ಜೀವನೋಪಾಯ
ಪ್ರೊ.ಆರ್.ಜಿ.ಹೆಗಡೆ
ಇತ್ತೀಚೆಗೆ ಮಂಡಿಸಲಾದ ಕೇಂದ್ರ ಬಜೆಟ್‌ನ ಒಂದು ಪ್ರಮುಖ ಅಂಶ- ಉದ್ಯೋಗ ಸೃಷ್ಟಿಗಾಗಿ ಇಂಟನ್ ಶಿಪ್ ಯೋಜನೆ. ಈ ಕಾರ್ಯಕ್ರಮದ ಭಾಗವಾಗಿ ಕೇಂದ್ರ ಸರಕಾರ ಬಯಸಿರುವುದೆಂದರೆ, ದೇಶದ ೫೦೦ ಪ್ರಮುಖ ಕಂಪನಿಗಳು ತಮ್ಮ ‘ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿ’ (ಸಿಎಸ್‌ಆರ್ ಫಂಡ್) ಬಳಸಿಕೊಂಡು ಅರ್ಹ ಯುವಕ-ಯುವತಿಯರಿಗಾಗಿ ಒಂದು ವರ್ಷದ ಇಂಟರ್ನ್‌ಶಿಪ್ (ಕಂಪನಿಯೊಳಗೆ ಪ್ರಾಯೋಗಿಕ ತರಬೇತಿ) ಹಮ್ಮಿಕೊಳ್ಳಬೇಕು. ‘ಹ್ಯಾಂಡ್ಸ್-ಆನ್ ಎಕ್‌ಪೀರಿಯನ್ಸ್’ (ಪ್ರಾಯೋಗಿಕ ಕಲಿಕಾ ಅನುಭವ) ಒದಗಿಸಬೇಕು. ಇಂಥ
ಕಲಿಕಾರ್ಥಿಗೆ ಕೇಂದ್ರ ಸರಕಾರ ಪ್ರತಿ ತಿಂಗಳು ೫,೦೦೦ ರು. ಸ್ಟೈಪೆಂಡ್ ನೀಡುತ್ತದೆ ಹಾಗೂ ಇತರೆ ಖರ್ಚುಗಳಿಗೆಂದು ವಾರ್ಷಿಕವಾಗಿ ಇನ್ನೂ ೬,೫೦೦ ರು. ನೀಡುತ್ತದೆ.
ಇಂಟನ್ ಶಿಪ್ ಮುಗಿದ ಬಳಿಕ ಅರ್ಹರೆನಿಸಿದವರನ್ನು ಕಂಪನಿಗಳು ತಮ್ಮಲ್ಲಿ ಬಳಸಿಕೊಳ್ಳಬಹುದು. ಇದರಿಂದ ಕಂಪನಿಗಳಿಗೆ ಮಾನವ ಸಂಪನ್ಮೂಲಕ್ಕಾಗಿ ಹುಡುಕಾಡುವ ಶ್ರಮ ತಪ್ಪುತ್ತದೆ. ತರಬೇತಿ ಪಡೆದವರಿಗೆ ಕೌಶಲ, ಉದ್ಯೋಗ (ಬಹುತೇಕ) ಸಿಗುತ್ತದೆ. ಆದರೆ ಅವರು ತರಬೇತಿಯನ್ನು ಗಂಭೀರವಾಗಿ ಪರಿಗಣಿಸಿ ನೌಕರಿ ಗಿಟ್ಟಿಸಿಕೊಳ್ಳಬೇಕು. ಹೀಗೆ ಉದ್ಯೋಗದ ಹುಡುಕಾಟದಲ್ಲಿದ್ದವರನ್ನು ಉತ್ತೇಜಿಸಿ, ಅವರಿಗೆ ಕೌಶಲ ಕೊಡಿಸಿ ಉದ್ಯೋಗ ದೊರಕಿಸುವ ‘-ಸಿಲಿಟೇಟರ್’ ಪಾತ್ರವನ್ನು ಕೇಂದ್ರ ಸರಕಾರ ನಿರ್ವಹಿಸುತ್ತದೆ. ಈ ಮೂಲಕ ಸುಮಾರು ೧ ಕೋಟಿ ಗುಣ ಮಟ್ಟದ ನೌಕರಿಗಳನ್ನು ಮುಂದಿನ ೫ ವರ್ಷಗಳಲ್ಲಿ ಸೃಷ್ಟಿಸುವ ಗುರಿ ಕೇಂದ್ರ ಸರಕಾರದ್ದು. ಈ ಯೋಜನೆಗೆ ಕೇಂದ್ರ ಸುಮಾರು ೨.೫ ಲಕ್ಷ ಕೋಟಿ ರುಪಾಯಿಗಳನ್ನು ಬಜೆಟ್‌ನಲ್ಲಿ ಕಾದಿರಿಸಿದೆ.
ಗಂಭೀರವಾಗಿ ಕಾರ್ಯರೂಪಕ್ಕೆ ಬಂದರೆ ಮಹತ್ತರವಾಗಿ ಹೊಮ್ಮುವ ಸಮಾಜ ಕಲ್ಯಾಣ ಯೋಜನೆಯಿದು. ಯೋಜನೆಯ ಹಿಂದೆ ಸರಿಯಾದ ಹಲವು ಗ್ರಹಿಕೆಗಳಿವೆ. ಮೊದಲನೆಯದಾಗಿ, ಕಂಪನಿಗಳಿಗೆ ಬೇಕಿರುವ ತಾಂತ್ರಿಕ ಗುಣಮಟ್ಟ ಮತ್ತು ನಮ್ಮ ವಿದ್ಯಾರ್ಥಿಗಳ ಗುಣಮಟ್ಟದ ನಡುವೆ ಅಗಾಧವಾದ ಕಂದರವಿದೆ. ಕೌಶಲದಲ್ಲಿನ ಈ ಅಂತರವನ್ನು (ಸ್ಕಿಲ್ ಗ್ಯಾಪ್) ಮುಚ್ಚಲು ಹೆಚ್ಚಿನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸದ್ಯದ ಸ್ಥಿತಿಯಲ್ಲಂತೂ ಸಾಧ್ಯವಿಲ್ಲ. ಸೂಕ್ತ ಕೌಶಲ ಹೊಂದಿದವರಿಗೆ ಮಾತ್ರ ಒಳ್ಳೆಯ ಕಂಪನಿಗಳಲ್ಲಿ ಉದ್ಯೋಗ ಸಿಗುತ್ತದೆ. ಸದ್ಯ ಅಂಥ ಕೌಶಲವನ್ನು ಗುರುತಿಸಿ ತರಬೇತಿ ನೀಡಬಲ್ಲವರು ಕಂಪನಿಗಳವರು ಮಾತ್ರ. ಹೀಗಾಗಿ ಈ ಪ್ರಕ್ರಿಯೆಯಲ್ಲಿ ಸರಕಾರದ ಮಧ್ಯಪ್ರವೇಶದ ಅಗತ್ಯವಿದೆ.
ಇಲ್ಲವಾದರೆ ಅರ್ಹ ಕಲಿಕಾರ್ಥಿಗಳು ಮತ್ತು ಕಂಪನಿಗಳು ಒಂದೆಡೆ ಸೇರುವುದಿಲ್ಲ. ಇವೆಲ್ಲವನ್ನೂ ಅರ್ಥಮಾಡಿಕೊಂಡೇ ಈ ಎರಡು ವಲಯಗಳನ್ನು ಎಳೆತಂದು ಸೇರಿಸಬಲ್ಲ ಮಹತ್ವದ ಯೋಜನೆಯನ್ನು ಕೇಂದ್ರ ಸರಕಾರ ಹಮ್ಮಿಕೊಂಡಿರುವುದು ಮತ್ತು ಕೋಟ್ಯಂತರ ರುಪಾಯಿಗಳನ್ನು ಅದರಲ್ಲಿ ತೊಡಗಿಸಿರುವುದು. ಇದು ಸ್ವಾಗತಾರ್ಹ ಕ್ರಮವೇ ಸರಿ. ಆದರೆ ಬಹುಶಃ ಇಂಥ ಇಂಟರ್ನ್‌ಶಿಪ್ ನೀಡುವಿಕೆ ಒಂದು ತುರ್ತುಕ್ರಮ ಮಾತ್ರ. ಮೂಲಭೂತವಾಗಿ ಬೇಕಿರುವುದು ಉನ್ನತ ಶಿಕ್ಷಣಕ್ಕೊಂದು ಕಾಯಕಲ್ಪ ನೀಡುವಿಕೆ. ಅಂದರೆ, ಸಮಕಾಲೀನ ಜಾಗತಿಕ ಅವಶ್ಯಕತೆಗಳನ್ನು ಪೂರೈಸಬಲ್ಲ ರೀತಿಯಲ್ಲಿ ಉನ್ನತ ಶಿಕ್ಷಣವನ್ನು ಮರುರೂಪಿಸುವ, ಆಧುನಿಕಗೊಳಿಸುವ ಅವಶ್ಯಕತೆ ಇದೆ. ಉನ್ನತ ಶಿಕ್ಷಣ ಯಾವಾಗಲೂ ಸಮಾಜ ಮತ್ತು ಕೈಗಾರಿಕೆಗಳಿಗಿಂತ ಮುಂದೆ ಹೋಗಿ ಯೋಚಿಸಬೇಕು. ವಿಷಾದವೆಂದರೆ ಅದು ಯೋಚನೆ ಮಾಡುವುದನ್ನೇ ನಿಲ್ಲಿಸಿದಂತಿದೆ. ಕೆಲವು ಸಂಸ್ಥೆಗಳನ್ನು ಹೊರತುಪಡಿಸಿದರೆ ಉನ್ನತ ಶಿಕ್ಷಣ ಸಂಸ್ಥೆಗಳು ಕೌಶಲಾಭಿವೃದ್ಧಿ ಎಂದರೆ ಏನು ಎಂದು ಇನ್ನೂ ಯೋಚಿಸುತ್ತಲೇ, ಕೇಳುತ್ತಲೇ ಇವೆ. ಹೆಚ್ಚಿನ ಸಂಸ್ಥೆಗಳು ‘ಆ ಕೆಲಸ ನಮ್ಮದಲ್ಲ’ ಎಂಬ ಭಾವನೆ ಯಲ್ಲೇ ಇವೆ.
ಜೀವನವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಶಕ್ತಿ ಅವಕ್ಕೆ ಕಡಿಮೆ. ಪದವಿ ಶಿಕ್ಷಣವಂತೂ ಕುಸಿದುಹೋಗಿದೆ. ಒಂದು ರೀತಿ ಯಲ್ಲಿ ಅದು ಪ್ರಾಥಮಿಕ ಶಿಕ್ಷಣದ ವಿಸ್ತರಣೆಯೇ ಆಗಿಹೋಗಿದೆ. ಅದಕ್ಕೆ ಯಾವುದೇ ಕೌಶಲ ಅಥವಾ ವ್ಯಾವಹಾರಿಕ ತಂತ್ರಗಳನ್ನು ಕಲಿಸುವ ಶಕ್ತಿಯಿಲ್ಲ. ಫೋಕಸ್ ಕೂಡ ಇಲ್ಲ. ಅದನ್ನು ಕಲೆ, ವಿಜ್ಞಾನ ಮತ್ತು ವಾಣಿಜ್ಯಶಾಸ್ತ್ರ ಎಂದು ಯಾರು ಯಾವಾಗ ಒಡೆದರೋ, ವಿಷಯಗಳನ್ನು ಹಾಗೇಕೆ ಹಂಚಿದರೋ ದೇವರಿಗೇ ಗೊತ್ತು. ಅಷ್ಟೇ ಅಲ್ಲ, ಹೆಚ್ಚಿನ ತಾಂತ್ರಿಕ ಶಿಕ್ಷಣವೂ ಕಾರ್ಪೊರೇಟ್ ಜಗತ್ತಿನ ವೇಗಕ್ಕೆ ಹೋಲಿಸಿದರೆ ಹಿಂದುಳಿದಿದೆ. ಕನಿಷ್ಠ ೫೦ ವರ್ಷಗಳಿಂದ ಎಲ್ಲವೂ ಹಾಗೆಯೇ ಯಾಂತ್ರಿಕವಾಗಿ ನಡೆದಿದೆ.
ಇಂಥ ಸ್ಥಿತಿಗೆ ಹಲವು ಕಾರಣಗಳಿವೆ. ಇವುಗಳಲ್ಲಿ ಮುಖ್ಯವಾದದ್ದು ಉನ್ನತ ಶಿಕ್ಷಣ/ತಾಂತ್ರಿಕ ಶಿಕ್ಷಣ ಎದುರಿಸುತ್ತಿರುವ ಸೂಕ್ತ ಸಂಪನ್ಮೂಲಗಳ ಕೊರತೆ. ಹಾಗೆಯೇ ಈಗಿರುವ ಕಾನೂನುಗಳು
ಹಳೆಯ ಕಾಲದವು. ಶಿಕ್ಷಣ ಸಂಸ್ಥೆಗಳಿಗೆ ‘ಹೊಸದಾಗಿ ಯೋಚಿಸುವ’, ತಮ್ಮ ಸುತ್ತಮುತ್ತಲ ಜಗತ್ತಿಗೆ ಪ್ರಸ್ತುತವಾಗುವಂಥ ಕೋರ್ಸ್/ಸಿಲಬಸ್‌ಗಳನ್ನು ಸೃಷ್ಟಿಸುವ ಕಾನೂ ನಾತ್ಮಕ
ಅಽಕಾರವಿಲ್ಲ. ವಿದ್ಯಾರ್ಥಿಗಳಿಗಂತೂ ತಮ ಗೇನು ಬೇಕು ಎಂದು ಗುರುತಿಸಿ, ಅದನ್ನು ಬೇಕಾದ ರೀತಿಯಲ್ಲಿ ಕಲಿಯುವ ಅವಕಾಶವೇ ಇಲ್ಲ. ವರ್ಷಗಳಿಂದ ಉನ್ನತ ಶಿಕ್ಷಣಕ್ಕೆ ಹೆಚ್ಚಿನ
ಬಜೆಟ್ ಅನುದಾನ ಸಿಕ್ಕಿದ್ದರೆ, ಗುಣಮಟ್ಟದ ಸಂಸ್ಥೆಗಳು ನಮ್ಮಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಿದ್ದರೆ, ಹೊಸ ಚಿಂತನೆಗಳು ಕಾಲಕಾಲಕ್ಕೆ ಬರುತ್ತಿದ್ದಿದ್ದರೆ, ಬಹುಶಃ ಸರಕಾರ ಈಗ ತಂದಿರುವ ರೀತಿಯ ಇಂಟರ್ನ್‌ಶಿಪ್ ಯೋಜನೆಯ ಅಗತ್ಯ ಅಷ್ಟೊಂದು ಇರುತ್ತಿರಲಿಲ್ಲವೇನೋ!
ಇನ್ನಾದರೂ ನಾವಿದನ್ನು ಅರಿತು ಉನ್ನತ ಶಿಕ್ಷಣ ಸಂಸ್ಥೆಗಳ ಕೌಶಲಾಭಿವೃದ್ಧಿಯ ಮಟ್ಟವನ್ನು ಸಾಮಾಜಿಕವಾಗಿ ಪ್ರಸ್ತುತಗೊಳಿಸಲೇಬೇಕು. ಬಜೆಟ್‌ನಲ್ಲಿ ಘೋಷಿಸಲಾಗಿರುವ ಇಂಟರ್ನ್ ಶಿಪ್ ಒಂದು ಸ್ವಾಗತಾರ್ಹ ಕ್ರಮ ಹೌದು. ಆದರೆ ನಿಜವಾದ, ದೀರ್ಘಕಾಲೀನ ಪರಿಹಾರ ಸಿಗುವುದು ಉನ್ನತ ಶಿಕ್ಷಣಕ್ಕೆ ಸೂಕ್ತ ಹಣಕಾಸು ಮತ್ತು ಕಾನೂನಾತ್ಮಕ ಸ್ವಾತಂತ್ರ್ಯ ದೊರೆತಾಗ ಮಾತ್ರ. ಸರಕಾರಗಳು ಉನ್ನತ ಶಿಕ್ಷಣದ ಮೇಲೆ ಹಣ ತೊಡಗಿಸಲೇಬೇಕು. ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಇರುವುದು ಅಲ್ಲಿಯೇ! ಶಿಕ್ಷಣ ಯಶಸ್ವಿಯಾದರೆ ನಿರುದ್ಯೋಗ ಬಹಳ ಮಟ್ಟಿಗೆ
ಕಡಿಮೆಯಾಗುತ್ತದೆ. ಬಹುಶಃ ನಾವು ಒಂದು ಚಿಕ್ಕ ಸಾಂವಿಧಾನಿಕ ಮರುಹೊಂದಾಣಿಕೆಯನ್ನು ಮಾಡಿಕೊಳ್ಳಬೇಕು, ಅಂದರೆ, ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ವ್ಯವಸ್ಥೆಗಳನ್ನು ಕೇಂದ್ರ ಸರಕಾರವೇ ನೋಡಿಕೊಳ್ಳಬೇಕು. ರಾಜ್ಯ ಸರಕಾರವು ಪ್ರಾಥಮಿಕ ಶಿಕ್ಷಣದತ್ತ ಗಮನ ಹರಿಸಬೇಕು. ಆಗ ಉನ್ನತ/ತಾಂತ್ರಿಕ ಶಿಕ್ಷಣದಲ್ಲಿ ರಾಷ್ಟ್ರೀಯ ಮಟ್ಟದ ನೀತಿ ನಿರೂಪಣೆ ಸುಲಭ. ಉನ್ನತ ಶಿಕ್ಷಣದ ಅಂತಾರಾಷ್ಟ್ರೀಯೀಕರಣ ಸುಲಭ. ಈಗ ಶಿಕ್ಷಣವು ‘ಕನ್‌ಕರೆಂಟ್ ಲಿಸ್ಟ್’ನಲ್ಲಿರುವುದರಿಂದ ಹಲವು ಸಮಸ್ಯೆಗಳು ಹುಟ್ಟಿಕೊಂಡಿವೆ. ಕೆಲವು ರಾಜ್ಯಗಳು ಕೇಂದ್ರದ ನೀತಿಗಳನ್ನು ಮಾನ್ಯ ಮಾಡುವುದೇ ಇಲ್ಲ. ಹೀಗಾಗಿಯೂ ಸಮಸ್ಯೆಗಳಿವೆ. ಇನ್ನೊಂದು ಮಾತು. ಉದ್ಯೋಗ ಸೃಷ್ಟಿ ಕೇವಲ ಕಾರ್ಪೊರೇಟ್ ಜಗತ್ತಿಗೆ ಸಂಬಂಧಿಸಿದ್ದಲ್ಲ.
ಆದ್ದರಿಂದ ಎಲ್ಲ ಸ್ತರಗಳ ವಿದ್ಯಾರ್ಥಿಗಳಿಗೂ ಲಾಭವಾಗುವ ರೀತಿಯಲ್ಲಿ ಕೂಡ ನಾವು ಯೋಜನೆಗಳನ್ನು ರೂಪಿಸಬೇಕು. ಉದ್ಯೋಗ ತರಬೇತಿ ನೀಡಬೇಕು. ಈ ನಿಟ್ಟಿನಲ್ಲಿ ನಾವೀಗ ಮಾಡಬೇಕಿರುವುದು, ಇರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನೇ ಸಾಧ್ಯವಿರುವೆಡೆಯೆಲ್ಲಾ ದುರಸ್ತಿ ಮಾಡಿ, ಬೇರೆ ಬೇರೆ ರೀತಿಯ, ಬೇರೆ ಬೇರೆ ಸಾಮಾಜಿಕ ಸ್ತರಗಳ ಯುವಜನರಿಗೆ ಸೂಕ್ತವಾಗಬಲ್ಲ, ಹಳ್ಳಿಗರ ಕೌಶಲಗಳನ್ನು ಕೂಡ ಮಾನ್ಯಮಾಡಬಹುದಾದ ಉದ್ಯೋಗಗಳನ್ನು ಸೃಷ್ಟಿಸಬಲ್ಲ ಸಾಧ್ಯತೆಗಳನ್ನು ಗಮನಿಸಬೇಕು. ಅಂಥ ಸಾಧ್ಯತೆಗಳಲ್ಲೊಂದು ‘ನ್ಯಾಷನಲ್ ಕೆಡೆಟ್ ಕೋರ್’ನ (ಎನ್ ಸಿಸಿ) ಮರುನಿರ್ಮಾಣ ಮತ್ತು ಆಧುನೀಕರಣ. ಎನ್‌ಸಿಸಿಗೆ ಭದ್ರತೆ ಮತ್ತು ರಕ್ಷಣಾ ವಲಯಗಳಲ್ಲಿ ಲಕ್ಷಗಟ್ಟಲೆ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವಿದೆ. ಇಂದು ಪ್ರತಿಯೊಂದು ಸಂಸ್ಥೆ, ಕಂಪನಿ, ಖಾಸಗಿ ಎಸ್ಟೇಟ್, ಬ್ಯಾಂಕುಗಳು ತಮ್ಮದೇ ಆದ ಖಾಸಗಿ ಭದ್ರತಾ ವ್ಯವಸ್ಥೆಗಳನ್ನು ಹೊಂದುತ್ತಿವೆ.
ವ್ಯಕ್ತಿಗಳು ಕೂಡ ಇದಕ್ಕೆ ಹೊರತಲ್ಲ. ಭಾರತೀಯ ಸೇನೆ ಮತ್ತು ಎಲ್ಲ ರೀತಿಯ ಮೀಸಲು ಪಡೆ, ಪೊಲೀಸ್ ಪಡೆಗಳಲ್ಲಿಯೂ ಎನ್ ಸಿಸಿ ಮುಗಿಸಿದವರಿಗೆ ಉದ್ಯೋಗವಿದೆ. ಎನ್‌ಸಿಸಿ ಇಂಥ
ಅಗತ್ಯಗಳಿಗೆ ಹೇಳಿ ಮಾಡಿಸಿದಂಥ ಕೋರ್ಸ್. ಆದರೆ ಅದನ್ನು ಆಧುನಿಕಗೊಳಿಸಬೇಕು, ವಿದ್ಯಾರ್ಥಿಗಳ ಮತ್ತು ತರಬೇತಿಯ ಮೇಲೆ ಸೂಕ್ತವಾಗಿ ಹಣ ತೊಡಗಿಸಬೇಕು. ಪರಿಕರಗಳನ್ನು
ಒದಗಿಸಬೇಕು. ಈಗಲೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಎನ್‌ಸಿಸಿ ತೆಗೆದುಕೊಳ್ಳುತ್ತಿಲ್ಲ ಎಂದೇನಿಲ್ಲ, ಆದರೆ ಅಲ್ಲಿಯ ಒಟ್ಟಾರೆ ವಾತಾವರಣ ಎನ್‌ಸಿಸಿಗೆ ಉತ್ತೇಜಕವಾಗಿಲ್ಲ. ವಿದ್ಯಾರ್ಥಿಗಳನ್ನು ಡಿಗ್ನಿ- ಮಾಡುತ್ತಿಲ್ಲ. ಅವರ ಆತ್ಮವಿಶ್ವಾಸ ಹೆಚ್ಚಿಸುವ ರೀತಿಯಲ್ಲಿ ಕೋರ್ಸ್ ಇಲ್ಲ. ಬೂಟುಗಳು, ಸಮವಸ್ತ್ರಗಳಂಥ ಕನಿಷ್ಠ ಅಗತ್ಯಗಳೂ ಅವರಿಗೆ ಸರಿಯಾಗಿ ಸಿಗುತ್ತಿಲ್ಲ. ಕಾಲೇಜುಗಳ ಬಿಟ್ಟಿ ಕೆಲಸ, ಊರಿಗೆ ಬಂದೇ ಬರುವ ‘ಗೌರವಾನ್ವಿತ’ ಅತಿಥಿಗಳ ಸ್ವಾಗತ ಇತ್ಯಾದಿ ಬೇಡದ ಕೆಲಸಗಳಿಗೆ ಅವರನ್ನು ಸಾಮಾನ್ಯವಾಗಿ ಬಳಸಿಕೊಳ್ಳಲಾಗುತ್ತದೆ.
ಕೆಲ ಕಾಲೇಜುಗಳಲ್ಲಿ ಅವರನ್ನು ಕೆಲಸದಾಳುಗಳಂತೆ ಹೀನಾಯವಾಗಿ ನೋಡಲಾಗುತ್ತದೆ. ಇವನ್ನೆಲ್ಲ ಬದಲಾಯಿಸಿ ನಾವು ಅವರನ್ನು ಕಾಲೇಜಿ ನಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಹೀರೋಗಳಂತೆ ನೋಡುವ ಅಗತ್ಯವಿದೆ. ಅವರಿಗೆ ವಿಶೇಷ ಸ್ಕಾಲರ್‌ಷಿಪ್ ನೀಡಬೇಕಿದೆ. ಅವರ ‘ಬಾಡಿ ಬಿಲ್ಡಿಂಗ್’ಗಾಗಿ ಆಹಾರಭತ್ಯೆ ಹಾಗೂ ಕಾಲೇಜಿನ ಕೆಲವು ವಿಷಯಗಳಿಗೆ ವಿನಾಯಿತಿ ನೀಡಬಹುದು. ಅಂದರೆ ಅವರಲ್ಲಿ ಆತ್ಮವಿಶ್ವಾಸ ತುಂಬಿ ಹುರಿದುಂಬಿಸಬೇಕು, ನಂತರ ಪೊಲೀಸ್, ಸೇನೆ, ರೈಲ್ವೆ, ವಿಮಾನ ನಿಲ್ದಾಣ ಭದ್ರತೆ ಇತ್ಯಾದಿ ವಲಯಗಳಲ್ಲಿ ಅವರಿಗೆ ಆದ್ಯತೆ ನೀಡಬೇಕು. ಈಗಾಗಲೇ ಇರುವ ಮೀಸಲಾತಿಯನ್ನು ಹೆಚ್ಚಿಸಬೇಕು. ಒಟ್ಟಾರೆಯಾಗಿ ಎನ್‌ಸಿಸಿಯ ಇಮೇಜ್ ಬದಲಿಸಬೇಕು. ಅದನ್ನೇ ಪ್ರತ್ಯೇಕವಾದ ಒಂದು ‘ಪದವಿ’ ಎಂದೂ ಪರಿಗಣಿಸಬಹುದು.
ಇದರಿಂದಾಗುವ ಲಾಭವೆಂದರೆ, ತರಬೇತಿ, ಕೌಶಲ ಹೊಂದಿದ ಶಿಸ್ತಿನ ಯುವಕ-ಯುವತಿಯರು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಭದ್ರತಾ ಅವಶ್ಯಕತೆಗಳಿಗಾಗಿ ದೊರೆತುಬಿಡುತ್ತಾರೆ. ಅವರಿಗೆ
ಉದ್ಯೋಗಗಳು ಸಿಗುತ್ತವೆ. ವಿಶೇಷವೆಂದರೆ, ಇದು ಹೆಚ್ಚಾಗಿ ಉದ್ಯೋಗದ ತೀವ್ರ ಅಗತ್ಯವಿರುವವರಿಗೆ, ಹಳ್ಳಿಗರಿಗೆ ಒಂದು ದಾರಿಯನ್ನು ತೆರೆದುಬಿಡುತ್ತದೆ.
ಈ ಯೋಜನೆಗೆ ಭಾರಿ ವೆಚ್ಚವೇನೂ ಆಗುವುದಿಲ್ಲ. ಎರಡನೆಯದಾಗಿ, ಕಂಪನಿಗಳಿಗೆ ತಮ್ಮ ಆಯ್ಕೆಯ ಕಾಲೇಜೊಂದರಲ್ಲಿ ತಮಗೆ ಬೇಕಾದ ರೀತಿಯ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಪದವಿ/ಡಿಪ್ಲೊಮಾ ಕೋರ್ಸ್ ಆರಂಭಿಸಿಕೊಳ್ಳಲು ಅನುಮತಿ ನೀಡಬೇಕು. ಅದರ ಅವಧಿ, ಪಠ್ಯಕ್ರಮ, ಕಲಿಕಾ ವಿಧಾನ, ಯಾರು ಕಲಿಸಬೇಕು, ಎಷ್ಟು ಸೀಟ್ ಇರಬೇಕು ಇತ್ಯಾದಿ ಎಲ್ಲ ವಿಷಯಗಳನ್ನೂ ಕಂಪನಿ ಗಳಿಗೇ ಬಿಟ್ಟುಬಿಡಬೇಕು. ಇದಕ್ಕೊಂದು ಉದಾಹರಣೆ ನೀಡುವುದಾದರೆ, ಕರ್ನಾಟಕದ ದಾಂಡೇಲಿಯ ಬಂಗೂರ ನಗರ ಪದವಿ ಕಾಲೇಜಿನಲ್ಲಿ ೪ ವರ್ಷ ಅವಽಯ ‘ಕಾಗದ ಮತ್ತು ತಿರುಳು ವಿಜ್ಞಾನ ಪದವಿ’ ಬಹಳ ವರ್ಷಗಳಿಂದ ಇದೆ. ಅದನ್ನು ಕಾಗದ ಕಾರ್ಖಾನೆಯೊಂದು ನಡೆಸುತ್ತದೆ.
ಸ್ವಾರಸ್ಯಕರ ಸಂಗತಿಯೆಂದರೆ, ಭಾರತದ ಕಾಗದ ಉದ್ಯಮಕ್ಕೆ ಬೇಕಾಗುವ ತಾಂತ್ರಿಕ ಮಾನವ ಸಂಪನ್ಮೂಲವನ್ನು ಈ ಕೋರ್ಸ್ ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ಸರಕಾರಗಳು, ಕಂಪನಿಗಳು ಆಲೋಚಿಸಬಹುದು. ಇನ್ನೂ ಒಂದು ಮಾತು. ದಟ್ಟಡವಿಯ ನಡುವಿನ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ, ಪ್ರಕೃತಿ, ಅರಣ್ಯಗಳು, ಪ್ರಾಣಿಗಳು, ಹಾವುಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ವಿಶೇಷ ಜ್ಞಾನವಿರುತ್ತದೆ. ಹಾಗೆ ನೋಡಿದರೆ, ಪಕ್ಕಾ ಹಳ್ಳಿಗಳಿಂದ ಬರುವ ಹೆಚ್ಚಿನ ವಿದ್ಯಾರ್ಥಿಗಳಿಗೆ ತಮ್ಮ ಹಳ್ಳಿಯ ಕುರಿತು ಒಳನೋಟಗಳಿರುತ್ತವೆ. ಅವರಿಗೆ ಜೇನು ಕೊಯ್ಯುವಿಕೆ, ‘ಮಾಡಿ’ ಇಳಿಸುವಿಕೆ ಬರುತ್ತದೆ, ಪ್ರಾಣಿಗಳ ಹೆಜ್ಜೆಗುರುತು ತಿಳಿಯುತ್ತದೆ, ಬಡಗಿತನ ತಿಳಿದಿರುತ್ತದೆ, ಹಳ್ಳಿಯ ಸಾಮಗ್ರಿ ಬಳಸಿ ಮನೆಕಟ್ಟಲು ಬರುತ್ತದೆ. ಆದರೆ ಅವರ ಈ ಜ್ಞಾನ
ಕಾಲೇಜುಗಳ ವಾತಾವರಣದಲ್ಲಿ ಅಪ್ರಸ್ತುತವಾಗಿರುತ್ತದೆ ಎಂಬುದು ವಿಷಾದನೀಯ.
ಹಾಗಾಗಿ ಅವರು ಆತ್ಮವಿಶ್ವಾಸ ಕಳೆದುಕೊಂಡು ‘ಬೇರೆಯವರಂತೆ’ ಆಗಲು ಯತ್ನಿಸುತ್ತಾರೆ ಮತ್ತು ತಮ್ಮ ಕೌಶಲಗಳನ್ನು ಬಿಟ್ಟುಬಿಡುತ್ತಾರೆ. ಪರಿಣಾಮ, ಅಲ್ಲಿಯೂ ಸಲ್ಲದೆ ಇಲ್ಲಿಯೂ ಸಲ್ಲದೆ ತ್ರಿಶಂಕುಗಳಾಗುತ್ತಾರೆ. ಉದ್ಯೋಗಾವಕಾಶಗಳ ಅಭಿವೃದ್ಧಿಯ ಸಂದರ್ಭದಲ್ಲಿ ನಾವು ಇವರನ್ನೂ ಗಮನಿಸಬೇಕು ಮತ್ತು ಇವರ ವಿಶೇಷ ಕೌಶಲಗಳನ್ನು ಪ್ರೋತ್ಸಾಹಿಸಬೇಕು. ಇವರಿಗೆ ಸಾಮಾನ್ಯವಾಗಿ ಇಂಗ್ಲಿಷ್ ‘ಕಬ್ಬಿಣದ ಕಡಲೆ’. ಹಾಗಾಗಿ ಇವರಿಗೆ ಇಂಗ್ಲಿಷ್ ವಿಷಯದಿಂದ ವಿಮುಕ್ತಿ ಕೊಡಬೇಕು.
(ಲೇಖಕರು ಮಾಜಿ ಪ್ರಾಂಶುಪಾಲರು ಮತ್ತು ಸಂವಹನ
ಸಮಾಲೋಚಕರು)