Friday, 20th September 2024

ಜೀವನದಲ್ಲಿ ಅಪ್‌ಡೇಟ್‌ ಆಗದಿದ್ದರೆ ಔಟ್‌ಡೇಟ್‌ ಆಗ್ತೀರಾ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಸುಮಾರು ಐದು ವರ್ಷದ ಹಿಂದೆ ರಾಮ್ ಗೋಪಾಲ್ ವರ್ಮ ಅವರ ಅಪ್ಪಟ ಅಭಿಮಾನಿಯನ್ನು ಭೇಟಿಯಾದೆ. ಆಗ ರಾಮ್‌ಗೋಪಾಲ್ ವರ್ಮ ಅವರ ಲೇಟೆಸ್ಟ್ ಸಿನಿಮಾ ನೋಡಿದೀರಾ? ಎಂದು ಅವನನ್ನು ಕೇಳಿದೆ. ಆತ ವರ್ಮನ ಕಟ್ಟಾ ಅಭಿಮಾನಿ. ರಾಮಗೋಪಾಲ ವರ್ಮ ಯಾವುದೇ ಹೊಸ ಸಿನಿಮಾ ನಿರ್ದೇಶಿಸಿದರೂ ತನಗೆ ಗೊತ್ತಾಗಲೇ ಬೇಕಲ್ಲ ಎಂಬ ಸಣ್ಣ ಧಿಮಾಕು ಅವನಿಗೆ. ಈ ಪ್ರಶ್ನೆ ಕೇಳಿದಾಗ ವರ್ಮನ ಹೊಸ ಸಿನಿಮಾ ‘ಸಿಕ್ರೆಟ್’ ಇನ್ನೂ ಬಿಡುಗಡೆಯಾಗಿಲ್ಲ. ಹೀಗಿರುವಾಗ ಲೇಟೆಸ್ಟ್ ಸಿನಿಮಾ ಯಾವುದಿರಬಹುದು ಎಂದು ಯೋಚನೆಗೆ ಬಿದ್ದ.

ಅಲ್ಲಯ್ಯ ವರ್ಮ ಹನ್ನೆರಡು ನಿಮಿಷಗಳ ಒಂದು ಸಿನಿಮಾ ನಿರ್ದೇಶಿಸಿದ್ದಾನಲ್ಲ, ಆ ಸಿನಿಮಾ ನೋಡಿದೆಯಾ ಅಂತ ಕೇಳಿದೆ. ಆತ ಒಂದು ಕ್ಷಣ ಗಲಿಬಿಲಿಯಾದ. ‘ರಾಮ್ ಗೋಪಾಲ್ ವರ್ಮ’ ಹನ್ನೆರಡು ನಿಮಿಷಗಳ ಸಿನಿಮಾ ನಿರ್ದೇಶಿಸಿದ್ದಾನಾ? ಗೊತ್ತಿಲ್ಲವಲ್ಲ? ಎಂದ. ‘ಮೇರಿ ಬೇಟಿ ಸನ್ನಿ ಲಿಯೋನ್ ಬನನಾ ಚಾಹತೀ ಹೈ’ ಎಂಬ ಸಿನಿಮಾ ನೋಡಿಲ್ವಾ ಎಂದು ಕೇಳಿದೆ. ಆತ ‘ಇಲ್ಲ’ ಎಂಬಂತೆ ತಲೆಯಾಡಿಸಿದ. ಬಡ್ಡಿಮಗ ನನಗೆ ಗೊತ್ತಿಲ್ಲದಂತೆ ಸಿನಿಮಾ ಮಾಡಿದ್ದಾನಲ್ಲ ಎಂದ.

ಅವನು ಸಿನಿಮಾ ಮಾಡಿದರೂ ನಿನಗೆ ಗೊತ್ತಾಗಲಿಲ್ಲವಲ್ಲ. ಯಾರು ‘ಬ……ಮಗ ಅಂತ ಸ್ವಲ್ಪ ಯೋಚಿಸು’ ಎಂದೆ. ಆತ ಒಂದು ಕ್ಷಣ ಮಾತೇ ಆಡಲಿಲ್ಲ. ಮತ್ತೊಂದು ಪ್ರಸಂಗ. ಕೆಲವು ವರ್ಷದ ಹಿಂದೆ ನಮ್ಮ ಪತ್ರಿಕೆಗೆ ಉದ್ಯೋಗವನ್ನು ಅರಸಿಕೊಂಡು ಒಬ್ಬ ಯುವ ಪತ್ರಕರ್ತ ಬಂದಿದ್ದ. ನೋಡಲು ಸ್ಮಾರ್ಟ್ ಆಗಿದ್ದ. ನಿಮ್ಮ ಆಸಕ್ತಿಯ ಕ್ಷೇತ್ರ ಯಾವುದು? ಎಂದು ಕೇಳಿದೆ. ಸಿನಿಮಾ ಹಾಗೂ ಟಿವಿ ಕ್ಷೇತ್ರದ ಯಾವುದೇ ವಿದ್ಯಮಾನಗಳು ನನಗೆ ತಕ್ಷಣ ಸಿಗುವಂಥ ಕಾಂಟ್ಯಾಕ್ಟ್ ಬೆಳೆಸಿಕೊಂಡಿದ್ದೇನೆ. ಎಲ್ಲ ನಟ ನಟಿಯರ ಜತೆ ನೇರ ಸಂಪರ್ಕವಿದೆ. ಎಲ್ಲ ಗಾಸಿಪ್ ಗಳು ನನಗೆ ಗೊತ್ತಾಗುತ್ತವೆ. ಎಲ್ಲ ಸೆಲೆಬ್ರಿಟಿ ಪಾರ್ಟಿಗಳಿಗೂ ಹೋಗುತ್ತೇನೆ.

ಲೈಫ್ ಸ್ಟೈಲ್ ಇಂಡಸ್ಟ್ರಿಯಲ್ಲಿರುವ ಎಲ್ಲರೊಂದಿಗೆ ಸಂಪರ್ಕವಿದೆ. ಅವರೆಲ್ಲರೂ ನನ್ನೊಂದಿಗೆ ಇಂಡಸ್ಟ್ರಿಯ ವಿದ್ಯಮಾನಗಳನ್ನು ಚರ್ಚಿಸುತ್ತಾರೆ. ಟಿವಿ ಧಾರಾವಾಹಿ ಗಳಲ್ಲಿ ನಟಿಸುವ ನಟನಟಿಯರು ಹಾಗೂ ನಿರ್ದೇಶಕರೊಂದಿಗೂ ಒಳ್ಳೆಯ ಸಂಪರ್ಕವಿದೆ. ನಾನು ಯಾರಿಗೂ ಸಿಗದ ಸುದ್ದಿಯನ್ನು ತರಬಲ್ಲೆ. ಇಷ್ಟೇ ಅಲ್ಲ ಬಾಲಿ ವುಡ್ ವಿದ್ಯಮಾನಗಳ ಬಗ್ಗೆ ಸಹ ಆಸಕ್ತಿಯಿದೆ. ಹಿಂದಿ ಚಾನೆಲ್‌ಗಳ ಬಗ್ಗೆ ಯಾರೂ ಬರೆಯುವುದಿಲ್ಲ. ಅಲ್ಲಿನ ವಿದ್ಯಮಾನಗಳ ಬಗ್ಗೆ ಸಹ ನನಗೆ ಗೊತ್ತಿದೆ. ಒಟ್ಟಾರೆ ನಾನು ಈ ಕ್ಷೇತ್ರಗಳ ಬಗ್ಗೆ ಸದಾ ಅಪ್‌ಡೇಟ್ ಆಗಿರುತ್ತೇನೆ.

ಅಲ್ಲದೇ ನಾನು ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ, ವಾಟ್ಸಪ್‌ಗಳಲ್ಲೂ ಬಹಳ ಆಕ್ಟಿವ್ ಆಗಿದ್ದೇನೆ. ನೀವು ಏನೇ ಕೇಳಿದರೂ ಹೇಳಬಲ್ಲೆ……’ ಎಂದು ಒಂದೇ ಉಸಿರಿಗೆ ಪಟಪಟನೆ ಒಪ್ಪಿಸಿದ. ಆತನ ಸ್ಮಾರ್ಟ್‌ನೆಸ್, ಆತ್ಮವಿಶ್ವಾಸದ ಬಗ್ಗೆ  ಹೆಮ್ಮೆಯೆನಿಸಿತು. ಆದರೂ ಅವನ್ನು ಮಾತುಕತೆಗೆ ಎಳೆಯಬೇಕೆಂದು ‘ನಿಮಗೆ ಮಿಸ್ ಮಾಲಿನಿ ಬಗ್ಗೆ ಗೊತ್ತಾ?’ ಎಂದು ಕೇಳಿದೆ. ‘ಏನು? ಮಿಸ್ ಮಾಲಿನಿನಾ?…… ಯಾರವಳು?’ ಎಂದು ಕೇಳಿದ. ‘ಮಿಸ್ ಮಾಲಿನಿ….. ಮಿಸ್ ಮಾಲಿನಿ ಗೊತ್ತಿಲ್ವಾ?’ ಎಂದು ಕೇಳಿದೆ. ‘ಇಲ್ಲಾ ಸಾರ್ ಆಕೆ ಯಾರೆಂದು ಗೊತ್ತಿಲ್ಲ.

ನಾನು ಅವಳ ಬಗ್ಗೆ ಕೇಳಿಯೇ ಇಲ್ಲವಲ್ಲಾ?’ ಎಂದ. ನನಗೆ ಅವನ ಬಗ್ಗೆ ಮೂಡಿದ್ದ ಒಳ್ಳೆಯ ಇಂಪ್ರೆಶನ್ ಜರ್ರನೆ ಇಳಿದು ಹೋಯಿತು. ಸೋಷಿಯಲ್ ಮೀಡಿಯಾ ದಲ್ಲಿ ಕ್ರಿಯಾಶೀಲವಾಗಿರುವ, ಇಂಡಸ್ಟ್ರಿಯಲ್ಲಿ ಸಾಕಷ್ಟು ಕಾಂಟ್ಯಾಕ್ಟ್‌ಗಳನ್ನು ಹೊಂದಿರುವ ಈ ಉತ್ಸಾಹಿ ತರುಣ ಪತ್ರಕರ್ತ ಮಿಸ್ ಮಾಲಿನಿಯ ಹೆಸರನ್ನೇ ಕೇಳದಿರುವುದು ನನಗೆ ತುಸು ನಿರಾಸೆಯನ್ನುಂಟು ಮಾಡಿತು. ಸಿನಿಮಾ, ಟಿವಿ, ಫ್ಯಾಶನ್, ಲೈಫ್ ಸ್ಟೈಲ್ ಕ್ಷೇತ್ರಗಳಲ್ಲಿ ಆಸಕ್ತಿಯಿರುವವರಿಗೆ missmalini.com ಗೊತ್ತಿರಲೇಬೇಕು. ಕಾರಣ ಬಾಲಿವುಡ್ ಜಗತ್ತಿನಲ್ಲಿರುವವರೆಲ್ಲ ಈ ವೆಬ್‌ಸೈಟ್ ಜತೆಗೆ ಸತತ ಕನೆಕ್ಟ್ ಆಗಿರುತ್ತಾರೆ. ‘ಮಿಸ್ ಮಾಲಿನಿಗೆ ಗೊತ್ತಾಗದ ವಿಷಯಗಳೇ ಇಲ್ಲ. ಎಲ್ಲ ಸುದ್ದಿಯನ್ನೂ ಆಕೆಯೇ ಮೊದಲು ವರದಿ ಮಾಡೋದು’ ಎಂದೆ.

ಆತ ಪೆಚ್ಚಾಗಿ ತಲೆ ತಗ್ಗಿಸಿದ್ದ. ನಾನೂ ಕಾಲದ ಜತೆಗೆ ಹೆಜ್ಜೆ ಹಾಕ್ತೀನಿ ಅಂದ್ಕೋತೀನಿ, ಆದರೆ ಒಮ್ಮೊಮ್ಮೆ ಹಿಂದೆ ಬೀಳ್ತೀನಿ. ಕಾಲ ನಮ್ಮನ್ನೆಲ್ಲ ಬಿಟ್ಟು ಮುಂದಕ್ಕೆ ಹೋಗ್ತಾ ಇರುತ್ತೆ. ಆಗ ಬಹಳ ಬೇಸರವಾಗುತ್ತದೆ. ನನಗೆ ಈಗ ಆಗಿದ್ದು ಅದೇ ಎಂದ. ಬೇಸರ ಮಾಡ್ಕೋಬೇಡ, ನನಗೆ ಪ್ರತಿ ಕ್ಷಣವೂ ಹೀಗೆ ಅನಿಸುವುದುಂಟು. ಕಾಲದ ಜತೆಗೆ ಒಂದು ಹೆಜ್ಜೆ ಹಿಂದೆ ಹಾಕಿದರೆ ಕಾಲ ನಮಗಿಂತ ಮುಂದಕ್ಕೆ ಹೋಗಿಬಿಡುತ್ತದೆ. ಅಷ್ಟರಮಟ್ಟಿಗೆ ನಾವು ಹೊಸ ಹೊಸ ಅನುಭವಗಳಿಂದ ವಂಚಿತ ರಾಗುತ್ತೇವೆ. ಹೊಸ ಅನುಭವಗಳಿಗೆ ತೆರೆದುಕೊಳ್ಳದಿದ್ದರೆ ಅಥವಾ update ಆಗದಿದ್ದರೆ outdated ಆಗಿಬಿಡುತ್ತೇವೆ.

ಕಾಲನ ಜತೆಗಿನ ಓಟದಲ್ಲಿ ಒಮ್ಮೆ ಹಿಂದೆ ಬಿದ್ದರೆ, ಪುನಃ ವೇಗದ ಗತಿಯನ್ನು ಹೆಚ್ಚಿಸಿಕೊಳ್ಳುವುದು ಕಷ್ಟ. ಹೀಗಾಗಿ ದಿನಾ ದಿನ, ಕ್ಷಣ ಕ್ಷಣವೂ ನಮ್ಮ ಆಂಟೆನಾ ಹೊಸ ಹೊಸ ಸಂಗತಿಗಳನ್ನು ಹೀರಿಕೊಳ್ಳುತ್ತಲೇ ಇರಬೇಕು. ಇಲ್ಲದಿದ್ದರೆ ತುಕ್ಕು ಹಿಡಿದುಬಿಡುತ್ತೇವೆ ಎಂದೆ. ಅವನಿಗೆ ನಿಜ ಅಂತ ಅನಿಸಿರಬೇಕು, ಹೌದು ಎಂಬಂತೆ ತಲೆಯಡಿಸಿದ. ಇಂಥವರ ಬಗ್ಗೆ ವರ್ಜಿನ್ ಕಂಪನಿ ಮಾಲೀಕ ರಿಚರ್ಡ್ ಬ್ರಾನ್‌ಸನ್ ಬಹಳ ಮಾರ್ಮಿಕವಾಗಿ ಹೇಳಿದ್ದಾನೆ – ‘ಈಗಿನ ಮಾಹಿತಿ ಅಥವಾ ಸೈಬರ್ ಯುಗದಲ್ಲಿ ಪ್ರತಿ ಸಂಗತಿಯೂ ಬಹಳ ಮುಖ್ಯ. ಅವರ ಬಗ್ಗೆ ತಿಳಿದುಕೊಂಡು ನನಗೇನಾಗಬೇಕು, ಆ ಮಾಹಿತಿ ತಿಳಿದಿರುವುದರಿಂದ ನನಗೇ ಏನು ಲಾಭ ಎಂದು ಭಾವಿಸುವಂತಿಲ್ಲ.

ಎಲ್ಲ ಸಂಗತಿಯನ್ನೂ ತಿಳಿದಿರಬೇಕು. ಬಹುಸಂಖ್ಯಾತರು ಯಾವ ವಿಷಯದ ಬಗ್ಗೆ ಯೋಚಿಸುತ್ತಿದ್ದಾರೆ ಎಂಬುದು ನಮಗೆ ಗೊತ್ತಿರಬೇಕು. ಜನರ ಯೋಚನೆಯ ಟ್ರೆಂಡ್ ಯಾವ ದಿಕ್ಕಿನತ್ತ ಹೊರಳುತ್ತಿದೆ ಎಂಬುದನ್ನು ತಿಳಿದಿರಬೇಕು. ನನಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ನನ್ನ ಪಾಡಿಗೆ ನಾನು ಇರುವಂತಿಲ್ಲ. ನಾನು ಜನರೇ ಇಲ್ಲದ ದ್ವೀಪದಲ್ಲಿ ವಾಸಿಸುತ್ತಿದ್ದರೂ, ಈ ಜಗತ್ತಿನೊಂದಿಗೆ ಕನೆಕ್ಟ್ ಆಗಿರಬೇಕು. ಸುದ್ದಿಯಲ್ಲಿರುವವರು, ಸುದ್ದಿಯಾಗುವವರ ಬಗ್ಗೆ ನಮಗೆ ತಿಳಿದಿರಲೇ ಬೇಕು. ಯಾವ ಮಾಹಿತಿಯೂ ನಮಗೆ ವರ್ಜ್ಯವಲ್ಲ. ಎಲ್ಲವೂ ಬೇಕು. ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದಷ್ಟೇ ನಮಗೆ ಬಿಟ್ಟಿದ್ದು.’ ನಮಗೆ ಚಿತ್ರನಟಿ ಶ್ರೀದೇವಿ ಮಾತ್ರ ಅಲ್ಲ, ಅವಳ ಮಗಳು ಜಾಹ್ನವಿ ಕಪೂರಳ ಬಗ್ಗೆಯೂ ಗೊತ್ತಿರಬೇಕು.

ಇಲ್ಲದಿದ್ದರೆ ನಮ್ಮ ಆಸಕ್ತಿ ಅವಳ ತಾಯಿ ತನಕ ಬಂದು ನಿಂತು ಹೋದಂತೆ. ಅಮೆಝಾನ್ ಕೊಳ್ಳದ ಕಾಡಿನಲ್ಲಿ ಮೂರು ಸಾವಿರ ವರ್ಷಗಳ ಹಿಂದಿನ ಕಪ್ಪೆ ಸಂತತಿ
ಕಾಣಿಸಿಕೊಂಡ ಸುದ್ದಿಯೂ ನಮ್ಮ ಮನಸ್ಸಿನ ಮುಖಪುಟದಲ್ಲಿ ಅಚ್ಚಾಗಲೇಬೇಕು. ಅದು ನಿರ್ಲಕ್ಷಿಸುವ ಸಂಗತಿಯಲ್ಲ. ದಿನಕ್ಕೊಂದು ರೀತಿಯಲ್ಲಿ ಕಾಣಿಸಿಕೊಳ್ಳುವ
ನಿಮ್ಮ ಗರ್ಲ್ ಫ್ರೆಂಡ್ ಯಾವ ಆಪ್ ಬಳಸುತ್ತಾಳೆಂಬುದು ನಿಮಗೆ ಗೊತ್ತಿರಬೇಕು. ಪ್ರತಿದಿನವೂ ಫೇಸ್‌ಬುಕ್, ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ ಪೋಸ್ಟರ್
ರೀತಿಯಲ್ಲಿ ಸ್ಟೇಟಸ್‌ಗಳನ್ನು ಪೋ ಮಾಡುವವರು ಟೈಪೊರಾಮ ಅಥವಾ ಪಿಕ್ಸ್ ಆರ್ಟ್ ಆಪ್ ಉಪಯೋಗಿಸುತ್ತಾರೆಂಬುದನ್ನು ತಿಳಿದಿರಬೇಕು.

ಅಷ್ಟೇ ಅಲ್ಲ, ಗರಾಜ್‌ಬ್ಯಾಂಡ್ ಬಳಸಿ ನಾವೇ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಬಹುದು ಎಂಬುದು ನಮಗೆ ಗೊತ್ತಿರಬೇಕು. ಗೂಗಲ್ ಒಂದೇ ಅಲ್ಲ,
Quora ಮೂಲಕವೂ ನಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರ ಪಡೆಯಬಹುದು ಎಂಬ ಅಂಶ ಗೊತ್ತಿರಬೇಕು. ಫೇಸ್‌ಬುಕ್ ಲೈವ್ ಮಾತ್ರ ಅಲ್ಲ,
ಪೆರಿಸ್ಕೋಪ್ ಮೂಲಕವೂ ಲೈವ್ ಕವರೇಜ್‌ನ್ನು ಟ್ವಿಟರ್ ನಲ್ಲಿ ಪೋ ಮಾಡಬಹುದು ಎಂಬುದು ನಮಗೆ ತಿಳಿದಿರಬೇಕು. ನನಗೆ ಅವೆಲ್ಲ ಗೊತ್ತಾಗೊಲ್ಲ, ನಾನು
ಮೊಬೈಲ್‌ನ್ನು ಮಾತಾಡುವ ಉದ್ದೇಶಕ್ಕೆ ಮಾತ್ರ ಬಳಸುತ್ತೇನೆ ಅಂದ್ರೆ ಅಂಥವರನ್ನು ಶುದ್ಧ ಪೆಕರನಂತೆ ನೋಡುತ್ತಾರೆ.

ಅಷ್ಟಕ್ಕೂ ಈಗ ಮೊಬೈಲ್‌ನ್ನು ಅದೊಂದನ್ನು ಬಿಟ್ಟು ಬೇರೆ ಉದ್ದೇಶಗಳಿಗೆ ಬಳಸುವುದೇ ಜಾಸ್ತಿ. ಕೆಲ ವರ್ಷಗಳ ಹಿಂದೆ ರಿಚರ್ಡ್ ಬ್ರಾನ್‌ಸನ್ ವಿಮಾನದಲ್ಲಿ ಪ್ರಯಾಣಿಸುವಾಗ ಅಮೆರಿಕದ ಖ್ಯಾತ ಟಿವಿ ಟಾಕ್ ಷೋ ಹೋ ಹಾಗೂ ಕಾಮಿಡಿಯನ್ ಎನ್ ಡೀ ಜೆನೆರೆಸ್ ಅವಳನ್ನು ಭೇಟಿ ಮಾಡಿದರಂತೆ. ಬ್ರಾನ್‌ಸನ್‌ಗೆ
ಅವಳ ಹೆಸರನ್ನು ಎಲ್ಲಾ ಕೇಳಿದ ನೆನಪು. ಆದರೆ ಅವಳ ಬಗ್ಗೆ ಹೆಚ್ಚು ಗೊತ್ತಿಲ್ಲ. ಹೀಗಾಗಿ ಹೆಚ್ಚು ಮಾತಾಡಲು ಹೋಗಲಿಲ್ಲ. ಎನ್‌ಗೆ ಬ್ರಾನ್ ಸನ್ ಬಗ್ಗೆ ಗೊತ್ತು. ತುಂಬಾ ಖುಷಿ ಖುಷಿಯಿಂದ, ಉತ್ಸಾಹದಿಂದಲೇ ಮಾತಾಡಿಸಿದಳು.

ತನ್ನ ಬಗ್ಗೆ ಸ್ವಲ್ಪ ಹೇಳಿಕೊಂಡಳು. ಆದರೆ ಬ್ರಾನ್‌ಸನ್‌ನಿಂದ ತಣ್ಣನೆಯ ಪ್ರತಿಕ್ರಿಯೆ. ತಾನೇ ಮೈಮೇಲೆ ಬಿದ್ದು ಮಾತಾಡಿಸುವುದು ಎಷ್ಟು ಸರಿ ಎಂದು ಭಾವಿಸಿದ ಆಕೆ ಅಲ್ಲಿಗೆ ಸುಮ್ಮನಾದಳು. ಅವರಿಬ್ಬರ ನಡುವಿನ ಮಾತುಕತೆ ಒಂದು ನಿಮಿಷದೊಳಗೇ ಮುಗಿದು ಹೋಯಿತು. ಆನಂತರ ವಿಮಾನದಿಂದ ಇಳಿದ ಬಳಿಕ ಎನ್ ಬಗ್ಗೆ ಇಂಟರ್‌ನೆಟ್‌ಗೆ ಹೋಗಿ ಸರ್ಚ್ ಮಾಡಿದ. ಅವಳ ಖ್ಯಾತಿ ಕಂಡು ಹೌಹಾರಿಬಿಟ್ಟ. ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ತನಗಿಂತ ಹೆಚ್ಚು ಅಭಿಮಾನಿಗಳನ್ನು ಮತ್ತು ಫಾಲೊವರ್ ಗಳನ್ನು ಹೊಂದಿರುವ ಅವಳ ಬಗ್ಗೆ ಹೆಚ್ಚು ತಿಳಿದುಕೊಳ್ಳದ ತನ್ನ ಅಜ್ಞಾನ ಹಾಗೂ ಮೌಢ್ಯದ ಬಗ್ಗೆ ಬೇಸರಪಟ್ಟುಕೊಂಡ.

ಎನ್ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಿದ್ದರೆ ನಾನು ಅವಳ ಜತೆ ಕನಿಷ್ಠ ಒಂದು ಗಂಟೆಯಾದರೂ ಹರಟೆ ಹೊಡೆಯುತ್ತಿದ್ದೆ, ಅವಳನ್ನು ಮಾತಿಗೆ ಎಳೆಯುತ್ತಿದ್ದೆ. ಅವಳ
ಟಾಕ್ ಷೋ ರಹಸ್ಯಗಳ ಕುರಿತು ತಿಳಿದುಕೊಳ್ಳುತ್ತಿದ್ದೆ. ಖಂಡಿತವಾಗಿಯೂ ಆ ವಿಮಾನ ಪ್ರಯಾಣ ಇನ್ನಷ್ಟು ರೋಮಾಂಚಕಾರಿಯಾಗಿರುತ್ತಿತ್ತು. ಎನ್‌ಳಂಥ ಅದ್ಭುತ ಪ್ರತಿಭೆಯನ್ನು ಮಾತಿಗೆ ಎಳೆದಿದ್ದರೆ ನನಗೆ ಹಲವಾರು ಉಪಯುಕ್ತ ಸಂಗತಿಗಳು ತಿಳಿಯುತ್ತಿದ್ದವು ಎಂದು ಬ್ರಾನ್ ಸನ್ ಬರೆದುಕೊಂಡಿದ್ದಾರೆ.

ಅಂದ ಹಾಗೆ ಎನ್ ಡೀ ಜೆನೆರೇಸ್ ಯಾರು ಅಂತ ಕೇಳಬಾರದು. ಟ್ವಿಟರ್‌ನಲ್ಲಿ ಟ್ವಿಟರ್‌ಗಿಂತ ಹೆಚ್ಚು ಮತ್ತು ಜಗತ್ತಿನಲ್ಲಿ ಆರನೇ ಅತಿ ಹೆಚ್ಚು ಫಾಲೋವರುಗಳನ್ನು
ಹೊಂದಿರುವ ಎನ್, ಅಮೆರಿಕ ಅಧ್ಯಕ್ಷರನ್ನೂ ಒಂದು ಹಂತದಲ್ಲಿ ಮೀರಿಸಿದ್ದಾಳೆ. ಯಾರಿಗೆ ಗೊತ್ತು, ಬ್ರಾನ್‌ಸನ್ ಗೆ ಆದಂತೆ ನಿಮ್ಮನ್ನು ಆಕೆ ಆಕಸ್ಮಿಕವಾಗಿ ಭೇಟಿ
ಮಾಡಬಹುದು. ಆಗ ನೀವು ಅವಳು ಯಾರು, ಅವಳನ್ನು ಎಲ್ಲಾ ನೋಡಿದಂತಿದೆಯಲ್ಲ… ಎಂದು ಕೇಳಬಾರದು. ಅದರಲ್ಲೂ ನೀವು ಪತ್ರಕರ್ತರಾಗಿದ್ದರೆ ಅವಳ ಬಗ್ಗೆ ತಿಳಿದುಕೊಂಡಿರಲೇ ಬೇಕು. ಇಲ್ಲದಿದ್ದರೆ ನಿಮಗೆ ಒಂದು ‘ಬಿಗ್ ಸ್ಟೋರಿ’ ಮಿಸ್ ಆದಂತೆ.

ಯಾರಿಗೆ ಗೊತ್ತು, ಬಸ್ಸಿನ, ರೈಲಿನ, ವಿಮಾನದ, ಪಾರ್ಟಿಯ ನಿಮ್ಮ ಪಕ್ಕದಲ್ಲಿ ನೀವು ಇಷ್ಟಪಡುವ ಲೇಖಕರೇ ಕುಳಿತುಕೊಂಡಿರಬಹುದು. ಈ ವಿಷಯದ ಬಗ್ಗೆ ಬ್ರಾನ್‌ಸನ್ ಹೇಳೋದೇ ಬೇರೆ. ವಿಷಯ ಯಾವುದೇ ಇರಲಿ, ನಿಮ್ಮ ಉತ್ಸಾಹ ಬತ್ತಬಾರದು. ಅದನ್ನು ತಿಳಿದುಕೊಳ್ಳಲು ಸ್ವಲ್ಪವೂ ನಿರಾಸಕ್ತಿ ತೋರಬಾರದು. ಅದನ್ನು ತಿಳಿದುಕೊಂಡು ನನಗೇನಾಗಬೇಕು ಎಂದು ನೀವು ಯೋಚಿಸಲೇಬಾರದು. ಅದನ್ನು ತಿಳಿದುಕೊಳ್ಳದಿದ್ದರೆ ಈ ಜೀವನವೇ ವ್ಯರ್ಥ ಎಂದೆನಿಸಬೇಕು. ಆಗಲೇ ನಮಗೆ ಹೊಸ ಸಂಗತಿಗಳನ್ನು ತಿಳಿದುಕೊಳ್ಳಬೇಕೆಂಬ ದಾಹ ಹೆಚ್ಚಾಗುತ್ತಲೇ ಹೋಗುತ್ತದೆ.

ಹೊಸ ಸಂಗತಿಗಳನ್ನು ತಿಳಿಯುವುದೆಂದರೆ ಬದುಕಿನ ಬಗ್ಗೆ ಆಸಕ್ತಿ ಹೊಂದಿದಂತೆ. ಜೀವನದಲ್ಲಿ ಆಸಕ್ತಿಯಿಲ್ಲದವರು ಮಾತ್ರ ಸತ್ತಂತಿರುತ್ತಾರೆ, ಅಂಥವರಿಗೆ ಯಾವುದೂ ಬೇಕಾಗುವುದಿಲ್ಲ. ಅದು ನಿರ್ಲಿಪ್ತತೆಯ ಸಂಕೇತ, ಜಡತ್ವದ ದ್ಯೋತಕ. ಅಂಥವರ ಮುಂದೆ ನವಿಲು ನರ್ತಿಸಿದರೂ ಅವರಿಗೆ ಏನೂ ಅನಿಸುವುದಿಲ್ಲ. ಸಣ್ಣ ಸಣ್ಣ ಕಾರಣಗಳಿಗೂ ಸಂಭ್ರಮಿಸಬೇಕು. ಹೊಸತನಕ್ಕೆ ಕಾತರಿಸುವ ನಮ್ಮ ಕುತೂಹಲವನ್ನು ಯಾವತ್ತೂ ಜಾಗೃತವಾಗಿಟ್ಟುಕೊಳ್ಳಬೇಕು. ಹಾಗಾದಾಗ ನಿಮಗೆ ಆಯಾಸವೂ ಆಗುವುದಿಲ್ಲ, ವಯಸ್ಸೂ ಆಗುವುದಿಲ್ಲ.

ಹಣ ಮಾಡುವುದೇ ನನ್ನ ಕಾಯಕ ಎಂದು ನಾನು ಭಾವಿಸಿಲ್ಲ. ಸಾಹಸಕ್ಕೆ ಈಡು ಮಾಡಿಕೊಳ್ಳುವುದೇ ಬದುಕು ಎಂದು ಭಾವಿಸಿದವನು ನಾನು. ವಿಮಾನದಿಂದ ಧುಮುಕು ಅಂದ್ರೆ ನಾನು ಹಿಂದೆ ಮುಂದೆ ನೋಡದೇ ಜಿಗಿಯುತ್ತೇನೆ. ಇಂಥ ಅಚ್ಚರಿಗೆ ನಮ್ಮನ್ನು ತೆರೆದುಕೊಂಡರೆ ಮಾತ್ರ ದೇಹಕ್ಕೆ ಮತ್ತು ಮನಸ್ಸಿಗೆ ಮುಪ್ಪಾಗು ವುದಿಲ್ಲ. ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ಕಳೆದುಕೊಂಡ ಕ್ಷಣಕ್ಕೆ ನಮಗೆ ವಯಸ್ಸಾಗಿದೆ ಎಂದರ್ಥ. ಹೀಗಾಗಿ ಕೆಲವರಿಗೆ ಐವತ್ತು-ಐವತ್ತೈದು ವರ್ಷಗಳಿಗೇ ಮುಪ್ಪು ಅಡರುತ್ತದೆ. ಅರವತ್ತಾದ ನಂತರ ಡಾನ್ಸ್ ಕಲಿಯಲು ಆಸಕ್ತಿ ಮೂಡಿದರೆ, ನಿಮ್ಮ ದೇಹ ತನ್ನಿಂದ ತಾನೇ ಒಂದು ಶಿಸ್ತಿಗೆ ಒಳಗಾಗುತ್ತದೆ. ಬದುಕುವ ಉಮೇದಿ ಮತ್ತಷ್ಟು ಹೆಚ್ಚುತ್ತದೆ. ಈ ಕಾರಣದಿಂದ ಏನೇ ಆದರೂ ಕಲಿಯುವ ಹಪಾಹಪಿಯನ್ನು ಬಿಟ್ಟುಕೊಡಬಾರದು ಅಂತಾನೆ ಬ್ರಾನ್‌ಸನ್.

ಇಲ್ಲಿ ನನ್ನ ತಾಯಿಯ ಬಗ್ಗೆ ಹೇಳಬೇಕು. ಅವರೆಂದೂ ಜೀವನದಲ್ಲಿ ಶಾಲೆಗೆ ಹೋದವರಲ್ಲ. ಓದಲು, ಬರೆಯಲು ಬಾರದ ಅಪ್ಪಟ ಅನಕ್ಷರಸ್ಥೆ. ಜೀವನದಲ್ಲಿ ಎಲ್ಲಿಗೆ
ಹೋಗಬೇಕಾದರೂ ಜತೆಯಲ್ಲಿ ಯಾರಾದರೂ ಇರಬೇಕಾಗುತ್ತಿತ್ತು. ನಮ್ಮ ಹಳ್ಳಿಯಿಂದ ಕುಮಟಾಕ್ಕೆ ಅಥವಾ ಶಿರಸಿಗೆ ಹೋಗಬೇಕೆಂದರೆ ನನ್ನ ತಂದೆಯವರು ಒಬ್ಬ ಆಳಿನ ಜತೆಯಲ್ಲಿ ಕಳಿಸಿಕೊಡುತ್ತಿದ್ದರು. ಬೆಂಗಳೂರಿಗೆ ಬಂದು ನನ್ನ ಜತೆಯಲ್ಲಿ ನೆಲೆಸಲು ಆರಂಭಿಸಿದಂದಿನಿಂದ ಅವರ ದಿನಚರಿಯೇ ಬದಲಾಯಿತು. ಸುಮಾರು ೨೦ ವರ್ಷಗಳ ಹಿಂದೆ ನನ್ನ ತಂದೆಯವರ ನಿಧನದ ನಂತರ, ಅವರೇ ಕನ್ನಡ ಬರೆಯಲು, ಓದಲು ಕಲಿತುಕೊಂಡರು. ಇಂಗ್ಲಿಷ್ ಅಕ್ಷರಗಳ ಪರಿಚಯ ಮಾಡಿಕೊಂಡರು.

ಅಚ್ಚರಿಯೆನಿಸಬಹುದು, ಒಬ್ಬರೇ ಪ್ರತ್ಯೇಕವಾಗಿ ದಕ್ಷಿಣ ಭಾರತ, ಉತ್ತರ ಭಾರತ ಪ್ರವಾಸ ಮಾಡಿದರು. ಎರಡು ತಿಂಗಳು ಸಮಗ್ರ ಭಾರತವನ್ನು ಸುತ್ತಿದರು. ಅಮೆರಿಕದಲ್ಲಿರುವ ನನ್ನ ತಮ್ಮನ ಮನೆಗೆ ಒಬ್ಬರೇ ಹೋಗಿ ಆರು ತಿಂಗಳು ಇದ್ದು ಬಂದರು. ಪ್ರತಿದಿನ ಟಿವಿ ನ್ಯೂಸ್ ನೋಡುವುದನ್ನು ಅಭ್ಯಾಸ ಮಾಡಿಕೊಂಡರು. ನನ್ನ ಪತ್ರಿಕೆಯಲ್ಲಿ ಅಚ್ಚಾಗದ ಸುದ್ದಿಯನ್ನು ಪಟ್ಟಿ ಮಾಡಿ ನನಗೆ ಹೇಳುತ್ತಿದ್ದರು. ಮೊಬೈಲ್ ಕೊಡಿಸಿದ ನಂತರ ಅವರಿಂದು ದಿನದ ಆರೇಳು ಗಂಟೆಗಳ ಕಾಲ ಎಂಗೇಜ್!

ನನ್ನ ತಾಯಿಯವರಿಗೆ ಫೋನ್ ಮಾಡಿದರೆ ಎಲ್ಲಾ ಸುದ್ದಿಯೂ ಗೊತ್ತಾಗುತ್ತಿತ್ತು. ಒಂದು ರೀತಿಯಲ್ಲಿ ನನಗಿಂತ ಅಪ್ಡೇಟ್ ಆಗಿರುತ್ತಿದ್ದರು. ಕೆಲ ವರ್ಷದ ಹಿಂದೆ ಅವರಿಗೆ ಒಳ್ಳೆಯ ಸ್ಮಾರ್ಟ್ ಫೋನ್ ತೆಗೆಸಿಕೊಟ್ಟೆ ಮತ್ತು ವಾಟ್ಸಪ್ ಬಳಸುವುದನ್ನು ಹೇಳಿಕೊಟ್ಟೆ. ಅವರ ಜೀವನದ ಗತಿಯೇ ಬದಲಾಗಿ ಹೋಯಿತು. ಊರು, ಬೆಂಗಳೂರು, ಅಮೆರಿಕದಲ್ಲಿರುವ ಮಕ್ಕಳ, ಮೊಮ್ಮಕ್ಕಳ, ನೆಂಟರು, ಪರಿಚಿತರ ಕ್ಷಣ ಕ್ಷಣದ ಸುದ್ದಿ, ಫೋಟೋ ಅವರ ಮೊಬೈಲ್ ನಲ್ಲಿ ಬಂದು ಬೀಳುತ್ತಿದ್ದವು. ಅವನ್ನೆಲ್ಲ ನೋಡುವುದರಲ್ಲಿ ಸಮಯ ಕಳೆದಿದ್ದೇ ಗೊತ್ತಾಗುತ್ತಿರಲಿಲ್ಲ.

ಇತ್ತೀಚಿಗೆ ಒಂದು ಮುಂಜಾನೆ ನಾಲ್ಕು ಗಂಟೆಗೆ ನನ್ನ ತಾಯಿಯವರ ರೂಮಿನಿಂದ ಏನೋ ಸದ್ದು ಕೇಳಿಸಿದಂತಾಯಿತು, ಹೋಗಿ ನೋಡಿದರೆ, ಅಮೆರಿಕಕ್ಕೆ
ವಾಟ್ಸಾಪ್ ವಿಡಿಯೊ ಕಾಲ್‌ನಲ್ಲಿ ಮಾತಾಡುತ್ತಿದ್ದರು. ಅವರಿಗೆ ಈಗ ದಿನದಲ್ಲಿ ಇಪ್ಪತ್ನಾಲ್ಕು ಗಂಟೆ ಕಡಿಮೆಯೇ. ಓದಲು, ತಿಳಿದುಕೊಳ್ಳಲು ಎಷ್ಟೆ ವಿಷಯಗಳಿವೆ ಎಂದು ಹೇಳುತ್ತಿರುತ್ತಾರೆ. ಏನೂ ಇಲ್ಲದ ಸಂದರ್ಭಗಳಲ್ಲಿ ಇಯರ್ ಫೋನ್ ಹಾಕಿಕೊಂಡು ಸಂಗೀತ ಆಸ್ವಾದಿಸುತ್ತಾರೆ. ಈ ಎಪ್ಪತ್ತೈದರ ಇಳಿ ವಯಸ್ಸಿನಲ್ಲೂ ಅವರಿಗೆ ಬದುಕಿನ ಹೊಸ ಹೊಸ ವಿಸ್ಮಯಗಳಿಗೆ ತಮ್ಮನ್ನು ಮುಖಾಮುಖಿ ಮಾಡಿಕೊಳ್ಳುತ್ತಿದ್ದಾರೆ.

ಅವರ ಕ್ರಿಯಾಶೀಲತೆಗೆ ಎಲ್ಲಾ ವಿಷಯಗಳಲ್ಲಿ ಆಸಕ್ತಿಯೇ ಕಾರಣ. ಪತ್ರಿಕೆ ಮತ್ತು ಪುಸ್ತಕಗಳನ್ನು ಓದಲು ಅನುವಾಗಲೆಂದು ಕಣ್ಣಿನ ಆಪರೇಷನ್ ಮಾಡಿಸಿಕೊಂಡ
ನಂತರ ಜಗತ್ತು ಮತ್ತಷ್ಟು ಸ್ಪಷ್ಟವಾಗಿ, ಸ್ಪುಟವಾಗಿ ಕಾಣಿಸಲಾರಂಭಿಸಿದೆ. ಜೀವನದಲ್ಲಿ ಲವಲವಿಕೆ ಹೆಚ್ಚಾಗಿದೆ. ಈ ಕಾರಣದಿಂದ ಆರೋಗ್ಯವೂ ಚೆನ್ನಾಗಿದೆ. ಬದುಕಿನಲ್ಲಿ ಆಸಕ್ತಿ, ಹೊಸತನಕ್ಕೆ ತುಡಿಯುವ ಕುತೂಹಲವನ್ನು ಕಳೆದುಕೊಂಡರೆ ಮುಪ್ಪು ಅಡರಲಾರಂಭಿಸುತ್ತದೆ. The cure for boredom is curiosity. There is no cure for curiosity ಎಂಬ ಮಾತಿದೆ. ಇದೇ ನಮ್ಮನ್ನು ಸದಾ ಜೀವಂತವಾಗಿ ಇಟ್ಟಿರುತ್ತದೆ!