Friday, 20th September 2024

ಶ್ರೀಮಂತರ ಮನೆ ನಾಯಿಯಾಗಿ ಹುಟ್ಟಲೂ ಪುಣ್ಯ ಮಾಡಿರಬೇಕು !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ನಾಯಿ ವಿಷಯದಲ್ಲಿ ಕೆಲವರ ಪ್ರೀತಿಗೆ ಎಯೇ ಇಲ್ಲ. ಅವರು ಮನುಷ್ಯರಿಗಿಂತ ತಮ್ಮ ನಾಯಿಯನ್ನು ಜಾಸ್ತಿ ಪ್ರೀತಿಮಾಡುತ್ತಾರೆ. ನಾಯಿಗಾಗಿ ಯಾವ ತ್ಯಾಗಕ್ಕಾ ದರೂ ಸಿದ್ಧರಿರುತ್ತಾರೆ. ಮೂರು ವರ್ಷಗಳ ಹಿಂದೆ, ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಗಿತ್ತು. ತನ್ನ ನಾಯಿಯನ್ನು ಬಿಟ್ಟು, ವಿದೇಶಕ್ಕೆ ವ್ಯಾಸಂಗಕ್ಕೆ ಹೋದ ಬೆಂಗಳೂರಿನ ಯುವಕನಿಗೆ, ಹದಿನೈದು ದಿನ ಸಹ ಅಲ್ಲಿರಲಾಗದೇ ಮರಳಿ ಸ್ವದೇಶಕ್ಕೆ ಬಂದಕತೆಯದು.

ಪ್ರತಿದಿನ ವಿಡಿಯೊ ಕಾಲ್ ಮಾಡಿ ನಾಯಿಯನ್ನು ನೋಡದಿದ್ದರೆ ಯುವಕನಿಗೆ ಸಮಾಧಾನವಿಲ್ಲ. ಆತ ವಿದೇಶಕ್ಕೆ ಹೋದಂದಿನಿಂದ ನಾಯಿ, ಆಹಾರ ತ್ಯಜಿಸಿತ್ತು. ಯುವಕನ ತಂದೆ -ತಾಯಿ, ವಿದೇಶದಲ್ಲಿದ್ದ ತಮ್ಮ ಮಗನ ಜತೆ ವಿಡಿಯೊ ಕಾಲ್ ಮಾಡಿ ನಾಯಿಯೊಂದಿಗೆ ಮಾತಾಡಿಸುತ್ತಿದ್ದರು. ಇದರಿಂದ ನಾಯಿ ಸಮಾಧಾನ ವಾಗುವ ಬದಲು ಮತ್ತಷ್ಟು ರೋದಿಸಲಾರಂಭಿಸಿತು. ಮನೆಯಲ್ಲಿ ಇಡೀ ದಿನ ನಾಯಿಯ ಅಳು, ರೋದನವನ್ನು ಕೇಳಿ ಮನೆ-ಮಂದಿಯೆ ರೋಸಿ ಹೋದರು. ಶ್ವಾನ ಪರಿಹಾರ ಕೇಂದ್ರ ಅಥವಾ ಡಾಗ್ ಕೇರ್ ಸೆಂಟರಿನಲ್ಲಿ ನಾಯಿಯನ್ನು ಬಿಡಲು ನಿರ್ಧರಿಸಿದರು.

ಆದರೆ ಇದು ವಿದೇಶದಲ್ಲಿರುವ ಮಗನಿಗೆ ಇಷ್ಟವಿರಲಿಲ್ಲ. ಒಂದು ವಾರ ಆಹಾರ ಬಿಟ್ಟಿದ್ದರಿಂದ, ನಾಯಿ ನಿತ್ರಾಣ ವಾಗಿತ್ತು. ನಾಯಿಯ ವೈದ್ಯರನ್ನು ಕರೆಯಿಸಿದರು. ನಿಮ್ಮ ಮಗ ವಿದೇಶದಿಂದ ವಾಪಸ್ ಬರಬೇಕು, ಇಲ್ಲವೇ ಈ ನಾಯಿಯನ್ನುನಿಮ್ಮ ಮಗ ಇದ್ದಲ್ಲಿಗೆ ಕಳಿಸಬೇಕು. ಇದು ಬಿಟ್ಟು ಬೇರೆ ದಾರಿಯಿಲ್ಲ. ನಿಮ್ಮ ಮಗ ವಿದೇಶಕ್ಕೆ ಹೋಗಿ ಹದಿನೈದುದಿನವಾದರೂ, ಈ ನಾಯಿ ಅಗಲಿಕೆಯ ನೋವನ್ನು ಮರೆಯುತ್ತಿಲ್ಲ. ಇನ್ನೂ ತಡ ಮಾಡಿದರೆ, ಅದರ ಪ್ರಾಣಕ್ಕೆಸಂಚಕಾರವಾಗಲಿದೆ’ ಎಂದು ವೈದ್ಯರು ಹೇಳಿದರು.

ದಿನವಿಡೀ ನಾಯಿ ಮುಖ ಮೇಲೆ ಮಾಡಿ ಜೋರಾಗಿ ಅಳುತ್ತಿತ್ತು. ಅಲ್ಲಿ ವಿದೇಶದಲ್ಲಿ, ಆ ಯುವಕನ ಸ್ಥಿತಿಯೂ ಭಿನ್ನವಾಗಿರಲಿಲ್ಲ. ಆತ ಕ್ಷಣಕ್ಷಣಕ್ಕೆ ಮನೆಗೆ ವಿಡಿಯೊ ಕಾಲ್ ಮಾಡಿ, ನಾಯಿ ಆರೋಗ್ಯ ವಿಚಾರಿಸುತ್ತಿದ್ದ. ಒಟ್ಟಾರೆ ಯಾರಿಗೂ ಸಮಾಧಾನವಿಲ್ಲ. ನಾಯಿಗಾಗಿ ತಾನು ವಿದೇಶಿ ವ್ಯಾಸಂಗ ತ್ಯಜಿಸುವುದಾಗಿ ಯುವಕ ಹೇಳಿದ. ಮನೆಯಲ್ಲಿ ತಂದೆ-ತಾಯಿ ಚಿಂತಾಕ್ರಾಂತರಾದರು. ಆದರೆ ಶ್ವಾನ ಪ್ರಿಯರಾದ ಅವರಿಗೆ ಪರಿಸ್ಥಿತಿಯ ತೀವ್ರತೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನೂ ಆಗಿರಲಿಲ್ಲ. ಆದರೆ ವಿದೇಶ ವ್ಯಾಸಂಗಕ್ಕೆ ಫೀಸು, ಪ್ರಯಾಣ ವೆಚ್ಚವೆಂದು ಸಾಕಷ್ಟು ಹಣ ಕೈಬಿಟ್ಟು ಹೋಗಿತ್ತು. ಅದಕ್ಕಿಂತ ಹೆಚ್ಚಾಗಿ ಮಗನ ಭವಿಷ್ಯದ ಪ್ರಶ್ನೆ ಅವರನ್ನು ಬಾಧಿಸಿತು. ಆದರೆ ಈ ಕಾರಣದಿಂದ ಕರುಳ ಕುಡಿಯಂತೆ ಸಾಕಿದ ನಾಯಿಯೇನಾದರೂ ಸತ್ತು ಹೋದರೆ, ಆ ನೋವು ಶಾಶ್ವತವಾಗಿ ತಮ್ಮನ್ನು ಕಾಡಬಹುದು ಎಂದು ಅವರಿಗೆ ಅನಿಸಿತು. ನಾಯಿಯನ್ನು ಮಗ ಇದ್ದಲ್ಲಿಗೆ ಕಳಿಸುವುದು ಸಾಧ್ಯವಿರಲಿಲ್ಲ. ಅಲ್ಲಿ ಅದನ್ನು ನೋಡಿಕೊಳ್ಳುವವರು ಯಾರು? ಈ ಎಲ್ಲಾ ಸಂಗತಿಗಳನ್ನು ಪರಿಶೀಲಿಸಿ, ಕೊನೆಗೆ ಮಗನನ್ನೇ ವಾಪಸ್ ಕರೆಯಿಸಲು ನಿರ್ಧರಿಸಿದರು.

ಅವರ ಮಗನಿಗೂ ಅದೇ ಬೇಕಾಗಿತ್ತು. ಕಾರಣ ಆತನಿಗೆ ತನ್ನ ನಾಯಿಯನ್ನು ಬಿಟ್ಟು ಅಲ್ಲಿರುವುದು ಸಾಧ್ಯವೇ ಇರಲಿಲ್ಲ. ತನ್ನನ್ನು ಅಷ್ಟೊಂದು ಇಷ್ಟಪಡುವ ನಾಯಿಯ ಮುಂದೆ, ಈ ವಿದೇಶ ವ್ಯಾಸಂಗ ಯಾರಿಗೆ ಬೇಕು ಎಂದು ಆತ ಸ್ವದೇಶಕ್ಕೆ ಮರಳಲು ನಿರ್ಧರಿಸಿದ. ಅದಾಗಿ ಐದು ದಿನಗಳಲ್ಲಿ ಆತ ಬೆಂಗಳೂರಿನಲ್ಲಿದ್ದ!
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆ ಯುವಕ ಬರುತ್ತಿದ್ದಂತೆ, ಆ ನಾಯಿ ಅವನನ್ನು ಪ್ರೀತಿ ಮಾಡಿ, ಖುಷಿಯಿಂದ ರೋದಿಸಿದ ಪರಿಗೆ ಅಲ್ಲಿ ಸುತ್ತಲೂ ನೆರೆದವರ ಮನಸ್ಸು ಆರ್ದ್ರವಾಗಿತ್ತು.

ನಿನ್ನೆ ಶನಿವಾರ ನಾನು ಪತ್ರಿಕೆಯನ್ನು ಓದುತ್ತಿದ್ದಾಗ, ಒಂದು ಸುದ್ದಿ ನನ್ನ ಗಮನ ಸೆಳೆಯಿತು. ತನ್ನ ನಾಯಿಯನ್ನು ಮುಂಬೈಯಿಂದ ಚೆನ್ನೈಗೆ ಕರೆದುಕೊಂಡು ಹೋಗಲು, ಏರ್ ಇಂಡಿಯಾ ವಿಮಾನದಲ್ಲಿ ಬಿಸಿನೆಸ್ ಕ್ಲಾಸಿನಲ್ಲಿದ್ದ ಹನ್ನೆರಡು ಸೀಟುಗಳನ್ನು (ಒಂದು ಸೀಟಿಗೆ ತಲಾ ಇಪ್ಪತ್ತು ಸಾವಿರದಂತೆ, ಎರಡೂವರೆ ಲಕ್ಷ ರು.) ಬುಕ್ ಮಾಡಿದ್ದ. ಬೇರೆ ಪ್ರಯಾಣಿಕರಿದ್ದರೆ, ಅವರಿಗೆ ತೊಂದರೆ ಅಥವಾ ಕಿರಿಕಿರಿಯಾಗಬಹುದೆಂದು ಆತ ಬಿಜಿನೆಸ್ ಕ್ಲಾಸಿನ ಎಲ್ಲಾ ಸೀಟುಗಳನ್ನು ಕಾಯ್ದಿ ರಿಸಿದ್ದ. ಅದಕ್ಕಾಗಿ ಎರಡೂವರೆ ಲಕ್ಷ ರು. ಖರ್ಚು ಮಾಡಲು ಆತ ಹಿಂದೇಟು ಹಾಕಿರಲಿಲ್ಲ.

ವಿಮಾನದಲ್ಲಿ ಸಾಕು ನಾಯಿ ಪ್ರಯಾಣಿಸುವುದು ಹೊಸತೇನೂ ಅಲ್ಲ. ಆದರೆ ಒಂದು ನಾಯಿಗಾಗಿ, ಇಡೀ ಬಿಜಿನೆಸ್ ಕ್ಲಾಸಿನ ಸೀಟುಗಳೆಲ್ಲವನ್ನೂ ಕಾಯ್ದಿರಿಸಿದ್ದು ಮಾತ್ರ ಮೊದಲ ಸಲ. ಸಾಕುನಾಯಿಯನ್ನು ಪ್ರಯಾಣಿಕರೊಂದಿಗೆ ಕರೆದುಕೊಂಡು ಹೋಗುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಮೂಲತಃ ಅದು ತರಬೇತಿ ಪಡೆದ ನಾಯಿಯಾಗಿರಬೇಕು, ಬೇರೆಯವರಿಗೆ ಕಚ್ಚಲು ಅವಕಾಶವಾಗದಿರಲು ಅದರ ಮೂತಿಗೆ ಗಾಳಿಯಾಡಲು ಅವಕಾಶವಿರುವ ಚೀಲವನ್ನು ಕಟ್ಟಿರಬೇಕು. ಇಷ್ಟಾಗಿಯೂ, ಆ ನಾಯಿಯನ್ನು ಒಯ್ಯಲು ಪೈಲಟ್‌ಗೆ ಮನವರಿಕೆಯಾಗಬೇಕು.

ಕೆಲವು ವರ್ಷಗಳ ಹಿಂದೆ, ನಾಯಿಯನ್ನು ಜತೆಯಲ್ಲಿ ಒಯ್ಯಲು ಇತರ ಪ್ರಯಾಣಿಕರು ವಿರೋಧಿಸಿದಾಗ, ಅದನ್ನು ಪ್ರಯಾಣಿಕರ ಕೆಳಗಿರುವ ಕಾರ್ಗೋ ವಿಭಾಗದಲ್ಲಿ ಸಾಗಿಸಲು ಅನುಮತಿ ನೀಡಿದಾಗ, ಅದು ಉಸಿರುಗಟ್ಟಿ ಸತ್ತು ಹೋಗಿತ್ತು. ಅಂದಿನಿಂದ ನಾಯಿಯನ್ನು ಕಾರ್ಗೋ ವಿಭಾಗದಲ್ಲಿ ಕರೆದೊಯ್ಯಲು ಕೆಲವರು ಒಪ್ಪುವು ದಿಲ್ಲ. ಡೊಮೆಸ್ಟಿಕ್ ಸಂಚಾರದಲ್ಲಿ ಪ್ಯಾಸೆಂಜರ್ ಕ್ಯಾಬಿನ್‌ನಲ್ಲಿ ಸಾಕುನಾಯಿಯನ್ನು ಕರೆದೊಯ್ಯಲು ಎಲ್ಲಾ ಏರ್ ಲೈನ್‌ಗಳೂ ಅನುಮತಿ ನೀಡುವುದಿಲ್ಲ. ಏರ್ ಇಂಡಿಯಾ ಮಾತ್ರ ಅನುಮತಿ ನೀಡುತ್ತಿದೆ. ಸಾಮಾನ್ಯವಾಗಿ ಒಂದು ವಿಮಾನದಲ್ಲಿ ಎರಡು ನಾಯಿ ಮತ್ತು ಅದರ ಜತೆಗಾರರಿಗೆ ಹಿಂದಿನ ಸಾಲಿನಲ್ಲಿ ಆಸನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಈ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ನಾಯಿಗಳು ವಿಮಾನದಲ್ಲಿ ಪ್ರಯಾಣ ಮಾಡಿವೆ.

ಆದರೂ ಮುಂಬೈಯಿಂದ ಚೆನ್ನೈಗೆ ಎರಡೂವರೆ ಲಕ್ಷ ರು. ತೆತ್ತು ತನ್ನ ನಾಯಿಯನ್ನು ಕರೆದುಕೊಂಡು ಹೋದ ಮಾಲೀಕನ ಶ್ವಾನ ಪ್ರೇಮವನ್ನು ಮೆಚ್ಚಲೇಬೇಕು. ಬಡ ಮನುಷ್ಯನಾಗಿ ಇರುವುದಕ್ಕಿಂತ, ಶ್ರೀಮಂತರ ಮನೆಯ ನಾಯಿಯಾಗಿರುವುದು ಲೇಸು’ ಎಂಬ ಮಾತು, ಇಂಥವರನ್ನು ನೋಡಿಯೇ ಹೇಳುವುದು.

ಎಲ್ಲಿ ನಗಬೇಕು, ನಗಬಾರದು ?

ಮನುಷ್ಯನಾದವನು ಸದಾ ಖುಷಿಯಿಂದ ಇರಬೇಕು, ಯಾವತ್ತೂ ನಗುತ್ತಿರಬೇಕು’ ಎಂದು ಹೇಳುವುದನ್ನು ಕೇಳಿರಬಹುದು. ಏನಯ್ಯಾ, ಸ್ವಲ್ಪ ನಗು, ನಕ್ಕರೆ ನಿನ್ನ ಗಂಟು ಕರಗುವುದಿಲ್ಲ’ ಎಂದು ಸದಾ ಮುಖಗಂಟಿಕ್ಕಿಕೊಂಡಿರುವವರನ್ನು ನೋಡಿ ಹೇಳುವುದುಂಟು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಂತೂ ನಕ್ಕಿದ್ದು ಕಡಿಮೆಯೇ. ಅವರು ಸಂತಸದಲ್ಲಿ ದ್ದಾಗಲೂ ಗಂಭೀರವಾದನರಾಗಿಯೇ ಇರುತ್ತಾರೆ. ಅವರು ಖುಷಿಯಲ್ಲಿದ್ದಾರಾ, ಬೇಸರದಲ್ಲಿದ್ದಾರಾ ಎಂಬುದನ್ನು ಹೇಳುವುದು ಕಷ್ಟ. ಅವರ ನಗು, ಫೋಟೋ ಅಥವಾ ಸೆಲಿಗೆ ಮಾತ್ರ ಸೀಮಿತ.

ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ಸದಾ ನಗುತ್ತಲೇ ಇರುತ್ತಾರೆ. ಅವರು ಬೇಸರದಲ್ಲಿದ್ದಾಗಲೂ ನಗುತ್ತಾರೆ. ಹೀಗಾಗಿ ಅವರ ಮುಖವನ್ನು ನೋಡಿ, ಅವರು ಖುಷಿಯಲ್ಲಿ ದ್ದಾರಾ, ಬೇಸರದಲ್ಲಿದ್ದಾರಾ ಎಂಬುದನ್ನು ಹೇಳುವುದು ಕಷ್ಟ. {ಫೋಟೋ ಅಥವಾ ಸೆಲಿಗೆ ಅವರಿಗೆ ನಗಿ ಎಂದು ಹೇಳಬೇಕಿಲ್ಲ. ಯಡಿಯೂರಪ್ಪನವರಿಗೆ ನಗಿ ಎಂದು ಹೇಳುವುದರಿಂದ ಮತ್ತು ಸದಾ ನಂದ ಗೌಡರಿಗೆ ನಗಬೇಡಿ ಎಂದು ಹೇಳುವುದರಿಂದ ಪ್ರಯೋಜನವಿಲ್ಲ. ಜೋಕು ಹೇಳಿದರೂ
ಯಡಿಯೂರಪ್ಪನವರು ಸೀರಿಯಸ್ ಆಗಿರ್ತಾರೆ, ಸೂತಕದ ಮನೆಯಲ್ಲೂ ಸದಾನಂದ ಗೌಡರು ನಗ್ತಾ ಇರ್ತಾರೆ’ ಎಂಬ ಮಾತು ರಾಜಕೀಯ ವಲಯದಲ್ಲಿ ಚಾಲ್ತಿಯಲ್ಲಿದೆ.

ಅದುಅವರವರ ಸ್ವಭಾವ. ಅವರಿಬ್ಬರೂ ಇರುವುದೇ ಹಾಗೆ. ಅದಕ್ಕೇನೂ ಮಾಡಲು ಆಗುವುದಿಲ್ಲ. ಈ ಬ್ರಹ್ಮಾಂಡದಲ್ಲಿ ಅಸಂಖ್ಯ ಜೀವಿಗಳಿದ್ದರೂ, ಮನುಷ್ಯ
ಮಾತ್ರ ನಗುತ್ತಾನಂತೆ. ಹೀಗಾಗಿ ದೇವದತ್ತವಾದ ನಗುವನ್ನು ಕಳೆದುಕೊಳ್ಳಬಾರದು ಎಂದು ಹೇಳುವುದುಂಟು. A good laugh is sunshine in the house ಎಂದು ಹೇಳುವುದನ್ನುಕೇಳಿರಬಹುದು. ಹಾಗೆಯೇ A smile is a curve that sets everything straight ಎಂಬ ಮಾತನ್ನೂ.  I have not seen anyone dying of laughter, but I know millions who are dying because they are not laughing ಎಂಬ ಮಾತು ಸಹ ಲೋಕವಿಖ್ಯಾತ.

ಯಾವತ್ತೂ ನಗುತ್ತಿರಬೇಕು ಎಂಬ ಮಾತನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಯಾವ ಸಂದರ್ಭದಲ್ಲಿ ನಗಬೇಕು ಮತ್ತು ನಗಬಾರದು ಎಂಬುದು ಗೊತ್ತಿರಬೇಕು. ಯಾವತ್ತೂ ನಗುತ್ತಿರಬೇಕೆಂದು, ಎಲ್ಲಾ ಸನ್ನಿವೇಶಗಳಲ್ಲಿ ನಕ್ಕರೆ, ಮುಜುಗರಕ್ಕೆ ಕಾರಣವಾಗಬಹುದು. ಕೆಲವು ಸಲ ಅದೇ ಸಂಕಟಕ್ಕೀಡುಮಾಡಬಹುದು. ಇದಕ್ಕೆ ಎರಡು ತಿಂಗಳ ಹಿಂದೆ, ಜರ್ಮನಿಯದ ಘಟನೆಯೇ ಸಾಕ್ಷಿ. ಕಳೆದ ಜುಲೈನಲ್ಲಿ ಜರ್ಮನಿಯಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸುಮಾರುನೂರಕ್ಕೂ ಹೆಚ್ಚು ಜನ ಮೃತ ಪಟ್ಟಿದ್ದು ಗೊತ್ತಿದೆ.

ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತಾಡುತ್ತಾ, ಜರ್ಮನಿಯ ಅಧ್ಯಕ್ಷ, ಪ್ರವಾಹದಲ್ಲಿ ಸತ್ತವರಿಗೆ ಸಂತಾಪ ಸೂಚಿಸುತ್ತಿದ್ದರೆ, ಅವರ ಹಿಂಬದಿಯಲ್ಲಿ ನಿಂತಿದ್ದ ಅಂಜೆಲಾ ಮಾರ್ಕೆಲ್ ಅವರ ಉತ್ತರಾಧಿಕಾರಿ ಎಂದೇ ಬಿಂಬಿತರಾದ ಅರ್ಮಿನ್ ಲಾಷೆಟ್ ಜೋಕ್ ಮಾಡಿ ನಗುತ್ತಿದ್ದರು. ಈಗ ಅದೇ ಅವರಿಗೆ ಮುಳುವಾಗಿದೆ. ಈ ನಗು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು. ಸ್ವತಃ ಲಾಷೆಟ್ ಕ್ಷಮೆಯಾಚಿಸಿದರು. ಅಷ್ಟರೊಳಗೆ ಆಗಬೇಕಾದ ಧಕ್ಕೆ ಆಗಿಹೋಗಿತ್ತು. ಲಾಷೆಟ್ ಅವರ ಕ್ರಿಶ್ಚಿಯನ್ ಡೆಮಾಕ್ರೆಟಿಕ್ ಯೂನಿಯನ್ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಲಾರಂಭಿಸಿದೆ. ಅವರ ವಿರೋಧಿ ದಳವಾದ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಮುನ್ನಡೆಯನ್ನು ಸಾಧಿಸಿದೆ.

ಸೆಪ್ಟೆಂಬರ್ 26 ರಂದು ನಡೆಯುವ ಚುನಾವಣೆಯ ಮೇಲೂ ಇದು ಪರಿಣಾಮ ಬೀರಲಿದೆ. ಜರ್ಮನಿಯ ಚಾನ್ಸೆಲರ್ ಆಗುವ ಒಂದು ಅಪೂರ್ವ ಅವಕಾಶವನ್ನು ಲಾಷೆಟ್ ಒಂದು ನಗೆ ಹೊಸಕಿ ಹಾಕಿದೆ. ಯಾವಾಗ ಮತ್ತು ಎಲ್ಲಿ ನಗಬೇಕು ಎಂಬುದು ಗೊತ್ತಿಲ್ಲದಿದ್ದರೆ, ಅದೇ ಅಳುವಿಗೆ ಕಾರಣವಾಗಬಹುದು ಎಂಬುದಕ್ಕೆ ಈ
ಪ್ರಸಂಗವೇ ನಿದರ್ಶನ.

ದೇವರು – ಮನುಷ್ಯನ ಸಂಭಾಷಣೆ
ವಾಟ್ಸಾಪ್‌ನಲ್ಲಿ ಬರುವ ಎಷ್ಟೋ ಸಂದೇಶಗಳು ಫಾರ್ವರ್ಡ್ ಆಗುತ್ತವೆ, ಇನ್ನು ಕೆಲವು ಆಗುವುದೇ ಇಲ್ಲ. ಇತ್ತೀಚೆಗೆ ಸ್ನೇಹಿತರೊಬ್ಬರು ಒಂದು ವಾಟ್ಸಾಪ್ ಸಂದೇಶ ಕಳಿಸಿದ್ದರು. ನಿಮಗೂ ಗೊತ್ತಿರಲಿ ಎಂದು ಈ ಮೂಲಕ ಇಲ್ಲಿ ಫಾರ್ವರ್ಡ್ ಮಾಡುತ್ತಿದ್ದೇನೆ. ದೇವರು ಮತ್ತು ಒಬ್ಬ ಮನುಷ್ಯನ ನಡುವೆ ನಡೆದ ಹೀಗೊಂದು ಸ್ವಾರಸ್ಯಕರ ಹಾಗೂ ಅರ್ಥಪೂರ್ಣಸಂಭಾಷಣೆಯಿದು.

ಮನುಷ್ಯ : ನಿನಗೊಂದು ಪ್ರಶ್ನೆ ಕೇಳಲೇ ?
ದೇವರು : ಕೇಳು.
ಮನುಷ್ಯ : ಇಂದು ನಾನಂದುಕೊಂಡ ಯಾವ ಕೆಲಸಗಳು ನಡೆಯಲಿಲ್ಲ ಏಕೆ ?
ದೇವರು : ನಿನ್ನ ಪ್ರಶ್ನೆಗಳನ್ನು ನಿಖರವಾಗಿ ಕೇಳು?
ಮನುಷ್ಯ : ಬೆಳಗ್ಗೆ ಬೇಗ ಎಚ್ಚರವಾಗಲಿಲ್ಲ. ಕಾರು ಸ್ಟಾರ್ಟ್ ಆಗಲು ಬಹಳ ತಡವಾಯಿತು. ಮಧ್ಯಾಹ್ನದ ಊಟದ ಡಬ್ಬಿ ಬದಲಾಗಿ, ತೊಂದರೆಯಾಯಿತು. ಸಂಜೆ ಮೊಬೈಲ್ ಕಾಲ್ ರಿಸೀವ್ ಮಾಡುತ್ತಿದ್ದಂತೆ ಹ್ಯಾಂಗ್ ಆಗಿ, ಡೆಡ್ ಆಯಿತು.

ಮನೆಗೆ ಬಂದು ಕಾಲು ನೋವು ಪರಿಹರಿಸಿಕೊಳ್ಳಲು ಫುಟ್ ಮಸಾಜರ್‌ನಲ್ಲಿ ಕಾಲಿಡುತ್ತಿದ್ದಂತೆ ಅದು ಕೆಟ್ಟು ನಿಂತಿತು. ಇಂದಿನ ಎಲ್ಲ ಕೆಲಸಗಳಲ್ಲೂ ವಿಘ್ನ ಹಾಗೂ ಆತಂಕಗಳು ಕಾಡಿದವು ಏಕೆ ?

ದೇವರು : ಬೆಳಗ್ಗೆ ನಿನ್ನ ಜೀವಹರಣ ಮಾಡಲು ಮೃತ್ಯದೂತನೊಬ್ಬ ನಿನ್ನ ಹಾಸಿಗೆ ಬದಿಯಲ್ಲಿ ಕಾಯುತ್ತಿದ್ದ. ಅವನೊಂದಿಗೆ ಹೋರಾಡಿ ನಿಮ್ಮ ಜೀವ ಕಾಪಾಡಲು
ದೇವದೂತನೊಬ್ಬನನ್ನು ಕಳುಹಿಸಿದ್ದೆ. ಇದು ನಿನಗೆ ಗೊತ್ತಾಗದಂತೆ ಹೆಚ್ಚು ಹೊತ್ತು ನಿz ಮಾಡುವಂತೆ ಮಾಡಿದೆ.

ನೀನು ಸಂಚರಿಸುವ ದಾರಿಯಲ್ಲಿ ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ಡ್ರೈವಿಂಗ್ ಮಾಡಿಕೊಂಡು ಬರುತ್ತಿದ್ದ, ಅವನಿಂದ ನಿನಗೆ ಅಪಘಾತವಾಗದಿರಲಿ ಎಂದು ನಿನ್ನ ಕಾರು ತಡವಾಗಿ ಸ್ಟಾರ್ಟ್ ಆಗುವಂತೆ ಮಾಡಿದೆ. ನಿನಗೆ ಅಡುಗೆ ಮಾಡಿಕೊಡುತ್ತಿದ್ದ, ಬಾಣಸಿಗ ರೋಗಪೀಡಿತನಾಗಿದ್ದ. ಆತನ ರೋಗ ನಿನಗೆ ಹರಡದಂತೆ
ಮಾಡಲು ನಿನ್ನ ಊಟದ ಡಬ್ಬ ಬದಲಿಸಿದೆ. ಸಂಜೆ ನಿನ್ನ ಸ್ನೇಹಿತ ನಿನಗೆ ಕರೆ ಮಾಡಿ, ಸುಳ್ಳು ಸಾಕ್ಷಿ ಹೇಳಲು ಒಪ್ಪಿಸಲು ಬಯಸಿದ್ದ, ಅದಕ್ಕಾಗಿ ನಿನ್ನ ಮೊಬೈಲ್ ಹ್ಯಾಂಗ್ ಆಗುವಂತೆ ಮಾಡಿದೆ.

ನಿನ್ನ ಮನೆಯಲ್ಲಿದ್ದ ಫುಟ್ ಮಸಾಜರ್‌ನಲ್ಲಿ ನೀರು ಸೇರಿಕೊಂಡು ಶಾರ್ಟ್ ಆಗಿತ್ತು. ಅದು ಕಾರ್ಯ ನಿರ್ವಹಿಸಿದ್ದರೆ, ನಿನಗೆ ವಿದ್ಯುತ್ ಶಾಕ್ ತಗಲುವ ಸಾಧ್ಯತೆ
ಇತ್ತು. ಅದಕ್ಕಾಗಿ ನಾನು, ಫುಟ್ ಮಸಾಜರ್ ಕಾರ್ಯನಿರ್ವಹಿಸದಂತೆ ನಿಷ್ಕ್ರಿಯೆಗೊಳಿಸಿದೆ’.

ಮನುಷ್ಯ : ಕ್ಷಮಿಸಿ, ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಂಡೆ.
ದೇವರು : ನೀನು ಮಾಡುವ ಯೋಜನೆಗಳಿಗಿಂತ ನಾನು ಮಾಡುವ ಯೋಜನೆಗಳು ನಿನ್ನ ಬದುಕಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ನೀನು ಮಾಡಿದ
ಯೋಜನೆಗಳು ವಿಫಲವಾಯಿತೆಂದು ಬೇಸರವಾಗಬೇಡ.

ಮನುಷ್ಯ : ಧನ್ಯವಾದಗಳು ಪ್ರಭುವೆ ?
ದೇವರು : ಎಲ್ಲ ಜೀವಿಗಳು ನನ್ನ ಮಕ್ಕಳು. ಅವರ ಒಳಿತಿನ ಬಗ್ಗೆ ಮಾತ್ರ ನಾನು ಚಿಂತಿಸುತ್ತೇನೆ. ನಾನು ಮಾಡಿದ ಯೋಜನೆಗಳಿಂದ ಎಂದಿಗೂ ಕೆಡಕಾಗುವುದಿಲ್ಲ. ಮನುಷ್ಯರಿಗಾಗಿ ನಾನು ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ, ನಿಧಾನವಾಗಿ ಯೋಚಿಸಿ ನನಗೆ ಉತ್ತರಿಸಿ. ನಿಮಗೆ, ಮೂರು ಗಂಟೆಯ ಸಿನಿಮಾ ಅಥವಾ ಮನರಂಜನೆ ಕಾರ್ಯಕ್ರಮ ನೋಡುವಾಗ ಏಕಾಗ್ರತೆ ಇರುತ್ತದೆ.

ಆದರೆ, ಹತ್ತು ನಿಮಿಷದ ಪ್ರಾರ್ಥನೆಗೆ ಏಕಾಗ್ರತೆ ಇರಲಿ ಸಮಯವೂ ಇರುವುದಿಲ್ಲ ಏಕೆ? ಮನರಂಜನೆ ಹಾಗೂ ಹೋಟೆಲ, ಪಾರ್ಲರ್, ಮೊಬೈಲ್ ಬಾರ್‌ಗಳಲ್ಲಿ ಕಳೆಯುವ ಸಮಯಕ್ಕಿಂತ ಪ್ರಾರ್ಥನೆಗಾಗಿ ನೀಡುವ ಸಮಯ ಕಿರಿದಾಗಿರುತ್ತದೆ, ಏಕೆ? ಸಾವಿರಾರು ಪುಟಗಳಿರುವ ಕಥೆ ಕಾದಂಬರಿಗಳನ್ನು ಏಕಕಾಲದಲ್ಲಿ ಓದಿ ಮುಗಿಸುವ ಸಾಮರ್ಥ್ಯ ನಿಮ್ಮದಾಗಿದ್ದರೂ, ಧಾರ್ಮಿಕ ಗ್ರಂಥಗಳನ್ನು ಓದುವ ತಾಳ್ಮೆ ಇರುವುದಿಲ್ಲ ಏಕೆ?

ದೇವರೊಂದಿಗೆ ಎಂದರೆ, ನಿಮ್ಮ ಮನಸಾಕ್ಷಿಯೊಂದಿಗೆ ಮಾತನಾಡುವ ವ್ಯವಧಾನ ಕ್ಷೀಣಿಸುತ್ತಿದೆ ಏಕೆ ? ಈ ಪ್ರಶ್ನೆಗಳಿಗೆ ಉತ್ತರ ದೊರೆತರೆ, ನೀವು ನಿಮ್ಮ
ಮನಸಾಕ್ಷಿಯೊಂದಿಗೆ ಉತ್ತಮವಾದ ಸಂವಾದಿಸುವ ಶಕ್ತಿ ಹೊಂದಿದ್ದೀರಿ ಹಾಗೂ ದೇವರು ನಿಮ್ಮೊಂದಿಗೆ ಸದಾ ಇರುತ್ತಾನೆ ಎಂದರ್ಥ.