Friday, 13th December 2024

ನೆಪೋಲಿಯನ್‌ನನ್ನು ಸೋಲಿಸಿದ ಹೇನು!

ನಮ್ಮ ಶರೀರದ ಮೇಲೆ ವಾಸಿಸುವ, ರಕ್ತ ಹೀರಿ ಬದುಕುವ ಹೇನುಗಳು ಭೂಮಿಯಲ್ಲಿ ಮನುಷ್ಯ ಉದಯಿಸುವುದಕ್ಕೂ ಮೊದಲೇ ಹುಟ್ಟಿದ್ದವು.  ಜೀವವಿಕಾಸದಲ್ಲಿ ಇಂದಿಗೆ ೧೦ ದಶಲಕ್ಷ ವರ್ಷಗಳ ಹಿಂದೆ ಹುಟ್ಟಿದ ‘ನಕಲಿಪಿಥಿಕಸ್’ ಎಂಬ ಜೀವಿಯ ರಕ್ತವನ್ನು ಹೀರುತ್ತಾ ಹೇನುಗಳು ಸುಖವಾಗಿದ್ದವು.

ಮಾನವದೇಹದಲ್ಲಿ ಸುಮಾರು ೩೭.೨ ಲಕ್ಷ  ಕೋಟಿ ಜೀವಕೋಶಗಳಿದ್ದರೆ, ಸುಮಾರು ೧೦೦ ಲಕ್ಷ ಕೋಟಿ ಬ್ಯಾಕ್ಟೀರಿಯ, ವೈರಸ್, ಶಿಲೀಂಧ್ರ ಮುಂತಾದ ಸೂಕ್ಷ್ಮಜೀವಿಗಳು ಮನುಷ್ಯನ ದೇಹದ ಒಳಗೂ ಹೊರಗೂ ವಾಸಿಸುತ್ತವೆ. ಇವಲ್ಲದೆ ಮನುಷ್ಯನ ಉದರದಲ್ಲಿ ಕೊಕ್ಕೆಹುಳು, ದುಂಡುಹುಳು, ಲಾಡಿಹುಳು ಬದುಕನ್ನು ನಡೆಸುತ್ತವೆ. ಸಾಲದೆಂಬಂತೆ ಮನುಷ್ಯನ ರಕ್ತ ಹೀರಿ ಬದುಕುವ ಸೊಳ್ಳೆ, ಚಿಗಟ, ತಿಗಣೆಗಳಿವೆ. ಮಾನವನೊಂದಿಗೇ ವಿಕಾಸವಾಗಿ, ಅವನನ್ನೇ ಸಂಪೂರ್ಣ ಆಶ್ರಯಿಸುವ ಹೇನುಗಳಿವೆ. ಮನುಷ್ಯನು ತಾನುಂಡು, ತನ್ನ ಶರೀರದ ಜೀವಕೋಶಗಳನ್ನು ಪೋಷಿಸುವುದರ ಜತೆಗೆ ಈ ಎಲ್ಲವನ್ನೂ ಪೋಷಿಸಿ ಅವುಗಳ ಸಂತಾನ ವರ್ಧಿಸುವ ಕೆಲಸವನ್ನೂ ತನಗರಿವಿಲ್ಲದೆಯೇ ಮಾಡಬೇಕಾಗುತ್ತದೆ. ಇದು ಪ್ರಕೃತಿಯ ಒಂದು ‘ಚೋದ್ಯ’.

ನಮ್ಮ ಶರೀರದ ಮೇಲೆ ವಾಸಿಸುವ, ರಕ್ತ ಹೀರಿ ಬದುಕುವ ಹೇನುಗಳು ಸಣ್ಣ ಕೀಟಗಳು. ಭೂಮಿಯಲ್ಲಿ ಮನುಷ್ಯ ಉದಯಿಸುವುದಕ್ಕೂ ಮೊದಲೇ ಹೇನುಗಳು ಹುಟ್ಟಿದ್ದವು. ಜೀವವಿಕಾಸದಲ್ಲಿ ಇಂದಿಗೆ ೧೦ ದಶಲಕ್ಷ ವರ್ಷಗಳ ಹಿಂದೆ ಹುಟ್ಟಿದ ‘ನಕಲಿಪಿಥಿಕಸ್’ ಎಂಬ ಜೀವಿಯ ರಕ್ತವನ್ನು ಹೀರುತ್ತಾ ಹೇನುಗಳು ಸುಖವಾಗಿದ್ದವು. ೭ ದಶಲಕ್ಷ ವರ್ಷಗಳ ಹಿಂದೆ ಈ ‘ನಕಲಿಪಿಥಿಕಸ್’ನಿಂದ ಗೊರಿಲ್ಲ ಪ್ರತ್ಯೇಕಗೊಂಡಾಗ ಕೆಲವು ಹೇನುಗಳು ಗೊರಿಲ್ಲ ಜೀವನಶೈಲಿಗೆ ಹೊಂದಿಕೊಂಡವು. ಅವೇ ‘ಥೈರಸ್ ಗೊರಿಲ್ಲ’. ೬ ದಶಲಕ್ಷ ವರ್ಷಗಳ ಹಿಂದೆ ಜಿಂಪಾಂಜಿ ಪ್ರತ್ಯೇಕವಾಯಿತು, ಇದರ ಜೀವನಶೈಲಿಗೆ ಹೊಂದಿಕೊಂಡು ಮತ್ತಷ್ಟು ಹೇನುಗಳು ಬದಲಾದವು. ಅವೇ ‘ಪೆಡಿಕ್ಯುಲಸ್ ಶೇಫಿ’. ಸುಮಾರು ೩-೪ ದಶಲಕ್ಷ ವರ್ಷಗಳ ಹಿಂದೆ ಮಾನವಪೂರ್ವಜ ರೂಪುಗೊಂಡಾಗ, ‘ಪೆಡಿಕ್ಯುಲಸ್ ಹ್ಯೂಮನಿಸ್’ ಎಂಬ ಹೇನು ಅವನನ್ನು ಆಶ್ರಯಿಸಿತು. ಹಾಗೆಯೇ ಗೊರಿಲ್ಲದಲ್ಲಿದ್ದ ಮೂಲ ಥೈರಸ್ ತುಸು ಬದಲಾಗಿ ‘ಥೈರಸ್ -ಬಿಸ್’ ಎಂದಾಯಿತು. ಜಿಂಪಾಜಿಗೂ ನಮಗೂ ಶೇ.೯೮ರಷ್ಟು ವಂಶವಾಹಿಗಳು ಏಕರೂಪವಾಗಿವೆ. ಹಾಗಾಗಿ ಈ ನರವಾನರಗಳಲ್ಲಿದ್ದ ಹೇನುಗಳು ನಮ್ಮ ಒಡಲನ್ನು ಸುಲಭವಾಗಿ ತಮ್ಮ ಮನೆಯಾಗಿಸಿಕೊಂಡವು.

ತಲೆಯ ಹೇನು ಮತ್ತು ಒಡಲ ಹೇನು ಎಂಬ ೨ ಉಪ ಪ್ರಭೇದಗಳಾಗಿ ಪೆಡಿಕ್ಯುಲಸ್ ಹೇನುಗಳು ಬೇರ್ಪಟ್ಟವು. ಗೊರಿಲ್ಲಗಳಿಂದ ಬಂದಿದ್ದ ಮತ್ತೊಂದು ಪ್ರಭೇದ ಜನನಾಂಗಗಳ ಹೇನುಗಳು (ಥೈರಸ್ ಪ್ಯೂಬಿಸ್). ಪ್ಯೂಬಿಸ್ ಎಂದರೆ ‘ಗುಂಜೆಲುಬು’ ಇರುವ ಪ್ರದೇಶ. ಅಂದರೆ, ಜನನಾಂಗಗಳ ಸುತ್ತಲ ರೋಮರಾಶಿಯಲ್ಲಿ ಬದುಕುವ ಜೀವಿ ಎಂದರ್ಥ. ಮನುಷ್ಯನನ್ನು ಬಿಟ್ಟು ಉಳಿದಾವ ಜೀವಿಯ ಒಡಲ ಮೇಲೂ ಬದುಕಲಾರದ್ದರಿಂದ ಇವು ‘ನಿರ್ಬಂರ್ಧಿತ ಪರಾವಲಂಬಿಗಳು’. ಇವಕ್ಕೆ ರೆಕ್ಕೆಗಳಿಲ್ಲ, ಚಿಗಟಗಳಂತೆ ಕುಪ್ಪಳಿಸಲಾರವು. ಹಾಗಾಗಿ ಇವು ನಡೆದುಕೊಂಡೇ ಒಬ್ಬ ಮನುಷ್ಯನಿಗೆ ಹರಡುವುದು ಅನಿವಾರ್ಯ. ಹೇನುಗಳು ಮನುಷ್ಯನೊಂದಿಗೇ ಬದುಕುತ್ತಿವೆ ಎಂಬುದಕ್ಕಿರುವ ಹಳೆಯ ಪುರಾವೆ ಬ್ರೆಜಿಲ್‌ನಲ್ಲಿ ಸುಮಾರು ೧೦,೦೦೦ ವರ್ಷಗಳ ಹಿಂದೆ ಇದ್ದಿರಬಹುದಾದ ಮನುಷ್ಯನ ತಲೆಗೂದಲಲ್ಲಿ ‘ಸೀರು’ ರೂಪದಲ್ಲಿ ಕಂಡುಬಂದಿದೆ. ಸೀರು ಎಂದರೆ ಹೇನಿನ ಮೊಟ್ಟೆ. ಕ್ರಿ.ಪೂ. ೯,೦೦೦ ವರ್ಷಗಳ ಹಿಂದೆ ಬದುಕಿದ್ದ ಮನುಷ್ಯನ ದೇಹ ಇಸ್ರೇಲಿನ ‘ನಹಾರ್ ಹೇಮರ್’ ಗುಹೆಯಲ್ಲಿ ಸಿಕ್ಕಿದ್ದು, ಇದರಲ್ಲೂ ಹೇನುಗಳಿವೆ. ಹೇನು, ಸೀರು ತೆಗೆವ ಬಾಚಣಿಗೆಯೂ ದೊರೆತಿದೆ. ಪ್ರಾಚೀನ ಈಜಿಪ್ನ ಜನಸಾಮಾನ್ಯರು, ರಾಜವಂಶಸ್ಥರು, ರಾಣಿ  ಕ್ಲಿಯೋಪಾತ್ರಳ ತಲೆಗೂದಲಲ್ಲೂ ಹೇನುಗಳಿದ್ದವು. ಇವನ್ನು, ಇವುಗಳ ಮೊಟ್ಟೆಗಳನ್ನು ಬಾಚಿ ತೆಗೆಯಲೆಂದಿದ್ದ ಬಂಗಾರದ ಬಾಚಣಿಗೆ ಕ್ಲಿಯೋಪಾತ್ರಳ ಸಮಾಧಿಯಲ್ಲಿ ಸಿಕ್ಕಿದೆ. ಕೆಲವು ಮಮ್ಮಿಗಳಲ್ಲಿ ೪೦೦ಕ್ಕೂ ಹೆಚ್ಚು ಹೇನುಗಳು ಪತ್ತೆಯಾಗಿವೆ.

ಅಂದಿನವರು ತಲೆಯಲ್ಲಿ ಹೇನಿರುವುದನ್ನು ಸಹಜವಾಗಿ ಸ್ವೀಕರಿಸಿದ್ದರು. ಪ್ರಾಚೀನ ಈಜಿಪ್ಟ್ ಸಂಸ್ಕೃತಿಯ ‘ಈಜಿಪ್ಟ್ ಪ್ಯಾಪಿರಸ್’ ವೈದ್ಯಗ್ರಂಥದಲ್ಲಿ ‘ಬಾಯಿತುಂಬಾ ಖರ್ಜೂರ ಜಗಿದು, ಅದಕ್ಕೊಂದಷ್ಟು ನೀರು ಸೇರಿಸಿ, ಹೇನುಗಳಿದ್ದವರ ತಲೆ/ಒಡಲ ಮೇಲೆ ಉಗಿಯಬೇಕು’ ಎಂಬ ವಿವರಣೆಯಿದೆ. ನಿಸ್ಸಂದೇಹವಾಗಿ ಇದೊಂದು ಅವೈಜ್ಞಾನಿಕ ವಿಧಾನ. ಕ್ರಿ.ಪೂ.೧೨೦೦ರಷ್ಟು ಹಿಂದಿನ ಪ್ರಾಚೀನ ಚೀನಾದಲ್ಲಿ, ಹೇನಿನ ನಿವಾರಣೆಗೆ ಪಾದರಸ ಮತ್ತು ಶಂಖಪಾಷಾಣದ ಲವಣ ಗಳನ್ನು ಬಳಸುತ್ತಿದ್ದರೂ, ಇವು ಅಷ್ಟು ಪರಿಣಾಮಕಾರಿಯಾಗಿರಲಿಲ್ಲ. ಕ್ರಿ.ಪೂ.೪೫೦ರ ಹೊತ್ತಿಗೆ ಈಜಿಪ್ಷಿಯನ್ನರು ಅಡಿಯಿಂದ ಮುಡಿವರೆಗಿನ ದೇಹದ ಎಲ್ಲ ರೋಮಗಳನ್ನು ಕ್ಷೌರದಿಂದ ನಿವಾರಿಸಲು ಯತ್ನಿಸಿದರೂ ಅದು ಅಷ್ಟಾಗಿ ಕಾರ್ಯರೂಪಕ್ಕೆ ಬರಲಿಲ್ಲ. ಕ್ರಿ.ಶ.೧೦೦ರ ಹೊತ್ತಿಗೆ ಚೀನಾದಲ್ಲಿ ಪೈರೆಥ್ರಮ್ ಪುಡಿ (ಒಂದು ಬಗೆಯ ಸೇವಂತಿ ಹೂವಿನ ಪುಡಿ) ಬಳಸಿ ಹೇನುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದರು. ಮಾರ್ಕೊಪೋಲೊ ಈ ಪುಡಿಯನ್ನು ಚೀನಾದಿಂದ ತಂದು ಯುರೋಪಿಯನ್ನರಿಗೆ ೧೩೩೦ರ ಆಸುಪಾಸಿನಲ್ಲಿ ಪರಿಚಯಿಸಿದ. ೧೯೪೦ರ ವೇಳೆಗೆ ಪೈರೆಥ್ರಮ್
ಅನ್ನು ಸಂಸ್ಕರಿಸಿ ಅತೀವ ಪಟುತ್ವದ ರಾಸಾಯನಿಕ ಪೈರೆಥ್ರಿನ್ ಅನ್ನು ಬೇರ್ಪಡಿಸಿದರು.

ಇದು ಹೇನನ್ನು ಪರಿಣಾಮಕಾರಿಯಾಗಿ ಕೊಂದರೂ, ಸೀರುಗಳ ಮೇಲೆ ಅಂಥ ಪರಿಣಾಮಕಾರಿಯಾಗಿರಲಿಲ್ಲ. ೧೯೭೭ರ ಹೊತ್ತಿಗೆ ಪೈರೆಥ್ರಿನ್ ಘಟಕವನ್ನು ಸಂಯೋಜಿಸಿದರು. ಅದುವೇ ಪರ್ಮೆಥ್ರಿನ್. ೧೯೯೯ರ ಹೊತ್ತಿಗೆ ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾದಲ್ಲಿನ ಹೇನುಗಳು ಈ ಪರ್ಮೆಥ್ರಿನ್ ಸಂಯುಕ್ತಗಳಿಗೆ ಪ್ರತಿರೋಧ ಬೆಳೆಸಿ ಕೊಂಡುಬಿಟ್ಟವು. ಹೇನುಗಳು ಬ್ರಿಟಿಷರನ್ನು ಅದೆಷ್ಟು ಕಾಡಿದವೆಂದರೆ, ಇವುಗಳ ಮೂಲಕ ಲೌಸಿ (ಆಸಹ್ಯಕರ), ನಿಟ್ವಿಟ್ (ಮೂರ್ಖ), ನಿಟ್‌ಪಿಕರ್ (ಕ್ಷುಲ್ಲಕ ತಪ್ಪು ಹುಡುಕುವವ), ವಿತ್ ಎ -ನ್ ಟೂತ್ಡ್ ಕೂಂಬ್ (ವಿವರವಾಗಿ ಪರಿಶೀಲಿಸು) ಶಬ್ದಗಳು ಇಂಗ್ಲಿಷ್ ಪದಕೋಶ ಸೇರಿದವು. ಕವಿ ರಾಬರ್ಟ್ ಬರ್ನ್ಸ್ ‘ಟು ಎ ಲೌಸ್’ ಎಂಬ ಕವನವನ್ನೇ ಬರೆದ! ತಲೆ, ಒಡಲು ಮತ್ತು ಜನನಾಂಗದ ಹೇನುಗಳು ಮನುಷ್ಯನ ರಕ್ತ ಹೀರಿಯೇ ಬದುಕುತ್ತವೆ. ನಮಗೆ ತಿಳಿದಂತೆ ತಲೆಹೇನು ಯಾವುದೇ ರೋಗವನ್ನು ಹರಡುವುದಿಲ್ಲ. ಜನನಾಂಗ ಹೇನೂ ಯಾವುದೇ ರೋಗವನ್ನು ಹರಡದಿದ್ದರೂ ಲೈಂಗಿಕ ಸಂಪರ್ಕದ ಮೂಲಕ ಇತರರಿಗೆ ಹಬ್ಬುತ್ತದೆ (ವಸುಧೇಂದ್ರರ ‘ತೇಜೋತುಂಗಭದ್ರ’ ಕಾದಂಬರಿಯಲ್ಲಿ ಈ ಹೇನುಗಳು ಯುರೋಪಿಯನ್ನರಿಂದ ಭಾರತೀಯರಿಗೆ
ಹಬ್ಬುವ ಪ್ರಸಂಗವಿದೆ). ಆದರೆ ಒಡಲ ಹೇನುಗಳ ಬಗ್ಗೆ ಹೀಗೆನ್ನುವಂತಿಲ್ಲ. ನಮಗೆ ತಿಳಿದಂತೆ ಇವು ಮುಖ್ಯವಾಗಿ, ಕಂದಕ ಜ್ವರ (ಟ್ರೆಂಚ್ ಫಿವರ್), ಟೈಫಸ್ ಪಿಡುಗು (ಎಪಿಡೆಮಿಕ್ ಟೈಫಸ್) ಮತ್ತು ಮರುಕಳಿಸುವ ಜ್ವರ
(ರಿಲಾಪ್ಸಿಂಗ್ ಫಿವರ್) ಎಂಬ ೩ ರೋಗಗಳನ್ನು ಹರಡುತ್ತವೆ. ಯುದ್ಧ ಸಮಯದಲ್ಲಿ ಸೈನಿಕರು ಕಂದಕಗಳಲ್ಲಡಗಿ ಹೋರಾಡುವಾಗ ಒಬ್ಬರಿಂದ ಒಬ್ಬರಿಗೆ ಹರಡುವಂಥದ್ದೇ ಕಂದಕ ಜ್ವರ.

ಇದು ಮೊದಲ ಮಹಾಯುದ್ಧದ ವೇಳೆ ೧/೩ ಭಾಗದಷ್ಟು ಬ್ರಿಟಿಷ್ ಮತ್ತು ೧/೫ ಭಾಗದಷ್ಟು ಜರ್ಮನ್ ಸೈನಿಕರನ್ನು ಕಾಡಿತು. ಒಡಲ ಹೇನುಗಳಲ್ಲಿ ವಾಸಿಸುವ ‘ಬಾರ್ಟೊನೆಲ್ಲ ಕ್ವಿಂಟಾನ’ ಎಂಬ ಬ್ಯಾಕ್ಟೀರಿಯ ಈ ಜ್ವರಕ್ಕೆ ಕಾರಣ. ಸಾಮಾನ್ಯವಾಗಿ, ಸೈನಿಕರ ಉಡುಪುಗಳ ಹೊಲಿಗೆ ಪ್ರದೇಶಗಳಲ್ಲಿರುವ ಈ ಹೇನುಗಳು, ಅವರು ಇಕ್ಕಟ್ಟಾದ ಸ್ಥಳದಲ್ಲಿ ನಿದ್ರಿಸುವಾಗ ಇನ್ನೊಬ್ಬರಿಗೆ ಹರಡುತ್ತವೆ. ಇವು ಕಚ್ಚಿ, ಬ್ಯಾಕ್ಟೀರಿಯವು ಒಡಲು ಸೇರಿದ ೫-೨೦ ದಿನಗಳಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಸೋಂಕು ಹೃದಯಕ್ಕೆ ಹರಡಿದರೆ ಸಾವಾಗಬಹುದು. ಇಲ್ಲದಿದ್ದರೆ ಈ ಜ್ವರ ಅಂಥ ಮಾರಕವಾಗಿರಲಿಲ್ಲ. ಈ ಜ್ವರಕ್ಕೆ ಕಾರಣವಾಗುವ ಒಡಲ ಹೇನುಗಳ ನಿಗ್ರಹಕ್ಕೆ ೧೯೨೦ರ ಹೊತ್ತಿಗೆ ‘ಆಂಟಿ-ಲೌಸ್ ೬೩ ಪೌಡರ್’ ರೂಪುಗೊಂಡಿತು. ೬೩ ಎಂಬುದು ಈ ಹೇನುಗಳ ನಿಗ್ರಹಕ್ಕೆ ನಡೆಸಿದ ೬೩ನೇ ಪ್ರಯೋಗಾರ್ಥದ ಪುಡಿ ಎಂದರ್ಥ. ಇದನ್ನು ಸೈನಿಕರು ಹಚ್ಚಿಕೊಂಡ ೨೪ ಗಂಟೆಯಲ್ಲಿ ಈ ಹೇನುಗಳು ಶೇ.೯೫ರಷ್ಟು ನಿರ್ನಾಮವಾದವು. ಈಗಲೂ ವಿಶ್ವದ ಹಲವೆಡೆ ಕಂದಕ ಜ್ವರದ ಅಸ್ತಿತ್ವವಿದ್ದು, ಡಾಕ್ಸಿಸೈಕ್ಲಿನ್/ಎರಿಥ್ರೋಮೈಸಿನ್/ ಅಜಿತ್ರೋಮೈಸಿನ್‌ನಂಥ ಪ್ರತಿಜೈವಿಕಗಳನ್ನು ೪-೬ ವಾರ ನೀಡಿ ಇದನ್ನು ಗುಣಪಡಿಸಬಹುದು.

‘ರಿಕೆಟ್ಸಿಯೇ ಪ್ರೊವಾಜೆಕಿ’ ಎಂಬ ಸೂಕ್ಷ್ಮಜೀವಿ ಟೈಫಸ್ ಪಿಡುಗಿಗೆ ಕಾರಣ. ಇದನ್ನು ಒಡಲ ಹೇನು ಹರಡುತ್ತವೆ. ಮನುಷ್ಯ ಇದುವರೆಗೂ ಮಾಡಿದ ಯುದ್ಧಗಳಲ್ಲಿ ಸತ್ತಿರುವ ಜನಕ್ಕಿಂತಲೂ ಹೆಚ್ಚು ಜನ ಈ ಟೈಫಸ್ ಪಿಡುಗಿನಿಂದ ಸತ್ತಿದ್ದಾರೆಂದರೆ ಇದೆಂಥ ಮಾರಕ ರೋಗವೆಂಬುದು ಅರ್ಥವಾಗುತ್ತದೆ. ಕೊನೆಗೆ ವಿಜ್ಞಾನಿಗಳು ಸೈನಿಕರ ಬರಿಮೈ ಮೇಲೆ ಡಿಡಿಟಿ ಸಿಂಪಡಿಸಿ ಒಡಲ ಹೇನುಗಳನ್ನು ಕೊಂದ ಮೇಲೆ, ಟೈಫಸ್ ಪಿಡುಗಿನ ಹತೋಟಿಯಾಯಿತು. ಕೊನೆಗೆ ಫ್ರಾನ್ಸ್‌ನ ಬ್ಯಾಕ್ಟೀರಿಯಾ ತಜ್ಞ ಚಾರ್ಲ್ಸ್ ಜೂಲ್ಸ್ ಹೆನ್ರಿ ನಿಕೊಲ್ಲೆ, ಒಡಲ ಹೇನುಗಳು ಟೈಫಸ್ ಕ್ರೊಮಿಯನ್ನು ಹರಡುತ್ತವೆ ಎಂಬುದನ್ನು ವೈಜ್ಞಾನಿಕವಾಗಿ ನಿರೂಪಿಸಿದ. ಈಗ ಟೈಫಸ್ ಪಿಡುಗಿಗೆ ಲಸಿಕೆಯಿದೆ. ೩ನೇ ಮಹಾಯುದ್ಧದಲ್ಲಿ ಜೈವಿಕಯುದ್ಧ ನಡೆದು ರಿಕೆಟ್ಸಿಯೇ ಪ್ರೊವಾಜೆಕಿಯನ್ನು ಪ್ರಯೋಗಿಸಿದರೆ ಲಕ್ಷಾಂತರ ಜನ ಸಾಯುವುದು ಖಚಿತ. ಒಡಲ ಹೇನು ‘ಬೊರೆಲಿಯ ರಿಕರೆಂಟಿಸ್’ ಎಂಬ ಬ್ಯಾಕ್ಟೀರಿಯವನ್ನು ಹರಡಿ, ಮರುಕಳಿಸುವ ಜ್ವರಕ್ಕೆ ಕಾರಣವಾಗುತ್ತಿದೆ. ಇದೂ ಪಿಡುಗಿನ ಸ್ವರೂಪ ತಳೆಯಬಹುದು. ಸೋಂಕು ಮಿದುಳು ಅಥವಾ ಹೃದಯಕ್ಕೆ ಹರಡಿದರೆ ಸಾವಾಗಬಹುದು, ಮಹಿಳೆಯರಲ್ಲಿ ಗರ್ಭಸ್ರಾವವಾಗಬಹುದು ಅಥವಾ ಗರ್ಭಸ್ಥ ಶಿಶುವನ್ನು ಕೊಲ್ಲಬಹುದು. ಡಾಕ್ಸಿಸೈಕ್ಲಿನ್‌ನಂಥ ಪ್ರತಿಜೈವಿಕಗಳನ್ನು ಸಕಾಲದಲ್ಲಿ ನೀಡಿ ಇದನ್ನು ಗುಣಪಡಿಸಬಹುದು.

ಮನುಷ್ಯ ಹುಟ್ಟಿದಾಗಿನಿಂದ ಅವನ ಜತೆಯಿರುವ ಹೇನುಗಳು, ಅವನೊಡನೆ ವಿಶ್ವದೆಲ್ಲೆಡೆ ವ್ಯಾಪಿಸಿವೆ. ಹೇನುಗಳ ತಳಿಸ್ವರೂಪದ ಅಧ್ಯಯನದ ಮೂಲಕ ಮಾನವನ ಉಗಮ, ವಲಸೆಯ ಬಗ್ಗೆ ಹೆಚ್ಚಿನ ಮಾಹಿತಿ ದಕ್ಕಿದೆ. ಪ್ರತಿದಿನವೂ ಸ್ನಾನಮಾಡದ ಮತ್ತು ಬಟ್ಟೆ ಬದಲಿಸದ, ವೈಯಕ್ತಿಕ ಸ್ವಚ್ಛತೆಯಿಲ್ಲದ ಜನರಲ್ಲಿ, ವಿಪರೀತ ಜನರಿರುವೆಡೆ ಹೇನುಗಳು ಹೆಚ್ಚಿರುತ್ತವೆ. ವೈದ್ಯರ ಶಿಫಾರಸಿನಂತೆ ಸೂಕ್ತ ಔಷಧ ಬಳಸಿ ವೈಯಕ್ತಿಕ ನೈರ್ಮಲ್ಯವನ್ನು ಪರಿಪಾಲಿಸುವುದರಿಂದ ಹೇನುಗಳ ಉಪದ್ರವದಿಂದ ಪಾರಾಗಬಹುದು.