Tuesday, 26th November 2024

Janamejaya Umarji Column: ವಿಮೋಚನೆಯನ್ನು ಏಕೀಕರಣವೆನ್ನುವ ಹುನ್ನಾರ

ಅವಲೋಕನ

ಜನಮೇಜಯ ಉಮರ್ಜಿ

ಭಾರತದಲ್ಲಿ ಎಲ್ಲವೂ ರಾಜಕೀಯವೇ’ ಎಂಬ ಲಘುಧಾಟಿಯ ಅಭಿಪ್ರಾಯವಿದೆ. ‘ಮತಗಳಿಗಾಗಿ ರಾಜಕಾರಣಿಗಳು ಏನು ಬೇಕಾದರೂ ಮಾಡುತ್ತಾರೆ, ರಾಜಕಾರಣ ಹೊಲಸು’ ಎಂದು ಜನರು ಗೊಣಗಿಕೊಳ್ಳುವುದಿದೆ. ಆದರೆ ಎಲ್ಲ ವಿಷಯಗಳು ಕೇವಲ ರಾಜಕಾರ ಣವಲ್ಲ ಎಂಬುದು ಕಹಿಸತ್ಯ. ಇಬ್ಬರಲ್ಲಿ ಒಬ್ಬರು ಅಧಿಕಾರಕ್ಕೆ ಬರುತ್ತಾರೆ ಎಂದು ಸುಮ್ಮನೆ ಕೂರುವ ಪರಿಸ್ಥಿತಿ ಇಲ್ಲ.

ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ಪರಿಸ್ಥಿತಿ ನೋಡಿದರೆ ಒಬ್ಬ ‘ಮೂರನೆಯ ಆಟಗಾರ’ನೂ ಇದ್ದಾನೆ ಎಂದು ಯಾರಿಗಾದರೂ ಅನ್ನಿಸುತ್ತದೆ; ಅದು ತಿಳಿಯುವುದರೊಳಗಾಗಿ ಕಾಲ ಮಿಂಚಿರುತ್ತದೆ. ರಾಜಕಾರಣ ಎಂಬುದು ಕೇವಲ ಮುಖವಷ್ಟೇ, ಅದರ ಹಿಂದಿರುವ ಹಿತಾಸಕ್ತಿಗಳು ಬೇರೆಯೇ ಇರುತ್ತವೆ. ತಥಾಕಥಿತ ಇತಿಹಾಸಕಾರರು ನೈಜ ಇತಿಹಾಸ ಮುಚ್ಚಿಡುತ್ತಾ, ತಿರುಚುತ್ತಾ, ಅಪಪ್ರಚಾರ ಮಾಡುತ್ತಾ ಬಂದಿರುವುದರಲ್ಲಿ ಕೇವಲ ಸ್ಥಳೀಯ ರಾಜಕಾರಣ ವಿದೆ ಎನ್ನಲು ಸಾಧ್ಯವಿಲ್ಲ; ಇದರ ಹಿಂದೆ ವ್ಯವಸ್ಥಿತವಾದ ‘ದೇಶ ಮಾರಕ’ ಜಾಲವಿದೆ.

ಜಾಗತಿಕ ವ್ಯಾಪಾರಿ ಶಕ್ತಿಗಳು, ಸಾಂಸ್ಕೃತಿಕ ಸಾಮ್ಯವಾದವೆಂಬ ಸೋಗುಹಾಕಿ ನಮ್ಮಲ್ಲಿನ ಸಾಂಸ್ಕೃತಿಕ ವಿಷಯ ಗಳನ್ನು ಆಯ್ದುಕೊಂಡು ಗೊಂದಲ ಎಬ್ಬಿಸುವುದು, ಹೆಮ್ಮೆಯ ಮತ್ತು ಮಹತ್ವದ ವಿಷಯಗಳನ್ನು ಲಘುವಾಗಿಸು ವುದು, ಸುಳ್ಳು ಕಥನ ಹಬ್ಬಿಸುವುದು ಇದರ ಭಾಗಗಳು. ಮಾತ್ರವಲ್ಲ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ‘ಸಿಪಾಯಿ ದಂಗೆ’ ಎನ್ನುವುದು, ಕೇವಲ ಅಹಿಂಸೆಯಿಂದ ಸ್ವಾತಂತ್ರ್ಯ ಬಂತು ಎನ್ನುವುದು, ಕಾಶ್ಮೀರದ ಭಯೋತ್ಪಾದನೆಯನ್ನು ‘ಆಜಾದಿ ಆಂದೋಲನ’ ಎನ್ನುವುದು ಕೂಡ ಇಂಥ ಕಥನಗಳ ಭಾಗವೇ.

‘ಹೈದರಾಬಾದ್ ವಿಮೋಚನೆ’ಯನ್ನು ‘ಏಕೀಕರಣ’ ವೆಂದು ಕಥೆಕಟ್ಟುವ ವಾಮಮಾರ್ಗ ಇತ್ತೀಚಿನ ಕೆಲ ವರ್ಷ ಗಳಿಂದ ತೆರೆದುಕೊಳ್ಳುತ್ತಿದೆ. ಹೋದ ವರ್ಷವಾದರೆ ತೆಲಂಗಾಣ ಚುನಾವಣೆ ಇತ್ತು, ತುಷ್ಟೀಕರಣಕ್ಕಾಗಿ ಬಳಸಿಕೊಳ್ಳ ಲಾಗುತ್ತಿದೆ ಎಂದು ಸುಮ್ಮನಾಗಬಹುದು. ಆದರೆ ತಥ್ಯ ಹಾಗಿಲ್ಲ. ರಜಾಕಾರರ ಹಾವಳಿ ಒಂದು ಕರಾಳ ಅಧ್ಯಾಯ. ಇದನ್ನು ಕ್ರಮೇಣ ಮರೆಸುವ ಹುನ್ನಾರ ನಡೆದಿದೆ. ೧೯೪೭ ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂತು, ಬರುವಾಗಲೇ ಹೋಳಾಗಿ ಬಂತು. ೬೦೦ಕ್ಕೂ ಹೆಚ್ಚು ಸಂಸ್ಥಾನಗಳನ್ನು ಭಾರತ ಒಕ್ಕೂಟದೊಳಕ್ಕೆ ಸೇರಿಸುವ ಸವಾಲು ಎದುರಾ ಯಿತು. ಹೈದರಾಬಾದ್ ನಿಜಾಮ ಮೀರ್ ಉಸ್ಮಾನ್ ಅಲಿ ಖಾನನಿಗೆ ಸ್ವತಂತ್ರವಾಗಿರುವ ಆಸೆಯಿತ್ತು. ಅವನ ಸಂಸ್ಥಾನವು ಕನ್ನಡ, ಮರಾಠಿ, ತೆಲುಗು ಭಾಷಿಕರ ಪ್ರದೇಶವಾಗಿತ್ತು. ಅಲ್ಲಿದ್ದ ಪ್ರಜೆಗಳಲ್ಲಿ ಹಿಂದೂಗಳದ್ದೇ ಸಿಂಹ ಪಾಲು, ಹೀಗಾಗಿ ಸಂಸ್ಥಾನವು ಭಾರತ ಒಕ್ಕೂಟದಲ್ಲಿ ವಿಲೀನವಾಗಬೇಕು ಎಂಬುದು ಜನಾಭಿಪ್ರಾಯವಾಗಿತ್ತು. ಇದನ್ನು ಒಡೆಯುವ ಕುತಂತ್ರಕ್ಕೆ ನಿಜಾಮ ಮುಂದಾದಾಗ ಮಾರ್ಗೋಪಾಯವಾಗಿ ಹೊಳೆದ ಹೆಸರೇ ‘ರಜಾಕಾರರ ಪಡೆ’. ಇದೊಂದು ಸಂಘಟಿತ ಸಶಸ್ತ್ರ ಗುಂಪು. ಪ್ರಜೆಗಳ ಕೂಗನ್ನು ಹತ್ತಿಕ್ಕಲು, ಅವರ ಹೋರಾಟವನ್ನು ಬಗ್ಗುಬಡಿ ಯಲು ನಿಜಾಮ ಕಟ್ಟಿದ್ದ ಖಾಸಗಿ ಸೈನ್ಯವಾಗಿತ್ತು ಈ ಪಡೆ.

ಮಜ್ಲಿಸ್-ಇ-ಇತ್ತಿಹಾದ್-ಉಲ್ ಮುಸ್ಲಿಮೀನ್ (ಎಂಐಎಂ) ಪಕ್ಷದ ನೇತಾರ ಕಾಸಿಂ ರಜ್ವಿ ಈ ಪಡೆಯ ಮುಂದಾಳು. ವಿಮೋಚನಾ ಹೋರಾಟವನ್ನು ಹತ್ತಿಕ್ಕುವುದು, ನಿಜಾಮನ ಸಾರ್ವಭೌಮತೆಯನ್ನು ಮತ್ತು ಮುಸ್ಲಿಂ ಪ್ರಭು ತ್ವವನ್ನು ಉಳಿಸುವುದು ಈ ಪಡೆಯ ಉದ್ದೇಶವಾಗಿತ್ತು. ಮೂಲತಃ ಮಹಾರಾಷ್ಟ್ರದ ಲಾತೂರಿನವನಾದ ಕಾಸಿಂ ರಜ್ವಿ ವೃತ್ತಿಯಲ್ಲಿ ವಕೀಲ, ಮೇಲಾಗಿ ಮತಾಂಧ. ಇವನ ಇಶಾರೆಯಂತೆ ರಜಾಕಾರರು ದಾಳಿ ಪ್ರಾರಂಭಿಸಿದರು, ಹಳ್ಳಿ ಗಳನ್ನು ನಾಶಪಡಿಸಿದರು, ಕಂಡಕಂಡಲ್ಲಿ ಬೆಂಕಿಯಿಟ್ಟರು. ಕೊಲೆ, ಸುಲಿಗೆ, ಮಾನಹಾನಿಗೆ ಕೈಹಾಕಿದರು, ದೇವಾ ಲಯಗಳ ನಾಶವನ್ನು ಎಗ್ಗಿಲ್ಲದೆ ನಡೆಸಿದರು. ಅವರ ಗೂಢಚಾರ ಜಾಲವು ಬಲವಾಗೇ ಇತ್ತು.

ಭಯಾನಕ ಗೋರ್ಟಾ ಹತ್ಯಾಕಾಂಡ

ಬೀದರ್ ಜಿಲ್ಲೆಯ ಗೋರ್ಟಾ ಗ್ರಾಮದಲ್ಲಿ ನಡೆದ ಹತ್ಯಾಕಾಂಡವು ರಜಾಕಾರರ ಬರ್ಬರತೆಗೆ ಒಂದು ನಿದರ್ಶನ ಎನ್ನಬಹುದು. ೧೯೪೮ರ ಮೇ ೯ರಂದು ಈ ಗ್ರಾಮಕ್ಕೆ ನುಗ್ಗಿದ ಸಾವಿರಾರು ರಜಾಕಾರರು, ಕಂಡಕಂಡವರನ್ನೆಲ್ಲಾ ಕೊಚ್ಚುತ್ತಾ ಸಾಗಿದರು; ಮಹಿಳೆಯರು, ವೃದ್ಧರು, ಮಕ್ಕಳು ಹೀಗೆ ಯಾರನ್ನೂ ಅವರು ಲೆಕ್ಕಿಸಲಿಲ್ಲ. ಸಿಕ್ಕಿದ್ದನ್ನೆಲ್ಲಾ ದೋಚುತ್ತಾ ಹೋದ ಇವರ ಅತ್ಯಾಚಾರ-ಅನಾಚಾರಗಳನ್ನು ಹೇಳತೀರದು. ಇವರ ದಾಳಿಯ ಪರಿಣಾಮವಾಗಿ ಊರಿಗೆ ಊರೇ ರಕ್ತಸಿಕ್ತವಾಗಿರುತ್ತಿತ್ತು. ರಜಾಕಾರರ ಬರ್ಬರತೆಗೆ ಬೆಚ್ಚಿ ಬೆದರಿದ ಸುಮಾರು ೮೦೦ ಜನ ಒಂದೇ ಮನೆಯಲ್ಲಿ ಆಶ್ರಯ ಪಡೆದಿದ್ದರಂತೆ. ಇಂಥ ಕಥೆಗಳನ್ನು ಕೇಳಿದಾಗ ಈಗಲೂ ಭಯವಾಗುತ್ತದೆ, ಮನ ಕಲಕುತ್ತದೆ. ಅಷ್ಟಕ್ಕೂ ಇಂಥ ದುರಂತಕ್ಕೆ ಕಾರಣವಾಗಿದ್ದು, ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಹಾರಿಸಿದ ತ್ರಿವರ್ಣ ಧ್ವಜವನ್ನು ಒತ್ತಾಯಪೂರ್ವಕವಾಗಿ ಇಳಿಸಿದ್ದ ರಜಾಕಾರರ ಸಹಚರನ ಹತ್ಯೆ.

ಉಕ್ಕಿನ ಮನುಷ್ಯ ಮಾಡಿದ ಕಮಾಲ್

ಈ ಸಮಸ್ಯೆ ಬಗೆಹರಿದಿದ್ದು ‘ಆಪರೇಷನ್ ಪೋಲೋ’ ಎಂಬ ಸೈನಿಕ ಕಾರ್ಯಾಚರಣೆಯ ಮೂಲಕ. ೧೯೪೮ರ ಸೆಪ್ಟೆಂಬರ್ ೧೩ರಂದು ಭಾರತೀಯ ಸೇನೆಯು ಹೈದರಾಬಾದಿನ ಮೇಲೆ ಮುಗಿಬಿತ್ತು. ರಜಾಕಾರರು ದಿಕ್ಕಾಪಾಲಾಗಿ ಓಡಿದರು. ನಾಲ್ಕೇ ದಿನಗಳಲ್ಲಿ ಹೈದರಾಬಾದಿನ ಸೈನ್ಯ ಸೋತಿತು, ನಿಜಾಮ ಶರಣಾದ. ಸೆ.೧೭ರಂದು ಕರಾಳ ಅಧ್ಯಾಯ ಕೊನೆಗೊಂಡಿತು, ಹೈದರಾಬಾದ್ ಸಂಸ್ಥಾನವು ಭಾರತ ಒಕ್ಕೂಟದಲ್ಲಿ ವಿಲೀನವಾಯಿತು. ‘ಉಕ್ಕಿನ ಮನುಷ್ಯ’ ಎಂದೇ ಹೆಸರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರ ದಿಟ್ಟ ನಿರ್ಧಾರದಿಂದ ಇದು ಸಾಧ್ಯವಾಯಿತು. ಹೈದರಾಬಾದ್ ಮಾತ್ರವಲ್ಲದೆ ೬೦೦ಕ್ಕೂ ಹೆಚ್ಚು ಸಂಸ್ಥಾನಗಳು ಹೀಗೆ ಭಾರತ ಒಕ್ಕೂಟದಲ್ಲಿ ವಿಲೀನವಾದವು. ಕಾಶ್ಮೀರದ ಸಮಸ್ಯೆಯೊಂದನ್ನು ಬಗೆಹರಿಸಲು ಸಾಧ್ಯವಾಗದವರು ಯಾರು ಎಂಬುದನ್ನು ನಂತರ ಸವಿಸ್ತಾರವಾಗಿ ನೋಡಬಹುದು.

ಇತಿಹಾಸವನ್ನು ಮರೆಯಬಾರದು
ಇತಿಹಾಸವನ್ನು ಮರೆತವರಿಗೆ ಭವಿಷ್ಯವಿಲ್ಲ. ಈಗ ಇದು ಯಾಕೆ ನೆನಪಾಗಬೇಕು ಅಂದರೆ ಅದಕ್ಕೊಂದು ಕಾರಣವಿದೆ.
ಸೆಪ್ಟೆಂಬರ್ ೧೭ರ ದಿನವು ಹೈದರಾಬಾದ್ ವಿಮೋಚನಾ ದಿನವಾಗಿದೆ. ಆದರೆ ಕೆಲವು ಸ್ವಯಂಘೋಷಿತ ವಿಚಾರವಾ
ದಿಗಳು ಇತ್ತೀಚೆಗೆ ‘ಇದು ಹೈದರಾಬಾದ್ ವಿಮೋಚನಾ ದಿನವಲ್ಲ; ಹೈದರಾಬಾದ್ ಸಂಸ್ಥಾನವು ಭಾರತದೊಂದಿಗೆ
ವಿಲೀನವಾದ/ಏಕೀಕರಣವಾದ ದಿನ’ ಎಂದು ವ್ಯಾಖ್ಯಾನಿಸಲು ಶುರುಮಾಡಿದ್ದಾರೆ. ಇದು ತುಂಬಾ ಅಪಾಯಕಾರಿ.
ಏಕೆಂದರೆ, ಕ್ರಮೇಣವಾಗಿ ವಿಮೋಚನೆಯ ಇತಿಹಾಸವನ್ನು ಮರೆಸಲು, ಸ್ವರಾಜ್ಯ-ಸುರಾಜ್ಯಕ್ಕಾಗಿ ನಡೆದ ಹೋರಾ ಟದ ಕಿಚ್ಚಿಗೆ ನೀರು ಎರಚಲು ವ್ಯವಸ್ಥಿತವಾಗಿ ತಂತ್ರಗಳನ್ನು ಹೆಣೆಯಲಾಗುತ್ತದೆ. ರಜಾಕಾರರು ನಡೆಸಿದ ಹಿಂಸೆಯ ಕರಿನೆರಳು ಆರದ ಗಾಯಗಳನ್ನು ಮಾಡಿದೆ ಎಂಬುದನ್ನು ಮರೆಯಲೇಬಾರದು. ಹೈದರಾಬಾದ್ ವಿಮೋಚನೆಯು ಒಂದು ನಿರ್ಣಾಯಕ ಹೋರಾಟ; ಈ ಹೋರಾಟದಲ್ಲಿ ಮಡಿದ ಚೇತನಗಳ ನೆನಪು ಸದಾ ಇರಬೇಕು.

(ಲೇಖಕರು ಸಾಹಿತಿ)

ಇದನ್ನೂ ಓದಿ: Bangladesh Unrest: ʻಆಜಾನ್‌ಗೂ 5 ನಿಮಿಷ ಮುನ್ನ ಪೂಜೆ, ಧ್ವನಿವರ್ಧಕ ನಿಲ್ಲಿಸಿʼ- ಬಾಂಗ್ಲಾದಲ್ಲಿ ದುರ್ಗಾಪೂಜೆಗೆ ಸರ್ಕಾರದ ಖಡಕ್‌ ನಿಯಮ