Monday, 25th November 2024

ಕರುನಾಡಿನಲ್ಲಿ ’ಕಾಂತಾರಾ’ ಬೆನ್ನಲ್ಲೇ ಕಿರುತೆರೆಯ ’ಕನ್ನಡತಿ’ ಹವಾ

ಕಿರುನೋಟ

ರಮಾನಂದ ಶರ್ಮಾ

ramanandsharma28@gmail.com

ಇತ್ತೀಚೆಗೆ ಬೆಂಗಳೂರಿನಿಂದ ೫೦೦ ಕಿಮೀ ದೂರವಿರುವ ಮಲೆನಾಡಿನ ನಮ್ಮೂರಿಗೆ ಹೋಗಿದ್ದೆ. ಸಾಮಾನ್ಯವಾಗಿ ಮುಂಜಾನೆ ೬ ಘಂಟೆಗೆ ಮನೆ ತಲುಪು ತ್ತಿದ್ದಂತೆ, ಮನೆಯ ಮುಂದೆ ನೀರು ಹಾಕುತ್ತಿದ್ದ 75 ವರ್ಷ ವಯಸ್ಸಿನ ಪಕ್ಕದ ಮನೆ ಅಜ್ಜಿ ಓಡಿ ಬಂದು ನನ್ನ, ಹೆಂಡತಿ -ಮಕ್ಕಳ ಯೋಗ ಕ್ಷೇಮ ವಿಚಾರಿಸಿ ಚಹಾ-ತಿಂಡಿ ಆಯಿತೇ ಎಂದು ಕೇಳುವುದು ರೂಢಿ. ಈ ಬಾರಿ ವಿಭಿನ್ನ, ‘ಕನ್ನಡತಿ ನೋಡಿದ್ಯಾ, ಅಮ್ಮ ಮ್ಮನನ್ನು ಕ್ಯಾನ್ಸರ್‌ನಿಂದ ಸಾಯಿಸಲಿಲ್ಲ ತಾನೆ? ಭುವಿ – ಹರ್ಷನ ಮದುವೆಗೆ ತೊಂದರೆ ಇಲ್ಲ ತಾನೆ? ಈ ಮದುವೆಗೆ ಆ ಮಾಯಾವಿ ವರು(ವರೂಧಿನಿ) ಅಡ್ಡ ಬಂದಿಲ್ಲ ತಾನೆ?‘ ಎಂದು ಒಂದೇ ಉಸುರಿನಲ್ಲಿ ಕೇಳಿದಳು.

‘ಹಾಳಾದ ಕರೆಂಟು ಮೂರು ದಿನದಿಂದ ಇಲ್ಲ, ಕನ್ನಡತಿ ನೋಡೋಕೇ ಆಗಿಲ್ಲ’ ಎಂದು ಒಂದೇ ಸವನೆ ಬಡ ಬಡಿಸುತ್ತಾಳೆ. ಕನ್ನಡತಿ ಧಾರಾವಾಹಿ ಆಕೆಯನ್ನು ಎಷ್ಟರಮಟ್ಟಿಗೆ ಆಕ್ರಮಿಸಿಕೊಂಡಿದೆ ಎಂಬುದು ಮತ್ತೆ ಹೇಳಬೇಕಿಲ್ಲ. ಧಾರಾವಾಹಿಯ ಅಜ್ಜಿಯ ಬೈಗುಳವನ್ನೂ ಮೀರಿಸುವಂತೆ ವಿದ್ಯುತ್ ಇಲಾಖೆಯನ್ನು ವಾಮಾ ಗೋಚರವಾಗಿ ಬೈಯ್ಯುವುದನ್ನು, ಹಿಡಿ ಶಾಪ ಹಾಕುವುದನ್ನು ನೋಡಿ ಆಶ್ಚರ್ಯಗೊಂಡಿದ್ದೆ. ಅಕಸ್ಮಾತ್ ವಿದ್ಯುತ್  ಇಲಾಖೆ ಯವರು ಯಾರಾದರೂ ಅಲ್ಲಿ ಇದ್ದಿದ್ದರೆ ಅವರ ತಿಥಿ ಗ್ಯಾರಂಟಿ! ಅಷ್ಟರಮಟ್ಟಿಗೆ ಅಜ್ಜಿ ಸಿಟ್ಟಿನಿಂದ ಉರಿಯುತ್ತಿದ್ದಳು. ಕೊನೆಗೆ ಅವಳ ಧಾರಾವಾಹಿ ನೋಡುವಿಕೆಗೆ ಭಂಗ ಬಾರದಿರಲಿ ಎಂದು ಯುಪಿಎಸ್ ವ್ಯವಸ್ಥೆ ಮಾಡಿಕೊಟ್ಟು, ಅವಳಲ್ಲಿ ಕಾಶಿಯಾತ್ರೆಯ ಧನ್ಯತೆ ಮೂಡಿದ್ದು ಕಂಡು ಬೆಂಗಳೂರಿಗೆ ಮರಳಿದೆ. ಇದು ಧಾರಾ ವಾಹಿ ಹುಚ್ಚು ಯಾವ ಲೆವೆಲ್‌ಗೆ ಏರಿದೆ ಮತ್ತು ದಿನ ನಿತ್ಯದ ಜೀವನದಲ್ಲಿ ಹೇಗೆ ಮತ್ತು ಎಷ್ಟು ಆಳವಾಗಿ ಸೇರಿಕೊಡಿದೆ ಎನ್ನುವುದರ ಸಣ್ಣ ಜಲಕ್.

ಕೆಲವು ಧಾರಾವಾಹಿಗಳು ಯಾಕಾದರೂ ಮುಗಿಯುವದಿಲ್ಲವೋ ಎಂದು ವೀಕ್ಷಕರು ಅಲವತ್ತುಕೊಳ್ಳುತ್ತಿರು ವಂತಿರುತ್ತವೆ. ತಮ್ಮಂತೆ ಧಾರಾವಾಹಿ ಗಳನ್ನು ನೊಡುವವರೊಡನೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದರೊಂದಿಗೆ, ಜಾಲತಾಣದಲ್ಲಿ ಕೂಡ ಅದನ್ನು ಹೊರಹಾಕುತ್ತಾರೆ. ‘ಬದುಕು’ ಎನ್ನುವ ಧಾರಾವಾಹಿ ವರ್ಷಾನುಗಟ್ಟಲೆ ನಡೆದು ಅಂತ್ಯ ಕಾಣುವ ಕುರುಹು ಕಾಣದಾದಾಗ ವೀಕ್ಷರೊಬ್ಬರು, ಮನುಷ್ಯನ ಸರಾಸರಿ ‘ಬದುಕು’ ೬೦-೭೦ ವರ್ಷ ಗಳಾಗಿದ್ದು ಅಲ್ಲಿಯವರೆಗೂ ಇದು ಮುಂದುವರಿಯುತ್ತೆ ಎಂದು ಲೇವಡಿ ಮಾಡಿದ್ದರು.

ಇತ್ತೀಚೆಗೆ ‘ಮಂಗಳ ಗೌರಿ ಮದುವೆ’ ಎನ್ನುವ ಧಾರಾವಾಹಿಗೂ ಇದೆ ರೀತಿ ಟೀಕೆ, ಅಪಹಾಸ್ಯದ ಸುರಿಮಳೆ ಜಾಲತಾಣ ತುಂಬಾ ಹರಿದತ್ತು. ಕೆಲವು
ಧಾರಾವಾಹಿಗಳು ನೋಡಿದಷ್ಟೂ ನೋಡಿಸಿಕೊಳ್ಳುತ್ತಿದ್ದು, ಅಂತ್ಯ ಹತ್ತಿರವಾಗುತ್ತಿರುವಂತೆ ಇಷ್ಟು ಬೇಗ ಅಂತ್ಯ ಕಾಣುತ್ತಿದೆಯೇ ಎಂದು ವೀಕ್ಷಕರು ವ್ಯಾಕುಲತೆ ಮತ್ತು ರೋಷವನ್ನು ವ್ಯಕ್ತಮಾಡುತ್ತಾರೆ. ಟಿ.ಎನ್.ಸೀತಾರಾಮ್‌ರ ಬಹುತೇಕ ಎಲ್ಲ ಧಾರಾವಾಹಿಗಳು ಈ ಕೆಟಗರಿಗೆ ಸೇರಿದ್ದು, ವೀಕ್ಷಕರು ಅವುಗಳನ್ನು ಮೆಲುಕುಹಾಕುತ್ತಾರೆ. ಇತ್ತೀಚೆಗೆ ಕರೋನಾ ಕಾರಣದಿಂದ ದಿಢೀರ ನಿಂತು ಹೋದ ‘ಮಗಳು ಜಾನಕಿ’ ಧಾರಾವಾಹಿಯನ್ನು ಅವರು ತಾರ್ಕಿಕ ಅಂತ್ಯ ಕಾಣಿಸಲಿಲ್ಲವೆಂದು ಅವರನ್ನು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ಈಗಲೂ ತರಾಟೆಗೆ ತೆಗೆದುಕೊಳ್ಳುತ್ತಾರೆ ಮತ್ತು ಬೇಸರ ವ್ಯಕ್ತ ಮಾಡುತ್ತಾರೆ.

ಜಾಲತಾಣದಲ್ಲಿನ ಪ್ರತಿಕ್ರಿಯೆಗಳನ್ನು ನೋಡಿದರೆ, ಇತ್ತೀಚೆಗೆ ‘ಕನ್ನಡತಿ’ ಧಾರಾವಾಹಿ ಭಾರೀ ಸಂಚಲನ ಮೂಡಿಸಿದೆ. ಕಾರ್ಪೋರೇಟ್ ಕುಳಗಳ ಕೌಟುಂಬಿಕ ಮಜಲು ಮತ್ತು ಗ್ರಾಮೀಣ ಬದುಕಿನ ಹಂದರದ ಹಿನ್ನೆಲೆಯಿಂದ ಬಂದ ಕಟ್ಟಾ ಕನ್ನಡಾಭಿಮಾನಿ ಹುಡುಗಿಯ ಸಂಬಂಧಗಳ ಮದ್ಯೆ ಹೆಣೆಯಲಾದ ಕನ್ನಡತಿ ವೀಕ್ಷಕರ ಮನಗೆದ್ದು, ಧಾರಾವಾಹಿ ಲೋಕದಲ್ಲಿ ಹೊಸ ರೀತಿಯ ಸಂಚಲನ ಮೂಡಿಸಿದ್ದು ವಿಶೇಷ. ಧಾರಾವಾಹಿಗಳ ಯಶಸ್ಸಿಗೆ ಅನಿವಾರ್ಯವಾದ ಸಿದ್ಧ ಸೂತ್ರಗಳು ಅಲ್ಲಲ್ಲಿ ನುಸುಳಿದರೂ, ಕಥೆ, ಅಭಿನಯ, ಸಂಭಾಷಣೆ ಮಲೆನಾಡಿನ ಸುಂದರ ಹೊರಾಂಗಣಕ್ಕೆ ಒತ್ತು ನೀಡಿ ಭಿನ್ನತೆಯನ್ನು ಕಾಪಾಡಿಕೊಂಡುಬಂದಿದೆ. ಸಾಮಾನ್ಯವಾಗಿ ಧಾರಾವಾಹಿಗಳು ಒಂದು ವರ್ಗದ, ಒಂದು ವಯಸ್ಸಿವನರ ಒಲವು ಗಳಿಸುತ್ತಿದ್ದು ಅವರಷ್ಟೇ ಆ ಸಮಯದಲ್ಲಿ ಟಿವಿ ಮುಂದೆ ಅಸೀನರಾಗಿರುತ್ತಾರೆ.

ಆದರೆ, ಕನ್ನಡತಿ ಈ ಭೇದಭಾವ ಇಲ್ಲದೇ ಸಮಸ್ತ ದಾರಾವಾಹಿ ವೀಕ್ಷಕ ವರ್ಗವನ್ನೇ ಸೆಳೆದಿದೆ. ಕನ್ನಡ ಧಾರಾವಾಹಿಗಳೆಂದರೆ ಮುಖ ತಿರುತಿಸು ತ್ತಿದ್ದವರು, ಮುಖ್ಯವಾಗಿ ಕಾಲೇಜು ಮಕ್ಕಳು, ಆಗೊಮ್ಮೆ ಈಗೋಮ್ಮೆ ಒಂದು ಐದು ನಿಮಿಷ ನೋಡುತ್ತಿದ್ದವರು, ಈ ಧಾರಾವಾಹಿ ನೋಡಲು ಮೊದಲೇ ಟಾವೆಲ್ ಹಾಕುತ್ತಾರಂತೆ ಎನ್ನುವ ಮಾತುಗಳನ್ನು ಕೇಳಿದಾಗ ಅಚ್ಚರಿಯಾಗುತ್ತದೆ. ಹಾಗೆ ನೋಡಿದರೆ ಇದು ಶೋಲೆ, ಚೆನ್ನೈ ಎಕ್ಸಪ್ರೆಸ್, ಪಠಾಣ್ ಅಥವಾ ಡಾ. ರಾಜ್‌ರ ಬಂಗಾರದ ಮನುಷ್ಯನಂಥ ಚಿತ್ರವಲ್ಲ. ಧಾರಾವಾಹಿ ಕಾರ್ಖಾನೆಯಲ್ಲಿ ಅಷ್ಟೇನೂ ಅನುಭವ ಇಲ್ಲದವರು ಮಾಡಿದ ಪ್ರಯತ್ನ ಎಂದು ಹೇಳಲಾಗುತ್ತದೆ.

ಬಹುತೇಕ ಎಲ್ಲ ಹೊಸ ಮತ್ತು ಲವಲವಿಕೆಯ ‘ಎಳೆನಿಂಬೆ ಕಾಯಿ’ ಗಳು. ಕೇವಲ ಹಳೆ ಮುಖಗಳನ್ನೇ ನೋಡಿ ಧಾರಾವಾಹಿಗಳ ಬಗೆಗೆ ಅಲರ್ಜಿ ಡೆವಲಪ್ ಮಾಡಿಕೊಂಡವರಿಗೆ ‘ಕನ್ನಡತಿ’ ಒಂದು ರಿಲೀಫ್ ಮತ್ತು ಸೊಗಸಾದ ಬದಲಾವಣೆಯಾಗಿತ್ತು. ಕನ್ನಡತಿಯಲ್ಲಿ ಎಲ್ಲ ಪಾತ್ರಗಳು ವೀಕ್ಷಕರ ಗಮನ ಸೆಳೆದರೂ, ಅಮ್ಮಮ್ಮ , ಹರ್ಷ ಮತ್ತು ಭುವಿಯ ಪಾತ್ರಗಳು ಎಲ್ಲರ ಮನದಲ್ಲೂ ಅಚ್ಚೊತ್ತಿತ್ತು. ಕನ್ನಡ ಧಾರಾವಾಹಿಗಳಲ್ಲಿ ಇತ್ತೀಚೆಗೆ ಅನಿವಾರ್ಯ ವಾದ ಕೃತ್ರಿಮತೆ, ಆಡಂಬರ, ವೈಭೋಗ, ಉಡುಪುಗಳ ಅಟ್ಟಹಾಸ ಇರದೆ, ಸಹಜತೆಯ ಜಾಡಿನಲ್ಲಿ ಕಥೆ ಓಡುವುದು ಅಕರ್ಷಣೀಯವಾಗಿತ್ತು.

ಅದು ಒಂದು ಧಾರಾವಾಹಿ ಎನ್ನುವುದನ್ನು ಮರೆತು ವೀಕ್ಷಕರು ಅದನ್ನು ತಮ್ಮ ಮುಂದಿನ ಮನೆಯ, ಪಕ್ಕದ ಅಥವಾ ಬಡಾವಣೆಯ ಒಂದು ಮನೆಯಲ್ಲಿ ನಡೆಯುವ ಕಥೆ ಎಂದು ಭಾವಿಸುತ್ತಿದ್ದರು. ಕಥೆಯಲ್ಲಿ ಈ ಪಾತ್ರಗಳಿಗೆ ಕಿಂಚಿತ್ ನೋವಾದರೂ ಸಹಿಸಿಕೊಳ್ಳಲಾರದಷ್ಟು ಆ ಪಾತ್ರಗಳಲ್ಲಿ ಲೀನವಾಗು ತ್ತಿದ್ದರು. ಒಂದೆರಡು ಸಂಚಿಕೆಗಳಲ್ಲಿ ಈ ಪಾತ್ರಗಳು ಕಾಣದಿದ್ದರೆ ಅಕಾಶವೇ ಕಳಚಿ ಬಿದ್ದಂತೆ ಅ ಕ್ರೋಶ ವ್ಯಕ್ತ ಮಾಡುತ್ತಿದ್ದರು ಮತ್ತು ಜಾಲತಾಣದಲ್ಲಿ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು.

ಈ ಧಾರಾವಾಹಿಯಲ್ಲಿ ರೋಮಾನ್ಸ್ ಇದೆ. ಆದರೆ, ಉಳಿದ ಧಾರಾವಾಹಿಗಳಂತೆ ಸಂಭಾಷಣೆ ಇದು ‘ರಮ್ಯ ಚೈತ್ರ ಕಾಲ’ ಎನ್ನುವಂತೆ ರಮ್ಯಆಗಿರದಿದ್ದರೂ, ನಾಯಕ-ನಾಯಕಿಯರ ಸಂಭಾಷಣೆಯಲ್ಲಿ ಶೃಂಗಾರ ರಸ ಗೋಚರಿಸುತ್ತದೆ. ಇದರಲ್ಲಿ ಬಿಸಿ ಅಪ್ಪುಗೆ ಇಲ್ಲ, ಚುಚ್ಚು ಮಾತಿಲ್ಲ, ಮರ್ಯಾದೆ ಮೀರುವ ದೃಶ್ಯಗಳಿಲ್ಲ. ದೇಹ ಕೊಂಕಿಸಿ -ಬಗ್ಗಿಸುವ ಬಿನ್ನಾಣವಿಲ್ಲ, ಜೋಡಿಗಳು ಮರ ಸುತ್ತುವುದಿಲ್ಲ, ಪಂಚತಾರಾ ಹೋಟೆಲ್ಲಿನಲ್ಲಿ ಟೇಬಲ್ ಮೇಲೆ ಮೊಣಕೈ ಊರಿ ಹರಟುವುದಿಲ್ಲ, ಪಾರ್ಕ್‌ನಲ್ಲಿ ಸುತ್ತಾಡುವುದಿಲ್ಲ, ಆದರೂ ಹೈ ಡೆಸಿಬಲ್ ರೋಮಾನ್ಸ್ ಸದ್ದಿಲ್ಲದೇ ಗೋಚರಿಸುತ್ತದೆ. ಅವರು ತಮ್ಮ ದೈನಂದಿನ ಸಮಸ್ಯೆಗಳನ್ನು ವಿನಿಮಯ ಮಾಡುಕೊಳ್ಳುತ್ತಿದ್ದಾಗಲೂ ಅವರಲ್ಲಿ ಪರಸ್ಪರರ ಬಗೆಗೆ ಹುದುಗಿಕೊಂಡಿರುವ ಅವ್ಯಕ್ತ ಪ್ರೀತಿ-ಪ್ರೇಮ ಮತ್ತು ವಿಶ್ವಾಸ ಅವರಿಗರಿವಿಲ್ಲದಂತೆ ಹೊರಹೊಮ್ಮುತ್ತಿದ್ದು, ಇದನ್ನು ವೀಕ್ಷಕರು, ಮುಖ್ಯವಾಗಿ ಹದಿ ಹರೆಯದವರ ಹೃದಯವನ್ನು ನವಿರಾಗಿ ಮೀಟತ್ತದೆ.

ಇವರ ಹೈ ವೋಲ್ಟೇಜ್ ರೋಮಾನ್ಸನ್ನು ಲೋವೋಲ್ಟೇಜ್ ನಲ್ಲಿ ತೋರಿಸಿರುವ ವೈಖರಿಗೆ ಕಾಲೇಜು ಹುಡುಗರು ಫಿದಾ ಆಗಿದ್ದು, ಅವರು ಕನಸು ಹೆಣೆಯುತ್ತಿದ್ದು, ಜಾಲತಾಣದ ಪೋಸ್ಟ್ ಪ್ರಕಾರ ತಮ್ಮ ಬಾಳಿನಲ್ಲಿ ಇಂಥ ಅವಕಾಶ ಬರಬಾರದೇ ಎನ್ನುತ್ತಿದ್ದಾರಂತೆ. ಈ ಜೋಡಿಯೇ ಈ ಧಾರಾವಾಹಿಗೆ ವೀಕ್ಷಕರು ದಾಂಗುಡಿ ಇಡುವಂತೆ ಮಾಡಿದ್ದು ಸುಳ್ಳಲ್ಲ. ಈ ಜೋಡಿ ಎಲ್ಲ ಧಾರಾವಾಹಿಗಳ ಜೋಡಿಗಳಿಗಿಂತ ಫೇವರಿಟ್ ಆಗಿದೆ. ಕಿರುತೆರೆ ಲೋಕದಲ್ಲಿ ಈ ಜೋಡಿ ಇಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿದೆ ಎಂದರೆ, ನಿಜ ಜೀವನದಲ್ಲೂ ಈ ಜೋಡಿ ಸಪ್ತಪಡಿ ತುಳಿಯಲಿ ಎನ್ನುವ ಒಕ್ಕೊರಲಿನ ಕೂಗು ವೈರಲ್ ಆಗಿ ಕೇಳುತ್ತಿತ್ತು.

ಹಾಗೆಯೇ ಧಾರಾವಾಹಿಯಲ್ಲಿ ಅಮ್ಮಮ್ಮನನ್ನು ಕ್ಯಾನ್ಸರ್‌ನಿಂದ ಸಾಯಿಸಿದಾಗ, ನಿರ್ದೇಶಕರು ಎದುರಿಗೆ ಭೇಟಿಯಾದರೆ ಅವರ ತಿಥಿ ಗ್ಯಾರಂಟಿ ಎನ್ನು ವಷ್ಟು ಬಹುತೇಕ ವೀಕ್ಷಕರು ಅಕ್ರೋಶಗೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಧಾರಾವಾಹಿಗಳು ಸಕಾರಾತ್ಮಕ ಅಥವಾ ನಕಾರಾತ್ಮ ವಾಗಿ ಟ್ರೋಲ್ ಆಗುವುದು ಇತ್ತೀಚಿನ ದಿನಗಳಲ್ಲಿ ತೀರಾ ಮಾಮೂಲು. ಆದರೆ, ಕನ್ನಡತಿ ಸಕಾರಾತ್ಮಕವಾಗಿ ನಿರೀಕ್ಷೆ ಮೀರಿ ಟ್ರೋಲ್ ಆಗಿದೆ. ಈ ನಿಟ್ಟಿನಲ್ಲಿ ಪಕ್ಕದ್ಮನೆ ಅಜ್ಜಿಯದು ಏಕಾಂಗಿ ಮೊರೆತವಲ್ಲ.

ಇದರ ಹಿಂದೆ ಬೆಟಾಲಿಯನ್ ಇದೆ. ಒಂದು ಧಾರಾವಾಹಿಯನ್ನು ವೀಕ್ಷಕರು ಇಷ್ಟು ಹಚ್ಚಿಕೊಂಡಿದ್ದು ಬಹುಶಃ ಇದೇ ಮೊದಲೇನೋ ಎನ್ನುವ ಅಭಿಪ್ರಾಯ ಕಿರುತೆರೆ ಉದ್ಯಮದವರು ಮತ್ತು ವೀಕ್ಷಕರು ಅಭಿಪ್ರಾಯ ಪಡುತ್ತಾರೆ. ಕ್ರಿಕೆಟ್‌ನಲ್ಲಿ ರೋಹಿತ್, ರಾಹುಲ ಮತ್ತು ಕೊಹ್ಲಿಯಂಥ ಘಟಾ
ನುಘಟಿಗಳು ಉರುಳಿ, ಬೋರ್ಡ್‌ಗೆ ಇರದ ವಾಷಿಂಗ್ಟನ್ ಸುಂದರ, ಸೂರ್ಯ ಯಾದವ ಮತ್ತು ಗಿಲ್ ಸಿಕ್ಸರ್ ಪೇರಿಸಿದಂತೆ, ಕಿರುತೆರೆಯ ದಿಗ್ಗಜರನ್ನು ಹಿಂದೆ ಹಾಕಿ ಹೊಸಬರ ಕನ್ನಡತಿ ಮುನ್ನುಗ್ಗಿದೆ.

ಕಥೆ ಏನು ಹೊಸದಲ್ಲ. ಇಂಥ ನೂರಾರು ಕಥೆಗಳನ್ನು ನೋಡಿರಬಹುದು. ಆದರೆ, ಅದನ್ನು ಟ್ರೀಟ್ ಮಾಡಿದ ಶೈಲಿ ಮತ್ತು ವೈಖರಿ, ವೀಕ್ಷಕರಿಗೆ ಮುದ ನೀಡುತ್ತದೆ. ಬೋರ್ಡ್‌ನಲ್ಲಿ ಹೆಚ್ಚು ಕಾಣದ ಞಛಿbಜಿಟ್ಚ್ಟಛಿ ಕನ್ನಡತಿ ಟೀಂ ಸದ್ದು ಮಾಡುತ್ತಿದೆ. ಧಾರಾವಾಹಿ ಎಂದರೆ ಹಿಂದಿ ಧಾರಾವಾಹಿ ಎಂದು ಕನ್ನಡವನ್ನು ನಿರ್ಲಕ್ಷ ಮಾಡಿದವರೂ ಕನ್ನಡತಿಗೆ ಒಲಿದಿರುವುದು ಒಂದು ಆಶ್ಚರ್ಯ ಕಾರಕ ಬೆಳವಣಿಗೆ. ಈ ಧಾರಾವಾಹಿಯಲ್ಲಿ ಬರುವ ಗಂಡು ಮಕ್ಕಳು ಇಲ್ಲದೇ ತೀರಿಹೋದ ತಂದೆಯ ಅಂತಿಮ ಕ್ರಿಯೆಯನ್ನು ಅವರ ಮಗಳು ತಲೆ ತಲಾಂತರದಿಂದ ಬಂದ ಸಂಪ್ರದಾಯ, ಕಟ್ಟಳೆ ಮತ್ತು ಶಾಸ ವನ್ನು ಮುರಿದು ಮಾಡುವ ದೃಶ್ಯಾವಳಿ ಕೆಲವು ಮಡಿವಂತರು ಮೆಚ್ಚದಿದ್ದರೂ, ಬಹುತೇಕರ ಶ್ಲಾಘನೆಗೆ ಒಳಗಾಗಿದ್ದಲ್ಲದೇ, ಇದರಿಂದ ಪ್ರೇರಿತರಾಗಿ ಉತ್ತರಕನ್ನಡ ಜಿಯ ಕಾರವಾರದ ಹತ್ತಿರದ ಹಳ್ಳಿಯಲ್ಲಿಹೆಣ್ಣುಮಗಳೊಬ್ಬಳು ತಂದೆಯ ಅಂತಿಮ ಕ್ರಿಯೆಯನ್ನು ತಾನೆ ಮಾಡಿದ್ದು, ಇದು ವೈರಲ್ ಆಗಿದೆ. ಧಾರಾವಾಹಿಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವುದಿಲ್ಲ ಎನ್ನುವವರಿಗೆ ಶಾಕ್ ನೀಡಿದೆ.

ಭಾರತೀಯ, ಮುಖ್ಯವಾಗಿ ಹವ್ಯಕ ಬ್ರಾಹ್ಮಣ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಶೋಕೇಸ್ ಮಾಡಿದ್ದು, ಇಂದಿನ ಯುವಜನಾಂಗ ಹೀಗೂ ಇದೆಯಾ ಎಂದು ಕೇಳುವಂತೆ ಮಾಡಿದ್ದು ಇನ್ನೊಂದು ವಿಶೇಷ. ಧಾರಾವಾಹಿ ಮುಗಿದು ತಿಂಗಳಾಗಿದೆ. ಅದರೆ, ಮಳೆನಿಂತರೂ ಹನಿ ನಿಲ್ಲಲಿಲ್ಲ ಎನ್ನುವಂತೆ ಧಾರಾವಾಹಿಯ ಬಗೆಗೆ, ಮುಖ್ಯವಾಗಿ ಅದರ ನೀರಸ ಅಂತ್ಯ, ಅಮ್ಮಮ್ಮನ ಸಾವು, ವಂಚಿಸಿದ ಸಾನಿಯಾ ಮತ್ತು ವರೂಧಿನಿಗೆ ಶಿಕ್ಷೆ ಯಾಗದಿರುವುದು, ಭುವಿ ಮತ್ತು ಹರ್ಷರ ಚೆಂದದ ಬದುಕು ಹೇಗೆ ಮುಂದುವರಿಯುತ್ತದೆ ಎನ್ನುವುದನ್ನು ಧಾರಾವಾಹಿ ತೋರಿಸದಿರುವುದರ ಬಗೆಗೆ ವಾಟ್ಸಪ್ ಗುಂಪಿನಲ್ಲಿ, ಜಾಲತಾಣದಲ್ಲಿ ಚರ್ಚೆ ನಿಲ್ಲದೇ ನಡಯುತ್ತಲೇ ಇದೆ.

ತಪ್ಪು ಮಾಡಿದವರಿಗೆ ಶಿಕ್ಷೆಕೊಡಬಾರದೆನ್ನುವ ಸಂದೇಶ ಈ ಧಾರಾವಾಹಿ ನೀಡಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಈ ಧಾರಾವಾಹಿ ನೋಡುವವರ ವಾಟ್ಸಪ್ ಗುಂಪು ರಚಿಸಿಕೊಡು ಲಕ್ಷಾಂತರ ಸದಸ್ಯರನ್ನು ಹೊಂದಿದೆಯಂತೆ. ಅವರು ಇದನ್ನು ಪುನಃ ವೂಟ್‌ನಲ್ಲಿ ನೋಡುತ್ತಿದ್ದಾರಂತೆ. ಕನ್ನಡದಲ್ಲಿ ಜನಪ್ರಿಯವಾದ ಮತ್ತು ವೈರಲ್ ಆದ ಈ ಧಾರಾವಾಹಿ ಹಿಂದಿ ಭಾಷೆಯಲ್ಲಿ ‘ಅಜ್ನಭಿ ಬನೇ ಹಮ್ ಸಫರ್’ ಎಂದು ರಿಮೇಕ್ ಆಗಿದ್ದರೆ, ಮರಾಠಿಯಲ್ಲಿ ‘ಭಾಗ್ಯ ದಿಲೇತೂ ಮಾಲ’ ಎನ್ನುವ ಹೆಸರಿನಲ್ಲಿ ಡಬ್ ಅಗಿದ್ದು, ಈ ಎರಡೂ ಭಾಷೆಯಲ್ಲೂ ಜನ ಪ್ರಿಯವಾಗಿದೆಯಂತೆ. ಕಾಂತಾರಾ ಚಿತ್ರದ ಬೆನ್ನಲ್ಲೇ ಈಗ ಕನ್ನಡತಿ ಮನರಂಜನೆ ಕ್ಷೇತ್ರದಲ್ಲಿ ಗಡಿ ದಾಟಿದ್ದು ಹೆಮ್ಮೆಯ ವಿಷಯ.

Read E-Paper click here