ದಾಸ್ ಕ್ಯಾಪಿಟಲ್
dascapital1205@gmail.com
ಸರಳವಾಗಿ ಹೇಳುವುದಾದರೆ, ಯಾವುದು ಸಹಿತವನ್ನು ಬಯಸುತ್ತದೋ ಅದುವೇ ಸಾಹಿತ್ಯ. ಸಾಹಿತಿಗಳು ಹಿತವಾದುದನ್ನೇ ಬರೆಯುತ್ತಾರೆಂಬ ಮನೋಭಾವದಲ್ಲಿ ಅವರನ್ನು ಎತ್ತರದ ಸ್ಥಾನದಲ್ಲಿಟ್ಟು ಗೌರವಿಸುವುದು ಬಹುಕಾಲದಿಂದ ಅಭ್ಯಾಸವಾಗಿದೆ. ಜನಸಾಮಾನ್ಯರಿಗಿಲ್ಲದ ವಿಶೇಷವಾದ ಬೌದ್ಧಿಕ ಪ್ರೌಢಿಮೆ ಮತ್ತು ಸೃಷ್ಟಿಶೀಲ ಕೌಶಲ ಅವರಲ್ಲಿರುತ್ತದೆಂದೇ ಭಾವಿಸಿ ಅವರ ಸಾಹಿತ್ಯವನ್ನು ಓದಿ ಮೆಚ್ಚುವವರಿದ್ದಾರೆ.
ಸಾಹಿತ್ಯವು ವಾಸ್ತವ ಪ್ರಪಂಚದ ಮತ್ತು ಅನುಭವ ಪ್ರಪಂಚದ ನಡುವಿನ ಅಂತರವನ್ನು ಸೂಕ್ಷ್ಮವಾಗಿ ತೆರೆದಿಡುತ್ತದೆ. ಬದುಕಿನ ಗತಿಬಿಂಬಕ್ಕೆ ಕೊಂಡೊಯ್ಯುತ್ತದೆ. ಸಾಹಿತ್ಯವು ಸಮಾಜದ ಓರೆಕೋರೆಗಳನ್ನು ತಿದ್ದುತ್ತದೆಂದು ತಿಳಿಯಲಾದ ಮನೋ ಭೂಮಿಕೆ ಯಲ್ಲಿ ಕನ್ನಡ ಮತ್ತು ಇತರ ಭಾಷೆಗಳ ಸೃಜನಶೀಲ ಕೃತಿ ಗಳನ್ನು ಓದುವ ಪರಿಪಾಠವಿದೆ.
ಭೈರಪ್ಪರ ಕಾದಂಬರಿ ಯೊಂದು ಬಿಡುಗಡೆಗೂ ಮೊದಲೇ ಪ್ರತಿಗಳಿಗಾಗಿ ಬೇಡಿಕೆಯಿರುತ್ತದೆ. ಇತರ ಭಾಷಿಕರು ಅದರ ಅನುವಾದ ಕ್ಕಾಗಿ ಕಾದಿರುತ್ತಾರೆ. ಭೈರಪ್ಪರು ತಮ್ಮ ಕೃತಿಗಳ ಮೂಲಕ ಓದುಗರಿಗೆ ಹತ್ತಿರವಾದಂತೆ ಎಲ್ಲಾ ಸಾಹಿತಿಗಳಿಗೂ ಸಾಧ್ಯವಾಗ ಲಾರದು. ಕೆಲವರು ತಮ್ಮ ಕೃತಿಗಳ ಜೊತೆಗೆ ಅಗೋಚರವಾಗುತ್ತಾರೆ.
ಇಂಥವರ ಕೃತಿಗಳೂ ಶುಷ್ಕವಾಗಿರುತ್ತವೆ. ಆದರೆ, ಲೆಕ್ಕದಲ್ಲಿ ಕಡಿಮೆಯಿದ್ದರೂ ಇದ್ದವು ಗಳಲ್ಲಿ ಬಹುಗಟ್ಟಿಯಾದ ಕೃತಿಗಳೂ ಇವೆ. ಪೌರಾಣಿಕ ಕಾದಂಬರಿಗಳನ್ನು ದೇವುಡು ಅವರಷ್ಟು ಸೃಜನಶೀಲವಾಗಿ ಬರೆಯಲು ಯಾರಿಗೂ ಸಾಧ್ಯವಿಲ್ಲವೇನೋ! ಮನುಷ್ಯ ಸಂವೇದನೆ, ವಸ್ತುವಿಷಯದ ವೈವಿಧ್ಯ, ಭಾಷಿಕ ರಚನೆಗೆ ಸಂಬಂಧಿಸಿದ ಹಿನ್ನೆಲೆಯಲ್ಲೂ, ಮನಸಿಗೆ ಮುದವನ್ನು ರಂಜನೆಯನ್ನು ಪಡೆಯುವ ಹಿನ್ನೆಲೆಯಲ್ಲೂ ಸಾಹಿತ್ಯವನ್ನು ಓದುತ್ತಾರೆ, ಓದಲೇಬೇಕು. ಸಾಹಿತ್ಯವನ್ನು ಕಲಿಸುವುದೆಂದರೆ ನೀತಿಬೋಧನೆ ಮಾಡುವುದಲ್ಲ.
ನಮ್ಮ ಒಳಜಗತ್ತನ್ನು ವಿಸ್ತಾರಗೊಳಿಸುವ ಅನುಭವಕ್ಕೆ ನಮ್ಮ ಕಲ್ಪನಾಶಕ್ತಿಯನ್ನು ಒಡ್ಡಿಕೊಳ್ಳುವುದು ಹೇಗೆಂಬುದನ್ನು ಕಲಿಸು ವುದು. ಮನುಷ್ಯನಿಗೆ ತಿಳಿವಳಿಕೆ ಮತ್ತು ಸುಖ ಎರಡನ್ನೂ ಒಟ್ಟೊಟ್ಟಾಗಿ ತರಬಲ್ಲ ಪಠ್ಯಗಳು ಸಾಹಿತ್ಯದ ಪಠ್ಯಗಳು ಎಂಬುದನ್ನು ನಮ್ಮ ಬೋಧಕರು ತಿಳಿದಿರುವುದು ಮುಖ್ಯ. ಸಾಹಿತ್ಯದಿಂದ ತಾವೇ ಹಿಗ್ಗಬಲ್ಲ ಬೋಧಕರು ಮಾತ್ರ ವಿದ್ಯಾರ್ಥಿ ಗಳನ್ನು ಎಲ್ಲ ಅರ್ಥಗಳಲ್ಲೂ ಹಿಗ್ಗಿಸಬಲ್ಲರು ಎಂದು ಅನಂತಮೂರ್ತಿ ಹೇಳಿದ್ದರು. ಸಾಹಿತ್ಯದ ಬಹಳ ದೊಡ್ಡ ಪ್ರಯೋಜನ ವೆಂದರೆ ಅದರ ಅಭ್ಯಾಸದಿಂದಾಗಿ ಮನುಷ್ಯ ಸತ್ಯವಾದಿಯೂ, ನಾಚಿಕೆ ಉಳ್ಳವನೂ, ಅನಹಂಕಾರಿಯೂ ಆಗಬಹುದು ಎಂದವರು ನಂಬಿದ್ದರು.
ಯಾವ ಸಾಹಿತ್ಯ ಮನುಷ್ಯನನ್ನು ಸಂಸ್ಕಾರಗೊಳಿಸುತ್ತದೋ, ನೈತಿಕ ಶಕ್ತಿಯನ್ನು ಬೆಳೆಸುತ್ತದೋ, ವಿವೇಕವನ್ನು ಹೆಚ್ಚಿಸುತ್ತದೋ, ತರತಮ ಗುಣವನ್ನು ದೂರಗೊಳಿಸುತ್ತದೋ, ಮಾನಸಿಕವಾಗಿ, ಬೌದ್ಧಿಕವಾಗಿ ಯುಕ್ತಿಯನ್ನೂ ಶಕ್ತಿಯನ್ನೂ ಹೆಚ್ಚಿಸುತ್ತದೋ, ಮಾತು, ಕ್ರಿಯೆ, ಅಭಿವ್ಯಕ್ತಿಯಲ್ಲಿ ಸೌಜನ್ಯವನ್ನು, ಸೌಶೀಲ್ಯವನ್ನು, ಸಜ್ಜನಿಕೆಯನ್ನು ಉತ್ಪತ್ತಿಸುತ್ತದೋ ಅದುವೇ ನಿಜವಾದ ಸಾಹಿತ್ಯ. ಇದು ತಾರ್ಕಿಕ ಮತ್ತು ತಾತ್ವಿಕ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ. ಮನುಷ್ಯ ಮನುಷ್ಯನಾಗುವ ಪ್ರಕ್ರಿಯೆ ಸಾಹಿತ್ಯದ ಓದಿನಿಂದ ಸಾಧ್ಯ.
ಮನುಷ್ಯನ ಒಟ್ಟೂ ಅಸ್ಮಿತೆಯಲ್ಲಿ ಒಂದು ಬಹುದೊಡ್ಡ ಪರಿವರ್ತನೆಯನ್ನು ಸಾಧ್ಯವಾಗಿಸುವ ಶಕ್ತಿ ಸಾಹಿತ್ಯಕ್ಕಿದೆ. ರಾಮಾಯಣ,
ಮಹಾಭಾರತ ಮತ್ತು ಭಗವದ್ಗೀತೆಯ ಓದಿನಿಂದ ಗಳಿಸಬಹುದಾದ ಶ್ರೇಷ್ಠ ಮೌಲ್ಯಗಳು ಎಲ್ಲಿಯೂ ಸಿಗದ ಅನರ್ಘ್ಯರತ್ನ
ದಂಥವು. ಸಾಹಿತ್ಯದ ಓದಿನಿಂದ ಮನುಷ್ಯ ಸುಸಂಸ್ಕೃ ತನಾಗಲು ಸಾಧ್ಯವಿದೆ. ಜನಪದೀಯ ಸಾಹಿತ್ಯವು ಗ್ರಂಥಸ್ಥ ಸಾಹಿತ್ಯ ವನ್ನೂ ಮೀರಿ ನಿಂತವುಗಳು. ಶಿಷ್ಟಸಾಹಿತ್ಯಕ್ಕೆ ಆಡುಭಾಷೆಯ ಸಾಹಿತ್ಯವೇ ಅಲ್ಲವೆ ಮೂಲಾಧಾರ? ಭಾರತೀಯ ಭಾಷೆಗಳು ಜೀವಂತವಾಗಿರೋದು ಇವರಿಂದಲೇ!
ಅಕ್ಷರಿಗಿಂತ ಹೆಚ್ಚು ಬಲಿಷ್ಠವಾದ, ಗಾಢವಾದ, ಢಾಳವಾದ ಭಾವ ಶ್ರೀಮಂತಿಕೆ ಅನಕ್ಷರಿಯಲ್ಲಿರುತ್ತದೆ. ಜ್ಞಾನವಂತನಲ್ಲದಿದ್ದರೂ ಅವನು ಗುಣವಂತನಾಗಿರುತ್ತಾನೆ. ಜೀವಸಂಕುಲದ ಸಂಬಂಧದ ಸೂಕ್ಷ್ಮತೆ ಮತ್ತು ಸಂವೇದನೆ ಅವನಲ್ಲಿ ಪ್ರಕೃತಿದತ್ತವಾಗಿರುತ್ತದೆ. ಜಗತ್ತಿನ ಯಾವ ಭಾಷೆಗೂ ಸಾಹಿತ್ಯಕ್ಕೂ ಇಲ್ಲದ ವೈಶಿಷ್ಟ್ಯ ಪೂರ್ಣವಾದ ದಾಸ ಸಾಹಿತ್ಯ, ವಚನ ಸಾಹಿತ್ಯಗಳು ಕನ್ನಡಕ್ಕೆ
ಮಾತ್ರ ದಕ್ಕಿದ ವರವಾಗಿದೆ. ಇವುಗಳಲ್ಲಿರುವುದು ಬೇರೆಲ್ಲಿದೆ? ಭಾರತೀಯ ಭಾಷೆಗಳಲ್ಲಿರುವ ಶ್ರೀಮಂತವಾದ ಸಾಹಿತ್ಯ
ಪರಂಪರೆಯನ್ನು, ಅದರಲ್ಲೂ ಮುಖ್ಯವಾಗಿ ಎಲ್ಲಾ ಭಾಷೆಗಳಿಗೂ ಸಾಹಿತ್ಯಗಳಿಗೂ ಆಕರವಾದ ಸಂಸ್ಕೃತ ಸಾಹಿತ್ಯವನ್ನು
ನಾವು ಮರೆತದ್ದು ಹೇಗೆ ಅಥವಾ ಮರೆಯುವಂತಾಗಿದ್ದು ಹೇಗೆ? ಹಿಂದಿನ ಅಲ್ಲಮ, ಬಸವ, ತುಕಾರಾಂ, ತುಳಸೀದಾಸ, ಪಂಪ, ಕುಮಾರವ್ಯಾಸರು ಸಂಸ್ಕೃತವನ್ನು ಜೀರ್ಣಿಸಿಕೊಂಡೇ ಸೃಷ್ಟಿಶೀಲರಾದರು.
ಬರುಬರುತ್ತಾ ಸಾಹಿತ್ಯದಲ್ಲಿ ಯುರೋಪ್ ಸಂಸ್ಕೃತಿಯ ಹುಚ್ಚು ಆಕ್ರಮಿಸಿತು. ಇದು ಪೂರ್ವಯೋಜಿತ ಸಂಚೆಂದು ಭಾರತೀಯರಿಗೆ ಗೊತ್ತಾಗಲೇ ಇಲ್ಲ! ಹಿಂದೆ ಒಬ್ಬ ಮಹನೀಯರು ಡಿವಿಜಿ ಮತ್ತವರ ಕಗ್ಗದ ಬಗ್ಗೆ ತೀರಾ ಅಪದ್ಧವನ್ನಾಡಿದ್ದರು. ಹಿಂದೂ, ಹಿಂದೂ ಪವಿತ್ರ ಗ್ರಂಥಗಳು, ಹಿಂದೂ ಚರಿತ್ರೆಯನ್ನು ನಿರಾಕರಿಸಿ ತಿರಸ್ಕರಿಸಿ ಹಂಗಿಸಿ ನಿಂದಿಸಿ ಅವಹೇಳನ ಮಾಡಿ, ಎಡಪಂಥೀಯ ವಿಚಾರ ಧಾರೆಗಳನ್ನು ಹುಲುಸಾಗಿ ಬಿತ್ತುತ್ತಾ, ಭಾರತೀಯತೆಯನ್ನು ಸಾಯಿಸುತ್ತಾ ಆಳುಗರನ್ನು ಓಲೈಸಿ ಅವರಿಂದ ಪ್ರಶಸ್ತಿ, ಪದವಿ, ಪುರಸ್ಕಾರ, ಮನೆ, ಫೆಲೊಷಿಪ್, ಹುದ್ದೆಗಳನ್ನು ಪಡೆ ಯುವ ಗೀಳಿಗಾಗಿ ತಮ್ಮತನವನ್ನೂ ಹಿಂದೂ ಆಗಿದ್ದುಕೊಂಡೇ ಮಾರಿಕೊಂಡ ಹಿಡನ್ ಅಲ್ಲದ ವರ್ಗವೊಂದು ದೇಶದುದ್ದಕ್ಕೂ ಅರ್ಬುದದಂತೆ ಬೆಳೆದು ಎಲ್ಲಾ ಸವಲತ್ತು ಸೌಲಭ್ಯಗಳನ್ನು ದೊರಕಿಸಿಕೊಳ್ಳುವ ಪ್ರಯತ್ನದಲ್ಲಿ ಶತ ಸಹಸ್ರ ವರ್ಷಗಳಿಂದ ಬಾಳಿಸಿ ಉಳಿಸಿಕೊಂಡ ಭಾರತೀಯ ಜೀವನ ಮೌಲ್ಯಗಳನ್ನು ಸಮೂಲಾಗ್ರವಾಗಿ ಸರ್ವನಾಶ ಮಾಡಿದ್ದು ಸ್ವಾತಂತ್ರ್ಯ ಪೂರ್ವ ಮತ್ತು ಉತ್ತರದಲ್ಲೂ ಇದೆ.
ಈ ಮಹಾಕೈಂಕರ್ಯಕ್ಕೆ ಆಳುಗರ ಅಭಯಹಸ್ತವೇ ಪ್ರೇರಣೆ ಮತ್ತು ಸೂರ್ತಿ! ನೆಹರೂರನ್ನು ಹಾಡಿಹೊಗಳಿ ಬರೆದವರಿಗೆ ತಿಲಕ್, ಪಟೇಲ್, ಬೋಸ್, ಭಗತ್, ಆಜಾದ್, ಸಾವರ್ಕರರಂಥವರು ನೆನಪಾಗಲೇ ಇಲ್ಲ! ಸರ್ಕಾರಿ ಸವಲತ್ತು -ಸೌಲಭ್ಯಗಳಿಗೆ ಹಂಬಲಿಸಿ ರಚಿಸಿದ ಸಾಹಿತ್ಯವು ಸಮಾಜಮುಖಿಯಾಗಿರಲು ಹೇಗೆ ಸಾಧ್ಯ? ನನ್ನಿಂದ ಉಪಕೃತನಾದ ವ್ಯಕ್ತಿಯು ನನ್ನನ್ನು ಹೊಗಳಲೇ
ಬೇಕು.
ಅದರಲ್ಲೇನು ಸತ್ಯವಿರಲು ಸಾಧ್ಯ? ಈ ರೀತಿಯಲ್ಲಿ ರಚಿತವಾದ ಸಾಹಿತ್ಯವು ಸಾರ್ವಕಾಲಿಕವಾದ ಶಾಶ್ವತವಾದ ಮೌಲ್ಯಗಳನ್ನು ಹೊಂದಿರಲು ಹೇಗೆ ಸಾಧ್ಯ? ಒಂದು ಜನಾಂಗದ ಬದುಕನ್ನು ಕತ್ತಲೆಯಿಂದ ಬೆಳಕಿನೆಡೆಗೆ ಪಲ್ಲಟಿಸಿದ, ಸಮಾಜದ ಊನಗಳನ್ನು, ನ್ಯೂನತೆಗಳನ್ನು, ಮೌಢ್ಯಗಳನ್ನು ನಿರ್ಲಕ್ಷ್ಯಿಸಿ ಸಮಾಜದ ಎಲ್ಲಾ ವರ್ಗಗಳನ್ನು ಮುಖ್ಯಭೂಮಿಕೆಯಲ್ಲಿ ತರಲು ಶ್ರಮಿಸಿದ, ಯಾವುದೇ ಜಾತಿ-ಮತ- ಧರ್ಮಗಳನ್ನು ಅವಹೇಳನ, ನಿಂದನೆ, ಮತ್ಸರ ಭಾವದಿಂದ ನೋಡದ ಸಾಹಿತ್ಯವನ್ನು ಯಾರೇ ಬರೆದಿರಲಿ ಅದು ಜನಮನದಲ್ಲಿ ಪ್ರತಿಷ್ಠಾಪಿಸಲ್ಪಡುತ್ತದೆ ಎಂಬುದು ಬೆಳಕಿನಷ್ಟು ಸತ್ಯ.
ಈ ಹಿನ್ನೆಲೆಯಲ್ಲಿ ಪುರಾಣ, ಸಂಸ್ಕೃತ ಮಹಾಕಾವ್ಯಗಳು, ಚರಿತ್ರೆಯ ಅಧ್ಯಯನದಿಂದ ಸೃಜಿಸಲ್ಪಟ್ಟ ಸಾಹಿತ್ಯವು ಅಪ್ರತಿಮವಾಗಿ, ಅಸಾಮಾನ್ಯವಾಗಿ ಉಳಿದಿವೆ, ಉಳಿಯುತ್ತವೆ. ಯಾವ ಸಾಹಿತ್ಯವು ಒಂದು ಮೂರ್ತರೂಪದ ದ್ವೇಷ ಸೇಡು ಕ್ಲೀಷೆಗಳನ್ನು ರೂಪಕವಾಗಿ ಬಳಸಿ ತಿರುಚಿದ ಸತ್ಯವೆಂಬಂತೆ ರಚನೆಯಾ ಗಿದೆಯೋ ಅದು ಬಲಹೀನ ಕೃತಿಗಳಾಗಿವೆ. ಇಂಥ ಕೃತಿಗಳನ್ನು ಓದದಿರುವುದೇ ಇದಕ್ಕೊಲಿದ ಮಾನ್ಯತೆ ಮತ್ತು ಪ್ರಶಸ್ತಿಯಾಗಿದೆ.
ಭಾರತೀಯ ಜ್ಯೋತಿಷ್ಯ ವಿಜ್ಞಾನದ ಪ್ರಕಾರ ಒಬ್ಬ ವ್ಯಕ್ತಿಯು ಪ್ರಸಿದ್ಧಿ ಪಡೆಯುವ ಅನೇಕ ಅಂಶಗಳಲ್ಲಿ ಆತನು ಹೊಂದಿರುವ ಹೆಸರೂ ಕೂಡ ಮಹತ್ವದ್ದಾಗಿರುತ್ತದೆ. ಹೆಸರಲ್ಲೇನಿದೆಯೆಂದು ಕೇಳಬಹುದು. ಆದರೆ ಸತ್ಯವೇನೆಂದರೆ, ಎಲ್ಲವೂ ಹೆಸರಲ್ಲೇ ಇರುವುದು. ಹಾಗಂತ ಇದನ್ನು ಎಲ್ಲರಿಗೂ ಅನ್ವಯಿಸಲಾಗುವುದಿಲ್ಲ. ಆಕರ್ಷಣೀಯವಾದ ಹೆಸರಿನಿಂದಲೇ ವ್ಯಕ್ತಿ ಜನಪ್ರಸಿದ್ಧಿಯನ್ನು ಗಳಿಸಲು ಸಾಧ್ಯ!
ಕಾರಣ ಅಂಥ ಹೆಸರುಗಳು ಸುಲಭವಾಗಿ ಮರೆಯುವುದಿಲ್ಲ. ಎಲ್ಲಾ ದೇವರುಗಳನ್ನೂ ಭಗವಾನ್ ಅಂತೆಲೇ ಹಿಂದೂಗಳು ಪೂಜಿಸುವುದು. ಭಾಗ್ಯಪ್ರದಾಯಕನು ಎಂಬ ನೆಲೆಯಲ್ಲೂ, ಭಗ=ಜ್ಞಾನ, ವಂತ=ಉಳ್ಳವನು. ಜ್ಞಾನವುಳ್ಳವನು ಎಂಬ ಅರ್ಥ ದಲ್ಲೂ ದೇವರನ್ನು ಭಗವಾನ್ ಅಂತ ಕರೆಯುತ್ತೇವೆ. ಆದ್ದರಿಂದ ಭಗವಾನ್ ಅಂತ ಹೆಸರಿಟ್ಟುಕೊಂಡ ವ್ಯಕ್ತಿ ಈ ಎರಡೂ ಅರ್ಥದಲ್ಲಿ ದೇವರಂತೆಯೇ!
ಆದ್ದರಿಂದ ಇವನಿಗೆ ಯಾವುದೇ ದೇವರ ಬಗ್ಗೆಯೂ ಮಾತಾಡುವುದಕ್ಕೆ ಅರ್ಹತೆ, ಅಧಿಕಾರ ಸಹಜವಾಗಿ ಸ್ವಲ್ಪ ಹೆಚ್ಚೇ ಇರುತ್ತ ದೆಂದು ಹೇಳಬಹುದು. ವಿವೇಕಾನಂದ, ಬಸವಣ್ಣನವರ ಸಾವಿನ ಬಗ್ಗೆ ಸಂಶೋಧನೆ ಮಾಡಿ, ಅವರೀರ್ವರದ್ದೂ ಕೊಲೆಯೆಂದೂ, ತನಿಖೆಗೂ ಆಗ್ರಹಪಡಿಸಿದ್ದ ಪುಣ್ಯಾತ್ಮ ಅದ್ಯಾರು ಅದ್ಯಾವ ಎಂಗಲಿನಲ್ಲಿ ತನಿಖೆ ಮಾಡಬೇಕೆಂಬುದನ್ನು ಮಾತ್ರ ಸೂಚಿಸಲಿಲ್ಲ! ನಾನೂ ನಗರ ನಕ್ಸಲ್ ಎಂಬ ಫಲಕವನ್ನು ಕುತ್ತಿಗೆಗೆ ತೂಗಿಕೊಂಡು ಪೋಸು ಕೊಟ್ಟವರಲ್ಲಿ ಕೆಲವರು ಮೇಲೆ ಹೋದರು, ಉಳಿದವರೆಲ್ಲೋ! ಅಥವಾ ಬರೆಯಲು ಏನೂ ಇಲ್ಲದೆ ಇತಿಹಾಸವನ್ನು ತಿರುಚುವ ಕಾಯಕದಲ್ಲಿ ತೊಡಗಿರಬಹುದೇನೋ!
ಅಥವಾ ಯಾವ ಪ್ರಶಸ್ತಿಯೂ ಇನ್ನು ಸಿಗುವುದಕ್ಕೆ ಚಾನ್ಸೇ ಇಲ್ಲವೆಂಬುದು ಪಕ್ಕಾ ಗೊತ್ತಾಗಿ ಸುಮ್ಮನಾಗಿರಬೇಕು!
ಯಾರದ್ದೋ ಸಾವಿನಲ್ಲಿ ಬಿಟ್ಟಿ ಪ್ರಚಾರವನ್ನು ಪಡೆಯುವ ಮೂಲಕ ವೈಚಾರಿಕವಾಗಿ, ಬೌದ್ಧಿಕವಾಗಿ ಬಯಲಲ್ಲಿ ಬೆತ್ತಲಾಗಲು ಇವರುಗಳ ಹೆಸರಿನ ದೇವರುಗಳೇ ಅನುಗ್ರಹವಿರಬೇಕು! ನಡೆ-ನುಡಿಯಲ್ಲಿ ಯಾವ ಬದ್ಧತೆಯೂ ಇಲ್ಲದವರಿಗೆಲ್ಲ ಪಂಥ ಬೇರೆ ಕೇಡು! ಅಪ್ರತಿಮ ಸಮಯ ಸಾಧಕರಾದ ಇಂಥವರಿಗೆ ಈಗ ಎಂಟು ವರ್ಷದಿಂದ ಮೋದಿ ಫೋಬಿಯಾ! ಬುಜೀಗಳಿಂದ ಹಿಂದೂ ಧಾರ್ಮಿಕ ಪರಂಪರೆಗಳಿಗೆ ಧಕ್ಕೆಯೆಂಬ ಭೈರಪ್ಪರ ಮಾತಲ್ಲಿ ಸತ್ಯವಿಲ್ಲ ಅಂತೀರಾ?