Friday, 18th October 2024

ಬಿಜೆಪಿ ರಾಜ್ಯ ತಂಡದ ಪ್ಲಸ್, ಮೈನಸ್

ವರ್ತಮಾನ

maapala@gmail.com

ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆಯಂತೆ ರಾಜ್ಯ ಪದಾಧಿಕಾರಿಗಳು, ನಾನಾ ಮೋರ್ಚಾ ಅಧ್ಯಕ್ಷರ ಆಯ್ಕೆಯೂ ಹಲವು ಅಚ್ಚರಿಗಳಿಗೆ ಕಾರಣವಾಗುವುದರ ಜತೆಗೆ ಪಕ್ಷ ನಿಷ್ಠರನ್ನು ದೂರವಿಟ್ಟು , ಇತ್ತೀಚೆಗೆ ಪಕ್ಷ ಸೇರ್ಪಡೆಯಾದವರಿಗೆ ಆದ್ಯತೆ ನೀಡಲಾಗಿದೆ ಎಂಬ ಆರೋಪವೂ ಇದೆ. ಆದರೆ, ಚುನಾವಣಾ ರಾಜಕಾರಣದಲ್ಲಿ ಇವೆಲ್ಲವೂ ಸಾಮಾನ್ಯ.

ಧಿಕಾರದ ವಿಷಯ ಬಂದಾಗ ಯಾವುದೇ ರಾಜಕೀಯ ಪಕ್ಷ, ಆ ಅಧಿಕಾರ ಹಿಡಿಯಲು ಏನು ಮಾಡಬೇಕು? ಯಾರನ್ನು ಮುನ್ನೆಲೆಗೆ ತರಬೇಕು ಎಂದು ಯೋಚಿಸುತ್ತದೆಯೇ ಹೊರತು ಪಕ್ಷ ನಿಷ್ಠೆ, ಸಿದ್ಧಾಂತದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಹಾಗೆಂದು ಅದನ್ನು ಗಂಟುಮೂಟೆ ಕಟ್ಟಿ ಬದಿಗಿಟ್ಟು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅರ್ಥವಲ್ಲ. ಅಧಿಕಾರದ ಗುರಿ ಇಟ್ಟುಕೊಂಡು ಪಕ್ಷ ಸಂಘಟಿಸುವ ಸಂದರ್ಭದಲ್ಲಿ  ನಾಯಕತ್ವ ವಹಿಸುವವನ ಜಾತಿಯ ಆತನ
ಸಂಘಟನಾ ಸಾಮರ್ಥ್ಯವನ್ನೂ ಗಮನಿಸಲಾಗುತ್ತದೆ.

ಪಕ್ಷಕ್ಕಾಗಿ ಆತನ ದುಡಿಮೆಯಲ್ಲಿ ತನು, ಮನದ ಜತೆಗೆ ಧನವನ್ನೂ ಪರಿಗಣಿಸಲಾಗುತ್ತದೆ. ಇದಕ್ಕೆ ಒಂದೆರಡು ಅಪವಾದಗಳು ಇರಬಹುದಾದರೂ ಬಹುತೇಕ ಮೇಲಿನ ಅಂಶಗಳೇ ಹೆಚ್ಚು ಪ್ರಾಧಾನ್ಯತೆ ವಹಿಸುತ್ತದೆ. ಇದಕ್ಕೆ ಯಾವುದೇ ರಾಜಕೀಯ ಪಕ್ಷ ಹೊರತಲ್ಲ. ಕೇಂದ್ರದಲ್ಲಿ ೨೦೧೪ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಕೂಡ ಅನುಸರಿಸುತ್ತಿರುವುದು ಇದೇ ಮಾದರಿಯನ್ನು. ಈಗ ಕರ್ನಾಟಕದಲ್ಲಿ ಆಗಿರುವುದು ಕೂಡ ಅದೇ ರಾಜಕಾರಣ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆರ್.ಅಶೋಕ ಅವರನ್ನು ನೇಮಿಸಿದಾಗ ಬಿಜೆಪಿ ಸಂಘಟನಾ ಸಾಮರ್ಥ್ಯದ ಜತೆಗೆ ಜಾತಿಯನ್ನು ಪ್ರಮುಖವಾಗಿ ಪರಿಗಣಿಸಿತು.

ಪಕ್ಷದಲ್ಲಿ ಬಿ.ಎಸ್ ಯಡಿಯೂರಪ್ಪ ಅವರ ಅನಿವಾರ್ಯವನ್ನು ಮನಗಂಡು ಅವರ ಪುತ್ರ ವಿಜಯೇಂದ್ರನಿಗೆ ಮಣೆ ಹಾಕಲಾಯಿತು. ಇದು ಸಾಕಷ್ಟು ಅಸಮಾಧಾನ,
ಆಕ್ರೋಶಕ್ಕೂ ಕಾರಣವಾಯಿತು. ವರಿಷ್ಠರ ಈ ನಿರ್ಧಾರದಿಂದ ಸಿಟ್ಟುಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈಗಲೂ ರಾಜ್ಯ ನಾಯಕರ ವಿರುದ್ಧ ಕಿಡಿ ಕಾರುತ್ತಲೇ ಇದ್ದಾರೆ. ಅದರ ಮಧ್ಯೆ ರಾಜ್ಯ ಪದಾಽಕಾರಿಗಳ ಆಯ್ಕೆಯೂ ನಡೆದಿದೆ. ಈ ಆಯ್ಕೆ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದ್ದು, ಹಲವು ವರ್ಷಗಳಿಂದ ಪಕ್ಷಕ್ಕೆ ನಿಷ್ಠರಾಗಿ, ಬಿಜೆಪಿ ತೀರಾ ಕೆಳಮಟ್ಟದಲ್ಲಿದ್ದಾಗಿನಿಂದಲೂ ಸಂಘಟನೆಗಾಗಿ ದುಡಿಯುತ್ತಿದ್ದವರಿಗೆ ಸಹಜವಾಗಿಯೇ ಬೇಸರ, ಆಕ್ರೋಶ, ಸಿಟ್ಟು
ತರಿಸಿದೆ.

ಆದರೆ, ಬಹುತೇಕರು ಪಕ್ಷ, ಸಿದ್ಧಾಂತ, ಶಿಸ್ತು ಎಂದುಕೊಂಡು ಮೌನವಾಗಿ ಒಳಗೊಳಗೇ ನೋವು ಅನುಭವಿಸುತ್ತಿದ್ದಾರೆ. ಸಿಟ್ಟು, ಆಕ್ರೋಶಗಳನ್ನು ನುಂಗಿಕೊಂಡಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಅಂಥವರು ಇದಾವುದನ್ನೂ ಲೆಕ್ಕಿಸದೆ ಮನಸ್ಸಿನಲ್ಲಿರುವುದನ್ನೆಲ್ಲ ಹೊರಹಾಕುತ್ತಿದ್ದಾರೆ. ಆದರೆ, ಅಧಿಕಾರದ ಗುರಿಯೊಂದಿಗೆ ಮುಂದೆ ಸಾಗುತ್ತಿರುವ ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ಇದಾವುದೂ ಬೇಕಿಲ್ಲ. ಅವರಿಗೆ ಈಗ ಮುಖ್ಯವಾಗಿರುವುದು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು.

ಅದಕ್ಕೇನೂ ಮಾಡಬೇಕೋ ಆ ಕೆಲಸ ಮಾಡಿದ್ದಾರೆ. ತಮ್ಮ ಗುರಿ ಸಾಧನೆಗೆ ಯಾವ ರೀತಿಯ ತಂಡ ಬೇಕೋ ಅಂತಹ ತಂಡವನ್ನು ಕಟ್ಟಿದ್ದಾರೆ. ಈ ವೇಳೆ
ದಶಕಗಳ ಕಾಲ ಪಕ್ಷಕ್ಕೆ ದುಡಿದವರನ್ನು ಹೊರಗಿಟ್ಟು ಇತ್ತೀಚಿನ ವರ್ಷಗಳಲ್ಲಿ ಪಕ್ಷಕ್ಕೆ ಸೇರಿದವರನ್ನು ಪರಿಗಣಿಸಿದ್ದಾರೆ. ರಾಜ್ಯ ಬಿಜೆಪಿಯ ಸಾರಥ್ಯ ವಹಿಸಿರುವ ವಿಜಯೇಂದ್ರ ಅವರಿಗೆ ತಮ್ಮ ತಂಡದಲ್ಲಿ ಯಾರೆಲ್ಲ ಬೇಕು ಎನಿಸಿದೆಯೋ ಅಂಥವರನ್ನು ಕೊಟ್ಟಿದ್ದಾರೆ. ಬಿ.ಎಸ್.ಯಡಿಯೂರಪ್ಪ ಜತೆ ಗುರುತಿಸಿಕೊಂಡವರಿಗೆ ಅವಕಾಶ ಕಲ್ಪಿಸಿದ್ದಾರೆ.

ಜತೆಗೆ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಅವರ ಕಡೆಯವರಿಗೆ ಹೆಚ್ಚಿನ ಆದ್ಯತೆ ನೀಡುವುದು ಅನಿವಾರ್ಯ. ಅವರ ವಿರೋಧಿಗಳನ್ನು ಲೆಕ್ಕಿಸುವುದಿಲ್ಲ ಎಂಬ ಸಂದೇಶವನ್ನು ಯಡಿಯೂರಪ್ಪ ವಿರೋಽಗಳಿಗೂ ಕಳುಹಿಸಿಕೊಟ್ಟಿದ್ದಾರೆ. ಇಲ್ಲಿ ವರಿಷ್ಠರಿಗೆ ಮುಖ್ಯವಾಗಿದ್ದು ವಿಜಯೇಂದ್ರ ಅವರ ಕೈ ಬಲಪಡಿಸುವುದು. ಮೇಲಾಗಿ ಲೋಕಸಭೆ ಚುನಾವಣೆಗೆ ಇನ್ನು ಹೆಚ್ಚು ಸಮಯ ಇಲ್ಲದ ಕಾರಣ ಕಾರ್ಯಕರ್ತರು, ಸ್ಥಳೀಯ ಮುಖಂಡರಿಗೆ
ಪರಿಚಯವಿದ್ದವರನ್ನು ನೇಮಿಸಿ, ಅವರ ಮೂಲಕ ಪಕ್ಷ ಸಂಘಟನೆ ಮಾಡಿಸುವುದು. ಜಾತಿ, ಸಮುದಾಯಗಳ ವಿಚಾರದಲ್ಲಿ ಸಮಸ್ಯೆಯಾಗದಂತೆ ನೋಡಿ ಕೊಳ್ಳುವುದು.

ಅದಕ್ಕಾಗಿಯೇ ಮುರುಗೇಶ್ ನಿರಾಣಿ, ಬೈರತಿ ಬಸವರಾಜು, ವಿ.ಸುನೀಲ್ ಕುಮಾರ್, ರಾಜುಗೌಡ ನಾಯಕ್, ಎನ್.ಮಹೇಶ್, ಅನಿಲ್ ಬೆನಕೆ, ಹರತಾಳು ಹಾಲಪ್ಪ, ರೂಪಾಲಿ ನಾಯಕ್, ಪಿ.ರಾಜೀವ್, ಎನ್.ಎಸ್ .ನಂದೀಶ್ ರೆಡ್ಡಿ, ಪ್ರೀತಂ ಗೌಡ, ಡಿ.ಎಸ್.ಅರುಣ್, ಬಸವರಾಜ ಮತ್ತಿಮೋಡ್ ಮುಂತಾದವರಿಗೆ ಮಣೆ
ಹಾಕಿದ್ದಾರೆ. ಈ ಪೈಕಿ ಕೆಲವರು ಸಚಿವರಾಗಿ, ಇನ್ನು ಕೆಲವರು ಶಾಸಕರಾಗಿ ಕೆಲಸ ಮಾಡಿದವರು ಮತ್ತು ಈಗಲೂ ಶಾಸಕರಾಗಿರುವವರು. ಸಚಿವರಾಗಿ
ದ್ದವರು ಈ ಹಿಂದೆ ರಾಜ್ಯವ್ಯಾಪಿ ಓಡಾಡಿದ್ದರಿಂದ ಸ್ಥಳೀಯರಿಗೆ ಅವರ ಪರಿಚಯವಿದೆ. ಇನ್ನು ಶಾಸಕರಾಗಿದ್ದವರು ರಾಜ್ಯವ್ಯಾಪಿಯಲ್ಲದಿದ್ದರೂ ತಮ್ಮ ಜಿಲ್ಲೆಯಲ್ಲಿ ಪಕ್ಷದ ಮುಖಂಡರ ಪರಿಚಯ ಹೊಂದಿದ್ದಾರೆ.

ಹಾಗೆಂದು ಈ ತಂಡ ಅತ್ಯಂತ ಸಮರ್ಥ ಎಂದು ಹೇಳುವಂತಿಲ್ಲ. ಶಾಸಕರಾದವರು ತಮ್ಮ ಕ್ಷೇತ್ರವನ್ನು ಸಂಪೂರ್ಣ ಮರೆತು ಪಕ್ಷ ಸಂಘಟನೆಯಲ್ಲಿ  ತೊಡಗಿಸಿ ಕೊಂಡರೆ ಭವಿಷ್ಯದಲ್ಲಿ ಅವರಿಗೆ ಮುಳುವಾಗಬಹುದು. ಹೀಗಾಗಿ ಶಾಸಕರು ಕ್ಷೇತ್ರ ಕಡೆಗಣಿಸಿ ಪಕ್ಷ ಸಂಘಟನೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳು ತ್ತಾರೆ ಎಂಬ ನಿರೀಕ್ಷೆ ಇಲ್ಲ. ಅದ್ದಕಿಂತ ಮುಖ್ಯವಾಗಿ ಅನಂತ್ ಕುಮಾರ್ ಬಳಿಕ ಪಕ್ಷದಲ್ಲಿ ಸ್ಥಾನಮಾನಕ್ಕಾಗಿ ಹೋರಾಡುತ್ತಿರುವ ತೇಜಸ್ವಿನಿ ಅನಂತಕುಮಾರ್ ಅವರಿಗೆ ಸೂಕ್ತ ಸ್ಥಾನಮಾನ ಇಲ್ಲದೇ ಇರುವುದು ಸ್ವಲ್ಪ ಮಟ್ಟಿಗೆ ಕಾರ್ಯಕರ್ತರ ವಲಯದಲ್ಲಿ, ಅದರಲ್ಲೂ ಮುಖ್ಯವಾಗಿ ಅನಂತ್ ಕುಮಾರ್ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರುವವರಿಗೆ ಬೇಸರವಾಗಿದೆ. ಅದೇ ರೀತಿ ಈ ಹಿಂದೆ ಪಕ್ಷದ ನಾನಾ ಹುದ್ದೆಗಳನ್ನು ಅಲಂಕರಿಸಿ, ಅನಂತಕುಮಾರ್, ಯಡಿಯೂರಪ್ಪ ಅವರೊಂದಿಗೆ ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡಿದ ಅರವಿಂದ ಲಿಂಬಾವಳಿ ಅಂಥವರನ್ನು ಕಡೆಗಣಿಸಿರುವುದು, ಅದರಲ್ಲೂ ಮುಖ್ಯವಾಗಿ ಅವರು ಪರಿಶಿಷ್ಟ ಜಾತಿಗೆ ಸೇರಿದವರಾಗಿರುವುದರಿಂದ ಮತ್ತು ವರಿಷ್ಠರ ಸೂಚನೆಯಂತೆ ತಮ್ಮ ಶಾಸಕ ಸ್ಥಾನವನ್ನು ತ್ಯಾಗ ಮಾಡಿದವರಿಗೆ ಅವಕಾಶ ಮಾಡಿಕೊಡದೇ ಇರುವುದು ಪಕ್ಷ ನಿಷ್ಠರಾದವರಿಗೆ ಅಸಮಾಧಾನ ತರುವುದರಲ್ಲಿ ಎರಡು ಮಾತಿಲ್ಲ.

ಹೀಗಾಗಿ ಹೊಸ ತಂಡ ಸ್ವಲ್ಪ ಮಟ್ಟಿಗೆ ಪರಿಚಿತವಾಗಿದ್ದರೂ ಸಂಘಟನೆ ವಿಚಾರದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸುವುದು ಖಚಿತ. ಇಷ್ಟೆಲ್ಲ ಸಮಸ್ಯೆಗಳ ಮಧ್ಯೆಯೂ ವಿಜಯೇಂದ್ರ ಅವರಿಗೆ ನೀಡಿರುವ ತಂಡದ ಮೂಲಕ ವರಿಷ್ಠರು ಎಲ್ಲರಿಗೂ ಎಚ್ಚರಿಕೆಯ ಸಂದೇಶ ಕಳುಹಿಸಿದ್ದಾರೆ. ೨೦೨೦ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ಬಳಿಕ ಪಕ್ಷ ದಲ್ಲಿ ಉಂಟಾಗಿದ್ದ ಎರಡು ಬಣಗಳ ಪೈಕಿ ಒಂದು ಬಣ ಪಕ್ಷದಲ್ಲಿ ನಂತರ ಅತ್ಯಂತ ಪ್ರಭಾವಿಯಾಗಿತ್ತು. ಯಡಿಯೂರಪ್ಪ ಮತ್ತು ಅವರ ತಂಡದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿತ್ತು. ಈ ಸಂದರ್ಭದಲ್ಲಿ ಹಲವು ಯಡವಟ್ಟುಗಳಾಗಿದ್ದವು. ಆಗೆಲ್ಲಾ ಯಡಿಯೂರಪ್ಪ ವಿರೋಽ ತಂಡದ ಜತೆ ನಿಂತ ವರಿಷ್ಠರಿಗೆ ಇದು ಗೊತ್ತಿದ್ದರೂ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.

ಕೊನೆಗೆ ಸಮಸ್ಯೆ ಹೆಚ್ಚಾಗುತ್ತಿದೆ ಎನ್ನುವಾಗ ಬಿ.ಎಸ್ .ಯಡಿಯೂರಪ್ಪ ಅವರನ್ನು ಕೇಂದ್ರ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿ
ಸದಸ್ಯರಾಗಿ ನೇಮಕ ಮಾಡಿ ಕೈತೊಳೆದುಕೊಂಡಿತು. ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಚುನಾವಣಾ ತಂತ್ರಗಾರಿಕೆ ವೇಳೆ ಅವರ ಮಾತಿಗೆ
ಹೆಚ್ಚು ಮನ್ನಣೆ ನೀಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಬಂದು ಗೆಲ್ಲಿಸಿಕೊಡುತ್ತಾರೆ ಎಂಬ ಆತ್ಮವಿಶ್ವಾಸವೋ ಏನೋ, ಯಡಿಯೂರಪ್ಪ ಮತ್ತು ಬಣಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿರಲಿಲ್ಲ. ಇಷ್ಟೆಲ್ಲಕ್ಕೂ ರಾಜ್ಯದ ನಾಯಕರೇ ಕಾರಣರಾಗಿದ್ದರು. ಅವರ ಮಾತಿನಂತೆ ವರಿಷ್ಠರು ನಡೆದುಕೊಳ್ಳುತ್ತಿದ್ದರು. ಆದರೆ, ಯಾವಾಗ ಫಲಿತಾಂಶ ಹೊರಬಿತ್ತು ಬಿಜೆಪಿ ರಾಜ್ಯದಲ್ಲಿ ಹೀನಾಯವಾಗಿ ಸೋತಿತೋ, ವರಿಷ್ಠರು ಎಚ್ಚೆತ್ತುಕೊಂಡರು.

ಬೇರೆಯವರ ಮಾತು ಕೇಳಿ ಕೈಗೊಂಡ ನಿರ್ಧಾರಗಳಿಂದ ಪಕ್ಷಕ್ಕೆ ಸಾಕಷ್ಟು ಹಾನಿಯಾದ ಮೇಲೆ ಮತ್ತೆ ಮತ್ತೆ ಸಮಸ್ಯೆ ಎಳೆದುಕೊಳ್ಳುವ ಪರಿಸ್ಥಿತಿ ಬೇಡ ಎಂದು
ಭಾವಿಸಿದರು. ಆದರೂ ಏಕಾಏಕಿ ನಿರ್ಧಾರ ಕೈಗೊಂಡರೆ ಮತ್ತೆ ಯಡವಟ್ಟುಗಳಾಗಬಹುದು ಎಂಬ ಕಾರಣಕ್ಕೆ ವಿಧಾನಸಭೆ ಚುನಾವಣೆ ಮುಗಿದು ಆರು
ತಿಂಗಳು ಅಧ್ಯಯನ ನಡೆಸಿದರು. ತಮ್ಮದೇ ಮೂಲಗಳಿಂದ ವರದಿ ತರಿಸಿಕೊಂಡು ಅಂತಿಮವಾಗಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರನಿಗೆ ಮಣೆ ಹಾಕಿದರು. ಇದೀಗ ಇನ್ನೂ ಮುಂದುವರಿದು ವಿಜಯೇಂದ್ರ ಅವರಿಗೆ ಬೇಕಾದ ತಂಡವನ್ನೂ ಒದಗಿಸಿದ್ದಾರೆ. ಅಷ್ಟೇ ಅಲ್ಲ, ಯಡಿಯೂರಪ್ಪ ಅವರ ವಿರೋಧಿ ಬಣ, ಅವರ ಟೀಕಾಕಾರರನ್ನು ದೂರವಿಟ್ಟು ಪಕ್ಷ ಸಂಘಟನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಸದ್ಯ ಪಕ್ಷದಲ್ಲಿ ಅಸಮಾಧಾನ ಕಾಣಿಸಿಕೊಂಡಿರುವುದಕ್ಕೆ ಕಾರಣ ಇದೇ ಅಂಶ. ಏಕೆಂದರೆ, ಈ ಹಿಂದೆ ಇದ್ದ ತಂಡದಲ್ಲಿದ್ದವರು ಯಡಿಯೂರಪ್ಪ ಅವರ ಬಗ್ಗೆ ಬೇಸರ ಹೊಂದಿದ್ದರೂ ಒಂದಿಬ್ಬರನ್ನು ಹೊರತುಪಡಿಸಿ ಉಳಿದಂತೆ ಬಹುತೇಕರು ಪಕ್ಷಕ್ಕೆ ಅತ್ಯಂತ ನಿಷ್ಠರಾಗಿದ್ದವರು. ಹಾಗೆಂದು ವರಿಷ್ಠರ ಈ ನಿರ್ಧಾರವನ್ನು ಅವರು
ರಾಜ್ಯ ಬಿಜೆಪಿಯನ್ನು ಯಡಿಯೂರಪ್ಪ ಮತ್ತು ತಂಡಕ್ಕೆ ಬಿಟ್ಟುಕೊಟ್ಟಿದೆ ಎಂದು ಭಾವಿಸುವಂತಿಲ್ಲ. ಏಕೆಂದರೆ, ವಿಜಯೇಂದ್ರ ಮತ್ತು ತಂಡದ ಮುಂದೆ ಲೋಕಸಭೆ ಚುನಾವಣೆಗಿಂತಲೂ ಮುಖ್ಯವಾಗಿ ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯ ಸವಾಲಿದೆ. ಲೋಕಸಭೆ ಚುನಾವಣೆ ಬಹುತೇಕ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ನಡೆಯುತ್ತದೆ. ಅಷ್ಟೇ ಅಲ್ಲ, ವಿಧಾನಸಭೆ ಸೇರಿದಂತೆ ಸ್ಥಳೀಯ ಚುನಾವಣೆಗಳಲ್ಲಿ ಪಕ್ಷ ಉತ್ತಮ ಪ್ರದರ್ಶನ ತೋರದಿದ್ದರೂ ಲೋಕಸಭೆ ಚುನಾವಣೆಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಕೊಂಡು ಬಂದಿದೆ.

ಹೀಗಾಗಿ ಲೋಕಸಭೆ ಚುನಾವಣೆಗಿಂತಲೂ ಬಿಬಿಎಂಪಿ ಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ವಿಜಯೇಂದ್ರ ಮತ್ತು ಅವರ ತಂಡಕ್ಕೆ ಹೆಚ್ಚು ಸವಾಲಿನದ್ದಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಅದನ್ನು ಸೋಲಿಸಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದು ಕಷ್ಟದ ಕೆಲಸ. ಇದಕ್ಕೆ ತಳಮಟ್ಟದಿಂದ ಸಂಘಟನೆಯನ್ನು ಗಟ್ಟಿಗೊಳಿಸುವುದರ ಜತೆಗೆ ಸ್ಥಳೀಯವಾಗಿ ಹೆಚ್ಚು ಕ್ರಿಯಾಶೀಲರನ್ನು ಗುರುತಿಸಿ ಅವರಿಗೆ ಟಿಕೆಟ್
ಕೊಟ್ಟು ಗೆಲ್ಲಿಸಿಕೊಂಡು ಬರಬೇಕು. ಈ ಚುನಾವಣೆಗಳಲ್ಲಿ ಕೇಂದ್ರ ಸರಕಾರದ ಸಾಧನೆಗಳು ಅಥವಾ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಕೆಲಸ
ಮಾಡುವುದಿಲ್ಲ. ಸಂಘಟನೆಯನ್ನು ಹೇಗೆ ಗಟ್ಟಿಗೊಳಿಸಲಾಗಿದೆ ಎಂಬುದರ ಮೇಲೆ ಫಲಿತಾಂಶ ನಿಂತಿದೆ. ಈ ಸಂದರ್ಭದಲ್ಲಿ ವಿಜಯೇಂದ್ರ ತಮ್ಮ ಸಾಮರ್ಥ್ಯವನ್ನು ತೋರಿಸದಿದ್ದಲ್ಲಿ ವರಿಷ್ಠರು ಇಟ್ಟ ಭರವಸೆ ಹುಸಿಯಾಗುತ್ತದೆ.

ಅದಕ್ಕಾಗಿಯೇ ವಿಜಯೇಂದ್ರ ಈಗ ಎಲ್ಲ ಹಿರಿಯರ ಮಾರ್ಗದರ್ಶನ ಪಡೆದು ಮುಂದುವರಿಯಲು ನಿರ್ಧರಿಸಿದ್ದಾರೆ. ಇದಕ್ಕೆ ಎಲ್ಲರ ಸಹಕಾರ ಸಿಗುತ್ತದೆಯೋ, ಇಲ್ಲವೋ ಎಂಬುದರ ಆಧಾರದ ಮೇಲೆ ವಿಜಯೇಂದ್ರ ಯಶಸ್ಸು ಅವಲಂಬಿಸಿದೆ. ಒಂದೊಮ್ಮೆ ಸವಾಲು ಗೆದ್ದು ಬಾರದೇ ಇದ್ದರೆ ಬಿಜೆಪಿ ರಾಜ್ಯದಲ್ಲಿ ಮತ್ತೆ
ಮೇಲೆದ್ದು ಬರುವುದು ಕಠಿಣವಾಗುತ್ತದೆ.

ಲಾಸ್ಟ್ ಸಿಪ್: ಯುದ್ಧಕ್ಕೆ ಹೊರಟಾಗ ಸೈನಿಕರ ಸಾಮರ್ಥ್ಯ ನೋಡಲಾಗುತ್ತದೆಯೇ ಹೊರತು ಆತ ಎಷ್ಟು ನಿಷ್ಠಾವಂತ? ಎಷ್ಟು ವರ್ಷದಿಂದ ತನಗಾಗಿ
ದುಡಿಯುತ್ತಿದ್ದಾನೆ ಎಂಬುದನ್ನು ಯೋಚಿಸುವುದಿಲ್ಲ.