Thursday, 28th November 2024

ಸಾಲಮನ್ನಾ ಸೌಲಭ್ಯ ಎಲ್ಲರಿಗೂ ದೊರಕಲಿ

ದುಡ್ಡು-ಕಾಸು

ರಮಾನಂದ ಶರ್ಮಾ

ತೆಲಂಗಾಣದಲ್ಲಿನ ಕಾಂಗ್ರೆಸ್ ಸರಕಾರವು ರೈತರ ಸಾಲವನ್ನು ಮನ್ನಾ ಮಾಡಲು ಕ್ರಮ ಕೈಗೊಂಡಿದೆ. ಇದಕ್ಕಾಗಿ ೩೧ ಸಾವಿರ ಕೋಟಿ ರು. ಮೀಸಲಿಟ್ಟಿದ್ದು, ೨೦೧೮ರಿಂದ ಆರಂಭವಾಗಿ ೨೦೨೩ರ ಡಿಸೆಂಬರ್‌ವರೆಗೆ ರೈತರು ಪಡೆದ ಸಾಲಕ್ಕೆ ಈ ಸಾಲಮನ್ನಾ ಸೌಲಭ್ಯವು ಅನ್ವಯವಾಗಲಿದೆ. ಅಧಿಕಾರ ವಹಿಸಿಕೊಂಡ ಒಂದು ತಿಂಗಳೊಳಗಾಗಿ ಒಂದೂವರೆ ಲಕ್ಷ ರು.ವರೆಗಿನ ರೈತರ ಸಾಲವನ್ನು ಅದು ಮನ್ನಾ ಮಾಡಿದ್ದು, ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ೨ ಲಕ್ಷ ರು.ವರೆಗಿನ ಸಾಲವನ್ನು ೨೦೨೪ರ ಆಗಸ್ಟ್ ಒಳಗಾಗಿ ಸಂಪೂರ್ಣವಾಗಿ ಮನ್ನಾ ಮಾಡಲಿದೆಯಂತೆ.

ಈ ನಿಟ್ಟಿನಲ್ಲಿ ಅದು ತನ್ನದೇ ಆದ ನಿಯಮಾವಳಿ ಮತ್ತು ಕಾರ್ಯತಂತ್ರವನ್ನು ರೂಪಿಸಿದೆ. ಈವರೆಗೆ ಎರಡು ಹಂತದಲ್ಲಿ ನಡೆದ ಈ ಮನ್ನಾ ಅಭಿಯಾನದಲ್ಲಿ ೫.೪೫ ಲಕ್ಷ ರೈತರು ಫಲಾನುಭವಿಗಳಾಗಿದ್ದಾರಂತೆ. ಒಟ್ಟಾರೆ ಹೇಳುವುದಾದರೆ ಸದ್ಯಕ್ಕೆ ತೆಲಂಗಾಣ ರಾಜ್ಯದಲ್ಲಿ ಸಾಲಮನ್ನಾ ಸದ್ದುಮಾಡುತ್ತಿದೆ. ದೇಶದಲ್ಲಿನ ಸಾಲಮನ್ನಾ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮುಂದಿನ ದಿನಗಳಲ್ಲಿ ಇದು ಒಂದು ರೀತಿಯಲ್ಲಿ ಸಮೂಹ ಸನ್ನಿಯಂತೆ, ಕಾಡ್ಗಿಚ್ಚಿನಂತೆ ಹರಡಿ ದೇಶದ ಎಲ್ಲ ರಾಜ್ಯಗಳು ರೈತರಿಗೆ ಈ ಭಾಗ್ಯವನ್ನು ನೀಡಲು ಮುಂದಾಗುವ
ಸಾಧ್ಯತೆಯನ್ನು ತಳ್ಳಿಹಾಕಲಾಗದು. ೨೦೧೪ರ ಮೇ ತಿಂಗಳಿನಿಂದ ಈವರೆಗೆ ಉತ್ತರಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಪಂಜಾಬ್, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ಯೋಜನೆ ಜಾರಿಯಾಗಿದ್ದು ರೈತರ ಸುಮಾರು ೨.೫೪ ಲಕ್ಷ ಕೋಟಿ ರು. ಮೊತ್ತದ ಸಾಲವನ್ನು ಮನ್ನಾ ಮಾಡಲಾಗಿದೆ.
ರೈತರ ಸಾಲಮನ್ನಾ ಪ್ರಕ್ರಿಯೆಯು ಹೊಸ ಪರಿಕಲ್ಪನೆ ಅಥವಾ ಬೆಳವಣಿಗೆಯೇನಲ್ಲ, ಇದಕ್ಕೆ ನಾಲ್ಕು ದಶಕಗಳ ಸುದೀರ್ಘ ಇತಿಹಾಸವಿದೆ.

ಇದು ೮೦ರ ದಶಕದಲ್ಲಿ ದೇವಿಲಾಲ್ ಕೇಂದ್ರ ಮಂತ್ರಿಯಾಗಿದ್ದಾಗ, ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ರೈತರಿಗಾಗಿ ಆರಂಭಿಸಿದ ಪರಿಪಾಠ. ಕಾಲಾನುಕ್ರಮದಲ್ಲಿ ಅಧಿಕಾರಕ್ಕೆ ಬಂದ
ಸರಕಾರಗಳು ಇದನ್ನು ರೈತರ ಮತವನ್ನು ಭದ್ರವಾಗಿರಿಸಿಕೊಳ್ಳುವ ಅಸವನ್ನಾಗಿ ಮಾಡಿಕೊಂಡಿದ್ದು ಈಗ ಇತಿಹಾಸ. ಇದನ್ನು ಎಲ್ಲಾ ಪಕ್ಷಗಳು ತಮ್ಮ ರಾಜಕೀಯ ಅನುಕೂಲಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿವೆ. ಅತಿವೃಷ್ಟಿ-ಅನಾವೃಷ್ಟಿಯಂಥ ನೈಸರ್ಗಿಕ ವಿಪತ್ತುಗಳು ಎದುರಾದಾಗ ಮತ್ತು ‘ಬೆಲೆ ಇದ್ದಾಗ ಬೆಳೆ ಇಲ್ಲ, ಬೆಳೆ ಇದ್ದಾಗ ಬೆಲೆ ಇಲ್ಲ’ ಎನ್ನುವ ಪರಿಸ್ಥಿತಿಯಲ್ಲಿ, ರೈತರಿಗೆ ಬೇರೆ ಆದಾಯದ ಮೂಲ ಇಲ್ಲದಿದ್ದಾಗ ಅವರ ಸಾಲಮನ್ನಾ ಮಾಡುವ ಅನಿವಾರ್ಯತೆ ಉಂಟಾಗುತ್ತದೆ.

ಅಂತೆಯೇ ಇದನ್ನು ತಪ್ಪು ಎನ್ನಲಾಗದು. ಆದರೆ, ಇತ್ತೀಚಿನ ದಿನಗಳಲ್ಲಿ ಇದು ‘ಅಪವಾದ’ ಆಗದೆ, ‘ರೂಢ ಮಾದರಿ’ ಆಗುತ್ತಿರುವುದು ವಿಶೇಷ ಮತ್ತು ಆತಂಕಕಾರಿ ಬೆಳವಣಿಗೆಯಾಗಿದೆ. ರೈತರ ಸಾಲಮನ್ನಾ ಮಾಡಬೇಕೆಂಬ ಪ್ರಸ್ತಾಪ ಮೊಳಕೆಯೊಡೆದಾಗಲೇ ಬ್ಯಾಂಕಿಂಗ್ ತಜ್ಞ ಸ್ಟೇಟ್ ಬ್ಯಾಂಕ್‌ನ ಎಸ್.ಕೆ. ತಲ್ವಾರ್, ಕರ್ನಾಟಕದ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ಹಲವು ಆರ್ಥಿಕ ಚಿಂತಕರು ವಿರೋಽಸಿದ್ದರು. ‘ಇದು ಆರಂಭ ಮಾತ್ರ, ಮುಂದಿನ ದಿನಗಳಲ್ಲಿ ಇದು ರೂಢಮಾದರಿ ಆಗಬಹುದು ಮತ್ತು ಬೇರೆ ರೀತಿಯ ಸಾಲ ಪಡೆದವರೂ ಒತ್ತಡ
ಹೇರಬಹುದು’ ಎಂದು ಅವರು ಎಚ್ಚರಿಸಿದ್ದರು. ಆ ಎಚ್ಚರಿಕೆ ಇಂದು ಅನಾವರಣಗೊಂಡಿದೆ. ಸಾಲಮನ್ನಾಕ್ಕೆ ಬದಲಾಗಿ, ಸಂಕಷ್ಟದಲ್ಲಿದ್ದ ರೈತರಿಗೆ ಸಾಲದ ಮೇಲಿನ ಬಡ್ಡಿದರವನ್ನು
ಇಳಿಸುವ ಮೂಲಕ ಅಥಮಾ ಸಮಯ ಪರಿಮಿತಿಯೊಳಗೆ ಸಾಲ ಮರುಪಾವತಿಸುವವರಿಗೆ ಅಸಲಿನಲ್ಲಿ ಮತ್ತು ಬಡ್ಡಿಯಲ್ಲಿ ಸ್ವಲ್ಪ ವಿನಾಯಿತಿ ನೀಡುವ ಮೂಲಕ ಸಹಾಯ ಮಾಡಬಹುದು ಎಂದೂ ಈ ತಜ್ಞರು ಸೂಚಿಸಿದ್ದರು.

ಆದರೆ, ಸಂಬಂಧಪಟ್ಟವರು ಈ ಸಲಹೆಯನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ ಮತ್ತು ಈ ಸಲಹೆಯು ರಾಜಕಾರಣಿಗಳಿಗೂ ರುಚಿಸಲಿಲ್ಲ. ರೈತರ ಮತವನ್ನು ಭದ್ರವಾಗಿಸಿಕೊಳ್ಳುವ ಧಾವಂತದಲ್ಲಿದ್ದ ರಾಜಕಾರಣಿಗಳಿಗೆ ಅವರ ಸಲಹೆ ಇಷ್ಟವಾಗದೆ, ಸಾಲಮನ್ನಾವನ್ನು ವೈಚಾರಿಕವಾಗಿ ಮತ್ತು ತಾರ್ಕಿಕವಾಗಿ ಪ್ರಶ್ನಿಸಿದವರಿಗೆ ‘ಅನ್ನದಾತ ರೈತರ ವಿರೋಧಿ’ ಎಂಬ ಪಟ್ಟ ನೀಡುವುದರೊಂದಿಗೆ ಚರ್ಚಾವಿಷಯವು ಅಂತ್ಯವಾಯಿತು. ವಾಸ್ತವವಾಗಿ ಅನ್ನದಾತನ ಸಾಲಮನ್ನಾ ಮಾಡುವುದರಲ್ಲಿ ಮೇಲ್ನೋಟಕ್ಕೆ ಅಥವಾ ತಾತ್ವಿಕವಾಗಿ ಯಾವುದೇ ತಪ್ಪಿಲ್ಲ. ಈ ದೇಶದಲ್ಲಿ ನಿಸರ್ಗದ ಕೃಪೆಯಿಂದಲೇ ಬಹುತೇಕ ಕೃಷಿ ಚಟುವಟಿಕೆಗಳು ನಡೆಯುತ್ತವೆ. ನಿಸರ್ಗ ಕೈಕೊಟ್ಟರೆ ರೈತನ ಬದುಕು ಹೈರಾಣಾಗುತ್ತದೆ ಮತ್ತು ಊಟಕ್ಕೇ ತತ್ವಾರವಾಗುತ್ತದೆ.

ಅತಿವೃಷ್ಟಿ, ಅನಾವೃಷ್ಟಿ, ನೆರೆ ಮತ್ತು ಭೂಕುಸಿತ ಹೀಗೆ ಯಾವುದೇ ರೂಪದಲ್ಲಿ ನೈಸರ್ಗಿಕ ದುರಂತಗಳು ಘಟಿಸಬಹುದು. ಕೇರಳದ ವಯನಾಡು ಮತ್ತು ಕರ್ನಾಟಕದ ಶಿರೂರಿನಲ್ಲಿ ನಡೆದಂಥ ಪ್ರಾಕೃತಿಕ ವಿಕೋಪಗಳು ತೀರಾ ಇತ್ತೀಚಿನ ಉದಾಹರಣೆಗಳು ಮಾತ್ರ. ಅಂತೆಯೇ ಇಂಥ ಸಂದರ್ಭಗಳಲ್ಲಿ ಸರಕಾರದ ಸಹಾಯಹಸ್ತ ಬೇಕಾಗುತ್ತದೆ ಮತ್ತು ಅದು ಅನಿವಾರ್ಯವೂ ಹೌದು. ಸರಕಾರ ಬಿಟ್ಟು ಬೇರೆ ಯಾರೂ ರೈತರ ಸಹಾಯಕ್ಕೆ ಧಾವಿಸುವುದಿಲ್ಲ ಎನ್ನುವುದು ಇತಿಹಾಸದ ಸತ್ಯ.

ಆರ್ಥಿಕ ಸಂಕಷ್ಟಗಳು ರೈತರಿಗಷ್ಟೇ ಸೀಮಿತವಾಗಿವೆಯೇ ಎಂಬುದು ಸಾಲಮನ್ನಾ ವಿಚಾರದಲ್ಲಿನ ಮೂಲಭೂತ ಪ್ರಶ್ನೆಯಾಗಿದ್ದು, ಪ್ರಜ್ಞಾವಂತ ಜನರು ಈ ಕುರಿತು ಗಂಭೀರವಾಗಿ ಚರ್ಚಿಸುತ್ತಿದ್ದಾರೆ. ಈ ದಿನಗಳಲ್ಲಿ ಆರ್ಥಿಕ ಸುಧಾರಣೆ, ಉದಾರೀಕರಣ ಮತ್ತು ಜಾಗತೀಕರಣದ ನಂತರ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಸಾಲವನ್ನು ಪಡೆಯದಿರುವವರೇ ಅಪರೂಪ. ಬ್ಯಾಂಕುಗಳಲ್ಲಿ ‘ಯಾವುದಕ್ಕೆ ಸಾಲ ದೊರಕುತ್ತದೆ’ ಎನ್ನುವ ಪಟ್ಟಿ ಮೊಳದುದ್ದವಿದ್ದರೆ, ‘ಯಾವುದಕ್ಕೆ ಸಾಲ ಇಲ್ಲ’ ಎನ್ನುವ ಪಟ್ಟಿ ಗೇಣುದ್ದ ಇರುತ್ತದೆ. ಸಾಲ ಪಡೆದು ತಮ್ಮ ಆರ್ಥಿಕ
ಸ್ಥಿತಿಯನ್ನು ಸುಧಾರಿಸಿಕೊಳ್ಳದವರನ್ನು ‘ಬಸ್ಸು ಮಿಸ್ ಮಾಡಿಕೊಂಡವರು’ ಎಂದು ಗೇಲಿ ಕೂಡ ಮಾಡುವುದಿದೆ.

ಸಾಲದ ಮೊತ್ತ ಸಣ್ಣದಿರಬಹುದು ಅಥವಾ ದೊಡ್ಡದಿರಬಹುದು, ಅದು ಬೇರೆ ಮಾತು. ಸಾಲ ಸಾಲವೇ. ಗೃಹಸಾಲ, ವಾಹನಸಾಲ, ಶಿಕ್ಷಣಸಾಲ, ಉದ್ಯಮಸಾಲ, ಕೈಗಾರಿಕೆ ಸಾಲ, ಕ್ರೆಡಿಟ್ ಕಾರ್ಡ್ ಸಾಲ ಮತ್ತು ಕನ್ಸ್ಯೂಮರ್ ಸಾಲಗಳನ್ನು ಪಡೆದವರು ಗಮನಾರ್ಹ ಸಂಖ್ಯೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ನೋಟು ರದ್ದತಿ, ಕೋವಿಡ್ ಮಹಾಮಾರಿ ಮತ್ತು ಹಣದುಬ್ಬರ
ದಿಂದಾಗಿ ಅವರ ಆರ್ಥಿಕ ಸಂಕಷ್ಟ ತಾರಕಕ್ಕೇರಿದೆ. ಶೈಕ್ಷಣಿಕ ಸಾಲವನ್ನು ಪಡೆದಿರುವ ಲಕ್ಷಾಂತರ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದು ಸಾಲ ಮರುಪಾವತಿಸ
ಬೇಕಾದ ಒತ್ತಡದಲ್ಲಿದ್ದಾರೆ. ರಸ್ತೆಬದಿ ವ್ಯಾಪಾರಿಗಳು, ಗೂಡಂಗಡಿಯವರು, ಚಿಲ್ಲರೆ ವ್ಯಾಪಾರಿಗಳು ಮತ್ತು ವೈಯಕ್ತಿಕ ಸಾಲವನ್ನು ಪಡೆದವರೂ ಆರ್ಥಿಕ ದುಸ್ಥಿತಿಯಲ್ಲಿದ್ದಾರೆ. ಇವರ ಆರ್ಥಿಕ ಬವಣೆಯು ಸರಕಾರ, ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಿಗೆ ಏಕೆ ಅರ್ಥವಾಗುತ್ತಿಲ್ಲ? ವಿವಿಧ ದೈನಂದಿನ ಬಾಬತ್ತುಗಳು, ವ್ಯವಹಾರಗಳ ಮೂಲಕ ಸರಕಾರದ ಬೊಕ್ಕಸಕ್ಕೆ ತೆರಿಗೆ ನೀಡುವ ಜನಸಾಮಾನ್ಯರಿಗೇಕೆ ಸಾಲಮನ್ನಾದ ಪ್ರಯೋಜನವಿಲ್ಲ? ಹಲವರು ಸಾಲದ ಮಾಸಿಕ ಕಂತುಗಳನ್ನು ಕೊಡಲಾರದೆ ತೊಳಲಾಡುತ್ತಿದ್ದಾರೆ.

ರಸ್ತೆಬದಿ ವ್ಯಾಪಾರಿಗಳು ಮತ್ತು ಗೂಡಂಗಡಿಯವರು ಮೀಟರ್ ಬಡ್ಡಿಯ ಚಕ್ರಸುಳಿಯಲ್ಲಿ ಸಿಲುಕಿ ಹೈರಾಣಾಗುತ್ತಿದ್ದಾರೆ. ಇವರಿಗೆ ಸಾಲಮನ್ನಾ ಸೌಲಭ್ಯ ನೀಡಲು ಸಾಧ್ಯವಾಗದಿದ್ದರೆ, ಕನಿಷ್ಠಪಕ್ಷ ಬಡ್ಡಿಯ ವಿಷಯದಲ್ಲಾದರೂ ಸ್ವಲ್ಪ ಕರುಣೆಯನ್ನು ತೋರಿಸಬಹುದಿತ್ತು. ಇಂದು ರೈತನ ಆದಾಯ ಮತ್ತು ಹಿಡುವಳಿ ಎಷ್ಟೇ ಇರಲಿ, ಅವನಿಗೆ ಆದಾಯ ಕರದಿಂದ ವಿನಾಯಿತಿ ಇದೆ. ಆದರೆ ದುಡಿಯುವ ವರ್ಗ ಮತ್ತು ಇತರರಿಗೆ ಆದಾಯದ ಕೊನೆ ರುಪಾಯಿಯವರೆಗೂ ಕಂಪ್ಯೂಟರ್‌ನಲ್ಲಿ ಲೆಕ್ಕ ಹಾಕಿ ಆದಾಯ ಕರವನ್ನು ಪೀಕಿಸಲಾಗುತ್ತದೆ. ಈ ವರ್ಷ ೭.೨೫ ಕೋಟಿ ಜನರು
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದಾರೆ. ಅವರಲ್ಲಿ ಅದೆಷ್ಟು ಜನರು ತೆರಿಗೆ ಕಟ್ಟಲು ಹೆಣಗಾಡಿದ್ದಾರೋ? ಇತ್ತೀಚೆಗಂತೂ ಪಾತಾಳಗರಡಿಯಂತೆ ಇರುವ ಹೊಸ ಸಾಧನಗಳ ಮೂಲಕ ಆದಾಯವನ್ನು ಹುಡುಕಿ ತೆರಿಗೆಯನ್ನು ಹಾಕಲಾಗುತ್ತಿದೆ ಮತ್ತು ತೆರಿಗೆ ಪ್ರಮಾಣವೂ ಕ್ರಮೇಣ ಹೆಚ್ಚಾಗುತ್ತಿದೆ. ರೈತರಿಗೆ ನೀಡುವ ಬೆಳೆಸಾಲಗಳಿಗೆ ಹಲವು ಸಂದರ್ಭಗಳಲ್ಲಿ ಬಡ್ಡಿದರದಲ್ಲಿ ಮತ್ತು ಬಡ್ಡಿಯಲ್ಲಿ ಕಡಿತವಿದೆ. ಆದರೆ ಇತರರಿಗೆ ಈ ಭಾಗ್ಯ ಇರುವುದಿಲ್ಲ. ಹಾಗೆಯೇ, ರೈತರು ಹಲವು ಸಂದರ್ಭಗಳಲ್ಲಿ ಸರಕಾರದಿಂದ ಸಹಾಯಧನ (ಸಬ್ಸಿಡಿ) ಪಡೆಯುತ್ತಾರೆ.

ಆದರೆ ಸಬ್ಸಿಡಿಗೂ ಕೃಷಿಯೇತರ ಸಾಲಗಾರರಿಗೂ ಎಣ್ಣೆ-ಶೀಗೇಕಾಯಿ ಸಂಬಂಧ. ಕೃಷಿಯೇತರ ಸಾಲ ಪಡೆದವರಿಗೆ ಯಾವುದೇ ರೀತಿಯ ವಿನಾಯಿತಿ ಇರುವುದಿಲ್ಲ. ಅವರು ಕಮರ್ಷಿಯಲ್ ದರದಲ್ಲಿ ಬಡ್ಡಿಯನ್ನು ನೀಡಬೇಕಾಗುತ್ತದೆ. ಬದುಕಿನಲ್ಲಿ ಸಾಮಾಜಿಕ ನ್ಯಾಯ ಇರಬೇಕು ಎನ್ನುವ ಮಾತು ಪ್ರತಿಯೊಬ್ಬ ರಾಜಕಾರಣಿ, ಸಮಾಜಸೇವಕ ಮತ್ತು ರಾಜಕೀಯ ಪಕ್ಷಗಳಿಂದ ಕೇಳಿಬರುತ್ತದೆ. ಆದರೆ ವಾಸ್ತವದಲ್ಲಿ ಈ ನ್ಯಾಯ ಕೆಲವರಿಗಷ್ಟೇ ದೊರಕುತ್ತದೆ. ಇಂದು ಬ್ಯಾಂಕುಗಳು ಸುಮಾರು ೧೫ ಲಕ್ಷ ಕೋಟಿ ರು.ನಷ್ಟು ಅನುತ್ಪಾದಕ ಸಾಲವನ್ನು ‘ರೈಟ್ ಆಫ್’
ಮಾಡಿವೆ. ಸುಮಾರು ೧ ಲಕ್ಷ ಕೋಟಿ ರು.ನಷ್ಟು ಎಂಎಸ್ ಎಂಇ ಸಾಲವನ್ನು ರೈಟ್ ಆಫ್ ಮಾಡಲಾಗಿದೆಯಂತೆ. ರೈಟ್ ಆಫ್ ಎಂಬುದು ಮನ್ನಾ ಅಲ್ಲ, ಅದು ಬೇರೆ ಮಾತು.

ಆದರೆ, ಇದರ ಫಲಾನುಭವಿಗಳಲ್ಲಿ ಭಾರಿ ಉದ್ಯಮಿಗಳೇ ದೊಡ್ಡ ಪ್ರಮಾಣದಲ್ಲಿದ್ದು, ಮಧ್ಯಮ ವರ್ಗದವರು, ಆರ್ಥಿಕವಾಗಿ ಕೆಳಗಿರುವ ಜನಸಾಮಾನ್ಯರು ತುಂಬಾ ಕಡಿಮೆ ಎನ್ನುವ ಆರೋಪ ಕೇಳಿಬರುತ್ತಿದೆ. ರೈಟ್ ಆಫ್ ಪ್ರಕ್ರಿಯೆಯು ಮನ್ನಾ ಅಲ್ಲ ಎನ್ನುವುದು ಸತ್ಯವಾದರೂ, ರೈಟ್ ಆಫ್ ಆಗಿರುವುದರಲ್ಲಿ ರಿಕವರಿ ಪ್ರಮಾಣವು ಕೇವಲ ಶೇ.೧೫ರಷ್ಟು ಎನ್ನುವುದು ಆತಂಕದ ವಿಷಯವಾಗಿದೆ. ಹೀಗಾಗಿ ರೈಟ್ ಆಫ್ ಕೂಡ ಮನ್ನಾದಂತೆ ಗೋಚರಿಸುತ್ತದೆ. ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಾಲಮನ್ನಾ ಮೂಲಕ ಸಹಾಯ ಮಾಡುವಾಗ ಸರಕಾರವು ‘ಸರ್ವರಿಗೂ
ಸಮಪಾಲು-ಸಮಬಾಳು’ ತತ್ವವನ್ನು ಅನುಸರಿಸಬೇಕು ಮತ್ತು ಇದರ ಫಲವು ಆರ್ಥಿಕ ಸಂಕಷ್ಟದಲ್ಲಿ ಇರುವವರಿಗೆಲ್ಲಾ ದೊರಕುವಂತಾಗಬೇಕು.

ಎಲ್ಲರನ್ನೂ ಒಂದೇ ಬುಟ್ಟಿಯಲ್ಲಿ ತೂಗಿ ಹೊಸ ಸಂಘರ್ಷವನ್ನು ತಪ್ಪಿಸಬೇಕು. ದೇಶವು ಈಗಾಗಲೇ ಗೋಚರವಾಗಿ, ಅಗೋಚರವಾಗಿ ಸಾಕಷ್ಟು ವಿಭಜನೆ ಕಂಡಿದ್ದು, ‘ರೈತ’, ‘ರೈತೇತರ’ ಎನ್ನುವ ಇನ್ನೊಂದು ವಿಭಜನೆ ಮುನ್ನೆಲೆಗೆ ಬಾರದಿರಲಿ ಎಂಬುದು ಸಹೃದಯಿಗಳ ಆಶಯ.

(ಲೇಖಕರು ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)