Friday, 20th September 2024

ನಾಯಕತ್ವದ ‘ಅನಂತ’ ಸೂತ್ರಗಳು

ಭಾರತದ ರಾಜಕಾರಣದಲ್ಲಿ ಸಭ್ಯ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರ ರಾದವರು ಅನಂತಕುಮಾರ್. ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಸಹ ಅವರದು. ಇಂಥ ಸಜ್ಜನ ರಾಜಕಾರಣಿಯ 61ನೇ ಜನ್ಮದಿನ ಇಂದು. ಈ ಸಂದರ್ಭದಲ್ಲಿ ಇವರೊಂದಿ ಗಿನ ಒಡನಾಟ ಕುರಿತು ಮತ್ತೊಬ್ಬ ಸಜ್ಜನ ರಾಜಕಾರಣಿ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ.

ನಿರೂಪಣೆ: ಟಿ.ಎಸ್. ಗೋಪಾಲ್

1978-79. ನಾನು ಆಗತಾನೇ ಕಾಲೇಜು ಮೆಟ್ಟಿಲು ಹತ್ತಿದ್ದೆ. ಧಾರವಾಡದ ಪ್ರತಿಷ್ಠಿತ ಕರ್ನಾಟಕ ಕಾಲೇಜಿನಲ್ಲಿ ಪಿ.ಯು.ಸಿ. ಓದಲು
ಸೇರಿಕೊಂಡಿದ್ದೆ. ನಮ್ಮ ಮನೆಯಲ್ಲಿ ನನ್ನ ತಂದೆ ಯವರೂ ಸೇರಿದಂತೆ ನಾವೆಲ್ಲ ಸ್ವಯಂಸೇವಕರಾಗಿದ್ದವರು.  ರ್ತುಪರಿಸ್ಥಿತಿಯ ಕಾಲದಲ್ಲಿ ಸರಕಾರದ ನಿಷೇಧಕ್ಕೆ ಒಳಪಟ್ಟು ಸ್ವಯಂಸೇವಕರ ಚಟುವಟಿಕೆಗಳೂ, ಶಾಖೆಯ ಕಾರ್ಯಕ್ರಮಗಳೂ ಸ್ಥಗಿತಗೊಂಡಿ ದ್ದವು. ಇಲ್ಲಿ ಧಾರವಾಡಕ್ಕೆ ಬಂದ ಕೂಡಲೇ ಶಾಖೆಯ ಚಟುವಟಿಕೆ ನಡೆಯುತ್ತಿರುವುದನ್ನು ಗಮನಿಸಿ ಅಲ್ಲಿಗೆ ಹೋಗಿ ಸೇರಿ ಕೊಂಡೆ.

ಹಿರಿಯ ಸ್ವಯಂಸೇವಕರಾಗಿದ್ದ ಶ್ರೀಕೃಷ್ಣ ಗೋಖಲೆಯವರ ಮಗ ಶ್ರೀರಾಜೇಂದ್ರ ಗೋಖಲೆಯವರ ಪರಿಚಯವಾಗಿ ಅವರ ಮೂಲಕ ವಿದ್ಯಾರ್ಥಿ ಪರಿಷತ್ತಿಗೆ ಸೇರಲು ಅವಕಾಶವಾಯಿತು. ಆ ಹೊತ್ತಿಗೆ ಅನಂತಕುಮಾರ್ ಹುಬ್ಬಳ್ಳಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ವಿದ್ಯಾರ್ಥಿ ಪರಿಷತ್ತಿನ ಕಾರ್ಯಕ್ರಮಗಳಿಗಾಗಿ ಧಾರವಾಡಕ್ಕೂ ಆಗಿಂದಾಗ್ಗೆ ಬರುತ್ತಿದ್ದರು. ಅವರಲ್ಲಿದ್ದ ನಾಯಕತ್ವದ ಗುಣ, ಮಾತುಗಾರಿಕೆಯ ವೈಖರಿ, ಸ್ನೇಹಪರತೆಗಳು ಎಲ್ಲ ವಿದ್ಯಾರ್ಥಿಗಳಿಗೂ ಮೆಚ್ಚುಗೆ ತಂದಿದ್ದವು. ಅವರನ್ನು
ನಮ್ಮ ಕಾಲೇಜಿಗೆ ಕರೆಸಬೇಕಾದ ಸಂದರ್ಭವೂ ಶೀಘ್ರದಲ್ಲೇ ಒದಗಿ ಬಂದಿತು.

ನಮ್ಮ ಕಾಲೇಜಿಗೆ ಸಂಬಂಧಿಸಿದ ಹಲವು ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಕಾಲೇಜಿನ ಆಡಳಿತ ಮಂಡಳಿಯ ಹಾಗೂ ಸರಕಾರದ ಗಮನ ಸೆಳೆಯುವ ಸಲುವಾಗಿ ಒಂದು ಚಳುವಳಿಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದೆವು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಅನಂತಕುಮಾರರನ್ನು ಕರೆಯಿಸುವುದೆಂದು ತೀರ್ಮಾನಿಸಿದೆವು. ನಿಗದಿತ ದಿನ ಕಾಲೇಜು
ಆವರಣಕ್ಕೆ ಅನಂತಕುಮಾರ್ ಆಗಮಿಸಿದ್ದೂ ಆಯಿತು. ಅಷ್ಟರಲ್ಲಿ ಸಾವಿರಾರು ವಿದ್ಯಾರ್ಥಿಗಳು ಗುಂಪುಗೂಡಿದ್ದರು. ಸಭೆಯ ವ್ಯವಸ್ಥೆಯನ್ನು ಕುರಿತು ಯಾವ ಯೋಚನೆಯನ್ನೂ ಮಾಡಿರದಿದ್ದ ನಮಗೆ ಏನು ಮಾಡುವುದೆಂದೇ ತೋಚಲಿಲ್ಲ. ಭಾಷಣ
ಕಾರರಾದ ಅನಂತಕುಮಾರ್ ಎಲ್ಲರಿಗೂ ಕಾಣುವ ಹಾಗೆ ನಿಲ್ಲುವುದಕ್ಕೆ ಒಂದು ವೇದಿಕೆ ಹೋಗಲಿ, ಒಂದು ಕುರ್ಚಿಯೂ ಇರಲಿಲ್ಲ. ಇನ್ನು ಧ್ವನಿವರ್ಧಕದ ವ್ಯವಸ್ಥೆ ಬೇಕಾದೀತೆಂಬ ಕಲ್ಪನೆಯೋ ನಮ್ಮ ತಲೆಗೆ ಹೊಳೆದೇ ಇರಲಿಲ್ಲ.

ಏನೂ ತೋಚದೆ ಪೆಚ್ಚುಪೆಚ್ಚಾಗಿ ನಿಂತಿದ್ದ ನಮ್ಮ ಗೊಂದಲ ಅನಂತಕುಮಾರರಿಗೆ ಅರ್ಥವಾಗದೆ ಇರುತ್ತದೆಯೇ? ಆಚೀಚೆ ನೋಡಿದ ಅನಂತಕುಮಾರರಿಗೆ ಮೂಲೆಯಲ್ಲಿ ಸೈಕಲ್ ಸ್ಟಾಂಡೊಂದು ಕಂಡಿತು. ಅದೊಂದು ತಗಡಿನ ಛಾವಣಿ ಹೊದೆಸಿದ್ದ ಶೆಡ್. ಎಲ್ಲರೂ ಬನ್ನಿ ಎಂದು ಹೇಳುತ್ತ ಸರಸರನೆ ಸೈಕಲ್ ಸ್ಟಾಂಡಿನ ಕಡೆಗೆ ನಡೆದೇ ಬಿಟ್ಟರು. ಹುಡುಗರ ಗುಂಪು ಸಡಗರದಿಂದಲೇ ಅವರನ್ನು ಹಿಂಬಾಲಿಸಿತು. ಮೂರು ನಾಲ್ಕು ಹುಡುಗರನ್ನು ಕರೆದು ಆ ಶೆಡ್ಡಿನ ಕಂಬವೊಂದನ್ನು ಹಿಡಿದು ಕೊಳ್ಳುವಂತೆ ಸೂಚಿಸಿ ನಿಲ್ಲಿಸಿದರು. ಆ ಹುಡುಗರ ತೋಳನ್ನೋ ಹೆಗಲನ್ನೋ ಆಧರಿಸಿ ಅನಂತಕುಮಾರ್ ಸೈಕಲ್ ಸ್ಟಾಂಡಿನ ಮೇಲಕ್ಕೆ ಹತ್ತಿಯೇ ಬಿಟ್ಟರು. ಆಯಿತಲ್ಲ, ಎಲ್ಲರ ಕಣ್ಣಿಗೆ ಕಾಣುವಂತಹ ವೇದಿಕೆ ಸಿದ್ಧವಾಗಿಯೇ ಬಿಟ್ಟಿತು.

ಧ್ವನಿವರ್ಧಕ ಇಲ್ಲದಿದ್ದರೆ ಏನಂತೆ, ಎತ್ತರದಲ್ಲಿ ನಿಂತ ಅನಂತಕುಮಾರರ ದೊಡ್ಡ ಧ್ವನಿಯ ಮಾತುಗಳು ಆ ಬೃಹತ್ ಗುಂಪನ್ನು ತಲುಪಲು ಕಷ್ಟವಾಗಲಿಲ್ಲ. ನಾಯಕತ್ವದ ಲಕ್ಷಣವೆಂದರೆ ಇದು. ನಾಯಕತ್ವದ ಹಮ್ಮುಬಿಮ್ಮುಗಳನ್ನೇನೂ ತೋರದೆ, ಸಂವಹನಕ್ಕಾಗಿ ನಿರ್ದಿಷ್ಟ ವ್ಯವಸ್ಥೆಯನ್ನೋ ಆಡಂಬರವನ್ನೋ ಅಪೇಕ್ಷಿಸದೆ, ಲಭ್ಯವಿರುವ ಸ್ಥಿತಿಯನ್ನೇ ಅನುಕೂಲಕ್ಕೆ
ಮಾರ್ಪಡಿಸಿಕೊಳ್ಳುವ ಇಂಥ ಗುಣಶೇಷವು ಸಾಮಾನ್ಯರಲ್ಲಿ ಕಂಡುಬರುವಂತಹುದಲ್ಲ. ಯಾವುದೇ ಪೂರ್ವಸಿದ್ಧತೆ ಸಜ್ಜಿಕೆ ಗಳಿಲ್ಲದಿರುವ, ಪ್ರತಿಕೂಲ ಪರಿಸ್ಥಿತಿಯಲ್ಲೂ ಅಗತ್ಯಕ್ಕೆ ತಕ್ಕಷ್ಟು ಸಮರ್ಪಕವೆನಿಸಬಹುದಾದ ವ್ಯವಸ್ಥೆಯನ್ನು ಆಯಾ
ಕ್ಷಣದಲ್ಲಿ ಕಲ್ಪಿಸಿಕೊಳ್ಳಬಲ್ಲ ಸಾಮರ್ಥ್ಯ ಅನಂತ ಕುಮಾರರಲ್ಲಿ ಇದ್ದುದಕ್ಕೆ ಇದೊಂದು ನಿದರ್ಶನ.

ಆಗೆಲ್ಲ ವಿದ್ಯಾರ್ಥಿ ಸಂಘದ ಚಟುವಟಿಕೆಗಳೆಂದರೆ ಸಡಗರದ ಸಂಗತಿಗಳೇ. ಕಾಲೇಜಿನ ವಿದ್ಯಾಾರ್ಥಿ ಸಂಘದ ಚುನಾವಣೆ ಯೆನ್ನುವುದೇ ಒಂದು ಹಬ್ಬ. ಆನೆಯನ್ನು ತರಿಸಿ ಮೆರೆವಣಿಗೆ ಮಾಡುವಷ್ಟು ಸಂಭ್ರಮ. ಅದರಲ್ಲೂ ಧಾರವಾಡದ ಕರ್ನಾಟಕ
ಕಾಲೇಜಿನ ದೊಡ್ಡಸ್ತಿಕೆ ಒಂದು ಹೆಜ್ಜೆ ಮುಂದೆಯೇ. ಇನ್ನು ಚಳುವಳಿಯೆಂದರೆ ಹೇಳಬೇಕೇ? ಇಂತಹ ಸನ್ನಿವೇಶದಲ್ಲಿ ವಿದ್ಯಾ ರ್ಥಿಗಳ, ವಿದ್ಯಾರ್ಥಿನಾಯಕರ ಸಭೆಗಳಲ್ಲಿ ಅನಂತಕುಮಾರರ ಮಾತುಗಳಿಗೆ ವಿಶೇಷ ಮಹತ್ವವಿರುತ್ತಿತ್ತು. ವಿದ್ಯಾರ್ಥಿ ಪರಿಷತ್ತಿಗೆ ಸಂಬಂಧ ಪಡದ ವಿದ್ಯಾರ್ಥಿಗಳೂ ಅನಂತಕುಮಾರರ ಮಾತನ್ನು ಶ್ರದ್ಧೆ ವಿಶ್ವಾಸಗಳಿಂದ ಆಲಿಸುತ್ತಿದ್ದರು.

ಯಾವುದೇ ಸಂಘಟನೆ, ಪಕ್ಷಗಳಿಂದ ಹೊರತುಪಡಿಸಿದ ನಾಯಕತ್ವ ದ ಗುಣವಿಶೇಷವನ್ನು ಅನಂತಕುಮಾರರಲ್ಲಿ  ಪರವಿರೋಧವೆನ್ನದೆ ಎಲ್ಲರೂ ಕಾಣುತ್ತಿದ್ದುದೇ ಒಂದು ವಿಶೇಷ. ವಿದ್ಯಾರ್ಥಿ ಪರಿಷತ್ತಿನ ಸದಸ್ಯರಾಗಿರಲಿ ಬಿಡಲಿ, ನಿರ್ದಿಷ್ಟ
ವಿಷಯಕ್ಕೆ ಸಂಬಂಧಿಸಿದ ಎಲ್ಲರನ್ನೂ ತನ್ನ ವಲಯಕ್ಕೆ ಒಳಕೊಳ್ಳುವ ಹಾಗೂ ಅವರಿಗೆ ಪ್ರೇರಣೆ ನೀಡಬಲ್ಲ ಶಕ್ತಿ  ಅನಂತಕುಮಾರರಲ್ಲಿತ್ತು. ಅವರ ನಡೆನುಡಿಗಳಲ್ಲಿ ಒಟ್ಟಾರೆ ವಿದ್ಯಾರ್ಥಿಸಮುದಾಯದ ಬಗೆಗೆ ಕಾಳಜಿ, ಅನುಭೂತಿಗಳಿದ್ದುವಲ್ಲದೆ ಸ್ವಾರ್ಥಪರತೆಯ ಲವಲೇಶವೂ ಇರಲಿಲ್ಲ. ಹೀಗಾಗಿ ಯಾವುದೇ ಸಂಘಟನೆಗೆ ಸೇರಿದ, ಯಾವುದೇ ವಿಚಾರಧಾರೆಯನ್ನು ಅನುಸರಿಸುವ ವ್ಯಕ್ತಿಯೂ ಹೀಗೊಬ್ಬ ಮುಖಂಡನನ್ನು ನಾಯಕನೆಂದೇ ಗುರುತಿಸಿ ಗೌರವಿಸುವ ಅಪೂರ್ವಗುಣಲಕ್ಷಣವು ಅನಂತ ಕುಮಾರರಲ್ಲಿ ಕಂಡುಬಂದಂತೆ ಉಳಿದವರಲ್ಲಿ ಕಾಣುವುದು ಮುಂಬರುವ ಕಾಲಕ್ಕೂ ಅಸಂಭವವೆಂದೇ ಹೇಳಬೇಕು.

ವಾರಕ್ಕೊಮ್ಮೆ ವಿದ್ಯಾರ್ಥಿ ಪರಿಷತ್ತಿನ ಸದಸ್ಯರ ಸಭೆಯಲ್ಲಿ ನಾವೆಲ್ಲ ಭಾಗವಹಿಸುತ್ತಿದ್ದೆವು. ಧಾರವಾಡದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಮೋಡಕ್ ಎಂಬ ಮಹನೀಯರ ಮನೆಯ ಅಟ್ಟದಲ್ಲಿ ಈ ಸಭೆ ನಡೆಯುತ್ತಿತ್ತು. ಇದರ ಅಂಗವಾಗಿ ಆಗಿಂದಾಗ್ಗೆ ಸ್ಟಡಿ ಸರ್ಕಲ್ (ಅಭ್ಯಾಸವರ್ಗ) ಎಂಬ ವಿದ್ಯಾರ್ಥಿ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದೆವು. ಈ ಕಾರ್ಯಕ್ರಮಕ್ಕೆ ಅಗತ್ಯವಾದ ಸೂಚನೆಗಳೆಲ್ಲವನ್ನೂ ಕಿಂಚಿತ್ತೂ ತಪ್ಪದಂತೆ ಅನಂತಕುಮಾರರೇ ಕೊಡುತ್ತಿದ್ದರು. ಅಭ್ಯಾಸವರ್ಗದಲ್ಲಿ ನಿರ್ದಿಷ್ಟ
ಉಪನ್ಯಾಸಕ್ಕೆ ಯಾರನ್ನು ಕರೆಯಬೇಕು, ಈ ಸಂವಾದ ಕಾರ್ಯಕ್ರಮಗಳಲ್ಲಿ ಚರ್ಚೆಗೆ ಯಾವ ಯಾವ ವಿಷಯಗಳಿರತಕ್ಕದ್ದು ಎನ್ನುವುದರಿಂದ ಮೊದಲುಗೊಂಡು ನಿರ್ದಿಷ್ಟ ವಿಷಯದ ಬಗೆಗೆ ಮಾತನಾಡಬಲ್ಲ ತಜ್ಞರು ಯಾರು? ಇಲ್ಲವೇ ಯಾರನ್ನು ಕರೆಸುವುದು ಸೂಕ್ತವೆಂಬುದನ್ನು ತಿಳಿಯಲು ಯಾರನ್ನು ಸಂಪರ್ಕಿಸಬೇಕು ಎಂಬ ಅಂಶದವರೆಗೆ ಪ್ರತಿಯೊಂದು ಸೂಚನೆಯನ್ನೂ ಅನಂತಕುಮಾರ್ ಅತಿ ಸಮರ್ಪಕವಾಗಿ ಮುಂದಿಡುತ್ತಿದ್ದರು.

ನಾಯಕತ್ವ ವಹಿಸಬೇಕಾದವನಿಗೆ ಇರಬೇಕಾದ ವ್ಯಾಪಕವಾದ ವಿಷಯ ಪರಿಜ್ಞಾನ ಮಾತ್ರವಲ್ಲದೆ, ವಿಷಯಗ್ರಹಣೆಯ ಬಗೆಗೂ ಅವರು ಸದಸ್ಯರಿಗೆ ತಿಳಿಹೇಳುತ್ತಿದ್ದ ಪರಿ ಅಸಾಧಾರಣವಾಗಿತ್ತು. ಅವರ ಮಾತುಗಳು ನಾಯಕತ್ವದ ಪರಿಯನ್ನೇ ಬೋಧಿಸು ತ್ತಿವೆಯೋ ಎನ್ನುವಂತೆ, ಸಾಮಾನ್ಯ ಕಾರ್ಯಕರ್ತರಲ್ಲೂ ನಾಯಕತ್ವದ ಗುಣಗಳನ್ನು ಪ್ರೇರಿಸುವುದರಲ್ಲಿ ಪರಿಣಾಮಕಾರಿ ಯಾಗಿರುತ್ತಿದ್ದವು. ಅಂದರೆ, ನಾಯಕತ್ವದ ಹಾದಿಯಲ್ಲಿ ಅನಂತಕುಮಾರ ಒಬ್ಬರೇ ಮುಂದೆ ಹೋಗುತ್ತಿದ್ದರು ಎಂದು
ತೋರುತ್ತಲೇ ಇರಲಿಲ್ಲ, ನಮ್ಮೆಲ್ಲರನ್ನೂ, ಹುಬ್ಬಳ್ಳಿ ಧಾರವಾಡ ಭಾಗದಲ್ಲಿದ್ದ ಪ್ರತಿಯೊಬ್ಬರನ್ನೂ ಅವರು ತಮ್ಮ ಜೊತೆಗೇ ಮುಂದಕ್ಕೆ ಕರೆದೊಯ್ಯುತ್ತಿದ್ದರು.

ಹುಬ್ಬಳ್ಳಿಯಲ್ಲಿ ನಾವು ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಸಮ್ಮೇಳನವನ್ನೂ ಆಯೋಜಿಸಿದ್ದೆವು. ಶ್ರೀಗೋವಿಂದಾಚಾರ್ಯರು ನಮಗೆ ಮುಖ್ಯ ಮಾರ್ಗದರ್ಶಕರಾಗಿದ್ದರು. ಚೋ. ರಾಮಸ್ವಾಮಿ ಮೊದಲಾದವರು ಅತಿಥಿಗಳಾಗಿ ಆಗಮಿಸಿದ್ದ ಸಮಾರಂಭವದು. ನಮಗೆ ಮುಖ್ಯಪ್ರೇರಕರಾಗಿ ಶ್ರೀಯುತ ಪಿ.ವಿ.ಕೃಷ್ಣಭಟ್ಟರು, ದತ್ತಾತ್ರೇಯ ಹೊಸಬಾಳೆಯವರು ಮುಂಚೂಣಿಯಲ್ಲಿದ್ದರು.
ಇವರಿಬ್ಬರು ಹಿರಿಯರೂ ಇಡಿಯ ಕರ್ನಾಟಕದಲ್ಲೇ ವಿದ್ಯಾರ್ಥಿ ಪರಿಷತ್ತಿಗೆ ನಾಯಕತ್ವ ತಂದುಕೊಟ್ಟವರು. ವಾಸ್ತವವಾಗಿ, ಈ  ಇಬ್ಬರು ಮಹನೀಯರೇ ಅನಂತಕುಮಾರರಿಗೆ ಪ್ರೇರಣೆ ನೀಡಿ, ಕೆಲಸದಲ್ಲಿ ತೊಡಗಿಸಿಕೊಳ್ಳಲು ಮುಖ್ಯ ಕಾರಣಕರ್ತ ರೆನ್ನಬಹುದು.

ಇಂಥ ಯಾವುದೇ ಸಮ್ಮೇಳನ ಅದು ರಾಜ್ಯಮಟ್ಟದ್ದಿರಲಿ, ರಾಷ್ಟ್ರಮಟ್ಟದ್ದಿರಲಿ ಅನಂತ ಕುಮಾರ್ ತಪ್ಪದೆ ಭಾಗವಹಿಸುತ್ತಿದ್ದರು. ಅದೂ ಒಬ್ಬರೇ ಅಲ್ಲ, ಒಂದು ಗುಂಪನ್ನೇ ತಮ್ಮೊಡನೆ ಹೊರಡಿಸುತ್ತಿದ್ದರು. ಯಾವ ಊರಿನಿಂದ ಯಾರು ಬರಬೇಕು, ಯಾವ ಕಾಲೇಜಿನಿಂದ ಯಾರು ಭಾಗವಸಬೇಕು ಎಲ್ಲವನ್ನೂ ಪಟ್ಟಿ ಮಾಡಿಸುವವರೂ ಅವರೇ. ಸುಮ್ಮನೆ ಯಾರದ್ದೋ ಹೆಸರು ಸೇರಿಸುವು
ದಲ್ಲ, ನಮ್ಮ ಅಭ್ಯಾಸವರ್ಗದಲ್ಲಿ ಭಾಗವಹಿಸುತ್ತಿರುವವರು ಯಾರು, ನಮ್ಮ ಗುಂಪಿನ ಸದಸ್ಯರು ಯಾರಿದ್ದಾರೆ, ಸಮಾನಮನಸ್ಕ ಆಸಕ್ತರು ಯಾರಿದ್ದಾರೆ ಎಲ್ಲರನ್ನೂ ನೆನಪುಮಾಡಿಕೊಂಡು ಇಂತಿಂಥ ಸಮ್ಮೇಳನದಲ್ಲಿ ಭಾಗವಹಿಸಬೇಕಾದವರು ಯಾರು
ಎಂಬ ಪಟ್ಟಿಯನ್ನು ತಯಾರುಮಾಡಿಸುತ್ತಿದ್ದರು.

ಯಾರು ಯಾರು ಎಲ್ಲೆಲ್ಲಿಂದ ಹೊರಡಬೇಕು, ಎಲ್ಲಿ ಸೇರಬೇಕು ಎಂಬ ಚಿಕ್ಕಪುಟ್ಟ ವಿಷಯಗಳೂ ನಮೂದಾಗುವಷ್ಟು ನಿಖರವಾಗಿ ಕಾರ್ಯಕ್ರಮವನ್ನು ಸಿದ್ಧಪಡಿಸಲು ಅನಂತ ಕುಮಾರರ ಮಾರ್ಗಸೂಚಿ ಸದಾ ನೆರವಿಗೆ ಒದಗುತ್ತಿತ್ತು. ಆಗಿನ ಕಾಲದಲ್ಲಿ ಹಣದ ಕೊರತೆ ತೀರಾ ಸಾಮಾನ್ಯ. ಆದರೆ ಅದು ಸಮಸ್ಯೆಯೆಂದೇ ತೋರುತ್ತಿರಲಿಲ್ಲ. ಸಂಘಟನೆಯ ಕೆಲಸ ಎಂದರೆ ಮಾಡಲೇಬೇಕಾದ ಕೆಲಸ ಅಷ್ಟೇ, ಅದರ ಖರ್ಚು ವೆಚ್ಚಗಳಿಗೆ ಏನು ಮಾಡುವುದು, ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬಂದದ್ದಾಯಿತು, ವಾಪಸ್ ಹೋಗಲಿಕ್ಕೆ ಹಣವನ್ನು ಹೊಂದಿಸುವುದು ಹೇಗೆ ಎಂಬ ಪ್ರಶ್ನೆಗಳಿಗೆ ಅವಕಾಶವಿಲ್ಲದಂತೆ ಅವರಿವರು ಸೇರಿ ವೆಚ್ಚವನ್ನು
ಸರಿದೂಗಿಸಿಕೊಂಡು ಹೋಗುತ್ತಿದ್ದೆವು. ಅಂತೆಯೇ ಹಣಕಾಸಿನ ಕೊರತೆಯೆನ್ನುವುದು ಅನಂತ ಕುಮಾರರಿಗೆ ಎಂದೂ ಸಮಸ್ಯೆಯೆಂದೇ ತೋರಿರಲಿಲ್ಲ. ಅವರಲ್ಲಿ ಇದ್ದುದು ಕರ್ತವ್ಯನಿಷ್ಠೆ, ಕೆಲಸವನ್ನು ಮಾಡಿ ಮುಗಿಸುವ ಬದ್ಧತೆ ಅಷ್ಟೇ. ಪ್ರಯಾಣ
ಮಾಡಬೇಕು ಅಂದರೆ ಹೋಗಿ ತಲುಪುವುದಷ್ಟೇ ಮುಖ್ಯ. ಬಸ್ಸಾದರೂ ಸರಿಯೇ, ಲಾರಿಯಾದರೂ ಸರಿಯೇ; ನಡೆದುಹೋಗುವುದಕ್ಕೂ ಸಿದ್ಧವೇ. ಸೌಖ್ಯ, ಸುಲಲಿತವ್ಯವಸ್ಥೆಗಳೆಲ್ಲ ತಮ್ಮ ಪಯಣದ ಭಾಗವಾಗಿರಲೇಬೇಕೆಂಬ ನಿರೀಕ್ಷೆ ಅವರ
ಮನೋಭಾವದಲ್ಲಿ ಇರಲೇ ಇಲ್ಲ.

ಅಸ್ಸಾಂ ಆಂದೋಲನದಲ್ಲಿ ಭಾಗವಹಿಸಲು ಹೋದಾಗಲೂ ಅಷ್ಟೇ. ಕೋಲ್ಕತಾದಿಂದ ಗೌಹಾಟಿಗೆ ಹೊರಟ ರೈಲಿನಲ್ಲಿ ಅನಂತಕುಮಾರರ ನಾಯಕತ್ವದ ಗುಂಪು ಇದ್ದಿತು. ರೈಲು ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿತ್ತು. ಕಾಲಿಡಲೂ ಜಾಗವಿಲ್ಲದ ಪರಿಸ್ಥಿತಿ. ಪರಿಷತ್ತಿನ ಗೆಳೆಯರು ಬೋಗಿಯಲ್ಲಿ ಪ್ರಯಾಣಿಕರು ಸಾಮಾನುಗಳನ್ನಿರಿಸುವ ಮೇಲುಖಾನೆಗಳಲ್ಲಿ ಒಂದೊಂದರಲ್ಲಿ ಐದಾರು ಜನರಂತೆ ಇಕ್ಕಟ್ಟಿನಲ್ಲಿ ಕುಳಿತು ಪಯಣಿಸಿದ್ದೇ ಒಂದು ಕಥೆ. ಅಸ್ಸಾಂ ಆಂದೋಲನ ವಿಪರೀತಕ್ಕೆ ತಿರುಗಿ ಲಾಠಿಚಾರ್ಜ್, ಗೋಲೀಬಾರ್ ಎಲ್ಲವೂ ಸಂಭವಿಸಿ ಗೊಂದಲವಾಯಿತು. ಅನಂತಕುಮಾರರ ನೇತೃತ್ವದ ನಮ್ಮ ಗುಂಪನ್ನು ಬಂಧಿಸಿದ ಪೊಲೀಸರು ಎಲ್ಲಿಯೋ ದೂರದ ಹಳ್ಳಿಗೆ ನಮ್ಮನ್ನು ಕರೆದೊಯ್ದು ಬಿಟ್ಟು ಹೋದರು. ಎಲ್ಲಿದ್ದೇವೆ, ಎಲ್ಲಿಗೆ ಹೋಗಬೇಕು ಏನೂ ಗೊತ್ತಾಗದ ಅಪರಿಚಿತ ಪ್ರದೇಶ. ಅಲ್ಲಲ್ಲಿ ಜನ ಕಂಡರೂ ನಮ್ಮ ಭಾಷೆ ಅವರಿಗಾಗಲಿ ಅವರ ಭಾಷೆ ನಮಗಾಗಲಿ ತಿಳಿಯು ವಂತಿಲ್ಲ.

ನಿಸ್ಸಹಾಯಕರಾಗಿದ್ದ ನಮಗೆ ಅನಂತಕುಮಾರ್ ಸೂಚಿಸಿದ ಪರಿಹಾರವಿಷ್ಟೇ: ಮುಖ್ಯ ರಸ್ತೆ ಎಲ್ಲಿದೆ ಹುಡುಕುತ್ತ ನಡೆಯೋಣ. ಅಲ್ಲಿಂದ ಯಾವುದಾದರೂ ಪಟ್ಟಣಕ್ಕೆ ಸೇರಬಹುದು.  ಅದೇ ಸೂಚನೆಯನ್ನನುಸರಿಸಿ ಹೊರಟ ನಮಗೆ ಮುಖ್ಯರಸ್ತೆಯೂ ಕಾಣಸಿಕ್ಕಿತು; ಅತ್ತ ಬಂದ ಟ್ರಕ್ಕೊಂದನ್ನು ಏರಿ ಮುಂದಿನ ಪಟ್ಟಣವನ್ನು ತಲುಪುವುದಕ್ಕೂ ಸಾಧ್ಯವಾಯಿತು. ಎಂಥ ಪರಿಸ್ಥಿತಿ
ಯಲ್ಲೂ ಮನಸ್ಥೈರ್ಯವನ್ನು ಕಳೆದುಕೊಳ್ಳದ, ಯಾವುದೇ ಸಮಸ್ಯೆೆಗೆ ಸೂಕ್ತ ಪರಿಹಾರವೊಂದನ್ನು ಅನ್ವೇಷಿಸಬಲ್ಲ ವ್ಯಕ್ತಿತ್ವ ಅವರದ್ದಾಗಿತ್ತು ಎನ್ನುವುದಕ್ಕೆ ಇದೊಂದು ಉದಾಹರಣೆ. ತಾವು ಸಾಹಸಶೀಲರಾಗಿರುವುದಲ್ಲದೆ, ಉಳಿದವರಲ್ಲೂ ಸಾಹಸದ
ಪ್ರವೃತ್ತಿಯನ್ನು ಬೆಳೆಸುವ ಪ್ರೇರಕಶಕ್ತಿ ಅವರಲ್ಲಿತ್ತು. ಅನಂತಕುಮಾರರ ಕಾರ್ಯಸಾಮರ್ಥ್ಯವನ್ನು ನೋಡಿಯೇ ತಿಳಿಯಬೇಕು. ಅದು ಯಾವುದೋ ಅಭ್ಯಾಸವರ್ಗದ ಕಾರ್ಯಕ್ರಮರಲಿ, ರಾಷ್ಟ್ರೀಯ ಸಮ್ಮೇಳನವೇ ಇರಲಿ. ಕಾರ್ಯಕ್ರಮದ ಪ್ರತಿಯೊಂದು ರೂಪುರೇಷೆಯೂ ಸಿದ್ಧವಾಗತಕ್ಕದ್ದು.

ಸಭೆ ನಡೆಯಬೇಕಾದ್ದು ಎಲ್ಲಿ, ಯಾರು ಮುಖ್ಯ ಅತಿಥಿಗಳು, ಅವರ ಪ್ರಯಾಣ ವ್ಯವಸ್ಥೆ ಹೇಗೆ, ಅವರನ್ನು ಕರೆದುಕೊಂಡು ಬರುವವರು ಯಾರು, ನೆರವಿಗೆ ನಿಲ್ಲುವವರು ಯಾರು, ಧ್ವನಿವರ್ಧಕ ಎಲ್ಲಿಂದ, ಅದರ ವ್ಯವಸ್ಥೆ ವಹಿಸಬೇಕಾದವರು
ಯಾರು, ಸಭಿಕ ವಿದ್ಯಾರ್ಥಿಗಳು ಯಾರು, ಅವರು ಎಲ್ಲಿಂದ ಬರಬೇಕು – ಇವೆಲ್ಲ ವಿವರಗಳು ಒಂದೂ ಬಿಡದಂತೆ ಅವರ ಅವಗಾಹನೆಗೆ ಬಂದು ನಿಶ್ಚಯವಾಗಿ ಬಿಡಬೇಕು. ಸಭೆಯಲ್ಲಿ ಮಂಡಿಸಬೇಕಾದ ನಿರ್ಣಯಗಳನ್ನೂ ಅವರೇ  ಬರೆಯ ತೊಡಗುವರು.

ವಿದ್ಯಾರ್ಥಿ ಪರಿಷತ್ತಿನ ಚಟುವಟಿಕೆಗಳಲ್ಲಿ ವಿದ್ಯಾರ್ಥಿ ಪಥ ಎಂಬ ಪತ್ರಿಕೆಯ ಪ್ರಕಟಣೆಯೂ ಸೇರಿತ್ತು. ಈ ಪತ್ರಿಕೆಗಾಗಿ ಅನಂತಕುಮಾರ್ ಬರೆಯುತ್ತಿದ್ದ ಚುಟುಕಗಳು ಬಹು ಜನಪ್ರಿಯವಾಗಿದ್ದವು. ಒಂದು ಕಾಲಕ್ಕೆ ಈ ಪತ್ರಿಕೆಯನ್ನು ಸ್ಟೆೆನ್ಸಿಲ್
ಕಾಗದದಲ್ಲಿ ಬರೆದು ಬಿಳಿಹಾಳೆಗಳ ಮೇಲೆ ಛಾಪುಮೂಡಿಸಲು ರೋಲರ್ ಬಳಸಿ ಒತ್ತಬೇಕಾಗಿತ್ತು. ಲೇಖನ ಚುಟುಕಗಳನ್ನು ಬರೆಯುವುದರ ಜೊತೆಗೆ ಈ ಕಲ್ಲಚ್ಚಿನ ಕೆಲಸಕ್ಕೂ ಅನಂತ ಕುಮಾರರು ಸಜ್ಜಾಗಿ ನಿಲ್ಲುತ್ತಿದ್ದರು. ಆಗ ರಾಜ್ಯದ  ಶೈಕ್ಷಣಿಕ ಸ್ಥಿತಿಗತಿಗಳು ಹದಗೆಟ್ಟಿದ್ದವು. ಇದರ ಅವ್ಯವಸ್ಥೆಯ ಕಡೆಗೆ ವಿದ್ಯಾರ್ಥಿಗಳಿಂದ ಮೊದಲುಗೊಂಡು ಸರಕಾರದವರೆಗೆ ಎಲ್ಲರ ಗಮನ ಸೆಳೆಯುವ ಸಲುವಾಗಿ ಕರಾಳಪತ್ರ ಎಂಬ ಸಂಚಿಕೆಯನ್ನು ಹೊರಡಿಸುತ್ತಿದ್ದೆವು. ಈ ಪತ್ರದ ಒಕ್ಕಣೆಯನ್ನು ಹೇಳಿ ಬರೆಸುವವರು ಅನಂತ ಕುಮಾರರೇ. ಬರೆದು ಕೊಳ್ಳುವ ಲಿಪಿಕಾರ ಬೇಳೂರು ಸುದರ್ಶನ. ನಾನು ಸಾಕ್ಷೀಭೂತ. ಎಲ್ಲಿಯೋ ಪದವನ್ನೋ ವಾಕ್ಯವನ್ನೋ ಸರಿಮಾಡಲು ಒಗ್ಗರಣೆ ಹಾಕುವ ಕೆಲಸವಷ್ಟೇ ನನ್ನದು. ಅನಂತಕುಮಾರ ಗಮನಿಸುತ್ತಿದ್ದ ರೀತಿಯ ಪ್ರಕಾರ, ಬರವಣಿಗೆಯ ಸಾಹಿತ್ಯ ಸಮತೂಕ ವಾಗಿರತಕ್ಕದ್ದು. ಎಲ್ಲಿ ಯಾವ ಪದ ಬಳಸಬೇಕು ಎಂಬ ಎಚ್ಚರ ಅವರಲ್ಲಿತ್ತು. ಪದ ಪ್ರಯೋಗ ಎಲ್ಲಿ ಸೌಮ್ಯವಾಗಿರಬೇಕು, ಎಲ್ಲಿ ಡಂಬಿಸುವಂತಿರಬೇಕು, ಎಲ್ಲಿ ಉಗ್ರವಾಗಿರತಕ್ಕದ್ದು ಎಂಬುದನ್ನೆಲ್ಲ ಅವರು ಗಮನಿಸುವವರೇ. ಒಕ್ಕಣೆ ಪತ್ರಿಕೆಯದ್ದಿರಲಿ, ಕರಪತ್ರದ್ದಾಗಿರಲಿ, ಗೋಡೆಗೆ ಅಂಟಿಸುವ ಪೋಸ್ಟರ್ ಇರಲಿ, ಎಲ್ಲದರ ಬರೆಹದ ಹಿನ್ನೆೆಲೆಯಲ್ಲಿ ಅನಂತ
ಕುಮಾರರ ಪ್ರೇರಣೆ ಇದ್ದೇ ಇರುತ್ತಿತ್ತು.

ಕರಪತ್ರ, ಪೋಸ್ಟರುಗಳನ್ನು ಅಂಟಿಸುವ ಜವಾಬ್ದಾರಿಯೂ ನಮ್ಮದೇ. ರಾತ್ರಿಯ ಹೊತ್ತಿನಲ್ಲಿ ಸೈಕಲ್ಲೋ ಲೂನಾ, ಸ್ಕೂಟರೋ ಯಾವುದು ಸಿಕ್ಕರೆ ಅದನ್ನು ಹತ್ತಿಕೊಂಡು ಹೊರಡುತ್ತಿದ್ದೆವು. ಊಟ ತಿಂಡಿಗೆ ಇಂಥದೇ ಬೇಕೆಂಬ ಹಂಬಲವಾಗಲಿ, ಪರಿವೆ
ಯಾಗಲಿ ಇರುತ್ತಿರಲಿಲ್ಲ. ಹಿರಿಯ ನಾಯಕರಾದ ಕೃಷ್ಣ ಭಟ್ಟರು, ದತ್ತಾತ್ರೇಯ ಹೊಸಬಾಳೆಯವರನ್ನೊಳಗೊಂಡಂತೆ ನಾವೆಲ್ಲ ರಸ್ತೆಬದಿಯ ಗಾಡಿಗಳಲ್ಲಿ ಸಿಕ್ಕಿದ್ದನ್ನು ತಿಂದುಕೊಂಡು ಕಾಲದೂಡಿದ್ದುಂಟು. ಆಗ ಮೆಜೆಸ್ಟಿಕ್‌ನಲ್ಲಿ ಬಂಡು ಹೋಟೆಲ್ ಎಂಬ ಹೆಸರಿನ ಉಪಾಹಾರಗೃಹವಿತ್ತು. ಆ ಹೋಟೆಲಿನವನು ಕೊಡುವ ಊಟವೋ ಏನೂ ಸಾಲದು. ಅಂತೂ ಅದನ್ನೇ ತಿಂದುಕೊಂಡಿರಬೇಕಾದ ಸ್ಥಿತಿ. ಆ ಗಾಡಿಗಳವರು, ರಾತ್ರಿ ಹೋಟೆಲಿನವರು ನಮ್ಮ ಹೊಟ್ಟೆ ತುಂಬಿಸದೇ ಇದ್ದರೂ ಒಳ್ಳೆಯ ಸ್ನೇಹಿತರೇ ಆಗಿದ್ದರು.

ಒಬ್ಬ ನಾಯಕರಾಗಿ ಅನಂತಕುಮಾರ್ ಪ್ರವಾಸ ಕೈಗೊಳ್ಳುತ್ತಿದ್ದ ಬಗೆಯೂ ಅತಿ ವಿಶಿಷ್ಟವಾಗಿರುತ್ತಿತ್ತು. ಸಾಮಾನ್ಯವಾಗಿ ಮುಖಂಡರಾದವರು ಜಿಲ್ಲಾಕೇಂದ್ರ ಕ್ಕೋ ತಾಲೂಕು ಕೇಂದ್ರಕ್ಕೋ ಬಂದು ಅಲ್ಲಿ ವಿದ್ಯಾರ್ಥಿ ಕಾರ್ಯಕರ್ತರನ್ನು ಭೇಟಿಯಾಗಿ ಮಾತನಾಡಿಸಿ ಕಳುಹಿಸುವಂತೆ ಅನಂತಕುಮಾರ್ ಕೆಲಸಮುಗಿಸಿ ಹೋಗುವವರಲ್ಲ. ಕಾರ್ಯಕರ್ತರು ಎಲ್ಲಿ ಯಾವ ಹಳ್ಳಿಯಲ್ಲಿ ವಾಸವಾಗಿರುತ್ತಾರೋ ಅಲ್ಲಿಗೇ ಸೀದಾ ಹೋಗಿ ಮಾತನಾಡಿಸುವಂಥವರು ಅವರು. ನಾನು ಆಗ ಉತ್ತರಕನ್ನಡ ಜಿಲ್ಲೆಯ ಪ್ರಮುಖನಾಗಿ ಎರಡು ವರ್ಷ ಕಾರ್ಯನಿರ್ವಹಿಸುತ್ತಿದ್ದ ಕಾಲ.

ನಮ್ಮ ಜಿಲ್ಲೆಯಲ್ಲಿ ಹುಡುಗರೆಲ್ಲ ಬಹುತೇಕ ಹಳ್ಳಿಯವರು. ಕೆಲಸಕ್ಕೋ ಕಾಲೇಜಿಗೋ ಮಾತ್ರವೇ ಪೇಟೆಯತ್ತ ಸುಳಿಯುವವರು. ಅನಂತಕುಮಾರ್ ಬಂದಾಗಲೆಲ್ಲ ಅವರೊಡನೆ ಜಿಲ್ಲೆಯ ಹಳ್ಳಿಹಳ್ಳಿಗೂ ಹೋಗುತ್ತಿದ್ದೆ. ಸಿಕ್ಕಿದ ವಾಹನ ಹತ್ತಿಕೊಂಡೋ ಸೈಕಲ್ಲೋ ಬೈಕೋ ಏರಿಕೊಂಡೋ ಮೂಲೆಮೂಲೆಯ ಹಳ್ಳಿಗೆ ಹೋಗುತ್ತಿದ್ದೆವು. ಕಾರ್ಯಕರ್ತನಿಗೂ ಆತನ ಮನೆಯವರಿಗೂ ನಮ್ಮನ್ನು ನೋಡಿ ಅಚ್ಚರಿ, ಸಂತೋಷ . ಆ ಕಾರ್ಯಕರ್ತನಿಗೆ ಮುಖಂಡರು ತಾನು ಇರುವಲ್ಲಿಗೇ ಬಂದರಲ್ಲ ಎಂಬ ಸಂತಸವಾದರೆ, ನಮಗೆ ಕಾರ್ಯಕರ್ತನನ್ನು ಕೆಲಸಕ್ಕೆ ತೊಡಗಿಸುವುದರ ಬಗೆಗೆ ಖಚಿತವಾದ ಸ್ಪಷ್ಟತೆ ಲಭ್ಯವಾಗುತ್ತದೆ
ಎಂಬುದು ಅನಂತಕುಮಾರರ ಆಲೋಚನೆ.

ಮುಖಂಡನೆಂದರೆ ಎಲ್ಲೋ ಕೇಂದ್ರಸ್ಥಾನಕ್ಕೆ ಬಂದು ಅವರಿವರನ್ನು ಮಾತನಾಡಿಸಿ ಬೈಠಕ್ ನಡೆಸಿ ಕೆಲಸ ಮುಗಿಸಿ ಹೊರಟುಬಿಡುವುದಲ್ಲ. ಸಂಘಟನೆಯ ಕಾರ್ಯದಲ್ಲಿ ಕಾರ್ಯಕರ್ತರನ್ನು ಆತ್ಮೀಯವಾಗಿ ಒಳಪಡಿಸಿ ಕೊಳ್ಳುವ ಕಲೆ ಅನಂತಕುಮಾರರಿಗೆ ಕರಗತವಾಗಿತ್ತು. ಕಾರ್ಯಕರ್ತರ ವಿಶ್ವಾಸವನ್ನು ಗಳಿಸುವುದಷ್ಟೇ ಅಲ್ಲ, ಅವರ ಮನೆಯ ಸದಸ್ಯರಲ್ಲೇ ಒಬ್ಬರಂತೆ ಆತ್ಮೀಯರಾಗುವ ಕಲೆ ಅವರಿಗೆ ಸಿದ್ಧಿಸಿತ್ತು. ಅದರಲ್ಲೂ ಮನೆಯ ಹಿರಿಯರ ಪ್ರೀತಿ ವಿಶ್ವಾಸಗಳಿಗೆ ಅವರು ಪಾತ್ರರಾಗುತ್ತಿದ್ದ ಪರಿ ಅನನ್ಯವೇ ಸರಿ. ನಮ್ಮ ಮನೆಗೆ ಬಂದಾಗಲೆಲ್ಲ ನಮ್ಮ ತಂದೆಯವರೊಡನೆ ಕುಳಿತು ಕವಳ ಮೆಲ್ಲುತ್ತ ರಾತ್ರಿ ಒಂದು ಗಂಟೆಯವರೆಗೂ ಅನಂತಕುಮಾರ್ ಹರಟೆ ಹೊಡೆದದ್ದೂ ಹೊಡೆದದ್ದೇ.

ವಯಸ್ಸಿನ ಅಂತರ ಅಲ್ಲಿ ಗೋಚರವಾಗುತ್ತಲೇ ಇರಲಿಲ್ಲ. ಅಷ್ಟು ಹೊತ್ತು ಮಾತುಕತೆಗಾದರೂ ವಿಷಯ ಎಲ್ಲಿರುತ್ತಿತ್ತೋ ಏನೋ. ಸಮಾನವಯಸ್ಕರಲ್ಲದವರೊಡನೆಯೂ ಅನಂತಕುಮಾರ್ ಬೆಳೆಸಿಕೊಳ್ಳು ತ್ತಿದ ಸ್ನೇಹ ಅಚ್ಚರಿ ಮೂಡಿಸುವಂಥದ್ದೇ ಸರಿ. ಆಯಾ
ಕಾರ್ಯಕರ್ತರ ಮನೆಯ ಸ್ಥಿತಿಗತಿ, ಅವರ ಸಂಸ್ಕೃತಿ, ಆಚಾರವಿಚಾರಗಳೆಲ್ಲ ಅನಂತ ಕುಮಾರರಿಗೆ ಅಧ್ಯಯನದ, ಆಸಕ್ತಿಯ ವಸ್ತುವಿಷಯಗಳೂ ಆಗಿರುತ್ತಿದ್ದವು.

ಸಮಯ ಸಂದರ್ಭಗಳಿಗೆ ತಕ್ಕಂತೆ ತಮ್ಮ ತಿಳಿವಳಿಕೆಯನ್ನು ಅವರು ಬಳಸಿಕೊಳ್ಳುವುದಕ್ಕೂ ಅವಕಾಶವಾಗುತ್ತಿತ್ತು. ಹವ್ಯಕರ ಸಮ್ಮೇಳನದಲ್ಲಿ ಅವರು ಅಪ್ಪೆಹುಳಿಯನ್ನು ನೆನಪಿಸಿಕೊಳ್ಳುವವರೇ. ಹೀಗೆ ಹೋದಲ್ಲೆಲ್ಲ ಮೇಲುನೋಟದ ಬಾಯಿ ಮಾತಿನ ಉಪಚಾರಕ್ಕ ಸೀಮಿತವಾಗಿರದೆ, ತಳಮಟ್ಟದವರೆಗೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದುದರಿಂದಲೇ ಎಲ್ಲರಿಗೂ ಅನಂತಕುಮಾರ್ ನಮ್ಮವರು ಎಂಬ ಭಾವನೆ ಮೂಡಲು ಸಾಧ್ಯವಾಯಿತು. ದೇಶದ ಉದ್ದಗಲಗಳಲ್ಲಿ ಅನಂತಕುಮಾರ್ ಎಲ್ಲರ ನಾಯಕರೆನಿಸಿಕೊಂಡದ್ದು ಹೀಗೆಯೇ.

ಇಲ್ಲಿಯವರೆಗೂ ನಾನು ಅನಂತಕುಮಾರ್ ವಿದ್ಯಾರ್ಥಿಪರಿಷತ್ತಿನ ನಾಯಕರಾಗಿದ್ದ ಕಾಲದ ಸಂದರ್ಭಗಳನ್ನು ಹೇಳಿದೆ. ಅನಂತಕುಮಾರ್ ಕೇಂದ್ರ ಮಂತ್ರಿಗಳಾಗಿದ್ದ ಕಾಲದ ಇನ್ನೊಂದು ಸಂದರ್ಭ ನನಗೆ ನೆನಪಾಗುತ್ತಿದೆ. ತುರ್ತುಪರಿಸ್ಥಿತಿಯಲ್ಲಿ
ಹೋರಾಟ ಮಾಡಿದವರ ಸಭೆಯೊಂದನ್ನು ಮಧ್ಯಪ್ರದೇಶದಲ್ಲಿ ಆಯೋಜಿಸಲಾಗಿತ್ತು. ಅದಕ್ಕೆ ಅನಂತಕುಮಾರರನ್ನೂ ಆಹ್ವಾನಿಸಲಾಗಿತ್ತು.

ಅವರೊಡನೆ ನಾನೂ ಹೋಗಿದ್ದೆೆ. ಇಡೀ ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಜನರು ಅನಂತಕುಮಾರ್ ವಿಮಾನ ನಿಲ್ದಾಣದಲ್ಲಿ ಇಳಿದಾಗಿನಿಂದ ದಿನವಿಡೀ ಅವರೊಡನೆ ನಡೆದುಕೊಂಡ ರೀತಿ, ತೋರಿದ ಪ್ರೀತ್ಯಾದರಗಳು ನನಗೆ ಅಚ್ಚರಿ ಮೂಡಿಸಿದವು.
ಉಳಿದವರಿರಲಿ, ಸ್ವತಃ ಮುಖ್ಯಮಂತ್ರಿಯವರು ತಮ್ಮ ಖಾಸಗಿ ಕೊಠಡಿಯಲ್ಲಿ ಅನಂತಕುಮಾರರೊಡನೆ ಮಾತನಾಡುವಾಗಲೂ ನಿಂತೇ ಇದ್ದರೇ ಹೊರತು ಕುಳಿತು ಮಾತನಾಡುವುದಕ್ಕೂ ಸಂಕೋಚ ಪಡುವಷ್ಟು ಗೌರವಯುತವಾಗಿ ವರ್ತಿಸುತ್ತಿದ್ದರು.

ಆಮೇಲೆ ನನ್ನೊಡನೆ ಮಾತನಾಡುವಾಗ, ಅನಂತಕುಮಾರರ ಕಾರ್ಯಶೀಲತೆ, ಪ್ರಯತ್ನಗಳಿಂದಲೇ ತಮಗೆ ಮುಖ್ಯಮಂತ್ರಿ ಯಾಗಲು ಸಾಧ್ಯವಾಯಿತೆಂದು ಧನ್ಯತಾಪೂರ್ವಕ ಹೇಳಿಕೊಂಡರು. ಉಳಿದ ಕಾರ್ಯಕರ್ತರು, ಶಾಸಕರ ವಿಷಯ ಹೇಳುವುದೇ ಬೇಡ. ಅನಂತಕುಮಾರ್ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರನ್ನು ಹೇಗೆ ಸಂಘಟನೆಯಲ್ಲಿ ತೊಡಗಿಸುತ್ತಿದ್ದರೋ ಅದೇ ತತ್ಪರತೆಯಿಂದ ಬಿಜೆಪಿ ಕಾರ್ಯಕರ್ತರನ್ನೂ ಪಕ್ಷದ ಕಾರ್ಯದಲ್ಲಿ ತೊಡಗಿಸುತ್ತಿದ್ದರು.

ಕರ್ನಾಟಕದಲ್ಲೇನೋ ತಮ್ಮವ ರನ್ನು ನೆನಪಿಟ್ಟುಕೊಂಡು ಮಾತನಾಡಿಸುತ್ತಿದ್ದುದು ಸರಿಯೇ. ದೂರದ ಮಧ್ಯಪ್ರದೇಶದಲ್ಲಿ ತಾವು
ಚುನಾವಣಾ ಸಂದರ್ಭದಲ್ಲಿ ಮೇಲ್ವಿಚಾರಕರಾಗಿ ಹೋಗಿದ್ದಾಾಗ ಕಂಡು ಮಾತನಾಡಿಸಿದವರನ್ನೂ ಅವರು ಹೆಸರು, ಊರು ಸಹಿತ ನೆನಪಿಟ್ಟುಕೊಂಡಿದ್ದುದು ಬೆರಗುಗೊಳಿಸುವಂತಹದ್ದೇ ನಿಜ. ಪಾರ್ಟಿಯ ಟಿಕೆಟ್ ಪಡೆದು ಗೆದ್ದವನನ್ನು ಹೆಸರು ಹಿಡಿದು ಮಾತನಾಡಿಸುವುದಿರಲಿ, ಅವನಿಗೆ ಪ್ರತಿಸ್ಪರ್ಧಿಯಾಗಿ ಸ್ಥಾನಾಕಾಂಕ್ಷಿಯಾಗಿದ್ದವನ ಹೆಸರನ್ನೂ ನೆನಪಿಸಿಕೊಂಡು ಅವನು ಹೇಗಿದಾನೆ, ಏನು ಮಾಡುತ್ತಿದ್ದಾನೆ ಎಂದು ವಿಚಾರಿಸುವುದೆಂದರೆ ಸಾಮಾನ್ಯವೇ? ಮಧ್ಯಪ್ರದೇಶದಂತೆಯೇ ಬಿಹಾರ, ದಿಲ್ಲಿ ಮೊದಲಾದ ರಾಜ್ಯಗಳಲ್ಲೂ ಅವರು ಪಕ್ಷದ ಉಸ್ತುವಾರಿಯಾಗಿ ಕೆಲಸಮಾಡಿದ್ದಾರೆ. ಅಲ್ಲೂ ಅಸಂಖ್ಯ ಕಾರ್ಯಕರ್ತರು, ಅಭ್ಯರ್ಥಿಗಳು, ಶಾಸಕರು ಅನಂತಕುಮಾರರನ್ನು ತಮ್ಮವರೆಂದು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಿರುವುದರಲ್ಲಿ ಅತಿಶಯೋಕ್ತಿಯಿಲ್ಲ. ಅನಂತಕುಮಾರರ ಈ ಮಹತ್ತರ ಗುಣವೇ ಅವರು ರಾಷ್ಟ್ರನಾಯಕರಾಗಿ ಬೆಳೆಯಲು ಕಾರಣವಾಯಿತು. ಅದಕ್ಕಿಂತ ಮುಖ್ಯವಾಗಿ ದೇಶದೆಲ್ಲೆಡೆ ಅನಂತಕುಮಾರರು ಹೀಗೆ ನಾಯಕರಾಗಿ ಬೆಳೆಯಬಲ್ಲ ಸಾಮರ್ಥ್ಯವಿರುವವರನ್ನು ಗುರುತಿಸಿ ಅವರು ನಾಯಕತ್ವ ಬೆಳೆಸಿಕೊಳ್ಳಲು ಪ್ರೇರಕ ಶಕ್ತಿಯಾದರು ಎಂಬುದು ಗಮನಾರ್ಹ.

ಈಗ ನಾನೇ ವಿಧಾನಸಭೆಯ ಸಭಾಧ್ಯಕ್ಷನಾಗಿ ಇಲ್ಲಿ ಕುಳಿತುಕೊಳ್ಳುವುದಕ್ಕೆ ಅನಂತ ಕುಮಾರರ ಕೊಡುಗೆ ಎಷ್ಟಿದೆಯೆಂದು ಏನು ಹೇಳಲಿ? ನನ್ನಂತೆ ಇಡೀ ದೇಶದಲ್ಲಿ ಅವರಿಂದ ಪ್ರೇರಿತರಾಗಿ, ಕಲಿತು, ಪ್ರಭಾವಿತರಾಗಿ ಮುಂದೆ ಬಂದವರು ಅದೆಷ್ಟು ಜನರಿರಬಹುದು!