Friday, 3rd January 2025

Janamejaya Umarji Column: ವಿಶ್ವಾಸಾರ್ಹರು ಎನಿಸಿಕೊಳ್ಳೋಣ

ಅಭಿಮತ

ಜನಮೇಜಯ ಉಮರ್ಜಿ

ಇದು ಸ್ಪರ್ಧಾತ್ಮಕ ಯುಗ. ಹೀಗಾಗಿ, ‘ನಂಬರ್ ಒನ್’ ಆಗಬೇಕು ಎಂಬುದು ಎಲ್ಲರ ಹಂಬಲ. ಆದರೆ ಈಗ ‘ಸ್ಪರ್ಧೆ’ ಎಂಬುದು ‘ತಾನು ಗೆಲ್ಲುವುದು’ ಎಂಬ ಪರಿಕಲ್ಪನೆಯಾಗಿ ಮಾತ್ರವೇ ಉಳಿಯದೆ, ‘ಹಲವರನ್ನು ಸೋಲಿಸುವುದು’ ಕೂಡ ಆಗಿದೆ. ಸಿರಿ-ಸಂಪತ್ತು, ಬಿರುದು- ಬಾವಲಿ, ಹೊಗಳಿಕೆ-ಮೆಚ್ಚುಗೆ ಎಲ್ಲವೂ ಕ್ಷಣಿಕ; ಆದರೆ ನಾವು ನಡೆವ ಹಾದಿಯಲ್ಲಿ ಜತೆಗೂಡಿದ, ನಮ್ಮವರೇ ಆಗಿಹೋದ ವ್ಯಕ್ತಿಗಳೊಂದಿಗೆ ಉಳಿಸಿಕೊಂಡ ವಿಶ್ವಾಸವು ‘ಚಿರಂತನ’ ವಾಗಿರುತ್ತದೆ ಎಂಬುದನ್ನು ನಾವು ಮರೆಯಬಾರದು.

ಇದು ‘ನಂಬರ್ ಒನ್’ ಆಗದಿರುವುದಕ್ಕೆ ಹೇಳುತ್ತಿರುವ ನೆಪವಲ್ಲ, ಸಾಂತ್ವನವಲ್ಲ; ಇದು ಜೀವನತಂತ್ರ. ಇದುವೇ ‘ಬಾಹ್ಯ ದೃಢೀಕರಣಕ್ಕೆ’ ಎಳೆಸದ, ಆತ್ಮನಿರ್ಭರವಾಗಿ ಬೆಳೆಸುವ ಶಕ್ತಿ. ಈ ಕುರಿತಂತೆ ಒಂದು ನಿದರ್ಶನವನ್ನು ಇಲ್ಲಿ
ಉಲ್ಲೇಖಿಸುವುದು ಸೂಕ್ತವೆನಿಸುತ್ತದೆ. ವಿದ್ಯಾರ್ಥಿನಿಯೊಬ್ಬಳು ಮೊದಲ ಸೆಮಿಸ್ಟರ್‌ನಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಳು, ಹೀಗಾಗಿ -ಡೆಯನ್ನು ಹಂಚಿದಳು. ಎರಡನೆಯ ಸೆಮಿಸ್ಟರ್ ನಲ್ಲಿ ಬಂದ ಫಲಿತಾಂಶ ಬೇರೆಯೇ ಆಗಿತ್ತು, ಕಾರಣ ಆಕೆ ಮೂರನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಳು. ಆದರೂ ಆಕೆ ಫೇಡೆ ಹಂಚುತ್ತಿದ್ದಳು. “ಮೊದಲ ಸ್ಥಾನ ಉಳಿಸಿಕೊಳ್ಳಲು ನೀನು ವಿಫಲಳಾಗಿರುವೆ, ಆದರೂ ಏನಿದು?” ಎಂದು ನಾನು ಆಕೆಗೆ ಗದರಿದೆ.

ಅದಕ್ಕೆ ಆಕೆ ಉತ್ತರಿಸಿದ ಪರಿ ನನಗಿನ್ನೂ ನೆನಪಿದೆ. “ಕಳೆದ ಬಾರಿ ನನಗೆ ೮೦ ಪ್ರತಿಶತ ಅಂಕ ಬಂದಿತ್ತು, ಈ ಬಾರಿ 82 ಪ್ರತಿಶತ ಆಗಿದೆ; ನಾನು ಆಲೋಚಿಸುವುದು ನನ್ನ ದಾಖಲೆಯನ್ನೇ ಮುರಿಯುವುದರ ಬಗ್ಗೆಯೇ ಹೊರತು, ಉಳಿದ ವರದ್ದು ಅಲ್ಲ” ಎಂದಿದ್ದಳು ಆ ಹುಡುಗಿ! ‘ನಂಬರ್ ಒನ್’ ಆಗುವುದು ಆಯಾ ಘಟ್ಟದ ಒಂದು ಸಾಧನೆ ಮಾತ್ರ; ಏಕೆಂದರೆ, ಇನ್ನೊಬ್ಬರು ಅದನ್ನು ಮುರಿಯುವವರೆಗೆ ಮಾತ್ರ ಅದರ ವ್ಯಾಲಿಡಿಟಿ. ಆದರೆ ‘ವಿಶ್ವಾಸಾರ್ಹತೆ’ ಎಂಬುದು ಜೀವನಪರ್ಯಂತ ಮತ್ತು ಅದರಾಚೆಗೂ ನಮ್ಮ ಹೆಗಲು ಕಾಯುವಂಥದ್ದು. ಯಾರಾದರೂ ನಮ್ಮನ್ನು ನಂಬಿದರೆಂದರೆ, ಅವರು ನಮ್ಮ ಮೌಲ್ಯಗಳು, ಸಮಗ್ರತೆ, ಋಜುತ್ವ ಮತ್ತು ಬದ್ಧತೆಯನ್ನು ಇಡಿಯಾಗಿ ನಂಬಿರು ತ್ತಾರೆ; ಅದು ಕೇವಲ ಒಂದು ಕೋನದಿಂದ ಮಾತ್ರ ಇರುವುದಿಲ್ಲ.

ವಿಶ್ವಾಸ’ ಎಂಬುದು ಶೇಕಡಾವಾರು ಎಂಬ ಅಳತೆಗೋಲಿಗೆ ದಕ್ಕುವಂಥದ್ದಲ್ಲ, ‘ಪೂರ್ಣ ವಿಶ್ವಾಸ ಇದೆ ಅಥವಾ ಇಲ್ಲ’ ಎಂಬುದೇ ಅದರ ಮಾಪನಕಡ್ಡಿ. ‘ಅರ್ಧ ವಿಶ್ವಾಸವಿದೆ, 30 ಪ್ರತಿಶತ ಇದೆ’ ಎಂದರೆ ಅದು ವಿಶ್ವಾಸವೇ ಅಲ್ಲ, ನಂಬಿಕೆಯೇ ಅಲ್ಲ. ವಿಶ್ವಾಸಾರ್ಹತೆಯನ್ನು ಅಳೆಯಲು ಶ್ರೇಯಾಂಕಗಳಿಲ್ಲ, ‘ಪ್ರಶಸ್ತಿಗಳು’ ಇದನ್ನು ಅಳೆಯುವ ಮಾನದಂಡಗಳಲ್ಲ. ಬದಲಿಗೆ, ನಾವು ನಮ್ಮ ಸುತ್ತಲಿನವರ ಮೇಲೆ ಬೀರುವ ಪ್ರಭಾವ, ಎಲ್ಲ ಕಾಲಗಳಲ್ಲಿ ಇರುವ ನಮ್ಮ ನಡವಳಿಕೆಗಳೇ ವಿಶ್ವಾಸಾರ್ಹತೆಯ ಮಾನದಂಡಗಳೆನಿಸಿಕೊಳ್ಳುತ್ತವೆ.

‘ನಂಬರ್ ಒನ್’ ಆಗಿರುವುದು ಕ್ಷಣಿಕವಾದ ವೈಭವವನ್ನು ತರಬಹುದು, ಆದರೆ ವಿಶ್ವಾಸವೆಂಬುದು ದೀರ್ಘಾವಽಯ
ಯಶಸ್ಸನ್ನು ಉಳಿಸಿಕೊಳ್ಳುತ್ತದೆ. ವ್ಯಕ್ತಿಗಳು ಮತ್ತು ಸಂಸ್ಥೆಗಳು ಸವಾಲಿನ ಸಮಯದಲ್ಲೂ ನಿಷ್ಠೆ ಮತ್ತು ಸಮಸ್ಥಿತಿ ಯನ್ನು ಉಳಿಸಿಕೊಳ್ಳುವುದೇ ‘ವಿಶ್ವಾಸಾರ್ಹತೆ’. ನಮ್ಮನ್ನು ಯಾರಾದರೂ ನಂಬಿದರೆ ಅದು, ‘ಅವರು ಪರಾವಲಂಬಿ, ನಾವು ಶಕ್ತರು’ ಎಂಬ ಕಾರಣಕ್ಕಾಗಿ ಅಲ್ಲ; ಬದಲಿಗೆ ನಾವು ‘ವಿಶ್ವಾಸಾರ್ಹರು’ ಎಂಬ ಕಾರಣಕ್ಕಾಗಿ. ಈ ವಿಶ್ವಾಸಾ ರ್ಹತೆ ಯಾವ ಪದವಿಗಿಂತಲೂ ಮಿಗಿಲು. ಸ್ನೇಹ, ದಾಂಪತ್ಯ, ವ್ಯವಹಾರ ಅಥವಾ ನೌಕರಿ ಹೀಗೆ ‘ಪರಸ್ಪರ-ಸಂಬಂಧ’ದ ಪರಿ ಯಾವುದೇ ಇರಲಿ, ಅಲ್ಲಿ ವಿಶ್ವಾಸಾರ್ಹತೆ ಬಹುಮುಖ್ಯ.

ಅಂಥ ಸಂಬಂಧ ಗಳನ್ನು ಗಟ್ಟಿಗೊಳಿಸುವುದು ಆ ವಿಶ್ವಾಸಾರ್ಹತೆಯೇ. ಹೊಗಳಿಕೆಗಿಂತ ಟೀಕೆಗೆ ಒಲವು ತೋರು ವುದು ಮಾನವಸಹಜ ಸ್ವಭಾವ. ನಾವು ತಪ್ಪು ಮಾಡಿದಾಗ ಹಲವು ಬೆರಳುಗಳು ನಮ್ಮತ್ತ ತೋರುತ್ತವೆ, ನಮ್ಮ ವಿರುದ್ಧ ಧ್ವನಿಗಳು ಏಳುತ್ತವೆ, ಜಗತ್ತೇ ನಮಗೆ ಎದುರಾಗಿ ನಿಂತಿದೆ ಎನಿಸುತ್ತದೆ. ಅದೇ ನಾವು ಯಶಸ್ವಿ ಯಾದಾಗ, ಎಲ್ಲ ಕಡೆಯಿಂದಲೂ ಚಪ್ಪಾಳೆಯ ದನಿ ಕೇಳಿಬರುತ್ತದೆ ಎನ್ನುವಂತಿಲ್ಲ, ಜಗತ್ತೇ ನಮ್ಮ ಹಿಂದೆ ನಿಂತಿದೆ ಎನಿಸುವುದಿಲ್ಲ. ಈ ಎರಡು ‘ವಿಲೋಮ ಸ್ಥಿತಿಗಳು’ ನಮ್ಮ ಉತ್ಸಾಹವನ್ನು ಕುಗ್ಗಿಸಬಹುದು; ಆದರೆ ಈ ಕಹಿ ಸತ್ಯವನ್ನು ತಿಳಿದೇ ಬದುಕಲ್ಲಿ ಮುಂದಕ್ಕೆ ಹೆಜ್ಜೆಯಿಡಬೇಕಿರುವುದು ಈ ಕ್ಷಣದ ಅನಿವಾರ್ಯತೆ. ಚಪ್ಪಾಳೆಗಳಿಗಿಂತ ನಾವು ಮಾಡುವ ಕೆಲಸವು ಜೋರು ಸದ್ದುಮಾಡಬೇಕು. ನಮ್ಮ ಕಾರ್ಯಕ್ಷಮತೆ, ಸಮಗ್ರತೆ, ಋಜುತ್ವ ಇವುಗಳು ನಮ್ಮ ಶ್ರಮದ ಪ್ರತಿಫಲವಾಗಿರಬೇಕು.

‘ತಪ್ಪುಗಳು’ ಎಂಬುದು ಕಲಿಯಲು ಸಿಕ್ಕ ಅವಕಾಶಗಳೇ ಹೊರತು, ನಮ್ಮನ್ನು ವ್ಯಾಖ್ಯಾನಿಸುವ ಕ್ಷಣಗಳಲ್ಲ. ಪ್ರತಿ ವಿಮರ್ಶೆಯ ಗುರಿ ಪರಿಪೂರ್ಣತೆ ಅಲ್ಲ, ಅದು ಪ್ರಗತಿಯ ಗುರಿ. ಯಾರೋ ಪ್ರಶಂಸಿಸಲಿ ಎಂಬ ನಿರೀಕ್ಷೆ ಇಟ್ಟು ಕೊಳ್ಳುವುದರ ಬದಲಿಗೆ, ನಮಗೆ ಆತ್ಮತೃಪ್ತಿಯಾಗುವಂತೆ ಪರಿಶ್ರಮದೊಂದಿಗೆ ಕೆಲಸ ಮಾಡಬೇಕು. ಅದಕ್ಕಾಗಿನ ಪ್ರೇರಣೆ ನಮ್ಮೊಳಗಿನಿಂದಲೇ ಬರಬೇಕು. ನಮ್ಮೆದುರು ಇರುವ ಧ್ಯೇಯದ ಮೇಲೆಯೇ ನಮ್ಮ ಗಮನ ಸದಾ ಕೇಂದ್ರೀಕೃತವಾಗಿರಬೇಕು. ಚಿಕ್ಕ ಚಿಕ್ಕ ಗೆಲುವುಗಳನ್ನು ಆನಂದಿಸಬೇಕು. ನಾವು ಬಯಸಬೇಕಿರುವುದು ಪ್ರಗತಿಯನ್ನೇ ವಿನಾ ಮತ್ತೊಬ್ಬರ ಅನುಮೋದನೆಯನ್ನಲ್ಲ. ಈ ಸಾಧನೆಯ ಹಾದಿಯಲ್ಲಿ ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸಿಕೊಂಡು ಉಳಿಸಿಕೊಂಡು ಹೋಗುವುದು ತುಂಬಾ ಮುಖ್ಯ.

‘ನಂಬರ್ ಒನ್’ ಆಗುವುದಕ್ಕಿಂತ ‘ವಿಶ್ವಾಸಾರ್ಹರು’ ಆಗುವುದು ಹೆಚ್ಚು ಮೌಲ್ಯಯುತವಾಗಿದೆ. ಕಾರ್ಯಸಾಧನೆ ಯಲ್ಲಿ ತೊಡಗಿರುವಾಗ ಗೊತ್ತಿದ್ದೋ ಗೊತ್ತಿಲ್ಲದೆಯೋ ಆಗುವ ತಪ್ಪುಗಳನ್ನು ‘ಹಿನ್ನಡೆ’ ಎಂದುಕೊಳ್ಳಬೇಕಿಲ್ಲ. ಏಕೆಂದರೆ, ಅವು ಸ್ವಲ್ಪ ಹೊತ್ತು ನಿಂತು ಸಾವರಿಸಿಕೊಳ್ಳುವ ‘ಮೆಟ್ಟಿಲು ಕಲ್ಲುಗಳು’ ಆಗಿರುತ್ತವೆ. ನಮ್ಮ ಕಾರ್ಯ ಕ್ಷಮತೆಗೆ ಅಥವಾ ಸಾಧನೆಗೆ ಮೆಚ್ಚುಗೆ ಸಿಕ್ಕಿದರೆ ಅದು ಆಹ್ಲಾದಕರವೇ, ಆದರೆ ಅದೇ ಅನಿವಾರ್ಯವಲ್ಲ. ನಮ್ಮೆದುರು ಇರುವ ಧ್ಯೇಯದ ಮೇಲೆ ಮಾತ್ರವಲ್ಲದೆ, ಆಂತರಿಕವಾಗಿಯೂ ನಮ್ಮ ಗಮನವನ್ನು ಕೇಂದ್ರೀಕರಿಸುವ ಮೂಲಕ ಮತ್ತು ನಿಜವಾಗಿಯೂ ಮುಖ್ಯವಾದುದಕ್ಕೆ ಬದ್ಧರಾಗುವ ಮೂಲಕ ನಾವು ವೈಯಕ್ತಿಕ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಿದೆ. ಅಚಲವಾದ ವಿಶ್ವಾಸಾರ್ಹತೆಯ ಮೇಲೆ ನಿರ್ಮಿಸಿದ ಯಶಸ್ಸಿನ ಸೌಧವು ಮಾತ್ರವೇ ಬಹುಕಾಲ ಉಳಿಯಬಲ್ಲದು ಎಂಬುದನ್ನು ಮರೆಯದಿರೋಣ.

ಇಂದು ಹೊಸ ವರ್ಷ. ಈ ಘಟ್ಟದಲ್ಲಿ, ವ್ಯಕ್ತಿತ್ವ ವಿಕಸನ ಮತ್ತು ಸಾಧನೆಗೆ ಸಂಬಂಧಿಸಿದಂತೆ ಹಲವರು ‘ಹೊಸ ವರ್ಷದ ಸಂಕಲ್ಪ’ವನ್ನು ಮಾಡುವುದುಂಟು. ನಿಮ್ಮ ಕೌಟುಂಬಿಕ ಸ್ಥಿತಿಗತಿ, ನೀವು ತೊಡಗಿಸಿಕೊಂಡಿರುವ ಕಾರ್ಯ ಕ್ಷೇತ್ರ, ಬಂಧು-ಮಿತ್ರರ ಸ್ವರೂಪ ಏನೇ ಆಗಿರಲಿ, ಮತ್ತು ಆ ವಲಯಗಳ ನಿರ್ವಹಣೆಗೆ ನೀವು ತಳೆಯುವ ಸಂಕಲ್ಪ ಏನೇ ಇರಲಿ, ‘ವಿಶ್ವಾಸಾರ್ಹತೆ’ ಎಂಬ ಮಹತ್ತರ ಘಟಕವು ಅದರಲ್ಲಿ ಅಡಕವಾಗಿರಲಿ ಎಂಬುದಷ್ಟೇ ಈ ಪುಟ್ಟ ಬರಹದ ಆಶಯ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು….

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

ಇದನ್ನೂ ಓದಿ: Aneesh B Column; ಕನ್ನಡ ಅಂದರೆ GenZ ಗಳಿಗೇಕೆ ಹಿಂಜರಿಕೆ?