ಶಶಾಂಕಣ
shashidhara.halady@gmail.com
ಮಳೆ ಬಿದ್ದ ಕೂಡಲೇ ಸಸ್ಯಗಳು ಹಸಿರಾಗಿ ಚಿಗಿತುಕೊಳ್ಳುತ್ತವೆ; ಬೇಸಗೆಯಲ್ಲಿ ಬಿದ್ದ ಬೀಜಗಳು ಮೊಳಕೆಯೊಡೆಯುತ್ತವೆ; ಮರಗಳ ಮೇಲೂ ಕೆಲವು ಪುಟ್ಟ ಸಸ್ಯಗಳು ತಲೆ ಎತ್ತಿ ತಮ್ಮಿರವನ್ನು ತೋರುತ್ತವೆ; ಸುಂದರ ಹೂವುಗಳು ಅರಳುತ್ತವೆ. ಅದೇ ಅಲ್ಲವೆ ಮಳೆಗಾಲದ ವಿಸ್ಮಯ!
ಮಳೆಗಾಲ ಆರಂಭವಾದ ಕೆಲವೇ ವಾರಗಳಲ್ಲಿ ನಮ್ಮ ಹಳ್ಳಿಯ ಸುತ್ತಲಿನ ಕಾಡು ಗುಡ್ಡಗಳಲ್ಲಿ ಬೆಳೆಯುವ ಮರಗಳ ಮೇಲೆ ಒಂದು ಕೆಸ (ಕೆಸುವೆ) ಬೆಳೆಯಲು ಆರಂಭವಾಗುತ್ತದೆ. ಅದರ ಹೆಸರು ? ‘ಮರ ಕೆಸ’. ಈ ಹೆಸರಿಗೆ ಕಾರಣ? ಅದು ಮರದ ಮೇಲೆ ಬೆಳೆಯುವ ಕೆಸ – ಆದ್ದರಿಂದ ‘ಮರ ಕೆಸ’. ನಮ್ಮ ಹಳ್ಳಿಯ ಕಾಡು, ಗುಡ್ಡ, ತೋಟ, ಅಂಗಳ, ಗದ್ದೆಯಂಚು – ಹೀಗೆ ವಿವಿಧ ಭಾಗಗಳಲ್ಲಿ ನಾನಾ ರೀತಿಯ ಕೆಸಗಳು ಬೆಳೆಯುತ್ತವೆ- ಮಳೆಗಾಲದಲ್ಲಂತೂ ಮನೆಯ ಸುತ್ತಲೂ ಕೆಸುವಿನ ಮೆರವಣಿಗೆ – ಕಾಟು ಕೆಸ, ಕರಿ ಕೆಸ, ಗೋವೆ ಕೆಸ, ಹೆಗ್ಗೆಸ, ಕೋಲು ಕೆಸ, ಹೆಸರು ಗೊತ್ತಿಲ್ಲದ ಇನ್ನಷ್ಟು ಕೆಸಗಳು. ಈ ರೀತಿಯ ನಾನಾ ಪ್ರಭೇದದ ’ಕೆಸ’ಗಳಿಂದ ಪ್ರತ್ಯೇಕ ವಾಗಿ ಗುರುತಿಸಲು, ಈ ಕೆಸದ ಹೆಸರು ‘ಮರ ಕೆಸ’.
ಮರ ಕೆಸದ ವಿಶೇಷವೆಂದರೆ, ಇದನ್ನು ಬಳಸಿ ತಯಾರಿಸುವ ವಿವಿಧ ತಿನಿಸುಗಳನ್ನು ತಿಂದಾಗ, ಬಾಯಿ ತುರಿಕೆ ಆಗುವುದಿಲ್ಲ! ಮತ್ತು ಬೇರೆ ಕೆಸಗಳಿಗಿಂತ ಇದಕ್ಕೆ ರುಚಿ ಜಾಸ್ತಿ. ನಮ್ಮ ಹಳ್ಳಿ ಮನೆಯ ಎದುರಿನ ಗುಡ್ಡದಲ್ಲಿ ಹತ್ತಾರು ಬೃಹದಾಕಾರದ ಕಿರಾಲು ಬೋಗಿ ಮರಗಳಿದ್ದವು; ಅದೆಷ್ಟೋ ವರ್ಷಗಳ ಕಾಲ ಮಳೆ – ಬಿಸಿಲು – ಗಾಳಿಗೆ ಮೈ ಒಡ್ಡಿದ್ದರಿಂದಾಗಿ, ಅವುಗಳ ಕಾಂಡದ ಮೇಲಿ ತೊಗಟೆ ಒರಟು ಒರಟಾಗಿ, ಅಡಾಳಾಗಿ ಬೆಳೆದಿತ್ತು. ಆ ಒರಟು ತೊಗಟೆಯ ಮೇಲೆ ಅಥವಾ ಮರದ ಕಾಂಡಗಳು ಆರಂಭವಾಗುವ ಸಂದಿಯಂತಹ ಜಾಗದಲ್ಲಿ, ಮಳೆಗಾಲದಲ್ಲಿ ಸಣ್ಣ ಪುಟ್ಟ ಗಿಡಗಳು ಬೆಳೆಯುವುದು ಮಾಮೂಲು.
ಅವುಗಳ ನಡುವೆ ಮರ ಕೆಸದ ಎಲೆಗಳು ತಮ್ಮ ಹಳದಿ ಮಿಶ್ರಿತ ಹಸಿರಿನಿಮದ ಕಂಗೊಳಿಸಲು, ಚೆನ್ನಾಗಿ ಮಳೆ ಬೀಳಬೇಕು. ನಿರಂತರವಾಗಿ ಒಂದೆರಡು ವಾರ ಮಳೆ ಬಂದ ನಂತರವಷ್ಟೇ, ಬೋಗಿ ಮರದ ಬರಡು ಕಾಂಡದ ಸಂದಿಗೊಂದಿಗಳಲ್ಲಿ ಮರ ಕೆಸದ ಎಲೆಗಳು ಕುಡಿಯೊಡೆಯುತ್ತವೆ. ನಾಲ್ಕಾರು ದಿನಗಳಲ್ಲಿ ಅಂಗೈ
ಅಗಲಕ್ಕೆ ಬೆಳೆಯುತ್ತವೆ. ಆಗಲೇ ಇವುಗಳನ್ನು ಕೀಳಲು ಪ್ರಶಸ್ತಕಾಲ; ಸಾಕಷ್ಟು ಎಳೆಯದಾಗಿದ್ದಾಗಲೇ ಕಿತ್ತರೆ ರುಚಿ ಜಾಸ್ತಿ. ಇನ್ನೂ ಹೆಚ್ಚು ದಿನ ಬಿಟ್ಟರೆ, ಎಲೆ ಗಳು ಬಲಿತಾವೇ ಹೊರತು, ಗಾತ್ರದಲ್ಲಿ ತುಂಬಾ ದೊಡ್ಡದಾಗದ ಪ್ರಭೇದ ಇದು.
ಮರಗಳ ಮೇಲೆ, ಕಾಂಡದ ನಡುವೆ, ಮರದ ಬೇರಿನಂತಹ ನೆಲಮಟ್ಟದ ಜಾಗದಲ್ಲಿ, ಕೆಲವು ಬಾರಿ ಗುಡ್ಡೆ ನೆಲದ ಮೇಲೂ ಬೆಳೆಯುವ ಮರ ಕೆಸದ ಎಲೆಗಳೆಂದರೆ, ಅಡುಗೆ ಆಡುವವರಿಗೆ ಬಹಳ ಇಷ್ಟ. ಏಕೆಂದರೆ, ಈ ಎಲೆಗಳಿಂದ ತಯಾರಿಸುವ ತಿನಿಸು ಗಳಿಗೆ ರುಚಿ ಜಾಸ್ತಿ, ತಿಂದವರ ನಾಲಗೆ ತುರಿಸುವುದಿಲ್ಲ ಎಂಬ ಧೈರ್ಯ. ಬೇರೆ ಕೆಸಕ್ಕೆ ಹೋಲಿಸಿದರೆ ಚಿಕ್ಕ ಚಿಕ್ಕ ಎಲೆಗಳಾಗಿದ್ದರಿಂದ, ಯಾವುದೇ ತಿನಿಸು ತಯಾರಿಸಲು ಹೆಚ್ಚು ಎಲೆಗಳು ಬೇಕು. ಈ ಎಲೆಗಳಿಂದ ಚಟ್ನಿ, ಪತ್ರೊಡೆ ತಯಾರಿಸಬಹುದು.
ಅಕ್ಕಿ ಹಿಟ್ಟನ್ನುಮೆಣಸಿನ ಕಾಯಿಯೊಂದಿಗೆ ಚೆನ್ನಾಗಿ ರುಬ್ಬಿ ಎಲೆಗಳ ನಡುವೆ ಹಚ್ಚಿ, ಹಬೆಯಲ್ಲಿ ಬೇಯಿಸಿದಾಗ, ಪತ್ರೊಡೆ ಸಿದ್ಧ. ಬೆಂದ ನಂತರ, ಚಿಕ್ಕ ಚಿಕ್ಕ
ಹೋಳುಗಳ ರೀತಿ ಹೆಚ್ಚಿ, ಅವರವರ ನಾಲಗೆ ಚಾಪಲ್ಯಕ್ಕೆ ಅನುಗುಣವಾಗಿ, ಕಾರ ಮಸಾಲೆ, ಬೆಲ್ಲ ಕಾಯಿ ಹೂರಣ ಮೊದಲಾದವುಗಳೊಂದಿಗೆ ಒಗ್ಗರಿಸಿ, ತಿನ್ನಬಹುದು. ರುಚಿ ಹೆಚ್ಚಲು ತೆಂಗಿನ ಎಣ್ಣೆಯ ಧಾರಾಳ ಬಳಕೆ ಆಗಲೇಬೇಕು!
ಮರ ಕೆಸವಿನ ಎಲೆಯಿಂದ ತಯಾರಿಸುವ ದೋಸೆ ಎಂದರೆ, ನಮ್ಮ ಅಮ್ಮಮ್ಮನಿಗೆ ಬಹಳ ಇಷ್ಟ. ಧಾರಾಳ ವಾಗಿ ತೆಂಗಿನ ಎಣ್ಣೆ ಹಾಕಿ ಅವರು ಮಾಡಿಕೊಡುತ್ತಿದ್ದ
ಅಂತಹ ದೋಸೆಗಳೆಂದರ ನಮಗೂ (ಮಕ್ಕಳಿಗೆ) ಬಹಳ ಇಷ್ಟ. ಹನಿ ಮಳೆ ಬೀಳುತ್ತಿರುವಾಗಲೇ, ಕಂಬಳಿ ಕೊಪ್ಪೆ ಹಾಕಿಕೊಂಡು ಮನೆ ಎದುರಿನ ಗುಡ್ಡೆ ಅಥವಾ ಮನೆ ಹಿಂದಿನ ಹಕ್ಕಲಿಗೆ ಹೋಗಿ, ಮರಕೆಸದ ಎಲೆಗಳನ್ನು ತರುತ್ತಿದ್ದರು. ಕೈಗೆಟಕುವ ಎತ್ತರ ದಲ್ಲಿದ್ದರೆ ಎಲೆಗಳನ್ನು ಅವರೇ ಕೀಳುತ್ತಿದ್ದರು; ಇನ್ನೂ ಎತ್ತರದ ಹಳೆಯ ಮರಗಳ ಮೇಲೆ ಬೆಳೆದ ಮರ ಕೆಸ ಎಲೆಗಳನ್ನು ಸಂಗ್ರಹಿಸಲು ಯಾರದ್ದಾದರೂ ಸಹಾಯ ಪಡೆಯುತ್ತಿದ್ದರು.
ಎಲೆಗಳನ್ನು ಮನೆಗೆ ತಂದು, ಚೆನ್ನಾಗಿ ತೊಳೆದು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಹೆಚ್ಚಿ, ಅಕ್ಕಿ ಹಿಟ್ಟಿನೊಂದಿಗೆ ಬೆರೆಸುತ್ತಿದ್ದರು. ಆ ಹಿಟ್ಟನ್ನು ಅರೆದು ತಯಾರಿಸುವಾಗ ಒಣ ಮೆಣಸಿನ ಕಾಯಿ, ಉಪ್ಪು, ಕುತ್ತುಂಬರಿ ಬೀಜ ಬೆರೆಸಿ ರುಚಿ ಹೆಚ್ಚಿಸುತ್ತಿದ್ದರು. ದೋಸೆ ಹಿಟ್ಟಿನ ರೂಪದ ಹಿಟ್ಟಿಗೆ ಮರ ಕೆಸದ ಕತ್ತರಿಸಿದ ಎಲೆಗಳನ್ನು ಬೆರೆಸಿ, ದೋಸೆ ಕಲ್ಲಿಗೆ ಹಚ್ಚಿ, ಚೆನ್ನಾಗಿ ಬೇಯಿಸಿದರೆ ಮರಕೆಸದ ದೋಸೆ ಸಿದ್ಧ. ಬೇಯಿಸುವಾಗ ಒಂದೆರಡು ಚಮಚ ತೆಂಗಿನ ಎಣ್ಣೆಯನ್ನು ಹಾಕಿದರೆ ರುಚಿ ಜಾಸ್ತಿ.
ಮರ ಕೆಸದ ದೋಸೆಯು ಸಹಜವಾಗಿ ಮಳೆಗಾಲದ ತಿನಿಸು; ಬೆಳಗಿನ ತಿಂಡಿಯ ಬದಲಿಗೆ ಇದನ್ನು ಸೇವಿಸಬಹುದು; ಅಥವಾ ರಾತ್ರಿಯೂ ಸೇವಿಸಬಹುದು. ಇದನ್ನು ಸೇವಿಸಿದಾಗ ದೊರೆಯುವ ಆರೋಗ್ಯ ಲಾಭಗಳ ಕುರಿತು ಹೆಚ್ಚು ಅಧ್ಯಯನ ನಡೆದಿಲ್ಲವಾದರೂ, ಕಾಡಿನಲ್ಲೇ ಸಹಜ ವಾಗಿ ಬೆಳೆಯುವ ಈ ಎಲೆಗಳನ್ನು ಸೇವಿಸಿದಾಗ, ಪತ್ರಹರಿತ್ತು ಹೆಚ್ಚಿನ ಪ್ರಮಾಣದಲ್ಲಿ ದೇಹವನ್ನು ಸೇರುವುದಂತೂ ನಿಶ್ಚಿತ.
ಗೊಬ್ಬರ ಹಾಕಿ ಬೆಳೆಸುವ ದೊಡ್ಡ ಗಾತ್ರದ ಕೆಸುವಿನ ಎಲೆಗಳಿಗಿಂತಲೂ, ಈ ಕಾಡುಪತ್ರಗಳಲ್ಲಿ ಹೆಚ್ಚಿನ ಪೌಷ್ಟಿಕಾಂಶ ಇರುವುದಂತೂ ನಿಜ. ಈಗ ನಮ್ಮ ಹಳ್ಳಿಯ ಸುತ್ತ ಮುತ್ತ ದೊಡ್ಡ ಗಾತ್ರ ಹಳೆಯ ಮರಗಳು ಬಹುತೇಕ ಕಣ್ಮರೆ ಯಾಗಿರುವುದರಿಂದ, ಉತ್ತಮ ಗುಣಮಟ್ಟದ ಮರ ಕೆಸದ ಎಲೆಗಳು ದೊರೆಯುವುದು ಕಷ್ಟ. ಆದರೂ ಕಾಡು ಗುಡ್ಡಗಳಲ್ಲಿ ಹುಡುಕಿದರೆ ಅಲ್ಲಲ್ಲಿ ಮರ ಕೆಸದ ಎಲೆಗಳು ಸಿಗುತ್ತವೆ. ಕೆಲವು ಕುಟುಂಬಗಳು ಪ್ರತಿ ವರ್ಷ ಮಳೆಗಾಲದಲ್ಲಿ ಮರ ಕೆಸದ ಎಲೆಗಳನ್ನು
ಒಮ್ಮೆಯಾದರೂ ಅಡುಗೆಗೆ ಬಳಸಲೇಬೇಕು ಎಂಬ ಪದ್ಧತಿಯನ್ನಿಟ್ಟುಕೊಂಡಿದ್ದಾರೆ.
ಮಳೆಗಾಲ ಆರಂಭವಾದ ಕೂಡಲೆ ನಮ್ಮೂರಿನ ಮರಗಿಡಗಳಲ್ಲಿ ವರ್ಣಮಯವಾಗಿ ಕಾಣಿಸಿಕೊಳ್ಳುವ ಒಂದು ಹೂವೆಂದರೆ ಸೀತಾದಂಡೆ. ನೆಲಮಟ್ಟದಿಂದ ಹತ್ತಿಪ್ಪತ್ತು ಅಡಿಗಳ ಎತ್ತರದಲ್ಲಿ, ಮರ ಗಳ ಕಾಂಡದ ನಡುವೆ ಒಂದಡಿ ಉದ್ದದ, ತಿಳಿನೇರಳೆ ಬಣ್ಣದ ಸೀತಾದಂಡೆ ಹೂವನ್ನು ಕಂಡು, ಉಲ್ಲಾಸ ದಿಂದ ಅರಳದ ಮನವೇ ಇಲ್ಲ; ಇದನ್ನು ಕಂಡ ತಕ್ಷಣ, ಅದರ ನೋಟಕ್ಕೆ ಮೋಹಗೊಂಡ, ತಮ್ಮ ತುರುಬಿನಲ್ಲಿ ಸಿಕ್ಕಿಸಿಕೊಳ್ಳುವ ಗ್ರಾಮೀಣ ಮಹಿಳೆ ಯರ ಸಂತಸ ಅಪಾರ. ಅಷ್ಟು ಸುಂದರ, ಅಷ್ಟು ರಮ್ಯ ಈ ಸೀತಾದಂಡೆ ಹೂಗೊಂಚಲು.
ಅದರಲ್ಲೂ, ಸುತ್ತಲೂ ಮೋಡ ಕವಿದು, ಆಗಾಗ ಹನಿಕಿಕ್ಕುವ ಮಳೆಯ ಶ್ರಾಯದಲ್ಲಿ, ದಟ್ಟ ಹಸಿರಿನಿಂದ ಕಂಗೊಳಿಸುವ ಕಾಡು – ಗುಡ್ಡಗಳ ನಡುವೆ, ಈ ಹೂಗೊಂಚ ಲು ಒಂದು ಪುಟ್ಟಕಾವ್ಯವನ್ನೇ ಬರೆದಂತೆ ಕಾಣುತ್ತವೆ. ಆಷಾಢ – ಶ್ರಾವಣದ ಸಮಯದಲ್ಲಿ ಈ ಹೂದಂಡೆಯನ್ನು ಅಣ್ಣನು ತನ್ನ ತಂಗಿಗೆ ಕೊಡಬೇಕೆಂಬ ನಂಬಿಕೆ ಯೂ ಉಂಟು. ಒಂದಡಿ ಉದ್ದದ ಮೃದುಕಾಂಡಕ್ಕೆ ಅಂಟಿಸಿ ದಂತಿರುವ ನೂರಾರು ನೇರಳ ಹೂವುಗಳು ಹಲವು ದಿನಗಳ ತನಕ ಬಾಡದೇ ಉಳಿಯುವುದು ಒಂದು ವಿಶೇಷ. ನಮ್ಮ ಕಾಡಿನಲ್ಲಿ ತಮ್ಮಷ್ಟಕ್ಕೆ ತಾವೇ ಬೆಳೆಯುವ ಈ ಗಿಡ ಒಂದು ಆರ್ಕಿಡ್, ಪರಾವಲಂಬಿ ಸಸ್ಯ.
ಬೇರೊಂದು ಮರದ ಕಾಂಡವನ್ನಾಶ್ರಯಿಸಿ, ಅದರ ಪೌಷ್ಟಿಕಾಂಶವನ್ನು ಭಾಗಶಃ ಹೀರಿ ಬೆಳೆಯುವ ಈ ಆರ್ಕಿಡ್‌ಗಳು ಸಸ್ಯಲೋಕದ ಕೌತುಕಗಳು. ನಮ್ಮ ದೇಶದ ಹಲವು ಆರ್ಕಿಡ್‌ಗಳು ಬಣ್ಣ ಬಣ್ಣದ, ಆಕರ್ಷಕ ವಿನ್ಯಾಸ ಹೂವುಗಳನ್ನು ಬಿಡುವುದು ಮತ್ತೊಂದು ವಿಶೇಷ. ಆರ್ಕಿಡ್‌ಗಳ ಸೌಂದರ್ಯವನ್ನು ಗುರುತಿಸಿ, ಆರ್ಕಿಡ್ ವನಗಳನ್ನು ನಿರ್ಮಿಸುವ ಪದ್ಧತಿ ಬೆಳೆದುಬಂದಿದೆ. ಆದರೆ ಈ ಸೀತಾದಂಡೆಯು ನಿಸರ್ಗದ ಸ್ವಂತ ‘ಆರ್ಕಿಡ್‌ವನ’ದ ಬಣ್ಣ ಬಣ್ಣದ ಪುಷ್ಪ. ಮಳೆಗಾಲದಲ್ಲಿ ನಮ್ಮೂರಿನ ಸುತ್ತಮುತ್ತಲಿನ ಕಾಡು, ಗುಡ್ಡ, ಹಕ್ಕಲುಗಳಲ್ಲಿ ಅಲ್ಲಲ್ಲಿ ಸಾಕಷ್ಟು ಪೊಗದಸ್ತಾಗಿ ಬೆಳೆಯುವ ಒಂದು ಗಿಡದ ಹೆಸರು ಬೆಳವಾಂಟೆ.
ಇದನ್ನು ಗುಳದ ಸೊಪ್ಪಿನ ಗಿಡ ಎಂದೂ ಕರೆಯುವುದುಂಟು. ಚೆನ್ನಾಗಿ ಮಳೆ ಬಿದ್ದು, ಸುತ್ತಲಿನ ಗಿಡಮರಗಳು ಹಸಿರಿನಿಂದ ತುಂಬಿ ಹೋಗಿರುವ ಕಾಲ; ಹಾಡಿ, ಗುಡ್ಡ, ಬಯಲು, ಹಕ್ಕಲಿನ ಮರಗಿಡಬಳ್ಳಿಗಳೆಲ್ಲವೂ ಮಳೆಯಲ್ಲೇ ತೊಯ್ದು, ಸಾಕಷ್ಟು ಚೆನ್ನಾಗಿ ಚಿಗುರಿ ದಟ್ಟ ಹಸಿರಿನ ಎಲೆಗಳಿಂದ ಕಂಗೊಳಿಸುತ್ತಿರುವ ಕಾಲ. ಅವುಗಳ ನಡುವೆ, ಹತ್ತೈವತ್ತು ಬಿಳಿ ಎಲೆಗಳು ದೂರದಿಂದಲೇ ಗಮನ ಸೆಳೆಯುತ್ತಾ, ನೋಡಿ ತಾನಿಲ್ಲಿದ್ದೇನೆ, ಹಸಿರಿನ ಸಿರಿಯ ನಡುವೆ ಬಿಳಿ ಎಲೆಗಳಿಂದ ಕಂಗೊಳಿಸು ತ್ತಿದ್ದೇನೆ ಎನ್ನುವಂತೆ ಕಾಣುತ್ತವೆ.
ದಟ್ಟ ಹಸಿರಿನ ನೂರಾರು ಪ್ರಭೇದದ ಗಿಡಗಳ ನಡುವೆ, ಬಿಳಿ ಎಲೆಗಳ ಈ ಗಿಡ ಬಹುದೂರದಿಂದ ಎದ್ದು ಕಾಣಿಸುತ್ತವೆ. ಈ ಗಿಡದ ಎಲೆಗಳನ್ನು ಕಿತ್ತು ತಂದು
ನೀರಿಗೆ ಹಾಕಿ ಬೇಯಿಸಿದರೆ, ಲೋಳೆ ಲೋಳೆಯಾದ ದ್ರವ ಸಿದ್ಧವಾಗುತ್ತದೆ. ಈ ನೀರಿನಿಂದ ತಲೆಕೂದಲನ್ನು ತೊಳೆದುಕೊಳ್ಳುವ ಪದ್ಧತಿ; ಕೂದಲಿನ ಆರೋಗ್ಯಕ್ಕೆ ಈ ಬೆಳವಾಂಟೆ ಗಿಡೆದ ಸೊಪ್ಪು ಉತ್ತಮ ಎಂಬ ನಂಬಿಕೆ. ಬೆಳವಾಂಟೆ ಗಿಡದ ಎಲ್ಲಾ ಎಲೆಗಳೂ ಬಿಳಿಯಾಗುವುದಿಲ್ಲ; ಕೆಲವು ಎಲೆಗಳು ಹಸಿರಾಗಿರುತ್ತವೆ, ಇನ್ನು ಕೆಲವು ಬಿಳಿಯಾಗಿರುತ್ತವೆ. ವೀಳ್ಯದ ಎಲೆಯ ಗಾತ್ರದ ಈ ಎಲೆಗಳು ಬಹುದೂರದಿಂದಲೇ, ಕಾಡಿನ ನಡುವೆ ಬಿಳಿಯಾಗಿ ಎದ್ದು ಕಾಣುವುದು ಒಂದು ಪುಟ್ಟ
ವಿಸ್ಮಯವೇ ಸರಿ. ಇದರ ಹೂವುಗಳು ಪುಟಾಣಿ ಗಾತ್ರದವು, ದಟ್ಟ ಕೆಂಪಿನ ವಿಶಿಷ್ಟ ವಿನ್ಯಾಸ ಹೊಂದಿವೆ.
ಎಲ್ಲಕ್ಕಿಂತ ಹೆಚ್ಚಾಗಿ ಬಿಳಿ ಎಲೆಗಳನ್ನು ಬಿಡುವ ಗಿಡ ಎಂಬುದೇ ಈ ಸಸ್ಯದ ಕುರಿತು ವಿಸ್ಮಯ ಪಡಲು ಬೇಕಾದಷ್ಟಾಯಿತು. ಈ ಎಲೆಗಳನ್ನು ತಲೆಗೆ ಹಚ್ಚಿಕೊಳ್ಳುವು ದೆಂದರೆ, ಗ್ರಾಮೀಣ ಪ್ರದೇಶದ ಶಾಂಪೂ ಬಳಕೆ ಎಂದು ಹೇಳಬಹುದು. ಚೆನ್ನಾಗಿ ಮಳೆ ಬಿದ್ದ ನಂತರ, ಗುಡ್ಡಗಳಲ್ಲಿ ತನ್ನಷ್ಟಕ್ಕೆ ತಾನೇ ಬೆಳೆಯುವ ಕ್ಯಾನಿಗೆಂಡೆ ಎಂಬ, ಮುಷ್ಟಿ ಗಾತ್ರದ ಗಡ್ಡೆಯು ಗ್ರಾಮೀಣ ಜನರ ಆಹಾರ ವಾಗಿರುವುದು ವಿಶೇಷ. ಆಸಾಡಿ ಅಮಾವಾಸ್ಯೆಯ ದಿನ ಈ ಗಡ್ಡೆ ಬಳಸಿ ಕಡುಬನ್ನು ತಯಾರಿಸಿ ತಿನ್ನಬೇಕು ಎಂಬ ನಂಬಿಕೆ ಇದೆ. ಕ್ಯಾನಿಗೆಂಡೆ ಯನ್ನು ಬೇಯಿಸಿ ತಿನ್ನುವುದರಿಂದ ದೊರಕುವ ಆರೋಗ್ಯ ಲಾಭಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲ; ಆದರೆ, ಆಹಾರ ಧಾನ್ಯಗಳು ದೊರೆಯುವುದು ಕಷ್ಟ ಎನಿಸುವ ಮಳೆಗಾಲದ ಸಮಯದಲ್ಲಿ, ಕ್ಯಾನಿಗೆಂಡೆ ಗಳನ್ನು ಬೇಯಿಸಿ ತಿನ್ನುವುದು ಹೊಟ್ಟೆ ತುಂಬಿಸಲು ಅನುಕೂಲ; ಸರಕಾರದ ಇಲಾಖೆಗಳು ರಿಯಾಯತಿ ಬೆಲೆಯಲ್ಲಿ ಅಥವಾ ಉಚಿತವಾಗಿ ಅಕ್ಕಿಯನ್ನು ನೀಡುವ ಪದ್ಧತಿಯನ್ನು ಆರಂಭಿಸುವ ಮೊದಲು, ಮಳೆಗಾಲದ ಕಷ್ಟದ ದಿನಗಳಲ್ಲಿ ಕ್ಯಾನಿಗೆಂಡೆಯಂತಹ ಗಡ್ಡೆಗಳು ಅವೆಷ್ಟೋ ಕುಟುಂಬಗಳ ಹೊಟ್ಟೆ ತುಂಬಿಸುತ್ತಿದ್ದವು.
ಕಳೆದ ಒಂದೆರಡು ದಶಕಗಳಿಂದ ಜಾರಿಯಲ್ಲಿರುವ ಅನ್ನಭಾಗ್ಯದಂತಹ ಯೋಜನೆಗಳು ಅಂತಹ ಕಷ್ಟವನ್ನು ದೂರಮಾಡಿವೆ ಎಂಬುದಂತೂ ನಿಜ. ಮೇಲ್ನೋಟಕ್ಕೆ ಮಳೆಗಾಲ, ಸೋನೆ ಮಳೆ, ಕುಳಿರ್ಗಾಳಿ ಎಷ್ಟೇ ಕಾವ್ಯಾತ್ಮಕ ಎನಿಸಿದರೂ, ಮನಸ್ಸಿನಲ್ಲಿ ಬೆಚ್ಚನೆಯ ಭಾವನೆಗಳನ್ನು ಮೂಡಿಸಿದರೂ, ಸಾಂಪ್ರದಾಯಿಕವಾಗಿ ನಮ್ಮೂರಿನಲ್ಲಿ ಮಳೆಗಾಲ ವೆಂದರೆ ಕಷ್ಟದ ದಿನಗಳೇ ಆಗಿವೆ! ಅಂತಹ ಕಷ್ಟದ ದಿನಗಳನ್ನೆದುರಿಸಲು ಮರ ಕೆಸ, ಕ್ಯಾನಿಗೆಂಡೆ ಯಂತಹ ಸಸ್ಯಮೂಲದ ಆಹಾರ ಗಳು ಹಿಂದಿನ ದಿನಗಳಲ್ಲಿ ಸಹಾಯ ಮಾಡುತ್ತಿದ್ದವು. ಈಚಿನ ದಿನ ಗಳಲ್ಲಿ ಆಹಾರ ಧಾನ್ಯಕ್ಕೆ ಸಾಮಾನ್ಯವಾಗಿ ಅಷ್ಟೊಂದು ಕಷ್ಟವಿಲ್ಲ ಎನ್ನಬಹುದು; ಇಂದು ಅಂತಹ ಹಳೆಯ ಪದ್ಧತಿಗಳೆಲ್ಲವೂ ಮಧುರ ನೆನಪುಗಳಾಗಿ ಉಳಿದು ಹೋಗಿವೆ.