ಅಲೆಮಾರಿಯ ಡೈರಿ
mehandale100@gmail.com
ಇದು ರಾಜ್ಯದ ರಾಜಧಾನಿಯಿಂದ ದೂರವೇನೂ ಇಲ್ಲ. ಆದರೆ ಕಾಲಿಡಲೇ ಅಪ್ರತಿಮ ಹಳ್ಳಿಗಳ ಮತ್ತು ಅಪರ ಬುಡಕಟ್ಟಿನ ನೆಲಕ್ಕೆ ಇಳಿದ ಅನುಭವ ನೀಡುತ್ತದೆ. ಪ್ರತಿ ಹೆಜ್ಜೆಗೂ ಕಾಡಿನ ಬಿದಿರು ಮತ್ತು ಬುಡಕಟ್ಟಿನ ಸಂಸ್ಕೃತಿಯ ಪರಿಚಯವಾಗುವಂತೆ ಮತ್ತು ನಿರ್ದಿಷ್ಟ ಜನಾಂಗದ ಸಾಂಪ್ರದಾಯಿಕ ಶೈಲಿಯ ಸಿಂಗಾರ ಎದುರುಗೊಳ್ಳುತ್ತದೆ.
ನಿಖರವಾಗಿ ಯಾವುದೋ ಕಾಡು ಜನಾಂಗದ ಹಾಡಿಗೆ ಕಾಲಿಟ್ಟ ಅಥವಾ ಅವರ ಪ್ರದೇಶಕ್ಕೆ ಇಳಿದಿದ್ದೇವೆ ಎಂದು ಅನ್ನಿಸುವ ಹೊತ್ತಿಗೆ ಅದೇ ರೀತಿಯ ಪಕ್ಕಾ ಕಾಡಿನಿಂದ ಆಗಷ್ಟೇ ತೊಳೆದು ತಂದಿರಿಸಿದ್ದಾರೆನ್ನುವಂತೆ ದಿಮಿ ದಿಮಿ ಮಾಡುತ್ತ ಡಜನ್‌ಗಟ್ಟಲೇ ಕಾಡು ಜನರು ಕೆಂಪು ಅರೆವಸ ಅಲ್ಲಲ್ಲಿ ನವಿಲುಗರಿ ಮತ್ತು ಕೋಳಿ ಪುಚ್ಚ ಸೇರಿಸಿ ಸಿಂಗರಿಸಿಕೊಂಡು ಬಿಲ್ಲು ಬಾಣ ಸಮೇತ ಹಾಜರಾಗುತ್ತಾರೆ.
ಅವರಲ್ಲೇ ಕೆಲವು ಮಹಿಳೆಯರು ಹಣೆಗೆ ಮಣ್ಣಿನ ಪುಡಿಯ ವಿಭೂತಿ ಇಟ್ಟು ಸ್ವಾಗತಿಸು ತ್ತಾರೆ. ಕುಡಿಯಲು ಸ್ಥಳೀಯ ಬೆಲ್ಲದ ಶರಬತ್ತಿನ ಸರಬರಾಜಾಗುತ್ತದೆ. ಕೂರಲು ಬಿದಿರ ದಬ್ಬೆಯ ಅಗಲವಾದ ಹೊರಸು ಮತ್ತು ಸ್ಥಳೀಯ ಮರಮಟ್ಟು ಬಿದ್ದಾಗ ಎತ್ತಿಟ್ಟು ಬುಡ ಕತ್ತರಿಸಿದ ಕಾಂಡಗಳ ಆಸರೆ ನೀಡಿ ಉಪಚರಿಸುತ್ತಿದ್ದರೆ, ಇನ್ನು ಕಾಡಿನ ವಾಸವೇ ಚೆಂದ ಎನ್ನುವಂತಿರುತ್ತದೆ.
ಹಾಗೊಂದು ಅನಿಸಿಕೆ ಮತ್ತು ಅನುಭವಕ್ಕೆ ಈಡು ಮಾಡಲೆಂದೆ ಹಾಗೂ ಅಂಥzಂದು ಕಾಡು ಜನರ ಬುಡಕಟ್ಟಿನ ರೀತಿ ರಿವಾಜುಗಳು ನಮ್ಮ ಅರಿವಿಗೆ ಸಿಕ್ಕಲೆಂದೆ, ಕೊಹಿಮಾ ಹೊರವಲಯದ ಪರ್ವತದ ಇಳಿಜಾರಿನಲ್ಲಿ ಹೊಡಲಾಗಿರುವ ಪ್ರದೇಶದಲ್ಲಿ ಹುಟ್ಟಿರುವುದೇ ಕಿಸಾಮಾ ಹೆರಿಟೇಜ್ ವಿಲೇಜ್ ಅಥವಾ ಕಿಸಾಮಾ ಹಳ್ಳಿ. ಪ್ರಸ್ತುತ ನಾಗಾಲ್ಯಾಂಡ್ ಸರಕಾರದ ಅಲ್ಲಿನ ಪ್ರವಾ ಸೋದ್ಯಮ ಮತ್ತು ಸ್ಥಳೀಯ ಬುಡಕಟ್ಟಿನ ಮಾಹಿತಿ ವಿವರಣ ಪ್ರಚುರ ಪಡಿಸಲು ಮೂಲ ನಾಗಾ ನಿವಾಸಿಗಳನ್ನೇ ಮನವೊಲಿಸಿ ಇಲ್ಲಿಗೆ ತಂದಿರಿಸಿ ಅವರದೇ ಶೈಲಿಯ ಅವರಿಗೆ ಬೇಕಾದಂತೆ ವಸತಿ ಅನುಕೂಲ ಇತ್ಯಾದಿ ಕಲ್ಪಿಸಿ, ಅವರೊಂದಿಗೆ ನಮ್ಮನ್ನೂ ಬೆರೆಯಲು ಅವಕಾಶ ಕಲ್ಪಿಸುವ ಅಪರೂಪದ ಯೋಜನೆ ರೂಪಿಸಿದೆ.
ಇಲ್ಲಿ ನಿರ್ದಿಷ್ಟ ಜನಾಂಗದ ಮುಗಿದು ಹೋಗಲಿದ್ದ ಸಂಸ್ಕೃತಿಯನ್ನು ಮರುಸ್ಥಾಪಿಸಲು ಸ್ಥಳೀಯರು ಪ್ರಯತ್ನಿಸುತ್ತಿದ್ದಾಗ ಮುಂದೊಮ್ಮೆ ಇದೇ ರಾಷ್ಟ್ರಮಟ್ಟದ ಉತ್ಸವವಾಗಿ ಬೆಳೆಯಲಿದೆ ಎಂದು ಅಂದಾಜಿತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ನಾಗಾ ಲ್ಯಾಂಡ್‌ನ ಕಿಸಾಮಾ ಹೆರಿಟೇಜ್ ಹಳ್ಳಿಯಾಗಿ ಗುರುತಿಸಿಕೊಳ್ಳುತ್ತಲೇ, ಅಲ್ಲೀಗ ಮಂಗಟ್ಟೆ ಹಬ್ಬ ಅರ್ಥಾತ್ ಹಾರ್ನ್‌ಬಿಲ್ ಉತ್ಸವ ಆಯೋಜನೆಯಾಗುತ್ತ ಜಾಗತಿಕ ಗಮನ ಸೆಳೆಯುತ್ತಾ ಬೆಳೆದು ನಿಂತಿದೆ.
ಒಂದು ಸಮುದಾಯದ ರಿವಾಜುಗಳನ್ನು ಉಳಿಸಿ ಜನರಿಗೆ ವಿವರಿಸಲು ಆರಂಭಿಸಿದ ಸಣ್ಣ ಪ್ರಯತ್ನ ಹೀಗೆ ರಾಷ್ಟ್ರವ್ಯಾಪಿ
ಆವರಿಸಿರುವ ಪರಿ ಅದ್ಭುತ. ಪ್ರತಿವರ್ಷದಂತೆ ಈ ಬಾರಿಯೂ ಡಿಸೆಂಬರ್ ೧ರಿಂದ ೭ರ ವರೆಗೆ ಆಯೋಜನೆಯಾದ ಕಿಸಾಮಾ
ಹೆರಿಟೇಜ್ ಹಳ್ಳಿಯಲ್ಲಿ ಎಂದಿನಂತೆ ಜಗತ್ತಿನ ಗಮನ ಸೆಳೆಯುವ ಉತ್ಸವ ಮತ್ತು ಪಾರಂಪರಿಕ ನಾಗಾ ಸಮುದಾಯದ ಜೀವನ ಚಿತ್ರಗಳ ಅನಾವರಣ ಜರುಗಿದೆ.
ಕೊಹಿಮಾದಿಂದ ಸುಮಾರು ಹದಿನೈದು ಕಿ.ಮೀ. ದೂರದಲ್ಲಿರುವ ಹೆರಿಟೇಜ್ ವಿಲೇಜ್ ಎಂಬ ಪರಿಕಲ್ಪನೆಯ ಕಾರಣ, ಎಲ್ಲೂ ಪ್ರಚಲಿತದಲ್ಲಿದ್ದ ಆದರೆ ಗ್ರಹಿಕೆಗೆ ಮತ್ತು ಪ್ರಾತ್ಯಕ್ಷಿಕತೆಗೆ ನಿಲುಕದಿದ್ದ ನಾಗಾ ಸಮುದಾಯದ ಮೂಲಭೂತ ಮಾಹಿತಿಯನ್ನು ಸೂಕ್ತವಾಗಿ ಬಿಡಿಸಿಡುವುದೇ ಆಗಿತ್ತು. ಆ ಮೂಲಕ ನಾಗಾ ಸಮುದಾಯದ ಬುಡಕಟ್ಟಿನ ವಿಭಿನ್ನ ಮತ್ತು ಶ್ರೀಮಂತ ಪರಂಪರೆ ಯನ್ನು ಹೇಗಾದರೂ ನೋಡಬೇಕೆಂದು ಅವರ ತಾಂಡಾಗಳಿಗೆ ನುಗ್ಗಿ ಅಪಾಯಕ್ಕೀಡಾಗುವ ಪರಿಸ್ಥಿತಿ ಸುಧಾರಿಸಿದೆ.
ಅದಕ್ಕೆ ಕಾರಣವೂ ಇಲ್ಲದಿರಲಿಲ್ಲ. ಗಂಡು ಹೆಣ್ಣುಗಳಾದಿಯಾಗಿ ವಿಪರೀತ ವಿಭಿನ್ನವಾದ ಜೀವನ ಶೈಲಿಯ ನಾಗಾ ಸಮುದಾಯದ ಬಗ್ಗೆ ಇತರ ಸಮುದಾಯ ಮತ್ತು ಜನರಿಗೆ ಸೋಜಿಗ ಎನ್ನಿವಷ್ಟು ಕುತೂಹಲಗಳಿದ್ದವು. ಕಾಡಿನ ಯಾವ್ಯಾವುದೋ ಮೂಲೆ ಯಲ್ಲಿ ವಾಸಿಸುತ್ತಿದ್ದ ಇವರನ್ನು ಸಂದರ್ಶಿಸಲು ನೋಡಲು ಹೋಗಿ ಹೋಗಿ ಜನ ಪ್ರಾಣ ಕಳೆದುಕೊಂಡ, ಹೋದವರು ಬಾರದೇ ಕಳೆದೇ ಹೋದ ಕತೆಗಳು, ಘಟನೆಗಳು ಹೇರಳ. ನಾಪತ್ತೆಯಾದವರ ಸಂಖ್ಯೆ ಮತ್ತು ವಿವರ ಲೆಕ್ಕಕ್ಕಿಲ್ಲ. ಆ ಕೆಲಸವನ್ನು ಸ್ಥಳೀಯ ಪೊಲೀಸು ಅಥವಾ ಆಡಳಿತ ಮಾಡುವುದೂ ಇಲ್ಲ.
ಕಾರಣ ಆ ರೀತಿಯ ಯಾವುದೇ ಬುಡಕಟ್ಟುಗಳ ನೆಲೆಗೆ ಹೋಗುವುದನ್ನೇ ಬೇಡ ಎನ್ನುತ್ತದೆ ವ್ಯವಸ್ಥೆ. ಹಾಗಾಗಿ ಕ್ರಮೇಣ ಕೊಂಚ ಲಿಬರಲ್ ಎನ್ನಿಸಿದ ಸಮುದಾಯ ನಾಗಾ ಮುಖಂಡರನ್ನು ಹಿಡಿದು ಸ್ಥಾಪಿಸಿದ ಈ ಕಿಸಾಮಾ ಹೆರಿಟೇಜ್ ವಿಲೇಜ್ ನಾಗಾಗಳ ಸಾಂಪ್ರದಾಯಿಕ ಜೀವನ ಶೈಲಿ ಮತ್ತು ಬುಟಕಟ್ಟು ಸಂಸ್ಕೃತಿಯ ಪ್ರತೀಕವಾಗಿ ಎದ್ದು ನಿಂತಿತು. ಆದರೆ ಒಮ್ಮೆ ಪ್ರವಾಸಕ್ಕೆ ಮತ್ತು ಜನರ ಸಂಪರ್ಕಕ್ಕೆ ತೆರೆದುಕೊಳ್ಳುವ ಯಾವುದೇ ವ್ಯವಸ್ಥೆ, ತನ್ನ ಮೂಲವನ್ನೆ ಬದಲಿಸಿಕೊಳ್ಳುತ್ತದೆ ಎನ್ನುವುದೂ ಸಹಜ
ಕೂಡಾ. ಇಗಿದ್ದು ಅದೇ. ಕ್ರಮೇಣ ಬೆಳೆದ ಈ ಹಳ್ಳಿ ಈಗ ಜಾಗತಿಕ ಹಾರ್ನ್‌ಬಿಲ್ ಉತ್ಸವ ನಡೆಸುವ ಮತ್ತು ಪ್ರತಿ ವರ್ಷ ಡಿಸೆಂಬರ್ ಮೊದಲ ವಾರ ಇದಕ್ಕೇ ನಿಗದಿಯಾಗುವಷ್ಟು ನಿಖರ ಕಾರ್ಯಕ್ರಮವಾಗಿ ಇದು ಬದಲಾಗಿದೆ.
ಮೂಲತ: ನಾಗಾ ಸಂಸ್ಕೃತಿ ಹಾವಿನ ಜೀವನ ಶೈಲಿಯಿಂದ ಪ್ರಭಾವಿತವಾಗಿದ್ದು, ಅದೇ ಬಹುಮುಖ ರೂಪಿಯಾಗಿ ಬೆಳಕಿಗೆ ಬಂದಿದ್ದು ಎದ್ದು ಕಾಣುತ್ತದೆ. ಅದರಲ್ಲೂ ವಿವಿಧ ರೀತಿಯ ಬದಲಾವಣೆಗೆ ತೆರೆದುಕೊಂಡ ನಂತರವೂ ಉಳಿದು ಹೋದ ಸಂಪ್ರ ದಾಯದ ಬಗೆಗಿರುವ ಕುತೂಹಲ ಹಾಗು ಉಳಿಸಿಕೊಳ್ಳುವಿಕೆಯ ಪ್ರಯತ್ನದ ಭಾಗವಾಗಿ ಕಿಸಾಮಾ ಸ್ಥಾಪನೆಯಾಗಿದ್ದು, ಅಕ್ಷರಶ: ಅಂಥದ್ದೇ ಬುಡಕಟ್ಟು ಸಮುದಾಯದ ನೆಲೆಗೆ ಹೋಗುವ ಅನುಭೂತಿಯನ್ನು ನೀಡುವ ಸಲುವಾಗಿ ಪರ್ವತದ ಇಳಿಜಾರೊಂದರ ಸಣ್ಣ ಸಂದಿನ ಲಭ್ಯದ ಜಾಗದಲ್ಲಿ ಮೂಲ ರೂಪದ ಸ್ಥಾಪಿಸಲಾಗಿದೆ.
ಆ ಸಾಮಾಜಿಕ ಜೀವಂತಿಕೆ ಮತ್ತು ಮೂಲ ನೆಲೆಯ ಚಿತ್ರಣವನ್ನು ನೈಜವಾಗಿಸಲು ಮೂಲ ನಾಗಗಳನ್ನೆ ಇಲ್ಲಿ ತಂದು ಇರಿಸಲಾ ಗಿದ್ದು, ಉಳಿಯಲು ಸಿದ್ಧವಿರುವ, ಈ ವ್ಯವಸ್ಥೆಗೆ ಒಪ್ಪಿ ಬಂದ ನಾಗಾಗಳಿಗೆ ಜಾಗ ಕಲ್ಪಿಸಲಾಗಿದೆ. ಎಲ್ಲ ಸೌಲಭ್ಯ ಮತ್ತು ಸ್ವಾತಂತ್ರ್ಯ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ನಾಗಾ ದಿರಿಸು ನಡವಳಿಕೆ ಮತ್ತು ದಿನವಹಿ ಕಾರ್ಯ ಚಟುವಟಿಕೆ ಸೇರಿದಂತೆ, ಹಬ್ಬ ಹರಿದಿನ, ಜಾತ್ರೆ ಸಂಭ್ರಮ, ಆಟೋಟಗಳ ಆಚರಣೆ ಎಲ್ಲ ಆಯಾ ಸಮಯಾನುಸಾರ ತಮ್ಮ ಪಾಡಿಗೆ ಮಾಡುತ್ತಲೇ ಇರುತ್ತಾರೆ.
ಅಪ್ಪಟ ನಾಗಾ ಪಂಗಡದ ಆಚರಣೆ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದರೆ ಬರುವ ಸಾರ್ವಜನಿಕರಿಗೆ ಸಂದರ್ಶಕರಿಗೂ ಎಲ್ಲ ಮಾಹಿತಿ ನೀಡುವಲ್ಲಿಯೂ ಇವರು ಹಿಂದೆ ಬಿದ್ದಿಲ್ಲ. ಬಿದಿರಿನ ಆಯುಧ, ಬಿಲ್ಲು ಬಾಣಗಳ ಸಂಗ್ರಹ, ತಲೆಯ ಕೀರಿಟದ ತರಹದ ದಿರಿಸು, ಕೆಂಪು ಬಣ್ಣದ ದಟ್ಟಿ, ಮಡಿಕೆ ಮತ್ತು ಕಂಬಾರಿಕೆ ಜೊತೆಗೆ ಬಿದಿರಿನಲ್ಲಿ ಕರಕುಶಲ ಕಲೆಯ ವಸ್ತುಗಳ ಉತ್ಪಾದನೆ ಬಿಲ್ಲುಬಾಣಗಳ ಪ್ರಯೋಗ ಮತ್ತು ನಿಖರತೆ ಕಬ್ಬಿಣದ ಉಪಯೋಗ ಎಲ್ಲ ಸಾಂಪ್ರದಾಯಿಕ ಶೈಲಿಯ ಅನುಕರಣೆ ನಿರಂತರ ಜಾರಿಯಲ್ಲಿದ್ದೇ ಇದೆ.
ಅದರಲ್ಲೂ ಮುಖ್ಯವಾಗಿ ಬೇಟೆಯ ರೀತಿ ನೀತಿ ಬೇಟೆ ಆಡುವಾಗ ಆಗುತ್ತಿದ್ದ ಅಪಾಯಗಳು ಅದನ್ನು ಎದುರಿಸುತ್ತಿದ್ದ ರೀತಿ.. ಎಲ್ಲವನ್ನು ಇತ್ತಿಚೆಗೆ ವಿಡಿಯೋ ಪ್ರದರ್ಶನದ ಮೂಲಕ ಲೈವ್ ಆಗಿ ತೋರಿಸುವ ವ್ಯವಸ್ಥೆ ಅ ಇರುವ ನಾಗಾಗಳು ಪ್ರಾಯೋಗಿಕ ಮಾಹಿತಿಗೆ ಜೊತೆಯಾಗುತ್ತಾರೆ ಅದು ನೋಡಲೇ ಬೇಕಾದ ಶೋ. ಭಾಷೆ ಮತ್ತು ಲಿಪಿ ಇಲ್ಲದ ಭಾಷೆಯಲ್ಲಿ ವ್ಯವಹರಿಸುವ ನಾಗಾ ಗಳು ಹೇಗೆ ಅದನ್ನು ವ್ಯಾಹಾರಿಕವಾಗಿ ಬಳಸುತ್ತಾರೆ ಎನ್ನುವುದು ಅಚ್ಚರಿ. ಗಂಡು ಹೆಣ್ಣು ಕೂಡಿ ಸಮಾಜದ ವಿವಿಧ ಹಂತದಲ್ಲಿ ಕಾರ್ಯಗಳಿಗೆ ಕೈ ಜೋಡಿಸುವ ಮತ್ತು ಇತ್ತೀಚಿಗೆ ಶಾಲಾ ಕಾಲೇಜಿನ ಪರಿಚಯಕ್ಕೆ ಅವರನ್ನು ಪಕ್ಕಾಗಿಸುವ ಕೆಲಸವೂ ನಡೆಯು ತ್ತಿದೆ.
ತಮ್ಮದೇ ಆದ ಸಮುದಾಯ ಸಂಪ್ರದಾಯ ಎಂದು ಬಡಿದಾಡುತ್ತಿದ್ದ ನಾಗಾಗಳನ್ನು ಒಂದೆಡೆ ಸೇರಿಸಬೇಕೆಂದರೆ ಇರುವ ಏಕೈಕ ಕಾರಣ ಹಬ್ಬ ಮತ್ತದರಲ್ಲಿ ತಪ್ಪದೇ ಭಾಗವಹಿಸುವ ಅವರ ನಿಜಾಯಿತಿ. ಇದನ್ನೆ ಬಳಸಿಕೊಂಡು ಅವರನ್ನೆಲ್ಲ ಅಂದರೆ ಸುಮಾರು ಅರವತ್ತಕ್ಕೂ ಹೆಚ್ಚು ನಾಗಾ ಪಂಗಡದಲ್ಲಿ ಹಂಚಿಹೋಗಿರುವ ಇವರನ್ನು ಒಂದೇ ವೇದಿಕೆಯಡಿಗೆ ತಂದು ತಂತಂಮ್ಮ ಬಡಿದಾ ಡದೆ ಇರಲು ಸಹಕಾರಿಯಾಗಿದ್ದು ಹಬ್ಬವೇ ಹಾರ್ನ್‌ಬಿಲ್-ಸ್ಟಿವಲ್.
ಜೊತೆಗೆ ಪ್ರವಾಸೋದ್ಯಮಕ್ಕೂ. ನಾಗಾಲ್ಯಾಂಡ್ ನೆಲ ಹೇಳಿಕೇಳಿ ಮಂಗಟ್ಟೆಗಳಿಗೆ ತವರೂರು ಇದ್ದಂತೆ. ದಿ ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್ ಎನ್ನುವ ಪ್ರಬೇಧ ಇಲ್ಲಿ ಹಿಂಡುಗಟ್ಟಲೇ ಲಭ್ಯವಿದ್ದು, ಅದರ ಜೀವನ ಶೈಲಿ ಮತ್ತು ಪರಿಸರ, ಗೂಡು, ಮರಿ ಮಾಡುವ ವಿಧಾನ, ಸಾಂಸಾರಿಕ ಪದ್ಧತಿ, ಆಹಾರ ಇತ್ಯಾದಿ ಕ್ರಮಗಳ ಬಗ್ಗೆ ಅಭ್ಯಸಿಸಲು ದೇಶ ವಿದೇಶದ ಪ್ರೇಮಿಗಳು ಮುಗಿ ಬೀಳುವುದು ಹೊಸದೇನಲ್ಲ. ಅದಕ್ಕಾಗಿ ಕಿಸಾಮಾ ಹೇರಿಟೇಜ್ ವಿಲೇಜ್ ಜೊತೆಗೆ ಅದೇ ಕಾಡಿನ ಆವರಣದಲ್ಲಿ ಮಂಗಟ್ಟೆ ಉತ್ಸವ ಆರಂಭಿಸಲಾಗಿದ್ದು, ಹಾರ್ನ್‌ಬಿಲ್ -ಸ್ಟಿವಲ್ ಎಂದೇ ಪರಿಚಿತ. ನಾಗಾಲ್ಯಾಂಡ್‌ನ ಹೆಚ್ಚಿನ ಎಲ್ಲ ಬುಡಕಟ್ಟುಗಳನ್ನು ಇಲ್ಲಿ ಒಳಗೊಳ್ಳುವಂತೆ ಮಾಡಲಾಗುತ್ತಿದೆ.
ಮಣಿಪುರ, ಬರ್ಮಾ, ಮಲೇಶಿಯಾ, ಇಂಡೊನೇಷಿಯಾ ಮತ್ತು ಬಾಲಿಗಳ ದ್ವೀಪ ಕಲ್ಪದಲ್ಲಿ ಈಗಲೂ ಇರುವ ನಾಗಾಗಳೆಲ್ಲ ಈ ಉತ್ಸವಕ್ಕೆ ಬರುವುದು ಆಕರ್ಷಕ ಕಾರಣ ಪ್ರತಿ ಡಿಸೆಂಬರ್‌ನ ಈ ಹಬ್ಬ ಮಿಸ್ ನಾಗಾ ಆಯ್ಕೆಗೂ ವೇದಿಕೆ ಒದಗಿಸಿದ್ದು, ವಿದೇಶ ದಲ್ಲಿನ ಇಂಥಾ ಪಂಗಡಗಳು ಇಲ್ಲಿಗೆ ಆಯ ಸಮುದಾಯದ ಮುಖಂಡರ ಮೂಲಕ ಪ್ರವೇಶ ಪಡೆಯುತ್ತಿವೆ. ಆಸಕ್ತಿಯಿಂದ ಈ ಹಳ್ಳಿ ಮತ್ತು ನಾಗಾಗಳನ್ನು ಭೇಟಿ ಮಾಡಲು ಬರುವ ಎಲ್ಲ ಆಸಕ್ತಿದಾಯಕ ಪ್ರವಾಸಿಗಳಿಗೆ ಪ್ರಮುಖ ವಿಷಯ ಕೂಡಾ ಹೌದು. ಕಾರಣ ಹುಡುಕಿ ಹೋಗಿ ಪಂಗಡಗಳನ್ನು ಭೇಟಿ ಮಾಡುವ ಬದಲಿಗೆ ಇಲ್ಲಿನ ಸುರಕ್ಷಿತ ಆವಾಸದಲ್ಲಿ ಇದೆಲ್ಲ ಸೂಕ್ತ. ಮುಂದೊಮ್ಮೆ ನಾಗಾಲ್ಯಾಂಡ್ ಹೋಗುವುದಿದ್ದರೆ ಡಿಸೆಂಬರ್ ಮೊದಲ ವಾರಕ್ಕೆ ಇದನ್ನು ಬಕೆಟ್ ಲಿಸ್ಟ್ ಮಾಡಿಕೊಳ್ಳಿ.
Read E-Paper click here