ಶಶಾಂಕಣ
ಶಶಿಧರ ಹಾಲಾಡಿ
shashidhar.halady@gmail.com
ಮರುಭೂಮಿಯೊಂದನ್ನು ನಿರ್ಮಿಸಲು ಸಾಧ್ಯವೆ? ಅದೂ 50 ವರ್ಷಗಳಲ್ಲಿ? ನಾಗರಿಕ ಮಾನವನ ಚಟುವಟಿಕೆಯಿಂದಾಗಿ, ಇಂದು ತ್ವರಿತವಾಗಿ ವಿಶಾಲ ಪ್ರದೇಶ
ಗಳು ಬರಡಾಗುತ್ತಿರುವುದು ನಿಜವಾದರೂ, ನಮ್ಮ ಕಣ್ಣೆದುರಿನಲ್ಲೇ, ಎಲ್ಲರಿಗೂ ಗೊತ್ತಾಗುತ್ತಿರುವಂತೆಯೇ ಬೃಹತ್ ಮರುಭೂಮಿಯೊಂದನ್ನು ಸೃಷ್ಟಿಸಲು ಸಾಧ್ಯವೆ? ಅಂತಹದೊಂದು ದುರಂತ ಕಳೆದ ಶತಮಾನದಲ್ಲಿ ನಡೆದಿದೆ.
ಅಪಾರ ನೀರು ಬಯಸುವ ಬೆಳೆಯನ್ನು ಬೆಳೆಯಲು ನದಿಯ ಪಾತ್ರವನ್ನೇ ಬೇರೆ ದಿಕ್ಕಿಗೆ ತಿರುಗಿಸಿ, ಸಾಲು ಸಾಲು ಅಣೆಕಟ್ಟುಗಳನ್ನು ಕಟ್ಟಿಸಿದ ಸರಕಾರಕ್ಕೆ, ಅದೇ ವೇಳೆಯಲ್ಲಿ ತಾನು ಒಂದು ಜಲಮೂಲವನ್ನೇ ಬರಡು ಮಾಡು ತ್ತಿದ್ದೇನೆಂದು ಗೊತ್ತಿತ್ತು, ಅದನ್ನು ನಂಬಿರುವ ಜನರು ನರಳುತ್ತಾರೆಂದು ಗೊತ್ತಿತ್ತು, ಆದರೂ ಆ ಯೋಜನೆಯನ್ನು ಕಾರ್ಯಗತ ಗೊಳಿಸಿತು. ಕಣ್ಣೆದುರೇ 45000 ಚದರ ಕಿಮೀ ಮರುಭೂಮಿಯೊಂದು ಸೃಷ್ಟಿಯಾಯಿತು. ಇದೀಗ ಜಗತ್ತಿನ ಅತಿ ಚಿಕ್ಕ ವಯಸ್ಸಿನ ಮರುಭೂಮಿ!
ಮುಂದಿನ ತಲೆಮಾರು ಪಾಠ ಕಲಿಯುವ ಇರಾದೆಯನ್ನು ಒಂದುಪಕ್ಷ ಹೊಂದಿದ್ದಲ್ಲಿ, ತನ್ನನ್ನು ನೋಡಿಯಾದರೂ ಎಚ್ಚರದಿಂದಿರಿ ಎಂದು ಸಾರಿ ಹೇಳುವ ಆ ಮರುಭೂಮಿ ಇಂದು ಮಧ್ಯ ಏಷ್ಯಾದಲ್ಲಿ ಬಾಯ್ತೆರೆದು ನಿಂತಿದೆ, ವರ್ಷ ದಿಂದ ವರ್ಷಕ್ಕೆ ಕೆಲವು ಚದರ ಕಿಮೀಗಳಷ್ಟು ಬೆಳೆಯುತ್ತಿದೆ. ನಾನೀಗ ಹೇಳುತ್ತಿರುವುದು ಅರಾಲ್ ಸಮುದ್ರದ ಕಥೆ. ಸಿಹಿನೀರಿನಿಂದ ತುಂಬಿದ್ದ, ಲಕ್ಷಾಂತರ ಜನರಿಗೆ, ಜೀವಿಗಳಿಗೆ ಆಶ್ರಯ ನೀಡಿದ್ದ, ಎರಡು ಪ್ರಮುಖ ಬಂದರಗಳನ್ನೂ ಹೊಂದಿದ್ದ ಈ ‘ಸಮುದ್ರ’, ಈಗ ಬರಡುಭೂಮಿಯಾಗಿ ಪರಿವರ್ತನೆಗೊಂಡಿದ್ದು, ತನ್ನ ಹೆಸರನ್ನು ಸಹ ಬದಲಿಸಿ ಕೊಂಡಿದೆ.
ಆ ವಿಶಾಲ ಸರೋವರ ಇದ್ದ ಜಾಗವನ್ನು ಇಂದು ಅರಾಕುಮ್ ಮರುಭೂಮಿ ಎಂದು ಕರೆಯುತ್ತಿದ್ದಾರೆ. ಜೀವಜಲ ದಿಂದ ನಳನಳಿಸುತ್ತಿದ್ದ ಆ ನೀರಿನ ರಾಶಿಯ, ಬತ್ತಿ ಹೋಗಿದ್ದು ಮಾತ್ರವಲ್ಲ, ತನ್ನ ಹೆಸರನ್ನು ಸಹ ಬದಲಿಸಿಕೊಂಡಿರುವುದು, ಆಧುನಿಕ ಮಾನವನ ಚಟುವಟಿಕೆ ಗಳಿಗೆ ಬರೆದ ವ್ಯಂಗ್ಯಭರಿತ ಒಂದು ಭಾಷ್ಯ ಎಂದೆನ್ನ ಬಹುದು. ಹೆಚ್ಚು ಕಾಲ ಹಿಂದೆ ಹೋಗುವ ಅಗತ್ಯವಿಲ್ಲ.
1960ರಲ್ಲಿ ಅರಾಲ್ ಸಮುದ್ರವು ಸುಮಾರು 435 ಕಿಮೀ ಉದ್ದವಿತ್ತು, 290 ಕಿಮೀ ಅಗಲವಿತ್ತು. ಕಜಕಿಸ್ತಾನ ಮತ್ತು ಉಜ್‌ಬೆಕಿಸ್ತಾನ ನಡುವಿನ ಸುಮಾರು 68000 ಚದರ ಕಿಮೀ ವಿಸ್ತಾರಕ್ಕೆ ವ್ಯಾಪಿಸಿಕೊಂಡಿತ್ತು. 1970ರ ದಶಕದ ತನಕವೂ ಅದು ಜಗತ್ತಿನ ನಾಲ್ಕನೆಯ ಅತಿದೊಡ್ಡ ಸರೋವರ. ಈ ವಿಶಾಲ ಸರೋವರದ ದೌರ್ಭಾಗ್ಯವೆಂದರೆ, ಅದು 1991ರ ತನಕ ಸೋವಿಯತ್ ಒಕ್ಕೂಟದ ಆಳ್ವಿಕೆಗೆ ಒಳಪಟ್ಟಿತ್ತು. ಸುಮಾರು 2000 ಕಿಮೀ ದೂರದಲ್ಲಿದ್ದ ಮಾಸ್ಕೋದ ಆಡಳಿತ ಯಂತ್ರವು ತೆಗೆದುಕೊಳ್ಳುವ ನಿರ್ಣಯಕ್ಕೆ ಈ ಸರೋವರ ಬದ್ಧವಾಗಬೇಕಾಗಿತ್ತು. ಅಮು ದರ್ಯಾ ಮತ್ತು ಸಿರ್ ದರ್ಯಾ ಎಂಬ ಎರಡು ನದಿಗಳು ಅರಾಲ್ ಸರೋವರಕ್ಕೆ ನೀರುಣಿಸುತ್ತಿದ್ದವು.
68000 ಚದರ ಕಿಮಿ ವಿಸ್ತಾರವಿದ್ದ ಆ ಸರೋವರದ ಸುತ್ತಲೂ ಹಳ್ಳಿಗಳಿದ್ದವು, ಊರುಗಳಿದ್ದವು, ಪುರಾತನ ಕಾಲದ ಒಂದು ಸಂಸ್ಕೃತಿ ಇತ್ತು. ಸರೋವರವನ್ನು ಆಶ್ರಯಿಸಿ ವಿವಿಧ ಪ್ರಾಣಿ ಪಕ್ಷಿಗಳಿದ್ದವು, 22 ಪ್ರಭೇದದ ಮೀನುಗಳಿದ್ದವು. ಅವುಗಳಲ್ಲಿ ನಾಲ್ಕು ಪ್ರಭೇದದ ಮೀನುಗಳು, ಕೇವಲ ಅರಾಲ್ ಸರೋವರದಲ್ಲಿ
ಮಾತ್ರ ಕಾಣಸಿಗುತ್ತಿದ್ದವು. ಆ ವಿಶಾಲ ಸರೋವರವು ಇಂದು ತನ್ನ ಹೆಸರನ್ನೇ ಬದಲಾಯಿಸಿಕೊಂಡು ಅರಾಕುಂ ಮರುಭೂಮಿಯಾಗಿ ಪರಿವರ್ತನೆಗೊಂಡ
ನಂತರ, ವಿಶಿಷ್ಟ ಎನಿಸಿದ್ದ ಆ ನಾಲ್ಕು ಪ್ರಭೇದದ ಮೀನುಗಳು ಈ ಭೂಮಿಯಿಂದಲೇ ಕಣ್ಮರೆಯಾಗಿವೆ.
ಈ ಒಂದು ಮಾನವ ನಿರ್ಮಿತ ಪ್ರಾಕೃತಿಕ ದುರಂತಕ್ಕೆ ಮುಖ್ಯ ಕಾರಣವೆಂದರೆ ವಿವೇಚನಾ ರಹಿತ ನೀರಾವರಿ ಯೋಜನೆಗಳು! ಸೋವಿಯತ್ ಒಕ್ಕೂಟದ ಪ್ರಬಲ ಆಡಳಿತ ದಿನಗಳು ಅವು. ಪಂಚವಾರ್ಷಿಕ ಯೋಜನೆಗಳ ಮೂಲಕ ಹಲವು ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿದ ಸರಕಾರವು, ಅಮು ದರ್ಯಾ ಮತ್ತು ಸಿರ್ ದರ್ಯಾ ನದಿಗಳಿಗೆ ಸಾಲು ಸಾಲು ಅಣೆಕಟ್ಟುಗಳನ್ನು ಕಟ್ಟಿಸಿತು. 1960ರ ದಶಕದಲ್ಲಿ ಆರಂಭಗೊಂಡ ಈ ಯೋಜನೆಯ ಭಾಗವಾಗಿ, ಸಿರ್ ದರ್ಯಾ
ನದಿಯೊಂದಕ್ಕೇ 30ಕ್ಕೂ ಹೆಚ್ಚು ಅಣೆಕಟ್ಟುಗಳನ್ನು ಕಟ್ಟಲಾಯಿತು. ಅಮು ದರ್ಯಾ ನದಿಯನ್ನು ‘ನದಿ ತಿರುವು’ ಯೋಜನೆಗೆ ಯಶಸ್ವಿಯಾಗಿ ಒಳಪಡಿಸ ಲಾಯಿತು.
ಇದಕ್ಕೆ ಮುಖ್ಯ ಕಾರಣ ‘ಬಿಳಿ ಚಿನ್ನ’ದ ವ್ಯಾಮೋಹ. ಆರ್ಥಿಕ ಬೆಳೆ ಎನಿಸಿರುವ ಹತ್ತಿಯನ್ನು ಬಿಳಿ ಚಿನ್ನ ಎಂದೇ ಕರೆದ ಅಲ್ಲಿನ ಸರಕಾರವು, ಹತ್ತಿ ರಫ್ತು ಮಾಡಿ ಅಪಾರ ಹಣ ಗಳಿಸುವ ಯೋಜನೆಗೆ ಕೈಹಾಕಿತು. ಕಜಕಿಸ್ತಾನ ಮತ್ತು ಉಜಬೆಕಿಸ್ತಾನದ ವಿಶಾಲ ಬಯಲುಗಳ ಮೇಲೆ ಸೋವಿಯತ್ ಸರಕಾರದ ಕಣ್ಣುಬಿತ್ತು. ಆಗಿನ್ನೂ ಈ ದೇಶಗಳು ಪ್ರತ್ಯೇಕ ಆಡಳಿತವನ್ನು ಹೊಂದಿರಲಿಲ್ಲ. 1991ರ ತನಕ ಅವು ಸೋವಿಯತ್ ರಷ್ಯಾದ ಭಾಗವಾಗಿದ್ದ ವಷ್ಟೆ. ಅರಾಲ್ ಸಮುದ್ರಕ್ಕೆ ನೀರುಣಿಸುತ್ತಿದ್ದ ಅಮುದರ್ಯಾ ಮತ್ತು ಸಿರ್ ದರ್ಯಾ ನದಿಗಳಿಗೆ ಬಹುಬೇಗನೆ 30ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಲಾಯಿತು. ಹೆಚ್ಚು
ನೀರನ್ನು ಬೇಡುವ,ಆದರೆ ಅತಿ ಹೆಚ್ಚು ಇಳುವರಿ ನೀಡುವ ಹತ್ತಿಯ ತಳಿಯನ್ನು ಬಿತ್ತಲಾಯಿತು!
ಸರಕಾರದ ಜಮೀನು, ಸರಕಾರ ಹೇಳಿದಂತೆ ಕೆಲಸ ಮಾಡುವ ಕೃಷಿ ಕಾರ್ಮಿಕರು-ಕಣ್ಣು ಹಾಯಿಸಿದಷ್ಟು ದೂರ ಹತ್ತಿ ಹೊಲಗಳು! ವೈಟ್ ಗೋಲ್ಡ್ ಅಥವಾ
ಬಿಳಿ ಚಿನ್ನವು ರಫ್ತಾಗಿ, ದೇಶಕ್ಕೆ ಸಾಕಷ್ಟು ಸಂಪತ್ತನ್ನು ಗಳಿಸಿತು. 1988ರಲ್ಲಿ ಉಜಬೆಕಿಸ್ತಾನ್ ಜಗತ್ತಿನಲ್ಲೇ ಅತಿ ಹೆಚ್ಚು ಹತ್ತಿ ರಫ್ತು ಮಾಡುವ ಪ್ರಾಂತ್ಯ ಎಂಬ
ಹೆಸರು ಗಳಿಸಿತು. ವಿಚಿತ್ರ ಮತ್ತು ಆಘಾತಕಾರಿ ವಿಚಾರವೆಂದರೆ, ಅರಾಲ್ ಸಮುದ್ರಕ್ಕೆ ನೀರನ್ನು ಒದಗಿಸುತ್ತಿದ್ದ ಆ ಎರಡು ನದಿಗಳ ನೀರನ್ನು ಈ ರೀತಿ ಹತ್ತಿ ಬೆಳೆಯಲು ಉಪಯೋಗಿಸಿದರೆ, ಅರಾಲ್ ಸಮುದ್ರವು ಕ್ರಮೇಣ ಒಣಗಿಹೋಗುತ್ತದೆ ಎಂಬ ವಿಚಾರವು ಅಲ್ಲಿನ ಸರಕಾರದ ಇಲಾಖೆಗಳಿಗೆ ಗೊತ್ತಿತ್ತು.
ಇದರಿಂದಾಗಿ ಅರಾಲ್ ಸಮುದ್ರ ಬರಡಾಗುತ್ತದೆ ಎಂಬ ವಿಚಾರವನ್ನು ಸರಕಾರದ ಇಲಾಖೆಗಳು ಚರ್ಚಿಸಿಯೂ ಇದ್ದವು! ಆದರೆ, ಅರಾಲ್ ಸಮುದ್ರದ ಸುತ್ತಲಿನ ಮೀನುಗಾರರು ತರುವ ಆದಾಯಕ್ಕಿಂತ, ರಫ್ತು ಬೆಳೆ ಎನಿಸಿದ ಹತ್ತಿ ತರುತ್ತಿದ್ದ ಆದಾಯ ಅಧಿಕ ಎಂದು ಸರಕಾರ ನಿರ್ಧರಿಸಿತ್ತು. ಇದರಿಂದಾದ ದುರಂತ ಬಹು ದೊಡ್ಡದು. 1990ರ ಸಮಯಕ್ಕೆ, ಅರಾಲ್ ಸರೋವರದ ಶೇ.40 ಭಾಗ ಒಣಗಿಹೋಗಿತ್ತು. ಬಂದರುಗಳಲ್ಲಿ ನಿಂತಿದ್ದ ಹಡಗುಗಳು, ಅಲ್ಲೇ ಮರಳಿನ ಮೇಲೆ ಬಂಧಿಯಾದವು. 1960ರಲ್ಲಿ ಆರಂಭಗೊಂಡ ನೀರಾವರಿ ಯೋಜನೆಯಿಂದಾಗಿ, ಕೇವಲ 30 ವರ್ಷಗಳಲ್ಲಿ ಅರಾಲ್ ಸಮುದ್ರದ ಅರ್ಧ ಭಾಗ ಒಣಗಿ
ಹೋಗಿತ್ತು. ಒಂದು ತಲೆಮಾರು ನೋಡನೋಡುತ್ತಿದ್ದಂತೆಯೇ, ಜೀವ ಜಲರಾಶಿ ಕಣ್ಮರೆಯಾಗಿತ್ತು.
ಜತೆಗೆ, ಪ್ರತಿವರ್ಷ ನೀರಿನ ಮಟ್ಟ ಒಂದೇ ಸಮನೆ ಕಡಿಮೆಯಾಗುತ್ತಲೇ ಹೋಗುತ್ತಿತ್ತು! 2010ರ ವೇಳೆಗೆ ಅರಾಲ್ ಸಮುದ್ರವು ಶೇ.90 ರಷ್ಟು ಒಣಗಿ ಹೋಗಿತ್ತು. ಸರೋವರವು ಇಬ್ಭಾಗವಾಗಿ, ಉತ್ತರ ಅರಾಲ್ ಮತ್ತು ದಕ್ಷಿಣ ಅರಾಲ್ ಎಂಬ ಹೊಸ ಹೆಸರನ್ನು ಪಡೆದವು. ಆ ಹೊಸ ಮರುಭೂಮಿಯಾದರೂ ಅದೆಷ್ಟು ಕ್ರೂರ! ಮೈಲಿ ಮೈಲಿಗಳ ತನ ಮರಳು ಮತ್ತು ಕ್ಷಾರ ಭೂಮಿ. ಒಮ್ಮೆಗೇ ಹತ್ತಾರು ತುಕ್ಕು ಹಿಡಿದ ಹಡಗುಗಳು ಎದುರಾಗುತ್ತವೆ! ಆ ವಿಶಾಲ ಮರುಭೂಮಿ ಯಲ್ಲಿ ಆ ಹಡಗುಗಳು ನಿಂತಿವೆ. ಬೃಹತ್ ಗಾತ್ರದ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳ, ಜನಸಂಚಾರದ ದೋಣಿಗಳ ಕಳೇಬರ ಸಾಲಾಗಿ ನಿಂತಿವೆ.
1980ರ ದಶಕದ ತನಕ ಅದು ಒಂದು ಬಂದರು ಪ್ರದೇಶ. ಅರಾಲ್ ಮತ್ತು ಮೊಯ್‌ನಾಕ್ ಎಂಬ ಎರಡು ದೊಡ್ಡ ಬಂದರುಗಳಲ್ಲಿ ಲಂಗರು ಹಾಕಿ ನಿಂತಿದ್ದ ಆ ದೋಣಿಗಳನ್ನು ಹೊರ ಸಾಗಿಸಲು ಸಾಧ್ಯವಾಗಿಲ್ಲ. ಝಾರ್ ದೊರೆಗಳ ಕಾಲದಿಂದಲೂ ಈ ಸರೋವರದಲ್ಲಿ ಯುದ್ಧ ನೌಕೆಗಳು, ವಾಣಿಜ್ಯ ನೌಕೆಗಳು ಸಂಚರಿಸು
ತ್ತಿದ್ದವು. ಆದರೆ, ಝಾರ್ ಅರಸೊತ್ತಿಗೆಯನ್ನು ನಾಶಮಾಡಿ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಂಡ ಕ್ರಾಂತಿಕಾರಿಗಳ ಸರಕಾರವು, ಕೇವಲ ೫೦ ವರ್ಷ ಗಳಲ್ಲಿ ಈ ಬೃಹತ್ ಸರೋವರಕ್ಕೆ ಮರಣಶಾಸನ ಬರೆಯಿತು, ಜಾರಿಗೂ ತಂದಿತು. ಜಲರಾಶಿಯನ್ನೇ ಕಣ್ಮರೆ ಮಾಡಿ, 45000 ಚದರ ಕಿಮೀ ವಿಸ್ತೀರ್ಣದ ಮರುಭೂಮಿಯನ್ನು ಸೃಷ್ಟಿಸಿತು.
2000ರ ನಂತರ ಈ ಸರೋವರವನ್ನು ಪುನರುಜ್ಜೀವನಗೊಳಿಸುವ ಕುರಿತು ಕೂಗೆದ್ದಿತು. ಜಗತ್ತಿನ ಅತಿ ಘೋರ ಪ್ರಾಕೃತಿಕ ದುರಂತಗಳಲ್ಲಿ ಅರಾಲ್ ಸಮುದ್ರವೂ ಒಂದು ಎಂಬ ಪ್ರಚಾರ ದೊರಕಿತು. ಕಜಕಿಸ್ತಾನ ಮತ್ತು ಉಜ್‌ಬೆಕಿಸ್ತಾನ ಮತ್ತು ಸುತ್ತಲಿನ ಇತರ ಮೂರು ದೇಶಗಳು ಸೂಕ್ತ ಕ್ರಮ ಕೈಗೊಂಡು, ಅರಾಲ್ ಸಮುದ್ರಕ್ಕೆ ಮತ್ತೆ ಜೀವ ತುಂಬಬೇಕು ಎಂಬ ಒತ್ತಡಕ್ಕೆ ಸಿಲುಕಿ, ಒಪ್ಪಂದಕ್ಕೆ ಬಂದವು. 2000ರಲ್ಲಿ ಯುನೆಸ್ಕೋ, 2004ರಲ್ಲಿ ವಿಶ್ವಬ್ಯಾಂಕ್ ಈ ಜಲಮೂಲವನ್ನು ಪುನರುಜ್ಜೀವನಗೊಳಿಸಲು ಕಾರ್ಯಸೂಚಿಗಳನ್ನು ಹಾಕಿಕೊಂಡು, ಸ್ವಲ್ಪ ಕೆಲಸವೂ ನಡೆದಿದೆ. ಆದರೆ ಈಗಲೂ ವಿಶಾಲ ಪ್ರದೇಶದಲ್ಲಿ ಹತ್ತಿಬೆಳೆದು ರಫ್ತು ಮಾಡುತ್ತಿರುವ ಉಜಬೆಕಿಸ್ತಾನವು ಹೆಚ್ಚು ಇದರಲ್ಲಿ ಆಸಕ್ತಿ ತೋರಿಸುತ್ತಿಲ್ಲ.
ಅರಾಲ್ ಸಮುದ್ರವನ್ನು ಪುನರುಜ್ಜೀವಗೊಳಿಸುವ ಕೆಲಸ ಅಲ್ಲಲ್ಲಿ ನಡೆಯುತ್ತಿದೆ, ಋತುಮಾನಕ್ಕನುಗುಣವಾಗಿ ಹತ್ತಿಪ್ಪತ್ತು ನೀರಿನ ಮಟ್ಟ ಹತ್ತಿಪ್ಪತ್ತು ಅಡಿ ಹೆಚ್ಚಳ ಗೊಳ್ಳುತ್ತಿದೆ. ‘ದೂರದ ಉಜ್‌ಬೆಕಿಸ್ತಾನದ ಅಂಚಿನಲ್ಲಿರುವ ಅರಾಲ್ ಸಮುದ್ರದ ಈ ದುರಂತವನ್ನು ಇಷ್ಟು ವಿವರವಾಗಿ ಬರೆಯುತ್ತಿರುವಿರಲ್ಲಾ, ಆ ಸರೋವರವನ್ನು ನೋಡಿದ್ದೀರಾ?’ ಎಂದು ನೀವು ನನ್ನನ್ನು ಪ್ರಶ್ನಿಸಬಹುದು. ಕರ್ನಾಟಕದಿಂದ ಸುಮಾರು 4000 ಕಿಮೀ ದೂರದಲ್ಲಿರುವ ಅರಾಲ್ ಸಮುದ್ರ ಒಣಗಿಹೋಗಿದೆ ನಿಜ, ಅಲ್ಲಿನ ಬೃಹತ್ ನೀರಾವರಿ ಕಾಮಗಾರಿಯಿಂದಾಗಿ ಕೇವಲ 50 ವರ್ಷಗಳಲ್ಲಿ ಮರುಭೂಮಿ ಸೃಷ್ಟಿಸಿಯಾಗಿರಬಹುದು, ಅದರಿಂದ ನಮಗೇನು ತೊಂದರೆ ಎಂಬ ಪ್ರಶ್ನೆ ಕೆಲವರಿಗಾದರೂ ಮೂಡಿರಬಹುದು.
ನಿಜ, ನಾನು ಅರಾಲ್ ಸರೋವರವನ್ನು ಕಣ್ಣಾರೆ ನೋಡಿಲ್ಲ, ಅರಾಕುಂ ಮರುಭೂಮಿಗೂ ಭೇಟಿಕೊಟ್ಟಿಲ್ಲ. ಆದರೆ, ನಾನು ಎತ್ತಿನ ಹೊಳೆ ಯೋಜನೆಗಾಗಿ (ನೇತ್ರಾ ವತಿ ತಿರುವು ಯೋಜನೆ ಎಂದು ಓದಿಕೊಳ್ಳಬಹುದು) ನಡೆಯುತ್ತಿರುವ ಅರಣ್ಯ ನಾಶವನ್ನು ನೋಡಿದ್ದೇನೆ, ಶಿರಾಡಿ ಘಾಟಿ ಪ್ರದೇಶದ ದಟ್ಟ ಅರಣ್ಯ ಮತ್ತು ಸೂಕ್ಷ್ಮ ಇಳಿಜಾರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ನೋಡುತ್ತಿದ್ದೇನೆ, ಅದರಿಂದಾಗಿ ಕುಸಿದ ಭೂಮಿಯನ್ನು, ನಾಶಗೊಂಡ ಹಸಿರು ಸಿರಿಯನ್ನು ಗಮನಿಸಿದ್ದೇನೆ.
ಇತ್ತ, ‘ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುತ್ತಾ ವ್ಯರ್ಥವಾಗುವ ನೀರನ್ನು ಕರ್ನಾಟಕದ ಬಯಲುಸೀಮೆಯತ್ತ ತಿರುಗಿಸಬೇಕು’ ಎಂದು ಕೆಲವು ಅಧಿಕಾರ ಸ್ಥರು ಮತ್ತು ರಾಜಕಾರಣಿಗಳು ಆಗಾಗ ಹೇಳಿಕೆ ನೀಡುವುದನ್ನು ಸಹ ಕೇಳುತ್ತಿದ್ದೇನೆ, ದೂರದ ಶರಾವತಿ ನದಿಯ ನೀರನ್ನು ಬೆಂಗಳೂರಿಗೆ ಕಾಲುವೆಗಳ ಮೂಲಕ, ಗುರುತ್ವಾಕರ್ಷಣ ಶಕ್ತಿಗೆ ವಿರುದ್ಧವಾಗಿ ಹರಿಸಬೇಕು ಎಂಬ ಬಲವಾದ ಶಿಫಾರಸ್ಸನ್ನು ಸಹ ಕೇಳಿದ್ದೇನೆ, ಹಾಗೊಂದು ಯೋಜನೆ ತಯಾರಾಗಿದೆ ಎಂಬ ಸುದ್ದಿ ಯನ್ನೂ ಕೇಳಿದ್ದೇನೆ.
ಹಿಮಾಚಲ ಪ್ರದೇಶ, ಉತ್ತರಾಕಾಂಡ ರಾಜ್ಯಗಳ ಸೂಕ್ಷ್ಮ ಪರ್ವತ ಪ್ರದೇಶಗಳಲ್ಲಿ ಸಾಲುಸಾಲಾಗಿ ಕಟ್ಟಿರುವ ಅಣೆಕಟ್ಟುಗಳನ್ನು ಕಣ್ಣಾರೆ ನೋಡಿದ್ದೇನೆ. ಜತೆಗೆ, ರಾಷ್ಟ್ರಮಟ್ಟದಲ್ಲಿ, ನದಿಗಳನ್ನು ಜೋಡಿಸಬೇಕೆಂಬ ಅರೆಬೆಂದ ಯೋಜನೆಗಳನ್ನು ಜಾರಿಗೆ ತರುವ ಕುರಿತು ಆಗಾಗ ನಡೆಯುತ್ತಿರುವ ಗಂಭೀರ ಚರ್ಚೆಗಳನ್ನು ಸಹ ಕೇಳುತ್ತಿದ್ದೇನೆ. ಇವುಗಳ ಪೈಕಿ, ಎತ್ತಿನಹೊಳೆ ಯೋಜನೆ (ನೇತ್ರಾವತಿ ನದಿ ತಿರುವು ಯೋಜನೆ) ಮುಂದಿನ ಕೆಲವೇ ವರ್ಷಗಳಲ್ಲಿ ನಮ್ಮ ರಾಜ್ಯದ ಒಂದೆರಡು
ಜಿಲ್ಲೆಗಳಲ್ಲಿ ಹಾಹಾಕಾರ ಸೃಷ್ಟಿಸಲಿದೆ ಎಂಬುದಕ್ಕೆ ಈಗಾಗಲೇ ಸೂಚನೆಗಳು ದೊರೆಯುತ್ತಿವೆ.
ಕರಾವಳಿ ಜಿಲ್ಲೆಯು ನೀರಿನ ಕೊರತೆಯನ್ನು ಎದುರಿಸಬಹುದಾದ ದಟ್ಟ ಸಾಧ್ಯತೆ ನಮ್ಮೆದುರಿಗಿದೆ. ಕೇವಲ ಎರಡು ದಶಕಗಳಲ್ಲಿ ಆ ಒಂದು ಯೋಜನೆ
ಸೃಷ್ಟಿಸಿರುವ ಪ್ರಾಕೃತಿಕ ವಿನಾಶ ಅಷ್ಟಿಷ್ಟಲ್ಲ. ಆದ್ದರಿಂದಲೇ, ದೂರದ ಅರಾಲ್ ಸಮುದ್ರವು ಸತ್ತುಹೋದ ದುರಂತವು ನಮಗೂ ಪ್ರಸ್ತುತವಾಗುತ್ತದೆ. ಎರಡು ನದಿಗಳ ನೀರನ್ನು ಆ ಬೃಹತ್ ಸರೋವರಕ್ಕೆ ಹರಿಯದಂತೆ ತಡೆದದ್ದೇ ತಡೆದದ್ದು, ಮೂರೇ ದಶಕದಲ್ಲಿ ಅಲ್ಲೊಂದು ಮರುಭೂಮಿ ಸೃಷ್ಟಿಯಾಯಿತು!
ಅಲ್ಲಿದ್ದ ನಾಲ್ಕು ವಿಶಿಷ್ಟ ಪ್ರಭೇದದ ಮೀನುಗಳು ಈ ಭೂಮಿಯಂದ ಶಾಶ್ವತವಾಗಿ ಕಣ್ಮರೆಯಾಗಿವೆ. ಇತರ ಹತ್ತೈವತ್ತು ಪ್ರಭೇದದ ಮೀನು, ಹಕ್ಕಿ, ಜಲಚರ, ಕಪ್ಪೆ, ಕೀಟ, ಪ್ರಾಣಿಗಳು ಶಾಶ್ವತವಾಗಿ ಆ ಪ್ರಾಂತ್ಯವನ್ನೇ ತೊರೆದುಹೋಗಿವೆ. ಅಲ್ಲಿ ವಾಸಿಸಿದ್ದ ಬೆಸ್ತರು, ಜನಸಾಮಾನ್ಯರು ರೋಗಗಳ ಸುಳಿಗೆ ಸಿಲುಕಿ ನರಳುತ್ತಿದ್ದಾರೆ.
ಸೋವಿಯತ್ ಒಕ್ಕೂಟ ಸರಕಾರವು ವಿವೇಚನಾ ರಹಿತವಾಗಿ ಆರ್ಥಿಕ ಬೆಳೆಯಾದ ಹತ್ತಿಯನ್ನು ಬೃಹತ್ ಪ್ರಮಾಣದಲ್ಲಿ ಕೃಷಿ ಮಾಡಿದ್ದರಿಂದಾಗಿ, 68000 ಚದರ ಕಿಮೀ ವಿಸ್ತೀರ್ಣದ ಸಿಹಿನೀರಿನ ಸರೋವರವೇ ಈ ಭೂಮಿಯಂದ ಕಣ್ಮರೆಯಾದ ಪ್ರಾಕೃತಿಕ ದುರಂತ ಇದು.
ಪಶ್ಚಿಮ ಘಟ್ಟದಂತಹ ಸೂಕ್ಷ್ಮ ಮತ್ತು ಜೀವವೈವಿಧ್ಯತಾಣದಲ್ಲಿ ಎತ್ತಿನ ಹೊಳೆಯಂತಹ ನದಿ ತಿರುವು ಯೋಜನೆಗಳನ್ನು ಜಾರಿಗೆ ತರುವ ಮೊದಲು, ಅರಾಲ್ ಸಮುದ್ರವು ಮರುಭೂಮಿಯಾಗಿ ಮಾರ್ಪಟ್ಟ ಉದಾಹರಣೆಯನ್ನು ನಮ್ಮ ಯೋಜನಾ ತಜ್ಞರು ಅಧ್ಯಯನ ಮಾಡಬೇಕೆಂಬ ಕಳಕಳಿಯೇ, ಆ ದೂರ ದೇಶದ ಮಾನವ ನಿರ್ಮಿತ ದುರಂತದ ಕುರಿತು ಇಷ್ಟು ವಿವರವಾಗಿ ಬರೆಯುವಂತೆ ಮಾಡಿತು.