Friday, 22nd November 2024

ಬಿಜೆಪಿ-ಜೆಡಿಎಸ್ ವಿಲೀನ ನಿಜಕ್ಕೂ ಸಾಧ್ಯವೇ ?

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ರಾಜಕೀಯದಲ್ಲಿ ಒಂದು ಮಾತಿದೆ. ‘ಇಲ್ಲಿ ಯಾರೂ ಶತ್ರುವೂ ಅಲ್ಲ. ಯಾರು ಮಿತ್ರರೂ ಅಲ್ಲ’ ಎಂದು. ಇದು ಕಾಲಕಾಲಕ್ಕೆ
ಸಾಬೀತಾಗಿದೆ ಕೂಡ. ಕೆಲ ದಿನಗಳ ಹಿಂದೆ ಬಡಿದಾಡಿಕೊಂಡು ಒಂದೊಂದು ಕಡೆ ಮುಖ ತಿರುಗಿಸಿಕೊಂಡ ಅನೇಕರು,
ಅನಿವಾರ್ಯತೆ ಬಂದಾಗ ಕುಚಿಕು ದೋಸ್ತಿಗಳ ರೀತಿ ವರ್ತಿಸಿದ್ದು ಗೊತ್ತಿದೆ.

ಈಗೇಕೆ ಈ ಮಾತು ಎಂದರೆ, ಕಳೆದ ಒಂದುವರೆ ವರ್ಷದ ಹಿಂದೆ ವಿಧಾನಸಭೆಯಲ್ಲಿ ವಾಗ್ಭಾಣಗಳನ್ನು ಬಿಟ್ಟಿದ್ದ ಬಿಜೆಪಿ-
ಜೆಡಿಎಸ್ ನಾಯಕರು, ಅವರ ಮುಖವನ್ನು ನೋಡುವುದಿಲ್ಲ ಎನ್ನುವ ಮಾತನ್ನು ಆಡಿದ್ದ ಕುಮಾರಸ್ವಾಮಿ ಹಾಗೂ
ಯಡಿಯೂರಪ್ಪ ಅವರು ಇದೀಗ ಇಬ್ಬರ ’’common enemy’ ಆಗಿರುವ ಕಾಂಗ್ರೆಸ್ ಅನ್ನು ಮಣಿಸಲು ಹಾಗೂ ರಾಜ್ಯದಲ್ಲಿ ಎದುರಾಗಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಅಗತ್ಯವಿರುವ ‘ಸ್ನೇಹ’ವನ್ನು ಪುನರಾರಂಭಿಸಿದೆ.

ಆರಂಭದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಕೇವಲ ವಿಷಯಾಂತರ ಮೈತ್ರಿ ಎಂದು ಕೊಳ್ಳಲಾಗಿತ್ತು. ಆದರೆ ಇತ್ತೀಚಿಗೆ ಈ ಸ್ನೇಹ
ವಿಷಯಾಂತರ ಮೈತ್ರಿ ಹೊರತು ಬೇರೆತ್ತ ವಾಲುತ್ತಿದೆ ಎನ್ನುವ ಮಾತುಗಳು ಶುರುವಾಗಿದೆ. ಅದಕ್ಕೆ ಪುಷ್ಠಿ ನೀಡುವಂತೆ ಕಳೆದ
ಎರಡು ದಿನದಿಂದ ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನವಾಗಲಿದೆ ಎನ್ನುವ ಸುದ್ದಿಗಳು ‘ಹರಿದಾಡುತ್ತಿವೆ’.

ಅಷ್ಟಕ್ಕೂ ಹಲವು ತಿಂಗಳುಗಳಿಂದ ಕೇಳಿಬರುತ್ತಿದ್ದ ಈ ಮಾತಿಗೆ, ಭಾನುವಾರ ಅಷ್ಟೊಂದು ಮಹತ್ವ ಬರುವುದಕ್ಕೂ ಕಾರಣವಿದೆ. ಕಳೆದೊಂದು ತಿಂಗಳಿನಿಂದಲೂ, ಬಿಜೆಪಿ- ಜೆಡಿಎಸ್ ಮೈತ್ರಿ ಅಥವಾ ಇನ್ನಷ್ಟು ಶಾಸಕರು ಬಿಜೆಪಿಗೆ ಹೋಗುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೆ ಈ ಎಲ್ಲವನ್ನು ‘ಗಾಳಿ ಸುದ್ದಿ’ ಎನ್ನುವ ಮೂಲಕ ಬಹುತೇಕರು ವಿಲೀನದ ಬಗ್ಗೆ ಗಂಭೀರ ಚಿಂತನೆ ನಡೆಸಿರಲಿಲ್ಲ. ಆದರೆ ಭಾನುವಾರ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅರವಿಂದ ಲಿಂಬಾವಳಿ ಅವರು, ‘ಸಮ್ಮಿಶ್ರ ಸರಕಾರ ಮಾಡಲು ಯಾರು ಮುಂದಾಗಿದ್ದರೋ ಅವರೇ ಪರಸ್ಪರ ಕಿತ್ತಾಡುವ ಸಂದರ್ಭ ಬಂದಿದೆ.

ಹೀಗಾಗಿ ಬರುವ ದಿನಗಳಲ್ಲಿ ರಾಜಕೀಯ ಧ್ರುವೀಕರಣ ಮತ್ತಷ್ಟು ಆಗಲಿದೆ. ಯಾವ ರೀತಿ ಧ್ರುವೀಕರಣ ಆಗುತ್ತೆ ಎಂದು ಹೇಳಲು ಆಗುವುದಿಲ್ಲ. ಆದರೆ ರಾಜ್ಯದಲ್ಲಿ ಮಾತ್ರ ಬಿಜೆಪಿಯಂತೂ ಮತ್ತಷ್ಟು ಗಟ್ಟಿಯಾಗಲಿದೆ. ಒಂದು ಪಕ್ಷ ಮತ್ತೊಂದು ಪಕ್ಷದ ಜತೆ ವಿಲೀನ ಆಗುತ್ತೆ ಎಂಬ ಸುದ್ದಿ ಬಗ್ಗೆ ನಾನು ಕೇಳಿದ್ದೇನೆ’ ಎಂದು ಹೇಳಿದರು. ಈ ಹೇಳಿಕೆಯಲ್ಲಿ ಎಲ್ಲಿಯೂ ಜೆಡಿಎಸ್‌ನೊಂದಿಗೆ ಕೈಜೋಡಿಸುತ್ತೇವೆ ಎಂದು ಹೇಳದಿದ್ದರೂ, ಈ ರೀತಿಯ ಅಡ್ಡಗೋಡೆ ಮೇಲೆ ದೀಪವಿಟ್ಟಂತ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಯಿತು.

ಸಾಮಾನ್ಯವಾಗಿ ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದಲ್ಲಿ, ಈ ರೀತಿಯ ಸೂಕ್ಷ್ಮ ಹೇಳಿಕೆಗಳನ್ನು ‘ಆನ್ ರೆಕಾರ್ಡ್’ ಹೇಳಿವಾಗ ನೂರಾರು ಭಾರಿ ಯೋಚಿಸುತ್ತಾರೆ. ಅದರಲ್ಲಿಯೂ ಸಂಘಟನಾ ಕಾರ್ಯದರ್ಶಿಯಾಗಿ ದುಡಿದು, ಇದೀಗ ಉಪಾಧ್ಯಕ್ಷರಾಗಿರುವ ಅರವಿಂದ ಲಿಂಬಾವಳಿ ಅವರು ಈ ರೀತಿಯ ಹೇಳಿಕೆಯ ಹಿಂದೆ ‘ಕಾಣದ ಯೋಜನೆಗಳು’ ಇಲ್ಲವೆನ್ನುವುದಕ್ಕೂ ಸಾಧ್ಯವಿಲ್ಲ.

ಇದಕ್ಕೆ ಪೂರಕ ಎನ್ನುವಂತೆ ಇತ್ತೀಚಿಗೆ ಬಿಜೆಪಿಯೊಂದಿಗೆ ಜೆಡಿಎಸ್ ಸಖ್ಯ ಹೆಚ್ಚುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಎಚ್.ಡಿ ಕುಮಾರಸ್ವಾಮಿ ತಿಂಗಳ ಅಂತರದಲ್ಲಿ ಎರಡು ಬಾರಿ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದರು. ಇದಿಷ್ಟೇ ಅಲ್ಲದೇ, ಭೂ ಸುಧಾರಣಾ ತಿದ್ದುಪಡಿ ಕಾಯಿದೆ ವಿಷಯದಲ್ಲಿ ಸರಕಾರದ ವಿರುದ್ಧ ಕಾಂಗ್ರೆಸ್ ಮುಗಿಬೀಳುತ್ತಿದ್ದರೂ, ಜೆಡಿಎಸ್ ಮಾತ್ರ ತನಗೂ ಈ ಕಾಯಿದೆಗೂ ಸಂಬಂಧವೇ ಇಲ್ಲ ಎನ್ನುವ ರೀತಿ ವರ್ತಿಸಿದ್ದನ್ನು ನೋಡಿದ್ದೇವೆ.

ಇದಾದ ಬಳಿಕ ಮೊನ್ನೆ ಮೊನ್ನೆ ನಡೆದ ಸಭಾಪತಿಗಳ ಅವಿಶ್ವಾಸ ನಿರ್ಣಯ ವಿಷಯದಲ್ಲಿಯೂ ಜೆಡಿಎಸ್ ಬಿಜೆಪಿಯ ನಿರ್ಣಯಕ್ಕೆ ಅಧಿಕೃತವಾಗಿ ಸಹಿ ಹಾಕಿ, ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಕೆಳಗಿಳಿಸುವ ಪ್ರಯತ್ನಕ್ಕೆ ಕೈಜೋಡಿಸಿದೆ. ಸಾರ್ವಜನಿಕ ವಲಯ ದಲ್ಲಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿಯ ನಡೆಯನ್ನು ಖಂಡಿಸುತ್ತಿದ್ದರೂ, ಈ ಬಗ್ಗೆ ಧ್ವನಿ ಎತ್ತದೇ  ಅಂತರ ಕಾಯ್ದು ಕೊಳ್ಳುತ್ತಿರುವ ಜೆಡಿಎಸ್ ನಡೆಯನ್ನು ನೋಡಿದಾಗ, ಈ ರೀತಿಯ ಅನುಮಾನ ಬರುವುದರಲ್ಲಿ ಸಂಶಯವೇ ಇಲ್ಲ.

ದೇವೇಗೌಡರು, ತಮ್ಮ ನಂತರ ಪಕ್ಷದ ಜವಾಬ್ದಾರಿ ಯಾರು ಹೋರುತ್ತಾರೆ? ನಾಯಕನ್ಯಾರು? ಎಂಬೆಲ್ಲ ಯೋಚಿಸಿ, ವಿಲೀನಕ್ಕೆ ಮುಂದಾದರೆ ಎಂದಟ್ಟುಕೊಂಡರೆ, ಬಿಜೆಪಿಯನ್ನೇ ಏಕೆ ಆಯ್ಕೆಮಾಡಿಕೊಳ್ಳಬೇಕಿತ್ತು ಎನ್ನುವ ಪ್ರಶ್ನೆಗಳು ಬರುವುದು ಸಹಜ.
ಹಾಗೆಂದ ಮಾತ್ರಕ್ಕೆ ಜನತದಳದಿಂದ ಜೆಡಿಎಸ್ ವಿಭಜನೆಯಾದ ಬಳಿಕ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದೇ,
ಮಡಿವಂತಿಕೆಯ ರಾಜಕೀಯ ಮಾಡಿದೆ ಎಂದಲ್ಲ. ಅಂದಿನ ದಿನಮಾನಕ್ಕೆ ತಕ್ಕಂತೆ ಆಡಳಿತದಲ್ಲಿರುವ ಪಕ್ಷಗಳೊಂದಿಗೆ
ಹೊಂದಿಕೊಳ್ಳುವುದು ಎಲ್ಲರಿಗೂ ತಿಳಿದಿರುವ ವಿಷಯ. ಜೆಡಿಎಸ್, ಇನ್ನೊಂದು ಪಕ್ಷದೊಂದಿಗೆ ಹೊಂದಾಣಿಕೆ ಮಾಡಿ ಕೊಂಡಿರುವುದು ಇದೇ ಮೊದಲಲ್ಲ.

ಇದೇ ಕೊನೆಯೂ ಅಲ್ಲ. ಆರಂಭದಲ್ಲಿ ಬಿಜೆಪಿಯೊಂದಿಗೆ 20-20 ಸರಕಾರ ರಚಿಸಿದ್ದ ಬಳಿಕ, ಕಾಂಗ್ರೆಸ್ ಜತೆ ೨೦೧೯ರಲ್ಲಿ ಸರಕಾರ ರಚನೆ ಮಾಡಿತ್ತು. ಬಳಿಕ ಮೈತ್ರಿ ಭಂಗವಾಗುತ್ತಿದ್ದಂತೆ, ಕಾಂಗ್ರೆಸ್ ವಿರುದ್ಧ ವಾಚಾಮಗೋಚರ ಮಾತನಾಡಿದ್ದು ನೋಡಿದ್ದೇವೆ. ಈ ಹಿಂದೆ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡಾಗಲು ಇದೇ ರೀತಿ ಹೇಳಿಕೆ ನೀಡಿದ್ದು, ಯಡಿಯೂರಪ್ಪ-ಕುಮಾರಸ್ವಾಮಿ ಬಹಿರಂಗವಾಗಿ ಬೈದಾಡಿಕೊಂಡಿದ್ದು ಇದೆ. ಆದರೆ ಈ ರೀತಿ ಬಡಿದಾಡಿಕೊಂಡ ಕೆಲವೇ ತಿಂಗಳಲ್ಲಿ ಯಡಿಯೂರಪ್ಪ ಅವರೊಂದಿಗೆ ಆಪ್ತ ರೀತಿಯಲ್ಲಿ ಕುಮಾರಸ್ವಾಮಿ ವರ್ತಿಸಿದ್ದಾಗ, ಕೆಲವರಿಗೆ ಅಚ್ಚರಿಯಾಗಿತ್ತು.

ಬಹುತೇಕರು, ಆಡಳಿತ ಪಕ್ಷದೊಂದಿಹೆ ‘ಹೊಂದಾಣಿಕೆ’ ಮಾಡಿಕೊಳ್ಳುವುದು ಜೆಡಿಎಸ್ ಹುಟ್ಟುಗುಣವೆಂದುಕೊಂಡು ಸುಮ್ಮನಾ ಗಿದ್ದರು. ಈ ಮಾತು ಹೀಗಾದರೆ, ಇನ್ನು ರಾಷ್ಟ್ರ ರಾಜಕಾರಣದಲ್ಲಿ ನೋಡುವುದಾದರೆ ಜೆಡಿಎಸ್ ವಿಭಜನೆ ಬಳಿಕ ಕರ್ನಾಟಕ ದಿಂದ ಜೆಡಿಎಸ್‌ನಿಂದ ಸಂಸತ್‌ಗೆ ಹೋದವರ ಸಂಖ್ಯೆ ಏನು ದೊಡ್ಡಮಟ್ಟದಲ್ಲಿಲ್ಲ. ಮೂರು- ನಾಲ್ಕು ಅಂತರದಲ್ಲಿಯೇ ಗೆಲ್ಲುತ್ತಾ ಬಂದಿದೆ ಹೊರತು, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಸಿಗುವ ಮಟ್ಟದಲ್ಲಿ ಸಂಖ್ಯಾಬಲ ಸಿಗಲಿಲ್ಲ. ಆದರೂ ಅಗತ್ಯವಿರುವಾಗ ಆಡಳಿತ- ವಿರೋಧ ಪಕ್ಷಗಳ ನಡುವೆ ಒಂದನ್ನು ಆಯ್ಕೆ ಮಾಡಿಕೊಂಡೇ ಬಂದಿದೆ. ಆದರೆ ಎಂದಿಗೂ ವಿಲೀನದಂತಹ ಮಾತುಗಳು

ಇತ್ತೀಚಿವರೆಗೆ ಕೇಳಿಬಂದಿರಲಿಲ್ಲ. ಆದರೀಗ ದೇವೇಗೌಡರ ನಂತರ ಯಾರು ಎನ್ನುವ ಪ್ರಶ್ನೆಗಳೊಂದಿಗೆ ಈ ರೀತಿ ಮಾತುಗಳು ಶುರುವಾಗಿದೆ. ಬಹುತೇಕರಿಗೆ ಅಚ್ಚರಿಯಾಗಿದ್ದು, ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನವಾಗಲಿದೆ ಎನ್ನುವ ವಿಷಯಕ್ಕೆ. ಕರ್ನಾಟಕ
ದಲ್ಲಿ ಪ್ರಾದೇಶಿಕ ಪಕ್ಷವಾಗಿ ಕೊಂಚ ಹಿಡಿತ ಸಾಧಿಸಿರುವ, ಕೆಲವು ಸೀಟುಗಳನ್ನಾದರೂ ಗೆದ್ದುಕೊಂಡು ವಿಧಾನಸಭೆಯಲ್ಲಿ ಆಡಳಿತ ಪಕ್ಷವನ್ನು ಹಿಡಿತದಲ್ಲಿಟ್ಟುಕೊಳ್ಳುತ್ತಿರುವ ಏಕೈಕ ಪಕ್ಷ ಜೆಡಿಎಸ್.

2008ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಹೊರತುಪಡಿಸಿ 30 ರಾಜಕೀಯ ಪಕ್ಷಗಳು ಚುನಾವಣೆಯಲ್ಲಿದ್ದವು. ಆದರೆ ಈ ಯಾವ ಪಕ್ಷಗಳು ಅಭ್ಯರ್ಥಿಗೂ ಠೇವಣಿ ಉಳಿಸಿಕೊಳ್ಳುವುದಕ್ಕೂ ಸಾಧ್ಯವಾಗಲಿಲ್ಲ. 2018ರಚುನಾವಣೆಯಲ್ಲಿ ಬಿಎಸ್‌ಪಿಯಿಂದ ಮಹೇಶ್, ಪ್ರಜಾಕೀಯದಿಂದ ಶಂಕರ್ ಹೊರತು ಪಡಿಸಿ, ಇನ್ಯಾವ ಪಕ್ಷದ ಅಭ್ಯ
ರ್ಥಿಗಳು ವಿಧಾನಸೌಧದ ಮೆಟ್ಟಿಲು ಏರುವುದಕ್ಕೂ ಸಾಧ್ಯವಾಗಲಿಲ್ಲ.

ಹೀಗಿರುವಾಗ, ಪ್ರಾದೇಶಿಕ ಪಕ್ಷವಾಗಿ 30-40 ಕ್ಷೇತ್ರದಲ್ಲಿ ತನ್ನ ಅಸ್ವಿತ್ಥ ಉಳಿಸಿಕೊಂಡು ಮುನ್ನಡೆಯುತ್ತಿದೆ. ರಾಜ್ಯದ ಅಭಿವೃದ್ಧಿ ವೇಗವಾಗಿ ಆಗಬೇಕಾದರೆ, ಅದಕ್ಕೆ ಭದ್ರವಾಗಿರುವ ಪ್ರಾದೇಶಿಕ ಪಕ್ಷದ ಅಗತ್ಯವಿರುತ್ತದೆ. ರಾಷ್ಟ್ರೀಯ ಪಕ್ಷಗಳು, ರಾಷ್ಟ್ರ ರಾಜಕಾರಣ ಹಾಗೂ ನೆರೆ ರಾಜ್ಯಗಳಲ್ಲಿನ ರಾಜಕೀಯವನ್ನು ನೋಡಿಕೊಂಡು, ಕರ್ನಾಟಕದ ಯೋಜನೆಗಳನ್ನು ನಿರ್ಧರಿಸುತ್ತಾರೆ. ಅದರಲ್ಲಿಯೂ ನೀರಾವರಿ ಯೋಜನೆ ವಿಷಯದಲ್ಲಿ, ಬಿಜೆಪಿ ಹಾಗೂ ಕಾಂಗ್ರೆಸ್ ಯಾವ ರೀತಿ ನಡೆದುಕೊಂಡಿವೆ ಎನ್ನುವುದು
ಈಗಾಗಲೇ ಜಗಜಾಹೀರವಾಗಿದೆ. ಆದ್ದರಿಂದ ಈ ಸಮಯದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನಗೊಂಡರೆ, ಅದರಿಂದ ಉಂಟಾಗುವ ‘Vacumn’ ತುಂಬುವುದಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಮತ್ತೊಂದು ಪ್ರಾದೇಶಿಕ ಪಕ್ಷವಿಲ್ಲ.

ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ತನ್ನದೇಯಾದ ಹಿಡಿತವನ್ನು ಸಾಧಿಸಿದೆ. ಇಡೀ ರಾಜ್ಯದಲ್ಲಿ ತನ್ನ ಅದಿಪತ್ಯವನ್ನು ಸಾಧಿಸಲು ಎಣಗಾಡುತ್ತಿದ್ದರೂ, ಹಳೇ ಮೈಸೂರು ಭಾಗದ 30 ಸೀಟುಗಳಿಗೆ ಸಮಸ್ಯೆಯಿಲ್ಲ. ಆದ್ದರಿಂದ ಕರ್ನಾಟಕದ ಜಲ-ನೆಲದ-ಭಾಷೆಯ ವಿಷಯವನ್ನಿಟ್ಟುಕೊಂಡು ಇನ್ನಷ್ಟು ಪ್ರಬಲವಾಗಿ ಪ್ರಚಾರದಲ್ಲಿ ತೊಡಗಿದರೆ, ಪಕ್ಷವನ್ನು ಸಂಘಟಿಸಬಹುದು. ದೇವೇಗೌಡರಷ್ಟೇ ಅಭಿಮಾನಿಗಳನ್ನು ಅವರ ಪುತ್ರ ಕುಮಾರಸ್ವಾಮಿ ಅವರು ಹೊಂದಿದ್ದಾರೆ.

ಆದರೆ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ. ಅದು ಪಕ್ಷದ ಆಂತರಿಕ ವಿಷಯವಾದರೂ, ಪಕ್ಷ ಸಂಘಟನೆಯಲ್ಲಿ
ನಾಯಕರು ತೋರಿರುವ ನಿರಾಸಕ್ತಿಯೇ ಇಂದಿನ ಈ ಪರಿಸ್ಥಿತಿಗೆ ಕಾರಣ ಎನ್ನುವುದನ್ನು ಒಪ್ಪಬೇಕು. ಇನ್ನು ಸುಸ್ಥಿತಿಯಲ್ಲಿರುವ ಬಿಜೆಪಿ ಇದೀಗ ಜೆಡಿಎಸ್ ಅನ್ನು ಪಡೆಯುವುದಕ್ಕೆ ಕಾರಣವೇನು ಎನ್ನುವುದು ಅನೇಕರಲ್ಲಿದೆ. ಈ ರೀತಿಯ ವಾದಕ್ಕೆ ಕೆಲವರು, ‘ರಾಜಕೀಯ ಲಾಭಕ್ಕಾಗಿ ಏನು ಬೇಕಾದರೂ ಬಲಿಕೊಡಲು ಸಿದ್ಧರಿರುತ್ತಾರೆ’ ಎನ್ನುವ ಮಾತುಗಳನ್ನು ಆಡುತ್ತಾರೆ.

ಆದರೆ ರಾಜಕೀಯವಾಗಿ ಸೂಕ್ಷ್ಮವಾಗಿ ಗಮನಿಸಿದರೆ, ಜೆಡಿಎಸ್‌ಗೆ ವಿಲೀನದಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಅದರಲ್ಲಿಯೂ ಬಿಜೆಪಿಯ ಸಿದ್ಧಾಂತವನ್ನು ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿರುವ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು,
ಇಡೀ ಜೀವನವನ್ನು ಜೆಡಿಎಸ್ ಕಟ್ಟಲು ತೇಯ್ದು, ಇದೀಗ ಅದನ್ನು ಬಿಜೆಪಿಯೊಂದಿಗೆ ವಿಲೀನ ಮಾಡಲು ಒಪ್ಪುವರೇ ಎನ್ನುವು ದನ್ನು ನೋಡಬೇಕಿದೆ.

ಪಕ್ಷಗಳ ವಿಲೀನ ಎಂದಿಗೂ ಆಗುವುದೇ ಇಲ್ಲ ಎಂದಲ್ಲ. ಈ ಹಿಂದೆ ಹಲವು ಪಕ್ಷಗಳು ಮತ್ತೊಂದು ಪಕ್ಷಗಳೊಂದಿಗೆ ವಿಲೀನ ವಾಗಿರುವುದನ್ನು ನೋಡಿದ್ದೇವೆ. ಕರ್ನಾಟಕದಲ್ಲಿಯೇ ನೋಡುವುದಾದರೆ ರಾಮಕೃಷ್ಣ ಹೆಗಡೆ ಅವರು ಸ್ಥಾಪಿಸಿದ್ದ ಲೋಕ್‌ಶಕ್ತಿ ಜೆಡಿಯುನೊಂದಿಗೆ, ಯಡಿಯೂರಪ್ಪ ಅವರು ಸ್ಥಾಪಿಸಿದ್ದ ಕೆಜೆಪಿ ಬಿಜೆಪಿಯೊಂದಿಗೆ, ಇಂದಿರಾ ಗಾಂಧಿ ಅವರ ಸಮಯದಲ್ಲಿ ಕಾಂಗ್ರೆಸ್‌ನಿಂದ ಹೊರ ಹೋಗಿ ಸ್ಥಾಪನೆಯಾಗಿದ್ದ ಹಲವು ಪಕ್ಷಗಳು ಪುನಃ ‘ಮರಳಿ ಗೂಡಿ’ಗೆ ಬಂದಿದ್ದನ್ನು ನೋಡಿದ್ದೇವೆ.

ತೀರಾ ಇತ್ತೀಚಿಗೆ ಜಾರ್ಖಂಡ್ ವಿಕಾಸ್ ಮೋರ್ಚಾ ಪಕ್ಷ ಬಿಜೆಪಿಯೊಂದಿಗೆ ವಿಲೀನವಾಗಿದ್ದನ್ನು ನೋಡಿದ್ದೇವೆ. ಇದಕ್ಕೂ ಮೊದಲು 1967ರಲ್ಲಿ ಜನತಾ ದಳದೊಂದಿಗೆ ಹತ್ತಾರು ಸಮಾನ ಮನಸ್ಕ ಪಕ್ಷಗಳು ವಿಲೀನವಾಗಿರುವುದು ಇತಿಹಾಸದಲ್ಲಿದೆ. ಆದರೆ ಇಲ್ಲಿ
ಗಮನಿಸಬೇಕಾದ ಅಂಶವೇನೆಂದರೆ, ವಿಲೀನಗೊಂಡಿರುವ ಬಹುತೇಕ ರಾಜಕೀಯ ಪಕ್ಷಗಳ ಸ್ಥಾಪಕರು, ಅದೇ ಪಕ್ಷದಲ್ಲಿದ್ದು ಬಳಿಕ ಆ ಪಕ್ಷದಲ್ಲಿ ಶುರುವಾದ ಭಿನ್ನಾಭಿಪ್ರಾಯದಿಂದ ಹೊರಬಂದು, ಚುನಾವಣೆ ಎದುರುಸಿ ಬಳಿಕ ಪುನಃ ಅದರೊಂದಿಗೆ ಇರುವುದೇ ಲೇಸು ಎನ್ನುವ ಕಾರಣಕ್ಕೆ ಅಥವಾ ಆ ಪಕ್ಷಕ್ಕಾದ ಡ್ಯಾಮೇಜ್ ಸರಿಪಡಿಸಲು, ಪುನಃ ಆಹ್ವಾನ ನೀಡಿರುವುದನ್ನು ನೋಡಿದ್ದೇವೆ.

ಜೆಡಿಎಸ್ ವಿಚಾರದಲ್ಲಿ ನೋಡುವುದಾದರೆ, ಇಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸೈದ್ಧಾಂತಿಕವಾಗಿ ಒಂದಾಗಿಲ್ಲ. ಈ ಎರಡು ಪಕ್ಷಗಳ ಸಿದ್ಧಾಂತ, ಚಿಂತನೆ, ಕಾರ್ಯನಿರ್ವಹಿಸುವ ವಿಧಾನ ಹಾಗೂ ಯೋಚನಾ ಲಹರಿ ಎಲ್ಲವೂ ಅಜಗಜಾಂತರವಾಗಿದೆ. ಆದ್ದರಿಂದ ಇಂತಹ ಸನ್ನಿವೇಶದಲ್ಲಿ ವಿಲೀನ ಪ್ರಕ್ರಿಯೆ ಸಾಧ್ಯವೇ ಎನ್ನುವುದನ್ನು ನೋಡಬೇಕಿದೆ.

ಸಾಂವಿಧಾನಿಕ ವಿಷಯದ ಬಗ್ಗೆ ನೋಡುವುದಾದರೆ, ವಿಲೀನಕ್ಕೆ ಅಥವಾ ವಿಭಜಿಸುವುದಕ್ಕೆ ಜನರಿಂದ ಆಯ್ಕೆಯಾದ ಜನಪ್ರತಿ ನಿಧಿಗಳ ಒಪ್ಪಿಗೆ ಪತ್ರ ಅಗತ್ಯ. ಯಾವುದೇ ಕಾಯಿದೆ ಪಾಸಾಗಲು ಒಂದನೇ ಮೂರು ಭಾಗದಷ್ಟು ಶಾಸಕರ ಸಂಖ್ಯಾಬಲವಿದ್ದರೂ ಸಾಕು. ಆದರೆ ಪಕ್ಷಗಳ ವಿಲೀನಕ್ಕೆ, ವಿಲೀನಗೊಳ್ಳುವ ಪಕ್ಷದ ಜನಪ್ರತಿನಿಧಿಗಳ ಸಹಿ ಕಡ್ಡಾಯವಾಗಿರಬೇಕು.

ಇದರೊಂದಿಗೆ ಪಕ್ಷದ ಅಧ್ಯಕ್ಷರಿಂದ ಅನುಮತಿ ಕಡ್ಡಾಯ. ಒಂದು ವೇಳೆ ಶಾಸಕರು ತಮ್ಮ ಪಕ್ಷವನ್ನು ವಿಲೀನಗೊಳಿಸಲು ಇಚ್ಛಿಸಿ, ಅಧ್ಯಕ್ಷರು ಕೊಕ್ಕೆ ಹಾಕಿದರೆ ಅದನ್ನು ತಿರಸ್ಕರಿಸುವ ಹಕ್ಕು ಸಭಾಧ್ಯಕ್ಷರಿಗೆ ಇರುತ್ತದೆ. ಒಂದು ವೇಳೆಗೆ ದೇವೇಗೌಡರು ತಮ್ಮ ನಂತರ ಪಕ್ಷದಲ್ಲಿರುವ ನಾಯಕತ್ವ ಕೊರತೆ ಹಾಗೂ ಅಸ್ವಿತ್ಥವನ್ನು ಕಳೆದುಕೊಳ್ಳುತ್ತಿರುವ ಈ ಸಮಯದಲ್ಲಿ ಬಿಜೆಪಿಯೊಂದಿಗೆ ಹೋಗು ವುದು ಲೇಸು ಅಂದುಕೊಂಡರೂ, ಆ ಪಕ್ಷದಲ್ಲಿರುವ ಇತರ ಶಾಸಕರು ಇದಕ್ಕೆ ಒಪ್ಪುವರೇ ಎನ್ನುವುದನ್ನು ನೋಡಬೇಕಿದೆ. ಒಕ್ಕಲಿಗ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಈಗಲೂ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದೆ.

ಆದರೆ ಬಿಜೆಪಿಯೊಂದಿಗೆ ವಿಲೀನವೆಂದರೆ ಅನೇಕರು ಈ ಭಾಗದಿಂದ ಆಯ್ಕೆಯಾಗಲು ಸಾಧ್ಯವಿಲ್ಲ ಎನ್ನುವ ಆತಂಕವಿದೆ. ಇದರೊಂದಿಗೆ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಯೊಂದಿಗೆ ಹೋದರೆ, ಭವಿಷ್ಯದಲ್ಲಿ ನಮಗೇನು ಎನ್ನುವ ಲೆಕ್ಕಾಚಾರ ದಲ್ಲಿಯೂ ಅನೇಕ ಶಾಸಕರಿದ್ದಾರೆ. ಈ ಆತಂಕಕ್ಕಾಗಿಯೇ, ಅರವಿಂದ ಲಿಂಬಾವಳಿ ಅವರು ವಿಲೀನದ ಗುಮ್ಮ ಹೊರ ಹಾಕುತ್ತಿ ದ್ದಂತೆ, ಜೆಡಿಎಸ್‌ಯ ಬಹುತೇಕ ಶಾಸಕರು‘ದೇವೇಗೌಡರು ಇರುವ ತನಕ ಇದು ಸಾಧ್ಯವಿಲ್ಲ’ ಎನ್ನುವ ಮಾತನ್ನು ಹೇಳಿದರು.

ಈ ಎಲ್ಲವನ್ನು ಮೀರಿ ವಿಲೀನಕ್ಕೆ ಜೆಡಿಎಸ್ ಮುಂದಾದರೂ ಅದಕ್ಕೆ ಬಿಜೆಪಿ ವರಿಷ್ಠರು ಒಪ್ಪಿಗೆ ನೀಡುವರೇ? ವಿಲೀನದಲ್ಲಿ ದೇವೇಗೌಡ, ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಸದಸ್ಯರಿಗೆ ನೀಡಬಹುದಾದ ‘ಸ್ಥಾನಮಾನ’ವೇನು? ಜೆಡಿಎಸ್‌ನಲ್ಲಿ ಕುಟುಂಬವೇ ರಾಜಕಾರಣ. ಆದರೆ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಎಂದಿಗೂ ಪ್ರೋತ್ಸಾಹಿಸಿಲ್ಲ. ಹೀಗಿರುವಾಗ ಒಂದೇ ಕುಟುಂಬದ ಆರೇಳು ಸದಸ್ಯರಿಗೆ ಸ್ಥಾನ ನೀಡಲು ಬಿಜೆಪಿ ತತ್ವ ಸಿದ್ಧಾಂತ ಒಪ್ಪುವುದೇ? ಹಾಗೇ ನೋಡಿದರೆ, ಜೆಡಿಎಸ್‌ಗೆ ಬಿಜೆಪಿ ಗಿಂತ ಕಾಂಗ್ರೆಸ್ ಸಖ್ಯ ಮಾಡುವುದರಿಂದ, ಸೈದ್ಧಾಂತಿಕ ವಿಚಾರದಲ್ಲಿ ಹೆಚ್ಚು ಸಮಸ್ಯೆ ಸಿಗುವುದಿಲ್ಲ.

ಆದರೆ ಮತಬ್ಯಾಂಕ್ ಲೆಕ್ಕಾಚಾರದಲ್ಲಿ ಜೆಡಿಎಸ್‌ಗೆ ಬಿಜೆಪಿಯೊಂದಿಗೆ ಹೋಗುವುದು ಲೇಸು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಹಳೇ ಮೈಸೂರು ಭಾಗದಲ್ಲಿ ತನ್ನದೇಯಾದ ಮತಬ್ಯಾಂಕ್ ಅನ್ನು ಹೊಂದಿದೆ. ಆದರೆ ಇತ್ತೀಚಿಗೆ ಜೆಡಿಎಸ್ ನಾಯಕತ್ವ ಕೊರತೆ,
ಒಳಜಗಳ, ಪಕ್ಷದ ವರಿಷ್ಠ ದೇವೇಗೌಡ ಅವರ ವಯಸ್ಸಿನ ಕಾರಣದಿಂದ ಪೂರ್ಣ ಪ್ರಮಾಣದಲ್ಲಿ ರಾಜಕೀಯ ಮಾಡಲು ಸಾಧ್ಯ ವಾಗದೇ ಇರುವುದರಿಂದ ಕೊಂಚ ವರ್ಚಸ್ಸು ಕಳೆದುಕೊಳ್ಳುತ್ತಿದೆ.

ಇದರ ನೇರ ಲಾಭ ಆರಂಭದಲ್ಲಿ ಕಾಂಗ್ರೆಸ್‌ಗೆ ಆದರೂ, ಇದೀಗ ಬಿಜೆಪಿ ವರಿಷ್ಠರು ತಮ್ಮ ದೇಯಾದ ತಂತ್ರಗಾರಿಕೆ ಮೂಲಕ ಹಳೇ ಮೈಸೂರು ಭಾಗದಲ್ಲಿಯೂ ಪಕ್ಷ ಸಂಘಟನೆಗೆ ಮುಂದಾಗಿದೆ. ಈ ಎಲ್ಲದರಿಂದ ಜೆಡಿಎಸ್‌ಗೆ ಇದೀಗ ಅಸ್ಥಿತ್ವದ ಸಮಸ್ಯೆ ಎದುರಾ ಗಿದೆ. ಆದ್ದರಿಂದಲೇ ಬಿಜೆಪಿಯೊಂದಿಗೆ ಸಖ್ಯ ಬೆಳೆಸಲು ಉತ್ಸುಕತೆ ಹೊಂದಿದೆ ಎನ್ನುವುದನ್ನು ಒಪ್ಪಲೇಬೇಕು. ಆದರೆ ಸಖ್ಯವೆಂದ ಕೂಡಲೇ, ಅದು ವಿಲೀನವೇ ಎನ್ನುವುದನ್ನು ಕಾಲವೇ ಉತ್ತರಿಸಬೇಕಿದೆ.