Monday, 30th December 2024

ಒಲಿಂಪಿಕ್ಸ್: ವಿಶ್ವ ಸಹೋದರತ್ವದ ಜತೆ ದೇಶಭಕ್ತಿ ವಿಕಾಸಗೊಳಿಸಲಿ

ಅಭಿಮತ 

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

sachidanandashettyc@gmail.com

ಒಲಿಂಪಿಕ್ ಕ್ರೀಡೆಗಳು ಅಂತಾರಾಷ್ಟ್ರೀಯ ಗೆಳೆತನ ಮತ್ತು ವಿಶ್ವ ಭಾತೃತ್ವಗಳ ಸಂಕೇತವೆನಿಸಿದೆ. ವಿಶ್ವ ಸೋದರತ್ವ ದೇಶಭಕ್ತಿಯನ್ನು ವಿಕಾಸಗೊಳಿಸುತ್ತದೆ ಎಂಬ ಸಿದ್ಧಾಂತಕ್ಕೆ ಅನುಗುಣವಾಗಿದೆ.

ಮನುಷ್ಯರಲ್ಲಿ ಭಾತೃತ್ವವನ್ನುಂಟು ಮಾಡುವುದು ಒಲಿಂಪಿಕ್ ಆಟಗಳ ಧ್ಯೇಯಗಳಲ್ಲೊಂದಾಗಿದೆ. ಕ್ರೀಡಾಪಟು ಗಳು ಒಂದು ದೇಶದ ಅಮೂಲ್ಯ ಆಸ್ತಿ ಮತ್ತು ಉತ್ತಮ ಜನಾಂಗದ ಸಂಕೇತವೂ ಹೌದು. ಕ್ರೀಡೆಗಳು ಪರಸ್ಪರ ನಮ್ಮನ್ನು ಬೆರೆಯಲು ಅನುವು ಮಾಡಿಕೊಡುವುದಲ್ಲದೆ ದೇಶ ದೇಶಗಳು ಪರಿಹರಿಸಲಾಗದ ಎಷ್ಟೋ ಸಮಸ್ಯೆಗಳು ಕೀಡೆಗಳ ಚಟುವಟಿಕೆಯಿಂದ ಬಗೆಹರಿಸಿಕೊಂಡ ನಿದರ್ಶನಗಳಿವೆ.

ಅಮೆರಿಕದಲ್ಲಿ ಪ್ರತಿಯೊಬ್ಬ ತಂದೆ ತಾಯಿಗೂ ತಮ್ಮ ಮಕ್ಕಳು ಉತ್ತಮ ಕ್ರೀಡಾಪಟುಗಳಾಗಬೇಕೆಂಬುದು ಪ್ರಥಮ ಆಕಾಂಕ್ಷೆಗಳಲ್ಲೊಂದಾಗಿರುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಅನೇಕ ದೇಶಗಳು ಪ್ರಗತಿ ಸಾಧಿಸುತ್ತಿರುವುದನ್ನು ಒಲಿಂಪಿಕ್ ಆಟಗಳಲ್ಲಿ ಮನಗಾಣಬಹುದು. ಒಲಿಂಪಿಕ್ಸ್ ಉದ್ದೇಶದಲ್ಲಿ ಭಾಗವಹಿಸುವುದು ಮುಖ್ಯ ಎಂದಿದೆ. ಆದರೆ ಇಲ್ಲಿ ಗೆಲ್ಲುವುದು ಮಹತ್ತರವಾದ ಸಾಧನೆಯಾಗುತ್ತದೆ ಯಲ್ಲವೇ? ಈ ಸಾಧನೆಯ ನಿಟ್ಟಿನಲ್ಲಿ ಭಾರತ ಬಹುದೂರ ಕ್ರಮಿಸಬೇಕಾಗಿದೆ. ಹಾಕಿಯಲ್ಲಿ 5 ಸಲ ಚಿನ್ನದ ಪದಕ ಪಡೆದ ನಂತರ ಒಲಿಂಪಿಕ್ಸ್‌ನಲ್ಲಿ ಭಾರತ ಹೆಚ್ಚಿನದೇನೂ ಸಾಧಿಸಲಿಲ್ಲ.

ಪ್ರಾಚೀನ ಗ್ರೀಕರು ಒಲಿಂಪಿಕ್ ಆಟಗಳನ್ನು ಆಡಲು ಮೊದಲು ಮಾಡಿದರು. ಈ ಆಟಗಳೆಂದರೆ ದೇಶಾಭಿಮಾನ ಮೂಡಿಸುವ ಧಾರ್ಮಿಕ ಹಾಗೂ ಅಥ್ಲೆಟಿಕ್ ಉತ್ಸವಗಳಾಗಿದ್ದವು ಮತ್ತು 5 ದಿನಗಳ ಕಾಲ ನಡೆಯುತ್ತಿತ್ತು. ಎಳೆಯರ ಮನಸ್ಸನ್ನು ಸೂರೆಗೊಂಡ ಒಲಿಂಪಿಕ್ ಕ್ರೀಡೆಯ ಇತಿಹಾಸ ಅಮೋಘವಾದದ್ದು. ಕ್ರಿ.ಶ. 776ರಲ್ಲಿ ಗ್ರೀಕ್ ದೇಶದ ಜೀಯಸ್ ದೇವತೆಯ ಉತ್ಸವದಲ್ಲಿ ಈ ಕ್ರೀಡೆ ನಡೆಯಿತು. ಗ್ರೀಸ್ ದೇಶದ ಪುಣ್ಯಭೂಮಿಗಳಲ್ಲೊಂದಾದ ಒಲಿಂಪಿಯಾ ಎಂಬ ಹೆಸರೇ ಈ ಕ್ರೀಡೆಗೆ ಬಂತು.

ಕ್ರಿಶ. 349ರಲ್ಲಿ ರೋಮನ್ ದೊರೆ ಈ ಕ್ರೀಡೆಯನ್ನು ನಿಲ್ಲಿಸಿದನು. ಆಮೇಲೆ 1500 ವರ್ಷಗಳ ನಂತರ ಫ್ರಾನ್ಸ್ ದೇಶದ ಬಾರನ್ ಪಿಯರ್‌ದೆ ಎಂಬವನ ಪ್ರಯತ್ನದಿಂದ ಅಥೆನ್ಸ್ ನಗರದಲ್ಲಿ 1896 ರಲ್ಲಿ ಮತ್ತೆ ಒಲಿಂಪಿಕ್ ಕ್ರೀಡೆ ಪ್ರಾರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ 1916, 1940, 1944 ರಲ್ಲಿ ವಿಶ್ವ ಮಹಾಯುದ್ದದ ಕಾರಣಕ್ಕಾಗಿ ಒಲಿಂಪಿಕ್ ಆಟಗಳನ್ನಾಡಲಿಲ್ಲ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಸಲಾಗಿದೆ. ಆಟದ ಸ್ಥಳಗಳನ್ನು ಪ್ರತಿ ಒಲಿಂಪಿಕ್‌ಗೂ ದೇಶದಿಂದ ದೇಶಕ್ಕೆ ಬದಲಾಯಿಸಲಾಗುತ್ತದೆ. ಒಲಿಂಪಿಕ್ ಸಂಕೇತ: ಒಲಿಂಪಿಕ್ ಲೋಗೋ ಐದು ವೃತ್ತಗಳನ್ನೊಳಗೊಂಡು ಅವು ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡಿರುತ್ತದೆ. ಆ ವೃತ್ತಗಳು ಯುರೋಪ್, ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಅಮೆರಿಕ ಈ 5 ಖಂಡಗಳನ್ನು ಪ್ರತಿನಿಧಿಸುತ್ತದೆ.

ವೃತ್ತಗಳು ನೀಲಿ, ಹಳದಿ, ಕಪ್ಪು, ಹಸಿರು ಮತ್ತು ಕೆಂಪು ಬಣ್ಣಗಳಿಂದೊಡಗೂಡಿ ಹಿನ್ನೆಲೆಯಲ್ಲಿ ಬಿಳಿಯಾಗಿರುತ್ತದೆ. ಈ ಚಿತ್ರವೇ ಒಲಿಂಪಿಕ್ ಬಾವುಟ (ಧ್ವಜ).
ಪ್ರಾಚೀನ ಹಾಗೂ ಆಧುನಿಕ ಆಟಗಳ ನಡುವಣ ನಿರಂತರತೆಯನ್ನು ಒಲಿಂಪಿಕ್ ಜ್ಯೋತಿ ಸೂಚಿಸುತ್ತದೆ. ಗ್ರೀಕ್‌ನ ಒಲಿಂಪಿಯಾದಲ್ಲಿ ಮೊದಲು ಸೂರ್ಯನ ಕಿರಣಗಳಿಂದ ಒಲಿಂಪಿಕ್ ಜ್ಯೋತಿ ಹೊತ್ತಿಸಲು ಇರುವ ಜ್ಯೋತಿ ಉರಿಸಿ ಬಳಿಕ ಜ್ಯೋತಿಯನ್ನು ಒಲಿಂಪಿಕ್ ಓಟಗಾರರು ಆಟ ನಡೆಯುವ ಸ್ಥಳಕ್ಕೆ ಕೊಂಡೊಯ್ಯು ವರು. ಅಲ್ಲಿ ಜ್ಯೋತಿಯನ್ನು ಆಟದ ಮುಕ್ತಾಯದ ದಿನಗಳವರೆಗೂ ಉರಿಸಲಾಗುತ್ತದೆ. ಒಲಿಂಪಿಕ್ ಆಟಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ಆಟಗಾರನೂ ಒಲಿಂಪಿಕ್ ನಿಯಮಗಳಿಗೆ ಬದ್ಧನಾಗಿರುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾನೆ.

ಒಲಿಂಪಿಕ್ 2020: 2020ರ ಜುಲೈ 24 ರಿಂದ ಅಗಸ್ಟ್ 9 ರವರೆಗೆ ನಡೆಯಬೇಕಿದ್ದ ಒಲಿಂಪಿಕ್ಸ್ ಕೋವಿಡ್ ಕಾರಣದಿಂದ ಜುಲೈ 23 ರಿಂದ ಅಗಸ್ಟ್
8 ರವರೆಗೆ ನಡೆಯಲಿದೆ. 35 ಬೇರೆ ಬೇರೆ ಆಟಗಳ ನಾಲ್ಕುನೂರು ವಿಭಾಗಳಲ್ಲಿ 200 ಕ್ಕೂ ಹೆಚ್ಚು ದೇಶಗಳ 1400 ಕ್ಕೂ ಹೆಚ್ಚಿನ ಆಟಗಾರರು ಭಾಗವಹಿಸ ಲಿದ್ದಾರೆ. ಭಾರತದಿಂದ 119 ಕ್ರೀಡಾಳುಗಳು ಭಾಗವಹಿಸಲಿದ್ದಾರೆ. ಒಲಿಂಪಿಕ್ಸ್ ಕ್ರೀಡಾ ಆರಂಭವಾದಂದಿನಿಂದ ಇದುವರೆಗೆ ಭಾರತ 9 ಸ್ವರ್ಣ, 7 ರಜತ, 12 ಕಂಚು ಸೇರಿದಂತೆ ಒಟ್ಟು 28 ಪದಕಗಳನ್ನು ಗಳಿಸಿದೆ. ಇದು ಅಮೆರಿಕದ ಈಜುಗಾರನೊಬ್ಬನ ವೈಯಕ್ತಿಕ ಸಾಧನೆಕ್ಕಿಂತಲೂ ಕಳಪೆ. ಒಲಿಂಪಿಕ್ಸ್‌ನ ನಿಕೃಷ್ಟ ಸಾಧನೆ ಭಾರತದ ಪಾಲಿಗೆ ಹತಾಶೆ ಮತ್ತು ನಿರಾಶೆ.

ನಮ್ಮದ್ದು ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬಂತಿದೆ, ಆದರೆ ಈ ಬಾರಿ ಕಳೆದ ಎರಡು ವರ್ಷಗಳಿಂದ ಪ್ರಾಮಾಣಿಕ ಪ್ರಯತ್ನಗಳಾಗುತ್ತಿರುವುದು ಆಶಾದಾಯಕ. ಕ್ರೀಡೆಯಲ್ಲಿ ಆಸಕ್ತಿಯಿರುವ ಯುವಕ ಯುವತಿಯರ ಸಂಖ್ಯೆಗೇನೂ ನಮ್ಮಲ್ಲಿ ಕೊರತೆಯಿಲ್ಲ. ಆದರೆ ಅವರಿಗೆ ಪೋಷಕರಿಂದ, ಸರಕಾರದಿಂದ, ಸಂಘ ಸಂಸ್ಥೆ ಗಳಿಂದ ಉತ್ತೇಜನ ಮತ್ತು ಪ್ರೋತ್ಸಾಹ ನಿರೀಕ್ಷೆಯಷ್ಟಿಲ್ಲ. ನಾವು ಹಂತ ಹಂತವಾಗಿ ಮೇಲೇರಬೇಕಾಗಿದೆ. 2008ರ ಬೀಜಿಂಗ್ ಕೂಟದಲ್ಲಿ ಅಭಿನವ್ ಬಿಂದ್ರಾ ಚಿನ್ನಕ್ಕೆ ಕೊರೊಳೊಡ್ಡಿರುವುದು ದೇಶದ ಹೆಮ್ಮೆ. ಇದೀಗ ಪಿ.ವಿ ಸಿಂಧು, ನೀರಜ್ ಚೋಪ್ರಾ, ಮೀರಾ ಬಾಯಿ ಚಾನೂ, ವಿನೇಶ್ ಫೋಗಟ್ ಹಾಗೂ ಭರವಸೆ ಮೂಡಿಸುವ ಶೂಟರ್‌ಗಳು ನಮಗೆ ಆಶಾಕಿರಣ. ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬೇಕಾಗಿದೆ. ಈ ಕೂಟವನ್ನು ಚಾಂಪಿಯನ್ನರ ಸಾಹಸ ಗಾಥೆಯ ತೊಟ್ಟಿಲು ಎಂದು ಕರೆಯಬೇಕಿಲ್ಲ.

ಮಾನವೀಯತೆಯ ಸಂದೇಶವನ್ನು ಮೊಳಗಿಸಲು ಜಗತ್ತಿನ ಅತ್ಯಂತ ಶ್ರೇಷ್ಠ ಕ್ರೀಡಾಪಟುಗಳ ಸಮ್ಮಿಲನ, ಕ್ರೀಡಾಜಾತ್ರೆಯ ನೆಪದಲ್ಲಿ ಪ್ರತಿ ನಾಲ್ಕು ವರ್ಷಕೊಮ್ಮೆ ಸೇರಲ್ಪಡುವ ಸಂಭ್ರಮದ ಕ್ಷಣಗಳೆಂದೇ ತಿಳಿಯಬೇಕಾಗಿದೆ. ‘ಇನ್ನಷ್ಟು ವೇಗ, ಇನ್ನಷ್ಟು ಎತ್ತರ, ಇನ್ನಷ್ಟು ಬಲಿಷ್ಠ’ವೆಂಬ ಧ್ಯೇಯ ವಾಕ್ಯದಂತೆ. ಅಥ್ಲೇಟ್‌ಗಳೆಲ್ಲರೂ ಮುನ್ನಡೆಯು ವುದು ಮತ್ತು ಯುವ ಪೀಳಿಗೆಗೆ ದಾರಿದೀಪ ಮತ್ತು ಸ್ಫೂರ್ತಿಯಾಗುವುದು ಪ್ರಾಮುಖ್ಯ.

ಅವಿಸ್ಮರಣೀಯ ಘಟನೆಗಳು: 1936 ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಹಿಟ್ಲರ್‌ನ ಕರಿನೆರಳಿನ ನಡುವೆಯೂ, ಆತನ ರಾಜಕೀಯ ಚೆಲ್ಲಾಟದ ಪರಮಾವಧಿಯ ನಡುವೆಯೂ ಅಮೆರಿಕದ ಕಪ್ಪು ಜನಾಂಗೀಯ ಒವೆನ್ಸ್ ಎಂಬಾತ ನಾಲ್ಕು ಚಿನ್ನದ ಪದಕ ಗೆದ್ದು ಹಿಟ್ಲರ್ ತನ್ನ ಜನರ ಎದುರೇ ಮುಜುಗರಕ್ಕೊಳಗಾದನು. ಅದೇ ವರ್ಷ ಭಾರತ ಹಾಕಿಯಲ್ಲಿ 8-1 ಗೋಲ್‌ಗಳಿಂದ ಜರ್ಮನಿಯನ್ನು ಪರಾಭವಗೊಳಿಸಿ ಪ್ರಾಬಲ್ಯ ಮೆರೆಯಿತು.

ಬರ್ಲಿನ್‌ನಲ್ಲಿ ರಾಜಕೀಯದ ಅತಿರೇಕಗಳ ನಡುವೆ ಕೊನೆಗೂ ಕ್ರೀಡೆ ಜಯ ಸಾಧಿಸಿತ್ತು. 1948ರಲ್ಲಿ ಸ್ವಾತಂತ್ರ್ಯ ನಂತರದ ಪ್ರಥಮ ಒಲಿಂಪಿಕ್ಸ್‌ನಲ್ಲಿ ಭಾರತ ಬ್ರಿಟನನ್ನು ಸೋಲಿಸಿತ್ತು. ಇನ್ನೂ ಅಚ್ಚಳಿಯದೇ ಉಳಿಯುವ ನೆನಪುಗಳು ಅನೇಕಾನೇಕ. 1996ರಲ್ಲಿ ಅಟ್ಲಾಂಟಾದ ಕ್ರೀಡಾಂಗಣದಲ್ಲಿ ನಡೆದ ಬಾಂಬ್ ಸ್ಫೋಟ, ಮಾಸ್ಕೊ ಒಲಿಂಪಿಕ್ಸ್‌ನ್ನು ಅಮೆರಿಕ ಬಹಿಷ್ಕರಿಸಿದುದು, ಲಾಸ್‌ಏಂಜಲೀಸ್ ಕೂಟವನ್ನು ರಷ್ಯಾ ಬಹಿಷ್ಕರಿಸಿದುದು, 1972ರಲ್ಲಿ 9 ಇಸ್ರೇಲ್ ಆಟಗಾರರನ್ನು ಪ್ಯಾಲೆಸ್ತೀನಿಯರು ಕೊಂದದ್ದು, 1988 ರಿಂದೀಚೆಗಿನ ವರ್ಷಗಳಲ್ಲಿ ಮಾದಕ ವಸ್ತುಗಳ ಸೇವೆಯಿಂದ ಅಮಾನಾತಾದದ್ದು ಒಲಿಂಪಿಕ್ಸ್‌ಗಾದ ಕಪ್ಪು ಚುಕ್ಕೆಗಳು.

ಒಟ್ಟಾರೆ ಭವ್ಯ ಪರಂಪರೆ ಮತ್ತು ಚರಿತ್ರೆಯುಳ್ಳ  ಒಲಿಂಪಿಕ್ಸ್ ಕೋವಿಡ್ ಸಾಂಕ್ರಾಮಿಕದ ಈ ಕಾಲ ಘಟ್ಟದಲ್ಲಿ ನಿಗದಿಗಿಂತ ಒಂದು ವರ್ಷ ತಡವಾಗಿ ನಡೆಯುತ್ತಿದೆ. ಈ ಕ್ರೀಡಾ ಮಹೋತ್ಸವವು ಭಾತೃತ್ವ, ವಿಶ್ವಸೋದರತ್ವ, ದೇಶಭಕ್ತಿ, ಶಾಂತಿ ಯನ್ನು ಮತ್ತೊಮ್ಮೆ ಸಾರುವ ಮಂತ್ರವಾಗಲಿ. ಪ್ರಸ್ತುತ ಕೇಂದ್ರ ಸರಕಾರವು ಕ್ರೀಡೆಗೆ ತುಂಬಾ ಪ್ರೋತ್ಸಾಹ ನೀಡಿದೆ. ಮೋದಿ ಕೇವಲ ರಾಜಕಾರಣಿಯಲ್ಲ. ಒಬ್ಬ ಮುತ್ಸದ್ದಿ ಎಂಬುದನ್ನು ನಾವು ಇತ್ತೀಚಿಗಿನ ಅಥ್ಲೆಟ್‌ಗಳ ಜತೆ ವರ್ಚುವಲ್
ಮುಖೇನ ವಿನೋದಭರಿತ ಹಾಗೂ ಗಂಭೀರ ಸಂವಾದದಿಂದ ಅರಿತಿದ್ದೇವೆ.

ಭಾರತದ ಘನತೆಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿಯಲು ಹೊರಟಿರುವ ನಿಮಗೆ ದೇಶವೇ ಬೆಂಬಲವಾಗಿ ನಿಂತಿದೆ. ಪದಕ ಗೆಲ್ಲಬೇಕು ಆದರೆ ಒತ್ತಡ ಸಲ್ಲದು
ಎಂಬ ಕಿವಿಮಾತನ್ನು ಹೇಳಿದ್ದಾರೆ. ಈ ವರ್ಷ ಒಲಿಂಪಿಕ್ಸ್‌ಗೆ ಭಾಗವಹಿಸುವ ಕ್ರೀಡಾಳುಗಳಿಗೆ ತರಬೇತಿಗೆಂದು ಭಾರತ ಸರಕಾರ ನೂರು ಕೋಟಿ ಮೀಸಲಿಟ್ಟಿದೆ. ಏನಿದ್ದರೂ ಸಕಲ ಪ್ರೋತ್ಸಾಹಗಳಿಂದ ಯುವಜನರ ಆಗರವಾಗಿರುವ ಭಾರತದಲ್ಲಿ ನಿರೀಕ್ಷಿತ ಗುರಿಮುಟ್ಟುವುದು ಸ್ವಲ್ಪ ಕಷ್ಟವಾದರೂ ಕೂಡಾ ಅಸಾಧ್ಯದ ಮಾತಲ್ಲ.