Thursday, 28th November 2024

S Srinivas Column: ಮೃದು ರಾಜತಾಂತ್ರಿಕತೆಯ ಮೂಲಕ ಕನ್ನಡ ಕಲಿಸಿ

ಕಸ್ತೂರಿಕಂಪು

ಎಸ್.ಶ್ರೀನಿವಾಸ್

ಇತರ ರಾಷ್ಟ್ರಗಳ ಮೇಲೆ ಒತ್ತಾಯಪೂರ್ವಕವಾಗಿ ಅಧಿಕಾರ ಚಲಾಯಿಸುವ ಬದಲು, ಮನವೊಲಿಕೆಯಿಂದ ಪ್ರಭಾವ ಬೀರುವ ತಂತ್ರವನ್ನು ವಿದೇಶಾಂಗ ನೀತಿಯಲ್ಲಿ ‘ಮೃದು ರಾಜತಾಂತ್ರಿಕತೆ’ ಎನ್ನಲಾಗುವುದು. ಕರ್ನಾಟಕ ಸರಕಾರವೂ ಅದೇ ಮೃದುಧೋರಣೆಯನ್ನು ಅನುಸರಿಸಿ, ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ಒಂದು ಪ್ರಯತ್ನ ಮಾಡಬಹುದು.

ಪಾರ್ಸಿ ಜನಾಂಗದವರು ಕ್ರಿ.ಶ. ೭ನೇ ಶತಮಾನದಲ್ಲಿ ಗುಜರಾತಿನ ಸಂಜನ್ ಎಂಬ ಪ್ರದೇಶಕ್ಕೆ ವಲಸೆ ಬಂದು, ಆಶ್ರಯ ನೀಡುವಂತೆ ಅಲ್ಲಿನ ರಾಜ ಜಯದೇವನನ್ನು ಪ್ರಾರ್ಥಿಸಿದರು. ಅವರ ಬೇಡಿಕೆಗೆ ಸ್ಪಂದಿಸಿದ ರಾಜ, “ಈ ನೆಲದಲ್ಲಿ ಬೀಡುಬಿಡ ಬೇಕೆಂದರೆ ಒಂದಷ್ಟು ಷರತ್ತುಗಳಿಗೆ
ಒಪ್ಪಬೇಕು” ಎಂದ. ಆ ಷರತ್ತುಗಳು ಹೀಗಿದ್ದವು: ಪಾರ್ಸಿಗಳು ತಮ್ಮ ಭಾಷೆಯನ್ನು ಮನೆಯಲ್ಲಷ್ಟೇ ಇಟ್ಟುಕೊಂಡು, ವ್ಯವಹಾರದಲ್ಲಿ ಗುಜ
ರಾತಿ ಭಾಷೆಯನ್ನೇ ಬಳಸಬೇಕು. ಪಾರ್ಸಿ ಮಹಿಳೆಯರು ಗುಜರಾತಿ ಶೈಲಿಯ ಉಡುಪುಗಳನ್ನೇ ಧರಿಸಬೇಕು ಮತ್ತು ಪುರುಷರು ತಮ್ಮ ಆಯುಧಗಳನ್ನು ರಾಜ ಸಂಸ್ಥಾನಕ್ಕೆ ಒಪ್ಪಿಸ ಬೇಕು.

ಪಾರ್ಸಿ ಜನಾಂಗದ ಮದುವೆ ಸಮಾರಂಭಗಳನ್ನು ರಾತ್ರಿಯ ಸಮಯದಲ್ಲಿ ಮಾತ್ರವೇ ಇಟ್ಟುಕೊಳ್ಳ ಬೇಕು (ಹಗಲಿನಲ್ಲಿ ವಿದೇಶಿಯರು
ಮದುವೆಯ ಪ್ರಯುಕ್ತ ದೊಡ್ಡ ಮಟ್ಟದಲ್ಲಿ ಮೆರವಣಿಗೆ ಹೋಗುವುದನ್ನು ನೋಡಿ ಸ್ಥಳೀಯರು ಆತಂಕ ಗೊಂಡು, ಗಲಭೆಯಾಗುವ ಸಾಧ್ಯತೆ ಹೆಚ್ಚು ಎಂಬ ಕಾರಣಕ್ಕಾಗಿ). ಈ ಎಲ್ಲ ಷರತ್ತಿಗೆ ಒಪ್ಪಿದ ನಂತರವಷ್ಟೇ ಪಾರ್ಸಿಗಳಿಗೆ ರಾಜನು ಗುಜರಾತಿನಲ್ಲಿ ಆಶ್ರಯ ನೀಡಿದ. ಅಂದು ಆ ರಾಜನು ವಿಽಸಿದ್ದ ಷರತ್ತುಗಳಿಗೆ ಪಾರ್ಸಿಗಳು ಈಗಲೂ ಬದ್ಧರಾಗಿರುವುದರಿಂದಲೇ ಅವರು ಭಾರತೀಯರೊಂದಿಗೆ ಸಂಪೂರ್ಣ ಸಾಮರಸ್ಯದಿಂದ ಬದುಕಲು ಸಾಧ್ಯವಾಗಿದೆ. ಪ್ರಭುತ್ವ ಅಥವಾ ಸರಕಾರ ಮನಸ್ಸು ಮಾಡಿದರೆ, ಹೇಗೆ ತನ್ನ ನೆಲದ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ
ಬೆಳೆಸಲು ಸಾಧ್ಯ ಎಂಬುದಕ್ಕೆ ಈ ಐತಿಹಾಸಿಕ ನಿದರ್ಶನವೇ ಸಾಕ್ಷಿ.

ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ರಾಜನು ಪಾರ್ಸಿಗಳಿಗೆ ಷರತ್ತು ಹಾಕಿದ್ದು ಭಾಷೆಯ ವಿಷಯದಲ್ಲೇ ಹೊರತು, ಧರ್ಮಕ್ಕೆ ಸಂಬಂಧಿಸಿ ಅಲ್ಲ. ಅವರು ಮನೆಯ ಹೊರಗಡೆ ಪಾರ್ಸಿ ಭಾಷೆಯನ್ನು ತ್ಯಜಿಸಬೇಕು ಎಂದಷ್ಟೇ ರಾಜ ಷರತ್ತು ವಿಧಿಸಿದ್ದು. ಭಾಷೆಯು ಧರ್ಮಕ್ಕಿಂತ ಹೆಚ್ಚು ಭಾವನಾತ್ಮಕವಾದ ವಿಷಯ. ಒಂದೇ ಧರ್ಮದವರಾಗಿದ್ದರೂ, ಉರ್ದು ಭಾಷೆಯನ್ನು ತಮ್ಮ ಮೇಲೆ ಹೇರುತ್ತಿದ್ದಾರೆ ಎಂಬ ಕಾರಣಕ್ಕಾಗಿಯೇ ಪೂರ್ವ ಪಾಕಿಸ್ತಾನವು (ಇವತ್ತಿನ ಬಾಂಗ್ಲಾದೇಶ) ಪಶ್ಚಿಮ ಪಾಕಿಸ್ತಾನದಿಂದ ಪ್ರತ್ಯೇಕ ವಾದದ್ದು. ಆದರೆ, ಪ್ರಸ್ತುತ ಕನ್ನಡ ಚಳವಳಿಗಾರರು ಕನ್ನಡ
ಪರ ವಾದ ಯಾವುದೇ ಅಭಿಯಾನವನ್ನು ಕೈಗೆತ್ತಿಕೊಂಡರೂ, ಅವರ ಮೇಲೆ ಪ್ರಕರಣಗಳನ್ನು ದಾಖಲಿಸಿ ಕೋರ್ಟಿಗೆ ಅಲೆಯುವಂತೆ ಮಾಡು
ವುದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ.

ಹಾಗೆಯೇ ಸರಕಾರವು ಕನ್ನಡ ಪರವಾದ ಯಾವುದೇ ವಿಧೇಯಕವನ್ನು ಜಾರಿಗೊಳಿಸಿದರೂ, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ತಡೆಯಾಜ್ಞೆ ಯನ್ನು ತರುವ ಪ್ರಸಂಗಗಳು ಸಾಮಾನ್ಯವಾಗಿವೆ. ಇಂಥ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಸ್ಥಾನಮಾನ ಪ್ರಾಪ್ತ ವಾಗುವುದು ಹೇಗೆ? ಇತರ ರಾಷ್ಟ್ರಗಳ ಮೇಲೆ ಬಲಪ್ರಯೋಗದಿಂದ ಅಥವಾ ಒತ್ತಾಯಪೂರ್ವಕವಾಗಿ ಅಧಿಕಾರ ಚಲಾಯಿಸುವ ಬದಲು, ಮನವೊಲಿಕೆಯಿಂದ ಪ್ರಭಾವ ಬೀರುವ ತಂತ್ರ ವನ್ನು ವಿದೇಶಾಂಗ ನೀತಿಯಲ್ಲಿ ‘ಮೃದುರಾಜತಾಂತ್ರಿಕತೆ’ (Soft Diplomacy) ಎಂದು ಕರೆಯಲಾಗುವುದು. ಅದೇ ಮಾದರಿಯಲ್ಲಿ ನಮ್ಮ ಕರ್ನಾಟಕ ಸರಕಾರವೂ ಮೃದುಧೋರಣೆಯನ್ನು ಅನುಸರಿಸಿ, ಕನ್ನಡೇತರರಿಗೆ ಕನ್ನಡ ಭಾಷೆಯನ್ನು ಕಲಿಸುವ ಒಂದು ಪ್ರಯತ್ನ ಮಾಡಬಹುದು.

ಅಂಥ ಕೆಲವು ಸಾಧ್ಯತೆಗಳನ್ನು ನೋಡೋಣ: ಪ್ರತಿವರ್ಷ ರಾಷ್ಟ್ರೀಯ ಮಟ್ಟದ ಗಣರಾಜ್ಯೋತ್ಸವದ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ಅನ್ಯ
ರಾಷ್ಟ್ರದ ಪ್ರಧಾನಮಂತ್ರಿ ಅಥವಾ ರಾಷ್ಟ್ರಪತಿಯನ್ನು ಅತಿಥಿಯಾಗಿ ಆಮಂತ್ರಿಸುವುದು ವಾಡಿಕೆ. ಇದೇ ರೀತಿಯಲ್ಲಿ, ಪ್ರತಿವರ್ಷದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಮ್ಮ ಮುಖ್ಯಮಂತ್ರಿಯವರು ಅನ್ಯರಾಜ್ಯದ ಮುಖ್ಯಮಂತ್ರಿ ಯನ್ನು ಅತಿಥಿಯಾಗಿ ಆಮಂತ್ರಿಸಿ, ಅವರಿಗೆ ಗೌರವ ಸಲ್ಲಿಸಿ, ತನ್ಮೂಲಕ “ಕರ್ನಾಟಕದಲ್ಲಿ ನೆಲೆಸಿರುವ ಆ ರಾಜ್ಯದ ನಿವಾಸಿಗಳು ಕನ್ನಡವನ್ನು ಕಲಿತು ಕನ್ನಡಿಗರೊಂದಿಗೆ ಸೌಹಾರ್ದ ಭಾವದಿಂದ ಬಾಳಬೇಕು” ಎಂಬ ಸಂದೇಶವನ್ನು ರವಾನಿಸಬಹುದು.

ಉದಾಹರಣೆಗೆ ತಮಿಳುನಾಡಿನ ಡಿಎಂಕೆ ಪಕ್ಷದೊಂದಿಗೆ ಕಾಂಗ್ರೆಸ್ ರಾಜಕೀಯ ಮೈತ್ರಿಯನ್ನು ಮಾಡಿಕೊಂಡಿರುವುದರಿಂದ, ಪ್ರಸ್ತುತ ಕರ್ನಾಟಕದಲ್ಲಿ ಸರಕಾರವನ್ನು ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ಡಿಎಂಕೆಯ ಮುಖ್ಯಸ್ಥ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್‌ರನ್ನು ಆಮಂತ್ರಿಸಿ, ಇಂಥ ‘ಸೌಹಾರ್ದದ ಸಂದೇಶ’ ವನ್ನು ಅವರಿಂದ ಕೊಡಿಸಬಹುದು. ಹಾಗೆಯೇ ಬಿಜೆಪಿಯು ಆಡಳಿತ ಪಕ್ಷವಾಗಿ ದ್ದಾಗ, ತಮ್ಮ ಪಕ್ಷದ ಅಥವಾ ತಮ್ಮ ಮೈತ್ರಿಕೂಟದ ಪಕ್ಷದ ಯಾವುದೇ ಮುಖ್ಯಮಂತ್ರಿ ಯನ್ನು ಕರ್ನಾಟಕಕ್ಕೆ ಕರೆಸಿ ಹೀಗೆ ಹೇಳಿಕೆ ಕೊಡಿಸಬಹುದು.

ನಮ್ಮ ರಾಜ್ಯದ ಸಂಸದರು ಹಿಂದಿಯೇತರ ಭಾಷೆಗಳ ರಾಜ್ಯದ ಸಂಸದರೊಂದಿಗೆ ಒಗ್ಗೂಡಿ, ದೇಶದ ಐಕ್ಯತೆ ಹಾಗೂ ಸಾಮರಸ್ಯದ ದೃಷ್ಟಿಯಿಂದ
ಹಿಂದಿಯೇತರ ರಾಜ್ಯದ ಭಾಷೆಯನ್ನು ಅಲ್ಲಿ ನೆಲೆಸಿ ರುವ ಎಲ್ಲ ನಿವಾಸಿ ಗಳೂ ಕಡ್ಡಾಯವಾಗಿ ಕಲಿಯಬೇಕು ಎಂಬ ವಿಧಿ/ ನಿಯಮವು ಸಂವಿಧಾನದಲ್ಲಿ ಅಳವಡಿಸಲ್ಪಡುವಂತಾಗಲು ಸಂಸತ್‌ನಲ್ಲಿ ಪ್ರಸ್ತಾಪಿಸಬೇಕು ಹಾಗೂ ಅದು ಕಾರ್ಯ ಗತವಾಗುವಂತೆ ನೋಡಿಕೊಳ್ಳಬೇಕು. ಸಂವಿಧಾನದಲ್ಲೇ ಹೀಗೆ ಅಳವಡಿಕೆಯಾದರೆ ಅದರ ವಿರುದ್ಧ ಯಾರೂ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವುದಿಲ್ಲ. ಬೆಂಗಳೂರು ನಗರದ ವ್ಯಾಪ್ತಿಗೆ ಬರುವ ಎಲ್ಲ ಶಾಸಕರೂ ತಿಂಗಳಿಗೆ ಒಮ್ಮೆಯಾದರೂ ತಮ್ಮ ಕ್ಷೇತ್ರದಲ್ಲಿ ಸಂಚರಿಸಿ, ಬ್ಯಾಂಕ್, ಹೋಟೆಲ್, ವಾಣಿಜ್ಯ ಮಳಿಗೆ/ಮಾಲ್‌ಗಳಿಗೆ ಭೇಟಿಯಿತ್ತು, ಅಲ್ಲಿ ಕನ್ನಡಿಗರಿಗೆ ಕನ್ನಡದಲ್ಲಿ ಸೇವೆ ಒದಗಿಸುತ್ತಿದ್ದಾರೋ ಇಲ್ಲವೋ ಎಂದು ತಪಾಸಣೆ ಮಾಡಬೇಕು. ಅದು ನಡೆಯು ತ್ತಿಲ್ಲದ ಪಕ್ಷದಲ್ಲಿ ಆಯಾ ಸಂಸ್ಥೆಯ ಮೇಲಧಿಕಾರಿಗಳೊಂದಿಗೆ ಶಾಸಕರು ಸಮಾಲೋಚನೆ ನಡೆಸಿ, ಕನ್ನಡದಲ್ಲಿ ಸೇವೆ ಒದಗಿಸುವಂತೆ ಸೂಚನೆ ಕೊಡ ಬಹುದು. ಇದೇ ಕೆಲಸವನ್ನು ಕನ್ನಡ ಚಳವಳಿಗಾರರು ಮಾಡಿದರೆ, ಆಯಾ ಸಂಸ್ಥೆಯ ವ್ಯವಸ್ಥಾಪಕರು ಪೊಲೀಸ ರನ್ನು ಕರೆಸಿ, “ನಾವು
ಕೆಲಸ ಮಾಡುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ” ಎಂದು ದೂರುಕೊಡುವುದಿದೆ; ಆದರೆ ಶಾಸಕರೇ ಈ ಕ್ರಮಕ್ಕೆ ಮುಂದಾದರೆ ಮರ್ಯಾದೆಯಿಂದ
ಅವರ ಮಾತನ್ನು ಆಲಿಸಿ ಅವರ ಸೂಚನೆಗೆ ಬೆಲೆ ಕೊಡುವ ಸಾಧ್ಯತೆ ಹೆಚ್ಚು.

ಕನ್ನಡ ಚಲನಚಿತ್ರಗಳಲ್ಲೂ ನಟಿಸುತ್ತಿರುವ ಅಥವಾ ಬೆಂಗಳೂರಿನಲ್ಲೇ ನೆಲೆಸಿರುವ ಅನೇಕ ಪರ ಭಾಷಾ ನಟ-ನಟಿಯರಿದ್ದಾರೆ. ಅವರ ಭಾಷೆ
ಯನ್ನು ಮಾತನಾಡುವ ಜನರಿಗೆ ಕನ್ನಡವನ್ನು ಕಲಿಯುವಂತೆ ಪ್ರೇರೇ ಪಿಸಲು ಇಂಥ ನಟ- ನಟಿಯರನ್ನು (ಸಂಭಾವನೆ ಕೊಟ್ಟು) ಸರಕಾರವು
ಕನ್ನಡದ ರಾಯಭಾರಿಗಳಾಗಿ ನೇಮಿಸಬಹುದು.

ಬೆಂಗಳೂರಿನಲ್ಲಿ ನೆಲೆಸಿರುವ ವಿವಿಧ ಭಾಷಿಕರ ಸಂಘಗಳ ಪದಾಽಕಾರಿಗಳನ್ನು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮುಖ್ಯಮಂತ್ರಿಗಳ ಕಚೇರಿ
ಯಿಂದ ಚಹಾ ಕೂಟಕ್ಕೆ ಆಮಂತ್ರಿಸಿ, ಅವರ ಕುಶಲೋಪರಿ ವಿಚಾರಿಸಿ, ಕನ್ನಡ ಭಾಷೆ ಕಲಿಯುವಂತೆ ಮತ್ತು ಮಕ್ಕಳಿಗೂ ಕಲಿಸು ವಂತೆ ಅವರನ್ನು ಪ್ರೇರೇಪಿಸಬಹುದು. ವಲಸೆ ಬಂದ ನಾಡಿನಲ್ಲಿ ತಮಗೆ ಇಂಥ ಗೌರವ ಸಿಕ್ಕಿದ್ದು ಕಂಡು ಪರಭಾಷಿಕರು ಈ ನಿಟ್ಟಿನಲ್ಲಿ ಒಲವು ತೋರುವ ಸಾಧ್ಯತೆ ಹೆಚ್ಚಾಗುತ್ತದೆ. ಇದೇ ರೀತಿಯಲ್ಲಿ, ಸ್ಟಾರ್ಟ್‌ಅಪ್ ಕಂಪನಿಗಳ ಮುಖ್ಯಸ್ಥರು, ಬ್ಯಾಂಕುಗಳ ಹಿರಿಯ ಅಧಿಕಾರಿಗಳು ಮುಂತಾದ ವರನ್ನು ಆಮಂತ್ರಿಸಿ ಕನ್ನಡದಲ್ಲಿ ಸೇವೆ ಕೊಡುವ ಬಗ್ಗೆ ಮನವರಿಕೆ ಮಾಡಿಕೊಡಬಹುದು.

ಕರ್ನಾಟಕ ಸರಕಾರ ದಲ್ಲಿ ಕೆಲಸ ಮಾಡಿ ನಿವೃತ್ತರಾದ ಅನೇಕ ಕನ್ನಡೇತರ ಐಎಎಸ್, ಐಪಿಎಸ್ ಅಧಿಕಾರಿಗಳನ್ನು, ಅವರವರ ಭಾಷಿಕ
ರಿಗೆ ಮತ್ತು ಅವರ ಮಕ್ಕಳಿಗೆ ಕನ್ನಡ ಕಲಿಸಲು ‘ಇನ್ ಫ್ಲುಯೆನ್ಸರ್’ ಅಥವಾ ‘ಪ್ರಭಾವ ಬೀರಬಲ್ಲ ವ್ಯಕ್ತಿ’ ಯಾಗಿ ಕೆಲಸ ಮಾಡುವಂತೆ ಸರಕಾರವು ಮನವಿ ಮಾಡಿಕೊಳ್ಳಬಹುದು.

ಎಲ್ಲಕ್ಕಿಂತ ಹೆಚ್ಚಾಗಿ, ಕನ್ನಡೇತರರು ಸುಲಭವಾಗಿ ಕನ್ನಡ ಕಲಿಯುವಂತಾಗುವ ಪಠ್ಯಕ್ರಮವನ್ನು ರೂಪಿ ಸಬೇಕು. ‘ಸಂಸ್ಕೃತ ಭಾರತಿ’ ಎಂಬ
ಸಂಸ್ಥೆಯು ಕೇವಲ 10 ದಿನಗಳಲ್ಲಿ ಸಂಸ್ಕೃತವನ್ನು ಮಾತನಾಡಲು ಕಲಿಸಿಕೊಡುತ್ತದೆ. ಅದೇ ಮಾದರಿ ಯಲ್ಲಿ ನಾವೂ ಕನ್ನಡವನ್ನು ಕಲಿಸಲು ಪ್ರಯತ್ನಿಸಬೇಕು. ಸಾಮಾನ್ಯ ವಾಗಿ ಮಕ್ಕಳಿಗೆ ಭಾಷೆಯನ್ನು ಕಲಿಸುವಾಗ ಅಕ್ಷರಾಭ್ಯಾಸ ಮಾಡಿಸುತ್ತೇವೆ. ದೊಡ್ಡವರಿಗೆ, ವಿಶೇಷವಾಗಿ ಕನ್ನಡೇತರರಿಗೆ ಅದೇ ಕ್ರಮವನ್ನು ಅನುಸರಿಸುವುದು ಅನುಚಿತ ಮತ್ತು ಇದರಿಂದಾಗಿ ಅವರು ಬೇಸರ ಗೊಂಡು ಮಧ್ಯದಲ್ಲೇ ಕಲಿಕೆಯಿಂದ ಹಿಂದೆ ಸರಿಯ ಬಹುದು. ಅದಲ್ಲದೆ, ಪ್ರಸ್ತುತ voice to text ಎಂಬ ತಂತ್ರಾಂಶದಿಂದ ಮಾತಿನ ಮೂಲಕ ಬರವಣಿಗೆ ಸಾಧ್ಯವಾಗಿದೆ ಹಾಗೂ ಶಾಲಾಕಾಲೇಜುಗಳಲ್ಲಿ ಬಿಟ್ಟರೆ ಎಲ್ಲ ಕಡೆ (ವಾಟ್ಸ್ಯಾಪ್, ಕಂಪ್ಯೂಟರ್, ಆನ್‌ಲೈನ್ ಇತ್ಯಾದಿ) ಆಂಗ್ಲ ಅಕ್ಷರದಿಂದಲೇ ಕನ್ನಡವನ್ನು ಬರೆಯುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ, ಕನ್ನಡೇತರರಿಗೆ ಕನ್ನಡ ಭಾಷೆ ಯನ್ನು ಮಾತನಾಡಲು, ನಂತರದಲ್ಲಿ ಓದಲು- ಬರೆಯಲು ಹೇಳಿ ಕೊಟ್ಟರೆ ಸಾಕು.

(ಲೇಖಕರು ಇತಿಹಾಸಕಾರರು ಹಾಗೂ ಸಂಶೋಧಕರು)

ಇದನ್ನೂ ಓದಿ: #SRSrinivas