Wednesday, 27th November 2024

ಅರಿವು ಮತ್ತು ಅನುಭವ ವಿಸ್ತರಿಸುವ ಓದುಗರ ಓಲೆಗಳು

ತಿಳಿರು ತೋರಣ

srivathsajoshi@yahoo.com

‘ಅಸ್ಯ ಮಾತ್ರಾಂ ಪ್ರಯುಞ್ಜೀತ ಯೋಪರುನ್ಧ್ಯಾನ್ನ ಭೋಜನಮ್| ಅಸ್ಯ ಪ್ರಯೋಗಾಚ್ಚ್ಯವನಃ ಸುವೃದ್ಧೋಭೂತ್ ಪುನರ್ಯುವಾ||’ ಅಂದರೆ, ‘ಯಾರಿಗೆ ಆಹಾರವು ರುಚಿಸುವುದಿಲ್ಲವೋ ಅವರಿಗೆ ಇದನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಲಿಕ್ಕೆ ಕೊಡಬೇಕು. ಇದನ್ನು ಸೇವಿಸಿದ್ದರಿಂದಲೇ ಚ್ಯವನನು ಕೂಡ ವೃದ್ಧನಾಗಿದ್ದವನು ಪುನಃ ಯುವಕನಾದನು’ ಎಂದು ಶ್ಲೋಕದ ಅರ್ಥ.

ಇಲ್ಲಿ ‘ಇದನ್ನು’ ಅಂದರೆ ಯಾವುದನ್ನು? ಮತ್ತ್ಯಾವುದು, ಚ್ಯವನಪ್ರಾಶವನ್ನು! ಆದರೆ ಸ್ವಲ್ಪ ತಾಳಿ, ಇದು ಬೈದ್ಯನಾಥ್ ಅವರ ದಾಗಲಿ ಡಾಬರ್ ಅಥವಾ ಝಂಡು ಮತ್ತಿತರ ಚ್ಯವನಪ್ರಾಶ ತಯಾರಿಕೆ ಕಂಪನಿಗಳದಾಗಲಿ ಜಾಹಿರಾತು ಎಂದು ತಿಳಿಯ ಬೇಡಿ! ಈ ಸಂಸ್ಕೃತ ಶ್ಲೋಕ ಇರುವುದು ಚರಕಸಂಹಿತಾದಲ್ಲಿ. ಕ್ರಿಸ್ತಪೂರ್ವ ಒಂದನೆಯ ಶತಮಾನ ಮತ್ತು ಕ್ರಿಸ್ತಶಕ ಎರಡನೆಯ ಶತಮಾನಗಳ ನಡುವಿನ ಅವಧಿಯಲ್ಲಿ ಕಾಶ್ಮೀರದಲ್ಲಿ ಬಾಳಿದ್ದನೆನ್ನಲಾದ, ಆಯುರ್ವೇದ ವದ್ಯಪದ್ಧತಿಯ ಪ್ರಪಿತಾಮಹರಲ್ಲಿ ಒಬ್ಬನೆನಿಸಿದ, ಚರಕಋಷಿ ಬರೆದ ಕೃತಿಯಲ್ಲಿ.

ಚ್ಯವನಪ್ರಾಶ ತಯಾರಿಸುವುದಕ್ಕೆ ಯಾವ್ಯಾವ ಮೂಲವಸ್ತುಗಳು ಬೇಕು, ತಯಾರಿಸುವ ವಿಧಾನ ಹೇಗೆ ಅಂತೆಲ್ಲ ಸಂಸ್ಕೃತ ಶ್ಲೋಕ ಗಳ ರೂಪದಲ್ಲಿ ವಿವರವಾಗಿ ತಿಳಿಸಿದ ಬಳಿಕ ಕೊನೆಯಲ್ಲಿ ಮೇಲೆ ಉಲ್ಲೇಖಿಸಿದ ಶ್ಲೋಕ ಬರುತ್ತದೆ. ಹಾಗಿದ್ದರೆ ನಾನು ಚರಕ ಸಂಹಿತೆ ಗ್ರಂಥವನ್ನು ಆಮೂಲಾಗ್ರ ಓದಿಕೊಂಡಿದ್ದೇನೆಯೇ? ದೇವರಾಣೆಗೂ ಇಲ್ಲ! ಕಳೆದ ವಾರದ ಅಂಕಣದಲ್ಲಿ ಚ್ಯವನ ಋಷಿಯ ಕಥೆಯನ್ನು ಬರೆದಿದ್ದೆನಷ್ಟೆ? ಅದನ್ನು ಓದಿ ಪ್ರತಿಕ್ರಿಯೆ ಬರೆಯುತ್ತ ಮೈಸೂರಿನಿಂದ ಡಾ.ಅಶೋಕ ಸಾತ್ಪುತೆ ಅವರು ಮಿಂಚಂಚೆಯಲ್ಲಿ ನನಗೆ ಈ ವಿವರಗಳನ್ನು ತಿಳಿಸಿದ್ದಾರೆ. ಚರಕಸಂಹಿತೆಯಲ್ಲಿ ಚ್ಯವನಪ್ರಾಶ ತಯಾರಿಯ ಬಗೆಗಿನ 13 ಶ್ಲೋಕ ಗಳಿರುವ ಪುಟದ್ದಷ್ಟೇ ಡಿಜಿಟಲ್ ಚಿತ್ರ ತೆಗೆದು ಕಳುಹಿಸಿದ್ದಾರೆ.

‘ಚ್ಯವನಮಹರ್ಷಿಯ ಕಥೆ ಕುತೂಹಲಕಾರಿಯಾಗಿದೆ. ಹೌದು. ಚ್ಯವನಪ್ರಾಶ ರಸಾಯನವೆಂಬ ಆಯುರ್ವೇದಿಕ್ ಟಾನಿಕ್ ತುಂಬ ಜನಪ್ರಿಯವಾದುದು, ವದ್ಯರಲ್ಲೂ ಜನಸಾಮಾನ್ಯರಲ್ಲೂ. ಸಕ್ಕರೆ, ಜೇನು, ತುಪ್ಪ ಸೇರಿದಂತೆ ಒಟ್ಟು 45 ಪದಾರ್ಥಗಳು ಇದರ ತಯಾರಿಯಲ್ಲಿ ಬಳಕೆಯಾಗುತ್ತವೆ. ಚರಕಸಂಹಿತೆಯ ಚಿಕಿತ್ಸಾಸ್ಥಾನ ವಿಭಾಗದಲ್ಲಿ ಇದರ ವಿವರಗಳಿವೆ. ಕ್ರಮಸಂಖ್ಯೆ 62ರಿಂದ 74ರವರೆಗಿನ ಶ್ಲೋಕಗಳನ್ನು ಗಮನಿಸಿ. ನಡುವೆ ಒಂದು ಕಡೆ ‘ಮತ್ಸ್ಯಾಂಡಿಕಾ’ ಎಂದು ಬರುತ್ತದೆ. ಗಾಬರಿಯಾಗದಿರಿ! ಮತ್ಸ್ಯಕ್ಕೂ ಅದಕ್ಕೂ ಸಂಬಂಧವಿಲ್ಲ. ಇಕ್ಷುರಸ(ಕಬ್ಬಿನರಸ)ದಿಂದ ಸಕ್ಕರೆ ತಯಾರಿಸುವಾಗಿನ ಹಂತದಲ್ಲಿ ಸಿಗುವ ಉತ್ಪನ್ನಕ್ಕೆ ಆ ಹೆಸರು ಅಷ್ಟೇ’ ಎಂದು ಅವರ ಮಿಂಚಂಚೆಯ ಒಕ್ಕಣೆ. ಎಲ್ಲ ಶ್ಲೋಕಗಳೂ ನನಗೆ ಅರ್ಥವಾಯ್ತೆಂದೇನಿಲ್ಲ, ಆದರೂ ಎಲ್ಲವನ್ನೂ ಒಮ್ಮೆ ಓದಿನೋಡಿದೆ.

ಚರಕಮಹರ್ಷಿಯನ್ನು ಮನಸ್ಸಿನಲ್ಲೇ ವಂದಿಸಿದೆ. ಡಾ. ಅಶೋಕ ಸಾತ್ಪುತೆ ತಿಳಿರುತೋರಣ ಅಂಕಣದ ನಿಯತ ಓದುಗರು. ಹಿರಿಯ ಹಿತಷಿ ಕೂಡ. ಮೈಸೂರಿನ ಆಯುರ್ವೇದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಆಮೇಲೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಮೂಲತಃ ಬೆಳಗಾವಿಯವರು. ಬೆಂಗಳೂರು, ಬಳ್ಳಾರಿಗಳಲ್ಲಿ ಆಯುರ್ವೇದ ಅಧ್ಯಾಪನ ನಡೆಸಿ ಮೈಸೂರಿಗೆ ವರ್ಗವಾದ ಮೇಲೆ ಅಲ್ಲಿಯೇ ನೆಲೆಸಿದವರು.

ಸದಭಿರುಚಿಯ ಸಾಹಿತ್ಯಾಭಿಮಾನಿ. ಆಯುರ್ವೇದಕ್ಕೆ ಸಂಬಂಧಿಸಿದಂತೆ ಅಷ್ಟಿಷ್ಟು ಸಾಹಿತ್ಯಕೃಷಿಯಲ್ಲೂ ತೊಡಗಿಸಿಕೊಂಡಿದ್ದಾ ರಂತೆ. ಹಿಂದೊಮ್ಮೆ ನಾನು ಇದೇ ಅಂಕಣದಲ್ಲಿ ‘ಕಿಟೆಲ್ ಕೋಶಕ್ಕೂ ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು!’ ಶೀರ್ಷಿಕೆಯ ಲೇಖನ ಬರೆದಿದ್ದಾಗ ಅದಕ್ಕೆ ಪೂರಕವಾಗಿ ಆಯುರ್ವೇದದ ಭಾವಪ್ರಕಾಶ ನಿಘಂಟುವಿನಲ್ಲಿಯೂ ಸುಮಾರು ನೂರರಷ್ಟು ಬೇರೆಬೇರೆ ತಿಂಡಿತಿನಸುಗಳ ಉಲ್ಲೇಖವಿದೆ ಎಂದು ಸೋದಾಹರಣ ಮಾಹಿತಿ ಕೊಟ್ಟಿದ್ದರು.

‘ದಾಸರೂ ಕುಮಾರವ್ಯಾಸರೂ ಎಲ್ಲರೂ ತಿಂಡಿಪೋತರೇ?’ ತಲೆಬರಹದ ಇನ್ನೊಂದು ಲೇಖನದಲ್ಲಿ ನಾನು ‘ಬೆಲ್ಲ ಪ್ರಾಚೀನ ಕಾಲದ್ದಿರಬಹುದು. ಆದರೆ ಸಕ್ಕರೆ ಕಾರ್ಖಾನೆಗಳೂ ಪುರಂದರದಾಸರ ಕಾಲಕ್ಕಾಗಲೇ ಬಂದಿದ್ದವೇ?’ ಎಂಬ ಜಿಜ್ಞಾಸೆ  ವ್ಯಕ್ಪಡಿಸಿ ದ್ದಾಗ ಅದಕ್ಕುತ್ತರವಾಗಿ ‘ಸಕ್ಕರೆ ತಯಾರಿಕೆಯ ತಂತ್ರಜ್ಞಾನ ನಮ್ಮ ದೇಶಕ್ಕೆ ತುಂಬಾ ಹಳೆಯದು. 2500 ವರ್ಷಗಳ ಹಿಂದೆಯೇ ಆಯುರ್ವೇದ ಗ್ರಂಥಗಳಲ್ಲಿ ಸಕ್ಕರೆಯ(ಶರ್ಕರಾ) ತಯಾರಿಕೆಯ ವ್ಯಾಖ್ಯಾನವಿದೆ. ಚರಕ, ಸುಶ್ರುತ ರಚಿಸಿದ ಸಂಹಿತೆಗಳಲ್ಲಿ ಇಕ್ಷುರಸ ಕುದಿಸಿ ಶರ್ಕರಾ ತಯಾರಿಸುವ ಐದು ಹಂತಗಳನ್ನು ವಿವರಿಸಿದ್ದು ಅವು ಅನುಕ್ರಮವಾಗಿ: ಫಾಣಿತ (ಕಾಕಂಬಿ), ಮತ್ಸ್ಯಾಂಡಿಕಾ(ಮೀನಿನ ತತ್ತಿಯಾಕಾರದ ಹರಳುಗಳು), ಖಂಡ, ಗುಡ(ಬೆಲ್ಲ), ಮತ್ತು ಶರ್ಕರಾ- ಸಿತಾ(ಸಕ್ಕರೆ). ಸಕ್ಕರೆಯ ಗುಣಾವಗುಣಗಳನ್ನೂ ವಿವರಿಸಲಾಗಿದೆ.

ಸಾಂದರ್ಭಿಕವಾಗಿ ಕಬ್ಬಿನ ರಸದ ಬಗ್ಗೆ ಒಂದು ಕುತೂಹಲಕಾರಿ ಅಂಶ ಹೇಳಲಾಗಿದೆ. ಯಂತ್ರದಿಂದ ನಿಷ್ಪೀಡಿತ ರಸ(ಹಿಂಡಿತೆಗೆದ
ಕಬ್ಬಿನ ಹಾಲು) ಆರೋಗ್ಯಕ್ಕೆ ಹಿತಕರವಲ್ಲ; ಅದೇ ಕಬ್ಬನ್ನು ಹಲ್ಲಿನಿಂದ ಜಗಿದು ರಸ ಸೇವಿಸಿದರೆ ಉತ್ತಮ ಎಂದು ಚರಕ ಸಂಹಿತೆ
ಸೂತ್ರಸ್ಥಾನ 27ರಲ್ಲಿ ಮತ್ತು ಸುಶ್ರುತ ಸಂಹಿತೆ ಸೂತ್ರಸ್ಥಾನ 45 ರಲ್ಲಿ ವಿವರಿಸಿದೆ’ ಎಂಬ ಮಾಹಿತಿಯನ್ನೊದಗಿಸಿದ್ದರು.

ವಾಷಿಂಗ್ಟನ್ ಪೋಸ್ಟ್ ಮ್ಯಾಗಜಿನ್ ಮುಖಪುಟದಲ್ಲಿ ದಾಸವಾಳ ರಾರಾಜಿಸಿದ್ದರ ಬಗೆಗಿನ ಅಂಕಣಬರಹಕ್ಕೆ ಪ್ರತಿಕ್ರಿಯೆಯಾಗಿ ಆಯುರ್ವೇದ ನಿಘಂಟುಗಳಲ್ಲಿ ದಾಸವಾಳಕ್ಕೆ ಜಪಾಖ್ಯಾ ಔಂಡ್ರಕಾಖ್ಯಾ ರಕ್ತಪುಷ್ಪಿ ಜವಾಸಾ ಅರ್ಕಪ್ರಿಯಾ ಪ್ರಾತಿಕಾ ಹರಿವಲ್ಲಭಾ ಎಂಬ ಪರ್ಯಾಯ ಪದಗಳನ್ನು ಕೊಟ್ಟಿದ್ದಾರೆಂದು ತಿಳಿಸಿದ್ದರು. ಅಂತೂ ಡಾ.ಸಾತ್ಪುತೆಯವರ ಪ್ರತಿಕ್ರಿಯೆ ಬಂತೆಂದರೆ ಅದರಲ್ಲಿ ಮೌಲ್ಯವರ್ಧನೆಯದೇನೋ ಒಂದು ಸರಕು ಇರುವುದು ಗ್ಯಾರಂಟಿ.

ಇಲ್ಲಿ ನನಗೆ ನೆನಪಿಗೆ ಬರುವ ಇನ್ನೊಬ್ಬ ಹಿರಿಯ ಓದುಗರು ಬೆಂಗಳೂರಿನ ರೋಹಿಣಿ ಸುಬ್ಬರತ್ನಂ. ನನಗೆ ಅವರ ಬಗ್ಗೆ ಅಪಾರ
ಗೌರವ. ಅವರು ಪ್ರತಿವಾರ ಲೇಖನ ಓದುತ್ತಾರೆ. ಪ್ರತಿವಾರ ಪ್ರತಿಕ್ರಿಯೆ ಬರೆಯುತ್ತಾರೆ, ಏನೋ ಒಂದು ಹೊಸದು ತಿಳಿದುಕೊಳ್ಳುವ ವಿಚಾರ ಅದರಲ್ಲಿ ಇದ್ದೇಇರುತ್ತದೆ. ‘ಸಮ ನಿಶಾ ದಿನದ ಹತ್ತು ರಮಣೀಯ ದೃಶ್ಯಗಳು’ ಲೇಖನಕ್ಕೆ ರೋಹಿಣಿಯವರು ಬರೆದಿದ್ದ ಪ್ರತಿಕ್ರಿಯೆ ಹೀಗಿತ್ತು: ‘ಮೆಕ್ಸಿಕನ್ನರ ಸರ್ಪ ದೇವತೆಗೆ ಕುಕುಲ್ಕನ್ ಎಂಬ ಶಬ್ದ ಇರುವುದು ಆಶ್ಚರ್ಯಕರವೆನಿಸಿತು!

ನಮ್ಮ ದಕ್ಷಿಣಕನ್ನಡದಲ್ಲಿ ಕುಕ್ಕೆ ಎಂಬುದು ಸರ್ಪದೇವತೆಗೇ ಸೇರುತ್ತದೆ. ಎಂತಹ ಶಬ್ದಸಾಮ್ಯ ನೋಡಿ! ಇನ್ನು, ಶೃಂಗೇರಿಯ ವಿದ್ಯಾಶಂಕರ ದೇವಾಲಯದಲ್ಲಿ ಆಯಾ ರಾಶಿಗಳ ಕಂಬದ ಮೇಲೆ ಆಯಾ ದಿನಗಳಲ್ಲಿ ಸೂರ್ಯನ ಕಿರಣಗಳು ಬೀಳುವುದು ಸತ್ಯವೇ. ಆ ದೇಗುಲವನ್ನು ಬುಕ್ಕನು ಕಟ್ಟಿಸಿದ್ದೆಂದೂ, ಅದರ ಪ್ರತಿಷ್ಠಾಪನೆಗೆ ವಾರಾಣಸಿಯಿಂದ ವಿದ್ಯಾರಣ್ಯರನ್ನು ಕರೆಯಿಸ ಬೇಕೆಂದು ಅವರ ಗುರುಗಳಾಗಿದ್ದ ಶೃಂಗೇರಿಯ ಆಗಿನ ಸ್ವಾಮೀಜಿಯವರನ್ನು ಪ್ರಾರ್ಥಿಸಿಕೊಂಡಿದ್ದರಿಂದ ಗುರುಗಳ ಆದೇಶದ ಮೇರೆಗೆ ೧೫ ದಿನಗಳಲ್ಲಿ ವಾರಾಣಸಿಯಿಂದ ವಿದ್ಯಾರಣ್ಯರು ಶೃಂಗೇರಿಯನ್ನು ತಲುಪಿದರೆಂದೂ, ಅವರು ಬಂದ ದಾರಿಯ ವಿವರಗಳನ್ನು ಬರೆಯುತ್ತೇನೆ ಎಂದೂ ನಮ್ಮ ತಂದೆಯವರು ಹೇಳುತ್ತಿದ್ದರು.

ಆದರೆ ತಂದೆಯವರಿಗೆ ಅನಾರೋಗ್ಯದ ದೆಸೆಯಿಂದ ಬರೆಯಲು ಸಾಧ್ಯವಾಗಲಿಲ್ಲ. ವಿದ್ಯಾರಣ್ಯರು ಆರೇ ವರ್ಷಗಳ ಕಾಲ  ಗೇರಿಯಲ್ಲಿ ಇದ್ದದ್ದಂತೆ. ಉಳಿದ ಸಮಯ ಕಾಶಿಯಲ್ಲಿ ಅಧ್ಯಯನಕ್ಕಾಗಿ ಇದ್ದರಂತೆ.’ ಡಾ.ಸಾತ್ಪುತೆಯವರಂತಹ, ರೋಹಿಣಿ ಯಮ್ಮನಂತಹ ಜ್ಞಾನಾನುಭವಿ ಹಿರಿಯರು ತಿಳಿರುತೋರಣ ಅಂಕಣವನ್ನು ಓದುತ್ತಾರೆ, ಅಷ್ಟೇಅಲ್ಲ ಅಂಕಣಬರಹಕ್ಕೆ ಸಂಬಂಽಸಿದಂತೆ ಪೂರಕ ಮಾಹಿತಿ ತಮ್ಮಲ್ಲಿದ್ದರೆ ಸಂದರ್ಭೋಚಿತವಾಗಿ ಹಂಚಿಕೊಳ್ಳುತ್ತಾರೆ ಎನ್ನುವುದು ನನಗೆ ಹೆಚ್ಚಿನ ಹಿಗ್ಗು. ಇದನ್ನು ನಾನಿಲ್ಲಿ ತೋರಿಕೆಗಾಗಿ ಹೇಳುತ್ತಿಲ್ಲ.

‘ನನ್ನ ಬರಹವನ್ನು ಓದುವವರಿಗೆ ನನಗಿಂತ ಹೆಚ್ಚು ಜ್ಞಾನಾ ನುಭವ ಇರುತ್ತದೆ. ನಾನು ಪ್ರಸ್ತಾವಿಸುವ ವಿಚಾರಗಳಿಗೆ
ಸಂಬಂಧಿಸಿದಂತೆ ಪೂರಕ ಮಾಹಿತಿಯನ್ನು, ತಮ್ಮತಮ್ಮ ಅನುವದ ಬುತ್ತಿಯಿಂದ ರುಚಿವರ್ಧಕವನ್ನು ಒದಗಿಸುವ ಶಕ್ತಿ-
ಆಸಕ್ತಿಗಳು ಇರುತ್ತವೆ. ಇದು ನನ್ನ ದೃಢವಾದ ನಂಬಿಕೆ. ನಾನು ಬರೆದದ್ದೇ ವೇದವಾಕ್ಯ ಎಂದಾಗಲೀ ಪ್ರಶ್ನಾತೀತ ಎಂದಾಗಲೀ
ಏನಿಲ್ಲ. ಈ ಅಂಕಣವು ದ್ವಿಮುಖಸಂಚಾರದ ರಸ್ತೆಯಾದರೆ ನನಗೆ ತುಂಬ ಖುಷಿ’ ಎಂದು ತಿಳಿರುತೋರಣದ ಮೊತ್ತಮೊದಲ ಲೇಖನದಲ್ಲಿ (17 ಜನವರಿ 2016) ಬರೆದಿದ್ದೆ.

ಪ್ರತಿಸಲ ಅದು ನಿಜವಾದಾಗೆಲ್ಲ ನನಗೆ ಖುಷಿ ಆಗುವಂಥದ್ದೇ. ಕಳೆದ ವಾರದ ಲೇಖನಕ್ಕೆ ಬಂದಿದ್ದ ಪ್ರತಿಕ್ರಿಯೆಗಳಿಂದಲೇ ಇನ್ನೊಂದನ್ನು ಉದಾಹರಿಸುತ್ತೇನೆ. ಲೇಖನದ ಆರಂಭದಲ್ಲಿ ‘ಊಟವಾದ ಮೇಲೆ ಕ ತೊಳೆದು ಹೆಬ್ಬೆರಳಿನ ಮೂಲಕ ನೀರನ್ನು
ಎರಡೂ ಕಣ್ಣುಗಳಿಗೆ ಬಿಡಬೇಕು. ಹೀಗೆ ಮಾಡುವುದರಿಂದ ಕಣ್ಣುಗಳಿಗೆ ಸಂಬಂಧಪಟ್ಟ ರೋಗಗಳು ಬರುವುದಿಲ್ಲವಂತೆ’
ಎಂದು ಶ್ಲೋಕವೊಂದನ್ನು ವಿವರಿಸಿದ್ದೆ.

ಇದನ್ನೆಲ್ಲಿ ಯಾರಾದರೂ ಮೂಢನಂಬಿಕೆ ಎಂದು ಕೊಳ್ಳುತ್ತಾರೋ ಅಂತ ಸ್ವಲ್ಪ ಹಿಂಜರಿಕೆಯೂ ಇತ್ತು. ಆದರೆ ಶಿರಸಿಯಿಂದ
ವೀಣಾ ಹೆಗಡೆಯವರ ಪ್ರತಿಕ್ರಿಯೆ ಓದಿದಾಗ ಸಮಾಧಾನವಾಯ್ತು. ‘ಊಟವಾಗಿ ಕ ತೊಳೆದು ಕಣ್ಣಿಗೆ ನೀರು ಚಿಮುಕಿಸುವ ಪದ್ಧತಿ ಗೊತ್ತು. ಇದು ವೈಜ್ಞಾನಿಕವಾಗಿಯೂ ಸರಿ ಎಂದು ತಿಳಿದದ್ದು ಸ್ವಾನುಭವದಿಂದ. ಒಮ್ಮೆ ಕಣ್ಣಿನ ತೊಂದರೆಯಿಂದಾಗಿ ವದ್ಯರನ್ನು ಭೇಟಿಯಾಗಿದ್ದೆ.

ಕಣ್ಣಿನ ಆರೋಗ್ಯಕ್ಕೆ ವ್ಯಾಯಾಮವೊಂದನ್ನು ಸೂಚಿಸಿದ್ದರು. ಬಾಯಿಯಲ್ಲಿ ನೀರನ್ನು ತುಂಬಿ ಮುಕ್ಕಳಿಸುತ್ತ ಎರಡೂ ಕಗಳಿಂದ ಕಣ್ಣುಗಳಿಗೆ ನೀರನ್ನು ಎರಚಿಕೊಳ್ಳಬೇಕೆಂದು. ಅಂದಿನಿಂದ ಇಂದಿನವರೆಗೂ ಅದೇ ರೀತಿ ಮಾಡುತ್ತಿದ್ದೇನೆ. ಸ್ವಲ್ಪವೂ ತೊಂದರೆ ಇಲ್ಲ. ದೇವರು ಕೊಟ್ಟ ಕಣ್ಣನ್ನು ಗರಿಷ್ಠ ಉಪಯೋಗಿಸಿದ್ದೇನೆ, ಉಪಯೋಗಿಸುತ್ತಿದ್ದೇನೆ. ಇಂದು ನೇತ್ರ ದೋಷ ಪರಿಹಾರಕ್ಕೂ, ಪುರಾಣದ ಐವರ ಸ್ಮರಣೆಗೂ ಇರುವ ಸಂಬಂಧವೂ ತಿಳಿದಂತಾಯ್ತು’ ಎಂದು ಅವರು ಬರೆದಿದ್ದಾರೆ.

ವೀಣಾ ಹೆಗಡೆಯವರೂ ಅಷ್ಟೇ, ಅಂಕಣಬರಹದ ವಿಷಯ ಯಾವುದಿದ್ದರೂ ಮನಸಾರೆ ಓದಿ ಅವರ ಹಳ್ಳಿಜೀವನದ ಸಮೃದ್ಧ
ಅನುಭವಗಳನ್ನು ಸಾಹಿತ್ಯಾಭಿರುಚಿಯ ಪಾಕದಲ್ಲದ್ದಿ ಅತ್ಯಂತ ರುಚಿಕರ ಪ್ರತಿಕ್ರಿಯೆ ಬರೆದುಕಳುಹಿಸುತ್ತಾರೆ, ಪ್ರತಿವಾರವೂ!
ಓದುಗರಿಂದ ಸ್ವಾನುಭವ ಕಥನ ಪ್ರತಿಕ್ರಿಯೆಯ ರೂಪದಲ್ಲಿ ಬರಬೇಕಿದ್ದರೆ ಅಂಕಣದ ವಿಷಯ ಅವರಿಗೆ ನೇರಾನೇರವಾಗಿ
ರಿಲೇಟ್ ಆಗಬೇಕು. ನಿಜ, ಪ್ರತಿಯೊಂದು ವಿಷಯವು ಪ್ರತಿಯೊಬ್ಬ ಓದುಗನಿಗೂ ರಿಲೇಟ್ ಆಗುವುದು ಖಂಡಿತ ಸಾಧ್ಯವಿಲ್ಲ,
ಅಂಥದೊಂದು ಆಶಯವೂ ಬೇಕಿಲ್ಲ.

ಆದರೆ ಕೆಲವೊಮ್ಮೆ ಅಂಕಣದಲ್ಲಿ ಮ್ಯಾಟರ್ ಆಫ್ ಫ್ಯಾಕ್ಟ್ ರೀತಿಯಲ್ಲಿ ಬರೆದದ್ದು ನಮ್ಮ ನಿರೀಕ್ಷೆಯನ್ನೂ ಮೀರಿ ಯಾವುದೋ ಕಾರಣಕ್ಕೆ ಯಾರನ್ನೋ ತೀವ್ರವಾಗಿ ತಟ್ಟಿರುತ್ತದೆ. ಇಲ್ಲಿದೆ ನೋಡಿ ಒಂದು ಉದಾಹರಣೆ. ಇದು ‘ಸ್ಯಾಂಡಿ ಆಲ್ಲೆನ್: ಏಳಡಿ ಏಳಿಂಚು ದಾಖಲೆ ಎತ್ತರದ ಮಹಿಳೆ!’ ಲೇಖನಕ್ಕೆ ಬಂದ ಪ್ರತಿಕ್ರಿಯೆ. ‘ಹಲವಾರು ಸಮಯದಿಂದ ನಿಮ್ಮ ಅಂಕಣವನ್ನು ವಿಶ್ವವಾಣಿ ಪತ್ರಿಕೆಯಲ್ಲಿ ಪ್ರತೀ ಭಾನುವಾರ ಗಮನಿಸುತ್ತಾ ಬಂದಿರುವೆ. ಆದರೆ ಪೂರ್ತಿ ಓದಿದ್ದು ಕಮ್ಮಿ. ಏಕೆಂದರೆ ಬಹುತೇಕ ನಾನು ಓದಲು ಪ್ರಾರಂಭಿಸುವಾಗ ಇದು ನನ್ನ ಆಸಕ್ತಿಯ ಲೇಖನವಲ್ಲ ಅಂತಾನೇ ಅನಿಸುತ್ತಿತ್ತು.

ನನ್ನ ಊರು ಮಂಗಳೂರು. ಹೆಸರು ಕೆ ಪಿ ಅಶ್ವಿನ್ ರಾವ್. ಬಹಳ ಸಮಯ ನಮಗೆ ಇಲ್ಲಿ ವಿಶ್ವವಾಣಿ ಪ್ರಿಂಟ್ ಪೇಪರ್ ಸಿಗುತ್ತಿರ ಲಿಲ್ಲ. ಇ-ಪೇಪರ್ ಓದೋದು ಯಾಕೋ ನನಗೆ ಹಿಡಿಸುತ್ತಲೇ ಇರಲಿಲ್ಲ. ಪ್ರಸ್ತುತ ಪ್ರಿಂಟ್ ಆವೃತ್ತಿ ಸಿಗುತ್ತಿದೆ. ಅಂಕಣಗಳನ್ನು ಓದಲೆಂದೇ ವಿಶ್ವವಾಣಿ ಪತ್ರಿಕೆ ಕೊಳ್ಳುತ್ತೇನೆ. ಬಿಡುವಾದಾಗ ಹಳೆಯ ಪತ್ರಿಕೆಗಳನ್ನು ಓದುತ್ತೇನೆ. ಮಾರ್ಚ್ ೬ರ ಅಂಕಣ ‘ಸ್ಯಾಂಡಿ
ಆಲ್ಲೆನ್: ಏಳಡಿ ಏಳಿಂಚು ದಾಖಲೆ ಎತ್ತರದ ಮಹಿಳೆ!’ ಓದಿದೆ.

ಒಂದೇ ಗುಕ್ಕಿಗೆ ಪೂರ್ತಿ ಅಂಕಣ ಓದಿ ಮುಗಿಸಿದೆ. ನಿಜಕ್ಕೂ ಆಕೆಗೆ ಎತ್ತರವೇ ಸಮಸ್ಯೆಯಾಗಿ ಹೋಯಿತಲ್ವಾ ಎಂದು ಬೇಸರವೂ
ಆಯಿತು. ಅವಳ ಎತ್ತರ ಅವಳಿಗೆ ಎಷ್ಟೆಲ್ಲಾ ಸಮಸ್ಯೆ ತಂದಿಟ್ಟಿರಬಹುದು ಎಂದು ಅಂದಾಜಿಸುವಾಗಲೇ ಗಾಬರಿಯಾಗುತ್ತದೆ.
ಏಕೆಂದರೆ ನಾನೂ 6 ಅಡಿ ಎತ್ತರ ಇದ್ದೇನೆ. ಕೆಲವು ಮನೆಯೊಳಗೆ ಫ್ಯಾನ್ ನನ್ನ ತಲೆಗೆ ತಾಗುತ್ತದೆ. ಮಂಚದಲ್ಲಿ ಮಲಗಲು ಆಗುವುದಿಲ್ಲ. ಹೀಗಿರುವಾಗ ಸ್ಯಾಂಡಿಗೆ ಎಷ್ಟು ಸಮಸ್ಯೆಯಾಗಿರಬಹುದು ಎಂದು ಯೋಚನೆ ಕಾಡುತ್ತದೆ.

ಏನೇ ಇರಲಿ, ಈ ಅಂಕಣ ನನಗೆ ನಿಮ್ಮ ಇನ್ನಷ್ಟು ಬರಹಗಳನ್ನು ಓದಲು ಪ್ರೇರಣೆಯಾದೀತು ಎಂದು ನಂಬುವೆ. ಹಲವಾರು ಅಂಕಣಗಳನ್ನು ನಾನು ಓದದೇ ಮಿಸ್ ಮಾಡಿಕೊಂಡೆ ಎನ್ನುವ ಪಾಪಪ್ರಜ್ಞೆಯೂ ಕಾಡುತ್ತಿದೆ. ನಿಮ್ಮ ಅಂಕಣ ಬರಹಗಳ ಸಂಗ್ರಹ ಪುಸ್ತಕವಾಗಿದೆಯೇ? ತಿಳಿಸಿ.

ವಂದನೆಗಳು.’
‘ಬರಿಗಾಲಲ್ಲಿ ನಡೆದರೆ ಬಂಗಾರದ ಮನುಷ್ಯರಾಗುತ್ತೇವೆ’ ಲೇಖನಕ್ಕೆ ಬಂದ ಈ ಪ್ರತಿಕ್ರಿಯೆಯೂ ಆಪ್ಯಾಯಮಾನವಾದುದು. ‘ನಾವು ವಾಸವಾಗಿದ್ದ ಊರಿನಿಂದ ಪ್ರೌಢಶಾಲೆಗೆ ಐದು ಕಿಲೋಮೀಟರ್ ದೂರವಿತ್ತು ಹಾಗೂ ಮಣ್ಣಿನ ರಸ್ತೆಯಾಗಿತ್ತು. ಹಳ್ಳಿಯ ಮಕ್ಕಳು ನಾವೆಲ್ಲಾ ಮಳೆಗಾಲವಾಗಲಿ ಮಾರ್ಚ್- ಏಪ್ರಿಲ್ ತಿಂಗಳ ಕಡುಬೇಸಗೆಯೇ ಆಗಲಿ ಬರಿಗಾಲಲ್ಲಿ ನಡೆಯುತ್ತಿದ್ದೆವು. ಕೆಲವು ಹುಡುಗರು ಮತ್ತು ಹುಡುಗಿಯರು ಸಹ ಗುಂಪುಗೂಡಿ ನಡೆದೇ ಹೋಗುತ್ತಿದ್ದೆವು. ಹೆಜ್ಜೆ ಗುರುತಿನಿಂದ ನಮಗಿಂತ
ಯಾರು ಬೇಗ ಹೊರಟಿದ್ದಾರೆಂದು ತಿಳಿಯುತ್ತಿತ್ತು.

ಬಾಲ್ಯ ಗೆಳತಿಯ ಪ್ರಿಯತಮೆಯ ಹೆಜ್ಜೆಗಳು ಬೇಗ ಗುರುತಾಗುತ್ತಿತ್ತು. ಆ ಗೆಳತಿಯನ್ನು ಪ್ರಿಯತಮೆಯನ್ನು ಕಳೆದುಕೊಂಡು 60
ವರ್ಷಗಳಾಗಿವೆ. ಆ ನೆನಪು ಇನ್ನೂ ಕಾಡುತ್ತಿದೆ. ಬರಿಗಾಲಿನಲ್ಲಿ ನಡೆದು ಪ್ರೌಢಶಾಲೆಯ ಕೊನೆಯ ವರ್ಷದ ಕೆಲವು ತಿಂಗಳು
ಮಾತ್ರ ನನ್ನ ಕಾಲುಗಳು ಪೈಜಾಮ ಮತ್ತು ಚಪ್ಪಲಿಯನ್ನು ಕಂಡಿತೆಂದರೆ ನಿಮಗೆ ಅಚ್ಚರಿ ಆಗದೆಂದು ಭಾವಿಸುತ್ತೇನೆ. ನಗರ ಗಳಲ್ಲಿ ವಾಸಿಸುತ್ತಿರುವ ಪುಟ್ಟ ಮಕ್ಕಳ ಪೋಷಕರು ಮಕ್ಕಳಿಗೆ ಬರಿಗಾಲಲ್ಲಿ ಓಡಾಡಬೇಡವೆಂದು ಹೇಳುತ್ತಿದ್ದಾರೆ ಏಕೆಂದರೆ
ನಗರದ ರಸ್ತೆಗಳು ಹಾಗಿವೆ. ಆದರೆ ಹಳ್ಳಿಯ ಮಕ್ಕಳಿಗೆ ಹಾಗೆ ಹೇಳುವುದಿಲ್ಲ.

ಕಸ ಕಡ್ಡಿ ಸಗಣಿ ಮೇಲೆ ನಡೆದಾಡಿ ಬೆಳೆಯುತ್ತಿದ್ದಾರೆ. ಏನೇ ಇರಲಿ ಬರಿಗಾಲಿನಲ್ಲಿ ನಡೆಯುವ ಕುರಿತು ಅರಿವು ಮೂಡಿಸಿರುವು ದಕ್ಕೆ ಧನ್ಯವಾದಗಳು. ಕೊನೆಯ ಸಾಲಿನಲ್ಲಿ ನಮಗೆ ಕಟ್ಟಿಕೊಟ್ಟಿರುವ ಸಾಲನ್ನು ಓದಿ ಕಣ್ಣಿಂದ ಹನಿಗಳು ತಾವಾಗಿಯೇ ಹರಿದು ಬಂದು ನೋಟ ಮಂಜಾಯಿತು. ಮತ್ತೊಮ್ಮೆ ಧನ್ಯವಾದಗಳು. ಇತಿ ವಿಶ್ವಾಸದಿಂದ, ಕೂತಾರಹಳ್ಳಿ ರಾಮಚಂದ್ರ.’ ಪೂರಕ ಮಾಹಿತಿ ಮತ್ತು ಸ್ವಾನುಭವ ಕಥನಗಳಂತೆಯೇ ನನಗೆ ಇಷ್ಟವಾಗುವ ಇನ್ನೊಂದು ಪ್ರಕಾರವೆಂದರೆ ‘ಈ ಲೇಖನ ನನಗೆ ಉಪಯುಕ್ತವಾಯಿತು’ ರೀತಿಯ ಪ್ರತಿಕ್ರಿಯೆಗಳು.

ಇಲ್ಲೊಂದು ಉದಾಹರಣೆ ಇದೆ ನೋಡಿ. ‘ಅಕ್ಷರ ಸಂಡಿಗೆ ಇಂದಿನ ಸಂಡೆಗೆ ಥ್ಯಾಂಕ್ಸ್ ಡುಂಡಿಗೆ!’ ಲೇಖನಕ್ಕೆ ಬಂದ ಪ್ರತಿಕ್ರಿಯೆ. ಲೇಖನವನ್ನೋದಿ ಸುಮಾರು ಎರಡು ತಿಂಗಳಾದ ಮೇಲೆ ಬರೆದದ್ದು. ಅಷ್ಟು ತಡವಾಗಿದ್ದಕ್ಕೆ ಕಾರಣವೂ ಇದೆ, ಓದಿದಾಗ ಗೊತ್ತಾಗುತ್ತದೆ. ‘ನೀವು ಇತ್ತೀಚೆಗಿನ ಒಂದು ಅಂಕಣದಲ್ಲಿ ಸಂಡಿಗೆ ಬಗ್ಗೆ ಬರೆದಿದ್ದ ಹರಟೆಯಲ್ಲಿ sandigeatdoors.com ಮಳಿಗೆ ಬಗ್ಗೆಯೂ ಉಲ್ಲೇಖಿಸಿದ್ದಿರಷ್ಟೆ? ಅದೇ ಸಮಯದಲ್ಲಿ ನನ್ನ ತಾಯಿ ಬೆಂಗಳೂರಿನಿಂದ ಇಲ್ಲಿಗೆ ಅಲ್ಪಾವಧಿ ಸಮಯದಲ್ಲಿ ಹೊರಟಿ ದ್ದರು.

ನಾನು ಇಲ್ಲೇ ಕುಳಿತು ಆ ವೆಬ್‌ಸೈಟ್‌ನಲ್ಲಿ ಆರ್ಡರ್ ಮಾಡಿದೆ. ಬಗೆಬಗೆಯ ಉಪ್ಪಿನಕಾಯಿ, ಹಪ್ಪಳ, ಸಂಡಿಗೆಗಳು, ಸಿಹಿ ಖಾರ ತಿಂಡಿಗಳೆಲ್ಲವನ್ನೂ ಒಂದೇ ದಿವಸದಲ್ಲಿ ಬೆಂಗಳೂರಲ್ಲಿ ನಮ್ಮಮ್ಮನ ಮನೆಗೆ ತಲುಪಿಸಿದರು. ಸಿಹಿ ಖಾರ ತಿಂಡಿಗಳನ್ನು ಫ್ರೆಷ್ ಆಗಿ ಮಾಡಿಕೊಟ್ಟಿದ್ದರು. ನಮ್ಮ ಮನೆಯಲ್ಲಿ ಇಂತಹ ತಿಂಡಿಗಳನ್ನು ಸಾಮಾನ್ಯವಾಗಿ ಕೊಂಡು ತರುವ ಅಭ್ಯಾಸವಿಲ್ಲ, ಮನೆಯಲ್ಲೇ ಮಾಡ್ತೀವಿ. ನಾನು ಫೋನ್ ಮಾಡಿ ವಿಚಾರಿಸಿದೆ. ವೆಜಿಟೇರಿಯನ್ ಅಡುಗೆಮನೆ, ಶುಭ್ರವಾಗಿ ಮಾಡ್ತೀವಿ, ಈರುಳ್ಳಿ ಸಂಡಿಗೆ ಬಿಟ್ಟು ಇನ್ಯಾವುದರಲ್ಲೂ ಈರುಳ್ಳಿ ಬೆಳ್ಳುಳ್ಳಿ ಇಲ್ಲ ಅಂತ ಹೇಳಿದರು.

ಆನ್‌ಲೈನಲ್ಲೇ ಪೇಮೆಂಟ್ ಸಹ ಮಾಡಿದೆವು, ಸಮಯಕ್ಕೆ ಸರಿಯಾಗಿ ತಲುಪಿಸಿದರು. ಬೆಂಗಳೂರಿಂದ ಇಡೀ ಪಾರ್ಸೆಲ್ ಸುಖರೂಪ ವಾಗಿ ಸಿಡ್ನಿಗೆ ಬಂತು. ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಮನೆಮಂದಿಯೆಲ್ಲ ಖುಷಿಯಾಗಿ ಸವಿದೆವು! – ಡಾ.ನಂದಿನಿ ರಾಮಕೃಷ್ಣ, ಸಿಡ್ನಿ(ಆಸ್ಟ್ರೇಲಿಯಾ)’ ಇವೆಲ್ಲ ಕೆಲವು ಪ್ರಾತಿನಿಧಿಕ ನಿದರ್ಶನಗಳಷ್ಟೇ. ಮೌಲ್ಯಯುತ ಪ್ರತಿಕ್ರಿಯೆಗಳನ್ನು ಬರೆದು ಕಳುಹಿಸುವ ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು ಸಲ್ಲುತ್ತವೆ.

ಹಾಗಂತ ಇಮೋಜಿಗಳನ್ನಷ್ಟೇ ಪ್ರತಿಕ್ರಿಯೆಯಾಗಿ ಕಳುಹಿಸುವವರನ್ನು ನಾನು ಕಡೆಗಣಿಸುತ್ತೇನೆ ಅಂತ ಖಂಡಿತ ಅಲ್ಲ! ಅಕ್ಷರಗಳ ಮೂಲಕ ವಿಚಾರ ವಿನಿಮಯ ಎಷ್ಟು ಮುದ ಕೊಡುತ್ತದೆಂದು ನಿರೂಪಿಸಲಿಕ್ಕಷ್ಟೇ ಇವೊಂದಿಷ್ಟನ್ನು ಆಯ್ದುಕೊಂಡೆ. ತಿಳಿ ಯಾಗಿರಬೇಕು ಮತ್ತು ತಿಳಿವಳಿಕೆ ಹೆಚ್ಚುವಂತಿರಬೇಕು ಎಂಬ ಅಂಕಣದ ಮೂಲ ಆಶಯವನ್ನು ಪೋಷಿಸುವ ಓದುಗ ಮಿತ್ರ ರೆಲ್ಲರಿಗೂ ಹೃತ್ಪೂರ್ವಕ ಧನ್ಯವಾದ. ನಿಮ್ಮೆಲ್ಲರ ಪ್ರೀತಿವಿಶ್ವಾಸ ಹೀಗೆಯೇ ಮುಂದುವರಿಯಲಿ.