Friday, 20th September 2024

ವಿಧಿ ವಿಪರೀತವ ಜಯಿಸಿ ’ನಿಂತ’ ಜಯೇಶ !

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@gmail.com

ಅವರ ಪರಿಚಯ ನನಗೆ ಆದದ್ದು ಕೇವಲ ಎರಡು ದಿನಗಳ ಹಿಂದೆ. ಅಲ್ಲ, ಹಾಗೆ ನೋಡಿದರೆ ಅವರ ಧ್ವನಿಯ ಪರಿಚಯ ಈಗ್ಗೆ ಒಂದು ತಿಂಗಳಿಂದ ಇದೆ ನನಗೆ. ಏಕೆಂದರೆ ಅವರು ನಮ್ಮ ಭಗವದ್ಗೀತೆ ತರಗತಿಯಲ್ಲಿ ಒಬ್ಬ ಸಹಪಾಠಿ. ಅವರ ಸರದಿ ಬಂದಾಗ ಶ್ಲೋಕಗಳನ್ನು ಅಚ್ಚುಕಟ್ಟಾಗಿ ಒಪ್ಪಿಸುತ್ತಾರೆ.

ಮೊನ್ನೆ ಒಂದು ದಿನ ಎಲ್ಲರೂ ಶ್ಲೋಕಪಠನವನ್ನೆಲ್ಲ ಬೇಗ ಮುಗಿಸಿ ಆ ದಿನದ ತರಗತಿಯನ್ನು ಒಂದು ಅನೌಪಚಾರಿಕ ಸ್ನೇಹ ಸಮ್ಮಿಲನವಾಗಿಸಿದ್ದೆವು. ಸಹಪಾಠಿ ಗಳೆಲ್ಲರೂ ತಮ್ಮ ತಮ್ಮ ಕಿರುಪರಿಚಯ, ವೃತ್ತಿ-ಪ್ರವೃತ್ತಿ ಆಸಕ್ತಿ-ಅಭಿರುಚಿಗಳನ್ನು ತಿಳಿಸುವ ಕಾರ್ಯಕ್ರಮ. ಝೂಮ್‌ನಲ್ಲಿ ಆನ್‌ಲೈನ್ ತರಗತಿ ಆದ್ದರಿಂದ ವಿಡಿಯೊ ಆನ್ ಮಾಡಿಡುವಂತೆಯೂ ಕೇಳಿಕೊಂಡಿ ದ್ದೆವು. ‘ನನ್ನ ಹೆಸರು ಜಯೇಶ ಅರೋಡಿ. ಮೂಲತಃ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಬೆಳ್ಳಣ್ಣೆ ಎಂಬ ಹಳ್ಳಿಯವನು.

ಈಗ ಬೆಂಗಳೂರಿನಲ್ಲಿರುತ್ತೇನೆ. ಸ್ವ-ಉದ್ಯೋಗ ಮಾಡಿಕೊಂಡು ಇದ್ದೇನೆ. ಹದಿನೈದು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಕೈ-ಕಾಲುಗಳ ಶಕ್ತಿಯನ್ನೆಲ್ಲ ಕಳೆದುಕೊಂಡು, ಈಗ ಗಾಲಿ ಕುರ್ಚಿಯ ಮೇಲೆ ಓಡಾಡು ವವನಾಗಿದ್ದೇನೆ. ವಿಶ್ವವಾಣಿಯಲ್ಲಿ ಪ್ರಕಟವಾದ ಅಂಕಣ ಬರಹವನ್ನೋದಿಯೇ ನಾನೂ ಈ ಭಗವದ್ಗೀತೆ ತರಗತಿಗಳಿಗೆ ಸೇರಿಕೊಂಡಿದ್ದೇನೆ’ ಎಂದು ಅವರು ತನ್ನ ಕಿರುಪರಿಚಯ ಹೇಳಿದರು. ವಿಡಿಯೊ ಆನ್ ಮಾಡಿದ್ದರಿಂದ, ಗಾಲಿಕುರ್ಚಿಯಲ್ಲಿ ಕುಳಿತುಕೊಂಡೇ ಅವರು ಮಾತನಾಡುತ್ತಿದ್ದದ್ದು ಗೊತ್ತಾಗುತ್ತಿತ್ತು. ಮುಖದಲ್ಲಿ ಆತ್ಮವಿಶ್ವಾಸ ತುಂಬಿತುಳುಕುತ್ತಿದ್ದದ್ದೂ ತಿಳಿಯುತ್ತಿತ್ತು. ಆ ಸ್ನೇಹಸಮ್ಮಿಲನದ ಉದ್ದೇಶವಿದ್ದದ್ದೇ ‘ಬರೀ ಶ್ಲೋಕ ಪಠನವೊಂದೇ ಆಗಬಾರದು; ಸಹಪಾಠಿಗಳ ಪರಸ್ಪರ ಪರಿಚಯ ವಿನಿಮಯವೂ ಆಗಬೇಕು; ಜೀವನ ಚರಿತ್ರೆಯೇ ಅಲ್ಲದಿದ್ದರೂ ಸಣ್ಣಕತೆಯ ರೂಪದಲ್ಲಾದರೂ ತಿಳಿದುಕೊಳ್ಳಬೇಕು’ ಎಂಬುದು.

ಅದರ ಮಾರನೆದಿನ ಜಯೇಶ ಅವರು ನನಗೊಂದು ವಾಟ್ಸಪ್ ಸಂದೇಶ ಕಳುಹಿಸಿದರು. ಅದರಲ್ಲೊಂದು ಬ್ಲಾಗ್ ಬರಹದ ಲಿಂಕ್. ಕೆಳಗೆ This is my life story written by my friend ಎಂಬ ಒಕ್ಕಣೆ. ಲೈಫ್ ಸ್ಟೋರಿ ಎಂದಿದ್ದ ಕಾರಣಕ್ಕೇ ಕುತೂಹಲದಿಂದ ಲಿಂಕ್ ಕ್ಲಿಕ್ಕಿಸಿ ಓದಿದೆ. ಅದು, The
Willpower Man ಎಂಬ ಶೀರ್ಷಿಕೆಯ, ಸುಮಾರು ಹತ್ತು ನಿಮಿಷ ಓದಿನ ಇಂಗ್ಲಿಷ್ ಲೇಖನ. ಮನೋಜ್ಞವಾಗಿ, ಹೃದಯಸ್ಪರ್ಶಿಯಾಗಿ ಬರೆದವರು ಮಲ್ಲಿಕಾ ಶೇಷ ಎಂಬುವವರು, ಬ್ಲಾಗ್ ಬರಹಗಾರ್ತಿ. ಬ್ಲಾಗ್‌ನಲ್ಲಿ Role Models ಎಂಬ ವಿಭಾಗದಡಿ ಆ ಲೇಖನವನ್ನು ಸೇರಿಸಿದ್ದಾರೆ.

ಕೊನೆಯಲ್ಲೊಂದು ಫೋಟೊ ಕೂಡ ಇದೆ. ಗಾಲಿಕುರ್ಚಿಯಲ್ಲಿ ಕುಳಿತಿರುವ ಜಯೇಶ, ಪಕ್ಕದಲ್ಲಿ ಅವರ ಪತ್ನಿ ಜ್ಯೋತ್ಸ್ನಾ. ಲೇಖನವನ್ನು ಓದಿ ಮುಗಿಸಿದಾಗ ನನಗೆ ಮೈ ಝುಮ್ಮೆಂದಿತು. ಅಬ್ಬಾ! ಇಂಥವರೊಬ್ಬ ಸ್ಥೈರ್ಯವಂತ, ಮನೋದಾರ್ಢ್ಯದ ವ್ಯಕ್ತಿ ನಮ್ಮ ತರಗತಿಯಲ್ಲಿದ್ದಾರೆ! ಇವರಿಗೆ ನಾನು ಭಗವದ್ಗೀತೆ ಶ್ಲೋಕಪಠನ ಕಲಿಸುವುದಲ್ಲ, ಇವರಿಂದ ನಾನು, ನಾವೆಲ್ಲರೂ, ಬದುಕಿನ ಗೀತೆಯನ್ನು ಕಲಿಯಬೇಕು. ಪ್ರೇರಣೆ ಪಡೆಯಬೇಕು.

ಕೈ-ಕಾಲು ಸರಿ ಇದ್ದೂ ಸೋಮಾರಿಗಳಾಗಿರುವ, ನೆಪ ಹೇಳಿಕೊಂಡು ದಿನ ದೂಡುವ ನಮ್ಮ ಜಡತ್ವವನ್ನು ಇವರಿಂದ ಸ್ಪೂರ್ತಿ ಪಡೆದು ಹೊಡೆದೋಡಿಸಬೇಕು ಎಂದು ತೀರ್ಮಾನಿಸಿದೆ. ಕೂಡಲೇ ವಾಟ್ಸಪ್ ಕರೆಮಾಡಿ ಜಯೇಶರೊಡನೆ ಮಾತನಾಡಿದೆ. ಇಂಗ್ಲಿಷ್‌ನಲ್ಲಿರುವ ಆ ಬರಹವನ್ನು ಕನ್ನಡೀಕರಿಸಿ ನನ್ನ ಅಂಕಣದಲ್ಲಿ ಪ್ರಸ್ತುತಪಡಿಸಿ ಓದುಗ ಮಿತ್ರರೊಡನೆ ‘ನಿಮ್ಮ ಕಥೆ’ ಹಂಚಿಕೊಳ್ಳಬಹುದೇ ಎಂದು ಕೇಳಿದೆ. ಒಂದುಕ್ಷಣ ತುಸು ಹಿಂಜರಿದರೋ ಏನೋ. ಆದರೆ ನನ್ನ ಮೇಲಿನ ವಿಶ್ವಾಸದಿಂದ ತಥಾಸ್ತು ಎಂದರು. ಹಾಗೆ ಇಂಗ್ಲಿಷ್ ಬ್ಲಾಗ್‌ಗಾರ್ತಿ ಮಲ್ಲಿಕಾರಿಗೆ ‘ಡ್ಯೂ ಕ್ರೆಡಿಟ್ಸ್’ ಕೊಡುತ್ತ ಜಯೇಶ ವೃತ್ತಾಂತ ಇಂದು ನಿಮ್ಮ ಓದಿಗೆ. ಇದು ನಮ್ಮಲ್ಲೊಬ್ಬ ಶ್ರೀಸಾಮಾನ್ಯ ಛಲದಂಕಮಲ್ಲನ ಕಥೆ. ನಮಗೆಲ್ಲರಿಗೂ ಸ್ಪೂರ್ತಿ ಮೊಗೆಮೊಗೆದು ಕೊಡುವ ಕಥೆ.

ಇಸವಿ 2003. ಚಿಕ್ಕಮಗಳೂರಿನ ಎಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮುಗಿಸಿ ಜಯೇಶ ಅರೋಡಿ ಹೊರ ಬಂದರು. ಒಬ್ಬ ಒಳ್ಳೆಯ ಕ್ರೀಡಾಳು ಮತ್ತು ಸ್ಮಾರ್ಟ್ ಪರ್ಸನ್ ಎಂದು ಕಾಲೇಜಿನಲ್ಲಿ ಇವರ ಖ್ಯಾತಿ. ಅದಾಗಿ ಕೆಲ ದಿನಗಳಲ್ಲೇ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದರು. ಎರಡು ವರ್ಷಗಳಾದ ಮೇಲೆ ೨೦೦೫ರ ಏಪ್ರಿಲ್‌ನಲ್ಲಿ ಟಾಟಾ ಮೋಟರ್ಸ್ ಕಂಪನಿಯಲ್ಲಿ ಸೇಲ್ಸ್ ಆಂಡ್ ಸರ್ವಿಸ್ ಎಂಜಿನಿಯರ್ ಆಗಿ ಸೇರಿಕೊಂಡರು.

ಬದುಕು ಹಾಗೇ ಮುಂದುವರಿದಿದ್ದರೆ ಅಲ್ಲೇ ಪ್ರಮೋಷನ್ ಪಡೆಯುತ್ತಿದ್ದರೋ, ಬೇರೊಂದು ಕಂಪನಿಗೆ ಸೇರಿ ಗಳಿಕೆ ಹೆಚ್ಚಿಸಿಕೊಳ್ಳುತ್ತಿದ್ದರೋ ಯಾರಿಗೆ ಗೊತ್ತು.
ಆದರೆ ವಿಧಿ ಇವರ ಮೇಲೆ ಬಲೆ ಬೀಸಿತು. 2005ರ ಆಗಸ್ಟ್ 15ರಂದು, ದೇಶವೆಲ್ಲ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದಾಗ, ಜಯೇಶ ರಾಯಚೂರಿಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಮಾರನೆ ದಿನ ಅಲ್ಲೇನೋ ಕಂಪನಿ ಕೆಲಸ ಇತ್ತು. ಕಾರಿಗೆ ಚಾಲಕ ಇದ್ದ; ಇವರು ಪಕ್ಕದ ಸೀಟಲ್ಲಿ ಕುಳಿತುಕೊಂಡು ಮಾರನೆ ದಿನದ ಮೀಟಿಂಗ್ ಬಗೆಗಿನ ಯೋಚನೆಯಲ್ಲೇ ಮಗ್ನ.

ಒಂದು ಲಾರಿಯನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಚಾಲಕ ನಿಯಂತ್ರಣ ತಪ್ಪಿ ಕಾರನ್ನು ರಸ್ತೆಬದಿಯ ಗೋಡೆಗೆ ಗುದ್ದಿದನು. ಆ ರಭಸಕ್ಕೆ ಕಾರ್‌ನಿಂದ
ಹೊರ ಬಿದ್ದ ಜಯೇಶರ ತಲೆ ಮತ್ತು ಬೆನ್ನೆಲುಬಿಗೆ ಗಂಭೀರ ಆಘಾತ. ಕುತ್ತಿಗೆಯ ಕೆಳಭಾಗವೆಲ್ಲ ನಿಷ್ಕ್ರಿಯವಾಗಿ ಹೋಯ್ತು. ತಲೆಯಲ್ಲಷ್ಟೇ ವಿಪರೀತ ನೋವು, ಉಳಿದ ದೇಹವೆಲ್ಲ ಸಂವೇದನೆಯನ್ನೇ ಕಳಕೊಂಡಿತು. ಕಾರಿನ ಚಾಲಕ ಆಶ್ಚರ್ಯಕರ ರೀತಿಯಲ್ಲಿ ಒಂದೆರಡು ತರಚುಗಾಯಗಳಷ್ಟೇ ಆಗಿ ಪಾರು. ಆಗಿನ್ನೂ ಪ್ರeಯಲ್ಲಿದ್ದ ಜಯೇಶ, ಚಾಲಕನಿಗೆ ಮೊಬೈಲ್ ಫೋನ್ ಕೊಟ್ಟು ಕೆಲ ಆಪ್ತಮಿತ್ರರನ್ನು ಕರೆಯಲಿಕ್ಕೆ ಹೇಳಿದರು.

ಅವರೆಲ್ಲ ಬಂದು ಜಯೇಶರನ್ನು ಹತ್ತಿರದ ಲ್ಲಿದ್ದೊಂದು ಆಸ್ಪತ್ರೆಗೆ ಸೇರಿಸಿದರು. ಅಲ್ಲಿನ ವೈದ್ಯರು ಇವರು ಬದುಕುವುದು ಕಷ್ಟವಿದೆಯೆಂದು ಕೈಚೆಲ್ಲಿದರು.
ಅಲ್ಲಿಂದ ಬೆಂಗಳೂರಿಗೆ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದೌಡು. ಅಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಕನಿಷ್ಠ ಪಕ್ಷ ಕೈಗಳಿಗಾದರೂ ತುಸು ಚಲನೆ ಬರುವಂತೆ ಮಾಡಿದರು. ಆಮೇಲೆ ತಿಂಗಳುಗಟ್ಟಲೆ ಫಿಸಿಯೊಥೆರಪಿ ಸೆಷನ್‌ಗಳು. ಆರು ತಿಂಗಳು ಆಯುರ್ವೇದರೀತ್ಯಾ ಮಾಲೀಷು. ಬೆನ್ನಿನ ಮೂಳೆಗಳು ಕೊಂಚ ದೃಡವಾದುವೇ ಹೊರತು ಕೈಕಾಲುಗಳಿಗೆ ಸಂವೇದನೆ ಬರಲೇ ಇಲ್ಲ.

ಅದೊಂದುದಿನ, ಪತ್ರಿಕೆಯೊಂದರಲ್ಲಿ ‘ಸ್ಟೆಮ್ ಸೆಲ್ ಥೆರಪಿ’ ಬಗ್ಗೆ ಓದಿದರು ಜಯೇಶ. ಆಸೆ ಚಿಗುರಿತು. ಆದರೆ ಚಿಕಿತ್ಸೆ ಪಡೆಯಲು ಚೆನ್ನೈಗೆ ಹೋಗಬೇಕು. ಮಾತ್ರವಲ್ಲ ಅದು ತುಂಬ ದುಬಾರಿ ಬಾಬತ್ತು. ಕೈಯಲ್ಲಿ ಅಷ್ಟೆಲ್ಲ ಕಾಸು ಇರಲಿಲ್ಲ. ಜಯೇಶರ ಕೆಲವು ಮಿತ್ರರು ದುಡ್ಡು ಒಟ್ಟು ಮಾಡಿ ಚಿಕಿತ್ಸೆಯ ವೆಚ್ಚಕ್ಕೆ ನೆರ ವಾದರು. ಅಂತೂ ಚಿಕಿತ್ಸೆ ನಡೆಯಿತು. ಅಸ್ಥಿಮಜ್ಜೆಯಿಂದ ಸ್ಟೆಮ್ ಸೆಲ್ಸ್ ತೆಗೆದು ಬೆನ್ನುಮೂಳೆಗೆ ಸೇರಿಸಲಾಯ್ತು. ಸ್ವಲ್ಪ ಫಲಕಾರಿಯೂ ಆಯ್ತು. ಕನಿಷ್ಠ ಮಲಮೂತ್ರ ವಿಸರ್ಜನೆ ಅಂಗಗಳು ಚೇತರಿಸಿಕೊಂಡವು. ಅಪಘಾತವಾದಂದಿನಿಂದ ಸರಿಸುಮಾರು ಎರಡು ವರ್ಷ ಜಯೇಶರಿಗೆ ಹೊರಪ್ರಪಂಚ ಕಟ್‌ಆಫ್ ಆಗಿತ್ತು. ಫಕ್ತಾ ಫಿಸಿಯೊಥೆರಪಿ ಸೆಷನ್‌ಗಳು, ಸೊಟ್ಟ ಶರೀರದೊಡನೆ ಸೆಣಸಾಟ.

‘ಹಾಸಿಗೆ- ವ್ರಣ’ ಆಗದಂತೆ ಜಲಶಯ್ಯೆ. ಅದು ಮತ್ತಷ್ಟು  ವ್ಯಾಕುಲಕಾರಿ. ನಿದ್ದೆ ಬರುವಂತೆ ಗುಳಿಗೆ ಕೊಟ್ಟರೂ ನಿದ್ದೆಯೇ ಇಲ್ಲ. ಅಂಥ ಪರಿಸ್ಥಿತಿಯಲ್ಲೂ ಜಯೇಶ
ದೃತಿಗೆಡಲಿಲ್ಲ. ಕಾಲುಗಳಿಗೆ ಸಂವೇದನೆ ಇಲ್ಲದಿದ್ದರೇನಂತೆ, ಬದುಕಿನಲ್ಲಿ ‘ನನ್ನ ಕಾಲ ಮೇಲೆ ನಾನು ನಿಲ್ಲು’ವಂತಾಗಲು ಏನಾದರೊಂದು ಉದ್ಯೋಗ ಮಾಡ ಲಾರೆನೇ ಎಂಬ ಆಲೋಚನೆ ತಲೆಗೆ ಹೊಕ್ಕಿತು. 2007ರಲ್ಲಿ ಉದ್ಯೋಗ ಬೇಟೆ ಶುರು. ಸ್ಟೆಮ್ ಸೆಲ್‌ಗಳ ಬ್ಯಾಂಕೊಂದರ ಕಸ್ಟಮರ್ ಸಪೋರ್ಟ್
ಎಕ್ಸೆಕ್ಯುಟಿವ್ ಕೆಲಸ ಕೊಡಿಸಿದರು ಒಬ್ಬ ಸಂಬಂಧಿಕರು.

ಮನೆಯಿಂದ, ಗಾಲಿಕುರ್ಚಿಯಲ್ಲಿ ಕುಳಿತಲ್ಲಿಂದಲೇ ಕೆಲಸ. ತಿಂಗಳಿಗೆ 3000 ರುಪಾಯಿ ವೇತನ. ಆ ಕೆಲಸಕ್ಕೆಂದೇ ಇಂಟರ್ ನೆಟ್ ಸಂಪರ್ಕವನ್ನೂ ಜಯೇಶರಿಗೆ ಒದಗಿಸಲಾಯಿತು. ಭೌತಿಕ ಜಗತ್ತಿನಲ್ಲಲ್ಲದಿದ್ದರೂ ಸೈಬರ್ ಲೋಕದಲ್ಲಿ ಜಯೇಶ ಇಣುಕಿ ನೋಡುವಂತಾಯಿತು. ಆಗಿನ್ನೂ ‘ಆರ್ಕುಟ್’ ಜಮಾನಾ (ನಿಮಗೆ ಆರ್ಕುಟ್ ನೆನಪಿದೆಯೇ?). ಅಲ್ಲೊಂದಿಷ್ಟು ದಿವ್ಯಾಂಗರ ಗ್ರೂಪುಗಳಿಗೆ ಜಯೇಶ ಸೇರಿಕೊಂಡರು. ಒಂದು ಗ್ರೂಪಿನ ಅಡ್ಮಿನ್ ಆಗಿದ್ದ ಹರೀಶ ಎಂಬುವವರೊಡನೆ ಸ್ನೇಹ ಕುದುರಿತು, ವಿಶ್ವಾಸ ಚಿಗುರಿತು. ಮಾರ್ಕೆಟಿಂಗ್‌ನ ಅನುಭವ ಜಯೇಶರಿಗೆ ಅಷ್ಟಿಷ್ಟು ಇದ್ದುದರಿಂದ ಟ್ರಾವೆಲ್ ಡೆಸ್ಟಿನೇಷನ್ ಮ್ಯಾನೇಜ್‌ಮೆಂಟ್ ಕಂಪನಿಗೆ ಪಾಲುದಾರರಾಗುವಂತೆ ಹರೀಶರಿಂದ ಆಹ್ವಾನ.

ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿ ವಾಹನನಿರ್ಮಾಣ ಕಂಪನಿಗಳಲ್ಲಿ ಸೇಲ್ಸ್-ಸರ್ವಿಸ್ ಅನುಭವವಿತ್ತೇ ಹೊರತು ಈ ಪ್ರವಾಸೋದ್ಯಮವೆಲ್ಲ ತನ್ನ ಚಹದ ಕಪ್ ಅಲ್ಲ ಎಂದುಕೊಂಡರು ಜಯೇಶ. ಆದರೆ ಹರೀಶ ಬಿಟ್ಟುಕೊಡುವವರಲ್ಲ. ಉತ್ತೇಜನದ ಗಾಳಿಯೂದಿ ಆತ್ಮವಿಶ್ವಾಸದ ಬಲೂನ್ ಉಬ್ಬಿಸಿದರು. ತರಬೇತಿ ಕೊಟ್ಟರು. ‘ರುದ್ರ ಹಾಲಿಡೇಸ್’ ಎಂಬೊಂದು ಕಂಪನಿಯನ್ನು ಖರೀದಿಸಿ ಜಯೇಶರನ್ನು ಪಾರ್ಟ್ನರ್ ಎಂದು ಘೋಷಿಸಿದರು. ದೇಶಾದ್ಯಂತದ ಟ್ರಾವೆಲ್ ಏಜೆನ್ಸಿ ಗಳನ್ನು ಸಂಪರ್ಕಿಸಿ ಅವರೊಡನೆ ವ್ಯವಹಾರ ಜಾಲ ಬೆಳೆಸುವುದು ಅವರಿಗೊಪ್ಪಿಸಿದ ಜವಾಬ್ದಾರಿ.

ಮೊದಲಿಗೆ ತಿರುಪತಿ ಪ್ಯಾಕೆಜ್ ಟೂರ್‌ಗಳ ಬಗ್ಗೆಯಷ್ಟೇ ಗಮನ. ಆರೇಳು ತಿಂಗಳು ಯಾವ ವ್ಯವಹಾರವೂ ಕುದುರಲಿಲ್ಲ. ಆದರೆ ಪಾಲುದಾರರಿಬ್ಬರದೂ ಪಾಸಿಟಿವಿಟಿಯ ಪರಾಕಾಷ್ಠೆ. ಇಂದಲ್ಲದಿದ್ದರೆ ನಾಳೆ ಯಶ ಸಿಕ್ಕೇಸಿಗುತ್ತದೆಂಬ ಆಶಾವಾದ. 2012ರ ಹೊತ್ತಿಗೆ ಸಮಗ್ರ ಭಾರತದ ವ್ಯಾಪ್ತಿಯಲ್ಲಿ ಪ್ಯಾಕೇಜ್
ಟೂರ್‌ಗಳ ಏರ್ಪಾಡು ಮಾಡುವ ಸಾಮರ್ಥ್ಯ ಬೆಳೆಸಿಕೊಂಡ ಕಂಪನಿಗೆ ‘ವೆಲ್ವೆಟ್ ವುಡ್ಸ್ ಹಾಸ್ಪಿಟಾಲಿಟಿ ಪ್ರೈವೆಟ್ ಲಿಮಿಟೆಡ್’ ಎಂದು ಮರುನಾಮಕರಣ. ಒಂದು ಕಾಲದಲ್ಲಿ ಜಯೇಶರ ಫೋನ್ ಕರೆಗಳಿಗೆ ಓಗೊಡದಿದ್ದ ಏಜೆನ್ಸಿಗಳೆಲ್ಲ ಅಷ್ಟು ಹೊತ್ತಿಗೆ ಕ್ರೆಡಿಟ್ ಸಿಸ್ಟಮ್‌ನಲ್ಲೂ ವ್ಯವಹಾರ ಮಾಡುವಷ್ಟು ವಿಶ್ವಾಸ ಬೆಳೆಸಿ ಕೊಂಡವು.

ಮತ್ತೆ, ವೆಲ್ವೆಟ್ ವುಡ್ಸ್ ಕಂಪನಿಗೆ ನೇಮಕವಾದ ಹೊಸ ಉದ್ಯೋಗಿಗಳೆಲ್ಲ ಎಂಥವರು ಗೊತ್ತೇ? ಜಯೇಶರಂತೆಯೇ ದಿವ್ಯಾಂಗರು! ನೋವುಂಡವರಿಗೇ ತಾನೆ
ನೋವಿನ ಅರಿವಿರುವುದು? ಒಬ್ಬರು ಮುಂಬಯಿಯಲ್ಲಿ, ಇನ್ನೊಬ್ಬರು ಬೆಂಗಳೂರಲ್ಲಿ, ಮತ್ತೊಬ್ಬರು ಕೇರಳದಲ್ಲಿ, ಮಗದೊಬ್ಬರು ಹೈದರಾಬಾದ್‌ನಲ್ಲಿ… ಎಲ್ಲರದೂ ತಮ್ಮತಮ್ಮ ಮನೆಯಿಂದಲೇ ಕೆಲಸ. ಆರ್ಕುಟ್ ಸ್ನೇಹಜಾಲದಲ್ಲಿ ಭೇಟಿಯಾದವರೇ ಅವರೆಲ್ಲ. ಎಲ್ಲರಿಗೂ ಜಯೇಶರ ಬಗ್ಗೆ ಅಪಾರ ಅಭಿಮಾನ, ಪ್ರೀತಿ ಗೌರವ. ಜಯೇಶರ ತಾಳ್ಮೆ, ಪ್ರೋತ್ಸಾಹದ ಮಾತುಗಳಿಗೆ ಅವರೆಲ್ಲರೂ ಚಿರಋಣಿಗಳು. ಇಷ್ಟೇ ಅಲ್ಲದೇ ಹೊಸ ಉತ್ಸುಕರಿಗೆ ಫ್ರಾಂಚೈಸ್ ನೆಲೆಯಲ್ಲಿ ಉಚಿತ ತರಬೇತಿ ಕೂಡ.

ಇಂತಿರಲು 2016ರ ಸುಮಾರಿಗೆ ‘ಈಗ ನಿನ್ನ ಬದುಕು ಭದ್ರವಾಗತೊಡಗಿದೆ, ಮದುವೆ ಮಾಡಿಕೊಳ್ಳಬಾರದೇಕೆ?’ ಎಂದು ಹೆತ್ತವರಿಂದ, ಮಿತ್ರರಿಂದ ಜಯೇಶ ರಿಗೆ ಕಿವಿಮಾತು. ಒಂದು ಕೈ ನೋಡೇಬಿಡೋಣ ಎಂದು ಜಯೇಶ ತನ್ನ ಪ್ರೊಫೈಲ್‌ಅನ್ನು ಶಾದಿ ಡಾಟ್ ಕಾಮ್ ಜಾಲತಾಣದಲ್ಲಿ ಪ್ರಕಟಿಸಿದರು. ಅಂಗವೈಕಲ್ಯ ವನ್ನೇನೂ ಮುಚ್ಚಿಟ್ಟಿದ್ದಲ್ಲ. ಎಲ್ಲ ವನ್ನೂ ವಿವರಿಸಿದ್ದರು. ಜ್ಯೋತ್ಸ್ನಾ ಎಂಬಾಕೆ, ಎನಾಟಮಿಯಲ್ಲಿ ಎಂಎಸ್ಸಿ ಓದಿದವಳು, ಆಸಕ್ತಿ ತೋರಿದಳು! ಆನ್‌ಲೈನ್‌ನಲ್ಲೇ ಚಾಟಿಂಗ್ ಮೂಲಕ ಒಂದಿಷ್ಟು ವಿಚಾರ ವಿನಿಮಯ ಆದಮೇಲೆ ಜಯೇಶರಲ್ಲಿದ್ದ ಅದಮ್ಯ ಉತ್ಸಾಹ ಧೈರ್ಯ ಸ್ಥೈರ್ಯಗಳನ್ನು ಜ್ಯೋತ್ಸ್ನಾ ಅಪಾರವಾಗಿ ಮೆಚ್ಚಿಕೊಂಡರು.

ಎನಾಟಮಿ ಓದಿದ್ದರಿಂದ ಜಯೇಶರ ಶರೀರ ಸಮಸ್ಯೆಗಳನ್ನು ಸಂಪೂರ್ಣ ಅರ್ಥಮಾಡಿಕೊಂಡರು. ಹೆತ್ತವರೊಂದಿಗೆ ಜಗಳಾಡಿ ಕೊನೆಗೂ ಅವರನ್ನು ಒಪ್ಪಿಸಿದ
ಜ್ಯೋತ್ಸ್ನಾ ಜಯೇಶರ ‘ಕೈ ಹಿಡಿದರು’. ಅದುವರೆಗೆ ನಿಷ್ಕ್ರಿಯವಾಗಿದ್ದ ಕೈಕಾಲುಗಳಿಗೆ ಆಸರೆಯಾದರು. ಸತತ ನೋವಿನ ಧಗೆಯನ್ನುಂಡಿದ್ದ ಜಯೇಶರ ಮೈ-
ಮನಗಳಿಗೆ ಅಕ್ಷರಶಃ ಬೆಳದಿಂಗಳ ತಂಪನ್ನು ಸಿಂಪಡಿಸಿದರು ಜ್ಯೋತ್ಸ್ನಾ. ಅಷ್ಟಾಗಿ ಆಕೆಯೂ ಹಿಂದೊಮ್ಮೆ ವೇಗಗತಿಯ ರೈಲನ್ನೇರುವಾಗ ಆಯತಪ್ಪಿ ಹಳಿಗಳ
ಮೇಲೆ ಬಿದ್ದು ಬೆರಳುಗಳನ್ನು ಕತ್ತರಿಸಿಕೊಂಡು ಪ್ಲಾಸ್ಟಿಕ್ ಸರ್ಜರಿಯಿಂದ ರಿಪೇರಿ ಮಾಡಿಸಿಕೊಂಡ ಗಟ್ಟಿಗಿತ್ತಿ!

ಅಪಘಾತವಾದಾಗಿನಿಂದ ಒಂದೆರಡು ವರ್ಷ ಜಯೇಶರಿಗೆ ಒಂಥರದ ಖಿನ್ನತೆ ತೀವ್ರವಾಗಿ ಪದೇ ಪದೇ ಕಾಡುತ್ತಿತ್ತಂತೆ. ‘ಆಯ್ಯೋ ನಾನು ಆವತ್ತು ಸೀಟ್ ಬೆಲ್ಟ್ ಹಾಕ್ಕೊಂಡಿದ್ದರೆ ಇಷ್ಟೆಲ್ಲ ಅನಾಹುತವಾಗುತ್ತಿರಲಿಲ್ಲ!’ ಎಂದು ಬಾರಿಬಾರಿಗೂ ಮನಸ್ಸಿಗೆ ಬಾಧೆ. ಹಾಗಾದಾಗೆಲ್ಲ ಟಿವಿ ನೋಡಿಯೋ ಸಂಗೀತ ಕೇಳಿಯೋ ಮನಸ್ಸನ್ನು ಬೇರೆಡೆಗೆ ಡೈವರ್ಟ್ ಮಾಡುವ ಪ್ರಯತ್ನ. ಆಗ ಆರ್ಕುಟ್‌ನಲ್ಲಿ ಹರೀಶ ಭೇಟಿಯಾದರು.

ಅವರು ದೀಪಕ್ ಮಲಿಕ್ ಮತ್ತು ನವೀನ್ ಗುಲಿಯಾ ಎಂಬುವ ಇನ್ನೂ ಇಬ್ಬರು ಸಮಾನದುಃಖಿಗಳನ್ನು ಪರಿಚಯಿಸಿದರು. ಅವರ ಘೋರ ಪರಿಸ್ಥಿತಿಯೆದುದು ತನ್ನದು ಏನೂ ಅಲ್ಲ ಎಂಬ ಸಮಾಧಾನ ಜಯೇಶರಿಗೆ. ಅದಕ್ಕೇ ಅಲ್ಲವೇ ಹೇಳುವುದು ‘ಚಪ್ಪಲಿ ಇಲ್ಲ ಎಂದು ಕೊರಗುವವನು ಕಾಲೇ ಇಲ್ಲದವನನ್ನು ಕಂಡು ಸಮಾಧಾನಪಟ್ಟುಕೊಳ್ಳಬೇಕು’ ಅಂತ? ಅಂತೆಯೇ ತನ್ನ ಹೆತ್ತವರು, ಸ್ನೇಹಿತರು, ಈಗ ಅರ್ಧಾಂಗಿ ಜ್ಯೋತ್ಸ್ನಾ…ಎಲ್ಲರೂ ಸೇರಿ ಕೊಟ್ಟಿರುವ ಪ್ರೀತಿ ಪ್ರೋತ್ಸಾಹ ಗಳನ್ನು ಜಯೇಶ ಸದಾ ಸ್ಮರಿಸುತ್ತಾರೆ.

ಕಾಲೇಜಿನಲ್ಲಿರುತ್ತ ಕ್ರೀಡಾಳುವಾಗಿದ್ದದ್ದೂ ಅವರೊಳಗಿನ ಕ್ರೀಡಾಪಟುವು ಸೋಲು-ಗೆಲುವುಗಳನ್ನು ಕ್ರೀಡಾಸ್ಪೂರ್ತಿಯಿಂದ ಸ್ವೀಕರಿಸುವುದನ್ನು ಕಲಿಸಿದೆ.
ಪ್ರವಾಸೋದ್ಯಮದ ಕಂಪನಿಯಲ್ಲಿ ಪಾಲುದಾರನಾದ ಮೇಲಂತೂ ಕೆಲಸದಲ್ಲೇ ವ್ಯಸ್ತನಾಗುವುದರಿಂದ ಅಂಗವೈಕಲ್ಯದ ಬಗ್ಗೆ ಕೊರಗಲಿಕ್ಕೆ ಸಮಯವೇ ಇಲ್ಲ.
ಉದ್ಯಮ ಚೆನ್ನಾಗಿಯೇ ಲಾಭದ ಹಾದಿಯಲ್ಲೇ ಸಾಗಿರುವುದರಿಂದ ಆ ನಿಟ್ಟಿನಲ್ಲೂ ಆತ್ಮವಿಶ್ವಾಸದ ಮಟ್ಟ ಕಡಿಮೆಯಾದದ್ದೇ ಇಲ್ಲ. ಛಲವೊಂದಿದ್ದರೆ, ಜೀವ ಮತ್ತು
ಜೀವನದ ಮೇಲೆ ಅಗಾಧ ಪ್ರೀತಿಯಿದ್ದರೆ, ದೈಹಿಕ ಇತಿಮಿತಿಗಳಾವುವೂ ಅಡ್ಡಿಯಾಗಲಾರವು ಎನ್ನುವ ಜಯೇಶ ಈಗ ತನ್ನ ಹೆಚ್ಚಿನ ಚಟುವಟಿಕೆಗಳನ್ನೆಲ್ಲ ತಾನೇ
ಮಾಡಿಕೊಳ್ಳಬಲ್ಲವರಾಗಿದ್ದಾರೆ.

ಒಂದೊಮ್ಮೆ ಮೊಬೈಲ್ ಫೋನ್‌ಅನ್ನು ಮೂಗಿನಿಂದ ಆಪರೇಟ್ ಮಾಡುತ್ತಿದ್ದವರು ಈಗ ಕೈಗಳಲ್ಲಿ ಕಪ್, ತಟ್ಟೆ, ಚಮಚ ಹಿಡಿದುಕೊಳ್ಳಬಲ್ಲವರಾಗಿದ್ದಾರೆ. ಕೀಬೋರ್ಡ್‌ನಲ್ಲಿ ಟೈಪ್ ಮಾಡಬಲ್ಲವರಾಗಿದ್ದಾರೆ. ಎದ್ದು ನಡೆಯಲಾರೆ ಎನ್ನುವುದೊಂದನ್ನು ಬಿಟ್ಟರೆ ಎಲ್ಲ ಕೆಲಸಗಳನ್ನು ನಾನೇ ಮಾಡಬಲ್ಲೆ ಎಂದು ಪುಟಿಯುವ ಚೈತನ್ಯ ಅವರಲ್ಲಿದೆ. ಸ್ವಯಂಚಾಲಿತ ಗಾಲಿಕುರ್ಚಿಯ ನೆರವಿಂದ ಉದ್ಯಾನಕ್ಕೆ ವಾಯುವಿಹಾರಕ್ಕೆ ಹೋಗುತ್ತಾರೆ. ವಿಶೇಷ ವಿನ್ಯಾಸದ ಮಾರುತಿ ಒಮ್ನಿಯಲ್ಲಿ ಡ್ರೈವ್ ಕೂಡ ಮಾಡುತ್ತಾರೆ. ಈತ ಬದುಕುಳಿಯಲಾರ ಎಂದು ವೈದ್ಯರು ಕೈಚೆಲ್ಲಿದ್ದಾಗ ಕೆಲ ಬಂಧುಮಿತ್ರರೂ ಆಸೆಬಿಟ್ಟಿದ್ದರಂತೆ. ಈಗ ಅವರೆಲ್ಲ ಮೂಗಿನ
ಮೇಲೆ ಬೆರಳಿಡುವಂತಾಗಿದೆ ಕ್ರಿಯಾಶೀಲ ಜಯೇಶರನ್ನು ನೋಡಿ.

ಅಂಕಣ ಬರಹದೊಟ್ಟಿಗೆ ಪ್ರಕಟಣೆಗೆ ಒಂದು ಒಳ್ಳೆಯ ಭಾವಚಿತ್ರವೂ ಬೇಕಲ್ಲ? ಬ್ಲಾಗ್‌ನಲ್ಲಿದ್ದದ್ದನ್ನೇ ಬಳಸಲೇ?’ ಎಂದು ನಾನು ಜಯೇಶರನ್ನು ಕೇಳಿದೆ. ‘ಅದು ಬೇಡ, ಜ್ಯೋತ್ಸ್ನಾಗೆ ಫೋಟೊದಲ್ಲಿ ಕಾಣಿಸಿಕೊಳ್ಳುವುದು ಇಷ್ಟವಿಲ್ಲ. ಅದಕ್ಕಿಂತ ಈ ಚಿತ್ರ ಬಳಸಿ’ ಎಂದು ಬೇರೊಂದು ಚಿತ್ರವನ್ನು ವಾಟ್ಸಪ್‌ನಲ್ಲಿ ಕಳುಹಿಸಿದರು. ಅದರಲ್ಲಿ ಜಯೇಶ ಗಾಲಿಕುರ್ಚಿಯಲ್ಲೇ ಕುಳಿತಿದ್ದಾರೆ. ಮಡಿಲಲ್ಲಿ ಅವರ ನೆಚ್ಚಿನ ನಾಯಿ ‘ಕೊನ್ನ’ ಇದೆ (ಆ ಹೆಸರಿನ ಅರ್ಥವೇನು ಎಂದು ಕೇಳಿದ್ದಕ್ಕೆ ಅರ್ಥ ಏನಿಲ್ಲ; ಚಿನ್ನ ರನ್ನ ಅಂತೆಲ್ಲ ಪ್ರೀತಿಯಿಂದ ಕರೆಯುವಂತೆ ಒಮ್ಮೆ ಕೊನ್ನ ಎಂದೆವು, ಅದೇ ಹೆಸರು ಪರ್ಮನೆಂಟಾಯ್ತು.

ಕೆಲವರು ಅವಳನ್ನು ಸುಂದರಿ ಎಂದು ಕೂಡ ಕರೆಯುತ್ತಾರೆ. ನನ್ನ ಮುದ್ದಿನ ಮಗಳು ಅವಳು ಎಂದು ನಾಯಿಯ ಬಗ್ಗೆ ತುಂಬಾ ಪ್ರೀತಿ ತೋರಿದರು. ಅವರ ವಾಟ್ಸಪ್ ಡಿಪಿಯೂ ಅದೇ ನಾಯಿಯ ಮುದ್ದಾದ ಚಿತ್ರ. ಅವರ ಪತ್ನಿಯ ಕಸಿನ್ ರಚಿಸಿದ್ದಂತೆ). ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಪಶ್ಚಿಮಘಟ್ಟ ಗಿರಿಶಿಖರಗಳು. ಇಲ್ಲೊಂದು ಅದ್ಭುತವಾದ ಕಾಕತಾಳೀಯ ಪ್ರಸಂಗವನ್ನೂ ಹೇಳಿ ಈ ಕಥಾನಕವನ್ನು ಮುಗಿಸುತ್ತೇನೆ. ಭಗವದ್ಗೀತೆ ತರಗತಿಯಲ್ಲಿ ಸ್ನೇಹಸಮ್ಮಿಲನ ನಡೆಸಿದ ಹಿಂದಿನ ದಿನವಷ್ಟೇ ಇನ್ನೊಬ್ಬ ಸಹಪಾಠಿ ಮಂಜುನಾಥ ಗುಬ್ಬಿ ಅವರು ‘ನನಗಿವತ್ತು ಶ್ಲೋಕ ಹೇಳಲಿಕ್ಕೆ ಆಗುವುದಿಲ್ಲ, ಮ್ಯೂಟ್ ಮಾಡ್ಕೊಂಡು ಸುಮ್ನೆ ಕೇಳ್ತಿರ್ತೀನಿ’ ಎಂದು ಮೆಸೇಜ್ ಕಳುಹಿಸಿದ್ದರು.

ತಮಾಷೆಗಾಗಿ ಅವರಿಗೆ ‘ಮ್ಯೂಟಂ ಕರೋತಿ ವಾಚಾಲಂ… ಎಂದು ನಿಮ್ಮನ್ನು ಅನ್‌ಮ್ಯೂಟ್ ಮಾಡಲೇ?’ ಎಂದು ಕಿಚಾಯಿಸಿದ್ದೆ. ಆ ‘ಮೂಕಂ ಕರೋತಿ
ವಾಚಾಲಂ…’ ಮೂಲ ಶ್ಲೋಕದ ಎರಡನೆಯ ಸಾಲು ‘ಪಂಗುಂ ಲಂಘಯತೇ ಗಿರಿಂ…’ ಮಾರನೆದಿನವೇ ಸಾಕಾರವಾಗುತ್ತದೆ ಎಂದು ನನಗೆ ಕನಸು ಮನಸಲ್ಲೂ
ಕಲ್ಪನೆಯಿರಲಿಲ್ಲ. ಚಿಕ್ಕಮಗಳೂರಿನ ಗಿರಿಶಿಖರಗಳ ಮುಂದೆ ಗಾಲಿಕುರ್ಚಿಯಲ್ಲಿ ಕುಳಿತ, ಚೈತನ್ಯ-ಛಲಗಳ ಬುಗ್ಗೆಯೇ ಆಗಿರುವ, ಜಯೇಶರ ಚಿತ್ರವನ್ನು ನೋಡಿ ದಾಗ ‘ಪಂಗುಂ ಲಂಘಯತೇ ಗಿರಿಂ’ ಎನ್ನುವಂತಾಗಲು ಮಾಧವನ ಕೃಪೆಯೊಂದೇ ಅಲ್ಲ, ಮನಸ್ಸಿನ ಗಟ್ಟಿತನವೂ ಎಷ್ಟೊಂದು ಕೆಲಸ ಮಾಡಿದೆ ಎಂದೆಣಿಸಿ ಬೆರಗಿನಿಂದ ನೋಡುತ್ತಲೇ ಇದ್ದೆ !