ರಾಜ್ಯದಲ್ಲಿ ಈ ಬಾರಿ ಮಳೆ ಇಲ್ಲದೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ಸೇರಿಂದತೆ ರಾಜ್ಯದ ಎಲ್ಲ ನದಿಗಳೂ ಸಾಮಾನ್ಯವಾಗಿ ಈ ಹೊತ್ತಲ್ಲಿ ಉಕ್ಕಿ ಹರಿಯಬೇಕಿತ್ತು. ಆದರೆ, ಬಹುತೇಕ ನದಿಗಳ ಒಡಲು ಬರಿದಾಗಿವೆ. ಇನ್ನು ನಾಲ್ಕಾರು ದಿನ ಇದೇ ಪರಿಸ್ಥಿತಿ ಮುಂದುವರಿದರೆ ಇಲ್ಲಿ ಕುಡಿಯುವ ನೀರಿಗೂ ಹಾಹಾಕಾರ ನಿರ್ಮಾಣವಾಗುವ ಪರಿಸ್ಥಿತಿ ಇದೆ. ಆದರೂ ತಮಿಳುನಾಡು ಸರಕಾರ ತನ್ನ ಪಾಲಿನ ನೀರು ಬಿಡಲೇಬೇಕೆಂದು ಹಠ ಹಿಡಿಯುತ್ತಿದೆ. ಸುಪ್ರೀಂಕೋರ್ಟಿಗೂ ರಾಜ್ಯದ ವಾದವನ್ನು ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದಂತಾಗಿದೆ. ಪರಿಣಾಮವಾಗಿ ಮತ್ತೆ ೧೫ ದಿನಗಳ ಕಾಲ ನಿತ್ಯ ೫೦೦೦ ಕ್ಯೂಸೆಕ್ ನೀರನ್ನು ತಮಿಳು
ನಾಡಿಗೆ ಬಿಡಬೇಕು ಎಂದು ಹೇಳಿದೆ. ಆದರೆ ಇಂತಹ ಸಂದರ್ಭದಲ್ಲಿ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ರಾಜ್ಯ ಸರಕಾರ ಪತ್ರ ಬರೆಯುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದೆ. ಕಳೆದ ಬಾರಿ ಪ್ರತಿ ದಿನ ಐದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿ ಎಂದಾಗಲೇ ಈ ರೀತಿಯ ಪ್ರತಿರೋಧ ಒಡ್ಡಿದ್ದರೆ ಇಂದು ಸ್ಥಿತಿ ಬರುತ್ತಿರಲಿಲ್ಲ. ತಮಿಳುನಾಡಿನ ಆಡಳಿತಗಾರರು ತಮ್ಮ ಹಕ್ಕೊತ್ತಾಯವನ್ನು ದೊಡ್ಡ ಗಂಟಲಿನಲ್ಲಿ ಪದೇ ಪದೆ ಕೂಗಾಡಿ ಪಡೆಯುವುದಕ್ಕೆ ಖ್ಯಾತ ರಾಗಿದ್ದಾರೆ. ಸಮರ್ಥ ನ್ಯಾಯವಾದಿಗಳನ್ನೂ ಇಟ್ಟುಕೊಂಡಿದ್ದಾರೆ. ಆದರೆ ಕರ್ನಾಟಕವು ತನ್ನ ವಾದವನ್ನು ಸಮರ್ಥವಾಗಿ ಮಂಡಿಸದಿರುವುದೇ ಪದೇ ಪದೆ ಸೋಲಿಗೆ ಕಾರಣವಾಗುತ್ತಿದೆ. ಆದ್ದರಿಂದ ರಾಜ್ಯ ಸರಕಾರ ತನ್ನ ಪರಿಸ್ಥಿತಿ ಹಾಗೂ ನಿಲುವನ್ನು ಇನ್ನಷ್ಟು ಬಲವಾಗಿ ಪ್ರತಿಪಾದಿಸುವ ಅಗತ್ಯವಿದೆ. ಕಾವೇರಿ ಸಮಿತಿಯು ವರ್ಚುವಲ್ ಆಗಿ ಸಭೆ ನಡೆಸುವ ಬದಲು ಅಣೆಕಟ್ಟೆಗೆ
ಭೇಟಿ ನೀಡಿ ನೀರಾವರಿ ಪ್ರದೇಶದ ಸ್ಥಿತಿಗತಿ ಪರಿಶೀಲಿಸುವಂತೆ ಗಟ್ಟಿಯಾಗಿ ಆಗ್ರಹಿಸಬೇಕಿದೆ. ಕಾವೇರಿ ವಿಚಾರದಲ್ಲಿ ಕರ್ನಾಟಕದ ಜನತೆ ಯಾವ ಮಟ್ಟಕ್ಕೆ ಹೋರಾಟ, ಪ್ರತಿಭಟನೆ ಮಾಡಿದ್ದಾರೆ ಎಂಬುದನ್ನು ಈ ಹಿಂದೆಯೇ ನೋಡಿಯಾಗಿದೆ. ಈಗಾಗಲೇ ಪ್ರಾಧಿಕಾರದ ಆದೇಶ ಹೊರಬೀಳುತ್ತಿದ್ದಂತೆ ಹಳೇ ಮೈಸೂರು ಭಾಗದಲ್ಲಿ ಪ್ರತಿಭಟನೆ, ರಸ್ತೆ ತಡೆಗಳು ಹೆಚ್ಚಾಗಿವೆ. ಆದ್ದರಿಂದ ಸರಕಾರ ಈಗ ತೆಗೆದುಕೊಂಡಿರುವ ನಿಲುವಿಗೆ ಬದ್ಧವಾಗಿರಬೇಕು. ಇಲ್ಲವಾದಲ್ಲಿ ಜನರ ತಾಳ್ಮೆಯ ಕಟ್ಟೆ ಒಡೆಯುವ ಸಾಧ್ಯದೆ ಇದೆ.