ಮಲ್ಲಿ ಪ್ರಾಣಿಗಳೆಂದರೆ ಎಲ್ಲರಿಗೂ ಇಷ್ಟ. ಗೋಪಿ ಎಂಬ ನಾಯಿ ಇದೆ, ಅದರ ಕುರಿತು ಮಾತುಕತೆ ಹೆಚ್ಚಿಗೆ ಇರುತ್ತದೆ. ಹಳೇ ನೆನಪುಗಳು ಇರುತ್ತವೆ.
ಇನ್ನು 10000 ವರ್ಷಗಳಲ್ಲಿ ಭೂಮಿಯ ಮೇಲೆ ಮನುಷ್ಯ ಇರುವುದೇ ಅನುಮಾನ.
ಪೂರ್ವದ ನೊಬೆಲ್ ಖ್ಯಾತಿಯ ಶಾ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಆರ್. ಕುಲಕರ್ಣಿ ಸಂದರ್ಶನ
ನಮ್ಮ ಸೂರ್ಯ ಸೂಪರ್‌ನೋವಾಕ್ಕೆ ಒಳಗಾದರೆ ಅದು ಸೌರವ್ಯೂಹದ ಕೊನೆ ಎನ್ನಬಹುದು. ಅದಕ್ಕೆ ಇನ್ನೂ ಐನೂರು ಕೋಟಿ ವರ್ಷಗಳಾಗಬಹುದು. ಆದರೆ ಅದಕ್ಕೂ ಮೊದಲೇ ನಮ್ಮ ಭೂಮಿ ಬೇರೆ ಬೇರೆ ಕಾರಣಗಳಿಗಾಗಿ ನಾಶ ಆಗುತ್ತದೆ.
ನನ್ನನ್ನೂ ಸೇರಿದಂತೆ ತುಂಬಾ ವಿeನಿಗಳು, ಇತರ ಗ್ರಹಗಳಲ್ಲಿ ಜೀವಿಗಳಿರಬಹುದು ಎಂಬುದನ್ನು ನಂಬುತ್ತೇವೆ. ನಮ್ಮ ಗ್ಯಾಲಕ್ಸಿಯ ಇರಬಹುದು. ಆದರೆ ದೂರಪ್ರಯಾಣ ಅಸಾಧ್ಯವಾದ್ದರಿಂದ ಸಂಪರ್ಕಿಸಲು ಸಾಧ್ಯವಾಗಿಲ್ಲ.
ರಿಸರ್ಚ್ ಅನ್ನೋದು ಗ್ಲೋಬಲ್ ಚಟುವಟಿಕೆ. ಅದಕ್ಕೆ ಹಣ ಬೇಕು, ಜತೆಗೆ ಮಿದುಳು ಕೂಡ ಬೇಕು. ನೀವು ಬೆಸ್ಟ್ ಮಿದುಳುಗಳನ್ನು ಹುಡುಕಬೇಕು.
ಇದನ್ನೂ ಓದಿ: Raghavendra Jois Column: ಮಾರುಕಟ್ಟೆ ಜಿಗಿತ, ಕರಡಿ ಕುಣಿತ