ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
ಕ್ರಿಕೆಟ್ ಅಂದ್ರೆ ಒಂದು ಧರ್ಮ ಅಂದ್ರೆ ನಾನು ಆ ಧರ್ಮಕ್ಕೆ ಸೇರಿದವನು. ಕ್ರಿಕೆಟ್ ಅಂದ್ರೆ ಪೌರತ್ವ ಅಂದ್ರೆ ನಾನು ಆ ದೇಶದ ಪೌರ. ಒಂದು ಆಟ ಆ ಪರಿ ಕಾಡಿದ್ದರೆ, ಅದು ಕ್ರಿಕೆಟ್.
ಈಗಲೂ ಮನಸ್ಸು ಸುಮ್ಮನೆ ಅಲೆಯುತ್ತಿದ್ದರೆ, ಯಾರೋ ಬ್ಯಾಟ್ ಬೀಸಿದಂತೆ, ನಾನು ಹೊಡೆದಂತೆ, ಉರುಳಾಡಿ ಕ್ಯಾಚ್ ಹಿಡಿದಂತೆ. ಕ್ರಿಕೆಟ್ ಅಷ್ಟರಮಟ್ಟಿಗೆ ಆವರಿಸಿಕೊಂಡ ಒಂದು ಸಂಭ್ರಮ, ಆಚರಣೆ, ಸಂಸ್ಕಾರ. ಕ್ರಿಕೆಟನ್ನು ಆಟಕ್ಕಿಂತ ಹೆಚ್ಚಿನದಾಗಿ ನೋಡಿದವರಲ್ಲಿ ನಾನೂ ಒಬ್ಬ. ಅದೊಂದು ವಿಶೇಷ ಅನುಭೂತಿ ಅಂತ ವಾದಿಸಿದರೆ, ನಾನು ಆ ವಾದದ ಪಾತಿ. ಆ ಆಟವನ್ನು
ಕಲಾತ್ಮಕವಾಗಿ ನೋಡುವುದನ್ನು ಸಾಧ್ಯವಾಗಿಸಿ ಕೊಂಡ ನಂತರ, ಅದು ಕೇವಲ ಒಂದು ಆಟವೆಂದು ಒಪ್ಪಿಕೊಳ್ಳುವುದು ಸಹ
ಕಷ್ಟವೇ.
ಕೋವಿಡ್‌ನಿಂದಾಗಿ ಕ್ರಿಕೆಟ್ ಪಂದ್ಯ ನಡೆಯುವುದು ಸಾಧ್ಯವಿಲ್ಲದಿದ್ದರೂ, ಆ ಮರುಭೂಮಿಯಲ್ಲಿ ಐಪಿಎಲ್ ಪಂದ್ಯ ನಡೆಸಿದ್ದು ಸಾಮಾನ್ಯ ಸಾಧನೆಯಲ್ಲ. ಪ್ರೇಕ್ಷಕರೇ ಇಲ್ಲದಿದ್ದರೂ, ಇಡೀ ಜಗತ್ತು ನೋಡುವಂತೆ, ಆ ಪಂದ್ಯಗಳನ್ನು ನಡೆಸಿದ್ದು ವಿಸ್ಮಯವೇ. ‘ಕ್ರಿಕೆಟ್ ಎಂಬ ಜೀವನಪ್ರೇಮಕ್ಕೆ ಸೋತ ಕರೋನಾ ವೈರಸ್’ ಎಂದು ಅದನ್ನು ವ್ಯಾಖ್ಯಾನಿಸಲಾಯಿತು.
ಅದು ಸರಿಯೇ. ನನಗೆ ಈ ಟಿ-20 ಸ್ವರೂಪ (format)ದ ಬಗ್ಗೆಯೇ ಯಾಕೋ ತಕರಾರು. ಎಷ್ಟೇ ಆದರೂ ಅದನ್ನು ಸಹಜ ಕ್ರಿಕೆಟ್
ಎಂದು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮ ದೇಸಿ ತಳಿಯ ದನಗಳ ಮುಂದೆ, ಕೊಬ್ಬಿದ ಜರ್ಸಿ ಆಕಳನ್ನು ನೋಡಿದ
ಹಾಗೆನಿಸುತ್ತದೆ. ನರಪೇತಲನ ಮುಂದೆ, ತಿನ್ನುವುದಕ್ಕಾಗಿಯೇ ಅವತರಿಸಿ ಬಂದ ಸುಮೋ ಕುಸ್ತಿಪಟುವಿನಂತೆ ಕಾಣುತ್ತದೆ. ಈ
ಟಿ-20 ಫಾರ್ಮ್ಯಾಟ್ ಬಂದ ನಂತರ ಕ್ರಿಕೆಟ್‌ನ ಮೂಲರಚನೆಯೇ ವಿರೂಪ ವಾಗಿಬಿಟ್ಟಿದೆ. ಯಾಕೆಂದರೆ ಅದು ನಿಧಾನ ಗತಿಯ ಆಟವನ್ನೇ ಸಾಯಿಸಿಬಿಟ್ಟಿದೆ. ಕ್ರಿಕೆಟ್ ಅಂದರೆ ವೇಗವಾಗಿ ಆಡುವುದು, ಹೆಚ್ಚು ರನ್ ಗಳಿಸುವುದು, ಎಲ್ಲಾ ಬೌಲ್‌ಗೂ ಸಿಕ್ಸರ್ ಬಾರಿಸುವುದು ಎಂಬ ಭ್ರಮೆಯನ್ನು ನಮ್ಮ ಮನಸ್ಸಿನಲ್ಲಿ ಮೂಡಿಸಿಬಿಟ್ಟಿದೆ.
ಇದರಿಂದಾಗಿ ನಿಧಾನ ಗತಿಯ ಆಟಗಾರರಿಗೆ ಯಾವ ತಂಡದಲ್ಲೂ ಅಸ್ತಿತ್ವವೇ ಇಲ್ಲದಂತಾಗಿದೆ. ಕ್ರಿಕೆಟ್ ಒಂದು ಕಲಾತ್ಮಕ ಆಟ. ಇದನ್ನು ನಂಬಿದವರು ‘ಜೀವನ ಬೇರೆಯಲ್ಲ, ಕ್ರಿಕೆಟ್ ಬೇರೆಯಲ್ಲ’ ಎಂಬುದನ್ನು ಒಪ್ಪುತ್ತಾರೆ. ನಿಧಾನ ಗತಿಯ ಬ್ಯಾಟಿಂಗ್ ಕ್ರಿಕೆಟ್‌ನ ಒಂದು ಶ್ರೇಷ್ಠ ಕಲೆ ಮತ್ತು ಆಚರಣೆ. ಒಬ್ಬ ಆಟಗಾರನ ಕಲಾತ್ಮಕತೆ ಅರಳುವುದೇ ನಿಧಾನ ಗತಿಯ ಆಟದಲ್ಲಿ, ರನ್ ಗಳಿಕೆಯ ಮೋಹದಿಂದ ಕಳಚಿಕೊಳ್ಳುವುದರಲ್ಲಿ. ರನ್ ಗಳಿಸುವುದೊಂದೇ ಬ್ಯಾಟ್ಸಮನ್‌ನ ನೈಪುಣ್ಯವಲ್ಲ. ಅದಕ್ಕೂ ಮೀರಿದ ಕಲಾತ್ಮಕತೆಯನ್ನು ಮೆರೆಯುವುದೇ ಬ್ಯಾಟ್ಸಮನ್‌ನ ಶ್ರೇಷ್ಠತೆ. ಆದರೆ ಈಗ ಇಂಥ ಆಟಗಾರರಿಗೆ ಬೆಲೆಯೂ ಇಲ್ಲ, ಅಸ್ತಿತ್ವವೂ ಇಲ್ಲ.
ಪ್ರತಿ ಬಾಲ್‌ಗೂ ರನ್ ಹೊಡೆಯುವ ಉದ್ದೇಶವಿಲ್ಲದೇ ನಿಧಾನ ಗತಿಯಲ್ಲಿ ಬ್ಯಾಟ್ ಮಾಡುವುದೆಂದರೆ, ಎದುರಿಗೆ ಬಗೆಬಗೆಯ ಭಕ್ಷ್ಯ-ಭೋಜನಗಳನ್ನು ಇಟ್ಟರೂ, ಅವನ್ನು ಮುಟ್ಟದ ಹಾಗೆ, ಕಣ್ಣೆತ್ತಿ ನೋಡದ ಹಾಗೆ. ಪ್ಯಾಂಟಿನ ಎರಡೂ ಜೇಬುಗಳಲ್ಲಿ ಕೈಹಾಕಿ ಸ್ಟೆ ಲಿಶ್ ಆಗಿ ನಡೆದು ಹೋಗುತ್ತಿರುವಾಗ, ಎದುರಿಗೆ ಸುಂದರ ತರುಣಿ ಬಂದರೂ, ಅವಳನ್ನು ಕಣ್ಣೆತ್ತಿ ನೋಡುವ ಉತ್ಕಟ ಬಯಕೆಯಾದರೂ, ಪಕ್ಕದಲ್ಲಿರುವ ಗಿಡ – ಮರಗಳನ್ನು ನೋಡುತ್ತಾ ಖುಷಿ ಪಡುವ ಹಾಗೆ. ಎಲ್ಲಾ ಕಾಮನೆ, ಆಕಾಂಕ್ಷೆ, ಮಮಕಾರಗಳನ್ನು ನಿಗ್ರಹಿಸುವ ಹಠಯೋಗಿಯ ಹಾಗೆ. ರನ್ ಹೊಡೆಯುವುದರಷ್ಟೇ, ರನ್ ಹೊಡೆಯದಿರುವುದೂ ಮುಖ್ಯ.
ರನ್ ಹೊಡೆಯುವುದು ಕಲೆಯಾದರೆ, ಹೊಡೆಯದಿರುವುದೂ. ಪ್ರತಿ ಬಾಲ್‌ಗೆ ರನ್ ಚಚ್ಚುವುದೇ ಬ್ಯಾಟ್ಸಮನ್‌ನ ಹೆಚ್ಚುಗಾರಿಕೆ ಯಲ್ಲ. ಬ್ಯಾಟ್ಸಮನ್‌ನ ನಿಜವಾದ ಸಂಯಮ, ಕಲೆಗಾರಿಕೆ, ನೈಪುಣ್ಯ, ತಂತ್ರ, ಹಿಕ್ಮತ್ತು, ಮಜಕೂರು ಪ್ರಕಟವಾಗುವುದು ರನ್ ಹೊಡೆಯುವುದರಂದೇ ಅಲ್ಲ. ವಿಕೆಟ್ ಕಾಪಾಡಿಕೊಂಡು ರನ್ ಹೊಡೆಯದೇ ಇರುವುದರಲ್ಲೂ ಇದೆ. ಹೇಗಾದರೂ ಬ್ಯಾಟ್ ಬೀಸಿ, ರನ್ ಗಳಿಸುವುದೇ ಪರಮೋದ್ದೇಶವಾದಾಗ, ಅದೇ ಅಪೇಕ್ಷೆ, ಶ್ರೇಷ್ಠತೆಯಾದಾಗ, ಆಟಕ್ಕಿರುವ ಕಲಾತ್ಮಕತೆ, ರಚನೆ, ಶಾಸೀಯತೆ, ಬಂಧಗಾಳುಮೇಳಾಗುತ್ತದೆ. ಹೊಡೆಯುವ ಭರದಲ್ಲಿ ಸಂಯಮ ಸೋಲುತ್ತದೆ. ರಟ್ಟೆಬಲ ಮೆರೆಯುತ್ತದೆ. ಆಟಗಾರ ಸೈತಾನ
ನಾಗುತ್ತಾನೆ. ಅವನಲ್ಲಿ ಮೃಗೀಯತೆಯೇ ವಿಜೃಂಭಿಸುತ್ತದೆ.
ಅದಕ್ಕಾಗಿ ನಮಗೆ ಕ್ರಿಸ್ ಗೇಲ್ ಆಪ್ತನಾಗುತ್ತಾನೆ. ಆತನ beastly ತನ ಆಪ್ತವಾಗುತ್ತದೆ. ಅವನ ಮುಂದೆ ಉಳಿದವರು ಪೀಚಾಗಿ ಕಾಣಿಸುತ್ತಾರೆ. ಪ್ರೇಕ್ಷಕರಿಗೆ ಆಟದ ಬಿಸುಪಿಗಿಂತ, ಆತನ ಬೀಸುವಿಕೆಯ ಖುಷಿ. ಹೀಗಾಗಿ ಆತ ಆಟದ ಮೃಗೀಯತೆಗೆ ಗಮನ ಕೊಡುತ್ತಾನೆ. ಆತ ಆಟದ ಸೌಂದರ್ಯ ಪ್ರಜ್ಞೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಹೇಗಾದರೂ ಬೀಸಬೇಕು, ರನ್ ಗಳಿಸಿ ಜೈಸ ಬೇಕು ಎಂಬುದಷ್ಟೇ ಅವನ ಗುರಿ.
ಹೀಗಾಗಿ ಆತ ವ್ಯಾಪಾರದ ಯಾವ ಸಂಹಿತೆಯೂ ಇಲ್ಲದ ಕಳ್ಳ ವ್ಯಾಪಾರಿಯಂತಾಗುತ್ತಾನೆ. ಅವನಿಗೆ ಹಣಗಳಿಸುವು ದಷ್ಟೇ
ಮುಖ್ಯ, ಮಾರ್ಗ ಯಾವುದಾದರೂ ಆದೀತು. ಹಣ ಗಳಿಸುವ ಹುಚ್ಚಿಗೆ ಬಿದ್ದವನು ಹೆಚ್ಚು ಹೆಚ್ಚು ಹಣ ಗಳಿಸುವುದರಲ್ಲಿ ಸಂತೃಪ್ತಿ
ಕಾಣುತ್ತಾನೆ. ಯದ್ವಾ ತದ್ವ ಬೀಸಿ ರನ್ ಗಳಿಸುವ ಮೋಹಕ್ಕೆ ಬಿದ್ದವನ ಮನಸ್ಥಿತಿಯೂ ಇದೇ. ಒಂದು ಡಾಟ್ ಬಾಲ್‌ನ್ನು ಸಹಿಸಿ ಕೊಳ್ಳಲು ಸಹ ಆಗುವುದಿಲ್ಲ. ಸತತ ಮೂರು ಡಾಟ್ ಬಾಲ್ ಎಸೆದಾಗ, ಬ್ಯಾಟ್ಸಮನ್ ವಿಲನ್ ಥರಾ ಕಾಣುತ್ತಾನೆ. ಮುಂದಿನ ಎಸೆತಕ್ಕೆ ಆತ ಅಣಿಯಾಗುವುದನ್ನು ನೋಡಿದರೆ ಯಾರ ತಲೆ ಒಡೆಯಲು ಸಿದ್ಧನಿರುವಂತೆ ಭಾಸವಾಗುತ್ತಾನೆ.
ರನ್ ಹೊಡೆಯ ದಿರುವುದು ಅಪರಾಧವಾಗಿ ಕಾಣುತ್ತದೆ. ಇದು ಒಂಥರಾ ಡಬ್ಯುಡಬ್ಯುಎಫ್ ಪಂದ್ಯದಲ್ಲಿ ಪ್ರತಿ ಗುದ್ದೂ ಎದು ರಾಳಿಯ ಮೂಗಿಗೆ ಅಪ್ಪಳಿಸಬೇಕು ಎಂದು ಬಯಸಿದಂತೆ. ನಾವು ಇದನ್ನೇ ಕ್ರಿಕೆಟ್ ಎಂದು ಭ್ರಮಿಸುವ ಸ್ಥಿತಿಯಲ್ಲಿದ್ದೇವೆ. ಬ್ಯಾಟ್ಸಮನ್ ತನ್ನ ಬೌಲ್‌ಗೆ ರನ್ ಹೊಡೆದರೆ, ಬೌಲರ್ ಆತಂಕಕ್ಕೆ ಒಳಗಾಗುತ್ತಾನೆ. ರನ್ ಹೊಡೆಯದೇ ಇದ್ದರೆ, ರನ್ ಕೊಡಲಿಲ್ಲ ವೆಂದು ಸಮಾಧಾನವಾಗ ಬಹುದು, ಆಗಲೂ ಅವನಂದು ಅಸಹನೆ ಇರುತ್ತದೆ. ಬ್ಯಾಟ್ಸಮನ್‌ನನ್ನು ರನ್ ಹೊಡೆಯುವಂತೆ ಪ್ರೇರೇಪಿಸಿ ಔಟ್ ಮಾಡು ವುದೂ ಒಂದು ತಂತ್ರವೇ.
ಆದರೆ ರನ್ ಹೊಡೆಯದೇ, ರಕ್ಷಣಾತ್ಮಕ ಆಟದಲ್ಲಿಯೇ ಮನಸ್ಸನ್ನು ಕೇಂದ್ರೀಕರಿಸಿದವ, ಸುಲಭಕ್ಕೆ ವಿಕೆಟ್ ಚೆಲ್ಲುವುದಿಲ್ಲ. ಬೌಲರ್‌ಗೆ ಬ್ಯಾಟ್ ಬೀಸುವವನಂತೆ, ರನ್ ಹೊಡೆಯದೇ ಬೌಲ್ ಕುಕ್ಕುವವನೂ ಅಸಹನೆ ಮೂಡಿಸುತ್ತಾನೆ. ರನ್ ಹೊಡೆಯದಿರು ವುದೂ ಸಹ ಕ್ರಿಕೆಟ್. ರನ್ ಹೊಡೆಯದಿರುವುದೂ ಕಲಾತ್ಮಕತೆಯೇ. ಇಂದು ಐದು ದಿನಗಳ ಟೆಸ್ಟ್ ಪಂದ್ಯವನ್ನೂ ಐಪಿಎಲ್ ಪಂದ್ಯದಂತೆ ಆಡಬೇಕು ಎಂಬ ಖೆಡ್ಡಾದಲ್ಲಿ ಆಟಗಾರರನ್ನು ಕೆಡವಿದ್ದೇವೆ. ನಮಗೆ ಯಾರು ಎಷ್ಟು ರನ್ ಹೊಡೆದರು, ಎಷ್ಟು ಬಾಲ್‌ಗಳಲ್ಲಿ ಎಷ್ಟು ರನ್ ಹೊಡೆದರು ಎಂಬುದರಲ್ಲಷ್ಟೇ ಆಸಕ್ತಿ. ಆಟದ ವೈವಿಧ್ಯ ಮೆರೆಯುವ ಕಲಾತ್ಮಕ ಆಟಗಾರನ ಸೊಬಗಿನ ಪ್ರದರ್ಶನದ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲ.
ಬ್ಯಾಟ್ಸಮನ್ ಪ್ರೇಕ್ಷಕರನ್ನು ರಂಜಿಸುವ ಕ್ಯಾಬರೆ ಅಥವಾ ಬೆಲ್ಲಿ ಡಾನ್ಸರ್ ಥರಾ ಆಗಿದ್ದಾನೆ. ಕ್ರಿಸ್ ಗೇಲ್ ಐಟಂ ಸಾಂಗ್ ಮಾದಕ
ಬೆಡಗಿಯಂತೆ ಕಾಣುತ್ತಾನೆ. ಇಂದು ನಿಧಾನ ಗತಿಯ ಬ್ಯಾಟ್ಸಮನ್ ಅದೆಷ್ಟೇ ಶ್ರೇಷ್ಠನಾಗಿರಲಿ, ಆತ ಅಳಿವಿನಂಚಿನಲ್ಲಿರುವ ಪ್ರಾಣಿ ಯಲ್ಲ, ನಶಿಸಿ ಹೋದ ಕ್ರಿಮಿಯಾಗಿzನೆ. ಅಷ್ಟರಮಟ್ಟಿಗೆ ಇದು ಕ್ರಿಕೆಟ್ ಎಂಬ ‘ಸಂಭಾವಿತರ ಆಟ’ದ ಸೋಲೂ ಹೌದು ಎಂಬು ದನ್ನು ಒಪ್ಪಿಕೊಳ್ಳಲೇಬೇಕು.
ಕ್ರಿಕೆಟ್ ಎಂಬ ಬಹುತ್ವ ಮೆರೆಯುವ ಆಟದ ಒಂದು ಅನೂಹ್ಯ ಪ್ರಕಾರವನ್ನು ಪ್ರೇಕ್ಷಕನಾದವನು ಕೈಯಾರ ಕತ್ತು ಹಿಚುಕಿ ಸಾಯಿಸಿದ್ದಾನೆ. ನಿಧಾನಗತಿಯಲ್ಲಿ ಆಡಿದರೆ ಬ್ಯಾಟ್ಸಮನ್ ತಲೆದಂಡ ನಿಶ್ಚಿತ. ಹೀಗಾಗಿ ಎಡಗೈಯ, ಬಲಗೈಯ, ಬಗಣಿ ತಿರುಗುಣಿ
ಯ, ಹೆಲಿಕಾಪ್ಟರ್ ಹೊಡೆತದ, ಕೆವಿನ್ ಪೀಟರ್ಸನ್ ಸ್ವಿಚ್ ಹಿಟ್ ಬೀಸುವಿಕೆಯ.. ಒಟ್ಟಾರೆ ರನ್ ಬರಬೇಕು ಅಷ್ಟೇ. ಉಳಿದೆ ಸಂಗತಿಗಳು ನಗಣ್ಯ.
ಈ ಮಾತುಗಳನ್ನು ಹೇಳುವಾಗ ನನಗೆ ನೆನಪಾಗುವಾಗುವವನು ಪಾಕಿಸ್ತಾನದ ಮಹಾನ್ ಬ್ಯಾಟ್ಸಮನ್ ಗಳಬ್ಬನಾದ ಹನೀ- ಮಹಮ್ಮದ್. ಒಂದು ಕಾಲಕ್ಕೆ ‘ಎಲ್ಲಿಯ ತನಕ ಹನೀ- ಔಟ್ ಆಗುವುದಿಲ್ಲವೋ, ಇನ್ನಿಂಗ್ಸ್ ಮುಗಿಯುವುದಿಲ್ಲ’ ಎಂಬ ಮಾತಿತ್ತು. ಹನೀಫ್ ಬಂದರೆ ಬೌಲರ್‌ಗಳು ಬೆವೆತುಕೊಳ್ಳುತ್ತಿದ್ದರು. ತಮಾಷೆಯೆಂದರೆ, ಜಪ್ಪಯ್ಯ ಅಂದರೂ ಆತ ರನ್ ಹೊಡೆಯುತ್ತಲೇ ಇರಲಿಲ್ಲ. ಆದರೆ ತನ್ನ ಕಸುಬುದಾರಿಕೆ, ಕಲಾತ್ಮಕತೆಯನ್ನು ಅದ್ಭುತವಾಗಿ ಪ್ರದರ್ಶಿಸುತ್ತಿದ್ದ. ರಂಗಸ್ಥಳದಲ್ಲಿ ಎಲ್ಲಾ ಬಗೆಯ ಚಳಕ ಮೆರೆಯುವ ಪರಿಪೂರ್ಣ ಯಕ್ಷಗಾನ ಕಲಾವಿದನಂತಿದ್ದ. ಆತ ಕ್ರೀಸಿನಲ್ಲಿದ್ದರೆ ರನ್ ಬರುತ್ತಿರಲಿಲ್ಲ, ಆದರೆ ಆತನ ಆಟ
ಬೋರಾಗುತ್ತಿರಲಿಲ್ಲ. ಬೌಲರುಗಳು ತಿಣುಕಾಡುತ್ತಿದ್ದರು. ಏನೇ ಮಾಡಿದರೂ ಆತ ಉದ್ರೇಕಗೊಳ್ಳುತ್ತಿರಲಿಲ್ಲ. ರಾಹುಲ್
ದ್ರಾವಿಡ್ ‘ಗೋಡೆ’ಯಾದರೆ, ಹನೀಫ್ ‘ಚೀನಾ ಮಹಾಗೋಡೆ.’ ಹನೀಫ್ ಆಡಲು ಬಂದರೆ, ಸ್ಕೋರ್ ಬರೆಯುವವ ನಿದ್ದೆ ಹೋಗಬಹುದು ಎಂದು ಮಾತಾಡಿಕೊಳ್ಳುತ್ತಿದ್ದರು.
1958ರಲ್ಲಿ ಬ್ರಿಜ್ ಟೌನ್ ನಲ್ಲಿ ವೆಸ್ಟ್ ಇಂಡೀಸ್ – ಪಾಕಿಸ್ತಾನ ಟೆಸ್ಟ್ ಪಂದ್ಯ. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್
579 ರನ್ ಗಳಿಸಿತು. ಕೊನ್ರಾಡ್ ಹುಂಟೇ ಮತ್ತು ಎವೆರ್ಟಾನ್ ವೀಕಿಸ್ ಸೆಂಚುರಿ ಹೊಡೆದರು. ನಂತರ ಬ್ಯಾಟ್ ಮಾಡಿದ
ಪಾಕಿಸ್ತಾನ ಕೇವಲ 106 ರನ್ ಗೆ ಆಲೌಟ್ ಆಯಿತು. ರಾಯ್ ಗಿಲ್ಕ್ರಿಸ್ಟ್ 32 ರನ್‌ಗೆ ನಾಲ್ಕು ವಿಕೆಟ್ ಪಡೆದ. ವಿಂಡೀಸ್
ಪಾಕಿಸ್ತಾನಕ್ಕೆ ಫಾಲೋ ಆನ್ ನೀಡಿತು. ಪಾಕ್ 473ರನ್‌ಗಳಿಂದ ಹಿಂದಿತ್ತು. ಮೂರು ದಿನಗಳ ಆಟ ಬಾಕಿ ಉಳಿದಿತ್ತು. ಎರಡನೇ
ಇನ್ನಿಂಗ್ಸ್ ಶುರುವಾಯಿತು. ಹನೀಫ್ ಮತ್ತು ಇಮ್ತಿಯಾಜ್ ಅಹ್ಮದ್ ಬ್ಯಾಟಿಂಗ್ ಆರಂಭಿಸಿದರು. ಇವರಿಬ್ಬರು ಮೊದಲ ವಿಕೆಟ್ ಜತೆಯಾಟದಲ್ಲಿ 152 ರನ್ ಸೇರಿಸಿದರು.
ಇಮ್ತಿಯಾಜ್ ಅಹ್ಮದ್ 91 ರನ್ ಗೆ ಔಟ್ ಆದರೂ. ಇನ್ನೂ ಎರಡು ದಿನಗಳ ಆಟ ಬಾಕಿಯಿತ್ತು. ನಾಲ್ಕನೇ ದಿನ ಹನೀಫ್
ಜತೆಗೂಡಿದ ಅಲೀಮುದ್ದೀನ್ (37), ಸಾಯಿದ್ ಅಹ್ಮದ್ (65) ಮತ್ತು ಅವನ ಸಹೋದರ ವಾಝಿರ್ ಅಹ್ಮದ್ (35 ) ಔಟ್
ಆದರು. ಆದರೆ ಹನೀಫ್ ಮಾತ್ರ ಇನ್ನೊಂದು ಕಡೆ ಜಯದ್ರಥನಂತೆ ಮಿಸುಕಾಡದೇ ನಿಂತಿದ್ದ. ಒಂದೆಡೆ ವೆಸ್ಟ್ ಇಂಡೀಸಿನ ರಣರಣ ಬಿಸಿಲು. ಇನ್ನೊಂದೆಡೆ ಹನೀಫ್ ಕುಟ್ಟುಕುಟ್ಟು ಬ್ಯಾಟಿಂಗ್. ಬಿಸಿಲಿನ ಝಳ ತಾಳಲಾರದೇ ಕೆಲವು ಪ್ರೇಕ್ಷಕರು, ಮರವೇರಿ ಬಿಯರ್ ಕುಡಿಯ ಲಾರಂಭಿಸಿದರಂತೆ.
ಚೆನ್ನಾಗಿ ಕುಡಿದ ಪ್ರೇಕ್ಷಕನೊಬ್ಬ ಮರದಿಂದ ಬಿದ್ದನಂತೆ. ಪ್ರಜ್ಞಾಹೀನನಾದ ಅವನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಂತೆ. ಇಪ್ಪತ್ನಾಲ್ಕು ಗಂಟೆಯ ನಂತರ ಅವನಿಗೆ ಪ್ರಜ್ಞೆ ಮರಳಿದಾಗ, ಆತನ ಬಾಯಿಂದ ಬಂದ ಮೊದಲ ಮಾತು – ‘ಏನು, ಹನೀ- ಇನ್ನೂ ಬ್ಯಾಟ್ ಮಾಡುತ್ತಿದ್ದಾನಾ?’ ತಮಾಷೆಯೆಂದರೆ, ಹನೀ- ಇನ್ನೂ ಬ್ಯಾಟ್ ಮಾಡುತ್ತಿದ್ದ ! ಪಾಕಿಸ್ತಾನದ ಮಾನ ಕಾಪಾಡಿದ ಈ ಟೆಸ್ಟ್ ಪಂದ್ಯದಲ್ಲಿ, ಹನೀಫ್ 970 ನಿಮಿಷಗಳ (ಸುಮಾರು ಹದಿನಾರು ಗಂಟೆ) ಕಾಲ ಬ್ಯಾಟ್ ಮಾಡಿ, 337 ರನ್ ಹೊಡೆದ. ಇದು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಅತ್ಯಂತ ಸುದೀರ್ಘ ಮತ್ತು ಧಿರೋದಾತ್ತ ಪ್ರದರ್ಶನ ಎಂದೇ ಇಂದಿಗೂ ದಾಖಲಾಗಿದೆ.
ವಿಂಡೀಸ್‌ನ ಅದ್ಭುತ ಬೌಲರುಗಳಾದ ಗಿಲ್ಕ್ರಿಸ್ಟ್, ಅತ್ಕಿನ್ ಸನ್, ಸ್ಮಿಥ್, ವ್ಯಾಲೆಂಟೈನ್, ಸೋಬರ್ಸ್ ಅರವತ್ತಕ್ಕಿಂತ ಹೆಚ್ಚು ಓವರ್ ಬೌಲ್ ಮಾಡಿ ಸುಸ್ತಾಗಿ ಹೋದರು. ಕೊನೆಗೆ ವಿಂಡೀಸ್ ನಾಯಕ ತನ್ನ ವಿಕೆಟ್ ಕೀಪರ್‌ಗೆ ಬೌಲ್ ಮಾಡುವಂತೆ ಹೇಳಿದ. ಆತನೂ ಹತ್ತು ಓವರ್ ಎಸೆದ. ತಂಡದ ಎಲ್ಲಾ ಆಟಗಾರರೂ ಬೌಲ್ ಮಾಡಿದರು. ಹನೀಫ್ ನನ್ನು ಔಟ್ ಮಾಡಲು ಆಗಲೇ ಇಲ್ಲ.
ಪಾಕಿಸ್ತಾನ ಮೂರು ದಿನಗಳ ಕಾಲ ಆಟವಾಡಿ, 319 ಓವರುಗಳಲ್ಲಿ 8 ವಿಕೆಟ್‌ಗೆ 657 ರನ್ ಹೊಡೆದು ಡಿಕ್ಲೇರ್ ಮಾಡಿ ಕೊಂಡಿತು. ಅಲ್ಲಿಗೆ ಪಂದ್ಯ ಡ್ರಾ ಆಯಿತು. ಕ್ರಿಕೆಟ್ ನಲ್ಲಿ ಕಲಾತ್ಮಕತೆ ಮತ್ತು ಸಹನೆಯೆಂದರೆ ಏನು ಎಂಬುದನ್ನು ತಿಳಿಯ ಬೇಕೆಂದರೆ, ಹನೀಫ್ ಆಟವನ್ನು ನೋಡಿ ಎಂದು ಈಗಲೂ ಸುನಿಲ್ ಗವಾಸ್ಕರ್ ಹೇಳುತ್ತಾರೆ. 1960ರಲ್ಲಿ ಪಾಕಿಸ್ತಾನ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋದಾಗ, ಸರ್ ಡೊನಾಲ್ಡ ಬ್ರಾಡ್ಮನ್ ತನ್ನ ದಾಖಲೆ (452) ಮುರಿದ ಆಟಗಾರನನ್ನು ನೋಡ ಲೆಂದು ಡ್ರೆಸಿಂಗ್ ರೂಮಿಗೆ ಹೋದರಂತೆ. ‘ಇಲ್ಲಿ ಹನೀ- ಯಾರು?’ ಎಂದು ಕೇಳಿದರಂತೆ.
ತಕ್ಷಣ ಸಂಕೋಚದಿಂದ ಎದ್ದು ನಿಂತ ಹನೀಫ್, ‘ಸರ್ ನೀವೇ ಯಾವತ್ತೂ ಗ್ರೇಟ್ ಬ್ಯಾಟ್ಸಮನ್’ ಎಂದರಂತೆ. ಆಗ ಬ್ರಾಡ್ಮನ್, ‘ನನ್ನ ದಾಖಲೆ ಮುರಿಯುವ ಬ್ಯಾಟ್ಸಮನ್ ಆರು ಅಡಿ ಎರಡು ಅಂಗುಲ ಎತ್ತರದವನಾಗಿರುತ್ತಾನೆ ಅಂದುಕೊಂಡಿದ್ದೆ. ಆದರೆ ನೀನು ನನಗಿಂತ ಕುಳ್ಳ’ ಎಂದು ನಗುತ್ತಾ ತಬ್ಬಿಕೊಂಡಿದ್ದರಂತೆ.
1954ರಲ್ಲಿ ಇಂಗ್ಲೆಂಡ್ ವಿರುದ್ಧ ಹನೀಫ್ 223 ಬಾಲುಗಳಲ್ಲಿ ಕೇವಲ 20 ರನ್ ಹೊಡೆದಿದ್ದ. ಅಂಪೈರ್ ನಿದ್ದೆ ಮಾಡದಿದ್ದರೆ
ಸಾಕು ಎಂದು ಅವನ ತಂಡದ ಇತರ ಆಟಗಾರರು ಅವನನ್ನು ಕಿಚಾಯಿಸಿದ್ದರು. ಆದರೆ ಆಗಲೂ ಹನೀಫ್ ಪಂದ್ಯ ಡ್ರಾ ಆಗಲು
ಸಹಕರಿಸಿದ್ದ. ಹನೀಫ್ ನಿಧಾನ ಗತಿಯಲ್ಲೂ ಅಪರಿಮಿತ ತಂತ್ರಗಾರಿಕೆ ಮೆರೆಯುತ್ತಿದ್ದ. ಅವನ ಬಗ್ಗೆ ಜೋಕುಗಳೇನೇ ಇರಲಿ, ಆದರೆ ಆತ ಅಸಂಖ್ಯ ಅಭಿಮಾನಿಗಳನ್ನು ಹೊಂದಿದ್ದ. ಬೌಲರುಗಳ ಜಂಘಾಬಲ ಉಡುಗಿಸುತ್ತಿದ್ದ. ನಿಧಾನ ಗತಿಯೂ ಒಂದು ಅರ್ಹತೆ ಎಂಬುದನ್ನು ಆತ ಮನವರಿಕೆ ಮಾಡಿಕೊಟ್ಟಿದ್ದ.
ಈ ಮಾತನ್ನು ಹೇಳುವಾಗ, 1981ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಡಿಲೇಡ್‌ನಲ್ಲಿ ಭಾರತದ ಯಶಪಾಲ್ ಶರ್ಮ 157 ಬಾಲ್‌ಗೆ ಹೊಡೆದ 13 ರನ್, 2015ರಲ್ಲಿ ಭಾರತ – ದಕ್ಷಿಣ ಆಫ್ರಿಕಾ ವಿರುದ್ಧ ಫಿರೋಜ್ ಷಾ ಕೋಟ್ಲಾದಲ್ಲಿ ಎ.ಬಿ.ಡಿ ವಿಲಿಯರ್ಸ್ 244 ಬಾಲುಗಳಲ್ಲಿ ಹೊಡೆದ 25 ರನ್, 1999ರಲ್ಲಿ ನ್ಯೂಜಿಲ್ಯಾಂಡ್ – ದಕ್ಷಿಣ ಆಫ್ರಿಕಾ ಟೆಸ್ಟ್ ಪಂದ್ಯದಲ್ಲಿ ಜೆ- ಅಲೋಟ್ 77 ಬಾಲುಗಳಲ್ಲಿ ಒಂದೂ ರನ್ ಹೊಡೆಯದಿರುವುದು, 2007ರಲ್ಲಿ ಭಾರತ – ಇಂಗ್ಲೆಂಡ್ ಟೆಸ್ಟ್‌ನಲ್ಲಿ ರಾಹುಲ್ ದ್ರಾವಿಡ್ 96 ಬಾಲುಗಳಲ್ಲಿ 12 ರನ್ ಹೊಡೆದಿದ್ದು ನೆನಪಾಗುತ್ತದೆ.
ನನ್ನ ಪಾಲಿಗೆ ಇವು ಎಂದೂ ಮರೆಯಲಾಗದ ಅದ್ಭುತ ಪ್ರದರ್ಶನ. ರನ್ ಹೊಡೆಯದೇ ಕ್ರೀಸಿನಲ್ಲಿರುವ ಪ್ರದರ್ಶನ ಸಹ ಒಂದು
ಅದ್ಭುತ ಕ್ರಿಕೆಟ್ ಎಂಬುದನ್ನು ನಾವು ಒಪ್ಪದ ಕಾಲದಲ್ಲಿದ್ದೇವೆ. ಇದು ಕ್ರಿಕೆಟ್‌ಗೆ ನಾವು ಮಾಡುವ ಅನ್ಯಾಯ, ಅಪಚಾರ
ಎಂಬುದು ಅರಿವಾದರೆ ಸಾಕು.