Wednesday, 8th January 2025

Lokesh Kaayarga Column: ದೊಡ್ಡವರಾದ ಮೇಲೆ ಸಣ್ಣವರಾಗಬಾರದು !

ಲೋಕಮತ

ಲೋಕೇಶ್‌ ಕಾಯರ್ಗ

kaayarga@gmail.com

ಅದು ಕನ್ನಡದ ಕೋಟ್ಯಧಿಪತಿ ಕಾರ‍್ಯಕ್ರಮ. ಅನಿಲ್ ಕುಂಬ್ಳೆ ಅವರನ್ನು ವಿಶೇಷ ಅತಿಥಿಯಾಗಿ ಕರೆಸಲಾಗಿತ್ತು. ಎಸ್.ಪಿ. ಬಾಲಸುಬ್ರಮಣ್ಯ ಅವರ ಹಾಡುಗಳೆಂದರೆ ಕುಂಬ್ಳೆಗೆ ಇಷ್ಟ. ಮಾತಿನ ಮಧ್ಯೆ ಈ ವಿಷಯ ಪ್ರಸ್ತಾಪಕ್ಕೆ ಬಂತು. ಕಾರ‍್ಯಕ್ರಮವನ್ನು ಅದ್ಭುತವಾಗಿ ನಡೆಸಿಕೊಡುತ್ತಿದ್ದ ನಟ ಪುನೀತ್ ರಾಜ್‌ಕುಮಾರ್ ಎಸ್‌ಪಿಬಿಗೆ ಫೋನ್ ಹಚ್ಚಿ, ಕುಂಬ್ಳೆ ಜತೆ ನೇರವಾಗಿ ಮಾತನಾಡಲು ಅವಕಾಶ ಮಾಡಿಕೊಟ್ಟರು. ಆ ಕಡೆಯಿಂದ ಫೋನ್ ಎತ್ತಿಕೊಂಡ ಎಸ್‌ಪಿಬಿ ಕೇಳಿದ್ದೊಂದೇ ಪ್ರಶ್ನೆ-ನೀವು ಕನ್ನಡಿಗರು ಇಷ್ಟು ಒಳ್ಳೆಯವರಾಗಿರಲು ಹೇಗೆ ಸಾಧ್ಯ..? ಕುಂಬ್ಳೆ ಸುಮ್ಮನೆ ನಕ್ಕು ಧನ್ಯವಾದ ಹೇಳಿದರು.

ಮಾತಿನಲ್ಲಿ ಅನಿಲ್ ಕುಂಬ್ಳೆ ಮಾತ್ರವಲ್ಲ, ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ ಕರ್ನಾಟಕದ ಆಟಗಾರರೆಲ್ಲರ ಪ್ರಶಂಸೆ ಇತ್ತು. 60-70 ದಶಕದ ಜಿ.ಆರ್.ವಿಶ್ವನಾಥ್, ಬಿ.ಎಸ್.ಚಂದ್ರಶೇಖರ್, ಎರ್ರಪಳ್ಳಿ ಪ್ರಸನ್ನ, ನಂತರದ ದಶಕಗಳಲ್ಲಿ ಬಂದ ಬ್ರಿಜೇಶ್ ಪಟೇಲ್, ರೋಜರ್ ಬಿನ್ನಿ, ಸಯ್ಯದ್ ಕೀರ್ಮಾನಿ, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್, ರಾಹುಲ್ ದ್ರಾವಿಡ್‌ರಿಂದ ತೊಡಗಿ ಹಾಲಿ ತಂಡದ ಭಾಗವಾಗಿರುವ ಕೆ.ಎಲ್. ರಾಹುಲ್ ತನಕ ಎಲ್ಲರಿಗೂ ಮಾತು ಅನ್ವಯವಾಗುವಂತಿತ್ತು. ಕರ್ನಾಟಕದ ಕ್ರಿಕೆಟಿಗರೆಂದೂ ಮೈದಾನದ ಒಳಗೆ ಮತ್ತು ಹೊರಗೆ ಮೈ ಮರೆತು ವರ್ತಿಸಿದವರಲ್ಲ. ‘ಜಂಟಲ್ ಮ್ಯಾನ್ಸ್ ಗೇಮ್’ ಎಂದು ಕರೆಸಿಕೊಳ್ಳುವ ಕ್ರಿಕೆಟ್‌ನಲ್ಲಿ ‘ಗಂಟಲ್’ ಮ್ಯಾನ್‌ಗಳಾದವರಲ್ಲ. ಎದುರಾಳಿಯು ಕೆಣಕಿದಾಗಲೆಲ್ಲಾ ಬ್ಯಾಟ್, ಬಾಲ್ ಮೂಲಕವೇ ಉತ್ತರ ನೀಡಿದವರು. ಈ ಕಾರಣಕ್ಕಾಗಿಯೇ ಕನ್ನಡಿಗ ಕ್ರಿಕೆಟಿಗರೆಂದರೆ ವಿಶ್ವಮಟ್ಟದಲ್ಲೂ ವಿಶೇಷ ಗೌರವ. ಈ ಮಾತು ಈಗ ನೆನಪಾಗಲು ಕಾರಣವಿದೆ.

ಆಸ್ಟ್ರೇಲಿಯಾದಲ್ಲಿ ಈಗ ತಾನೇ ಮುಗಿದಿರುವ ಗವಾಸ್ಕರ್- ಬಾರ್ಡರ್ ಸರಣಿಯ ಟೆಸ್ಟ್ ಪಂದ್ಯಗಳಲ್ಲಿ ನಮ್ಮ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತು ಬೌಲರ್ ಮೊಹಮ್ಮದ್ ಅವರ ವರ್ತನೆಯ ಬಗ್ಗೆ ಭಾರತ ಮತ್ತು ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಆ ದೇಶದ ಮಾಧ್ಯಮಗಳು ಅಲ್ಲಿನ ಕ್ರಿಕೆಟಿಗರ ವರ್ತನೆಯನ್ನು ಸಮರ್ಥಿಸಿಕೊಂಡು ನಮ್ಮವರನ್ನು ಹೀಗಳೆದರೆ, ನಮ್ಮ ದೇಶದ ಮಾಧ್ಯಮಗಳು ಟೀಮ್ ಆಸ್ಟ್ರೇಲಿಯಾ ಮತ್ತು ಅಲ್ಲಿನ ಪ್ರೇಕ್ಷಕ ವರ್ಗವನ್ನು ದೂರುತ್ತಿವೆ. ಆದರೆ ಪ್ರಶ್ನೆ ಇರುವುದು ವಿರಾಟ್ ಕೊಹ್ಲಿಯಂತಹ ಮೇರು ಕ್ರಿಕೆಟಿಗ ಹೀಗೂ
ವರ್ತಿಸಹುದೇ ? ಈ ಸರಣಿಯನ್ನು ರೋಹಿತ್ ಬಳಗ 1-3 ಅಂತರದಿಂದ ಸೋತಿದ್ದು ದೊಡ್ಡ ವಿಚಾರವೇನೂ ಅಲ್ಲ. ಮೂರನೇ ಬಾರಿಗೆ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸುವ ನಮ್ಮ ಕನಸು ನನಸಾಗಲಿಲ್ಲ ಎನ್ನುವುದೂ ಮುಖ್ಯವಲ್ಲ. ಆದರೆ ಬ್ಯಾಟಿಂಗ್ ವೈಫಲ್ಯದ ಜತೆ ತಮ್ಮ ವರ್ತನೆಗಾಗಿ ಕೊಹ್ಲಿ ದಂಡ ತೆತ್ತಿದ್ದು, ಕೊನೆಯಲ್ಲಿ ಟ್ರೋಫಿ ವಿತರಣೆಯ ವೇಳೆ ಗವಾಸ್ಕರ್ ಅವರನ್ನು ಕರೆಯದೆ ಅವಮಾನಿಸಿದ್ದು, ಆರದ ಗಾಯಗಳಾಗಿ ಉಳಿದು ಬಿಡುತ್ತವೆ. ಆಸೀಸ್ ಸರಣಿಯ ಕಹಿ ನೆನಪುಗಳನ್ನು, ಕೊಹ್ಲಿಯಂತಹ ಹಿರಿಯ ಆಟಗಾರ ಮತ್ತಷ್ಟೂ ಕಹಿಯಾಗಿಸಿದರು
ಎಂದರೆ ತಪ್ಪಲ್ಲ.

ಆಕ್ರಮಣ ವರ್ಸಸ್ ಅಹಂಕಾರ
ನಿಜ, ವಿರಾಟ್ ಕೊಹ್ಲಿ ಮೊದಲಿನಿಂದಲೂ ತಮ್ಮ ಆಕ್ರಮಣಕಾರಿ ಕ್ರಿಕೆಟ್‌ನಿಂದಲೇ ಪ್ರಸಿದ್ಧರಾದವರು. ಅವರು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಅವರಂತೆ ತಮ್ಮ ಭಾವನೆಗಳನ್ನು ಎಂದು ಬಚ್ಚಿಟ್ಟುಕೊಂಡವರಲ್ಲ. ಆದರೆ ಆಟದಲ್ಲಿ ತೋರಿಸುವ ಆಕ್ರಮಣ ಪ್ರವೃತ್ತಿಗೂ, ಆಟದಿಂದ ಹೊರತಾದ ಪ್ರವೃತ್ತಿಗೂ ಸಾಕಷ್ಟು ವ್ಯತ್ಯಾಸವಿದೆ. ಮೆಲ್ಬೋರ್ನ್‌ನಲ್ಲಿ ನಡೆದ ೪ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಪರ ಚೊಚ್ಚಲ ಪ್ರವೇಶ ಪಡೆದ 19ರ ಹರೆಯದ ಸ್ಯಾಮ್ ಕೋನ್‌ಸ್ಟಾಸ್ ಚೆನ್ನಾಗಿ ಆಡುತ್ತಿದ್ದರು. ಜಸ್ ಪ್ರಿತ್ ಬುಮ್ರಾ ಎಸೆತಕ್ಕೆ ಸಿಕ್ಸರ್ ಹೊಡೆದು ತಮ್ಮ ಕ್ಲಾಸ್
ಏನೆಂದು ಅವರು ತೋರಿಸಿಕೊಟ್ಟಿದ್ದರು. ಕೊಹ್ಲಿಯಂತಹ ಹಿರಿಯ ಆಟಗಾರ ಒಂದು ಬಾರಿ ಚಪ್ಪಾಳೆ ತಟ್ಟಿ ಅವರನ್ನು ಅಭಿನಂದಿಸಿದ್ದರೆ, ಅವರ ವ್ಯಕ್ತಿತ್ವ ಇನ್ನಷ್ಟೂ ವಿರಾಟವಾಗುತ್ತಿತ್ತು. ಆದರೆ ಯುವ ಆಟಗಾರನಿಗೆ ಭುಜ ತಗುಲಿಸಿ ಹೊರಟ ‘ಕಿಂಗ್’ ಕೊಹ್ಲಿ, ತಮ್ಮ ವರ್ತನೆಯಿಂದ ಕಿರೀಟ ಕಳೆದುಕೊಂಡು ಸಣ್ಣವರಾಗಿ ಬಿಟ್ಟರು.

90ರ ದಶಕದಿಂದ ದೂಷಣೆ, ನಿಂದನೆ, ಮತ್ತು ಕೆರಳಿಸುವ ಮಾತುಗಳಿಂದ ಕ್ರಿಕೆಟ್ ಆಟವನ್ನು ಕಿರಿಕ್ ಆಟವನ್ನಾಗಿಸಿದ ಟೀಮ್ ಆಸ್ಟ್ರೇಲಿಯಾದ ಎದುರು ಆಟವಾಡಬೇಕಾದರೆ ಈ ತಂತ್ರವನ್ನು ಬಳಸಲೇಬೇಕು. ಆಸೀಸ್ ಆಟಗಾರರು ಸ್ಲೆಡ್ಜಿಂಗ್ ಮಾಡಬೇಕಾದರೆ ನಾವ್ಯಾಕೆ ಮಾಡಬಾರದು ಎಂದು ಕೇಳುವವರಿದ್ದಾರೆ. ಆದರೆ ಕೊಹ್ಲಿಯಂತಹ ಆಟಗಾರ ಈ ಮಟ್ಟಕ್ಕಿಳಿದು ತಮ್ಮ ವ್ಯಕ್ತಿತ್ವಕ್ಕೆ ಕುಂದು ತಂದುಕೊಳ್ಳಬಾರದಿತ್ತು. ಸಂಯಮ ಕಳೆದುಕೊಂಡು ಪ್ರೇಕ್ಷಕರ ಜತೆ, ಪತ್ರಕರ್ತರ ಜತೆ ಜಗಳಕ್ಕಿಳಿಯಬಾರದಿತ್ತು.

ಆಯಾ ದೇಶದ ನೆಲದಲ್ಲಿ ಪ್ರೇಕ್ಷಕರು ತಮ್ಮ ದೇಶೀಯ ತಂಡವನ್ನು ಬೆಂಬಲಿಸುವುದು ವಿಶೇಷವೇನೂ ಅಲ್ಲ. ಆದರೆ ಮೆಲ್ಬೋರ್ನ್‌ನಲ್ಲಿ ಯುವ ಆಟಗಾರ ಸ್ಯಾಮ್ ಕೋನ್‌ಸ್ಟಾಸ್ ಜೊತೆ ಅನುಚಿತವಾಗಿ ನಡೆದುಕೊಂಡ ಬಳಿಕ ಕೊಹ್ಲಿ ಆಸ್ಟ್ರೇಲಿಯನ್ನರ ಪಾಲಿಗೆ ವಿಲನ್ ಆಗಿದ್ದರು. ಅವರ ಆಟದ ವೇಳೆ ಪ್ರೇಕ್ಷಕರ ಕಿರುಚಾಟ ಮೇರೆ ಮೀರುವಂತಿತ್ತು. ಇದರಿಂದ ನಷ್ಟವಾಗಿದ್ದು ಭಾರತಕ್ಕೆ. ಕೊಹ್ಲಿ ಕೊನೆಯ ಎರಡೂ ಪಂದ್ಯಗಳಲ್ಲಿ ತಮ್ಮ ನೈಜ ಆಟ ಕಂಡುಕೊಳ್ಳಲಾರದೆ ಏಕಾಗ್ರತೆ ಕಳೆದುಕೊಂಡು ಔಟಾದರು. ಹಾಗೆಂದು ಕೊಹ್ಲಿ ಮಾಡಿದ್ದೆಲ್ಲವೂ ತಪ್ಪೆಂದಲ್ಲ. ಕೊನೆಯ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಟೀವ್ ಸ್ಮಿತ್ ಔಟಾದಾಗ, ಕೊಹ್ಲಿ ತಮ್ಮ ಪ್ಯಾಂಟ್‌ನ ಖಾಲಿ ಜೇಬು ತೋರಿಸಿ, ‘ನಮ್ಮಲ್ಲಿ ಚೆಂಡು ವಿರೂಪಗೊಳಿಸುವ ಸ್ಯಾಂಡ್‌ಪೇಪರ್ ಇಲ್ಲ’ ಎಂದು ಪರೋಕ್ಷವಾಗಿ 2018ರಲ್ಲಿ ಚೆಂಡು ವಿರೂಪಗೊಳಿಸಿದ ಕಾರಣಕ್ಕೆ ಸ್ಟೀವ್ ಸ್ಮಿತ್ ಸೇರಿದಂತೆ ಆಸ್ಟ್ರೇಲಿಯಾದ ಮೂವರು ಆಟಗಾರರು ನಿಷೇಧಕ್ಕೆ ಒಳಗಾದ ಪ್ರಕರಣ ನೆನಪಿಸಿದ್ದರು. ಬುಮ್ರಾ ವಿರುದ್ಧದ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ಕೊಹ್ಲಿ ಈ ಉತ್ತರ ನೀಡಿದ್ದರು. ಆದರೆ ಆರಂಭದಲ್ಲಿ ಎಸಗಿದ ತಪ್ಪು ನಂತರದ ನಡತೆಗೂ ಕಳಂಕ ಹಚ್ಚಿತು.

ಸವಾಲ್ ಜವಾಬ್ ಹೊಸದೇನಲ್ಲ
ಕ್ರಿಯೆಗೆ ಪ್ರತಿಕ್ರಿಯೆ ರೂಪದಲ್ಲಿ ಭಾರತೀಯ ಆಟಗಾರರು ಈ ಹಿಂದೆಯೂ ತಕ್ಕ ಜವಾಬು ನೀಡಿದ್ದರು. 1992ರ ಕಿರಣ್ ಮೋರೆ- ಮಿಯಾಂದಾದ್ ಪ್ರಕರಣ ಎಂದಿಗೂ ಮರೆಯಲಾಗದ ಘಟನೆ. ಆದರೆ ಈ ನಿಂದನೆಗೆ ತಕ್ಕ ಉತ್ತರ ಬ್ಯಾಟ್ ಮತ್ತು ಬಾಲ್ ರೂಪದಲ್ಲಿಯೇ ಇದ್ದಾಗ ಆಟ ಇನ್ನಷ್ಟೂ ಸ್ಮರಣೀಯವಾಗುತ್ತದೆ. ಕನ್ನಡಿಗ ವೆಂಕಟೇಶ್ ಪ್ರಸಾದ್ 1996ರಲ್ಲಿ ಬೆಂಗಳೂರಿನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಬೌಂಡರಿ ಹೊಡೆದು ತಮ್ಮನ್ನು ಕೆಣಕಿದ ಪಾಕಿಸ್ತಾನದ ಅಮಿರ್ ಸೊಹೈಲ್ ಅವರನ್ನು ಮುಂದಿನ ಎಸೆತದಲ್ಲಿಯೇ ಔಟ್ ಮಾಡಿ ಸಂಭ್ರಮಿಸಿದ್ದನ್ನು ಕ್ರಿಕೆಟ್ ಪ್ರೇಮಿಗಳು ಈಗಲೂ ನೆನಪಿಸಿಕೊಳ್ಳುತ್ತಾರೆ.

ತೆಂಡುಲ್ಕರ್, ದ್ರಾವಿಡ್, ಲಕ್ಷ್ಮಣ್, ಧೋನಿ, ಯುವರಾಜ್ ಸಿಂಗ್ ಮುಂತಾದವರು ತಮ್ಮನ್ನು ಕೆಣಕಿದ ಬೌಲರ್ ಗಳನ್ನು ಚೆಂಡಾಡಿದ ಹಲವು ಉದಾಹರಣೆಗಳಿವೆ. ಆದರೆ ಟ್ರಾವಿಸ್ ಹೆಡ್ ತೋರಿಸಿದ ಅಸಭ್ಯ ಸನ್ನೆ, ಕೊಹ್ಲಿಯ ‘ಭುಜಬಲದ ಪರಾಕ್ರಮ’ ಆಟದ ಅಂದವನ್ನು ಕೆಡಿಸಲಷ್ಟೇ ಸಾಧ್ಯ.

ಆಸೀಸ್ ಸ್ಲೆಡ್ಜರ್ಸ್
ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಈಗ ತಾವು ಕೊಟ್ಟಿದ್ದನ್ನು ಉಣ್ಣುವ ಕಾಲ ಬಂದಿದೆ. ಆಟಗಾರರ ನಿಂದನೆಯನ್ನು ಆಕ್ರಮಣಕಾರಿ ಕ್ರಿಕೆಟ್‌ನ ಭಾಗವಾಗಿ ಮಾಡಿದ್ದು ಇದೇ ಟೀಮ್ ಆಸ್ಟ್ರೇಲಿಯಾ. 2008ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ನಡೆದ ‘ಮಂಕಿಗೇಟ್’ ಪ್ರಕರಣ ಕ್ರಿಕೆಟ್ ಪ್ರಿಯರಿಗೆ ನೆನಪಿರಬಹುದು. ಬೌಲರ್ ಹರ್ಭಜನ್ ಸಿಂಗ್ ತಮ್ಮನ್ನು ‘ಮಂಕಿ’ ಎಂದು ನಿಂದಿಸಿದ್ದಾಗಿ ಆಲ್ ರೌಂಡರ್ ಆಂಡ್ರ್ಯೂ ಸೈಮಂಡ್ಸ್ ದೂರಿದ್ದರು. ಈ ಪ್ರಕರಣದಲ್ಲಿ ಭಜ್ಜಿಗೆ ಒಂದು ಒಂದು ಪಂದ್ಯದ ನಿಷೇಧ ಹೇರಲಾಗಿತ್ತು. ಆದರೆ ತಮ್ಮ ಆಶಿಸ್ತು, ದುರ್ನಡತೆಯ ಕಾರಣಗಳಿ ಗಾಗಿಯೇ ಕುಖ್ಯಾತಿ ಹೊಂದಿದ್ದ ಸೈಮಂಡ್ಸ್ ಕುಡಿದು ಕಾರು ಚಲಾಯಿಸುವಾಗ ಅಪಘಾತಕ್ಕೀಡಾಗಿ ದುರಂತ ಸಾವು ಕಂಡಿದ್ದು ಈಗ ಇತಿಹಾಸ. 90ರ ದಶಕದಲ್ಲಿ ಸ್ಟೀವ್ ವೋ ನಾಯಕನಾಗಿದ್ದಾಗ ಅಳವಡಿಸಿಕೊಂಡ ಸ್ಲೆಡ್ಲಿಂಗ್ ನೀತಿ ಮುಂದೆ ರಿಕಿ ಪಾಂಟಿಂಗ್ ಕಾಲದಲ್ಲಿ ಮತ್ತಷ್ಟು ಗಟ್ಟಿ ಯಾಯಿತು. ಆರಂಭದಲ್ಲಿ ಕ್ರಿಕೆಟಿಗರ ಏಕಾಗ್ರತೆ ಕದಡಲು ಅಳವಡಿಸಿಕೊಂಡ ಈ ನೀತಿ ಮುಂದೆ ದೂಷಣೆಗಷ್ಟೇ ಸೀಮಿತವಾಗದೆ ದುರ್ವರ್ತನೆಗೂ ನಾಂದಿ ಹಾಡಿತು.

2006ರಲ್ಲಿ ಮುಂಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಗೆದ್ದ ರಿಕಿ ಪಾಂಟಿಂಗ್, ಟ್ರೋಫಿ ಪಡೆದಾಕ್ಷಣ ಬಿಸಿಸಿಐ ಅಧ್ಯಕ್ಷರಾಗಿದ್ದ ಶರದ್ ಪವಾರ್ ಅವರನ್ನು ಪಕ್ಕಕ್ಕೆ ತಳ್ಳಿ ಫೋಟೋ ತೆಗೆಸಿಕೊಂಡಿದ್ದರು. ಆಸ್ಟ್ರೇಲಿಯ ಕ್ರಿಕೆಟಿಗರಿಗೆ ಇಂತಹ ವಿವಾದಗಳು ಹೊಸದೇನೂ ಅಲ್ಲ. ಕುಡಿತ, ಮೋಜು, ಹಲ್ಲೆ, ದುರ್ನಡತೆ ಕಾರಣ ಗಳಿಗಾಗಿ ಅಲ್ಲಿನ ಹಿರಿಯ ಆಟಗಾರರು ಕೂಡ ನಿಷೇಧಕ್ಕೊಳಗಾದ ಉದಾಹರಣೆಗಳಿವೆ. ಆಸ್ಟ್ರೇಲಿಯಾದ ಕ್ರಿಕೆಟ್ ಅಭಿಮಾನಿಗಳು ಕೂಡ ಇದನ್ನು ಆಟದ ಭಾಗವಾಗಿಯೇ ಪರಿಗಣಿಸಿದ್ದಾರೆ.

ಭಾರತದಲ್ಲಿ ಸನ್ನಡತೆಯೇ ಸೈ
ಕ್ರಿಕೆಟಿಗರು, ಸಿನಿಮಾ ತಾರೆಯೆಂದರೆ ಆರಾಧಿಸುವ (ಹೀರೋ ವರ್ಸಿಪ್) ಭಾರತದ ಅಭಿಮಾನಿಗಳು ಇಂತಹ ಘಟನೆಗಳನ್ನು ಅರಗಿಸಿಕೊಳ್ಳು ವುದು ಕಷ್ಟ. ಕೊಹ್ಲಿಯಂತಹ ಆಟಗಾರ ಉತ್ತಮ ನಿರ್ವಹಣೆ ನೀಡಲು ವಿಫಲವಾಗಿದ್ದು ಮಾತ್ರವಲ್ಲ, ದುರ್ನಡತೆಗಾಗಿ ದಂಡ ಕಟ್ಟಬೇಕಾಯಿತೆಂಬ ವಿಚಾರವೇ ನಮ್ಮ ಅಭಿಮಾನಕ್ಕೆ ಘಾಸಿ ಮಾಡುತ್ತದೆ. ಒಂದು ವೇಳೆ ವಿರಾಟ್ ಜಾಗದಲ್ಲಿ ಸಚಿನ್ ತೆಂಡೂಲ್ಕರ್ ಇದ್ದರೆ ಇಡೀ ದೇಶ ರೊಚ್ಚಿಗೇಳು ತ್ತಿತ್ತು. ಕ್ರಿಕೆಟನ್ನು ಅನಧಿಕೃತ ರಾಷ್ಟ್ರಧರ್ಮವನ್ನಾಗಿ ಸ್ವೀಕರಿಸಿರುವ ದೇಶದಲ್ಲಿ ಆಟಗಾರರು ತಮ್ಮ ಪ್ರತಿಯೊಂದು ನಡೆ ನುಡಿಯಲ್ಲೂ ಎಚ್ಚರಿಕೆ ವಹಿಸಬೇಕಾಗುತ್ತದೆ. ಅದರಲ್ಲೂ ಎಳೆಯ ಆಟಗಾರರು ತಮ್ಮ ವರ್ತನೆ ಮಿತಿ ಮೀರದಂತೆ ಸಂಯಮ ವಹಿಸಬೇಕಾಗುತ್ತದೆ. ಇದಕ್ಕೆ ತಪ್ಪಿ ನಡೆದರೆ ತಂಡದಿಂದ ಸ್ಥಾನ ಕಳೆದುಕೊಳ್ಳುವ ಜೊತೆಗೆ ಅಭಿಮಾನಿಗಳ ಆಕ್ರೋಶಕ್ಕೂ ಗುರಿಯಾಗಬೇಕಾಗುತ್ತದೆ. ಕರ್ನಾಟಕದವರೇ ಆದ ಸದಾನಂದ ವಿಶ್ವನಾಥ್ ೮೦ರ ವಿಕೆಟ್ ಕೀಪರ್ ಆಗಿ ಅತ್ಯಂತ ಭರವಸೆ ಮೂಡಿಸಿದ್ದವರು. ರಾಷ್ಟ್ರೀಯ ತಂಡಕ್ಕೆ ಸೇರಿದ್ದ ಅವರು ತಮ್ಮ ಅಶಿಸ್ತು ಮತ್ತು ಉದ್ಧಟತನದ ಕಾರಣಕ್ಕಾಗಿ ಕ್ರಿಕೆಟ್ ನಿಂದಲೇ ನಿವೃತ್ತಿ ಪಡೆಯಬೇಕಾಯಿತು. ಕುಡಿತ, ಅಶಿಸ್ತಿನ ಕಾರಣಕ್ಕೆ ಬದುಕಿನಲ್ಲೂ ಕತ್ತಲೆಯತ್ತ ಸಾಗಿದ ವಿನೋದ್ ಕಾಂಬ್ಳಿ ನಮ್ಮ ಮುಂದಿರುವ ಅತ್ಯುತ್ತಮ ಉದಾಹರಣೆ. ಆಶಿಸ್ತಿನ ಕಾರಣದಿಂದಲೇ ರಾಷ್ಟ್ರೀಯ ತಂಡದಿಂದ ಹೊರ ಬಿದ್ದ ಪ್ರತಿಭಾವಂತ ಆಟಗಾರ ಪೃಥ್ವಿ ಶಾಗೆ ಈ ಬಾರಿ ಐಪಿಎಲ್ ತಂಡದಲ್ಲೂ ಸ್ಥಾನ ಸಿಕ್ಕಿಲ್ಲ. ಐಪಿಎಲ್‌ನಂತಹ ಕ್ರೀಡಾಕೂಟ ಆರಂಭವಾದ ಮೇಲೆ ಭಾರತದ ಆಟಗಾರರು ಮತ್ತು ಮತ್ತು ವಿದೇಶಿ ಆಟಗಾರರ ನಡುವೆ ಹೊಸ ಬಾಂಧವ್ಯ ಬೆಳೆದಿದೆ.

ಆದರೆ ತಮ್ಮ ದೇಶದ ಪರವಾಗಿ ಆಡುವಾಗ ಪ್ರತಿಯೊಬ್ಬ ಆಟಗಾರ ಛಲದಿಂದ ಆಡುವುದು ಸಹಜ. ಈ ಆವೇಶ ಆಭಾಸಕ್ಕೆಡೆಯಾಗದಂತೆ ನೋಡಿಕೊಳ್ಳುವುದು ಆಯಾ ಆಟಗಾರರ ಕೈಯಲ್ಲಿದೆ. ಅದರಲ್ಲೂ ಹಿರಿಯ ಆಟಗಾರರ ನಡೆ ಕಿರಿಯರಿಗೆ ಮಾತ್ರವಲ್ಲ ತಮ್ಮ ಅಭಿಮಾನಿಗಳಿಗೂ ಮಾದರಿಯಾಗಿರಬೇಕು. ಸಣ್ಣವರು ದೊಡ್ಡವರಾಗಬೇಕು. ಆದರೆ ದೊಡ್ಡವರಾದ ಮೇಲೆ ಸಣ್ಣವರಾಗಬಾರದು. ಇದು ವಿರಾಟ್ ಕೊಹ್ಲಿ ಕಲಿಸಿದ ಪಾಠ.

ಇದನ್ನೂ ಓದಿ: Lokesh Kaayarga Column: ಪಂಜಾಬ್‌ ಹಾದಿಯಲ್ಲಿದೆಯೇ ಕರ್ನಾಟಕ ?

Leave a Reply

Your email address will not be published. Required fields are marked *