Friday, 20th September 2024

ಕನ್ನಡದಲ್ಲಿ ವೈದ್ಯ ಸಾಹಿತ್ಯ: ಅವಲೋಕನ

ವೈದ್ಯ ವೈವಿಧ್ಯ

drhsmohan@gmail.com

ವೈದ್ಯಕೀಯ ಸಾಹಿತ್ಯ ಕನ್ನಡದಲ್ಲಿ ಜನಪ್ರಿಯವಾಗುತ್ತಿದೆ. ಅದು ಹಲವು ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಲೇಖನಗಳು, ಕತೆಗಳು, ವರದಿಗಳನ್ನು ಗಮನಿಸಿದಾಗ ಗೊತ್ತಾಗುತ್ತದೆ. ಓದುಗರು ವೈದ್ಯಕೀಯ, ಆರೋಗ್ಯ ವಿಷಯಗಳನ್ನು ತಿಳಿಯಲು ಮೊದಲಿಗಿಂತ ಈಗ ಹೆಚ್ಚು ಉತ್ಸುಕರಾಗಿದ್ದಾರೆ ಎಂಬ ಅಂಶ ಸ್ಪಷ್ಟ.

ಅದು ೧೯೮೯ರ ಸಮಯ. ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯದ ಬಗ್ಗೆ ಹಲವಾರು ಸಭೆ ಸಮಾರಂಭಗಳು, ಗೋಷ್ಠಿಗಳು, ವಿಚಾರ ಸಂಕಿರಣಗಳು, ಒಂದು ಅಥವಾ ಎರಡು ದಿನಗಳ ಸಮ್ಮೇಳನಗಳು ರಾಜ್ಯದ ಹಲವೆಡೆ ನಡೆಯುತ್ತಿದ್ದವು. ಆಗ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಯಲ್ಲಿ ಇದ್ದ  ನಾನು ರಾಜ್ಯದ ಹಲವು ಪತ್ರಿಕೆಗಳಿಗೆ ವೈದ್ಯಕೀಯ ಲೇಖನಗಳನ್ನು ವಿಪುಲವಾಗಿ ಬರೆಯುತ್ತಿದೆ. ಆರಂಭದ ನನ್ನ ಹೆಚ್ಚಿನ ಲೇಖನಗಳು ಮಣಿಪಾಲದ ತರಂಗ, ಉದಯವಾಣಿ, ತುಷಾರ ಹಾಗೂ ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಪ್ರಕಟ ವಾಗಿದ್ದವು.

ಆಗ ತರಂಗದ ಸಂಪಾದಕ ಸಂತೋಷಕುಮಾರ ಗುಲ್ವಾಡಿಯವರು ಮತ್ತು ನಾನು ಒಟ್ಟಾಗಿ ವೈದ್ಯಕೀಯ ಸಾಹಿತ್ಯದ ಹಲವು ಸಮ್ಮೇಳನ, ಸಮಾರಂಭ ಗಳಲ್ಲಿ ಒಟ್ಟಾಗಿ ಭಾಗವಹಿಸಿದ್ದಿದೆ. ಆಗ ನಾನು ನಾಡಿನ ೫ ಮುಖ್ಯ ಲೇಖಕರ ಸಂದರ್ಶನ ನಡೆಸಿ ತರಂಗ ಪತ್ರಿಕೆಗೆ ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯ: ಒಂದು ಚರ್ಚೆ ಎಂಬ ಲೇಖನ ಬರೆದಿದ್ದೆ. ಅದು ೧೧ಜೂನ್ ೧೯೮೯ರಂದು ತರಂಗದಲ್ಲಿ ಮುಖಪುಟ ಲೇಖನವಾಗಿ ಪ್ರಕಟವಾಯಿತು. ಅದರಲ್ಲಿ ನಾನು ಪ್ರಸ್ತಾಪಿಸಿದ ವಿಷಯಗಳು ಮತ್ತು ವೈದ್ಯ ಸಾಹಿತಿಗಳು ಕೊಟ್ಟ ಉತ್ತರಗಳು ಈಗಲೂ ಮುಖ್ಯವಾಗಿವೆ. ಅಂದಿನ ಮತ್ತು ಇಂದಿನ ಸನ್ನಿವೇಶಗಳಲ್ಲಿ ಕೆಲವು ವ್ಯತ್ಯಾಸಗಳೂ ಇವೆ. ಸುಮಾರು ೩೩ ವರ್ಷಗಳ ಹಿಂದಿನ ಆ ಸಂದರ್ಶನದ ಮುಖ್ಯ ಅಂಶಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.
***

ವೈದ್ಯಕೀಯ ಸಾಹಿತ್ಯ ಕನ್ನಡದಲ್ಲಿ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಅದು ನಾವು ಹಲವು ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಪ್ರಕಟ ವಾಗುತ್ತಿರುವ ವೈವಿದ್ಯಮಯ ಲೇಖನಗಳು, ಕತೆಗಳು, ವರದಿಗಳನ್ನು ಗಮನಿಸಿದಾಗ ಗೊತ್ತಾಗುತ್ತದೆ. ಅಂದರೆ ಕನ್ನಡ ಓದುಗರು ವೈದ್ಯಕೀಯ, ಆರೋಗ್ಯ ವಿಷಯಗಳನ್ನು ತಿಳಿಯಲು ಮೊದಲಿಗಿಂತ ಈಗ ಹೆಚ್ಚು ಉತ್ಸುಕರಾಗಿzರೆ ಎಂಬ ಅಂಶ ಸ್ಪಷ್ಟ. ಅಲ್ಲದೆ ವೈದ್ಯರು ರೋಗಿಗೆ ಸಂಬಂಧಪಟ್ಟ ಕಾಯಿಲೆಯ ವಿಚಾರವನ್ನು ಗುಟ್ಟಾಗಿರಿಸಿ ತಮ್ಮ ಹೆಚ್ಚುಗಾರಿಕೆ ತೋರಿಸುವ ಪ್ರವೃತ್ತಿ ಮೊದಲೂ ಇತ್ತು, ಈಗಲೂ ಇದೆ. ಆದರೆ ಈಗ ಕಡಿಮೆ ಆಗಿದೆ. ಏಕೆಂದರೆ ರೋಗಿಗಳು ಪ್ರಜ್ಞಾವಂತರಾಗುತ್ತಿದ್ದಾರೆ, ಬುದ್ಧಿವಂತರಾಗುತ್ತಿದ್ದಾರೆ.

ವೈದ್ಯಕೀಯ ಸಾಹಿತ್ಯ ಸಾಹಿತ್ಯದ ಇತರ ಎಲ್ಲ ಪ್ರಕಾರಗಳಿಗಿಂತ ಸಾಮಾನ್ಯ ಜನರ ಜೀವನಕ್ಕೆ ಹೆಚ್ಚು ಹತ್ತಿರವಾದುದು. ಪ್ರಸ್ತುತ ಯಾರೂ ರೋಗಿ ಯಾಗದೇ ಇರಬಹುದು, ರೋಗವು ಈವರೆಗೆ ಬಂದಿಲ್ಲದೆ ಇರಬಹುದು. ಆದರೆ ಪ್ರತಿಯೊಬ್ಬರೂ ನಮ್ಮ ದೇಹ, ಅದರಲ್ಲಿರುವ ಸ್ವಾರಸ್ಯ, ಅದು ವ್ಯತ್ಯಾಸ ವಾದರೆ ಬರುವ ಅನಿಷ್ಟಗಳು, ಮುನ್ನೆಚ್ಚರಿಕೆ ಕ್ರಮವಾಗಿ ತಾವೇನು ಮಾಡಬೇಕು? ತಮ್ಮ ಆರೋಗ್ಯದ, ವೈದ್ಯಕೀಯ ಸಮಸ್ಯೆಗಳಿಗೆ ಯಾರ ಸಲಹೆ ಪಡೆಯಬೇಕು? – ಎಂಬ ಮೂಲಭೂತ ವಿಚಾರಗಳನ್ನು ತಿಳಿದಿರಬೇಕು.

ಆದರೆ ಎಲ್ಲರಿಗೂ ಹಲವು ಕಾರಣಗಳಿಂದ ಅದು ಸಾಧ್ಯವಾಗುವುದಿಲ್ಲ. ಹಾಗಾಗಿ ಓದು ಬಲ್ಲವರು ನಾನಾ ಮೂಲಗಳಿಂದ ಓದಿ ತಿಳಿದುಕೊಂಡು
ಉಳಿದವರಿಗೆ ತಿಳಿಸುವ ಜವಾಬ್ದಾರಿಯನ್ನೂ ಹೊಂದಿದ್ದಾರೆ. ಕನ್ನಡದಲ್ಲಿ ಅತಿ ಸರಳವಾಗಿ ವೈದ್ಯಕೀಯ ಲೇಖನ ಬರೆಯುತ್ತಿದ್ದ ಕೀರ್ತಿ ಡಾ ರಾ ಶಿವರಾಮ್ ( ರಾ.ಶಿ ) ಅವರಿಗೆ ಸಲ್ಲತಕ್ಕದ್ದು. ಈಗ ವೈದ್ಯರು ಹೆಚ್ಚು ಸಂಖ್ಯೆಯಲ್ಲಿ ಬರೆಯುತ್ತಿದ್ದಾರೆ. ಲೇಖನಗಳು ಪ್ರಕಟಗೊಳ್ಳುತ್ತಿವೆ, ಪುಸ್ತಕಗಳು ಪ್ರಕಾಶಗೊಳ್ಳುತ್ತಿವೆ.

ಅಲ್ಲದೇ ಇನ್ನೊಂದು ವಿಚಾರ ಎಂದರೆ ರೋಗಿ – ವೈದ್ಯರ ಮಧುರ ಸಂಬಂಧ ಈಗೀಗ ವಿವಿಧ ವ್ಯಾಪಾರೀ ಕಾರಣಗಳಿಗಾಗಿ ಹದಗೆಡುತ್ತಿದೆ. ನಕಲಿ ವೈದ್ಯರು ಹೆಚ್ಚುತ್ತಿದ್ದಾರೆ ( ಹಣ ಮಾಡುವ ಒಂದೇ ದೃಷ್ಟಿಯಿಂದ ). ಜನರಿಗೆ ವೈದ್ಯರ ಮೇಲೆ ಸಂಶಯ ಬರತೊಡಗಿದೆ. ಇದು ಒಂದು ಮುಖವಾದರೆ ಇನ್ನು ಕೆಲವು ಅಶ್ಲೀಲ – ಪೀತ ಪತ್ರಿಕೆಗಳ ಹಾವಳಿ ಹೆಚ್ಚಾಗುತ್ತಿವೆ. ಇವು ಜನರ ಆರೋಗ್ಯ, ಕಾಮ, ಲೈಂಗಿಕ ವಿಚಾರಗಳ ಬಗ್ಗೆ ವಿಕೃತಗೊಂಡ ಲೇಖನಗಳನ್ನು, ಕತೆ ಗಳನ್ನು, ಚಿತ್ರಗಳನ್ನು ಪ್ರಕಟಿಸಿ ಜನರನ್ನು ಅದರಲ್ಲೂ ಹದಿಹರೆಯದ ಯುವಜನರನ್ನು ತಪ್ಪು ದಾರಿಗೆ ಎಳೆಯುವಲ್ಲಿ ತಮ್ಮದೇ ಆದ ಕೊಡುಗೆ ಯನ್ನು ಅಮೋಘವಾದ ರೀತಿಯ ಸಲ್ಲಿಸುತ್ತಿವೆ. ಈ ಎಲ್ಲಾ ವಿರೋಧಾಬಾಸಗಳ ನೋಡುವೆಯೂ ಉತ್ತಮ ಪ್ರಾಮಾಣಿಕ ವೈದ್ಯರಿದ್ದಾರೆ,

ಕಳಕಳಿಯ ವೈದ್ಯ ಲೇಖಕರಿದ್ದಾರೆ, ಅಷ್ಟೇ ಕಳಕಳಿ, ಉತ್ಸಾಹವುಳ್ಳ ಪತ್ರಿಕಾ ಸಂಪಾದಕರುಗಳು, ಪತ್ರಿಕೆಗಳು, ಪುಸ್ತಕ ಪ್ರಕಾಶಕರೂ ಇದ್ದಾರೆ. ಇವರುಗಳು ಸಾಮಾನ್ಯ ಜನರ ಆರೋಗ್ಯಕರ ದೈಹಿಕ – ಮಾನಸಿಕ ಬೆಳವಣಿಗೆಯನ್ನು ಬಯಸುವವರು. ಈ ಹಿನ್ನೆಲೆಯಲ್ಲಿ ಕನ್ನಡದ ಖ್ಯಾತ ಐವರು ಲೇಖಕರೊಡನೆ ನಡೆಸಿದ ಚರ್ಚೆಯನ್ನು ಓದುಗರಿಗಾಗಿ ವಿಶೇಷವಾಗಿ ಮಾಡಲಾಗಿದೆ. ಈ ಐವರೆಂದರೆ – ಕಾಮ ವಿಜ್ಞಾನದ ಬಗ್ಗೆ ೧೯೪೩ರಷ್ಟು ಹಿಂದೆಯೇ ಅತಿ ಶಾಸ್ತ್ರೀವಾಗಿ, ವೈಜ್ಞಾನಿಕವಾಗಿ ವಿಕೃತ ಕಾಮ ಎಂಬ ಪುಸ್ತಕವನ್ನು ಬರೆದ, ಆರೋಗ್ಯ ಮತ್ತು ದಾಂಪತ್ಯ ಜೀವನಕ್ಕೆ ಸಂಬಂಧಪಟ್ಟಂತೆ ೧೯೫೧ ರಿಂದ ಸತತ ಐದು ವರ್ಷಗಳ ಕಾಲ ವಿವಿಧ ಲೇಖಕರು, ವೈದ್ಯರಿಂದ ಬರೆಸಿ ದಾಂಪತ್ಯ ಜೀವನ ಎಂಬ ಮಾಸ ಪತ್ರಿಕೆಯ ಸಂಪಾದಕತ್ವ ವಹಿಸಿ ಯಶಸ್ವಿ ಜನಪ್ರಿಯ ಪತ್ರಿಕೆಯಾಗಿ ಹೊರ ತಂದ ಡಾ.ಡಿ ವಿ ರಾವ್, ತನ್ನ ಮತ್ತು ಪತಿಯ ಆರೋಗ್ಯ ಹದಗೆಟ್ಟಿದ್ದರೂ ಜನರ ಆರೋಗ್ಯದ ಬಗ್ಗೆ ತೀವ್ರ ಕಳಕಳಿ ಯಿಂದ ವಿಪುಲ ವೈವಿದ್ಯಮಯ ವೈದ್ಯಕೀಯ ಸಾಹಿತ್ಯ ಸೃಸ್ಟಿಸಿದ ಮತ್ತು ಇನ್ನೂ ಬರೆಯುತ್ತಿರುವ ಡಾ.ಅನುಪಮಾ ನಿರಂಜನ, ಕನ್ನಡದಲ್ಲಿ ವೈದ್ಯ ಕೀಯ ತಾಂತ್ರಿಕ ಶಬ್ದಗಳ ಸಮಸ್ಯೆಯನ್ನು ಮನಗಂಡು, ಸಮಸ್ಯೆಯ ಆಳಕ್ಕೆ ಇಳಿದು ಸಂಶೋಧಿಸಿ ಇಂಗ್ಲೀಷ್ – ಕನ್ನಡ ವೈದ್ಯ ಪದಕೋಶವನ್ನು ಕೊಡುಗೆಯಾಗಿತ್ತ ಡಾ. ಡಿ ಎಸ್ ಶಿವಪ್ಪ, ತಮ್ಮ ಬಿಡುವಿಲ್ಲದ ಆಡಳಿತಾತ್ಮಕ ಕೆಲಸಗಳ ನಡುವೆಯೂ ಹಲವು ರೀತಿಯ ವೈದ್ಯಕೀಯ ಸಾಹಿತ್ಯ ಸೇವೆ ಮಾಡುತ್ತಿರುವ ಡಾ ಪಿ.ಎಸ್.ಶಂಕರ್, ಸಾಮಾನ್ಯ ಜನರು ಆರೋಗ್ಯಕರ ಮನಸ್ಸನ್ನು ಹೊಂದುವಲ್ಲಿ ವಿಪುಲ ಸಾಹಿತ್ಯ ಸೇವೆಯಲ್ಲಿ ತೊಡಗಿರುವ ಡಾ ಸಿ.ಆರ್. ಚಂದ್ರಶೇಖರ್ – ಇವರುಗಳು. ವೈದ್ಯಕೀಯ ಸಾಹಿತ್ಯಕ್ಕೆ ಕೇವಲ ನಾಲ್ಕು ವರ್ಷಗಳ ಹಿಂದೆ ಕಾಲಿಟ್ಟ, ವಯಸ್ಸಿನಲ್ಲಿ ಕಿರಿಯವನಾದ ನನ್ನ ಪ್ರಶ್ನೆ ,
ಸಮಜಾಯಿಷಿಗಳಿಗೆ ಅತಿ ಸೂಕ್ತ ರೀತಿಯಲ್ಲಿ ವೈವಿಧ್ಯಮಯವಾಗಿ ಉತ್ತರಿಸಿ ಸಹಕರಿಸಿದ ಈ ಎಲ್ಲ ಹಿರಿಯ ಲೇಖಕರುಗಳಿಗೆ ನಾನು ಆಭಾರಿ.

ಕಾಮೋದ್ದೀಪನ ಲೇಖನಗಳನ್ನು ವೈದ್ಯಕೀಯದ ಹೆಸರಲ್ಲಿ ಬರೆಯುವುದು ತಪ್ಪು: ಡಾ ಡಿ ವಿ ರಾವ್. ಕನ್ನಡದ ಓದುಗರಿಗೆ ಡಾ. ದೊಡ್ಡೇರಿ ವೆಂಕಟ ಗಿರಿರಾಯರ ಹೆಸರು ಚಿರಪರಿಚಿತ. ಬಹುಮುಖ ಪ್ರತಿಭೆಯುಳ್ಳ ಇವರು ಬಡ ಕೃಷಿಕ ಮನೆತನದಿಂದ ಬಂದು ವೈದ್ಯರಾಗಿ, ಸಾಹಿತಿಗಳಾಗಿ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಗ್ರಾಹಕರಾಗಿ ಹೆಸರು ಪಡೆದರು. ೪೫ ವರ್ಷ ವೈದ್ಯರಾಗಿ ಸಾಗರ, ದೊಡ್ಡಬಳ್ಳಾಪುರದಲ್ಲಿ ಸೇವೆ ಸಲ್ಲಿಸಿದ ಇವರು ಈಗ ತಮ್ಮ ೭೬ನೆಯ ವಯಸ್ಸಿನಲ್ಲಿ ಪುನಃ ಕೃಷಿಕರಾದವರು.

ವೈದ್ಯಕೀಯವನ್ನು ಈಗ ಬಿಟ್ಟಿದ್ದರೂ ಸಾಹಿತ್ಯ ಮತ್ತು ಫೋಟೋಗ್ರಫಿಯ ಕೃಷಿಯನ್ನು ವಿಪುಲವಾಗಿ ಮಾಡುತ್ತಿದ್ದಾರೆ. ಇವರು ಕೈಯಾಡಿಸಿದ ಸಾಹಿತ್ಯ ಪ್ರಕಾರಗಳು ತೀರಾ ಭಿನ್ನ ರೀತಿಯವು. ೧೯೩೨ ರಲ್ಲಿ ಭಾವಗೀತೆಗಳನ್ನು ಬರೆಯಲು ಆರಂಭಿಸಿದ ಇವರು ಇದುವರೆಗೆ ಕನ್ನಡದಲ್ಲಿ ೨೦೦ ಕ್ಕೂ ಹೆಚ್ಚು
ಮತ್ತು ಇಂಗ್ಲೀಷ್ ನಲ್ಲಿ ೫೦ ಕ್ಕೂ ಹೆಚ್ಚು ಲೇಖನಗಳನ್ನು ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಇವರ ಸಾಹಿತ್ಯದ ಪ್ರಕಾರಗಳೆಂದರೆ ಶಿಶು ಸಾಹಿತ್ಯ, ಕವನಗಳು, ಸಣ್ಣ ಕಥೆಗಳು, ವೈದ್ಯಕೀಯ ಮತ್ತು ಕಾಮ ವಿಜ್ಞಾನ ಸಾಹಿತ್ಯ, ಕಾದಂಬರಿ, ಪ್ರವಾಸ ಕಥನ, ಫೋಟೋಗ್ರಫಿ ಇತ್ಯಾದಿ.

೧೯೪೩ ರಲ್ಲಿ ರೋಹಿಣಿ ಎಂಬ ಭಾವಗೀತೆಗಳ ಸಂಗ್ರಹ ಪ್ರಕಟಿಸಿದಂದಿನಿಂದ ಇಂದಿನವರೆಗೆ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ. ಆರೋಗ್ಯ ಮತ್ತು ಶಾಸ್ತ್ರೀಯ ಕಾಮ ವಿಜ್ಞಾನಗಳ ಬಗ್ಗೆ ಕನ್ನಡದಲ್ಲಿ ಯಾರೂ ಬರೆಯದ ಕಾಲದಲ್ಲಿ ಇವರು ದಾಂಪತ್ಯ ಜೀವನ ಎಂಬ ಮಾಸ ಪತ್ರಿಕೆಯನ್ನು ಐದು ವರ್ಷಗಳ ಕಾಲ ಹೊರ ತಂದರು. ಫೊಟೋಗ್ರಫಿಯಲ್ಲಿ ಅಂತರರಾಷ್ಟ್ರೀಯ ಪ್ರಾವೀಣ್ಯ ಪಡೆದ ಇವರು ಭಾರತದ ಉನ್ನತ ಪಿಕ್ಟೋರಿಯಲ್ ಫೋಟೋಗ್ರಾಫರ್‌ಗಳಲ್ಲಿ ಪ್ರಮುಖರು.

ಫೋಟೋಗ್ರಫಿಯಲ್ಲಿ ನೂರಕ್ಕೂ ಹೆಚ್ಚಿನ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ, ಪದಕಗಳನ್ನು ಪಡೆದ ಇವರು ೧೯೮೨ ರಲ್ಲಿ ಕರ್ನಾಟಕ
ರಾಜ್ಯ ಪ್ರಶಸ್ತಿಯಿಂದಲೂ ಪುರಸ್ಕೃತರಾಗಿದ್ದಾರೆ. ಇವರ ಅವಧಾನ ಕಾದಂಬರಿ ಅಮೃತಗಳಿಗೆ ಹೆಸರಿನಲ್ಲಿ ದಿ. ಪುಟ್ಟಣ್ಣ ಕಣಗಾಲ್ ರಿಂದ ಸಿನಿಮಾ ಕೂಡ
ಆಗಿದೆ. ಪ್ರಶ್ನೆ ೧. ಕನ್ನಡದಲ್ಲಿ ವೈದ್ಯಕೀಯ ಲೇಖನಗಳು, ಪುಸ್ತಕಗಳು ನೀವು ಮೊದಲು ಬರೆಯುವಾಗ ಪ್ರಕಟಗೊಳ್ಳುತ್ತಿದ್ದುದಕ್ಕಿಂತ ಈಗ ಜಾಸ್ತಿ
ಸಂಖ್ಯೆಯಲ್ಲಿ ಪ್ರಕಟಗೊಳ್ಳುತ್ತಿದೆಯೇ? ಇದಕ್ಕೆ ಕಾರಣ ಹೇಳಬಲ್ಲಿರಾ ? ನಾನು ೧೯೪೦ -೫೦ ರ ಸಾಲಿನಲ್ಲಿ ಬರೆಯುತ್ತಿದ್ದಾಗ ಪ್ರಕಟ ಆಗುತ್ತಿದ್ದುದಕ್ಕಿಂತ ಈಗ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡದಲ್ಲಿ ವೈದ್ಯಕೀಯ ಲೇಖನಗಳು, ಪುಸ್ತಕಗಳು ಪ್ರಕಟಗೊಳ್ಳುತ್ತಿವೆ.

ದೇಹ ರಚನೆ, ಆರೋಗ್ಯ, ಔಷಧಿಗಳ ವಿಚಾರವಾಗಿ ಅರಿತುಕೊಳ್ಳಬೇಕೆಂಬ ಹಂಬಲ ಜನಸಾಮಾನ್ಯರಲ್ಲಿ ಜಾಗೃತವಾಗಿರುವುದು ಮುಖ್ಯ ಕಾರಣ. ದೈನಿಕ ಮತ್ತು ನಿಯತ ಕಾಲಿಕ ಪತ್ರಿಕೆಗಳು ಈ ವಿಚಾರದ ಲೇಖನಗಳನ್ನು ಪ್ರಕಟಿಸುತ್ತಿರುವುದು ಮತ್ತೊಂದು ಕಾರಣ. ಪ್ರಶ್ನೆ ೨. ನಿಮ್ಮ ಅಭಿಪ್ರಾಯದಲ್ಲಿ ವೈದ್ಯಕೀಯ ಲೇಖನಗಳ ಬಗ್ಗೆ ಜನರ ನಿರೀಕ್ಷೆ ಏನು ? ವೈದ್ಯಕೀಯ ವಿಚಾರಗಳಿಗೆ ಸಂಬಂಧಿಸಿದ ಲೇಖನಗಳನ್ನು ಆಸಕ್ತಿಯಿಂದ ಗಮನವಿಟ್ಟು
ಓದುವವರ ಸಂಖ್ಯೆ ಕಡಿಮೆ. ಆದರೆ ದೇಶದ ದುರದೃಷ್ಟ ಎಂದರೆ ಕೀಳು ಅಭಿರುಚಿ ಹೊಂದಿರುವ ಅಸಂಖ್ಯ ಅಸಂಸ್ಕೃತರ ವಿಕೃತ ಕಾಮದ ತೃಷೆಯನ್ನು
ತಣಿಸಲೆಂದೇ ಕಾಮೋದ್ದೀಪಕ ಲೇಖನಗಳನ್ನು ವೈದ್ಯಕೀಯ ಲೇಖನಗಳೆಂಬ ಸೋಗಿನಲ್ಲಿ ಕೆಲವು ಪತ್ರಿಕೆಗಳು ಪ್ರಕಟಿಸುತ್ತಿರುವುದು ದುರದೃಷ್ಟಕರ.

ಅಲ್ಲದೇ ತಮ್ಮಲ್ಲಿ ಯಾವ ಕೊರತೆ ಇದೆ, ಕುಂದುಂಟಾಗಿದೆ, ತಮಗೆ ಏನು ಬೇಕು ಎಂಬುದರ ತಿಳುವಳಿಕೆಯೇ ಇಲ್ಲದ ಸಾಮಾನ್ಯ ಜನತೆಯ ನಿರೀಕ್ಷೆ ಎಂಥಹುದು, ಹೇಗಿವೆ ಎಂದು ತಿಳಿಯುವುದು ಕಷ್ಟವೇ ಸರಿ. ಪ್ರಶ್ನೆ ೩. ಪತ್ರಿಕಾ ಲೇಖನಗಳು ಪುಸ್ತಕಗಳ ಇತಿ – ಮಿತಿಗಳು. ಜನಸಾಮಾನ್ಯರ ತಿಳಿವಳಿಕೆ, ವಿದ್ಯೆ, ಗ್ರಹಿಕೆ, ವೈಚಾರಿಕತೆ ಮೊದಲಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವೈದ್ಯಕೀಯ ಲೇಖನಗಳನ್ನು ಬರೆಯಬೇಕಾಗುತ್ತದೆ ಮತ್ತು ಪ್ರಕಟಿಸ ಬೇಕಾಗುತ್ತದೆ. ಆದ್ದರಿಂದ ವೈದ್ಯಕೀಯ ಲೇಖನಗಳ ಭಾಷೆ, ನಿರೂಪಣೆ, ಪಾರಿಭಾಷಿಕ ಶಬ್ದಗಳ ಪ್ರಯೋಗ ಮೊದಲಾದವುಗಳ ಮೇಲೆ ಒಂದು ಹಿಡಿತ ಮತ್ತು ಮಿತಿ ಇರಬೇಕಾದುದು ಅವಶ್ಯಕ.

ವೈದ್ಯಕೀಯ ವಿಚಾರದಲ್ಲಿ ಆಸಕ್ತರಾಗಿರುವವರು ಮಾತ್ರ ಪುಸ್ತಕಗಳನ್ನು ಕೊಂಡು ಓದುವುದರಿಂದ ಪುಸ್ತಕಗಳಲ್ಲಿ ವಿಷಯ ಪ್ರತಿಪಾದನೆಯಲ್ಲಿ ಹೆಚ್ಚಿನ
ತಾಂತ್ರಿಕ, ವೈಜ್ಞಾನಿಕ ವಿಷಯಗಳು ವಿಶ್ಲೇಷಣೆ ಗಳನ್ನು ಸೇರಿಸಬಹುದು. ಆದರೆ ನಿಯತಕಾಲಿಕ ಪ್ರಕಟಣೆಗಳಲ್ಲಿ ಹಾಗೆ ಮಾಡುವುದು ಉಚಿತ
ಆಗಲಾರದು. ಪ್ರಶ್ನೆ ೪. ಕೆಲವು ವೈದ್ಯರು ಹೆಚ್ಚಿನ ಸಂದರ್ಭಗಳಲ್ಲಿ ರೋಗಿಗಳನ್ನು ಕೇಸ್‌ಗಳೆಂದು ಪರಿಗಣಿಸಿ ಮಾನವೀಯ ಅಂಶಗಳನ್ನು ಗೌಣ ವಾಗಿಸುತ್ತಾರೆ ಎಂಬ ದೂರಿದೆ. ಆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೆಲವೊಂದು ವೈದ್ಯರು ಈ ರೀತಿ ವರ್ತಿಸುವುದು ನಿಜ. ಅದಕ್ಕೆ ಮುಖ್ಯ ಕಾರಣ ವೈದ್ಯರುಗಳ ಗುಣ, ಶೀಲ ನಿರ್ಮಾಣಗಳಲ್ಲಿ ಉಂಟಾದ ಕುಂದು.

ಈಗಿನ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಮತ್ತು ವೈದ್ಯಕೀಯ ವಿದ್ಯಾಭ್ಯಾಸಗಳಲ್ಲಿನ ನ್ಯೂನತೆಗಳೇ ಕಾರಣ. ಮುಖ್ಯವಾಗಿ ಮಾನವೀಯ ಗುಣಗಳನ್ನು
ಅರಿತು ಅವುಗಳನ್ನು ಬಾಲ್ಯದಿಂದಲೇ ಮೈಗೂಡಿಸಿಕೊಳ್ಳಲು ಸಹಾಯಕ ಆಗುವಂತಹ ವಿದ್ಯಾಭ್ಯಾಸ ಕ್ರಮ ಮತ್ತು ಸಾಂಸಾರಿಕ ಸ್ಥಿತಿಗತಿಗಳು ನಮ್ಮಲ್ಲಿ
ಇಲ್ಲ.

 
Read E-Paper click here