Monday, 28th October 2024

Kiran Upadhyay Column: ಕೂದಲು ಇಲ್ಲದಿದ್ದರೆ ತಲೆಗೆ ಬೆಲೆ ಇಲ್ಲವೇ…!?

ವಿದೇಶವಾಸಿ

ಕಿರಣ್‌ ಉಪಾಧ್ಯಾಯ, ಬಹ್ರೈನ್

dhyapaa@gmail.com

ನನ್ನ ತಲೆಯ ಮೇಲೆ ಕೂದಲು ಇಲ್ಲ. ಹಾಗಂತ ಅದು ಕೆಲಸಕ್ಕೆ ಬಾರದ್ದು ಎಂದು ಅರ್ಥವೇ? ಅದನ್ನು ಬೇರೆಯವರಿಗೆ ಕೊಟ್ಟು ಬಿಡಬೇಕೇ? ಅಥವಾ ಯಾರಾದರೂ ಅದನ್ನು ಕಡಿದುಕೊಂಡು ಹೋದರೂ ನಾನು ಸುಮ್ಮನಿರಬೇಕೇ?” ಈ ಮಾತನ್ನು ಯಾರು, ಯಾರಿಗೆ, ಎಲ್ಲಿ, ಯಾವಾಗ ಹೇಳಿದರು?- ಸಂದರ್ಭ ಸೂಚಿಸಿರಿ. ಹಾಗೆಯೇ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ: “ಸರಕಾರ ಹಣಕಾಸು ಮತ್ತು ತೆರಿಗೆ ವಿಷಯದಲ್ಲಿ
ಪಾರದರ್ಶಕವಾಗಿರಬೇಕು” ಎಂದು ಹೇಳಿದ, ಅದಕ್ಕೆ ಪ್ರಯತ್ನಿಸಿದ ಮೊದಲ ಭಾರತೀಯ ರಾಜಕಾರಣಿ
ಯಾರು? ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿಯವರಿಂದ ಪ್ರಭಾವಿತರಾಗಿ, ಅವರ
ಅನುಯಾಯಿಯಾಗಿದ್ದು, ಕ್ರಾಂತಿಕಾರಿಗಳ ಜತೆಯೂ ಸಂಪರ್ಕ ಇಟ್ಟುಕೊಂಡಿದ್ದವರು ಯಾರು?
ಭಾರತದ ಸಂಸತ್ತಿನಲ್ಲಿ ತಮ್ಮದೇ ಪಕ್ಷದ ಪ್ರಧಾನಿಯ ಮಾತಿಗೆ ತಿರುಗೇಟು ನೀಡಿದವರು ಯಾರು?
ಪಕ್ಷದಲ್ಲಿ ವ್ಯಕ್ತಿಪೂಜೆಯನ್ನು ವಿರೋಧಿಸಿದವರು ಯಾರು? ಅಭಿವೃದ್ಧಿಶೀಲ ದೇಶಗಳಲ್ಲಿಯೇ ಮೊದಲ ಯುದ್ಧ
ವಿಮಾನ ತಯಾರಿಕೆಗೆ ಸೂಚಿಸಿದವರು ಯಾರು? ಜವಾಹರಲಾಲ್ ನೆಹರು ಮತ್ತು ಅವರ ತಂದೆ ಮೋತಿಲಾಲ್ ನೆಹರು ಇಬ್ಬರೊಂದಿಗೂ ಸಮಾನವಾಗಿ ಸ್ನೇಹವುಳ್ಳವರಾಗಿದ್ದವರು ಯಾರು? ತಮ್ಮ ರಾಜಕೀಯ ಜೀವನವಿಡೀ ಒಂದೇ ಪಕ್ಷದಲ್ಲಿದ್ದು, ಪಕ್ಷದ ನಿರ್ಧಾರ ತಪ್ಪು ಅನಿಸಿದಾಗೆಲ್ಲ ಅದನ್ನು ನಿರ್ಬಿಢೆಯಿಂದ ವಿರೋಧಿಸಿಯೂ, ಆರು ದಶಕಗಳ ಕಾಲ ಅದೇ ಪಕ್ಷದಲ್ಲಿ ಪಕ್ಷನಿಷ್ಠರಾಗಿ, ಕೊನೆಯವರೆಗೂ ಇದ್ದವರು ಯಾರು? ಬಿಟ್ಟ ಸ್ಥಳ ತುಂಬಿರಿ ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಕಾಲದಲ್ಲಿ ಇವರು…… ಸಲ ಜೈಲಿಗೆ ಹೋಗಿ ಬಂದಿದ್ದರು.

ಭಾರತ ತನಗೆ ಬೇಕಾದ ಯುದ್ಧ ಸಾಮಗ್ರಿಗಳನ್ನು ತಾನೇ ತಯಾರಿಸಿಕೊಳ್ಳಬೇಕು ಎಂದು ಹೇಳಿದವರು…..
ಇದೇನು? ಇತಿಹಾಸ ತರಗತಿಯ ಪ್ರಶ್ನೆ ಪತ್ರಿಕೆಯೇ? ಎಂದು ಕೇಳಬೇಡಿ. ಆದರೆ ಈ ಎಲ್ಲ ಪ್ರಶ್ನೆಗೂ ಇರುವ ಉತ್ತರ ಒಂದೇ. ಅದು ಸರಿಯಾಗಿದ್ದರೆ ನೂರಕ್ಕೆ ನೂರು ಅಂಕ ‘ಗ್ಯಾರಂಟಿ’! ಇದನ್ನೆಲ್ಲ ಮಾಡಿದ ‘ಮಹಾವೀರ’ ಯಾರು? ಇದು ಪರೀಕ್ಷೆ ಅಲ್ಲ, ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ, ಆದರೆ ಇದು ತಲೆಗೆ ಸಂಬಂಧಪಟ್ಟ ವಿಷಯವಂತೂ ಹೌದು.
ಉತ್ತರವನ್ನು ನಾನೇ ಹೇಳಿಬಿಡುತ್ತೇನೆ. ಈ ಎಲ್ಲ ಪ್ರಶ್ನೆ, ಸಂದರ್ಭ ಸೂಚಿಸಿರಿ, ಬಿಟ್ಟ ಸ್ಥಳಕ್ಕೆ ಉತ್ತರ, ಒಂದು
ಹೆಸರು. ಅದೇ, ಅದೇ, ‘ಮಹಾವೀರ ತ್ಯಾಗಿ!’ ಸ್ಫಟಿಕದಷ್ಟೇ ಶುದ್ಧ ನಡೆ, ವಜ್ರದಷ್ಟೇ ಕಠಿಣ ನುಡಿ, ಆಲದ ಮರದಂಥ ನಿಲುವಿನ ಮಹಾವೀರ ತ್ಯಾಗಿ ಹುಟ್ಟಿದ್ದು 1899ನೇ ಇಸವಿಯ ಕೊನೆಯ ದಿನ.

ಊರು ಉತ್ತರ ಪ್ರದೇಶದ ಅಮರೋಹಿ ಜಿಲ್ಲೆಯ ಧಾರವಾಸಿ. ತ್ಯಾಗಿ ಮೀರತ್‌ನಲ್ಲಿ ಓದು ಮುಗಿಸಿ, ಬ್ರಿಟಿಷ್ ಇಂಡಿಯಾ ಆರ್ಮಿ ಸೇರಿಕೊಂಡರು. ಬಲೂಚಿಸ್ತಾನ ಮತ್ತು ಪರ್ಷಿಯಾದ ಗಡಿ ಪ್ರದೇಶದಲ್ಲಿ ಕೆಲಸ ಮಾಡು ತ್ತಿದ್ದರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡದಿಂದ ಮನನೊಂದು ಸೇನೆಗೆ ರಾಜೀನಾಮೆ ನೀಡಿದರು. ಆದರೆ ಅಂದಿನ ಬ್ರಿಟಿಷ್ ಸರಕಾರ ಅವರನ್ನು ಗೌರವಯುತವಾಗಿ ಕಳಿಸಿಕೊಡಲಿಲ್ಲ.

ಈಗ ಪಾಕಿಸ್ತಾನದಲ್ಲಿರುವ ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾಕ್ಕೆ ಅವರನ್ನು ಕರೆಸಿ, ಕೋರ್ಟ್ ಮಾರ್ಷಲ್
ಮಾಡಲಾಯಿತು. ಸಂಬಳ, ಭತ್ಯೆ ಏನನ್ನೂ ಕೊಡದೆ ಅವರನ್ನು ಕಳಿಸಿಕೊಡಲಾಯಿತು. ಖಾಲಿ ಕೈಯಲ್ಲಿ ದೆಹಲಿಗೆ ಹಿಂತಿರುಗಿ ಬಂದ ತ್ಯಾಗಿ ಗಾಂಧೀಜಿಯವರಿಂದ ಪ್ರಭಾವಿತರಾದರು. ಗಾಂಧೀಜಿಯ ಅನುಯಾಯಿಯಾಗಿ ಅವರೊಂದಿಗೆ ಸೇರಿ ಸ್ವಾತಂತ್ರ ಚಳವಳಿಯಲ್ಲಿ ಧುಮುಕಿದರು.

ಅಸಹಕಾರ ಚಳವಳಿಯಲ್ಲಿ ಭಾಗಿಯಾದ ಕಾರಣಕ್ಕೆ ತ್ಯಾಗಿ ಬಂಧನಕ್ಕೊಳಗಾದರು. ಎರಡು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿ ಬಂದ ನಂತರ ತಮ್ಮ ಜಿಲ್ಲೆಯಲ್ಲಿ ಅಸಹಕಾರ ಚಳವಳಿಯನ್ನು ಪುನರಾರಂಭ ಮಾಡಿದ್ದಕ್ಕೆ ಬಂಧಿತರಾಗಿ ಪುನಃ ಜೈಲು ಸೇರಿದರು.

ಬೇರೆ ಬೇರೆ ಕಾರಣಗಳಿಂದಾಗಿ ತ್ಯಾಗಿ ಒಂದಲ್ಲ, ಎರಡಲ್ಲ, ಹನ್ನೊಂದು ಬಾರಿ ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಿ ಬಂದಿದ್ದರು. ತಮ್ಮ ಇಪ್ಪತ್ತೊಂದನೇ ವರ್ಷದಿಂದ ನಲವತ್ತೇಳನೇ ವರ್ಷದವರೆಗಿನ ಅವಧಿಯಲ್ಲಿ ಅವರು ಹೊರಗೆ ಇದ್ದದ್ದಕ್ಕಿಂತ ಜೈಲಿನ ಒಳಗೆ ಇದ್ದದ್ದೇ ಹೆಚ್ಚು.

ಜೈಲಿನಲ್ಲಿರುವಾಗ ಅವರಿಗೆ ಜವಾಹರಲಾಲ್ ನೆಹರು ಮತ್ತು ಅವರ ತಂದೆ ಮೋತಿಲಾಲ್ ನೆಹರು ಪರಿಚಯ ವಾಯಿತು. ಇಬ್ಬರೊಂದಿಗೂ ಆತ್ಮೀಯತೆ ಬೆಳೆಯಿತು. ಆತ್ಮೀಯತೆ ಯಾವ ಪ್ರಮಾಣದಲ್ಲಿ ಇತ್ತೆಂದರೆ, ಒಂದು ಸಂದರ್ಭದಲ್ಲಿ ಜವಾಹರಲಾಲ್ ಮತ್ತು ಮೋತಿಲಾಲ್ ನೆಹರು ಅವರ ನಡುವೆ ಯಾವುದೋ ಕಾರಣಕ್ಕೆ ಭಿನ್ನಾಭಿಪ್ರಾಯ ಉಂಟಾದಾಗ ತ್ಯಾಗಿ ಮಧ್ಯಸ್ಥಿಕೆ ವಹಿಸಿ, ತಂದೆ-ಮಗನ ನಡುವೆ ರಾಜಿ ಮಾಡಿಸಿದ್ದರು. ತ್ಯಾಗಿ ಜವಾಹರಲಾಲ್ ನೆಹರು ಅವರನ್ನು ಆಗಾಗ ಖಂಡಿಸುತ್ತಿದ್ದರೂ ತಮ್ಮ ಜೀವನದ ಕೊನೆಯವರೆಗೂ ಅವರೊಂದಿಗೆ ಆತ್ಮೀಯರಾಗಿಯೇ ಇದ್ದರು.

ಗಾಂಧೀಜಿಯವರ ಜತೆ ಅಹಿಂಸಾ ಮಾರ್ಗದಲ್ಲಿಯೇ ಸ್ವಾತಂತ್ರ್ಯಕ್ಕಾಗಿ ಹೋರಾಟ ಮುಂದುವರಿಸಿದ್ದ ತ್ಯಾಗಿ,
ಕ್ರಾಂತಿಕಾರಿಗಳಾದ ಅಷಾಕ್ ಉಲ್ಲಾ ಖಾನ್, ರಾಮ ಪ್ರಸಾದ್ ಬಿಸ್ಮಿಲ, ಪ್ರೇಮ್ ಕಿಶನ್ ಖನ್ನಾ ಮೊದಲಾದವ ರೊಂದಿಗೂ ಸತತ ಸಂಪರ್ಕದಲ್ಲಿದ್ದರು. ಸ್ವಾತಂತ್ರ್ಯ ಸಿಕ್ಕ ನಂತರ ತ್ಯಾಗಿ ಭಾರತದ ಸಂವಿಧಾನ ಸಭೆಯ ಸದಸ್ಯರಾಗಿದ್ದರು. ರಾಜಕೀಯವಾಗಿ ತಮ್ಮ ಜಿಲ್ಲೆಯಲ್ಲಿ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಗೂ ವ್ಯಾಪ್ತಿಯನ್ನು ಬೆಳೆಸಿಕೊಂಡರು. 1950ರಲ್ಲಿ ಭಾರತ ಗಣತಂತ್ರ ದೇಶವಾದಾಗ ತ್ಯಾಗಿ ಎರಡು ವರ್ಷ ಸಂಸತ್ತಿನ ತಾತ್ಕಾಲಿಕ ಸದಸ್ಯರಾಗಿದ್ದರು.

1952ರಿಂದ 1967ರವರೆಗೆ ಒಟ್ಟು ಮೂರು ಅವಽಗೆ ತ್ಯಾಗಿ ಲೋಕಸಭೆಗೆ ಆಯ್ಕೆಯಾದರು. ನೆಹರು ಮಂತ್ರಿ ಮಂಡಲದಲ್ಲಿ ತ್ಯಾಗಿ ಮೊದಲು ಎರಡು ವರ್ಷ ಕಂದಾಯ ಮತ್ತು ಆಯವ್ಯಯ ಸಚಿವರಾಗಿದ್ದರು. ಆ ಕಾಲದ ಅವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವುದು, ಮುಂಜಾಗ್ರತಾ ಕ್ರಮಕ್ಕಾಗಿ ಜನರನ್ನು ಅಮಾನುಷವಾಗಿ ಬಂಧಿಸುವುದು, ಬಂಧಿಸಿದವರಿಗೆ ರಕ್ಷಣೆ ನೀಡದೆ ಇರುವುದು
ಮೊದಲಾದವುಗಳನ್ನು ವಿರೋಧಿಸಿದ್ದರು.

ಸ್ವಾತಂತ್ರ್ಯ ಸಿಕ್ಕ ದಶಕದ ನಂತರ, ಕೇರಳದ ಚುನಾಯಿತ ಸರಕಾರವನ್ನು ವಜಾ ಮಾಡಬೇಕೆಂಬ ಕೇಂದ್ರ ಸರಕಾರದ ನಿಲುವನ್ನು ಅವರು ಖಂಡಿಸಿದ್ದರು. ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿರುವ ಇಪ್ಪತ್ತೊಂದು ಜನರ ಸ್ಥಾನಕ್ಕೆ ತಮಗೆ ಬೇಕಾದವರನ್ನೇ ಪುನಃ ಪುನಃ ನಾಮನಿರ್ದೇಶನ ಮಾಡುವುದನ್ನು ಅವರು ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ದಲ್ಲಿಯೇ ವಿರೋಧಿಸಿದ್ದರು. ಕನಿಷ್ಠ ಹತ್ತು ಸ್ಥಾನಕ್ಕಾದರೂ ಚುನಾವಣೆ ನಡೆಸಿ ಎಂಬ ಸಲಹೆ ನೀಡಿದ್ದರು. ಅವರ ಅಭಿಪ್ರಾಯವನ್ನು ಒಂದು ಹಂತದಲ್ಲಿ ಮನ್ನಿಸಿದ ನೆಹರು, ವರ್ಷದಿಂದ ವರ್ಷಕ್ಕೆ ಅದೇ ಸದಸ್ಯರನ್ನು ಮರು ನಾಮಕರಣ ಮಾಡಿದ್ದರು.

ನೆಹರು ಮಂತ್ರಿಮಂಡಳದಲ್ಲಿ ನಾಲ್ಕು ವರ್ಷ ಅವರು ರಕ್ಷಣಾ ಸಚಿವಾಲಯದ ರಾಜ್ಯ ಮಂತ್ರಿಯಾಗಿದ್ದರು. ಆಗ ಭಾರತೀಯ ಸೇನೆಯಲ್ಲಿ ಸ್ವದೇಶಿ ಯುದ್ಧೋಪಕರಣಗಳನ್ನು ಪ್ರೋತ್ಸಾಹಿಸಿದರು. ಭಾರತೀಯ ಸಶಸ ಪಡೆಗೆ ಬೇಕಾದ ಉಪಕರಣಗಳನ್ನು, ಯುದ್ಧ ಸಾಮಗ್ರಿಗಳನ್ನು ಭಾರತದಲ್ಲಿಯೇ ತಯಾರಿಸಬೇಕು ಎಂಬುದು ಅವರ ನಿಲುವಾಗಿತ್ತು. ಅವರು ಮಾರುತಿ ಯುದ್ಧ ವಿಮಾನ ತಯಾರಿಕೆಯ ಯೋಜನೆ ಯನ್ನು ಭಾರತದಲ್ಲಿ ಆರಂಭಿಸಿದರು. ಇದು ಭಾರತ
ಮಾತ್ರವಲ್ಲ, ಅಭಿವೃದ್ಧಿಶೀಲ ದೇಶಗಳ ಉತ್ಪಾದಿಸಲ್ಪಟ್ಟ ಮೊದಲ ಯುದ್ಧ ವಿಮಾನವೆಂಬ ಕೀರ್ತಿಗೂ ಪಾತ್ರ ವಾಯಿತು. ಹಾಗಂತ ಅವರು ವಿದೇಶಗಳಿಂದ ಯುದ್ಧ ಸಾಮಗ್ರಿಗಳನ್ನು ಖರೀದಿಸುವುದರ ವಿರೋಧಿ
ಯಾಗಿರಲಿಲ್ಲ.

ಬದಲಾಗಿ, ಭಾರತ ತನಗೆ ಬೇಕಾದ ಯುದ್ಧ ಸಾಮಗ್ರಿ, ಶಸ್ತ್ರಾಸ್ತ್ರ ಖರೀದಿಗೆ ಒಂದೋ-ಎರಡೋ ದೇಶವನ್ನು
ಮಾತ್ರ ಅವಲಂಬಿಸಬೇಕಾಗಿಲ್ಲ, ಯಾವುದೇ ದೇಶದಿಂದ ಸಾಮಗ್ರಿ ಖರೀದಿಸಲು ಸ್ವತಂತ್ರವಾಗಿದೆ ಎಂಬ ಹೇಳಿಕೆಯನ್ನು ನೀಡಿ ಆ ಕಾಲದಲ್ಲಿ ಎಲ್ಲರ ಗಮನ ಸೆಳೆದಿದ್ದರು.

ಭಾರತೀಯ ನೌಕಾಪಡೆಯ ‘ಐಎನ್‌ಎಸ್ ಗರುಡ’ ಕೂಡ ಅವರ ಕಾಲಾವಧಿಯ ಕಾರ್ಯಾರಂಭ ಮಾಡಿತ್ತು. ಭಾರತಕ್ಕೆ ಸ್ವಾತಂತ್ರ ಸಿಕ್ಕ ನಂತರ, ಪಾಕಿಸ್ತಾನ ಭಾರತದಿಂದ ಬೇರೆಯಾದ ನಂತರ, ಭಾರತದ ಸೇನೆಯಲ್ಲಿ ಮುಸ್ಲಿಮರ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಅದಕ್ಕೆ ಭಾರತೀಯ ಸೇನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರನ್ನು ನೇಮಿಸಿಕೊಳ್ಳಲು ತ್ಯಾಗಿ ಸೂಚನೆ ನೀಡಿದ್ದರು. ಇದೆಲ್ಲ ಒಂದುಕಡೆಯಾದರೆ, ತಮ್ಮ ಒಂದು
ಹೇಳಿಕೆಯಿಂದಾಗಿ ತ್ಯಾಗಿ ಅಂದು ಎಲ್ಲರ ಗಮನ ಸೆಳೆದಿದ್ದರು. ಅದು 1962ರಲ್ಲಿ ಭಾರತ ಮತ್ತು ಚೀನಾ
ನಡುವೆ ನಡೆದ ಯುದ್ಧಕ್ಕೆ ಒಂದು ವರ್ಷ ಮೊದಲು ನಡೆದ ಘಟನೆ. ಅಂದು ಸಂಸತ್ತಿನಲ್ಲಿ, ಭಾರತದ
ಲಡಾಕ್ ಪ್ರದೇಶದಲ್ಲಿರುವ ಅಕ್ಸಾಯ್ ಚಿನ್ ಕುರಿತು ಗಂಭೀರ ಚರ್ಚೆ ನಡೆಯುತ್ತಿತ್ತು. ವಿಪಕ್ಷಗಳು ಸರಕಾರದ
ಮೇಲೆ ಮುಗಿಬಿದ್ದಿದ್ದವು. ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದವು. ಅಂದು ವಿಪಕ್ಷದ ವಾಗ್ದಾಳಿಗೆ ಪ್ರಧಾನಿ ಕಂಗಾಲಾಗಿದ್ದರು. ಅದಕ್ಕೆ ಕಾರಣವೂ ಇತ್ತು.

1950ರ ದಶಕದಲ್ಲಿ ಚೀನಾ ತನ್ನ ದೇಶದಲ್ಲಿರುವ ಕ್ಸಿನ್ ಜಿಯಾಂಗ್ ಮತ್ತು ಪಶ್ಚಿಮ ಟಿಬೆಟ್ ನಡುವೆ ಸಂಪರ್ಕ
ಕಲ್ಪಿಸಲು 1200 ಕಿಲೋಮೀಟರ್ ಉದ್ದದ ರಸ್ತೆಯನ್ನು ನಿರ್ಮಿಸಿತ್ತು. ಅದರಲ್ಲಿ 179 ಕಿಲೋಮೀಟರ್ ರಸ್ತೆ
ಭಾರತದ ಹಕ್ಕಿನಲ್ಲಿರುವ ಅಕ್ಸಾಯ್ ಚಿನ್ ಪ್ರದೇಶದ ಮೂಲಕ ಸಾಗಿ ಹೋಗುತ್ತಿತ್ತು. ಇದರಿಂದ ಚೀನಾ ಸೇನೆ ಭಾರತವನ್ನು ಸುಲಭವಾಗಿ ಪ್ರವೇಶಿಸಬಹುದಾಗಿತ್ತು.

1957ರವರೆಗೂ ಭಾರತ ಸರಕಾರಕ್ಕೆ ಈ ರಸ್ತೆಯ ಬಗ್ಗೆ ಗೊತ್ತೇ ಇರಲಿಲ್ಲ. 1958ರಲ್ಲಿ ಪ್ರಕಟವಾದ ಚೀನಾ
ನಕ್ಷೆಯಲ್ಲಿ ಈ ರಸ್ತೆಯನ್ನು ಕಂಡಾಗಲೇ ಅದು ಗೊತ್ತಾದದ್ದು. ಭಾರತಕ್ಕೆ ಗೊತ್ತೇ ಆಗದಂತೆ ಭಾರತದ ಭೂಮಿ
ಯನ್ನು ಚೀನಾ ಕಬಳಿಸಿದ್ದು ಎಲ್ಲರ ನಿದ್ದೆಗೆಡಿಸಿತ್ತು.

ವಿಪಕ್ಷಗಳು ನೆಹರು ಅವರನ್ನು ತರಾಟೆಗೆ ತೆಗೆದುಕೊಂಡಾಗ, ನೆಹರು ಅವರು ‘ಹಿಂದಿ-ಚೀನಿ ಭಾಯಿ ಭಾಯಿ’ (ಭಾರತೀಯರು ಮತ್ತು ಚೀನಿಯರು ಸಹೋದರರು) ಎಂಬ ಹೇಳಿಕೆ ನೀಡಿದ್ದರು. ಅದರೊಂದಿಗೆ, “ಹದಿನೇಳು ಸಾವಿರ ಅಡಿ ಎತ್ತರದ ಆ ಪ್ರದೇಶದಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ. ಅದು ವಾಸಿಸಲು ಯೋಗ್ಯವಾದ ಅಥವಾ ಏನನ್ನಾದರೂ ಬೆಳೆಯಲು ಯೋಗ್ಯವಾದ ಭೂಮಿ ಯಲ್ಲ. ಅದು ಎಲ್ಲಿದೆ ಎಂದೂ ನಮ್ಮಲ್ಲಿ ಬಹಳಷ್ಟು
ಜನರಿಗೆ ತಿಳಿದಿಲ್ಲ. ಅದೊಂದು ಪ್ರಯೋಜನಕ್ಕೆ ಬಾರದ ಭೂಮಿ” ಎಂಬ ಹೇಳಿಕೆ ನೀಡಿದ್ದು ವಿಪಕ್ಷದವರನ್ನು
ಇನ್ನಷ್ಟು ಕೆರಳಿಸಿತ್ತು. ತ್ಯಾಗಿ ಮಾತನಾಡಲು ಎದ್ದು ನಿಂತರು.

ಆಗ ಅವರು ಸಚಿವರಾಗಿರದೆ ಕೇವಲ ಸಂಸದರಾಗಿದ್ದರು. ಸಾಮಾನ್ಯವಾಗಿ ಪಕ್ಷದವರು ಅದರಲ್ಲೂ ಸರಕಾರ ದಲಿದ್ದವರು ಅದರ ಪರವಾಗಿಯೇ ಮಾತನಾಡುತ್ತಾರೆ ತಾನೆ? ಅಂದು ಪ್ರಧಾನಿ ನೆಹರು ಆಗಲಿ, ವಿಪಕ್ಷದವ ರಾಗಲಿ ಅದನ್ನೇ ಅಪೇಕ್ಷಿಸಿದ್ದರು. ಆದರೆ ತ್ಯಾಗಿ ಅಂದು ಬೇರೆ ರೀತಿಯಲ್ಲಿಯೇ ಮಾತನಾಡಿದ್ದರು. ಹೆಚ್ಚು ಉದ್ದ ಮಾತನಾಡದ ತ್ಯಾಗಿ ಕೆಲವೇ ವಾಕ್ಯಗಳಲ್ಲಿ ತಮ್ಮ ಮಾತು ಮುಗಿಸಿದ್ದರು. ತ್ಯಾಗಿಯ ತಲೆಯ ಮೇಲೆ ಕೂದಲು ಇರಲಿಲ್ಲ. ಅವರು ತಮ್ಮ ಬೋಳು ತಲೆಯನ್ನು ತೋರಿಸಿ, “ನನ್ನ ತಲೆಯ ಮೇಲೆ ಕೂದಲು ಇಲ್ಲ, ನನ್ನದು ಬೋಳು ತಲೆ. ಹಾಗಾದರೆ ನನ್ನ ತಲೆಗೆ ಯಾವ ಬೆಲೆಯೂ ಇಲ್ಲವೇ? ನನ್ನ ತಲೆ ಯಾವ ಪ್ರಯೋಜನಕ್ಕೂ ಬಾರದು ಎಂದು
ಅರ್ಥವೇ? ಅದನ್ನು ಬೇರೆಯವರಿಗೆ ಕೊಟ್ಟುಬಿಡಬೇಕೇ? ಅಥವಾ ನನ್ನ ತಲೆಯನ್ನು ಬೇರೆಯವರು
ಕತ್ತರಿಸಿ ದರೆ ನಾನು ಸುಮ್ಮನಿರಬೇಕೇ? ಅಕ್ಸಾಯ್ ಚಿನ್ ಭಾರತದ ತಲೆ ಇದ್ದಂತೆ. ಚೀನಾ ಅದನ್ನು ಕಬಳಿಸಿದೆ.

ಅದು ಬಂಜರು ಭೂಮಿ ಎಂದು ನಾವು ಸುಮ್ಮನೆ ಕುಳಿತುಕೊಳ್ಳಬೇಕೆ?” ಎಂದರು. ತ್ಯಾಗಿಯವರ ಮಾತು ಕೇಳಿ ಅಂದು ನೆಹರು ಅಷ್ಟೇ ಅಲ್ಲ, ವಿಪಕ್ಷದವರೂ ಆಶ್ಚರ್ಯಕ್ಕೊಳಗಾಗಿದ್ದರು. ಜತೆಗೆ, ಬಿಸಿಯಾಗಿದ್ದ ಚರ್ಚೆ ಅಂದು ನಗುವಿನೊಂದಿಗೆ ಮುಕ್ತಾಯಗೊಂಡಿತು. ನಂತರ ಭಾರತ ಮತ್ತು ಚೀನಾದ ನಡುವೆ ಯುದ್ಧ ನಡೆದದ್ದು, ಅದರ ಪರಿಣಾಮ ಏನಾಯಿತು ಎನ್ನುವುದು, ಎಲ್ಲವೂ ಈಗ ಇತಿಹಾಸ. ಅದರ ಕುರಿತು ಹೆಚ್ಚೇನೂ ಹೇಳಬೇಕಾಗಿಲ್ಲ. ಆದರೆ ತ್ಯಾಗಿ ಆ ಸಂದರ್ಭದಲ್ಲಿ ಆಡಿದ ಮಾತು ಇಂದಿಗೂ ಅಮರವೂ, ಮಾದರಿಯೂ ಆಗಿದೆ.

ತ್ಯಾಗಿ ‘ವೇ ಕ್ರಾಂತಿ ಕೆ ದಿನ್’ ಮತ್ತು ‘ಮೇರಾ ಕೌನ್ ಸುನೇಗಾ’ ಎಂಬ ಎರಡು ಹಿಂದಿ ಕೃತಿಗಳನ್ನು ರಚಿಸಿದ್ದಾರೆ. ನಂತರ ಆ ಎರಡೂ ಕೃತಿಗಳು ಮತ್ತು ಅವರ ಕೆಲವು ಲೇಖನಗಳನ್ನು ಸೇರಿಸಿ ‘ಆಜಾದಿ ಕಾ ಆಂದೋಲನ್’ ಶೀರ್ಷಿಕೆ ಯಲ್ಲಿ ಒಂದೇ ಪುಸ್ತಕ ಮಾಡಲಾಯಿತು. ಯಾವುದಕ್ಕೂ ಅಳುಕದ, ಹಿಂಜರಿಯದ ತ್ಯಾಗಿ ತಮ್ಮ ಕೊನೆಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯ ಎದುರು ಸೋತರು. ಆದರೆ ಇರುವಷ್ಟು ದಿನವೂ ಅಂಜಿಕೆಯಿಲ್ಲದೆ ತಮ್ಮ ಅಭಿಪ್ರಾಯವನ್ನು ಪಕ್ಷದಲ್ಲಿ ಮಂಡಿಸುತ್ತಿದ್ದರು. ಆದಾಗ್ಯೂ ಕೊನೆಯವರೆಗೂ ನೆಹರು ಅವರಿಗೆ ಆಪ್ತರಾಗಿಯೇ ಉಳಿದಿದ್ದರು.

ಒಂದು ಸಮಯದಲ್ಲಿ, ಇಂದಿರಾ ಗಾಂಧಿಯವರನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಪಕ್ಷದ ಕೆಲವು ಮುಖ್ಯಮಂತ್ರಿಗಳು ಒತ್ತಾಯಿಸಿದ್ದರು. ನೆಹರೂ ಅವರಿಗೂ ಅದು ಮನಸ್ಸಿತ್ತು. ಆದರೆ ತ್ಯಾಗಿ ಅದನ್ನು ವಿರೋಧಿಸಿದ್ದರು. “ಒಂದು ವೇಳೆ ಹಾಗೇನಾದರೂ ಮಾಡುವ ಮನಸ್ಸಿದ್ದರೆ ನೀವು ಪ್ರಧಾನಮಂತ್ರಿಯ ಹುzಗೆ ರಾಜೀನಾಮೆ ನೀಡಿ” ಎಂದು ನೆಹರು ಅವರಿಗೆ ಪತ್ರ ಬರೆದಿದ್ದರು, ಮಹಾವೀರ ತ್ಯಾಗಿ.

ಇಂದಿನ ಕಾಂಗ್ರೆಸ್ ಪಕ್ಷದ ಹಲವು ನಾಯಕರು ಇವರನ್ನು ಇಷ್ಟಪಡಲು ಇದೇ ಕಾರಣ. ಹಲವು ನಾಯಕರು ಇಷ್ಟಪಡದೇ ಇರಲೂ ಇದೇ ಕಾರಣ. ಜತೆಗೆ, ಇವರ ಹೆಸರನ್ನೇ ಕೇಳದ ರಾಜಕಾರಣಿಗಳು ಇಂದಿನ ದಿನಮಾನದಲ್ಲಿ ಇದ್ದರೂ ಆಶ್ಚರ್ಯವಿಲ್ಲ. ರಾಜಕಾರಣಿಗಳು ‘ಹೈಕಮಾಂಡ್’ ಸಂಸ್ಕೃತಿ ಬಂದಮೇಲಂತೂ ತ್ಯಾಗಿಯಂಥವರನ್ನು ಊಹಿಸಲೂ ಸಾಧ್ಯವಿಲ್ಲ. ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಇಂದಿಗೂ ಪಕ್ಷದ ವಿರುದ್ಧವಾಗಿ ಹೋಗುವುದಿದೆ. ಅಲ್ಲಿ ಪಕ್ಷದ ನಿಲುವು ಏನು ಎನ್ನುವುದಕ್ಕಿಂತ ವಿಷಯ ಏನು ಎನ್ನುವುದು ಪ್ರಮುಖವಾಗುತ್ತದೆ. ಒಂದು ಸಮಸ್ಯೆ ಅಥವಾ ವಿಷಯದ ಮೇಲೆ ಚರ್ಚೆಯಾಗುತ್ತದೆ, ಯಾವುದೇ ಪಕ್ಷದವರಾದರೂ ತಮ್ಮ ನಿಲುವನ್ನು ಪ್ರಕಟಿಸುತ್ತಾರೆ.

ಆ ವಿಷಯಕ್ಕೆ ಸಂಬಂಧಿಸಿದಂತೆ ಸಾರಾಸಗಟಾಗಿ ಪರ ಅಥವಾ ವಿರೋಧ ಮಾಡಬೇಕು ಎಂದು ಪಕ್ಷ ಆದೇಶ ನೀಡುವು ದಿಲ್ಲ. ಚುನಾಯಿತರು ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆ. ಅದು ಪಕ್ಷದ ಪರವಾಗಿಯೂ ಇರಬಹುದು, ವಿರೋಧವಾಗಿಯೂ ಇರಬಹುದು, ಅವರ ದೃಷ್ಟಿಯಲ್ಲಿ ದೇಶಕ್ಕೆ ಒಳಿತು ಅನಿಸಿದ್ದನ್ನು ಹೇಳುತ್ತಾರೆ. ಹೆಚ್ಚಿನ ಜನರ ಅಭಿಪ್ರಾ ಯದಂತೆ ನಿರ್ಣಯ ಕೈಗೊಳ್ಳಲಾಗುತ್ತದೆ.

ನಿಜವಾಗಿ ದೇಶ ನಡೆಯಬೇಕಾದದ್ದು, ದೇಶ ಉದ್ಧಾರ ಆಗುವುದು ಹಾಗೆಯೇ. ಆದರೆ ಇಂದು ಭಾರತದಂಥ ದೇಶದಲ್ಲಿ ಅಧಿಕಾರ ಹಿಡಿಯುವುದು, ಹಿಡಿದ ಅಧಿಕಾರವನ್ನು ಉಳಿಸಿಕೊಳ್ಳುವುದೇ ಪ್ರಮುಖ ವಿಷಯವಾಗಿರುವಾಗ, ನಿಜವಾದ ಸಮಸ್ಯೆಗಳೆಲ್ಲ ಮಣ್ಣಂಗಟ್ಟೆ. ವಿರೋಧಿಸಬೇಕು ಎಂಬ ಒಂದೇ ಕಾರಣಕ್ಕೆ ವಿರೋಧ. ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಲ್ಲ. ಇಂದು ಭಾರತದ ಎಲ್ಲ ಪಕ್ಷಗಳೂ ಇದೇ ಹಾದಿಯಲ್ಲಿ ಮುನ್ನಡೆಯುತ್ತಿವೆ. ಇದರಿಂದ ರಾಜಕೀಯ ಮುಂದುವರಿಯುತ್ತದೆಯೇ ವಿನಾ ದೇಶ ಒಂದು ಇಂಚೂ ಮುಂದುವರಿಯುವುದಿಲ್ಲ.

ಇದನ್ನೂ ಓದಿ: Kiran Upadhyay Column: ಲೋಕೋಮೋಟಿವ್‌ಗಿಂತ ದೊಡ್ಡದು ಮೋಟಿವೇಷನ್‌