Wednesday, 23rd October 2024

Lokesh Kayarga Column: ಬದುಕೇ ಕಲಬೆರಕೆ, ತುಪ್ಪವೇನು ಮಹಾ ?!

ಲೋಕಮತ

ಲೋಕೇಶ್‌ ಕಾಯರ್ಗ

ಏಳುಕೊಂಡಲವಾಡ, ತಿರುಪತಿ ತಿಮ್ಮಪ್ಪ ಕೋಪಿಸಿಕೊಳ್ಳುವುದಾದರೆ ಕಾರಣಗಳು ನೂರೆಂಟಿವೆ. ಆದರೆ ಸದ್ಯಕ್ಕೆ ಭಕ್ತರು ಕೋಪಿಸಿಕೊಂಡಿದ್ದಾರೆ. ತಿಮ್ಮಪ್ಪನ ಪ್ರಸಾದ ರೂಪದ ಲಡ್ಡುವಿಗೆ ಪ್ರಾಣಿಜನ್ಯ ಕೊಬ್ಬು ಬಳಸುವುದೇ ?, ಛೆ, ಇಂತಹ ಅಪಚಾರವನ್ನು ದೇವರು ಕ್ಷಮಿಸುವನೇ ಎನ್ನುವುದು ಅನುಯಾಯಿಗಳ ಪ್ರಶ್ನೆ. ಇಲ್ಲಿ ಭಕ್ತರ ಧಾರ್ಮಿಕ ಭಾವನೆಗಳಿಗೆ, ನಂಬಿಕೆಗಳಿಗೆ ಘಾಸಿಯಾಗಿರುವುದು ನಿಜ. ಇದೇ ಕೋಪದಲ್ಲಿ ಧಾರ್ಮಿಕ ಕ್ಷೇತ್ರಗಳ ಶುದ್ಧೀಕರಣವೂ ಆರಂಭವಾಗಿದೆ. ಆದರೆ ಈ ಶುದ್ದೀಕರಣದ ವ್ಯಾಖ್ಯೆ ಹಿರಿದಾಗಬೇಕಿದೆ. ಕೊಬ್ಬಿನ ವಿಚಾರ ನಮ್ಮ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದ್ದು ಇತಿಹಾಸದಲ್ಲಿ ಓದಿದ ವಿಷಯ. ಈಗ ಮತ್ತದೇ ಕೊಬ್ಬಿನ ನೆಪದಲ್ಲಿ ನಮ್ಮ ಜೀವನದ ಕಲಬೆರಕೆಗಳಿಗೆ ನಮಗೆ ನಾವೇ ತಡೆ ಹಾಕಿಕೊಳ್ಳಬೇಕಾಗಿದೆ.

ಒಂದಂತೂ ಸ್ಪಷ್ಟ. ಕೆಲವೊಂದು ವಿಚಾರಗಳಲ್ಲಿ ನಮ್ಮನ್ನು ಎಚ್ಚರಿಸಲು ‘ದೇವರೇ’ ಬರಬೇಕು. ನಮ್ಮ ‘ ನಂಬಿಕೆ ಗಳು’ ಅಲುಗಾಡಬೇಕು. ಇಲ್ಲದೇ ಹೋಗಿದ್ದರೆ ಈ ದೇಶದಲ್ಲಿ ಕಲಬೆರಕೆ ಒಂದು ವಿಷಯವೇ ಅಲ್ಲ. ನಾವು ಪ್ರತಿದಿನ ತಿನ್ನುವ ಆಹಾರ ಕಲಬೆರಕೆ ಎನ್ನುವುದು ಗೊತ್ತು. ಅಡುಗೆ ಮನೆಯಲ್ಲಿ ನಾವು ದಿನನಿತ್ಯ ಬಳಸುವ ಪದಾರ್ಥಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದರೆ, ಬೆರಕೆಯಾಗದ ಪದಾರ್ಥಗಳೇ ಸಿಗದೆ ನಾವೇ ಗಿರಕಿ ಹೊಡೆಯುವ ಪರಿಸ್ಥಿತಿ ಬರಬಹುದು. ಆದರೂ ನಾವು ಕಮಕ್, ಕಿಮಕ್ ಎನ್ನದೇ ಆಹಾರ ಸೇವಿಸುತ್ತೇವೆ. ಮುಂದೆ ನಮ್ಮ ಕಲಬೆರಕೆ ಆಹಾರದ ಕಾರಣಕ್ಕೆ ಬರಬಾರದ ರೋಗಗಳನ್ನು ಬರಮಾಡಿಕೊಂಡು ಸಾಯುವವರೆಗೂ ಮಾತ್ರೆಗಳನ್ನು ನುಂಗು ತ್ತೇವೆ. ಇಲ್ಲೂ ಅಸಲಿ ಮಾತ್ರೆ ಯಾವುದು, ನಕಲಿ ಮಾತ್ರೆ ಯಾವುದೆಂದು ತಿಳಿಯದೇ ಬೇಸ್ತು ಬೀಳುತ್ತೇವೆ. ಆದರೆ ಈ ಯಾವ ವಿಷಯಗಳೂ ನಮ್ಮನ್ನು ರೊಚ್ಚಿಗೆಬ್ಬಿಸುವುದಿಲ್ಲ.

ಕಳೆದ ಮೇ ತಿಂಗಳಲ್ಲಿ ನೆರೆಯ ದೇಶ ನೇಪಾಳದಲ್ಲಿ ಎವರೆಸ್ಟ್ , ಎಂಡಿಎಚ್ ಮೊದಲಾದ ನಮ್ಮ ದೇಶದ ಪ್ರಸಿದ್ಧ ಕಂಪನಿಗಳ ಮಸಾಲೆ ಪದಾರ್ಥಗಳಿಗೆ ನಿಷೇಧ ಹೇರಲಾಯಿತು. ಇದಕ್ಕೂ ಮೊದಲು ಸಿಂಗಾಪುರ ಮತ್ತು ಹಾಂಕಾಂಗ್‌ ನಲ್ಲೂ ಈ ಕಂಪನಿಗಳ ಮಸಾಲೆ ಪದಾರ್ಥಗಳ ಆಮದಿಗೆ ನಿರ್ಬಂಧ ಹೇರಲಾಗಿತ್ತು. ಈ ಎರಡು ಕಂಪನಿಗಳ ಮಸಾಲೆ ಉತ್ಪನ್ನಗಳಲ್ಲಿ ಕ್ಯಾನ್ಸರ್ ಕಾರಕ ಕೀಟನಾಶಕ, ಎಥಿಲೀನ್ ಆಕ್ಸೈಡ್ ಅಂಶ ಇದೆ ಎಂದು ಅಲ್ಲಿನ ಪ್ರಯೋಗಾಲಯಗಳ ವರದಿ ತಿಳಿಸಿತ್ತು. ಈ ಘಟನೆ ನಡೆದ ಬೆನ್ನಿಗೇ ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮೊದಲಾದ ದೇಶಗಳಲ್ಲೂ ಭಾರತದ ಕಂಪನಿಗಳ ಮಸಾಲೆ ಪದಾರ್ಥಗಳ ಮೇಲೆ‌‌ ನಿಗಾವಹಿಸಿ ಪರೀಕ್ಷೆಗೆ ಒಳಪಡಿಸಲಾಯಿತು. ತನ್ನ ಮೇಲೆ ಟೀಕೆಗಳು ಬರಬಾರದೆಂಬ ಕಾರಣಕ್ಕೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವೂ ಈ ಸಂಬಂಧ ತನಿಖೆಗೆ ಆದೇಶ ನೀಡಿತು. ಇದಾಗಿ ನಾಲ್ಕು ತಿಂಗಳು ಕಳೆದಿವೆ. ಈ ಕಂಪನಿಗಳ ಉತ್ಪನ್ನಗಳು ನಮ್ಮ ಮಾಲ್, ದಿನಸಿ ಅಂಗಡಿಗಳ ರ್ಯಾಕ್‌ಗಳಲ್ಲಿ ಭದ್ರವಾಗಿ ಕುಳಿತಿವೆ. ನಾವು ಎಂದಿನಂತೆ, ಒಂದಕ್ಕೊಂದು ಫ್ರೀ ಎಂಬ ಖುಷಿಯಲ್ಲಿ ಎರಡು ಮೂರು ಪ್ಯಾಕೆಟ್‌ಗಳನ್ನು ಖರೀದಿಸಿ ಸಂಭ್ರಮಿಸು ತ್ತಿದ್ದೇವೆ. ನೇಪಾಳದಂತಹ ಸಣ್ಣ ರಾಷ್ಟ್ರಕ್ಕೆ ವಿಷವಾಗಿ ಕಂಡಿದ್ದು, ನಮಗೆ ಕಾಣಲಿಲ್ಲ. ಏಕೆಂದರೆ ಇಲ್ಲಿ ದೇವರ ವಿಷಯ ಬರಲಿಲ್ಲ.

ಎಣ್ಣೆ ಮಾಫಿಯಾ !

ನಮ್ಮ ಅಡುಗೆ ಮನೆಯಲ್ಲಿ ದಿನನಿತ್ಯ ಬಳಸುವ ಖಾದ್ಯ ತೈಲಗಳು ಕಲಬೆರಕೆಯುಕ್ತ ಎನ್ನುವ ವಿಚಾರ ನಮಗೆ ತಿಳಿಯದ್ದೇನಲ್ಲ. ಈ ಸಂಬಂಧ ಅದೆಷ್ಟೋ ವಿಡಿಯೋಗಳನ್ನು, ತಜ್ಞರ ವರದಿಗಳನ್ನು ನಾವೇ ನಮ್ಮ ಮೊಬೈಲ್‌ನಲ್ಲಿ ನೋಡಿ, ಬೇರೆಯವರಿಗೂ ಫಾರ್ವರ್ಡ್ ಮಾಡಿದ್ದೇವೆ. ನಾವು ಮಾತ್ರ ಅದೇ ಬ್ರಾಂಡಿನ ಸೂರ್ಯಕಾಂತಿ, ಶೇಂಗಾ, ಸಾಸಿವೆ, ರೈಸ್ ಆಯಿಲ್‌ಗಳನ್ನು ಬಳಸುತ್ತಿದ್ದೇವೆ. ಒಂದು ಲೀಟರ್ ಶೇಂಗಾ ಎಣ್ಣೆ ತಯಾರಿಸಬೇಕಾದರೆ ಕನಿಷ್ಠ ಮೂರರಿಂದ ನಾಲ್ಕು ಕಿಲೋ ಕಡಲೆ ಬೀಜ ಬೇಕು. ಕಿಲೋಗೆ ಸದ್ಯದ 140ರ ದರದಲ್ಲಿ ಲೆಕ್ಕ ಹಾಕಿದರೆ 560 ರು.ಬೇಕು. ಸೂರ್ಯಕಾಂತಿ ಸೇರಿದಂತೆ ಬೇರೆ ಎಲ್ಲ ಖಾದ್ಯ ತೈಲಗಳ ನೈಜ ತಯಾರಿ ವೆಚ್ಚವನ್ನು ಲೆಕ್ಕ ಹಾಕಿದರೆ ಧಾರಣೆ 500 ರು. ಮೇಲಿರಬೇಕು. ಆದರೆ ಇವೆಲ್ಲವೂ 120ರಿಂದ 200 ರು. ಒಳಗೆ ಸಿಗಬೇಕಿದ್ದರೆ ಕಲಬೆರಕೆ ಆಗಿರಲೇಬೇಕೆನ್ನುವುದು ನಮಗೂ ಗೊತ್ತು. ಇವು ಶುದ್ದಾತಿಶುದ್ಧ ಎಂದು ಕ್ಯಾನ್ ಹಿಡಿದು ಪ್ರಚಾರ ಮಾಡುವ ನಮ್ಮ ಸಿನಿಮಾ ತಾರೆಯರಿಗೂ ಗೊತ್ತು. ಕಲಬೆರಕೆ ಮೇಲೆ ಕಣ್ಣಿಡಬೇಕಾದ ಕೇಂದ್ರ ಮತ್ತು ರಾಜ್ಯದ ಆಹಾರ ಸುರಕ್ಷತೆ ಅಧಿಕಾರಿಗಳಿಗೂ ಗೊತ್ತು. ಆದರೂ ಲಡ್ಡು ವಿಚಾರದಲ್ಲಿ ಬಂದ ಸಿಟ್ಟು ಇಲ್ಲಿ ಬರುವುದೇ ಇಲ್ಲ. ಏಕೆಂದರೆ ಇಲ್ಲಿ ದೇವರ ವಿಷಯ ಬಂದಿಲ್ಲ.

ಬೇರೆ ಎಣ್ಣೆಗಳ ಗೊಡವೆ ಬೇಡವೆಂದು ನಮ್ಮ ಊರಿನ ಗಿರಣಿಗಳಿಂದ ‘ಶುದ್ದ ತೆಂಗಿನ ಎಣ್ಣೆ’ ತರಲು ಹೋದರೆ ಅಲ್ಲೂ ತೆಂಗಿನ ಎಣ್ಣೆಯ ಬಿಳಿ ಕ್ಯಾನ್‌ಗಳ ಜತೆ ಬಣ್ಣರಹಿತ ಪೆಟ್ರೋಲಿಯಂ ತ್ಯಾಜ್ಯ ತುಂಬಿಸಿದ ಕ್ಯಾನ್‌ಗಳು ಕಣ್ಣಿಗೆ ರಾಚುತ್ತವೆ. ಹಾಗೆ ನೋಡಿದರೆ 100 ರು.ಗೆ ಐದು ತೆಂಗಿನಕಾಯಿ ಖರೀದಿಸಿ,ಒಣಗಿಸಿ ಗಾಣಕ್ಕೆ ಕೊಟ್ಟರೂ 200 ರು. ಒಳಗೆ ಶುದ್ಧ ಕೊಬ್ಬರಿ ಎಣ್ಣೆ ತರಬಹುದು. ಆದರೆ ಈ ಎಣ್ಣೆ ಮೇಲೆ ಆರೋಪಿಸಿದ ಕೊಲೆಸ್ಟ್ರಾಲ್ ಭೂತ ನಮ್ಮ ದೇಹವಿಡೀ ಆವರಿಸಿದೆ.

ಹಾಲಲ್ಲ ಹಾಲಾಹಲ

ಕಲಬೆರಕೆ ವಿಚಾರದಲ್ಲಿ ಕಂಪನಿಗಳನ್ನಷ್ಟೇ ದೂರಬೇಕಿಲ್ಲ. ಹಾಲಿಗೆ ಸ್ವಲ್ಪವಾದರೂ ನೀರು ಸೋಕಿಸದೇ ಮಾರಾಟ ಮಾಡಿದರೆ ಹಸುವಿಗೆ ದೃಷ್ಟಿಯಾಗುತ್ತದೆ ಎಂಬ ನಂಬಿಕೆಯ ನಾವು ಈಗ ಹಸುಗಳಿಲ್ಲದೆಯೇ ಹಾಲು ಕರೆಯಲು ಕಲಿತಿದ್ದೇವೆ. ನೆರೆ ರಾಜ್ಯಗಳ ದೊಡ್ಡ ಡೈರಿಗಳ ಹೆಸರಿನಲ್ಲಿ ಬರುತ್ತಿರುವ ಹಾಲಿನಲ್ಲಿ ಮೊದಲು ಗೆಣಸಿನ ಪೌಡರ್, ಚಾಕ್ ಪೀಸ್ ಮಿಕ್ಸ್‌ ಆಗುತ್ತಿತ್ತು. ಈಗ ಇನ್ನೂ ಮುಂದುವರಿದು ಯೂರಿಯಾ, ಕಾಸ್ಟಿಕ್ ಸೋಡಾ, ಹೈಡ್ರೋಜನ್ ಪೆರೋಕ್ಸೈಡ್‌ನಂತಹ ರಾಸಾಯನಿಕಗಳೊಂದಿಗೆ ಹಾಲು ನಿಜಕ್ಕೂ ಹಾಲಾಹಲವಾಗಿದೆ. ಕೋಯಾ ತಯಾರಿಸ ಬೇಕೆಂದರೆ ಈಗ ರದ್ದಿ ಪೇಪರ್ ಇದ್ದರೆ ಸಾಕು. ಬೆಣ್ಣೆ, ಐಸ್‌ಕ್ರೀಮ್ ತಯಾರಿಸಲು ತಾಳೆ ಎಣ್ಣೆ, ಸೋಯಾ ಎಣ್ಣೆ ಇದ್ದರೂ ಸಾಕು !

ಇನ್ನು ಪ್ರಕೃತಿದತ್ತವಾಗಿ ದೊರೆಯುತ್ತಿದ್ದ ಜೇನುತುಪ್ಪವೂ ಈಗ ನಾಲ್ಕು ಗೋಡೆಗಳ ಮಧ್ಯೆ ತಯಾರಾಗುತ್ತಿದೆ. ಕೆಲ ತಿಂಗಳ ಹಿಂದೆ ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು, ಕರಾವಳಿ ಮತ್ತು ಮಲೆನಾಡು ಭಾಗದ ‘ಶುದ್ಧ ಜೇನುತುಪ್ಪ’ದ ಅಸಲಿ ಕಥೆಯನ್ನು ಬಯಲಿಗೆಳೆದಿದ್ದರು. ಕರಾವಳಿ, ಮಲೆನಾಡು, ಕೊಡಗಿನಲ್ಲಿ ಜೇನು ವ್ಯವಸಾಯಗಾರರೇ ಕಟ್ಟಿ ಕೊಂಡ ಸಹಕಾರ ಸಂಘಗಳಿವೆ. ಇಲ್ಲಿ ಸಿಗುವ ಜೇನುತುಪ್ಪ ಶುದ್ಧ ಎಂಬ ನಂಬಿಕೆಯಿಂದ ಈ ಭಾಗದ ದೇಗುಲಗಳಿಗೆ ಭೇಟಿ ಕೊಡುವವರು ತೀರ್ಥದ ಬಾಟಲಿ ಜತೆ ಜೇನುತುಪ್ಪದ ಬಾಟಲಿಯನ್ನೂ ತರುವುದು ವಾಡಿಕೆ. ಆದರೆ ಇಲ್ಲೂ ನಕಲಿ ಜೇನುತುಪ್ಪ ಬಿಕರಿಯಾಗುತ್ತಿರುವ ದೂರುಗಳಿವೆ. ದಿನ ಬೆಳಗಾಗುವುದರೊಳಗೆ ಲೀಟರ್‌ಗಟ್ಟಲೆ ಜೇನುತುಪ್ಪ ತಯಾರಿಗೆ ಬೇಕಾದ ಸಕ್ಕರೆ ಮತ್ತು ಕೊಳೆತ ಬೆಲ್ಲದ ಪಾಕ ಪೂರೈಸುವ ಏಜೆಂಟರಿದ್ದಾರೆ. ಈ ನಕಲಿ ಜೇನಿನಲ್ಲಿ ನಮ್ಮ ಎಷ್ಟೊಂದು ದೇವರುಗಳಿಗೆ ಪಂಚಾಮೃತ ಅಭಿಷೇಕ ನಡೆದಿರಬಹುದು ಯೋಚಿಸಿ ?

ಮಂಡ್ಯ ಮೂಲದ ಪತ್ರಕರ್ತ ಗೆಳೆಯರೊಬ್ಬರ ಬಳಿ ಇತ್ತೀಚೆಗೆ ಸಾವಯವ ಬೆಲ್ಲದ ಬಗ್ಗೆ ವಿಚಾರಿಸಿದ್ದೆ. ಸಾವಯವ ಬೆಲ್ಲದ ಹೆಸರಿನಲ್ಲಿ ನಡೆಯುತ್ತಿರುವ ದಂಧೆಯ ಪ್ರತ್ಯಕ್ಷದರ್ಶಿಯಾಗಿರುವ ಅವರು ಅಂಗಡಿಯಲ್ಲಿ ದೊರೆಯುವ ಮಾಮೂಲಿ ಬೆಲ್ಲವೇ ಎಷ್ಟೋ ವಾಸಿ ಅಂದಿದ್ದರು. ಸಾವಯವದ ಹೆಸರಿನಲ್ಲಿ ನಾವು ಕಣ್ಣು ಮುಚ್ಚಿ ಖರೀದಿಸು ತ್ತಿರುವ ಅದೆಷ್ಟೋ ಉತ್ಪನ್ನಗಳು ಅದೆಷ್ಟು ಸಾವಯವ ಎಂದು ಪರೀಕ್ಷಿಸಿದರಷ್ಟೇ ತಿಳಿಯಬಹುದು.

ವೆನಿಲ್ಲದ ದುರಂತ ಕಥೆ
20 ವರ್ಷಗಳ ಹಿಂದಿನ ಮಾತು. ಪತ್ರಿಕೆಗಳಲ್ಲಿ ‘ವೆನಿಲ್ಲಾ ಬೆಳೆಯಿರಿ, ಲಕ್ಷಾಧೀಶರಾಗಿ’ ಎಂಬ ಹೆಡ್‌ಲೈನ್‌ಗಳು ರಾರಾ ಜಿಸುತ್ತಿದ್ದವು. ಅಂದು ಒಂದು ಕಿಲೋ ವೆನಿಲ್ಲಾ ಕೋಡಿಗೆ 10 ಗ್ರಾಮ್ ಬಂಗಾರಕ್ಕಿಂತ ಹೆಚ್ಚಿನ ಧಾರಣೆ ಇತ್ತು. ಆದರೆ ರಾತ್ರೋರಾತ್ರಿ ಲಕ್ಷಾಧೀಶರಾಗಲು ಹೊರಟ ಕೆಲವರು ವೆನಿಲ್ಲಾ ಕೋಡಿನೊಳಗೆ ಕಬ್ಬಿಣದ ತಂತಿ ಸುರಿದು ಕಳುಹಿಸಿ ದ್ದರು. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಿಗೆ ವೆನಿಲ್ಲಾ ಹೊತ್ತು ಹೊರಟ ನಾಲ್ಕೈದು ಹಡಗುಗಳನ್ನು ಬಂದರು ಪ್ರವೇಶಿಸಲೂ ಅವಕಾಶ ನೀಡದೇ ವಾಪಸ್ ಕಳುಹಿಸಲಾಗಿತ್ತು. ಅಂದು ಕುಸಿದ ವೆನಿಲ್ಲಾ ಧಾರಣೆ ಇದುವರೆಗೂ ಚೇತರಿಕೆ ಕಂಡಿಲ್ಲ. ಈಗ ನಾವು ತಿನ್ನುವ ಐಸ್‌ಕ್ರೀಮ್ ನಲ್ಲಿ ಬಳಸುವ ಕೃತಕ ವೆನಿಲ್ಲಾಕ್ಕೆ ಪೇಪರ್ ಮಿಲ್‌ನ ತ್ಯಾಜ್ಯ, ಕಲ್ಲಿದ್ದಲು ಟಾರ್ ಇದ್ದರೆ ಸಾಕು! ಹಾಗೆಂದು ಉತ್ತಮ ಗುಣಮಟ್ಟದ ವೆನಿಲ್ಲಾಗೆ ಹೆಸರಾದ ಮಡಗಾಸ್ಕರ್‌ನ ಆರ್ಥಿಕತೆ ಇಂದಿಗೂ ವೆನಿಲ್ಲಾವನ್ನೇ ಅವಲಂಬಿಸಿದೆ.

ಕರಾವಳಿ ಮತ್ತು ಮಲೆನಾಡ ಗಡಿ ಮೀರಿ ಬಯಲು ಸೀಮೆಯನ್ನು ಪ್ರವೇಶಿಸಿರುವ ಅಡಿಕೆಗೂ ಈಗ ಕಲಬೆರಕೆ ಕಾಟ ಶುರುವಾಗಿದೆ. ಇತ್ತೀಚೆಗೆ ಗುಜರಾತಿನ ವ್ಯಾಪಾರಸ್ಥರು ಕೃತಕ ಬಣ್ಣ ಹಚ್ಚಿದ ಟನ್‌ಗಟ್ಟಲೆ ಅಡಿಕೆಯನ್ನು ವಾಪಸ್ ಕಳುಹಿಸಿದ್ದರು. ಧಾರಣೆ ಹೆಚ್ಚಿದಂತೆಲ್ಲಾ, ಕಲಬೆರಕೆ, ನಕಲಿಗಳ ಪ್ರಮಾಣವೂ ಏರತೊಡಗುತ್ತವೆ. ಕೆಲ ತಿಂಗಳ ಹಿಂದೆ ಬ್ಯಾಡಗಿ ಮೆಣಸಿನಕಾಯಿ ಬೆಲೆ 800 ರು. ತಲುಪಿತ್ತು. ಮಿಕ್ಸಿಯಲ್ಲಿ ರುಬ್ಬಿದ ಮಸಾಲೆ ಕೆಂಬಣ್ಣಕ್ಕೆ ತಿರುಗಿದಾಗಲಷ್ಟೇ, ಮೈಸೂರಿನಲ್ಲಿ ಖರೀದಿಸಿದ ‘ಬ್ಯಾಡಗಿ’ಯ ‘ಬಣ್ಣ’ ದ ವೇಷ ಬಯಲಾಯಿತು.

ಸೋನಾಮಸೂರಿ ಅಕ್ಕಿ ಹೆಸರಿನಲ್ಲಿ ನಾವು ಖರೀದಿಸುತ್ತಿರುವ ಬ್ರಾಂಡೆಡ್ ಅಕ್ಕಿ ಕೂಡ ಪಾಲಿಷ್ ಮಾಡಿದ ಪಡಿತರ ಅಕ್ಕಿಯಾಗಿರಬಹುದು. ‘ಕಜೆ ಅಕ್ಕಿ’ ಹೆಸರಿನಲ್ಲಿ ಕರಾವಳಿಗರು ಬಳಸುವ ಕುಚ್ಚಲಕ್ಕಿಗೂ ಬಣ್ಣ ಬೆರೆಸಿರಬಹುದು. ಜೀರಿಗೆ, ಕೊತ್ತಂಬರಿ, ಸಾಸಿವೆ, ಮೆಂತ್ಯೆ, ಹಿಂಗು, ಕಾಳುಮೆಣಸು ಹೀಗೆ ನಾವು ದಿನನಿತ್ಯ ಬಳಸುವ ಸಾಂಬಾರ ಪದಾರ್ಥ ಗಳಲ್ಲಿ ಕಲಬೆರಕೆ ಆಗಿರುವುದು ಆಗಾಗ ನಮ್ಮ ಗಮನಕ್ಕೆ ಬರುತ್ತಲೇ ಇರುತ್ತವೆ. ಆದರೆ ಒಗ್ಗರಣೆಯಲ್ಲಿ ಸಿಡಿಯದ ಈ ಕಲಬೆರಕೆ ವಸ್ತುಗಳ ಬಗ್ಗೆ ನಾವೆಂದೂ ಸಿಡುಕು ತೋರಿಸಿಲ್ಲ. ಇದೇ ಮಸಾಲೆಯಿಂದ ತಯಾರಾದ ಕೋಳಿ ಸಾರು, ಕಜೆ ಅಕ್ಕಿ ಅನ್ನ ಉಂಡ ಕರಾವಳಿಯ ಭೂತಗಳೂ ಆರ್ಭಟಿಸಿಲ್ಲ !

ಇನ್ನು ದೇವರು ಮುನಿಸುಕೊಳ್ಳುವುದಾದರೆ, ವೆಂಕಟೇಶನಾದಿಯಾಗಿ ಎಲ್ಲ ಮುಕ್ಕೋಟಿ ದೇವರು, ನಾವು ಸಮರ್ಪಿ ಸುವ ಹೂವು, ಹಣ್ಣು, ಹಂಪಲುಗಳಲ್ಲಿರುವ ಕ್ರಿಮಿನಾಶಕಗಳ ಘಾಟಿಗೆ ಮುಖ ಸಿಂಡರಿಸಿಕೊಳ್ಳಬೇಕಿತ್ತು. ನಮ್ಮ ರೈತರೂ ಕ್ರಿಮಿನಾಶಕ ಮತ್ತು ರಸಗೊಬ್ಬರ ಚೆಲ್ಲದೆ ಸೊಪ್ಪು, ತರಕಾರಿ, ಹೂವು ಮತ್ತು ಹಣ್ಣು-ಹಂಪಲು ಬೆಳೆಯಲು ಸಾಧ್ಯವೇ ಇಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ತರಕಾರಿ ಬೀಜಗಳನ್ನು ರಾಸಾಯನಿಕದಲ್ಲಿ ಅದ್ದಿದ ಬಳಿಕವೇ ನಾಟಿ ಮಾಡುತ್ತಾರೆ. ಹೂವು, ಹಣ್ಣುಗಳಿಗೆ ಕೀಟ ಬಾಧೆ ಎಂದು ಹಲವು ಸುತ್ತಿನ ಕ್ರಿಮಿನಾಶಕ ಸಿಂಪಡಿಸುತ್ತಾರೆ. ಬಾಳೆ, ದ್ರಾಕ್ಷಿ, ದಾಳಿಂಬೆಯಂತಹ ಹಣ್ಣುಗಳಿಗೆ ಬಳಕೆಯಾಗುವ ರಾಸಾಯನಿಕದ ಬಹುಭಾಗ ನಮ್ಮ ಹೊಟ್ಟೆ ಸೇರುತ್ತಿದೆ. ಪರಿಣಾಮ ಭೂಮಿ ತಾಯಿಯ ಜತೆ ನಮ್ಮ ಹೆಣ್ಣು ಮಕ್ಕಳೂ ಬಂಜೆತನದ ಸಮಸ್ಯೆ ಎದುರಿಸುತ್ತಿದ್ದಾರೆ.

ತರಕಾರಿ ಗೊಡವೆ ಬೇಡವೆಂದರೂ ಮಾಂಸಾಹಾರದತ್ತ ಹೊರಳಿದರೆ ಅಲ್ಲೂ ಇಂಜೆಕ್ಷನ್, ಮಾತ್ರೆಗಳ ದರ್ಬಾರು. ಕುರಿ, ಕೋಳಿಗಳಿಗೆ ನೇರವಾಗಿ ಹಾರ್ಮೋನ್ ಇಂಜೆಕ್ಷನ್ ಚುಚ್ಚಿ ಕೆಲವೇ ತಿಂಗಳಲ್ಲಿ ತೂಕ ದುಪ್ಪಟ್ಟು ಮಾಡುವ ವಿದ್ಯೆ ಈಗ ಹಳ್ಳಿಯ ಸಾಮಾನ್ಯ ರೈತರಿಗೂ ಸಿದ್ಧಿಸಿದೆ. ಇನ್ನು ಕೆರೆ ಮೀನುಗಳಿಗೆ ಮಾಂಸದ ತ್ಯಾಜ್ಯ ಉಣಿಸಲಾಗುತ್ತಿದೆ. ಸಮುದ್ರ ಮೀನನ್ನು ದೀರ್ಘ ಕಾಲ ಕಾಪಿಡಲು ರಾಸಾಯನಿಕ ಬೆರೆಸಲಾಗುತ್ತದೆ. ಇವೆಲ್ಲವೂ ನಮ್ಮ ಹೊಟ್ಟೆ ಸೇರುತ್ತಿ ರುವುದು ಗೊತ್ತಿಲ್ಲದ ವಿಷಯವೇನಲ್ಲ.

ಪಿರಿಯಾಪಟ್ಟಣದ ವಾರದ ಸಂತೆಯಲ್ಲಿ ಸಂಜೆ ವೇಳೆಗೆ ಕೊಳೆತ ಶುಂಠಿ, ಸಿಪ್ಪೆಯೂ ಬಿಕರಿಯಾಗುತ್ತದೆ. ಇವು ನಾವು ಬಳಸುವ ಗಾರ್ಲಿಕ್- ಜಿಂಜರ್ ಪೇಸ್ಟ್‌ಗೆ, ರುಚಿಕರ ಉಪ್ಪಿನ ಕಾಯಿಗೆ ಬಳಕೆಯಾಗುತ್ತದೆ ಎನ್ನುವುದು ಸ್ಥಳೀಯ ವ್ಯಾಪಾರಸ್ಥರ ಮಾತು. ಕಿಲೋ ಟೊಮೇಟೊಗೆ 100 ರು. ಧಾರಣೆ ಇದ್ದಾಗಲೂ ಒಂದಕ್ಕೊಂದು ಫ್ರೀ ಸಿಗುವ ಟೊಮೆಟೋ ಜಾಮ್ ಬಾಟಲಿಗಳಲ್ಲಿ ಯಾವ ಟೊಮೆಟೋ ಬಳಕೆಯಾಗಿದೆ ಎಂದು ಹೇಳುವವರಾರು ?

ಹೋಟೇಲ್‌ಗಳಲ್ಲಿ, ಬೀದಿ ಬದಿಯ ತಳ್ಳುಗಾಡಿಗಳಲ್ಲಿ ಬಾಯಲ್ಲಿ ನೀರೂರಿಸಿಕೊಂಡು ತಿನ್ನುವ ಖಾದ್ಯಗಳಿಗೆ ಟೇಸ್ಟ್‌ ಪೌಡರ್, ಕಲರ್ ಹಾಕದೇ ಹೋದರೆ ಆ ರುಚಿ, ಬಣ್ಣ ಬರಲಾರದು ಎಂದು ನಮಗೂ ಗೊತ್ತು. ಆದರೂ ನಮಗೆ ಆರೋಗ್ಯಕ್ಕಿಂತ ನಾಲಿಗೆ ಚಪಲ ತಣಿಸುವುದೇ ಮುಖ್ಯವಾಗುತ್ತದೆ.

ಸಿಹಿ ತಿಂಡಿಗಳ ತಯಾರಿಕೆಗೆ ಬಳಸುವ ಮೈದಾ, ತುಪ್ಪ, ಎಣ್ಣೆ, ಸಕ್ಕರೆ, ಬೆಲ್ಲ ಕಲಬೆರಕೆಯಾಗಿರುವ ವಿಚಾರ ನಮಗೆ ಗೊತ್ತಿಲ್ಲದ್ದೇನಲ್ಲ. ಆದರೂ ಇವುಗಳನ್ನು ಧೈರ್ಯವಾಗಿ ದೇವರಿಗೆ ಸಮರ್ಪಿಸುತ್ತೇವೆ. ಶುದ್ದ ಎಳ್ಳೆಣ್ಣೆ ದುಬಾರಿ ಎಂದು ಹಲವು ಎಣ್ಣೆಗಳನ್ನು ಬೆರಕೆ ಮಾಡಿದ ದೀಪದೆಣ್ಣೆ ಬಳಸಿ ದೀಪ ಹಚ್ಚುವ ನಾವು ದೇವರ ವಿಚಾರದಲ್ಲಿ ಈಗಾಗಲೇ ಸಾಕಷ್ಟು ರಾಜಿ ಮಾಡಿಕೊಂಡಿದ್ದೇವೆ. ಹಾಗೆಯೇ ಕಲಬೆರಕೆ ವಿಚಾರದಲ್ಲೂ.

ಉಪ್ಪಿನಕಾಯಿಯಿಂದ ಹಿಡಿದು ಕೋಟ್ಯಂತರ ರು. ವ್ಯಯಿಸಿ ನಾವು ಕಟ್ಟಿದ ಮನೆಗೆ ಬಳಸಿದ ಸಿಮೆಂಟ್, ಕಬ್ಬಿಣ, ಮರಳು… ಎಲ್ಲವೂ ಕಲಬೆರಕೆ. ನಮ್ಮ ಆಡಳಿತ ವ್ಯವಸ್ಥೆ , ರಾಜಕಾರಣವೂ ಕಲಬೆರಕೆ. ಇದೀಗ ‘ತಿಮ್ಮಪ್ಪನ ಪ್ರಸಾದ’ ದ ಹೆಸರಿನಲ್ಲಿ ನಾವು ತಯಾರಿಸಿ ಹಂಚುತ್ತಿದ್ದ ಲಡ್ಡುವಿಗೂ ಬೆರಕೆಯ ತುಪ್ಪ ಸೇರಿಸಿದ್ದೇವೆ. ನಮ್ಮ ಕಲಬೆರಕೆ ಬದುಕಿಗೆ ಒಗ್ಗಿಕೊಂಡಿರುವ ದೇವರು ಸಿಟ್ಟು ಮಾಡಿಕೊಳ್ಳುವ ಸಾಧ್ಯತೆ ಇಲ್ಲ. ಸಿಟ್ಟು ಮಾಡಿಕೊಳ್ಳಲೇ ಬೇಕಿದ್ದರೆ ಕಾರಣಗಳು ನೂರೆಂಟಿವೆ. ಆದರೆ ಎಲ್ಲದಕ್ಕೂ ಒಗ್ಗಿಕೊಳ್ಳುವ ನಮಗೆ ನಮ್ಮ ಬಗ್ಗೆಯೇ ಸಿಟ್ಟು ಬಾರದೇ ಹೋದರೆ ನಾವೂ ಮನುಷ್ಯರೆನಿಸಿಕೊಳ್ಳಲೂ ನಾಲಾಯಕ್ ಎನಿಸಿಕೊಳ್ಳುತ್ತೇವೆ.

ಇದನ್ನೂ ಓದಿ: Lokesh Kayarga Column: ವ್ಯವಸ್ಥೆ ಆಫ್‌’ಲೈನ್‌, ವಂಚನೆ ಆನ್’ಲೈನ್