ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
ಇಂದು ಟಿವಿ ವಾಹಿನಿಗಳಲ್ಲಿ ಗಾಯನ ಸ್ಪರ್ಧೆಗಳ ವೇದಿಕೆಗಳಲ್ಲಿ ಅನೇಕ ಪ್ರತಿಭಾವಂತ ಗಾಯಕರುಗಳ ಪರಿಚಯವಾಗುತ್ತಿದೆ.
ಒಬ್ಬರಿಗಿಂದ ಒಬ್ಬರು ಶ್ರಮಪಟ್ಟು ಹಾಡಿ ತೀರ್ಪುಗಾರರ ಮನಗೆದ್ದು ಫಿನಾಲೆ ವೇದಿಕೆಗಳಲ್ಲಿ ಪ್ರಶಸ್ತಿ ಗೆಲ್ಲುವುದನ್ನು ನೋಡುತ್ತೇವೆ. ಹೀಗೆ ಹೊರಬಂದ ಗಾಯಕರುಗಳಿಗೆ ಇರುವ ಕೊನೆಯ ಆಸೆ ಎಂದರೆ ಅದು ಸಿನಿಮಾಗಳಿಗೆ ಹಾಡುವುದು ಮತ್ತು ಪ್ರಸಿದ್ಧ ನಟನಟಿಯರಿಗೆ ಹಿನ್ನಲೆ ದನಿಯಾಗಿ ಹಾಡುವುದೇ ತಮ್ಮ ಗಾಯನ ಪ್ರತಿಭೆಯ ಸಾರ್ಥಕ ಉತ್ತುಂಗ ಎಂದೇ ಭಾವಿಸುತ್ತಾರೆ.
ಆದರೆ ಅದು ಎಲ್ಲರಿಗೂ ಸಿದ್ಧಿಸುವುದಿಲ್ಲ ಎಂಬುದೂ ಸತ್ಯ. ಅದು 1966 ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಸಾಮಾನ್ಯ ಬ್ರಾಹ್ಮಣ ಕುಟುಂಬದ ಸಾಂಬಮೂರ್ತಿ ಮತ್ತು ಶಕುಂತಲಮ್ಮ ದಂಪತಿಗಳಿಗೆ ಜನಿಸಿದ ಮಗ ಶ್ರೀಪತಿ ಪಂಡಿತಾರಾಧ್ಯುಲ ಬಾಲ ಸುಬ್ರಹ್ಮಣ್ಯಂ ತನಗೆ ಪರಂಪರಾಗತವಾಗಿ ಬಂದ ಸಂಗೀತದ ಸೆಳೆತದಿಂದ ಗಾಯನವನ್ನು ಮೈಗೂಡಿಸಿಕೊಂಡು ಅದರ ಸಾರ್ಥಕತೆಯ ಘಳಿಗೆಗೆ ಕಾಯುತ್ತಿರುವಾಗಲೇ ಅಂದಿನ ತೆಲುಗಿನ ಪ್ರಸಿದ್ದ ಸಂಗೀತ ಸಂಯೋಜಕ ಎಂ. ರಂಗರಾವ್ ಅವರ
ಗರಡಿಗೆ ಸಿಗುತ್ತಾರೆ. ಅದೆಂಥ ಅಕ್ಷಯ ಘಳಿಗೆಯೋ 1966 ಡಿಸೆಂಬರ್ 15 ರಂದು ಎಂ. ರಂಗರಾವ್ ಸಂಗೀತ ನೀಡುತ್ತಿದ್ದ ಶ್ರೀ ಶ್ರೀ ಮರ್ಯಾದ ರಾಮಣ್ಣ ತೆಲುಗು ಚಿತ್ರಕ್ಕೆ ಆ ಯುವಕನಿಂದ ಒಂದು ಹಾಡನ್ನು ಹಾಡಿಸುತ್ತಾರೆ. ಆಗ ಬಾಲು ಅವರಿಗೆ 21ರ ಹರೆಯ.
ಇದು ಅವರ ಪ್ರಪ್ರಥಮ ಸಿನಿಮಾ ಹಾಡಾಗಿ ದಾಖಲಾಗುತ್ತದೆ. ಅದಾಗಿ ಎಂಟು ದಿವಸಕ್ಕೆ ಅದೇ ರಂಗರಾವ್ ಅವರನ್ನು ಕನ್ನಡ ಸಿನಿಮಾ ಲೋಕ ಸ್ವಾಗತಿಸುತ್ತದೆ. ಇಲ್ಲಿ ಅಂದಿನ ಹೆಸರಾಂತ ನಿರ್ದೇಶಕ ಎಂ.ಆರ್.ವಿಠ್ಠಲ್ ನಿರ್ದೇಶನದಲ್ಲಿ ನಕ್ಕರೆ ಅದೇ ಸ್ವರ್ಗ ಹೆಸರಿನ ಚಲನಚಿತ್ರದ ನಿರ್ಮಾಣದ ತಯಾರಿ ನಡೆದಿತ್ತು. ಇದರ ನಿರ್ಮಾಪಕರು ಅನೇಕ ಯಶಸ್ವಿ ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿದ ಶ್ರೀಕಾಂತ್ ನಹಾತ ಮತ್ತು ಶ್ರೀಕಾಂತ್ ಪಟೇಲ್ ಎಂಬ ಉತ್ತರಭಾರತ ಮೂಲದ ಜೋಡಿ. ನಕ್ಕರೆ ಅದೇ ಸ್ವರ್ಗ ಚಿತ್ರದಲ್ಲಿ ಜಯಂತಿ ಮತ್ತು ನರಸಿಂಹರಾಜು ಹೊರತುಪಡಿಸಿದರೆ ಮಿಕ್ಕವರೆಲ್ಲರೂ ಹೊಸಬರಾಗಿದ್ದರು. ಅದಾಗಲೇ ಕುಮಾರತ್ರಯರ ಕಾಲವಾಗಿತ್ತು.
ರಾಜಕುಮಾರ್ ಉದಯಕುಮಾರ್ ಕಲ್ಯಾಣಕುಮಾರ ಅವರ ಸುವರ್ಣದಿನಗಳಾಗಿತ್ತು. ಅಂಥ ಖ್ಯಾತನಟರನ್ನು ಬಿಟ್ಟು ಬರಿಯ ನರಸಿಂಹರಾಜು ಅವರನ್ನೇ ಪ್ರಮುಖ ವಾಗಿಸಿಕೊಂಡು ನಿರ್ಮಾಣ ಆರಂಭಿಸಿದ ಚಿತ್ರಕ್ಕೆ ತೆಲುಗಿನಿಂದ ಎಂ.ರಂಗರಾವ್
ಅವರ ಪಾದಾರ್ಪಣೆಯಾಗಿ ಅವರ ಜತೆಗೆ ಅಪರಿಚಿತ ತರುಣ ಗಾಯಕ ಬಾಲಸುಬ್ರಮಣ್ಯಂ ಅವರ ಪ್ರವೇಶವೂ ಆಗಿತ್ತು. ಆ ಚಿತ್ರಕ್ಕೆ ವಿಜಯನಾರಸಿಂಹ ಅವರ ಕನಸಿದೋ ನನಸಿದೋ ಎಂಬ ಸಾಹಿತ್ಯಕ್ಕೆ ದನಿಯಾದ ಬಾಲು, ಮುಂದೆ ತಾನು ತನ್ನ ಜೀವನದ
ಎರಡನೇ ಗೀತೆಯ ಪಲ್ಲವಿಯ ಮೊದಲ ಈ ಎರಡು ಪದಗಳನ್ನು ಹೃದಯದಲ್ಲಿರಿಸಿಕೊಂಡೇ ಭಾರತದ ಸಂಗೀತ ಕ್ಷೇತ್ರದಲ್ಲಿ ದೈತ್ಯರಾಗಿ ಬೆಳೆದುಬಿಟ್ಟರು. ಅವರ ಪ್ರತಿಯೊಂದು ಘಳಿಗೆಯೂ ನನಸಾಗೇ ಸಾಗಿಬಂತು.
ಹೀಗೆ ನಮ್ಮ ದೇಶದ ಸಾಹಿತ್ಯ ಸಂಗೀತ ಪರಂಪರೆಯನ್ನು ಮನೆಮನೆಗೆ ತಲುಪಿಸಿದ ನವರಸಗಾಯಕ ಸರಸ್ವತಿಪುತ್ರ ಎಸ್.ಪಿ. ಬಾಲಸುಬ್ರಹ್ಮಣ್ಯಂ. ಇಂದು ಭಾರತರತ್ನ ಪ್ರಶಸ್ತಿಗೆ ಹೊಳಪು ನೀಡುವ ಎಲ್ಲಾ ಸಾಧನೆಗಳನ್ನು ಮಾಡಿರುವ ಎಸ್‌ಪಿಬಿ ಅವರು
ಅಂದು ತಮ್ಮ ಪ್ರಥಮ ಹಾಡನ್ನು ಯಾವ ನಾಯಕ ನಟನಿಗೆ ಹಿನ್ನೆೆಲೆ ಗಾಯಕರಾಗಿ ಹಾಡಿದರು ಎಂದು ತಿಳಿದುಕೊಳ್ಳುವ ಕುತೂಹಲವಿದ್ದರೆ, ಅದು ಅಂದಿನ ಯಾವ ಹೆಸರನ್ನೂ ಗಳಿಸದ ಅರುಣ್‌ಕುಮಾರ್ ಎಂಬ ನವನಟ. ಅಂದಹಾಗೆ ಈ ಅರುಣ್‌ಕುಮಾರ್ ಮುಂದೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿ ಅದರಿಂದ ಹೊರಬಂದು ಇಡೀ ಕನ್ನಡನಾಡು ಎಂದೆಂದೂ ಮರೆಯಲಾಗದ ಹರಿಕಥಾ ಪರಂಪರೆಯನ್ನು ಬೆಳಗಿಸಿದ ವಿದ್ವಾನ್ ಗುರುರಾಜುಲು ನಾಯ್ಡು ಎಂದರೆ
ನಂಬಲೇಬೇಕು. ಕಾಕತಾಳೀಯ ವೆಂದರೆ ಎಸ್‌ಪಿಬಿ ಅವರ ತಂದೆ ಸಾಂಬಮೂರ್ತಿ ಯವರು ತೆಲುಗಿನ ಪ್ರಸಿದ್ಧ ಹರಿಕಥಾ ವಿದ್ವಾಂಸರಾಗಿದ್ದರು.
ಅಂಥ ತಂದೆಯ ಮಗನಾದ ಎಸ್‌ಪಿಬಿ ಅವರ ಮೊದಲ ಗಾಯನಕ್ಕೆ ಅಭಿನಯಿಸಿದ ಅರುಣ ಕುಮಾರ ಅವರು ಮುಂದೆ ಜೀವಿತಾವಧಿ ಹರಿಕಥಾ ವಿದ್ವಾಂಸರಾದದ್ದು ದೈವಲೀಲೆಯೋ ಏನೋ. ಒಟ್ಟಿನಲ್ಲಿ ಎಸ್‌ಪಿಬಿ ಅವರು ಅಲ್ಲಿಂದ ಆರಂಭಿಸಿದ ಪಯಣ ಅವರನ್ನು ಇಂದು ದೇಶದ ಇತಿಹಾಸ ಪುರುಷನನ್ನಾಗಿಸಿದೆ ಎಂದರೆ ಖಂಡಿತಾ ಅತಿಶಯೋಕ್ತಿಯಲ್ಲ. ಹದಿನೆಂಟು ಭಾಷೆಯಗಳನ್ನೊಳಗೊಂಡು ಬರೋಬ್ಬರಿ ನಲವತ್ತು ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ದನಿಯಾಗಿ ಗಿನ್ನಿಸ್ ದಾಖಲೆ ಹೊಂದಿರುವ ಈ ಗಾಯನವಿರಾಟ ಈ ಶತಮಾನದ ಮೇರುಪುರುಷನೇ ಹೌದು. ಜತೆಗೆ ಪ್ರಾದೇಶಿಕ ಭಾಷೆಗಳಲ್ಲಿ ಭಕ್ತಿಗೀತೆಯ ಧ್ವನಿಸುರುಳಿಗಳು, ಟಿವಿ ಧಾರವಾಹಿಗಳು, ರಸಮಂಜರಿಗಳು, ಸಂಗೀತ ಸಂಯೋಜನೆ, ನಟನೆ ಹೀಗೆ ಎಸ್‌ಪಿಬಿಯವರಲ್ಲಿರುವ ಕ್ರಿಯಾಶೀಲತೆ ಅವರ ಆರೋಗ್ಯವನ್ನು ಗಟ್ಟಿಗೊಳಿಸುತ್ತಿತ್ತು.
ಎಸ್‌ಪಿಬಿ ಯವರು ಆರಂಭದಲ್ಲಿ ಕನ್ನಡ ಸಾಹಿತ್ಯವನ್ನು ತೆಲುಗಿನಲ್ಲಿ ಬರೆದುಕೊಂಡು ಹಾಡುತ್ತಾ ಮುಂದೆ ಕನ್ನಡವನ್ನೇ ಓದಿಕೊಂಡು ಹಾಡಲಾರಂಭಿಸಿದವರು. ಕನ್ನಡದ ಒಂದೊಂದು ಪದದ ತೂಕವನ್ನು ಅರಿತು ಅದಕ್ಕೆ ತಕ್ಕಂತೆ ತಮ್ಮ ಭಾವವನ್ನು ತುಂಬುತ್ತಾ ಹಾಡಲಾರಂಭಿಸಿದ ಎಸ್‌ಪಿಬಿಯವರು ದೇಹಕೆ ಉಸಿರೇ ಸದಾ ಭಾರಾ ಇಲ್ಲಾ ಆಧಾರ, ಮಾನವೇ ನಮ್ಮ ಆಸ್ತಿಯಮ್ಮ ಒಡವೆ ಬಂಗಾರ, ಎಲ್ಲಾರ್ ಕಾಯೋದ್ಯಾವ್ರೆ ನೀನು ಎಲ್ಲಿ ಕುಂತ್ತಿದ್ದೀ, ನೋಟದಾಗೆ ನಗೆಯಬೀರಿ, ಜನ್ಮ ನೀಡಿದ ಭೂತಾಯಿಯ ನಾ ಹೇಗೆ ಇಂದು ಮರೆಯಲಿ, ಒಲುಮೆ ಸಿರಿಯಾ ಕಂಡೂ, ದುಡ್ಡು ಇದ್ರೆೆ ಜಗವೆಲ್ಲಾ, ಬರ್ತಾಳೆ ಕಂಚಿನ ರಾಣಿ, ದೇವಾ ಮಹದೇವಾ, ಶಂಕರ ಶಶಿಧರ ಗಜಚರ್ಮಾಂಭರ ಹೀಗೆ ನವರಸಗಳುಳ್ಳ ಎಲ್ಲಾ ಶೈಲಿಯ ಗೀತೆಗಳನ್ನು ಆಯಾ ಸನ್ನಿವೇಷಗಳಿಗೆ, ಆಯಾ ಪದಗಳಿಗೆ, ಆಯಾ ನಟರ ಮ್ಯಾನರಿಸಂಗೆ ಹೊಂದುವಂತೆ ಹಾಡಿರುವುದು ಅವರ ಗಾಯನ ಪ್ರತಿಭೆಗೆ ಸಾಕ್ಷಿ.
ಎಸ್‌ಪಿಬಿಯವರ ಮತ್ತೊಂದು ವೈಶಿಷ್ಟ್ಯವೆಂದರೆ ಒಬ್ಬೊಬ್ಬ ನಟನಿಗೆ ಒಂದೊಂದು ಶೃತಿಯಲ್ಲಿ ಸ್ವರಗಳಲ್ಲಿ ಹಾಡುವುದು.
ಉದಾಹರಣೆಗೆ ವಿಷ್ಣುವರ್ಧನ್ ಅವರಿಗೆ ಅವರದೇ ಅಭಿನಯ ಭಾಷೆಗೆ ಒಂದು ಶೈಲಿಯಲ್ಲಿ ಹಾಡಿದರೆ, ಅಂಬರೀಷ್ – ಶ್ರೀನಾಥ್ – ಅನಂತನಾಗ್- ಶಿವರಾಜ್ ಕುಮಾರ್ ಅವರಿಗೇ ಬೇರೆಬೇರೆ ಸ್ವರಶೃತಿಯಲ್ಲಿ ಹಾಡುತ್ತಿದ್ದರು. ಹೀಗಾಗಿ ನಾವು ಒಂದು ಗೀತೆಯನ್ನು
ರೇಡಿಯೋದಲ್ಲಿ ಕೇಳಿದರೆ ಅದು ಇಂಥ ನಾಯಕನದ್ದೇ ಎಂದು ಮನಸ್ಸಿಗೆ ಬರುತ್ತಿತ್ತು. ಕುಚಿಕು ಕುಚಿಕು ಹಾಡಿನಲ್ಲಿ ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರಿಗೆ, ಗಡಿಬಿಡಿಗಂಡ ಚಿತ್ರದ ನೀನು ನೀನೆ ಇಲ್ಲಿ ನಾನು ನಾನೇ ಗೀತೆಯಲ್ಲಿ ರವಿಚಂದ್ರನ್ ಮತ್ತು ನಾಗೇಶ್ ಅವರಿಗೆ ಹಾಡಿರುವುದು ಮತ್ತು ಕನ್ನಡದಲ್ಲಿ ಮೊದಲ ರಾಷ್ಟ್ರಪ್ರಶಸ್ತಿ ದೊರಕಿಸಿಕೊಟ್ಟ ಉಮಂಡ
ಘಮಂಡು ಗೀತೆಯಲ್ಲಿನ ಗುರುಶಿಷ್ಯರಿಗೆ ಎರಡೆರಡು ದನಿಗಳಲ್ಲಿ ಹಾಡಿರುವುದು ಅವರಿಗೆ ಅವರೇ ಸಾಟಿ. ಇಂಥ ವಿಶೇಷತೆಗಳನ್ನು ಅರಿತ ಚಿತ್ರರಂಗ ಇವರನ್ನು ಎಷ್ಟು ಅವಲಂಬಿಸಿತ್ತೆಂದರೆ 1981ರಲ್ಲಿ ಉಪೇಂದ್ರ ಕುಮಾರ್ ಅವರ ಸಂಗೀತ ಸಂಯೋಜನೆಯಲ್ಲೇ ಬೆಳಗ್ಗೆ ಒಂಬತ್ತರಿಂದ ರಾತ್ರಿ ಒಂಬತ್ತರವರೆಗೆ ಎಡೆಬಿಡದೆ 21 ಗೀತೆಗಳನ್ನು ಹಾಡಿದ್ದು ಒಂದು ಮಹಾದಾಖಲೆಯೇ ಆಗಿದೆ.
ಹಾಗೆಯೇ ತಮಿಳಿನಲ್ಲಿ ಹತ್ತೊೊಂಬತ್ತು ಹಿಂದಿಯಲ್ಲಿ ಹದಿನಾರು ಗೀತೆಗಳನ್ನು ಹಾಡಲೇ ಬೇಕಾದ ಪ್ರಸಂಗ ಎದುರಾಗಿತ್ತೆಂದರೆ ಅದು ದೈವಶಕ್ತಿಯೇ ಹೌದು. ಅದರಲ್ಲೂ ಕೆಲ ನಟರುಗಳ ಬಳಿ ನಿರ್ದೇಶಕರು ಕಾಲ್‌ಶೀಟ್‌ಗಾಗಿ ಹೋದರೆ ನನಗೆ ಎಸ್ ಪಿಬಿಯವರೇ ಹಾಡಬೇಕು ಎಂಬ ಕಟ್ಟಪ್ಪಣೆ ವಿಧಿಸುತ್ತಿದ್ದರು. ಹಿಂದಿಯಲ್ಲಿ ಸಲ್ಮಾನ್‌ಖಾನ್ ಇದನ್ನು ಸಾಧಿಸಿ ಮೈನೇ ಪ್ಯಾರ್ ಕಿಯಾ, ಹಮ್ ಆಪ್ ಹೈಕೋನ್ ಅಂಥ ದೊಡ್ಡ ಹಿಟ್ ಸಿನಿಮಾಗಳನ್ನು ಪಡೆದಿದ್ದ. ಇನ್ನು ಕಮಲಹಾಸನ್ ರಜನಿಕಾಂತ್‌ಗಂತೂ ಗೀತೆಗಳಿಗಲ್ಲದೆ ಅವರ ತಮಿಳು ಚಿತ್ರಗಳ ತೆಲುಗು ಡಬ್ ಚಿತ್ರಗಳಿಗೆ ಎಸ್‌ಪಿಬಿ ಅವರ ದನಿಯೇ ಬೇಕಾಗಿತ್ತು.
ಕನ್ನಡದಲ್ಲಿ ನಮ್ಮ ಹಂಸಲೇಖ ಅವರು ಎಸ್‌ಪಿಬಿ ಅವರನ್ನು ವಿನೂತನವಾದ ಗಾಯನಗಳಲ್ಲಿ ಹೆಚ್ಚು ಪ್ರಯೋಗಿಸಿದರು. ಪ್ರೇಮಲೋಕದಿಂದಲೇ ಆರಂಭ ವಾದ ಇವರ ಜೋಡಿ 1992ರಲ್ಲಿ ಸಂಗೀತಂ ಶ್ರೀನಿವಾಸ್ ನಿರ್ದೇಶನದಲ್ಲಿ ತೆರೆಗೆ ಬಂದ ಕ್ಷೀರ ಸಾಗರ ಚಿತ್ರದಲ್ಲಿ ಒಂದೇ ಹಾಡಿನಲ್ಲಿ ಒಂಬತ್ತು ವಿವಿಧ ದನಿಗಳಲ್ಲಿ ಹಾಡಿಸಿ ಹೊಸ ದಾಖಲೆ ಬರೆದರು. ಹೀಗೆ ಹಾಡುತ್ತಾ ಇಡೀ
ದೇಶದ ಚಿತ್ರರಂಗವನ್ನು ಆವರಿಸಿ ಅದರಲ್ಲೂ ದಕ್ಷಿಣಭಾರತದ ಪ್ರತೀ ಮನೆಯನ್ನೂ ತಲುಪಿದ ಎಸ್‌ಪಿಬಿ ಬರಬರುತ್ತಾ ತಾನಷ್ಟೇ ಅಲ್ಲದೇ ಇತರರೂ ಬೆಳೆಯಬೇಕೆಂಬ ಉದಾರತೆ ತೋರಿ ಸಂಗೀತ ನಿರ್ದೇಶಕರು ನಿರ್ಮಾಪಕರು ತಮ್ಮನ್ನು ಹಾಡಲು ಕೋರಿ ಸಂಪರ್ಕಿಸಿದರೆ ತಮ್ಮ ಟ್ರಾಕ್‌ಸಿಂಗರ್‌ಗಳನ್ನು ಉದಯೋನ್ಮಕ ಗಾಯಕರನ್ನು ಅವರೇ ಸೂಚಿಸಿ ಅವಕಾಶ ನೀಡಲು ಹೇಳುತ್ತಿದ್ದರು.
ಇದರಿಂದಾಗಿ ತೆಲುಗು ಕನ್ನಡದಲ್ಲಿ ಮನು (ನಾಗೂರುಬಾಬು) ಕನ್ನಡದಲ್ಲಿ ದಿವಂಗತ ವಿಷ್ಣು (ನಿಂಬೆಹಣ್ಣಿನಂತ), ರಾಜೇಶ್ ಕೃಷ್ಣನ್ ಅವರನ್ನು ತಾವಾಗಿಯೇ ಬೆಳೆಯಲು ನೆರವಾದರು. ಒಂದು ಸಿನಿಮಾದಲ್ಲಿ ಐದು ಹಾಡುಗಳಿದ್ದರೆ ಒಂದೋ ಎರಡನ್ನು ಮಾತ್ರ ಒಪ್ಪಿಕೊಂಡು ಉಳಿದವುಗಳಿಗೆ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವಂತೆ ಮಾಡುತ್ತಿದ್ದರು. ಒಂದು ಕಾಲದಲ್ಲಿ ಇಳಯರಾಜ ರಾಜನ್‌ನಾಗೇಂದ್ರ ಹಂಸಲೇಖರಂಥ ಅನೇಕ ಸಂಗೀತ ಸಂಯೋಜಕರು ಎಸ್‌ಪಿಬಿಯವರ ಹಾಡುಗಾರಿಕೆಯಿಂದಲೇ ಹೆಚ್ಚೆೆಚ್ಚು ಅವಕಾಶಗಳನ್ನು ಗಳಿಸುತ್ತಿದ್ದರೆಂದರೆ ಸುಳ್ಳಲ್ಲ. ಟಿ.ಜಿ.ಲಿಂಗಪ್ಪ, ಕೆ.ವಿ ಮಹದೇವನ್‌ರಂಥ ಹಿರಿಯರಾಗಲಿ
ಗುರುಕಿರಣ್, ವಿ. ಮನೋಹರ್‌ರಂಥ ಹೊಸತಲೆಮಾರಿನ ಸಂಗೀತ ನಿರ್ದೇಶಕರುಗಳಾಗಲಿ ಕಿಂಚಿತ್ತು ಅಹಂ ತೋರದೆ ಅವರುಗಳು ಸಂಯೋಜಿಸಿದ ರಾಗಕ್ಕೆ ಹೊಸ ಗಾಯಕನಂತೆ ಹಾಡಿ ಅವರನ್ನು ಪ್ರೋತ್ಸಾಹಿಸುವ ಗುಣ ಅನುಕರಣೀಯವಾಗಿತ್ತು.
ಇಂತಹ ಮೇರು ಗಾಯಕನಿಗೆ ವರನಟ ಡಾ.ರಾಜ್ ಅವರ ಗಾಯನದ ಬಗ್ಗೆ ಹೆಚ್ಚು ಕುತೂಹಲವಿತ್ತು. ರಾಜ್ ಅವರು ಕನ್ನಡ ಒಂದೊಂದು ಪದಗಳನ್ನು ಸ್ಪಷ್ಟವಾಗಿ ಉಚ್ಚರಿಸುವುದು ಭಾವನೆ ತುಂಬಿ ಹಾಡುವುದು, ಹಾಡಿನ ಮಧ್ಯೆ ತಾವೇ ಆಲಾಪನೆ ಗಳನ್ನು ಮಾಡುತ್ತಿದ್ದ ಶೈಲಿ ಎಸ್‌ಪಿಬಿ ಯವರನ್ನು ಆಕರ್ಷಿಸಿತ್ತು. ತಾನೆಷ್ಟೇ ದೊಡ್ಡ ಗಾಯಕನಾದರೂ ರಾಜ್ ಅವರ ಗಾಯನಕ್ಕೆ
ತಲೆ ದೂಗುತ್ತಿದ್ದರು. ಕೆಲ ಗಾಯಕರು ರುದಯ ಎನ್ನುತ್ತಿದ್ದಾಗ ರಾಜ್ ಅವರು ಹೃದಯ ಎಂದು ಸ್ಪಷ್ಟವಾಗಿ ಹಾಡುತ್ತಿದ್ದದ್ದು ಎಸ್‌ಪಿಬಿ ಅವರಿಗೆ ಕನ್ನಡದ ಪದಗಳ ಸ್ಪಷ್ಟ ಸ್ವರೂಪ ಅರಿವಾಗುತ್ತಿತ್ತು.
ಹೀಗಾಗಿ ಬಾಲು ಅವರು ರಾಜ್ ಅವರಿಗೆ ಅಭಿಮಾನಿಯಾಗಿದ್ದರು. ಇಂಥ ಸಂದರ್ಭ ದಲ್ಲೇ ತಮ್ಮ ಅಭಿನಯಕ್ಕೆ ರಾಜ್ ಅವರು ಹಿನ್ನೆಲೆ ಗಾಯಕರಾಗಬೇಕೆಂಬ ಒತ್ತಾಸೆಗೆ ರಾಜ್ ಅವರು ಮಣಿದಿದ್ದರು. ಬಾಲು ಅವರ ಸಂಗೀತ ಸಂಯೋಜನೆ ಯಲ್ಲೇ ಮುದ್ದಿನ ಮಾವ ಚಿತ್ರದಲ್ಲಿ ಎರಡು ಗೀತೆಗಳನ್ನು ರಾಜ್ ಅವರಿಂದ ಹಾಡಿಸಿ ಅದಕ್ಕೆೆ ಅಭಿನಯಿಸಿ ಮೇರು ಗಾಯಕನಿಗೆ ಮೇರು ನಟನ
ಗಾಯನ ಎಂಬ ಅಸಾಧ್ಯತೆಯನ್ನು ಸಾಧ್ಯವಾಗಿಸಿದರು.
ಇಲ್ಲಿ ಇನ್ನೊಂದು ಅಚ್ಚರಿ ವಿಷಯವೆಂದರೆ ರಾಜ್ ಅವರಿಗೆ ಹೆಚ್ಚಾಗಿ ಘಂಟಸಾಲ ಮತ್ತು ಪಿ.ಬಿ.ಶ್ರೀನಿವಾಸ್ ಅವರು ಹಿನ್ನೆಲೆಗಾಯಕ ರಾಗಿದ್ದರು. ಆದರೆ ಇದೇ ಎಸ್‌ಪಿಬಿ ಅವರೂ ರಾಜ್ ಅವರಿಗೆ ಹಿನ್ನೆಲೆ ಗಾಯಕರಾಗಿದ್ದರೆಂದರೆ ನಂಬಲೇ ಬೇಕು. 1970ರಲ್ಲಿ ಬಿ.ಎಸ್.ರಂಗ ಅವರ ನಿರ್ದೇಶನ ದಲ್ಲಿ ಮೂಡಿಬಂದ ಮಿ.ರಾಜ್‌ಕುಮಾರ್ ಚಿತ್ರದಲ್ಲಿ ಉಂಟೇ ಉಂಟೇ ಅಮ್ಮಯ್ಯಾ ಹಾಗೂ ಬಾ ಬಾ ಬೆಂಗಳೂರ್ ಎಂಬ ರಾಜ್ ಅಭಿನಯದ ಎರಡು ಗೀತೆಗಳಿಗೆ ನೇರವಾಗಿ ಬಾಲು ಅವರು ಹಿನ್ನೆೆಲೆ ಗಾಯಕರಾಗಿ ಹಾಡಿರುವುದು ಒಂದು ವಿಶೇಷ. ಹೀಗೆ 50 ವರ್ಷಗಳ ಸುಧೀರ್ಘ ಗಾಯನ ಸೇವೆಗೆ ಕಿರೀಟ ವಿಟ್ಟಂತೆ ಕನ್ನಡ ನಾಡಿನ ನಾಡಗೀತೆ ಜಯ ಭಾರತ ಜನನಿಯ ತನುಜಾತೆ ಗೀತೆಯನ್ನು ಎಸ್‌ಪಿಬಿ ಅವರಿಂದ ಹಾಡಿಸಿ ಆ ಮೂಲಕ ರಾಷ್ಟ್ರಕವಿ ಕುವೆಂಪು ಅವರ ರಚನೆಯಂತೆ ಪ್ರತಿಯೊಂದು ಪದದ ಆಶಯ ವನ್ನು ದೃಶ್ಯರೂಪದಲ್ಲಿ ತೋರಿಸುವ ವಿಶೇಷ ಯೋಜನೆಯೊಂದನ್ನು ಬೆಂಗಳೂರಿನ ವಿಜಯನಗರ ಮಾರುತಿ ಮೆಡಿಕಲ್ಸ್ ಸಂಸ್ಥೆಯು ಕೈಗೊಂಡು ಬಾಲು ಅವರೊಂದಿಗೆ ಮಾತುಕತೆ ನಡೆಸಿತ್ತು. ಈಗ ಅವರ ಆರೋಗ್ಯ ಸುಧಾರಿಸಿದ ನಂತರ ನಮ್ಮ ನಾಡಗೀತೆ ಅಮರಗಾಯಕನ ದನಿಯಲ್ಲಿ ಮೊಳಗಲಿದೆ.
ವೈಯಕ್ತಿಕವಾಗಿ ವೇದಿಕೆಗಳಲ್ಲಿ ಬಾಲು ಅವರು ತನ್ನ ಮಾತೃಭಾಷೆ ತೆಲುಗು ಆದರೂ ಎರಡನೇ ಗೀತೆ ಕನ್ನಡವಾಗಿತ್ತು. ಕನ್ನಡ ಕಲಾಭಿಮಾನಿಗಳೇ ನನ್ನ ದೇವರು. ಕನ್ನಡನಾಡೇ ನನ್ನ ತವರುಮನೆ ಎಂದು ಹೆಮ್ಮೆ ಪಟ್ಟಿದ್ದರು. ತಮ್ಮ ಸಹೋದ್ಯೋಗಿಗಳ ಕಷ್ಟ ಸುಖಗಳೊಂದಿಗೆ ಭಾಗಿಯಾಗಿದ್ದರು. ತನ್ನ ಅವಕಾಶಗಳನ್ನು ಕಡಿಮೆ ಮಾಡಿಕೊಂಡು ಅನ್ಯರಿಗೆ ಅವಕಾಶ ನೀಡುವ ದೊಡ್ಡತನ ಇಂದು ಯಾರಿಂದ ಕಾಣಲು ಸಾಧ್ಯ?. ದೊಡ್ಡ ವೇದಿಕೆಗಳಲ್ಲಿ ಗಾನವಿಶಾರದೆ ಎಸ್.ಜಾನಕಿಯವರ ಕಾಲಿಗೆ ಇವರು ನಮಸ್ಕರಿಸಿದರೆ ಚಿತ್ರಾ ಅವರು ಬಾಲು ಅವರ ಕಾಲಿಗೆ ನಮಸ್ಕರಿಸುತ್ತಿದ್ದರು.
ಕನ್ನಡದ ಕೆ.ಕಲ್ಯಾಣ್ ಅವರನ್ನು ತಮ್ಮ ಮಾನಸಪುತ್ರರೆಂದೇ ಹೇಳಿಕೊಂಡಿದ್ದು ಅವರಲ್ಲಿನ ಮಮಕಾರ ಪ್ರೀತಿ ಮುಗ್ಧತೆಗೆ ಸಾಕ್ಷಿ. ತಾನು ಹುಟ್ಟಿಬೆಳೆದ ನೆಲ್ಲೂರಿನ ಕೋಟ್ಯಂತರ ಬೆಲೆಬಾಳುವ ಮನೆಯನ್ನು ಕಂಚಿಯ ಮಠಕ್ಕೆ ಧಾರೆಯೆರೆದು ಅದನ್ನು ಸಂಸ್ಕೃತ ಶಾಲೆಯಾಗಿ ಬಳಸಲು ನೀಡಿರುವುದು ಅವರ ಸಂಸ್ಕಾರಕ್ಕೆ ಸಾಕ್ಷಿ. ಅರೆಬರೆ ಜನಪ್ರಿಯತೆ ಸಿಕ್ಕಿದೊಡನೇ ಕನ್ನಡದ ಸಾಹಿತ್ಯವನ್ನೆಲ್ಲಾ ಕುಲಗೆಡಿಸಿ ರ್ಯಾಪುಪಾಪು ಎಂದೆಲ್ಲಾ ಹಾಡುವ ಇಂದಿನ ಗಾಯಕ ಪುಟಾಣಿಗಳು ಎಸ್ ಪಿಬಿಯವರಿಂದ ಕಲಿಯಬೇಕಾದದ್ದು ಸಾಕಷ್ಟಿದೆ.
ಅವರನ್ನು ಒಬ್ಬ ಸಿನಿಮಾ ಗಾಯಕನೆಂದು ಕಾಣದೆ ಪರಿಪೂರ್ಣ ಸಂಗೀತಗಾರ ಗಾಯನಗಾರುಡಿಗನೆಂದು ಕರೆಯುವುದು ಶ್ರೇಷ್ಠ. ಸಂಗೀತಕ್ಕೆ ಅವರೊಬ್ಬ ವಿಶ್ವವಿದ್ಯಾಲಯವಿದ್ದಂತೆ. ಇಂತಹ ದೈವಶಕ್ತಿ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತನ್ನ
ಆತ್ಮಶಕ್ತಿಯಿಂದ ಆರೋಗ್ಯವಾಗಿ ಹೊರಬಂದು ಇನ್ನೂ ಹಲವು ವರ್ಷಗಳ ಕಾಲ ಸಂಗೀತ ಸೇವೆ ಸಲ್ಲಿಸಲಿ ಎಂದು ಪ್ರಾರ್ಥಿಸೋಣ.