-ಕೆ.ವಿ.ವಾಸು
ಏಕಕಾಲಿಕ ಚುನಾವಣೆ ವಿಷಯದಲ್ಲಿ ಒಂದಷ್ಟು ಸವಾಲುಗಳಿವೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟೊಟ್ಟಿಗೆ ಚುನಾವಣೆ ನಡೆಯಬೇಕಾಗುವುದರಿಂದ, ಚುನಾವಣಾ ಕಾರ್ಯಕ್ಕೆಂದು ಭದ್ರತಾ ಮತ್ತು ಇತರ ಸಿಬ್ಬಂದಿಯನ್ನು ಏಕಕಾಲದಲ್ಲಿ ಒದಗಿಸುವುದು ಆಯೋಗಕ್ಕೆ ಕಷ್ಟವಾಗಬಹುದು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಒಂದು ದೇಶ, ಒಂದು ಚುನಾವಣೆ’ ವಿಷಯವನ್ನು ಕಳೆದ ಕೆಲ ವರ್ಷಗಳಿಂದ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. ಈಗ ಈ ಪ್ರಸ್ತಾವನೆಯನ್ನು ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದರವರ ಅಧ್ಯಕ್ಷತೆಯಲ್ಲಿ ೮ ಸದಸ್ಯರ ಸಮಿತಿಯೊಂದನ್ನು ರಚಿಸಿದ್ದಾರೆ. ಈ ಸಮಿತಿಯಲ್ಲಿ ಗೃಹಸಚಿವ ಅಮಿತ್ ಶಾ, ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧುರಿ, ಕೇಂದ್ರದ ಮಾಜಿ ಸಚಿವ
ಗುಲಾಂ ನಬಿ ಆಜಾದ್, ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್.ಕೆ. ಸಿಂಗ್, ಲೋಕಸಭೆಯ ಮಾಜಿ ಸೆಕ್ರೆಟರಿ ಜನರಲ್ ಸುಭಾಷ್ ಸಿ. ಕಶ್ಯಪ, ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ, ಕೇಂದ್ರ ವಿಚಕ್ಷಣ ದಳದ ಮಾಜಿ ಅಧ್ಯಕ್ಷ ಸಂಜಯ್ ಕೊಠಾರಿ ಇದ್ದಾರೆ. ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಏಕಕಾಲಿಕವಾಗಿ ನಡೆಸುವ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗವು ೫ ವರ್ಷಗಳಷ್ಟು ಹಿಂದೆಯೇ ಎಲ್ಲಾ ರಾಜಕೀಯ ಪಕ್ಷಗಳ ನಾಯಕರನ್ನು ಕೇಳಿತ್ತು. ಕಾನೂನು ಆಯೋಗ ಮತ್ತು ನೀತಿ ಆಯೋಗಗಳೂ ಈ ಬಗ್ಗೆ ತಮ್ಮ ವರದಿ ನೀಡಿದ್ದವು.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೆ ನಡೆಸುವುದು ಹೊಸ ವಿಷಯವೇನಲ್ಲ. ೧೯೬೭ರ ಚುನಾವಣೆಗಳವರೆಗೂ ದೇಶದಲ್ಲಿ ಈ ಪದ್ಧತಿ ಜಾರಿಯಲ್ಲಿತ್ತು. ಆನಂತರ ಬೇರೆ ಬೇರೆ ಕಾರಣಗಳಿಂದಾಗಿ ಹೀಗೆ ಏಕಕಾಲಿಕ ಚುನಾವಣೆ ನಡೆಸಲು ಸಾಧ್ಯವಾಗಲಿಲ್ಲ. ಏಕಕಾಲಿಕ ಚುನಾವಣೆಯಿಂದಾಗಿ ಚುನಾವಣಾ ವೆಚ್ಚವನ್ನು ಗಮನಾರ್ಹವಾಗಿ ತಗ್ಗಿಸಬಹುದೆಂಬ ಪ್ರಧಾನಮಂತ್ರಿಗಳ ಅಭಿಪ್ರಾಯದ
ಹಿನ್ನೆಲೆಯಲ್ಲಿ ಈ ಪ್ರಸ್ತಾವಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಆದರೆ ಅದಕ್ಕೂ ಮೊದಲು ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳಾಗಬೇಕಿವೆ. ನಮ್ಮ ದೇಶದಲ್ಲಿ ನಡೆಯುವ ಚುನಾವಣೆಗಳನ್ನು ಪ್ರಜಾಪ್ರತಿನಿಧಿ ಕಾಯ್ದೆಯು ನಿಯಂತ್ರಣ ಮಾಡುತ್ತದೆ. ಈ ಕಾಯ್ದೆಯಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಇವನ್ನು ವರ್ತಮಾನಕ್ಕೆ ತಕ್ಕ ಹಾಗೆ ಬದಲಿಸಬೇಕಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಿದ್ಯಾರ್ಹತೆ ನಿಗದಿಗೊಳಿಸದಿರುವುದು, ಒಬ್ಬನೇ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಸೇರಿದಂತೆ ಹಲವು ಲೋಪದೋಷಗಳು ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿವೆ.
ಕ್ರಿಮಿನಲ್ ಹಿನ್ನೆಲೆ ಉಳ್ಳವರು ಚುನಾವಣೆಗಳಲ್ಲಿ ರಾಜಾರೋಷವಾಗಿ ಸ್ಪರ್ಧಿಸಿ ಗೆಲುವು ಸಾಧಿಸುತ್ತಿದ್ದಾರೆ. ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭೆಗಳಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ಹಲವಾರು ಸದಸ್ಯರಿದ್ದಾರೆ. ಆದ್ದರಿಂದ ನಮ್ಮ ಇಡೀ ಚುನಾವಣಾ ವ್ಯವಸ್ಥೆಯಲ್ಲೇ ಆಮೂಲಾಗ್ರ ಸುಧಾರಣೆಯಾಗಬೇಕಿದೆ.
ವಿಶ್ವದ ಅತಿದೊಡ್ಡ ಪ್ರಜಾಸತ್ತಾತ್ಮಕ ದೇಶವಾದ ಭಾರತದಲ್ಲಿ ಚುನಾವಣೆಗಳನ್ನು ಸಮರ್ಥವಾಗಿ ನಡೆಸುವಂತಾಗಲು, ನಮ್ಮ ಸಂವಿಧಾನ ರಚನಾಕಾರರು ಸ್ವತಂತ್ರ ಚುನಾವಣಾ ಆಯೋಗದ ರಚನೆಗೆ ಅನುವುಮಾಡಿಕೊಟ್ಟಿದ್ದಾರೆ. ಸಂವಿಧಾನದ ೧೫ನೇ ಭಾಗದಲ್ಲಿರುವ ೩೨೪ರಿಂದ ೩೨೯ರವರೆಗಿನ ವಿಧಿಗಳು ಚುನಾವಣಾ ಆಯೋಗ ಹಾಗೂ ಚುನಾವಣೆಗಳ ಬಗೆಗಿನ ವಿವರಗಳನ್ನು ಒಳಗೊಂಡಿವೆ. ಲೋಕಸಭಾ ಚುನಾ
ವಣೆ ನಡೆಸಲು ಸಾವಿರಾರು ಕೋಟಿ ರುಪಾಯಿ ಹಣವನ್ನು ಖರ್ಚುಮಾಡಲಾಗುತ್ತಿದೆ. ೨೦೦೯ರಲ್ಲಿ ಜರುಗಿದ ಚುನಾವಣೆಗೆ ೧,೧೦೦ ಕೋಟಿ ರು. ವೆಚ್ಚವಾಗಿದ್ದರೆ, ೨೦೧೪ರಲ್ಲಿ ೪,೦೦೦ ಕೋಟಿ ರು. ಖರ್ಚಾಗಿದೆ. ಚುನಾವಣಾ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಏರುತ್ತಲೇ ಇರುವುದನ್ನು ಈ ಅಂಕಿ-ಅಂಶಗಳು ಪುಷ್ಟೀಕರಿಸುತ್ತವೆ. ಆದರೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಒಟ್ಟೊಟ್ಟಿಗೆ ನಡೆಸುವ ಮೂಲಕ ಕೋಟ್ಯಂತರ ರುಪಾಯಿ ಹಣವನ್ನು ಉಳಿಸ ಬಹುದಾಗಿದ್ದು, ಈ ಹಣವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಾಗಿದೆ. ಇದು ಒಂದು ವಾದ. ಆದರೆ ಏಕಕಾಲಿಕ ಚುನಾವಣೆಯಿಂದ ಸಾಕಷ್ಟು ಸಮಸ್ಯೆಗಳೂ ಉದ್ಭವಿಸಬಹುದು. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆ ನಡೆಯಬೇಕಾಗುವುದರಿಂದ, ಚುನಾವಣಾ ಕಾರ್ಯಕ್ಕೆಂದು ಭದ್ರತಾ ಮತ್ತು
ಇತರ ಸಿಬ್ಬಂದಿಯನ್ನು ಏಕಕಾಲದಲ್ಲಿ ಒದಗಿಸುವುದು ಕಷ್ಟ ವಾಗಬಹುದು. ಅದೂ ಅಲ್ಲದೆ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಬೇರೆ ಬೇರೆ ಚರ್ಚಾ ವಿಷಯಗಳನ್ನು ಆಧರಿಸಿರುತ್ತವೆಯಾದ್ದರಿಂದ, ಮತದಾರರಲ್ಲಿ ಗೊಂದಲ ಉಂಟಾಗಬಹುದು.
ವಿಧಾನಸಭಾ ಚುನಾವಣೆಗಳಲ್ಲಿ ಸ್ಥಳೀಯ ಅಥವಾ ಆಯಾ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳು ಮುಖ್ಯವಾದರೆ, ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಚರ್ಚಾವಿಷಯಗಳು ಪ್ರಾಮುಖ್ಯಗಳಿಸುತ್ತವೆ. ಉದಾಹರಣೆಗೆ, ೧೯೮೪ರ ಡಿಸೆಂಬರ್ನಲ್ಲಿ ೮ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ, ಇಂದಿರಾ ಗಾಂಧಿಯವರ ಹತ್ಯೆಯ ಅನುಕಂಪದ ಅಲೆಯಲ್ಲಿ ರಾಜೀವ್ ಗಾಂಧಿ ನೇತೃತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೪೧೪ ಸ್ಥಾನಗಳನ್ನು ಗೆದ್ದುಕೊಂಡು, ಲೋಕಸಭೆಯಲ್ಲಿ ವಿಪಕ್ಷಗಳ ಸೊಲ್ಲಡಗಿಸಿತು. ರಾಷ್ಟ್ರೀಯ ಐಕ್ಯತೆ ಮತ್ತು ಸಮಗ್ರತೆ ಚುನಾವಣೆಯ ಪ್ರಮುಖ ವಿಷಯವಾಗಿತ್ತು. ಆಗ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾಪಕ್ಷ ರಾಜ್ಯದಲ್ಲಿ ಕೇವಲ ೪ ಸ್ಥಾನಗಳನ್ನು ಗಳಿಸಿತು. ಇದರಿಂದ ವಿಚಲಿತರಾದ ಹೆಗಡೆಯವರು, ಹೊಸ ಜನಾದೇಶ ಪಡೆಯಲು ವಿಧಾನಸಭೆಯನ್ನು ವಿಸರ್ಜಿಸುವಂಥ ಕಠಿಣ
ನಿಲುವು ತೆಗೆದುಕೊಂಡರು. ೧೯೮೪ರ ಲೋಕಸಭೆ ಚುನಾವಣೆಯಲ್ಲಿ ಭಾರಿ ಮುಖಭಂಗ ಅನುಭವಿಸಿದ್ದ ಜನತಾಪಕ್ಷ, ೧೯೮೫ರಲ್ಲಿ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ೧೩೯ ಸ್ಥಾನಗಳನ್ನು ಗೆದ್ದುಕೊಂಡಿತು; ರಾಮಕೃಷ್ಣ ಹೆಗಡೆ ಪ್ರತಿಪಾದಿಸುತ್ತಿದ್ದ ಮೌಲ್ಯಾಧಾರಿತ ರಾಜಕಾರಣವನ್ನು ಮತದಾರರು ಬೆಂಬಲಿಸಿದ್ದರು. ಅದೇ ರೀತಿ, ೨೦೧೪ರಲ್ಲಿ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಅತಿಹೆಚ್ಚು ಸ್ಥಾನ ಗಳಿಸಿದ್ದ ಎನ್ಡಿಎ ಮೈತ್ರಿಕೂಟ, ೨೦೧೫ರಲ್ಲಿ ಜರುಗಿದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನ ಪಡೆಯಿತು. ಹೀಗಾಗಿ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಬೇರೆ ಬೇರೆ ಮಾನದಂಡಗಳ ಮೇಲೆ ನಡೆಯುತ್ತವೆಂದು ಹೇಳಬಹುದು. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರವು ಏಕಕಾಲಿಕ ಚುನಾವಣೆಗಳನ್ನು ನಡೆಸುವುದರ ಜತೆಗೆ ಚುನಾವಣಾ ವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆಗೆ ಮುಂದಾಗಬೇಕಿದೆ. ಈ ವಿಷಯದ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆ ನಡೆಯಬೇಕಿದ್ದು, ಎಲ್ಲಾ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಂತರವೇ ಕೇಂದ್ರ ಸರಕಾರ ಅಂತಿಮ ನಿರ್ಧಾರ ಕೈಗೊಳ್ಳುವುದು ಒಳಿತು.
(ಲೇಖಕರು ವಕೀಲರು ಮತ್ತು ನೋಟರಿ)