ಸುಪ್ತ ಸಾಗರ
rkbhadti@gmail.com
ತಂತ್ರಜ್ಞಾನದ ಹುಚ್ಚು ಓಟಕ್ಕೆ ಬಿದ್ದು ಇತ್ತೀಚೆಗೆ ಇಸ್ರೇಲ್ ರೈತರೂ ಸಹ ಬೀದಿಗೆ ಬರುತ್ತಿದ್ದಾರಂತೆ. ಯಾವುದನ್ನೇ ಅನುಕರಣೆ ಗಿಳಿಯುವಾಗ ಸ್ಥಳೀಯ ಅಗತ್ಯಕ್ಕನುಗುಣಕ್ಕೆ ತಕ್ಕಂತೆ ಸೂಕ್ತ ಮಾರ್ಗದರ್ಶಿ ಸೂತ್ರ ಬೇಕು. ಕೇವಲ ಕೃಷಿ ಉತ್ಪಾದನೆ ಹೆಚ್ಚಳವೇ ಗುರಿಯಾದರೆ ಏನಾದೀತು ಎಂಬುದನ್ನು ರಾಸಾಯನಿಕ ಆಧಾರಿತ ತಥಾ ಕಥಿತ ಹಸಿರುಕ್ರಾಂತಿ’ ಯ ಹೆಸರಲ್ಲಿ ಕಲಿತಿದ್ದೇವೆ.
ಊರು ಒಂದೇ, ಜಮೀನೂ ಒಂದೇ, ಇಡೀ ಊರಿನವರೆಲ್ಲ ದುಡಿಯುವುದೂ ಅದೇ ಜಮೀನಿನಲ್ಲಿ. ಯಾವ್ಯಾವ ಕೆಲಸಗಳು ಬರುತ್ತವೋ ಆ ಎಲ್ಲವನ್ನೂ ಎಲ್ಲರೂ ಸೇರಿ ಮಾಡಿಕೊಳ್ಳುವುದು. ಕೊನೆಯಲ್ಲಿ ಸುಗ್ಗಿಯ ಬಳಿಕ ಎಲ್ಲವನ್ನೂ ಮಾರುಕಟ್ಟೆಯಲ್ಲಿ ಕ್ರಯಿಸಿ, ಬಂದ ಆದಾಯವನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳುವುದು.
ಯಾರಿಗೂ ನಷ್ಟವಿಲ್ಲ, ಲಾಭದಲ್ಲಿ ತಾರತಮ್ಯವೂ ಇಲ್ಲ. ಹೀಗಾಗಿ ಯಾರೂ ಅಲ್ಲಿ ಕೃಷಿಯಲ್ಲಿ ಸೋಲುವುದೇ ಇಲ್ಲ. ಕೇಳಲೇ ಇಷ್ಟೊಂದು ಚೆಂದ ಇರುವಾಗ, ಅಂಥದ್ದೊಂದು ವ್ಯವಸ್ಥೆ ಜಾರಿಗೊಂಡು ಬಿಟ್ಟರೆ?! ‘ರೇ’ ಗಳ ಮಾತೇ ಇಲ್ಲ. ಇಸ್ರೇಲಿಯರು ಕೃಷಿಯಲ್ಲಿ ಗೆದ್ದು ಇಡೀ ಜಗತ್ತಿನ ಗಮನ ಸೆಳೆದಿರುವುದಕ್ಕೆ ಇದೂ ಒಂದು ಕಾರಣ. ಹೌದು, ಎಡೆ ಈಗ ಅತಿ ಹೆಚ್ಚು ಚರ್ಚೆ ಯಲ್ಲಿರುವುದು ಇಸ್ರೇಲಿನ ಕೃಷಿ ವಿಧಾನ. ಅದರಲ್ಲೂ ಎಚ್.ಡಿ. ಕುಮಾರ ಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಇಸ್ರೇಲಿ ಕೃಷಿ ಮಾದರಿ ಜಾರಿಗೆ ಸಮಿತಿಯೊಂದನ್ನೇ ರಚಿಸಿತ್ತು.
ಬಹುತೇಕ ಇಸ್ರೇಲ್‌ನ ನೀರಾವರಿ ತಾಂತ್ರಿಕತೆಯಷ್ಟೇ ಸರಕಾರಗಳ, ಆಧುನಿಕ ಕೃಷಿ ತಜ್ಞರ ಮಾತಿನ ಕೇಂದ್ರ ಬಿಂದುವಾಗುತ್ತಿದೆ. ಇಂದು ಅಲ್ಲಿನ ಕೃಷಿಯಲ್ಲೂ ಗಣನೀಯ ಬದಲಾವಣೆಗಳಾಗಿಲ್ಲವೆಂದಲ್ಲ. ಆದರೆ ಇವತ್ತು ಜಗತ್ತಿನ ಗಮನ ಸೆಳೆಯುವ ಸಾಧನೆ ಯಾಗಿದ್ದೆಲ್ಲವೂ ಇಲ್ಲಿನ ಕೃಷಿಯ ಮೂಲಭೂತ ಸಹಕಾರಿ ಬೇಸಾಯ ಕ್ರಮದಿಂದಲೇ. ಇಸ್ರೇಲ್‌ನಲ್ಲಿ ಅನೇಕ ಬಗೆಯ ಬೇಸಾಯ ಪದ್ಧತಿಗಳಿವೆ. ಆದರೆ ಮೂಲವಾಗಿ ಇದ್ದುದು ಮೊಷಾವ್ ಮತ್ತು ಕಿಬುಟ್ಜ ಎಂಬ ಎರಡು ರೀತಿಯ ಹಿಡುವಳಿ ವ್ಯವಸ್ಥೆ.
ಮೊಷಾವ್ ಎಂದರೆ ಸಣ್ಣ ಹಿಡುವಳಿದಾರರ ಒಕ್ಕೂಟ. ಎಲ್ಲರಿಗೂ ಒಂದೇ ಪ್ರಮಾಣದ ಜಮೀನಿರುತ್ತದೆ. ಆದರೆ ರೈತರು ತಂತಮ್ಮ ಪಾಲಿನ ಭೂಮಿಯಲ್ಲಿ ಪ್ರತ್ಯೇಕವಾಗಿ ಸಾಕಷ್ಟು ಶ್ರಮವಹಿಸಿ ದುಡಿಯುತ್ತಾರೆ. ಹಾಗೆಂದು ಲಾಭ ನಷ್ಟಗಳಿಗೆ ಅವರ್ಯಾರೂ ಹೊಣೆಯಲ್ಲ. ಇಡೀ ಊರಿನ ಸಹಕಾರಿ ವ್ಯವಸ್ಥೆ ಪ್ರತಿ ರೈತನಿಗೂ ಆರ್ಥಿಕ ಭದ್ರತೆ ನೀಡುತ್ತದೆ, ಉತ್ಪನ್ನಕ್ಕೆ ಮಾರುಕಟ್ಟೆಯನ್ನೂ ಒದಗಿಸುತ್ತದೆ. ಇಳುವರಿಗೆ ಮಾತ್ರ ರೈತರು ಬದ್ಧರಿರುತ್ತಾರೆ. ಹೀಗಾಗಿ ಯಾವುದೇ ಚಿಂತೆಯಿಲ್ಲದೇ, ರೈತರು ನೆಮ್ಮದಿಯಾಗಿ ತಮ್ಮನ್ನು ತಾವು ಕೃಷಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುತ್ತಾರೆ ಇನ್ನೊಂದು ಕಿಬುಟ್ಜ ವ್ಯವಸ್ಥೆ. ವಿಶಿಷ್ಟ ಸಾಮೂಹಿಕ ಹಿಡುವಳಿ ಬೇಸಾಯ ಮಾರ್ಗವಿದು. ಎಲ್ಲರೂ ಒಗ್ಗೂಡಿ, ಬಂಡವಾಳವನ್ನು ಹೂಡುತ್ತಾರೆ.
ನಂತರ ಜಮೀನಿನಲ್ಲಿ ಒಟ್ಟಾಗಿಯೇ ದುಡಿಯುತ್ತಾರೆ. ಕೊಯ್ಲು, ಇಳುವರಿ, ಆದಾಯ- ವ್ಯಯ ಎಲ್ಲಕ್ಕೂ ಸಾಮೂಹಿಕ ಹೊಣೆ ಗಾರಿಕೆ. ಜಮೀನಿನಲ್ಲಿ ದುಡಿದ ಯಾವೊಬ್ಬ ರೈತನಿಗೂ ಕೂಲಿಯಾಗಲೀ, ಬೇರೆ ಸೌಲಭ್ಯಗಳಾಗಲೀ ಇಲ್ಲ. ಆದರೆ ಗ್ರಾಮ ವ್ಯವಸ್ಥೆಯೇ ಆತನಿಗೆ ಅಗತ್ಯ ಎಲ್ಲ ಜೀವನೋಪಯೋಗಿ ಸಾಮಗ್ರಿಗಳನ್ನೂ ಒದಗಿಸುತ್ತದೆ. ಎರಡೂ ಕ್ರಮಗಳು ಇಸ್ರೇಲಿನಲ್ಲಿ ಜಾರಿಯಲ್ಲಿವೆ.
ಹೌದು ನೀರಷ್ಟೇ ಅಲ್ಲ, ನಿಸರ್ಗದ ಪ್ರತಿಯೊಂದು ಸಂಪನ್ಮೂಲವನ್ನೂ ಜಾಣ್ಮೆಯಿಂದ ಬಳಸಿ, ಸಂಪೂರ್ಣ ಸದುಪಯೋಗ ಪಡಿಸಿಕೊಂಡು ಅದನ್ನು ಆರ್ಥಿಕ ಸಂಪನ್ಮೂಲವಾಗಿ ಪರಿವರ್ತಿಸಿಕೊಳ್ಳುವ ಬೇಸಾಯ ಕ್ರಮವನ್ನು ಆಧುನಿಕ ಜಗತ್ತಿಗೆ ತೋರಿಸಿ ಕೊಟ್ಟಿದ್ದು ಇಸ್ರೇಲ್ ದೇಶವೇ. ಬಹುತೇಕ ನಮ್ಮ ಉತ್ತರ ಕರ್ನಾಟಕ ಭಾಗಕ್ಕಿಂತಲೂ ಹೀನಾಯ ಸ್ಥಿತಿಯಲ್ಲಿರುವ ಇಸ್ರೇಲ್, ಕೃಷಿಯಲ್ಲಿ ಗೆದ್ದಿದ್ದು, ಸಂಪನ್ಮೂಲಗಳ ಸದ್ಬಳಕೆ, ಸಹಕಾರಿ ಯೋಜನೆ ಹಾಗೂ ಯೋಜಿತ ಮಾರುಕಟ್ಟೆಯ ವ್ಯವಸ್ಥೆಗಳಿಂದಾ ಗಿಯೇ.
ಹೌದು, ಕೃಷಿ ಪದ್ಧತಿ, ತಂತ್ರಜ್ಞಾನ ಬಳಕೆ, ಕೃಷಿ ಉತ್ಪನ್ನಗಳ ಗುಣಮಟ್ಟ ವರ್ಧನೆ, ಅವುಗಳ ಸಂಸ್ಕರಣೆ, ಮಾರುಕಟ್ಟೆ, ಹೀಗೆ ಎಲ್ಲ ವಿಷಯದಲ್ಲೂ ಇಸ್ರೆಲ್ ಮುಂದಿದೆ. ಇಡೀ ರಾಷ್ಟ್ರದ ವಿಸ್ತೀರ್ಣವೇ ನಮ್ಮ ರಾಜ್ಯದ ಶೇ.೧೦ರಷ್ಟಿದೆ. ಆ ಪುಟ್ಟ ರಾಷ್ಟ್ರ ತನ್ನ ಒಟ್ಟು ವಿಸ್ತಿರ್ಣದ ಶೇ. ೨೦ ರಷ್ಟು ಮಾತ್ರ ಕೃಷಿಯೋಗ್ಯ ಭೂಮಿ ಹೊಂದಿರುವುದು ಎಂದರೆ ನೀವು ನಂಬಲೇಬೇಕು. ಉಳಿದ ದದ್ದೆಲ್ಲ ಮರಳುಗಾಡು. ಅಂಥದ್ದರಲ್ಲೂ ಈ ಪರಿಯ ಅಭೂತಪೂರ್ವ ಯಶಸ್ಸು ಸಾಧಿಸಿದ್ದಾದರೂ ಹೇಗೆ ? ಅಲ್ಲಿನ ರೈತರಿಗೆ ಹೊಂದಿರುವ ಜಮೀನಿನ ಪ್ರಮಾಣ ನೋಡಿದರೆ, ನಮ್ಮ ಅತ್ಯಂತ ದೊಡ್ಡ ರೈತರು. ಅಷ್ಟೂ ಸಣ್ಣ ಸಣ್ಣ ಹಿಡುವಳಿ ಅಲ್ಲಿಯದು.
ಹಾಗೆಂದು ಎಲ್ಲರೂ ಕೃಷಿಯನ್ನೇ ಅವಲಂಬಿಸಿಯೂ ಇಲ್ಲ. ಕೈಗಾರಿಕೆಯ ಪಾಲೇ ಹೆಚ್ಚಿದೆ. ಆದರೆ ಹೆಸರು ಮಾಡಿದ್ದು ಮಾತ್ರ ಕೃಷಿಯಲ್ಲಿ. ಅದಕ್ಕೆ ಕಾರಣ ಅಲ್ಲಿನ ಸಾಮುದಾಯಿಕ ಕಲ್ಪನೆಯಿಂದ. ಸಹಕಾರಿ ತತ್ತ್ವದಲ್ಲಿ ಯಾವ ಸಂದರ್ಭದಲ್ಲೂ ಖರ್ಚು ವೆಚ್ಚಗಳು ಒಬ್ಬ ರೈತನ ಮೇಲೆ ಬೀಳುವುದಿಲ್ಲ. ಅಷ್ಟರಮಟ್ಟಿಗೆ ಅಲ್ಲಿನ ರೈತ ಈ ಹೊರೆಯಿಂದ ಮುಕ್ತ. ಇದರ ಪ್ರಮುಖ ಲಾಭ ವೆಂದರೆ ಯಂತ್ರ, ತಂತ್ರಜ್ಞಾನದ ಅಳವಡಿಕೆ ಅತ್ಯಂತ ಸುಲಭ. ಹಸಿರುಮನೆ ಕೃಷಿ, ಹನಿ ನೀರಾವರಿ ಪದ್ಧತಿಗಳೆಲ್ಲವೂ ಸಾಧ್ಯ ವಾಗಿದ್ದು ಇಂಥ ಸಹಕಾರಿ ತತ್ತ್ವದಿಂದಲೇ.
ಇನ್ನೂ ಗೊತ್ತೇ?, ಇಸ್ರೆಲಿನಲ್ಲಿ ನಮ್ಮಲ್ಲಿನ ಬೆಳೆ ವೈವಿಧ್ಯ ಸಾಧ್ಯವೇ ಇಲ್ಲ. ಆದರೂ ಗೆಲ್ಲಲು ಆಗಿದ್ದು, ಆಧುನಿಕ ತಂತ್ರಜ್ಞಾನ. ಆದ್ದರಿಂದಲೇ ಅದು ಬಂಡವಾಳ ಆಧಾರಿತ ಕೃಷಿ. ಆದರೆ ಅಂಥ ಬಂಡವಾಳ ಸಾಧ್ಯವಾಗಿದ್ದು ಸಾಮೂಹಿಕ ಹೂಡಿಕೆಯಿಂದ. ಅಲ್ಲಿಗಿಂತ ಯೋಗ್ಯ ಹವಾಮಾನ, ಭೂಮಿ, ಸೌಲಭ್ಯ ಇದ್ದರೂ ನಮ್ಮಲ್ಲಿ ಅಲ್ಲಿನ ಪ್ರಗತಿ ಸಾಧ್ಯವಾಗುತ್ತಿಲ್ಲ ಅಂದರೆ ಅದಕ್ಕೆ ಕಾರಣ ನಮ್ಮಲ್ಲಿನ ಸಹಕಾರಿ ತತ್ವದ ಕೊರತೆಯಿಂದ. ಅಲ್ಲಿನ ನೀರಾವರಿಯನ್ನಷ್ಟೇ ಗಮನಿಸಿ, ಅದಕ್ಕೆ ಅಬ್ಬರದ ಪ್ರಚಾರ
ನೀಡುವ ಬದಲು, ನಮ್ಮ ರೈತರು ಕೂಡ ಸಾಮುದಾಯಿಕ ಪದ್ಧತಿಯ ಕೃಷಿಯನ್ನು ರೂಢಿಸಿಕೊಂಡರೆ ಖಂಡಿತಾ ಗೆಲುವು ಸಾಧ್ಯ.
ಗುಂಟೆಗಳ ಲೆಕ್ಕವನ್ನು ಕೈಬಿಟ್ಟು, ಎಲ್ಲರೂ ಒಗ್ಗೂಡಿ ಸಹಕಾರ ತತ್ತ್ವದಡಿ ಎಕರೆಗಟ್ಟಲೇ ಜಮೀನಿನ ಕೃಷಿ ಗಿಳಿದರೆ, ಆಧುನಿಕ ತಂತ್ರಜ್ಞಾನ ಅಳವಡಿಕೆ, ಯಾಂತ್ರಿಕ ಕೃಷಿ, ಕೂಲಿ ಕಾರ್ಮಿಕರ, ನೀರಿನ ಕೊರತೆಯಂಥ ಸಮಸ್ಯೆಗಳಿಗೆ ಪರಿಹಾರ ಎಲ್ಲವೂ
ಸಾಧ್ಯ. ‘ಪ್ರತಿ ಹನಿ-ಸಮೃದ್ಧ ತನಿ’ ಎಂಬುದು ಇಸ್ರೇಲ್‌ನ ಘೋಷವಾಕ್ಯ. ಅತ್ಯಾಧುನಿಕ ಹನಿ-ತುಂತುರು ನೀರಾವರಿ ವ್ಯವಸ್ಥೆ
ಅಳವಡಿಕೆಯಿಂದ ಅವರು ಶೇ.೪೦ ರಿಂದ ಶೇ.೬೦ ನೀರಿನ ಉಳಿತಾಯ ಸಾಧಿಸಿದ್ದಾರೆ.
ಇಸ್ರೆಲ್ನ ಮಳೆ ಪ್ರಮಾಣ ನಮಗಿಂತ ಶೇ.೧೦ ಕ್ಕಿಂತ ಕಡಿಮೆ. ವಾರ್ಷಿಕ ಅಲ್ಲಿನ ಸರಾಸರಿ ಮಳೆ ೮೦ ಸೆ. ಮೀ.ನಷ್ಟೇ. ಇವೆಲ್ಲದರ ನಡುವೆಯೂ ಅದು ಪ್ಯಾಲೆಸ್ತಿನ್ ಮತ್ತು ಜೊರ್ಡಾನ್ ನಂಥ ದೇಶಕ್ಕೆ ನೀರು ಪೂರೈಕೆ ಮಾಡುತ್ತಿದೆ. ನೀರು ಗೊಬ್ಬರ ಪೂರೈಕೆಗೆ ಅಲ್ಲಿನ ರೈತ ಯಾವತ್ತೂ ಹೊಲಕ್ಕೆ ಇಳಿದವನೇ ಅಲ್ಲ. ಎಲ್ಲವನ್ನೂ ಮನೆಯ ಕುಳಿತು ಮೊಬೈಲ್ ಮೂಲಕವೇ ನಿಗದಿತ ಸಮಯಕ್ಕೆ ಸಂದೇಶಗಳ ರವಾನೆ ಮೂಲಕ ನಿರ್ವಹಿಸುತ್ತಾನೆ. ಹಣ್ಣು-ತರಕಾರಿಯಂಥ ತೋಟಗಾರಿಕೆ ಬೆಳೆಗಳಿಗೆ ಈ ತಂತ್ರಜ್ಞಾನ ಹೇಳಿ ಮಾಡಿಸಿದಂತಿದೆ. ಮಾತ್ರವಲ್ಲ, ಕಬ್ಬಿನ ಬೆಳೆಯಲ್ಲೂ ಶೇ.೫೦ಕ್ಕೂ ಹೆಚ್ಚು ನೀರಿನ ಉಳಿತಾಯ ಆಗಲಿದೆ.
‘ಬೆಳೆಗಳಿಗೆ ನೀರು ಕಡಿಮೆ ಮಾಡಲಾಗದು. ಆದರೆ ವ್ಯರ್ಥವಾಗುವ ನೀರನ್ನು ಇದರಿಂದ ಉಳಿತಾಯ ಮಾಡಬಹುದು’ ಎನ್ನುತ್ತಾರೆ ಇಸ್ರೇಲ್ ಮಾದರಿ ಉನ್ನತ ಅಧ್ಯಯನ ಸಮಿತಿ ಸದಸ್ಯರಾಗಿದ್ದ ಹಿರಿಯ ವಿಜ್ಞಾನಿ ಡಾ.ಅಶೋಕ್ ಆಲೂರ. ಕೃಷಿ ಕೂಲಿ ಕಾರ್ಮಿಕರ ಅಭಾವ, ಅಂತರ್ಜಲದ ಕೊರತೆ ಎದುರಿಸುತ್ತಿರುವ ರಾಜ್ಯದ ರೈತರೂ ಕೂಡ, ಇದೀಗ ಸರಕಾರದ ಅಬ್ಬರದ ಪ್ರಚಾರಕ್ಕೆ ಮರುಳಾಗಿ ಇಸ್ರೇಲ್ ಮಾದರಿಯ ಮಿತವ್ಯಯ ಹಾಗೂ ಲಾಭಕರವಾದ ಆಧುನಿಕ ಕೃಷಿಯತ್ತ ಸರಿಯುತ್ತಿದ್ದಾರೆ.
ಹೀಗಾಗಿ ಸಾಂಪ್ರದಾಯಿಕ ಕೃಷಿಯ ಬದಲಿಗೆ ಕಡಿಮೆ ಖರ್ಚಿನಲ್ಲಿ ಆಧಿಕ ಲಾಭ ತರುವ ಬೆಳೆಗಳು ಅವರನ್ನು ಆಕರ್ಷಿಸಲು ಆರಂಭಿಸಿವೆ. ಅದಕ್ಕೆ ಪೂರಕವಾದ ಸುಲಭ, ಸರಳ ಬೇಸಾಯ ಪದ್ಧತಿಯನ್ನೂ ಅವರೀಗ ಅನುಸರಿಸುತ್ತಿದ್ದಾರೆ. ಇದರಿಂದ ಸಮಯ, ಹಣ ಉಳಿತಾಯವಾಗುವುದಲ್ಲದೆ ಹೆಚ್ಚು ಕೂಲಿಕಾರರ ಅಗತ್ಯವಿರುವುದಿಲ್ಲ. ಪ್ರತಿ ಸಸಿಗೂ ಗೊಬ್ಬರ ಹಾಕುವ ಪ್ರಮೇಯವಿಲ್ಲ, ಲಾಭವೂ ಅಧಿಕ. ಆರಂಭದಲ್ಲಿ ಸ್ವಲ್ಪ ಹೆಚ್ಚೆನಿಸುವ ಬಂಡವಾಳ ಹೂಡಬೇಕಷ್ಟೆ ಎಂಬ ನಿಲುವಿಗೆ ಬರುತ್ತಿದ್ದಾರೆ. ತಪ್ಪೇನಿಲ್ಲ, ಆಧುನಿಕ ಕೃಷಿ ಪದ್ಧತಿಗೆ ವಿಭಿನ್ನ ಆಯಾಮ ನೀಡಿದ ಇಸ್ರೇಲ್ ದೇಶದ ಮಾದರಿ ನಮ್ಮಲ್ಲಿಗೂ ಬರಲಿ.
ಕಾರ್ಮಿಕರ ಕೊರತೆಯಂಥ ತೊಂದರೆಯಿಂದ ತಪ್ಪಿಸಿಕೊಳ್ಳಲು ಈ ಪದ್ಧತಿ ಬಹಳ ಅನುಕೂಲಕರ. ಇಸ್ರೇಲ್ ಮಾದರಿಯಲ್ಲಿ ಬೆಳೆ ತೆಗೆಯುವುದು ಸುಲಭವೂ ಹೌದು. ಜತೆಗೆ ಹನಿ ನೀರಾವರಿ ಅಳವಡಿಕೆಯೂ ಮೂಲಕ ಆಗುತ್ತಿದೆ. ರಾಸಾಯನಿಕ ಗೊಬ್ಬರವನ್ನು ಕೂಡ ಹನಿ ನೀರಾವರಿಯ ಮಿಶ್ರಣ ಮಾಡಿ ಹಾಯಿಸಲಾಗುತ್ತದೆ. ಇದರಿಂದ ಹಣ, ಸಮಯ, ನೀರು ಎಲ್ಲವೂ ಉಳಿತಾಯ ವಾಗುತ್ತಿದೆ.
ದಶಕಗಳ ಹಿಂದೆ ಬೇಸಾಯಕ್ಕೆ ಕೂಲಿ ಕಾರ್ಮಿಕರ ಕೊರತೆ ಇರಲಿಲ್ಲ. ಆದರೆ ಕೈಗಾರಿಕೆ ಪ್ರದೇಶಗಳು ಬೆಳೆದಂತೆಲ್ಲ, ಉದ್ಯೋಗ ಖಾತ್ರಿಯಂಥ ಸರಕಾರಿ ಯೋಜನೆಗಳು ಜಾರಿಗೊಂಡ ನಂತರ ಕೃಷಿ ಕೂಲಿಗೆ ಬರುತ್ತಿದ್ದವರು ಅತ್ತಲೇ ಮುಖ ಮಾಡಿದ್ದಾರೆ. ಜತೆಗೆ ರಾಜ್ಯಾದ್ಯಂತ ರಿಯಲ್ ಎಸ್ಟೇಟ್ ಉದ್ಯಮ ಪ್ರಬಲವಾಗಿ ಬೆಳೆಯುತ್ತಿದೆ. ಯುವಕರು ನಗರಗಳತ್ತ ಆಕರ್ಷಿತರಾಗಿದ್ದಾರೆ. ಹೀಗಾಗಿ ಹಳ್ಳಿಗಳಲ್ಲಿನ ಕೃಷಿ ಜಮೀನೆಲ್ಲ ಬಡಾವಣೆಗಳಾಗುತ್ತಿವೆ. ಬಹುತೇಕರು ತಮ್ಮಲ್ಲಿದ್ದ ಕೃಷಿ ಭೂಮಿಯನ್ನು ಮಾರಾಟ ಮಾಡಿ ಉದ್ಯೋಗಕ್ಕೆ ಸೇರಿಕೊಂಡರೆ, ಉಳಿವರು ರಿಯಲ್ ಎಸ್ಟೇಟ್ನಲ್ಲಿ ತೊಡಗಿಸಿಕೊಂಡಿದ್ದಾರೆ.
ಹಾಗಾಗಿ ಕೃಷಿ ಅಳಿವಿನಂಚು ತಲುಪಿದೆ. ಇಂಥ ಸನ್ನಿವೇಶದಲ್ಲಿ ಇಸ್ರೇಲ್ ನಂಥ ಕೃಷಿಯಲ್ಲಿ ಗೆದ್ದಿರುವ ಮಾದರಿ ಅಳವಡಿಕೆ ಖಂಡಿತಾ ಸ್ವಾಗತಾರ್ಹವೇ. ಆದರೆ ನಿಜಕ್ಕೂ ಯಥಾವತ್ ಇಸ್ರೇಲ್ ಮಾದರಿ ಅನುಸರಣೆ ನಮಗೆ ಅನುಕೂಲಕರವೇ? ಯೋಚಿಸ ಬೇಕಾದ್ದು ಇಲ್ಲಿ. ಕೂಲಿ ಕಾರ್ಮಿಕರ ಅಭಾವದಿಂದ ಬೇಸತ್ತು ಕೃಷಿಯೇ ಬೇಡ ಎನ್ನುವಂತಾಗಿತ್ತು. ಕಡೆಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗ ದರ್ಶನದಂತೆ ಇಸ್ರೇಲ್ ಮಾದರಿಯ ಆಧುನಿಕ ಕೃಷಿ ಆರಂಭಿಸಿದ್ದೇವೆ. ಇದರಿಂದ ನಿರ್ವ ಹಣೆಯೂ ಸುಲಭ.
ಕಾರ್ಮಿಕರ ಅವಲಂಬನೆ ಕಡಿಮೆಯಾಗಿದೆ. ಇದು ಎಲ್ಲರಿಗೂ ಅನುಕೂಲಕರ. ಆದರೆ ಸುದೀರ್ಘ ಅವಧಿಯಲ್ಲಿ ಇದರ ಪರಿಣಾಮಗಳ ಬಗ್ಗೆ ಯೋಚಿಸಬೇಕು’ ಎನ್ನುತ್ತಾರೆ ಆನೇಕಲ್ ಭಾಗದ ಪ್ರಗತಿಪರ ರೈತ ಎಂ. ಬಾಬು. ಒಮ್ಮೊಮ್ಮೆ ನಾವು ಬೆಳೆಯುವ ಬೆಳೆಯಿಂದ ಬರುವ ಲಾಭಕ್ಕಿಂತ ಕೃಷಿ ಕಾರ್ಮಿಕರಿಗೆ ನೀಡುವ ಕೂಲಿಯೇ ಜಾಸ್ತಿಯಾಗಿರುತ್ತದೆ. ಈ ದೃಷ್ಟಿಯಿಂದ ಪರ್ಯಾಯವಾಗಿ ಇಸ್ರೇಲ್ ವಿಧಾನಗಳನ್ನು ಕಂಡುಕೊಂಡಿದ್ದೇವೆ. ಆದರೆ ಅಲ್ಲಿನಂತೆ ಸಂಪೂರ್ಣ ಯಾಂತ್ರಿಕ ಕೃಷಿಗೆ ಹೋಗುವಷ್ಟು ಆರ್ಥಿಕ ಚೈತನ್ಯ ನಮ್ಮಲ್ಲಿಲ್ಲ’ ಎಂಬುದು ರೈತ ಮಂಜುನಾಥ್ ಅಭಿಮತ.
ಈ ಹಿನ್ನೆಲೆಯಲ್ಲಿ ಇಸ್ರೇಲ್ ಮಾದರಿ ಎಂಬುದು ಕೇವಲ ಪ್ರಚಾರದ ಮತ್ತೊಂದು ತಂತ್ರವಾಗದೇ ನೈಜವಾಗಿ ನಾವು ಅನುಸರಿಸ ಬೇಕಾದ್ದು ಏನೆಂಬುದರ ಬಗ್ಗೆ ಸೂಕ್ತ ಅಧ್ಯಯನ ಅಗತ್ಯ. ಸಾಲ-ಸಬ್ಸಿಡಿಗಳ ಆಮಿಷಗಳೇ ನಮ್ಮ ಸರಕಾರಗಳ ಗುರಿಯಾಗುವ ಬದಲು, ಸರಿಯಾದ ಮಾರುಕಟ್ಟೆಯ ಬೆಂಬಲ, ಬೆಲೆ ನೀತಿ ಇಲ್ಲದೆ, ತಂತ್ರಜ್ಞಾನವನ್ನು ಆಮದು ಮಾಡಿ ಕೊಂಡು ಅಗ್ಗದ ಪ್ರಚಾರಕ್ಕೆ ಹಂಬಲಿಸುವ ಬದಲು, ನಮ್ಮ ನೆಲದಲ್ಲಿ ಎಂದೋ ಬೆಳೆದು ಹೆಮ್ಮರವಾಗಿರುವ ಸಹಕಾರಿ ರಂಗವನ್ನು ಮೂಲಭೂತ ಕೃಷಿಗೂ ಅಳವಡಿಸಿಕೊಂಡಾಗ ಮಾತ್ರ ಅಳಿವಿನಂಚಿನಲ್ಲಿರುವ ಬೇಸಾಯವನ್ನು ಉಳಿಸಿಕೊಳ್ಳಲು ಸಾಧ್ಯ. ಆ ವಿಚಾರದಲ್ಲಿ ಇಸ್ರೇಲ್ ಮಾದರಿಯಾಗಬೇಕು.
ಸಾಲ ಮಾಡುವುದೊಂದೇ ಬದುಕಿನ ಗುರಿ ಎಂದುಕೊಂಡಿರುವ ರೈತ, ಸ್ವಾವಲಂಬಿಯಾಗಲೂ ಚಿಂತಿಸಿ, ಹೊಲಕ್ಕಿಳಿಯ ಬೇಕು. ಈಗಾಗಲೇ ಥಾಯ್ಲೆಂಡ್‌ನ ಮೆಜೋ ಗ್ರಾಮದಲ್ಲಿ ಜಾನ್ ಜಾನ್ಡಾಯ್ ಸಾಮುದಾಯಿಕ ಕೃಷಿ ಪರಿಕಲ್ಪನೆಯನ್ನು ಜಾರಿಗೊಳಿಸಿ ಯಶಸ್ವಿಯಾಗಿದ್ದಾರೆ. ಯಾವುದೇ ಇರಲಿ, ಸಾಕಷ್ಟು ಸಿದ್ಧತೆ ಅಗತ್ಯ. ಮಾತ್ರವಲ್ಲ ಯಥಾವತ್ ಅಲ್ಲಿನದನ್ನೇ ಭಟ್ಟಿ ಇಳಿಸುವ ಬದಲು, ಒಳಿತನ್ನಷ್ಟೇ ಆಯ್ದು ತರುವುದು, ಅನುಸರಿಸುವುದು ಜಾಣತನ. ಇಲ್ಲದಿದ್ದರೆ ಎಡುವುವುದು ತಪ್ಪಿದ್ದಲ್ಲ. ಏಕೆಂದರೆ ತಂತ್ರಜ್ಞಾನದ ಹುಚ್ಚು ಓಟಕ್ಕೆ ಬಿದ್ದು ಇತ್ತೀಚೆಗೆ ಇಸ್ರೇಲ್ ರೈತರೂ ಸಹ ಬೀದಿಗೆ ಬರುತ್ತಿದ್ದಾರಂತೆ.
ಯಾವುದನ್ನೇ ಅನುಕರಣೆಗಿಳಿಯುವಾಗ ಸ್ಥಳೀಯ ಅಗತ್ಯಕ್ಕನುಗುಣಕ್ಕೆ ತಕ್ಕಂತೆ ಸೂಕ್ತ ಮಾರ್ಗದರ್ಶಿ ಸೂತ್ರ ಬೇಕು. ಕೇವಲ ಕೃಷಿ ಉತ್ಪಾದನೆ ಹೆಚ್ಚಳವೇ ಗುರಿಯಾದರೆ ಏನಾದೀತು ಎಂಬುದನ್ನು ರಾಸಾಯನಿಕ ಆಧಾರಿತ ತಥಾ ಕಥಿತ ಹಸಿರುಕ್ರಾಂತಿ’ ಯ ಹೆಸರಲ್ಲಿ ಕಲಿತಿದ್ದೇವೆ. ಮತ್ತೊಮ್ಮೆ ಅಂಥಾ ಅಪಸವ್ಯಗಳು ಆಗದಿರಲಿ. ಏಕೆಂದರೆ ಇಂದಿನ ಸ್ಥಿತಿಯಲ್ಲಿ ನಮ್ಮ ರೈತರು ತೀರಾ ಸಂಕಷ್ಟ, ಸಂದಿಗ್ಧದಲ್ಲಿದ್ದಾರೆ. ಬಹುತೇಕರು ಕೃಷಿಯನ್ನೇ ತೊರೆಯುವ ಸನ್ನಾಹದಲ್ಲಿದ್ದಾರೆ. ಇಂಥ ಸನ್ನಿವೇಶದಲ್ಲಿ ತಂತ್ರಜ್ಞಾನ ಗಳು ಹೇರಿಕೆಯಾಗಬಾರದು.
ಒಂದೊಮ್ಮೆ ನೈಜ ಕಾಳಜಿಯಿಂದ ತಂತ್ರಜ್ಞಾನ ಜಾರಿಗೊಳಿಸುವುದೇ ಆದರೆ ಅದರ ಖರ್ಚುವೆಚ್ಚಗಳ ಹೊಣೆಯನ್ನೂ
ಸರಕಾರವೇ ಭರಿಸಬೇಕು. ಸಬ್ಸಿಡಿ, ಸಾಲ ಮನ್ನಾ ನಾಟಕಕ್ಕಿಂತ ಇಂಥಾ ಇಚ್ಛಾಶಕ್ತಿಯನ್ನು ನಮ್ಮ ನಾಯಕರು ಪ್ರದರ್ಶಿಸಲಿ.
ಮಾತ್ರವಲ್ಲ ನಿಜಕ್ಕೂ ಇಸ್ರೆಲ್ ಮಾದರಿಯನ್ನು ಅನುಸರಿಸಲು ಮುಂದಾಗುವುದೇ ಆದರೆ, ಅಲ್ಲಿನ ಸಹಕಾರಿ ತತ್ತ್ವವನ್ನು
ಅಭ್ಯಸಿಸಲಿ. ಹಾಗಾದರೆ ಮಾತ್ರವೇ ಇಸ್ರೆಲ್ ಮಾದರಿ ಸೂಕ್ತವಾದೀತು. ಅದಿಲ್ಲದಿದ್ದರೆ ರೈತರನ್ನು ಅವರ ಪಾಡಿಗೆ ಬಿಟ್ಟು ಬಿಡಲಿ. ಸ್ಥಳೀಯ ರೈತರಿಗೆ ಸರಕಾರಿ ತಜ್ಞರಿಗಿಂತಲೂ ಚೆನ್ನಾಗಿ ಗೊತ್ತು, ತಾವು ಏನು ಮಾಡಿದರೆ ನೆಮ್ಮದಿ ಗಳಿಸಿಯೇವು ಎಂಬುದು.
ಅಷ್ಟೂ ಕಾಳಜಿ ಇದ್ದರೆ ಸರಕಾರ, ಬಹುರಾಷ್ಟ್ರೀಯ ಕಂಪನಿಗಳ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ದೇಸಿ ಕೃಷಿಯಿಂದ
ನಿವಾರಸಲಿ. ಉತ್ಪನ್ನಗಳ ಬೆಳೆ/ಬೆಲೆ ನೀತಿ ರೂಪಿಸಲು ಯೋಚಿಸಲಿ. ಇದೇ ನಮ್ಮ ರೈತರನ್ನು ಸಾಲದ ಶೂಲಕ್ಕೇರಿಸುತ್ತಿದೆ ಯಲ್ಲದೇ, ಮಣ್ಣನ್ನೂ ಕೊಲ್ಲುತ್ತಿದೆ. ಕಾಡು ಕೃಷಿ, ಸಹಜ ಬೇಸಾಯ, ಸಹಕಾರಿ ಬದುಕೇ ಭಾರತೀಯ ಕೃಷಿಯ ಹೆಗ್ಗಳಿಕೆ ಮತ್ತು ಶ್ರೀಮಂತಿಕೆ. ಮಳೆ ಆಧಾರಿತ ಬಹುತೇಕ ನಮ್ಮ ಕೃಷಿಯಲ್ಲಿ ಲಾಭಕ್ಕಿಂತ ಸುಸ್ಥಿರತೆ ಸಾಧನೆಯಾಗಬೇಕಿದೆ. ಅದು ಬಿಟ್ಟು ಸಾಕಷ್ಟು ಮುಂದಾಲೋಚನೆ, ಮುನ್ನೆಚ್ಚರಿಕೆ ಕ್ರಮಗಳಿಲ್ಲದೇ ಅಂಧಾನುಕರಣೆಗೆ ಮುಂದಾದರೆ ಅನಾಹುತ್ವೇ ಹೆಚ್ಚು.
ಏಕೆಂದರೆ ಶಿಸ್ತು, ತ್ಯಾಜ್ಯ ಮರುಬಳಕೆಗಳನ್ನು ನಮ್ಮ ಹಳ್ಳಿಗಳು ಮರೆತು ಎಷ್ಟೋ ಕಾಲವಾಗಿದೆ. ಅಶಕ್ತ ರೈತರ ನೆರವಿನ ಹೆಸರಲ್ಲಿ ಮತ್ತಷ್ಟು ಅವರನ್ನು ಕಂದರಕ್ಕೆ ನೂಕುವ ಬದಲು, ಶಾಶ್ವತವಾಗಿ ಆತನ ಬದುಕನ್ನು ಸುಸ್ಥಿರವಾಗಿಸುವ ಯೋಜನೆಗಳನ್ನು ನಾವು ರೂಪಿಸಬೇಕಿದೆ.