ಶಿಶಿರಕಾಲ
ಶಿಶಿರ್ ಹೆಗಡೆ, ನ್ಯೂಜೆರ್ಸಿ
Don is gone. ಅಂತೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗ ಖಾಲಿ ಮಾಡಿದ್ದಾನೆ. ಜೋ ಬೈಡನ್ ಅಧಿಕಾರ ಸ್ವೀಕರಿಸಿ ಆಗಿದೆ. ಅಮೆರಿಕಾ ಒಂದು ದೀರ್ಘ ನಿಟ್ಟುಸಿರು ಬಿಟ್ಟಿದೆ. ಬೈಡನ್ ಅಧಿಕಾರ ಸ್ವೀಕರಿಸಿದಷ್ಟೇ ದೊಡ್ಡ ಸುದ್ದಿ ಕೊನೆಯ ದಿನ ಟ್ರಂಪ್ ಸುಮ್ಮನೆ, ಗಲಾಟೆ ಮಾಡದೇ ವೈಟ್ ಹೌಸ್ ಅನ್ನು ಬಿಟ್ಟು ಹೋದದ್ದು.
ಡೈಲಿ ಮೇಲ್ ಪತ್ರಿಕೆಯಲ್ಲಿ ಡಾನ್ ಇಸ್ ಗೋನ್ ಎನ್ನುವುದೇ ಹೆಡ್ಡಿಂಗ್. ಗಾರ್ಡಿಯನ್ ಸೇರಿದಂತೆ ಬಹಳಷ್ಟು ಪತ್ರಿಕೆಗಳ
ಲೀಡಿಂಗ್ ಹೆಡ್‌ಲೈನ್ ಟ್ರಂಪ್‌ನ ನಿರ್ಗಮನ. ಬೈಡನ್ ಆಗಮನಕ್ಕೆ ಈ ಪತ್ರಿಕೆಗಳು ಕೊಟ್ಟ ಸ್ಥಾನ ಎರಡನೆಯದು. ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಇನ್ನು ಕೆಲವು ಪತ್ರಿಕೆಗಳು ಬೈಡನ್ ಭಾಷಣದ ಪ್ರಜಾಪ್ರಭುತ್ವ ಮರು ಸ್ಥಾಪಿತವಾಗಿದೆ’ ಎನ್ನುವ ಮಾತನ್ನೇ ಮುಖ್ಯ ಶೀರ್ಷಿಕೆಯಾಗಿ ತೆಗೆದುಕೊಂಡಿವೆ.
ಟ್ರಂಪ್ ಸೋತ ನಂತರ ಅಧಿಕಾರಕ್ಕೆ ಕಸರತ್ತಿಲ್ಲ – ಅದೆಲ್ಲದರ ಪರಿಣಾಮ ಅಮೆರಿಕನ್ನರನ್ನು ಎಷ್ಟು ಕಂಗೆಡಿಸಿತ್ತು ಎನ್ನುವುದಕ್ಕೆ
ಹಿಡಿದ ಕನ್ನಡಿಯಂತೆ ಈ ಪತ್ರಿಕೆಗಳ ಶೀರ್ಷಿಕೆಗಳು ಕಾಣಿಸುತ್ತವೆ. ಕೇವಲ ಎರಡು ವಾರದ ಹಿಂದೆ ಕಿಡಿಗೇಡಿಗಳು ಒಳ ನುಗ್ಗಿದ
ಕ್ಯಾಪಿಟಲ್ ಬಿಲ್ಡಿಂಗ್‌ನ ಅದೇ ಮೆಟ್ಟಿಲುಗಳ ಮೂಲಕ ಹೊಸ ಅಧ್ಯಕ್ಷ ಬೈಡನ್ ನಡೆದುಬರುವ ದೃಶ್ಯ ನೋಡಿ ಅಮೆರಿಕ
ಕೊನೆಗೂ ಸಮಾಧಾನಗೊಂಡಿದೆ.
ಸೋಲನ್ನು ಸ್ವೀಕರಿಸಲು ಟ್ರಂಪ್‌ಗೆ ಕೊನೆಯವರೆಗೂ ಸಾಧ್ಯವಾಗಲೇ ಇಲ್ಲ. ಫಲಿತಾಂಶವನ್ನು ಬದಲಿಸಲು ಪಟ್ಟ ಪ್ರಯತ್ನ, ಜನರನ್ನು ಗುಂಪು ಗೂಡಿಸಿದ್ದು, ಎತ್ತಿಕಟ್ಟಿ ಕ್ಯಾಪಿಟಲ್ ಬಿಲ್ಡಿಂಗ್‌ಗೆ ನುಗ್ಗುವಂತೆ ನೋಡಿಕೊಂಡಿದ್ದು ಇವನ್ನೆಲ್ಲ ವಿಸ್ತಾರ
ವಾಗಿ ಹಿಂದಿನ ವಾರ ಬರೆದಿದ್ದೆ. ಲೇಖನದ ಒಂದು ಕಡೆ ಟ್ರಂಪ್ ಅಧಿಕಾರ ಬಿಟ್ಟು ಹೋಗಲೇ ಬೇಕು – ಬೈಡನ್ ಅಧ್ಯಕ್ಷ ಗಾದಿ ಯಲ್ಲಿ ಕೂರಲೇ ಬೇಕು ಎಂದು ನಿರ್ದಿಷ್ಟತೆಯನ್ನು ಪ್ರಸ್ತಾಪ ಮಾಡಿದ್ದೆ. ಇದಕ್ಕೆ ಹಲವು ಓದುಗರು, ಟ್ರಂಪ್ ಏನನ್ನು
ಬೇಕಾದರೂ ಮಾಡಿಯಾನು ಎಂಬರ್ಥದಲ್ಲಿ ಇಮೇಲ್‌ಗಳನ್ನು ಬರೆದು, ವಾಟ್ಸಪ್ ಮಾಡಿ ಪ್ರತಿಕ್ರಿಯಿಸಿದ್ದರು.
ಅಂಥದ್ದೊಂದು ಅನುಮಾನವನ್ನು ಟ್ರಂಪ್ ಜಗತ್ತಿನಲ್ಲಿ ಹುಟ್ಟುಹಾಕಿದ್ದು ಸುಳ್ಳಲ್ಲ. ಆ ಲೇಖನ ಬರೆದ ನಂತರದ ದಿನಗಳ ಟ್ರಂಪ್‌ನ ಬದಲಾದ ಸೌಮ್ಯ ನಡೆಗಳು ನನ್ನಲ್ಲಿಯೂ ಒಂದಿಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು. ಧೂರ್ತನ ಸನ್ನಡತೆ ಕಂಡಾಗ ಹುಟ್ಟುತ್ತದೆ ಯಲ್ಲ, ಆ ತೆರನಾದ ಅನುಮಾನವದು. ಹೇಳಿ ಕೇಳಿ ಟ್ರಂಪ್. ಚುನಾವಣೋತ್ತರ ಆತನ ತೀವ್ರ ವರ್ತನೆ ನೋಡಿದ ಎಂಥವರಿಗಾದರೂ ಈ ಅನುಮಾನ ಸಹಜ – ಒಮ್ಮಿಂದೊಮ್ಮೆಲೆ ಸೌಮ್ಯವಾದರೆ ಇನ್ನೊಂದಿಷ್ಟು ಅನುಮಾನ.
ಈ ನಡುವೆ ಜಪ್ಪಯ್ಯ ಎಂದರೂ ಅಷ್ಟು ಸುಲಭದಲ್ಲಿ ಅಧ್ಯಕ್ಷ ಗಿರಿಯನ್ನು ಟ್ರಂಪ್ ಬಿಟ್ಟು ಕೊಡುವುದಿಲ್ಲ ಎಂದು ಪ್ರಪಂಚದ ಬಹುತೇಕ ಪತ್ರಿಕೆಗಳು, ವಾಹಿನಿಗಳು ದಿನ ಬೆಳಗಾದರೆ ವರದಿ ಮಾಡುತ್ತಲೇ ಇದ್ದವು. ಇದೆಲ್ಲದರ ಮಧ್ಯೆ ಕೆಲವು ವಾಹಿನಿಗಳು ಟ್ರಂಪ್‌ಗೆ ತನ್ನ ಗಾದಿ ಉಳಿಸಿಕೊಳ್ಳಲು ಕೊನೆಯ ಸಾಧ್ಯತೆಯೆಂದರೆ ಇರಾನ್‌ನ ಮೇಲೆ ಅಣ್ವಸ್ತ್ರ ಚಲಾಯಿಸಿ ಯುದ್ಧ ಮಾಡುವುದು, ಹಾಗೆ ಮಾಡಿದರೆ ಆತ ಎಮರ್ಜೆನ್ಸಿ ಕಾರಣದಿಂದ ಅಧಿಕಾರ ವರ್ಗಾಯಿಸದಿರಬಹುದು ಎಂದು ಬಿತ್ತರಿಸಿದ್ದವು. ಮೇಲ್ನೋಟಕ್ಕೆ ಒಂದು ಬಾಲ್‌ಗೆ ಹದಿನೈದು ರನ್ ಬೇಕಾದಾಗ ಎರಡು ನೋ ಬಾಲ್ ಆಗಿ ಸಿಕ್ಸರ್ ಹೊಡೆದರೆ ಸಾಧ್ಯ ಎನ್ನುವ ರೀತಿಯ ವಾದದಂತೆ ಕಾಣಿಸಿದರೂ ಅಸಾಧ್ಯ ಎಂದು ಹೇಳಲಾಗುತ್ತಿರಲಿಲ್ಲ.
ಏಕೆಂದರೆ ಅಲ್ಲಿದ್ದದ್ದು ಮತಿಗೆಟ್ಟವರಂತೆ ವ್ಯವಹರಿಸುತ್ತಿದ್ದ ಟ್ರಂಪ್. ಅಮೆರಿಕಾ ಅಧ್ಯಕ್ಷ ಎಲ್ಲಿಗೆ ಹೋದರೂ ಆತನ ಜತೆ ಒಂದು
ಕಪ್ಪು ಸೂಟ್ಕೇಸ್ ಹೋಗಲೇ ಬೇಕು. ಅದನ್ನು ನ್ಯೂಕ್ಲಿಯರ್ ಫುಟ್ಬಾಲ್ ಎಂದು ಕರೆಯಲಾಗುತ್ತದೆ. ಅದೇನು -ಟ್ಬಾಲ್ ಅಲ್ಲ
ಅಥವಾ ಫುಟ್ಬಾಲ್ ಆಕೃತಿಯಲ್ಲೂ ಅದಿಲ್ಲ. ಅಧ್ಯಕ್ಷರು ವೈಟ್ ಹೌಸ್‌ನಲ್ಲಿರಲಿ ಅಥವಾ ಜಗತ್ತಿನ ಯಾವ ಮೂಲೆಯಲ್ಲಿರಲಿ,
ಅವರ ಹತ್ತು ಮೀಟರ್ ಒಳಗಡೆ ಈ ಸೂಟ್ಕೇಸ್ ಇರಲೇಬೇಕು, ಎಲೆ ಅಡಿಕೆ ತಿನ್ನುವವರ ಕವಳದ ಸಂಚಿಯಂತೆ. ಅಮೆರಿಕಾದ
ಅಧ್ಯಕ್ಷನಾದವನು ಎಲ್ಲಿಯೇ ಇದ್ದರೂ ಅಲ್ಲಿಂದಲೇ ಹೊರ – ವೈರಿ ದೇಶದ ಮೇಲೆ ಅಣ್ವಸ ದಾಳಿಮಾಡಬಹುದಾದ ಕೋಡ್
ಗಳನ್ನು ಹೊಂದಿರುವ, ಅಣ್ವಸವನ್ನು ಲಾಂಚ್ ಮಾಡಬಹುದಾದ ಎಲೆಕ್ಟ್ರಾನಿಕ್ ಪರಿಕರ ಅದು.
2017 ರಲ್ಲಿ ಅಧ್ಯಕ್ಷ ಟ್ರಂಪ್ ಚೀನಾಕ್ಕೆ ಭೇಟಿ ನೀಡಿದಾಗ ಅಲ್ಲಿನ ಸೆಕ್ಯುರಿಟಿಯವರು ಈ ಸೂಟ್ಕೇಸ್ ಹೊತ್ತ ಅಮೆರಿಕದ ಸೈನ್ಯಾಧಿ ಕಾರಿಯನ್ನು ಬಾಗಿಲ ತಡೆದದ್ದು ದೊಡ್ಡ ಸುದ್ದಿಯಾಗಿತ್ತು. ಈ ನ್ಯೂಕ್ಲಿಯರ್ ಫುಟ್ಬಾಲ್‌ನ ಸುತ್ತ ನೂರೆಂಟು ಕತೆಗಳಿವೆ, ಊಹಾ ಪೋಹಗಳಿವೆ. ಸುಮಾರು ಇಪ್ಪತ್ತು ಕೆಜಿ ಭಾರದ ಈ ಸೂಟ್ಕೇಸ್‌ನ ಫೋಟೋ ಆಗೀಗ ಮೀಡಿಯಾದಲ್ಲಿ ಬಿತ್ತರವಾಗು ತ್ತಿರುತ್ತದೆ.
ಇದು ಅಮೆರಿಕಾದ ಅಧ್ಯಕ್ಷನ ಸರ್ವೋಚ್ಚ ಅಧಿಕಾರದ ಸಂಕೇತ ಎಂದೇ ಬಿಂಬಿತ. ಇದನ್ನು ಬಳಸಲು, ಅಣ್ವಸ ದಾಳಿ ಮಾಡಲು ಅಧ್ಯಕ್ಷ ನಾದವನು ಯಾರ ಅನುಮತಿ ಪಡೆಯಬೇಕಾಗಿಲ್ಲ. ಒಂದು ವರದಿಯ ಪ್ರಕಾರ ಜಗತ್ತಿನ ಯಾವ ದೇಶದ ಮೇಲೆ ಬೇಕಾದರೂ ಅಣ್ವಸ್ತ್ರ ದಾಳಿ ಈ ಸೂಟ್ಕೇಸ್ ನಲ್ಲಿರುವ ಸಾಧನ ದಿಂದ ಮಾಡಬಹುದು. ಅಂತಹ ಎಕ್ಸ್ಟ್ರೀಮ್ ಅನ್ನಿಸು ವಂತಹ ತಾಕತ್ತನ್ನು ಟ್ರಂಪ್ ತನ್ನ ಬಳಿ ಇಟ್ಟುಕೊಳ್ಳುವುದು ಇಷ್ಟಕ್ಕೂ ಒಳ್ಳೆಯದಲ್ಲ ಎಂದು ಹಲವು ವರದಿಗಳು ಬಿತ್ತರವಾಗಿದ್ದವು.
ಸ್ಪೀಕರ್ ನ್ಯಾನ್ಸಿ ಪಲೊಸಿ ಇಂತಹ ತಾಕತ್ತು ಇಷ್ಟು ಅಸ್ಥಿರ ಮನಸ್ಥಿತಿಯುಳ್ಳ ಅಧ್ಯಕ್ಷರ ಬಳಿ ಇರಲೇಬಾರದು ಎಂದು ಮಿಲಿಟರಿ ಜನರಲ್ ಬಳಿ ಮಾತುಕತೆ ನಡೆಸಿ, ಟ್ರಂಪ್ ಅಂಥದ್ದೊಂದು ನಿರ್ಧಾರ ತೆಗೆದುಕೊಳ್ಳದಂತೆ ತಡೆಯುವುದು ಹೇಗೆ ಎಂದು ವಾರದ ಹಿಂದೆ ಚರ್ಚಿಸಿದ್ದರು. ಇಂತಹ ಸ್ಥಿತಿಯೊಂದಕ್ಕೆ ಅಮೆರಿಕಾವನ್ನು ತಂದ ಟ್ರಂಪ್ ಕೊನೆಗೂ ಸಪ್ಪೆ ಮೊರೆ ಹಾಕಿಕೊಂಡು ವೈಟ್ ಹೌಸ್‌ನಿಂದ ಹೊರನಡೆದಾಗ ಇಡೀ ಅಮೆರಿಕಾದ ಪ್ರಾಜ್ಞ ವರ್ಗ ಉಸ್ಸಪ್ಪ ಎಂದಿದೆ.
ಟ್ರಂಪ್ ಜನವರಿ 20ರ ಬೆಳಗ್ಗೆ ವೈಟ್ ಹೌಸ್‌ನಿಂದ ಹೊರ ಹೋಗುವವರೆಗೆ ಏನು ಬೇಕಾದರೂ ಆಗಬಹುದು ಎಂದೇ ಬಹುತೇಕ ಅಮೆರಿಕನ್ನರು ಆತಂಕದಲ್ಲಿದ್ದರು. ಸಾಮಾನ್ಯ ವಾಗಿ ನಮ್ಮ ಆಫೀಸ್ ಮೀಟಿಂಗ್‌ಗಳಲ್ಲಿ ಯಾರೂ ರಾಜಕೀಯ ಮಾತನಾಡುವು ದಿಲ್ಲ. ಆದರೆ ಇವತ್ತಂತೂ ಬೆಳಗ್ಗಿನಿಂದ ಮಾತಿಗೆ ಸಿಕ್ಕ ಅಮೆರಿಕನ್ನರೆಲ್ಲ ಸಮಾಧಾನ ಹೊರಹಾಕಿದವರೇ. ಅಬ್ಬಾ ಪೀಡೆ ತೊಲಗಿತು ಎಂದವರೆ.
ಟ್ರಂಪ್ ತನ್ನ ಕೊನೆಯ ವಾರಗಳಲ್ಲಿ ಸುಮಾರು ಕಿತಾಪತಿ ಮಾಡಿದ್ದಾನೆ. ಅವೆಲ್ಲ ಈಗ ಒಂದರ ಹಿಂದೆ ಇನ್ನೊಂದು ಬೆಳಕಿಗೆ
ಬರುತ್ತಿವೆ. ಆರ್ಥಿಕ ಫ್ರಾಡ್ ಮಾಡಿದ, ಸರಕಾರಕ್ಕೆ ಮೋಸ ಮಾಡಿದ, ಕಾಂಗ್ರೆಸ್‌ನಲ್ಲಿ ಸುಳ್ಳುಹೇಳಿದ. ಹೀಗೆ ಹಲವಾರು
ಅಪರಾಧ ಗಳನ್ನು ಮಾಡಿ, ಸಾಬೀತಾಗಿ ಶಿಕ್ಷೆ ಅನುಭವಿಸುತ್ತಿರುವ ಸುಮಾರು 143 ಅಪರಾಧಿಗಳಿಗೆ ಅಧ್ಯಕ್ಷೀಯ ಕ್ಷಮೆ
ನೀಡಲಾಗಿದೆ. ಅಲ್ಲದೆ ನೂರಾರು ಹೊಸ ಒಪ್ಪಿಗೆಗಳಿಗೆ ಸಹಿ ಕೂಡ ಮಾಡಲಾಗಿದೆ.
ಹಿಂದಿನ ವಾರ ಇಲ್ಲಿನ ಕ್ಯಾಪಿಟಲ್ ಮೇಲೆ ಟ್ರಂಪ್ ಬೆಂಬಲಿಗರು ಮುತ್ತಿಗೆ ಹಾಕಿದ್ದರಲ್ಲ ಆ ದಿನ ಕೂಡ ಟ್ರಂಪ್ ಒಂದಿಷ್ಟು ನಿರ್ಧಾರಗಳನ್ನು ಕೈಗೊಂಡಿದ್ದ. ಈ ನಿರ್ಧಾರಗಳು ಈ ಗಲಾಟೆಯ ಮಧ್ಯೆ ಸುದ್ದಿಯಾಗಲೇ ಇಲ್ಲ. ಅದರಲ್ಲಿ ಒಂದು ಅರ್ಕಿಟಿಕ್ ರೆಫ್ಯೂಜ್ ತೈಲ ಗುತ್ತಿಗೆ. ಅಮೆರಿಕಾದ ಮುಖ್ಯ ನೆಲದಿಂದ ವಾಯುವ್ಯಕ್ಕೆ, ಕೆನಡಾ ದೇಶಕ್ಕೆ ಅಂಟಿಕೊಂಡಿರುವ ರಾಜ್ಯ ಅಲಾಸ್ಕಾ. ಸಾಮಾನ್ಯವಾಗಿ ಮ್ಯಾಪ್‌ನಲ್ಲಿ ಅಮೆರಿಕಾ ಪಶ್ಚಿಮದಲ್ಲಿ ಮತ್ತು ರಷ್ಯಾ ಪೂರ್ವದಲ್ಲಿರುತ್ತದೆ.
ಅದೇ ಭೂಗೋಳವನ್ನು ಸ್ವಲ್ಪ ತಿರುಗಿಸಿ ನೋಡಿದರೆ ಅಮೆರಿಕ ಮತ್ತು ರಷ್ಯಾ ಅಕ್ಕ ಪಕ್ಕದ ರಾಷ್ಟ್ರಗಳು. ಅಲಾಸ್ಕಾ ಪಕ್ಕದ ರಷ್ಯಾ. ಅಲಾಸ್ಕಾ ಮೊದಲು ರಷ್ಯಾದ ನೆಲವಾಗಿತ್ತು. ಈ ರಾಜ್ಯವನ್ನು ಅಮೆರಿಕಾ 1867ರಲ್ಲಿ ರಷ್ಯಾದಿಂದ ಕೇವಲ 7.2 ಮಿಲಿಯನ್ ಡಾಲರ್ ಹಣ ಕೊಟ್ಟು ಖರೀದಿಸಿತ್ತು. ಆ ಕಾಲದಲ್ಲಿ ರಷ್ಯಾಕ್ಕೆ ಹಣದ ಅವಶ್ಯಕತೆ. ಅಷ್ಟಾಗಿಯೂ ಅಲಾಸ್ಕಾ ಎಂದರೆ ಸದಾ ಹಿಮದಿಂದಲೇ ತುಂಬಿರುವ ಪ್ರದೇಶ.
ಪ್ರಾಣಿಗಳನ್ನು ಬಿಟ್ಟರೆ ಅಲ್ಲಿ ಮನುಷ್ಯ ವಸತಿ ಕೂಡ ಕಷ್ಟ. ಏನನ್ನೂ ಬೆಳೆಯಲು ಸಾಧ್ಯವಾಗದ ಈ ಪ್ರದೇಶವನ್ನು ಸಂಭಾಳಿಸು ವುದೇ ರಷ್ಯಾಗೆ ಹೊರೆಯಾಗಿತ್ತು. ಹೀಗೆ ಕೆಲಸಕ್ಕೆ ಬಾರದ ಜಾಗವನ್ನು ಯಾರಾದರೂ ಖರೀದಿಸುತ್ತಾರೆ, ಅದರಲ್ಲೂ ಹಣದ ಅವಶ್ಯಕತೆಯಿರುವಾಗ – ರಷ್ಯಾ ಮಾರಿತ್ತು. ಹೀಗೆ ಬರಡು ಜಾಗ ಎಂದುಕೊಂಡ ಅಲಸ್ಕಾದಲ್ಲಿ ಚಿನ್ನ, ಇತರ ಬೆಲೆಬಾಳುವ ಖನಿಜ, ಪೆಟ್ರೋಲಿಯಂ ತೈಲ ಯಥೇಚ್ಛವಾಗಿರುವುದು ಅಮೆರಿಕಾಕ್ಕೆ ಗೊತ್ತಾಗಿದ್ದೇ ಆಮೇಲೆ.
ಅಲ್ಲಿಂದ ಇಲ್ಲಿನವರಿಗೆ ಅಲ್ಲಿನ ಖನಿಜ ಸಂಪತ್ತು ಮತ್ತು ಪೆಟ್ರೋಲ್ ಮೇಲೆ ತೈಲ ಕಂಪನಿಗಳ ಕಣ್ಣಿದೆ. ಹೇಗಾದರೂ ಮಾಡಿ ಅಲ್ಲಿನ ಪ್ರದೇಶಗಳನ್ನು ಗೇಣಿ ಪಡೆದು ತೈಲವನ್ನು ಹೀರಬೇಕು ಎಂದು ಈ ಕಂಪನಿಗಳು ಎಲ್ಲಿಲ್ಲದ ಲಾಬಿ ಮಾಡುತ್ತಲೇ ಬಂದಿವೆ. ಗ್ಲೇಶಿಯರ್, ಅಪಾರವಾದ ಪ್ರಾಣಿ ಸಂಪತ್ತುಳ್ಳ ಅಲಾಸ್ಕಾದ ಉತ್ತರ ತುದಿಯ ಜಾಗವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿ ರಕ್ಷಿಸಿದ್ದು ಅಧ್ಯಕ್ಷ ರೂಸವೆಲ್ಟ. 1903ರಿಂದ ಇಲ್ಲಿನವರಿಗೆ ಎಲ್ಲ ಲಾಬಿಗಳನ್ನು ಮೀರಿ ಈ ನೈಸರ್ಗಿಕ ಶ್ರೀಮಂತ ಜಾಗವನ್ನು ಕಾಯ್ದುಕೊಂಡದ್ದು ಅಂದಿನ ಅಧ್ಯಕ್ಷ ಬರೆದ ಶಾಸನ.
ಅಂತಹ ಸಂರಕ್ಷಿತ ಪ್ರದೇಶವನ್ನು ತೈಲ ಕಂಪನಿಗೆ ಭೋಗ್ಯಕ್ಕೆ ಕೊಟ್ಟದ್ದು ಮಾತ್ರ ಡೊನಾಲ್ಡ್ ಟ್ರಂಪ್. ಅದೂ ಅಧ್ಯಕ್ಷಗಿರಿ ಮುಗಿದು ಹೊರನಡೆಯುವ ಕೊನೆಯ ವಾರದಲ್ಲಿ. ಈಗ ಲೀಸ್ ಕೊಟ್ಟಾಗಿದೆ. ಈ ಲೀಸ್‌ನಿಂದ ಹೊರ ಬರಬೇಕೆಂದರೆ ಅಮೆರಿಕಾ ಸರಕಾರ ಈ ಒಪ್ಪಂದವನ್ನು ದಂಡ ತೆತ್ತು ಮುರಿಯಬೇಕು, ಇಲ್ಲದಿದ್ದರೆ ಕಂಪನಿ ಸರಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರುತ್ತದೆ. ಕಂಪನಿಗೆ ಮುಂದುವರಿಯಲು ಬಿಟ್ಟರೆ ಸುಮಾರು ಎಪ್ಪತ್ತು ಸಾವಿರ ಚದರ ಕಿಲೋ ಮೀಟರ್ ಪ್ರದೇಶ, ಅಲ್ಲಿನ ವನ್ಯ ಸಂಪತ್ತು ಎಲ್ಲವೂ ನಾಶವಾಗುತ್ತದೆ.
ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೈಡನ್ ಮೊದಲ ದಿನವೇ ಇದಕ್ಕೊಂದು ಸ್ಟೇ ತಂದಿದ್ದಾರೆ. ಟ್ರಂಪ್ ಒಬ್ಬ ಉದ್ಯಮಿ. ಅಸಲಿಗೆ ಆತ ರಾಜಕಾರಣಿಯೇ ಅಲ್ಲ. ಅಧ್ಯಕ್ಷರಾಗುವ ಮೊದಲು ಯಾವುದೇ ಸರಕಾರಿ ಹುದ್ದೆ ನಿಭಾಯಿಸಿಯೂ ಗೊತ್ತಿರಲಿಲ್ಲ. ಸಾಮಾನ್ಯ ವಾಗಿ ಬಿಸಿನೆಸ್ ಮತ್ತು ಪರಿಸರ ಒಂದಕ್ಕೊಂದು ವಿರುದ್ಧ. ಕೈಗಾರಿಕೆ ಎಂದರೆ ಅದು ಬೆಳೆಯಲು ಪರಿಸರ ಬಲಿಯಾಗಲೇಬೇಕು ಎನ್ನುವ ಮಾತು ಬಹುತೇಕ ಕಡೆ ಲಾಗುವಾಗುತ್ತದೆ.
ಟ್ರಂಪ್‌ನ ನಡೆ, ವಿಚಾರ ಇವೆಲ್ಲ ಬಿಸಿನೆಸ್ ಒಲವಿನಿಂದಲೇ ತುಂಬಿದ್ದು ಎನ್ನುವುದು ಆತನ ನಡೆಗಳಿಂದ, ರೂಪಿಸಿದ ಕಾನೂನು ಗಳಿಂದ ತಿಳಿಯುತ್ತದೆ. ಅಂತಹ ಒಂದು ನಡೆಯೇ ಅಮೆರಿಕಾ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹೊರಬಂದದ್ದು. ಇದು ಜಗತ್ತಿನ ದಶಕದ ಅತಿ ದೊಡ್ಡ ದುರಂತಗಳಲ್ಲಿ ಒಂದು ಎಂದೇ ವಿಶ್ಲೇಷಿಸಬೇಕಾಗುತ್ತದೆ. ಜಾಗತಿಕ ತಾಪಮಾನ ಏರಿಕೆಯನ್ನು ತಗ್ಗಿಸಲು 196 ದೇಶಗಳು ಒಟ್ಟಿಗೆ ಸೇರಿ ಮಾಡಿಕೊಂಡ ಒಪ್ಪಂದವದು. ತಾಪಮಾನ ಏರಿಕೆಯನ್ನು ಕೈಗಾರಿಕಾ ಪೂರ್ವದ ಸಮಯದ ಉಷ್ಣತೆಗೆ ಹೋಲಿಸಿದರೆ 1.5 ಸೆಲ್ಸಿಯಸ್‌ಗೆ ಸೀಮಿತಗೊಳಿಸುವುದು ಈ ಒಪ್ಪಂದದ ಮೊದಲ ಗುರಿ.
ಈ ಶತಮಾನದ ಮಧ್ಯದ ಒಳಗೆ ಜಾಗತಿಕ ಹವಾಮಾನ ತಟಸ್ಥವನ್ನು ಸಾಧಿಸುವುದು ಗುರಿಯ ಮುಂದುವರಿದ ಹಾಗೆ. ಇದರರ್ಥ ಗ್ರೀನ್ ಹೌಸ್ ಅನಿಲಗಳ ಹೊರಸೂಸುವಿಕೆಯನ್ನು ಗಣನೀಯವಾಗಿ ತಗ್ಗಿಸುವುದು ಮತ್ತು ಮನುಷ್ಯ ಎಷ್ಟು ಪ್ರಮಾಣದ ಗ್ರೀನ್ ಹೌಸ್ ಅನಿಲವನ್ನು ಹೊರಸೂಸುತ್ತಾನೋ ಅಷ್ಟೇ ಪ್ರಮಾಣದಲ್ಲಿ ಅದನ್ನು ಹೀರಿ ಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳುವುದು. ಹೀಗೆ ಮಾಡುವುದರ ಮೂಲಕ ವಾತಾವರಣ ಪ್ರದೂಷಣೆಯನ್ನು ಸೊನ್ನೆಗೆ ಇಳಿಸುವುದು. ಪರಿಸರ ಸಂರಕ್ಷಣೆ ಎಂದು ಮನುಷ್ಯ ಬಾಯಿ ಬಡಿದು ಕೊಳ್ಳಲು ಶುರುಮಾಡಿ ಹಲವು ದಶಕ ಗಳಾದವು.
ಆದರೆ ಅದನ್ನು ನಿಲ್ಲಿಸಲು ಹಲವು ಕಾರಣಗಳಿಂದ ಈ ಹಿಂದೆ ಸಾಧ್ಯವಾಗುತ್ತಿರಲಿಲ್ಲ. ಈಗ ಟೆಕ್ನಾಲಜಿ ಬೆಳೆದಿದೆ. ಈ ನಿಟ್ಟಿನಲ್ಲಿ ಎಲ್ಲ ದೇಶಗಳು ಈಗಿಂದಲೇ ಕೆಲಸ ಮಾಡಿದರೆ ನಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯವಿದೆ. ಹಾಗಾಗ ದಿದ್ದಲ್ಲಿ ಇನ್ನೊಂದು ನೂರು ವರ್ಷಕ್ಕೆ ಮನುಷ್ಯ ವಾಸಕ್ಕೆ ಅಯೋಗ್ಯವಾದ ಭೂಮಿಯನ್ನು ನಮ್ಮ ಮುಂದಿನ ಪೀಳಿಗೆಗೆ ನಾವು ಬಿಟ್ಟು ಹೋಗುತ್ತೇವೆ. ಹಾಗಾದಲ್ಲಿ ಅದೊಂದು ಊಹಿಸಲೂ ಅಸಾಧ್ಯವಾದ ಘೋರ ಸ್ಥಿತಿ. ಅದರ ಪರಿಣಾಮವನ್ನು ಅಂದಾಜಿಸುವುದೇ ಕಷ್ಟ.
ಇಂತಹ ಒಪ್ಪಂದವನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿಕೊಂಡು ಹೋಗುವಂತೆ ಆದರ್ಶವಾಗಬೇಕಿತ್ತು ಅಮೆರಿಕ. ಈ ಒಪ್ಪಂದದ ಪ್ರಕಾರ ಹಲವಾರು ಕೈಗಾರಿಕೆ – ಕಾರ್ಖಾನೆಗಳು ಬಹಳಷ್ಟು ಮಾರ್ಪಾಡು ಮಾಡಿಕೊಳ್ಳ ಬೇಕಿತ್ತು. ಇದು ಸಹಜವಾಗಿ ಕೈಗಾರಿಕೆಗಳ ಉತ್ಪಾದನಾ ವೆಚ್ಚವನ್ನು ಹೆಚ್ಚಿಸುತ್ತಿತ್ತು. ಈ ಒಪ್ಪಂದಕ್ಕೆ ಸಹಿ ಹಾಕುವುದು ಎಂದರೆ ಹೆಚ್ಚಿನ ವೆಚ್ಚ, ಬೆಲೆ ಏರಿಕೆ ಮತ್ತು ಅದರ ನೇರ ಹೊರೆ ತೆರಿಗೆದಾರರ ಮೇಲೆ. ಅಲ್ಲದೆ ಒಪ್ಪಂದದ ಪ್ರಕಾರ ಸರಕಾರ ಬದಲಿ ಇಂಧನ ಬಳಸುವ ಕೈಗಾರಿಕೆಗೆ ಹೆಚ್ಚಿನ ಸವಲತ್ತು ಕೊಟ್ಟು ಪ್ರೋತ್ಸಾಹಿಸಬೇಕು.
ಒಟ್ಟಾರೆ ಬಿಸಿನೆಸ್ ಮೆಂಟಾಲಿಟಿ ಯನ್ನು ಮುಂದಿಟ್ಟು ವಿಚಾರ ಮಾಡಿದರೆ ಈ ಒಪ್ಪಂದ ಒಂದು ರೀತಿ ಹಣ ದುಬ್ಬರ ಮತ್ತು ಹೊರೆಯ ವಿಚಾರ. ಆದರೆ ಭೂಮಿ, ವಾತಾವರಣ, ಪರಿಸರದ ವಿಚಾರವನ್ನು ಮೊದಲ ಸ್ಥಾನದಲ್ಲಿಟ್ಟು ನೋಡಿದರೆ ಇದು ತೀರಾ ಅವಶ್ಯಕ. ಬಿಸಿನೆಸ್ ಮ್ಯಾನ್ ಟ್ರಂಪ್ ಹಲವು ಲಾಬಿಗಳ ಕಾರಣದಿಂದ ಈ ಒಪ್ಪಂದವನ್ನು ತಿರಸ್ಕರಿಸಿದ್ದ. ಈ ಗ್ಲೋಬಲ್ ವಾರ್ಮಿಂಗ್ ಎನ್ನುವುದೇ ಸುಳ್ಳು – Global warming is hoax ಎಂದೆಲ್ಲ ಬಡಬಡಾಯಿಸಿದ್ದ.
ಕೈಗಾರಿಕೆಗಳು ಟ್ರಂಪ್‌ಗೆ ಭೇಷ್ ಎಂದಿದ್ದವು. ಆದರೆ ಈ ಹೆಚ್ಚಿನ ಹೊರೆಯನ್ನು ಹೊರಲು ಸಿದ್ಧವಾಗಿದ್ದ ಅಮೆರಿಕಾದ ಪರಿಸರ ಪ್ರೇಮಿಗಳು ಮತ್ತು ಸಾಮಾನ್ಯ ಜನ ಇದನ್ನು ಒಪ್ಪಿರಲಿಲ್ಲ. ಈ ಒಪ್ಪಂದಕ್ಕೆ 196 ದೇಶ ಸಹಿ ಹಾಕಿದ್ದವು. ಇದೊಂದು ಜಾಗತಿಕ, ಎಲ್ಲ ದೇಶಗಳೂ ಒಟ್ಟಿಗೆ ಸೇರಿ ನಮ್ಮ ಭೂಮಿಯನ್ನು ಕಾಪಾಡಿಕೊಳ್ಳಲು ಮಾಡಲೇ ಬೇಕಾದ ಕೆಲಸವಾಗಿತ್ತು. ಆದರೆ ಅಮೆರಿಕಾವೇ ಹಿಂದೆ ಸರಿದಿದೆ ಎಂದರೆ ಸಹಜವಾಗಿ ಈ ಇಡೀ ಕೆಲಸವೇ ನಿಂತಂತೆ. ಹಾಗೆನ್ನಲು ಕಾರಣವಿದೆ.
ಪ್ರಪಂಚದ ಅತಿಹೆಚ್ಚು – ಶೇ.18.47ರಷ್ಟು ಜನಸಂಖ್ಯೆಯುಳ್ಳ ಚೀನಾ ಅತಿ ಹೆಚ್ಚು ಕಾರ್ಬನ್ ಹೊರಸೂಸುವ ರಾಷ್ಟ್ರ. ಚೀನಾ ಪ್ರತೀ ವರ್ಷ ಫಾಸಿಲ್ ಇಂಧನವನ್ನು ಸುಡುವುದರ ಮೂಲಕ ಸುಮಾರು 10 ಗಿಗಾ ಟನ್ (ಜಗತ್ತಿನ ಶೇ.28)ನಷ್ಟು ಇಂಗಾಲದ ಡೈ ಆಕ್ಸೈಡ್ ಅನ್ನು ಹೊರ ಹಾಕುತ್ತದೆ. ಜನಸಂಖ್ಯೆಗನುಗುಣವಾಗಿ ಮೂರನೆಯ ಸ್ಥಾನದಲ್ಲಿರುವ, ಪ್ರಪಂಚದ ಕೇವಲ ಶೇ.4 ಜನಸಂಖ್ಯೆಯುಳ್ಳ ಅಮೆರಿಕಾ ಇಂಗಾಲದ ಡೈ ಆಕ್ಸೆ ಡ್ ಅನ್ನು ಹೊರ ಹಾಕುವ ಎರಡನೆಯ ದೇಶ.
ಪ್ರತೀ ವರ್ಷ ಅಮೆರಿಕಾ ಹೊರ ಹಾಕುವ ಇಂಗಾಲದ ಡೈ ಆಕ್ಸೆ ಡ್ ಪ್ರಮಾಣ ಚೀನಾದ ಅರ್ಧದಷ್ಟು – 5.4 ಗಿಗಾ ಟನ್. ಒಂದು ಗಿಗಾ ಟನ್ ಎಂದರೆ ಒಂದು ಲಕ್ಷ ಕೋಟಿ ಕೆಜಿ. ಜನಸಂಖ್ಯೆಯಲ್ಲಿ ಎರಡನೆಯ ಸ್ಥಾನದಲ್ಲಿ (ಶೇ.17.70) ಇರುವ ಭಾರತ ಹೊರ ಸೂಸುವ ಇಂಗಾಲದ ಡೈ ಆಕ್ಸೆ ಡ್‌ನ ಪ್ರಮಾಣ ಕೇವಲ ಶೇ.7. ಈ ಕಾರಣಕ್ಕೆ ಅಮೆರಿಕಾ ಉಳಿದೆಲ್ಲ ದೇಶ ಗಳಿಗಿಂತ ಮೊದಲು ಫಾಸಿಲ್ ಇಂಧನದ ಮೇಲೆ ಲಗಾಮು ಹಾಕಬೇಕಿತ್ತು.
ಅಲ್ಲದೆ ಈ ಕೆಲಸದಲ್ಲಿ ಮುಂಚೂಣಿಯಲ್ಲಿದ್ದು ಚೀನಾ ಸೇರಿದಂತೆ ಉಳಿದ ದೇಶಗಳು ಈ ನಿಟ್ಟಿನಲ್ಲಿ ಹೆಜ್ಜೆ ಇಡುವಂತೆ ತನ್ನ ತಾಕತ್ತನ್ನು ಪ್ರದರ್ಶಿಸಿ ನಡೆಯುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಅಮೆರಿಕಾಕ್ಕಿತ್ತು. ಹೀಗಿರುವಾಗ ಇಂತಹ ಒಪ್ಪಂದ ವನ್ನು ಟ್ರಂಪ್ ಕಸದ ಬುಟ್ಟಿಗೆ ಎಸೆದದ್ದು ಜಾಗತಿಕ ದುರಂತವಲ್ಲದೆ ಇನ್ನೇನು. ಇದು ಖಂಡಿತವಾಗಿ ಮನುಷ್ಯನ ಭೂಮಿಯ ಮೇಲಿನ ಅಳಿವು ಉಳಿವಿನ ಪ್ರಶ್ನೆಯಾಗಿತ್ತು.
ಇದೊಂದು ಈ ಶತಮಾನದ, ಕಾಲ ಮೀರುವುದಕ್ಕಿಂತ ಮೊದಲೇ ಮನುಷ್ಯ ಮಾಡಲೇ ಬೇಕಾದ ಬಹುಮುಖ್ಯ ವಾದ ಕೆಲಸ. ಈಗ ಅಧಿಕಾರ ವಹಿಸಿದ ಬೈಡನ್ ತಮ್ಮ ರಾಜಕೀಯ ಜೀವನದುದ್ದಕ್ಕೂ ವಾತಾವರಣದ ಪರವಾಗಿ ವಕಾಲತ್ತು ವಹಿಸಿದವರು. ಅದಲ್ಲದೇ ವೋಟ್ ಗಳಿಸುತ್ತದೆಯೋ ಇಲ್ಲವ ಎನ್ನುವುದನ್ನು ಲೆಕ್ಕಿಸದೇ ಪರಿಸರ ಸಂರಕ್ಷಣೆ ಎಂಬ ಅಡಗೂಲಜ್ಜಿ ವಿಚಾರ ಎನ್ನುವ ಭಾವನೆಯುಳ್ಳ ವಿಷಯವನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿಟ್ಟು, ಅದನ್ನು ಮತ್ತೆ ಮತ್ತೆ ಒತ್ತಿ ಹೇಳುತ್ತಾ ಬಂದವರು ಬೈಡನ್.
ಜಗತ್ತಿನ ಮೂರನೆಯ ಅತಿ ಹೆಚ್ಚು ಜನಸಂಖ್ಯೆಯುಳ್ಳ ಆದರೆ ಎರಡನೇ ಅತಿ ಹೆಚ್ಚು ಕಾರ್ಬನ್ ಸೂಸುವ ದೇಶವೆಂದರೆ ನೀವು ಅಂದಾಜಿಸಿಕೊಳ್ಳಬಹುದು – ಇಲ್ಲಿನ ಸಮಾಜ ಅದ್ಯಾವ ಪರಿ ಕೈಗಾರಿಕೆಯನ್ನು ಅವಲಂಬಿಸಿದೆ ಮತ್ತು ಫಾಸಿಲ್ ಇಂಧನವನ್ನು ಬಳಸುತ್ತದೆ ಎಂದು. ಹಾಗೆ ನೋಡಿದರೆ ಆ ಕಾರಣಕ್ಕೆ ಪರಿಸರ ಸಂರಕ್ಷಣೆ ಎನ್ನುವುದೇ ಇಲ್ಲಿನ ವೋಟ್ ಗಳಿಸಲು ಅಡ್ಡವಾಗುವ ವಿಚಾರ. ಇದನ್ನು ಎಲ್ಲ ಕೈಗಾರಿಕೆಗಳು, ಕೈಗಾರಿಕೆಗೆ ಸಂಬಂಧಿಸಿದ ಕುಟುಂಬ ವಿರೋಧಿಸುವವರೇ.
ಅಂತಹ ವಿಚಾರಕ್ಕೆ ಇಷ್ಟು ಮಹತ್ವ ಕೊಟ್ಟ ಬೈಡನ್‌ರನ್ನು ಮೆಚ್ಚಲೇ ಬೇಕು. ಅಧಿಕಾರ ವಹಿಸಿದ ಕೆಲವೇ ಗಂಟೆಗಳಲ್ಲಿ
ಅಮೆರಿಕಾ ಇನ್ನೊಂದು ತಿಂಗಳಲ್ಲಿ ಮತ್ತೆ ಪ್ಯಾರಿಸ್ ಒಪ್ಪಂದಕ್ಕೆ ತಲೆಬಾಗಲಿದೆ ಎಂದು ಬೈಡನ್ ಘೋಷಿಸಿದ್ದಾರೆ. ಬರೀ
ಘೋಷಣೆಯಲ್ಲ, ಆ ನಿಟ್ಟಿನಲ್ಲಿ ಅಧಿಕಾರ ವಹಿಸಿಕೊಂಡ ದಿನದ ಸಂಜೆಯೇ ತನ್ನ ಅಧ್ಯಕ್ಷೀಯ ಪರಮಾಧಿಕಾರದಿಂದ ಒಪ್ಪಿಗೆ
ಪತ್ರಕ್ಕೆ ಸಹಿ ಕೂಡ ಹಾಕಿ ಆಗಿದೆ.
ಟ್ರಂಪ್ ತನ್ನ ಅಧಿಕಾರಾವಧಿಯಲ್ಲಿ ವಾತಾವರಣಕ್ಕೆ ವ್ಯತಿರಿಕ್ತವಾದ ಸುಮಾರು ಒಂದು ನೂರು ಕಾನೂನುಗಳನ್ನು ಜಾರಿಗೆ ತಂದಿದ್ದರು. ಆ ಎಲ್ಲ ನೂರು ಕಾನೂನನ್ನು ಎಕಾ ಏಕಿ ತಡೆ ಹಿಡಿಯುವ ಕೆಲಸವನ್ನು ಕೂಡ ಜೋ ಬೈಡನ್ ತನ್ನ ಮೊದಲ ದಿನವೇ ಮಾಡಿದ್ದಾರೆ. ಇದು ಅವರ ವಾತಾವರಣದೆಡೆಗಿನ ಖಡಕ್ ನಿಲುವನ್ನು ಸೂಚಿಸುತ್ತದೆ. ಇದೆಲ್ಲದರ ಹೊರೆಯನ್ನು ದೇಶ ಹೊರಬೇಕು ಎಂಬ ಪ್ರಜ್ಞೆ ಅವರಿಗಿದೆ. ಹಾಗಾಗಿಯೇ ಇದು ಅಷ್ಟು ಸುಲಭದ ಕೆಲಸವಲ್ಲ.
ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅಮೆರಿಕಾ ಹಿಂದಕ್ಕೆ ಸರಿದ ನಂತರ ಉಳಿದ ದೇಶಗಳು ಸದ್ದಿಲ್ಲದೇ ಇದರಿಂದ ನುಣುಚಿ ಕೊಳ್ಳಲು ನೋಡುತ್ತಿದ್ದವು. ಈಗ ಬೈಡನ್‌ನ ಈ ನಿಲುವಿನಿಂದ ಎಲ್ಲ ದೇಶಗಳೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗು ವಂಥ ಸ್ಥಿತಿ ಪುನರ್‌ನಿರ್ಮಾಣವಾಗಿದೆ. ಅದಲ್ಲದೇ ಅತಿ ಹೆಚ್ಚು ಕಾರ್ಬನ್ ಹೊರ ಸೂಸುವ ಚೀನಾದಂಥ ದೇಶವನ್ನು ಸಹ ಈ ನಿಟ್ಟಿನಲ್ಲಿ ಕೆಲಸಮಾಡುವಂತೆ ಬೈಡನ್ ಒಪ್ಪಿಸುವುದರಲ್ಲ ಯಾವುದೇ ಅನುಮಾನವಿಲ್ಲ.
ಆರ್ಥಿಕವಾಗಿ ಸದೃಢವಲ್ಲದ ದೇಶಗಳಿಗೆ ಈ ಪ್ರದೂಷಣೆಯನ್ನು ನಿಯಂತ್ರಿಸುವ ಕೆಲಸ ಅಷ್ಟು ಸುಲಭದ್ದಲ್ಲ. ಅಂತಹ ದೇಶ ಗಳಿಗೆ ಆರ್ಥಿಕ ಮತ್ತು ತಂತ್ರಜ್ಞಾನ ಸಹಾಯ ಕೊಡುವ, ಆ ದೇಶಗಳು ಆ ನಿಟ್ಟಿನಲ್ಲಿ ಸಮರ್ಥವಾಗುವಂತೆ ನೋಡಿಕೊಳ್ಳುವ
ಭರವಸೆಯನ್ನು ಕೂಡ ಬೈಡನ್ ನೀಡಿzರೆ. ಬೈಡನ್ ಅವರ ವಾತಾವರಣ ಸಂರಕ್ಷಣೆಯ ಗಟ್ಟಿ ನಿಲುವನ್ನು ನೋಡಿದರೆ ಈ
ಎಲ್ಲ ಭರವಸೆ ಈಡೇರುವುದರಲ್ಲಿ ಅನುಮಾನವಿಲ್ಲ. ದೊಡ್ಡಣ್ಣ ಎನ್ನುವುದು ಕೇವಲ ಬಾಯಿ ಮಾತಿಗಷ್ಟೇ ಸೀಮಿತವಾಗದೇ ನಿಜ ಅರ್ಥದಲ್ಲಿ ಸಾಬೀತಾಗುವುದೇ ಇಂತಹ ನಡೆಯಿಂದ. ಈಗಾಗಲೇ ಕೋವಿಡ್‌ನಿಂದಾಗಿ ಎಲ್ಲ ದೇಶಗಳಂತೆ ಅಮೆರಿಕಾ
ಅರ್ಥವ್ಯವಸ್ಥೆ ಕೂಡ ದುರ್ಬಲವಾಗಿದೆ.
ಇದನ್ನು ಮತ್ತೆ ಗಟ್ಟಿಗೊಳಿಸಲು ಕೈಗಾರಿಕೆ ಬೆಳೆಯಲೇ ಬೇಕು. ಹೀಗಿರುವಾಗ ಕೂಡ ವಸುಂಧರೆ ಮತ್ತು ವಾತಾವರಣವನ್ನು ಮೊದಲ ಸ್ಥಾನದಲ್ಲಿಟ್ಟು ನಿರ್ಧಾರವನ್ನು ತೆಗೆದುಕೊಳ್ಳುವುದು ಸಾಮಾನ್ಯದ ವಿಚಾರವಲ್ಲ. ದೇಶಕ್ಕಿಂತ ಮನುಕುಲದ ಅವಶ್ಯಕತೆ ದೊಡ್ಡದು ಎನ್ನುವ ನಿಲುವು ಪ್ರದರ್ಶಿಸುವ ಕೆಲಸವನ್ನು ಬೈಡನ್ ಮಾಡಿದ್ದಾರೆ- ಅದು ಕೂಡ ಅಧಿಕಾರ ವಹಿಸಿಕೊಂಡ ಮೊದಲ
ದಿನವೇ. ಆ ಕಾರಣಕ್ಕೆ ಬೈಡನ್ ಅಧಿಕಾರ ಗ್ರಹಣ ಐತಿಹಾಸಿಕ ಮತ್ತು ಮುಖ್ಯವಾಗುತ್ತದೆ.
ಇದು ವಸುದೈವ ಕುಟುಂಬಕಮ್ ಎನ್ನುವ ಭಾವದ ವಿಸ್ತರಣೆಯೇ ಅಲ್ಲವೇ? ಧರೆಯೊಳುತ್ತಮನು ಧರೆಗೂ ಉತ್ತಮನು ಎನ್ನುವುದೇ ಈ ಹೊತ್ತಿನ ಸಮಾಧಾನ.