Friday, 20th September 2024

ಜಲಸರೋವರದ ತೇಲು ದ್ವೀಪ..ಲೋಕ್ತಾತ್‌

ಆಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehendale@gmail.com

ಬಹುಶ: ಇಂಥದ್ದೊಂದು ಅದ್ಭುತ ದೃಶ್ಯ ಐಝವಾಲ ಮತ್ತು ಇಂಫಾಲದ ನಡುವಿನ ವಿಮಾನ ಪ್ರಯಾಣ ಹೊರತು ಪಡಿಸಿದರೆ ಇನ್ನೆಲ್ಲೂ ಸಿಕ್ಕಲಾರದು. ಸರಿ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಸರೋವರ ಮೇಲೆ ಹಾರುತ್ತಾ ಮಾನ ಇಳಿಯುತ್ತಿದ್ದರೆ ಸುರುಳಿ ಆಕಾರದ ತೇಲುವ ನಡುಗಡ್ಡೆಗಳ ಈ ಸರೋವರ ತುಂಬಾ ಚೆಂದ ಕಾಣಿಸುತ್ತದೆ.

ಇಂಫಾಲದಿಂದ ರಸ್ತೆ ಮೂಲಕ ಲಭ್ಯವಾಗುವ ಅನುಭವಕ್ಕಿಂತಲೂ ಭಿನ್ನ ಮತ್ತು ತಿಳಿ ನೀಲವರ್ಣದ ಸಾಗರದಂತಹ ಸರೋವರದಲ್ಲಿ ವೃತ್ತಾಕಾರದ ಹಚ್ಚ ಹಸಿರು
ತೇಲುವ ಚಿಕ್ಕ ಚಿಕ್ಕ ದ್ವೀಪಗಳು. ಇದನ್ನು ತೇಲುವ ಸರೋವರ ಎನ್ನುವ ಖ್ಯಾತಿಗೆ ಗುರಿಯಾಗಿಸಿದೆ. ಅದೇ ಜಗತ್ತಿನ ಏಕೈಕ ತೇಲುವ ದ್ವೀಪ ಕಲ್ಪ ಎನ್ನಿಸಿದ ಲೋಕ್ತಾಕ್ ಲೇಕ್. ಮಣಿಪುರ ಇತಿಹಾಸದ ಒಂದು ಭಾಗವಾಗಿರುವ ಲೋಕ್ತಾಕ ಹಲವು ನೇರಾನೇರ ನೆತ್ತರಿನ ಕಲಹಗಳಿಗೆ ಸಾಕ್ಷಿ. ಸಾರಾರು ವರ್ಷಗಳಿಂದ ಮುಖ ಚಹರೆ ಬದಲಾಗುತ್ತಲೇ ಬಂದ ಮಣಿಪುರಕ್ಕೆ ಏಕೈಕ ಸರೋವರವಾಗಿ ಉಳಿದಿರುವ ಲೋಕ್ತಾಕ್ ಅಕ್ಷರಶಃ ಭೂಮಿಯ ಮುಖದಿಂದ ಜನಿಸಿದ ಪುರಾತನ ನೀರಿನ ಸಂಗಮದ ಸ್ಥಳ. ಇದೊಂದು ಪ್ರಮುಖ ಪ್ರವಾಸಿ ಸ್ಥಳವಾಗಿ ಗುರುತಿಸಲಾಗಿದ್ದು ಇಂಫಾಲದಿಂದ ಕೇವಲ ಮೂವತ್ತು ಮೈಲಿ ದೂರದಲ್ಲಿದ್ದು ಅಗತ್ಯದ ಸೌಕರ್ಯವನ್ನು ಕೈಗೊಂಡಿದ್ದರೆ, ಮೂಲ ಸೌಲಭ್ಯವನ್ನು ಅಭಿವೃದ್ಧಿ ಪಡಿಸಿದ್ದರೆ ಪೂರ್ತಿ ಮಣಿಪುರಕ್ಕೆ ಬಹುಶಃ ಅರ್ಧದಷ್ಟು ಲಾಭವನ್ನು ಇದೊಂದೇ ಸರೋವರ ತಂದುಕೊಡು ತ್ತಿತ್ತೇನೋ.

ದುರದೃಷ್ಟ ಎಂದರೆ ಇದೂ ಕೂಡಾ ಕೇವಲ ‘ಬೋಟಿಂಗ್ ಲೇಕ್’ ಆಗಿ ಪರಿವರ್ತನೆ ಆಗಿಬಿಟ್ಟಿದೆ. ಷ್ಣುಪುರ್ ಜಿಲ್ಲೆಯ ಮೈರಾಂಗ್‌ನಿಂದ ಕೇವಲ ಏಳೆಂಟು ಕಿ.ಮೀ. ದೂರ ಇರುವ ಲೋಕ್ತಾಕ್ ಬಗ್ಗೆ ಸರಿಯಾದ ಮಾತಿ ಎಲ್ಲೂ ದಕ್ಕುವುದೇ ಇಲ್ಲ. ವರ್ಷಡಿ ಕಡಿಮೆಯಾಗದ ನೀರು ಮತ್ತು ಅದ್ಭುತ ನಿಸರ್ಗ ಸಿರಿ ಇದಕ್ಕಿದೆ. ದೂರದಿಂದ ಬರುವ ನಂಬೋಲಾ ಮತ್ತು ಪ್ರಮುಖ ನದಿಗಳಾದ ಮಣಿಪುರ್, ನಂಬೋಲಾ, ಥೊಂಗ್‌ಜಾರೋಕ್ ಮತ್ತು ನಿಂಗೌಥ್ಕಾಂಗ್ ನದಿಗಳು ಈ ಸರೋವರಕ್ಕೆ ನೀರುಣಿಸುತ್ತಿವೆ.

ಬಹುಶಃ ಜಗತ್ತಿನಲ್ಲಿ ಇದೊಂದೇ ತೇಲುವ ಸರೋವರ ಎಂಬ ಖ್ಯಾತಿ ಇದಕ್ಕಿದ್ದರೂ ಯಾವತ್ತೂ ಅದನ್ನೊಂದು ಜಗದ್ವಿಖ್ಯಾತ ಸ್ಥಳವನ್ನಾಗಿ ಪರಿವರ್ತಿಸುವಲ್ಲಿ
ಪ್ರವಾಸೋದ್ಯಮ ಇಲಾಖೆ ಮುತುವರ್ಜಿ ತೋರಿಸಿಯೇ ಇಲ್ಲ ಎನ್ನುವುದು ಎದ್ದು ಕಾಣುವ ಅಂಶ. ಇದಕ್ಕಾಗಿ ಲೋಕ್ತಾಕ್ ಡೆವಲಪ್‌ಮೆಂಟ್ ಅಥಾರಿಟಿ ಇದ್ದರೂ ಅದು ಸರೋವರದಲ್ಲಿ ಇಳಿದದ್ದು ಕಾಣಿಸುತ್ತಿಲ್ಲ. ತಮ್ಮ ಈ ಅಪರೂಪದ ಶೈಲಿಯ ಸರೋವರನ್ನು ಕ್ಯಾಶ್ ಮಾಡಿಕೊಳ್ಳಬಹುದಾದ, ಪ್ರವಾಸೋದ್ಯಮದ
ಗಣಿಯನ್ನಾಗಿಸಬಹುದಾಗಿದ್ದ ಅವಕಾಶವನ್ನು ಇಲಾಖೆಗಳ ನಿರ್ಲಕ್ಷತೆ ಯಾಮಾರಿಸಿದೆ.

ನಾಲ್ಕು ಕಡೆಯಿಂದ ಲೋಕ್ತಾಕನ್ನು ಪ್ರವೇಶಿಸಲು ಬೋಟಿಂಗ್ ವ್ಯವಸ್ಥೆಯಿದ್ದು ಅರಿಲ್ಲದೇ ಹೋಗುವ ಪ್ರವಾಸಿಗರನ್ನು ಮೊದಲ ಹಂತದಲ್ಲೇ ಇದೇ ಮತ್ತು ಇಷ್ಟೆ…
ಲೋಕ್ತಾಕ ಎನ್ನುವ ವರಣೆಯ ಮೂಲಕ, ವ್ಯಾಪಾರಿ ದೃಷ್ಟಿಯಿಂದ ಪ್ರವಾಸಿಗರನ್ನು ತಡೆದು ಬಿಡುವ ಮತ್ತು ಆ ಮೂಲಕ ನೈಜ ಲೋಕ್ತಾಕ್‌ನ್ನು ತೋರಿಸಿದೆ ಉಳಿಸಿ ಬಿಡುವ ಸ್ಥಳೀಯರ ಬೋಟಿಂಗ್ ಲಾಬಿಯಿಂದಾಗಿ ಲೋಕ್ತಾಕ್ ಅಸಾಮಾನ್ಯ ಲಾಭವನ್ನು ಕಳೆದುಕೊಳ್ಳುತ್ತಿದ್ದರೆ ಹಲವು ಪ್ರವಾಸಿಗರು ಮಾತಿಯಿಲ್ಲದೆ ಯಾಮಾರು ತ್ತಿದ್ದಾರೆ.

ಜೊತೆಗೆ ಪ್ರವಾಸಿಗರೆಂದರೆ ಹಣ ಸುರಿಯಲು ಬಂದಿರುವವರೆಂದೇ ಸುಲಿಯಲು ನಿಂತುಬಿಡುವ ಸೇವಾ ಪೂರೈಕೆದಾರರ ನಡವಳಿಕೆ ಮಣಿಪುರ ಪ್ರವಾಸೋ ದ್ಯಮಕ್ಕೊಂದು ಕಪ್ಪು ಚುಕ್ಕೆಯಾಗಿ ಪರಿಗಣಿಸುತ್ತಿದೆ. ಹೀಗಾಗಿ ಲೋಕ್ತಾಕ್‌ನ್ನು ‘ಮೈರಾಂಗ್’ನಿಂದ ನೋಡಿದ ನಂತರವೂ ಎರಡು ಮೂರು ಭಾಗದಲ್ಲಿ ಪ್ರವೇಶಿಸುವ ಸ್ಥಳಗಳನ್ನು ಪ್ರವಾಸಿಗರು ಸಂದರ್ಶಿಸದಿದ್ದಲ್ಲಿ ತೇಲುವ ಸರೋವರದ ಅಪೂರ್ವ ಅನುಭವ ಈಡಾಗದೇ ಹೋಗಬಹುದು ಕೂಡಾ.

ಲೋಕ್ತಾಕ ತಲುಪಲು ಇಂಫಾಲದ ‘ಕಾಶಮ್‌ಪೇಟ್’ ಮಾರ್ಗದಲ್ಲಿ ಕೇವಲ ಮೂವತ್ತು ರೂಪಾಯಿಗೆ ‘ಮೈರಾಂಗ್’ ಮತ್ತು ಅಲ್ಲಿಂದ ಹೊರಡುವ ರನ್ನಿಂಗ್ ರಿಕ್ಷಾ ಗಳಲ್ಲಿ ಹತ್ತೇ ರೂಪಾಯಿಗೆ ಇದರ ಬುಡಕ್ಕೆ ತಲುಪಬಹುದಾಗಿದೆ. ಇಲ್ಲಿಂದಲೂ ಹತ್ತೇ ರೂಪಾಯಿಯಲ್ಲಿ ತೇಲುವ ಸರೋವರ ಮತ್ತು ಕಂಗ್ರಾ ಅಥವಾ ಸೇಂಡ್ರಾ ದ್ವೀಪವನ್ನು ಸೇರುವ ಸಾಮಾನ್ಯ ಜಲ ಸಾರಿಗೆಯ ಕೂಟ ವ್ಯವಸ್ಥೆ ಇದ್ದು ಪ್ರವಾಸಿಗರಿಂದ ಇದನ್ನು ವ್ಯವಸ್ಥಿತವಾಗಿ ಮುಚ್ಚಿಡಲಾಗುತ್ತಿದೆ. ಇದರ ಅರಿವಿಲ್ಲದೆ ಹತ್ತು ರೂಪಾಯಿಗೆ ಬದಲಾಗಿ ನೂರೈವತ್ತು ಕಕ್ಕಿಸಿ ಸಣ್ಣ ಬೋಟಿನಲ್ಲಿ ಕರೆದೊಯ್ಯುತ್ತಿದ್ದಾರೆ.

ಇನ್ನು ಎರಡನೆಯ ಹಂತದ ಪ್ರವೇಶದಲ್ಲಿಯೇ ತೇಲುವ ಸರೋವರದ ಮಾದರಿ ಲಭ್ಯವಾಗುತ್ತದೆ. ಇಲ್ಲಿನ ಜೊಂಡು ಮತ್ತು ಕಳೆಗಳ ಅಪಾರ ಕ್ಷೇತ್ರವನ್ನು ಸೇರಿಸಿ, ನೀರಿನ ಮೇಲೆ ತೇಲಲು ಬಿಟ್ಟು ಬೆಳೆಸಲಾಗಿದೆ. ಅದರ ಮೇಲೆ ಮತ್ತೊಂದು ಲೇಯರ್ ಇದೇ ಜೊಂಡಿನ ಕಳೆಯನ್ನು ಬೆಳೆಸಿ ಅದರ ದಪ್ಪವನ್ನು ಹೆಚ್ಚಿಸುವುದರ ಮೂಲಕ ಸುಮಾರು ನೂರಕ್ಕಿಂತ ಹೆಚ್ಚಿನ ವಿಸ್ತಾರ ಅಗಲದ ಚಿಕ್ಕ ತೇಲುವ ದ್ವೀಪವನ್ನು ನಿರ್ಮಿಸುವ ಯೋಜನೆ ಕಾರ್ಯಗತಗೊಳಿಸಲಾಗಿದೆ. ಹೀಗೆ ಬೆಳೆಸಿದ ಜೊಂಡಿನ ಮೇಲೆ ಕನಿಷ್ಠ ತೂಕ ಹೊರುವ ಸಾಮರ್ಥ್ಯವನ್ನು ಗಣಿಸಿ ಅದರ ಮೇಲೆ ಚಿಕ್ಕ ಚಿಕ್ಕ ಗುಡಿಸಲಿನಂತಹ ಮನೆಯನ್ನು ಕಟ್ಟಲಾಗಿದೆ.

ಹೀಗೆ ನೇರ ನೀರ ಮೇಲೆ ತೇಲುವ ಈ ಜೊಂಡಿನ ಪದರಗಳನ್ನು ಒಂದರ ಮೇಲೆ ಒಂದು ಸೇರಿಸಿದಾಗ ಆಗುವ ನೆಲಹಾಸಿನಂತಹ ಮೆತ್ತೆಯ ಮೇಲೆ ನಾವು ಕಾಲಿಟ್ಟಾಗ ಹೊಯ್ದಾಡುವ ಸ್ಪಂಜಿನ ಮೇಲೆ ಇಳಿದ ಅನುಭವ ಆಗುತ್ತದೆ. ಅರ್ಧ ಅಡಿಗೂ ಮಿಗಿಲು ಮೇಲೆ ಕೆಳಗೆ ತೂಗಾಡಿಸುವ ಇದರ ಮೇಲೆ ಇಳಿದು ಓಡಾಡ ಬಹುದಾಗಿದ್ದು ನಿಜಕ್ಕೂ ತೇಲುವ ಸರೋವರದ ಅನುಭವಕ್ಕೆ ಈಡು ಮಾಡುತ್ತದೆ.

ಇದು ನೀರಿನಲ್ಲಿ ತೇಲುತ್ತಾ ಆಚೀಚೆ ಹೋಗದಿರಲೆಂದು ಇದರ ಕೆಳಭಾಗದಲ್ಲಿ ನೀರಿನಲ್ಲಿ ಗೂಟಗಳನ್ನು ಹುಗಿದು ಅಲ್ಲಲ್ಲಿ ಬಿಗಿಯಲಾಗಿದೆ. ಅಲ್ಲಲ್ಲಿ ಇಂಥ ತೇಲು ತೆಪ್ಪದಂತಹ ಜೊಂಡಿನ ಸ್ಥಳಗಳ ಮೇಲೆ ಕಟ್ಟಲಾಗಿರುವ ಮನೆಗಳಿಗೆ ಆಕರ್ಷಕ ಬಣ್ಣಗಳಿಂದ ಸಿಂಗರಿಸಲಾಗಿದ್ದು ನೀರಿನ ಹಿನ್ನೆಲೆಯಲ್ಲಿ ಕಾಣುವ ದೃಶ್ಯಾವಳಿಗಳು ಅದ್ಭುತ. ಆದರೆ ಇಲ್ಲೆಲ್ಲೂ ಸಹಜವಾಗಿ ಪ್ರವಾಸಿಗರನ್ನು ಸೆಳೆಯುವ ಯಾವುದೇ ಯೋಜನೆ ಪ್ರವಾಸೋದ್ಯಮ ಇಲಾಖೆ ಕೈಗೊಂಡಿಲ್ಲದಿರುವುದು ಪ್ರವಾಸಿಗರನ್ನು ಮೊದಲ ಹಂತದಲ್ಲೇ ಇದು ನಿರಾಸೆಗೆ ತಳ್ಳುತ್ತದೆ.

ಇನ್ನು ಇಲ್ಲಿಂದ ಒಳಹಂತದಲ್ಲಿರುವ ಬುಡಕಟ್ಟು ಜನಾಂಗಗಳಾದ ‘ಝಿಂಗಾಮೈ’ ಮತ್ತು ‘ಕುಕೀಸ್’ಗಳು ಅಲ್ಲಲ್ಲಿ ದ್ವೀಪ ಸಮೂಹದಲ್ಲಿ ಚಿಕ್ಕ ಚಿಕ್ಕ ವಸಾಹುತುವಿನ ತರಹ ತಮ್ಮ ಹಾಡಿಗಳನ್ನು ನಿಸಿಕೊಂಡಿರುವ ಕಾರಣ ಸುಮಾರು ಒಂದೂವರೆ ತಾಸುಗಳ ದೋಣಿ ಯಾನದ ನಂತರ ತಲುಪಬಹುದಾಗಿದ್ದು ಅಲ್ಲಿಗೆ ಬೋಟ್‌ ಸೇವೆ ಲಭ್ಯವಿದೆ. ಕಂಗ್ರಾ ಮತ್ತು ಸೆಂಡ್ರಾ ಅಂತಹ ಪ್ರಮುಖ ದ್ವೀಪಗಳಾಗಿದ್ದೂ ಈಗಲೂ ಅಲ್ಲಲ್ಲಿ ಇರುವ ಈ ಬುಡಕಟ್ಟು ಸಮುದಾಯ ಜೇನು ಮತ್ತು ಕೃಷಿ ಯೊಂದಿಗೆ ಜೀವನ ಸಾಗಿಸುತ್ತಿದೆ. ಆದರೆ ಇದು ಕೇವಲ ಮೇಲ್ನೋಟಕ್ಕೆ ಲಭ್ಯವಾಗುವ ಬುಡಕಟ್ಟುಗಳ ಜನಜೀವನವಾದರೆ, ಹೀಗೆ ಅಲ್ಲಲ್ಲಿ ದ್ವೀಪ ಸಮೂಹದಲ್ಲಿದ್ದು ಈಚೆಗೆ ಬಾರದೆ ಜೀವನ ನಡೆಸುತ್ತಿರುವ ಸಮುದಾಯಗಳು ಈ ಸರೋವರದ ಮಧ್ಯದಲ್ಲಿ ಈಗಲೂ ಇವೆ.

ಜನ ಸಂಪರ್ಕಕ್ಕೆ ಒಲ್ಲದ ಕಾರಣ ದೂರದಿಂದಲೇ ಈ ದ್ವೀಪಗಳ ದರ್ಶನ ಮಾತ್ರ. ಲೋಕ್ತಾಕನ ಮೊದಲ ಹಂತದಲ್ಲಿ ಒಂದು ಅಸ್ಸಾಂ ರೈಫಲ್ಸ್ ವಶದಲ್ಲಿರುವ ಚಿಕ್ಕ ಗುಡ್ಡವೊಂದು ಎದುರಿಗಿದ್ದು ಅಲ್ಲಿಂದ ಲೋಕ್ತಾಕನ ಅದ್ಭುತ ಹಂಗಮ ದೃಶ್ಯ ಕಣ್ಣಿಗೆ ಲಭ್ಯವಾಗುತ್ತದೆ. ತೇಲುವ ಸರೋವರ ಖ್ಯಾತಿ ಪಡೆದಿರುವ, ಸಾಗರ ಮಾದರಿ ಯಲ್ಲಿರುವ ಕೆರೆಯ ವಿಸ್ತೀರ್ಣ ಅನಾಮತ್ತು ಮೂನ್ನೂರು ಚಿಲ್ರೆ ಚ.ಕಿ.ಮೀ. ಜಿಲ್ಲೆಯ ಹೆಚ್ಚಿನ ಭಾಗವನ್ನು ಇದು ಸುತ್ತುವರೆದಿದ್ದು ಒಂದು ರೀತಿಯಲ್ಲಿ ನೀರಾವರಿ
ಅಥವಾ ಮೀನುಗಾರಿಕೆಯ ಜಿಲ್ಲೆಯೆಂದರೂ ತಪ್ಪಿಲ್ಲ. ನೂರಾರು ಬೋಟ್ ಉದ್ದಿಮೆದಾರರು ಇಲ್ಲಿ ಪ್ರವಾಸಿಗರಿಗೆ ಬೋಟಿಂಗ್ ಸೇವೆ ಪೂರೈಸುವುದರ ಮೂಲಕ ಜೀವನವನ್ನು ನಡೆಸುತ್ತಿದ್ದರೆ, ಮಧ್ಯದಲ್ಲಿರುವ ಸೆಂಡ್ರಾ ದ್ವೀಪ ಆಕರ್ಷಕ ಅದರೆ ಸೂಕ್ತ ಗೈಡ್ ಇದ್ದರೆ ಮಾತ್ರ ಇದೆಲ್ಲ ಸಲೀಸು. ನೀರ ಮಧ್ಯದ ಕೇಫೆಟೆರಿಯಾ ಪ್ರವಾಸಿಗರಿಗೆ ಮುದ ನೀಡುವುದು ಸುಳ್ಳಲ್ಲ.

ಇಳಿದು ಸುತ್ತಲಿಂದ ಬೀಸುವ ಸರೋವರ ಮೇಲ್ಮುಖದ ತಂಗಾಳಿಗೆ ಮುಖ ಮಾಡಿ ಕಾಫಿ ಹೆಸರಿನ ಬಿಸಿ ನೀರು ರುಚಿಸುವುದು ಅದನ್ನೆ ಆಡಿಕೊಂಡು ಕುಡಿಯು ವುದು ಮೋದವೆ. ಸುತ್ತ ಮುತ್ತಲೂ ಇರುವ ಹಲವು ಬಣ್ಣದ ಮರಗಿಡಗಳು ಮತ್ತು ಪಕ್ಷಿಗಳ ಹಿಮ್ಮೇಳ ಸರೋವರಕ್ಕೆ ಚೆಂದ ಚೆಂದದ ಫ಼ೀಲು. ಇಲ್ಲೊಂದು ವಿಷಯ ವನ್ನು ನಾನು ಸ್ಪಷ್ಟಪಡಿಸಬೇಕು. ಮಣಿಪುರದ ಯಾವ ಹಳ್ಳಿ ಅಥವಾ ಪ್ರವಾಸಿ ಸ್ಥಳಗಳ ಬಗ್ಗೆ ಗೂಗಲ್ ಮತ್ತು ಪ್ರವಾಸೋದ್ಯಮ ಮಾಹಿತಿ ಪ್ರಕಟಿಸಿ ದೆಯೋ ಅದರಲ್ಲಿ ಹೆಚ್ಚಿನಂಶ ಬರೀ ಉತ್ಪ್ರೇಕ್ಷೆ. ಅದನ್ನು ನಂಬಿಕೊಂಡು ಪ್ರಯಾಣಿಸುವ ಪ್ರವಾಸಿಗ ತೀರ ದರವೇಸಿಯೇ ಆಗುತ್ತಾನೆ. ಕಾರಣ ಯಾವ ಊರಿನಲ್ಲೂ ಇಂಫಾಲ ಹೊರತು ಪಡಿಸಿದರೆ ಪ್ರವಾಸಿಗರು ತಂಗುವ ಹೋಟೆಲ್ ಅಥವಾ ಸರಿಯಾದ ಅತಿಥಿ ಗೃಹದ ಸೌಕರ್ಯಗಳು ಇಲ್ಲವೇ ಇಲ್ಲ.

ಕೇವಲ ಅಲ್ಲೊಂದು ಇಲ್ಲೊಂದು ಹೋಟೆಲುಗಳು ಈಗ ಇಂಫಾಲದಲ್ಲಿ ಕಣ್ಣು ಬಿಡುತ್ತಿವೆ. ಹಾಗಾಗಿ ಇಂಫಾಲ ಹೊರತು ಪಡಿಸಿದರೆ ಬೇರಾವುದೇ ಜಿಲ್ಲಾ ಕೇಂದ್ರಗಳು
ನಂಬಿಕೊಂಡು ಅಲ್ಲಿಗೆ ಪ್ರವಾಸಿ ಮೂಡಿನಲ್ಲಿ ಪಯಣಿಸಿದ್ದೇ ಆದರೆ ನೀವು ಸಿಕ್ಕಿಕೊಂಡಿರಿ ಎಂದೆ ಅರ್ಥ. ಅಹಾರ ಕ್ರಮದಲ್ಲಿ ಅಜಗಜಾಂತರ ವ್ಯತ್ಯಾಸ ಇದ್ದು ಲೋಕ್ತಾಕ ಸೇರಿದಂತೆ ಎಲ್ಲೆಲ್ಲೂ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಎನ್ನುವ ವ್ಯವಸ್ಥೆಯೇ ಇಲ್ಲ.