Tuesday, 26th November 2024

Ravi Sanjangadde Column: ಮೇಕ್‌ ಇನ್‌ ಇಂಡಿಯಾಗೆ ಹತ್ತು, ದೇಶದ ಅಭಿವೃದ್ಧಿಗೆ ಒತ್ತು !

ಅಭಿಮತ

ರವೀ ಸಜಂಗದ್ದೆ

ಕೃಷಿ, ಕೈಗಾರಿಕೆ, ಉತ್ಪಾದನೆ, ತಂತ್ರಜ್ಞಾನ, ಮಾರುಕಟ್ಟೆ, ಉದ್ಯಮ, ಸೃಜನಶೀಲತೆ… ಹೀಗೆ ಯಾವ ಕ್ಷೇತ್ರವಾದರೂ ಭಾರತದಲ್ಲಿರುವಷ್ಟು ಅವಕಾಶ, ಸಂಪನ್ಮೂಲಗಳು ಪ್ರಪಂಚದ ಇತರ ದೇಶಗಳಲ್ಲಿ ಖಂಡಿತಾ ಇಲ್ಲ. ಭಾರತ ಅಷ್ಟು ಸಮೃದ್ಧ, ವಿಫಲ ಮತ್ತು ವಿಸ್ತಾರ. ಹಲವಾರು ಕಾರಣಗಳಿಂದ ದೇಶದ ಸರ್ವತೋಮುಖ ಬೆಳವಣಿಗೆ ಅಂದು ಕೊಂಡಂತೆ ಆಗಿಲ್ಲ.

ಸಂಪನ್ಮೂಲಗಳು ನಮ್ಮ ಇದ್ದರೂ ಇತರ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಈ ವಿಚಾರದಲ್ಲಿ ನಾವು ಒಂದಷ್ಟು ವರ್ಷಗಳಷ್ಟು ಹಿಂದೆ ಉಳಿದಿದ್ದೇವೆ. 1990ರಲ್ಲಿ ಭಾರತ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀ ಕರಣದ ಅವಕಾಶಗಳೆಡೆಗೆ ಪ್ರಪಂಚದೆದುರು ತೆರೆದುಕೊಂಡಿತು. ಹಾಗೆ ಸಾಗುತ್ತಿದ್ದ ದೇಶದ ಪ್ರಗತಿಗೆ ಒಂದಷ್ಟು ಶಕ್ತಿ, ಪುಷ್ಟಿ ಮತ್ತು ಓಘ ಬಂದದ್ದು, ಸಿಕ್ಕಿದ್ದು 2014ರಲ್ಲಿ ಮೋದಿ ನೇತೃತ್ವದ ಸರಕಾರ ಬಂದ ನಂತರ. ‘ಕೇಂದ್ರ ಸರಕಾರದ ಸ್ಪಷ್ಟ, ಸರಳ, ಜನ-ಕೈಗಾರಿಕೆ-ವ್ಯವಹಾರ ಸ್ನೇಹಿ ಕಾಯಿದೆ-ಯೋಜನೆಗಳು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿವೆ’ ಎನ್ನುವುದರಲ್ಲಿ ಎರಡು ಮಾತಿಲ್ಲ.

ನಮ್ಮೆದುರು ಇರುವ ಅಂಕಿ ಅಂಶಗಳು ಈ ವಿಚಾರವನ್ನು ಸ್ಪಷ್ಟವಾಗಿ ಸಾರುತ್ತಿವೆ. ಮೋದಿ ಸರಕಾರದ ‘ದೇಶದ ಅಭಿವೃದ್ಧಿಯ ಧ್ಯೇಯ’ದ ಯೋಜನೆಗಳಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಬಹುಮುಖ್ಯ ಯೋಜನೆ. ಕೈಗಾರಿಕೆ, ತಂತ್ರಜ್ಞಾನ, ಆವಿಷ್ಕಾರ, ಉತ್ಪಾದನಾ ವಿಭಾಗಗಳಲ್ಲಿ ಈ ಯೋಜನೆಯು ತೋರಿದ ಪ್ರಗತಿ, ಸಾಧಿಸಿದ ಮೈಲಿಗಲ್ಲು ಗಳು ನಿಜಕ್ಕೂ ಹುಬ್ಬೇರಿಸುವಂಥವು.

ಯೋಜನೆಯು ಭರ್ತಿ 10 ವರ್ಷ ಪೂರೈಸಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಕೆಳಗಿನ ಧನ್ಯವಾದ
ಸಂದೇಶವನ್ನು ಬಿತ್ತರಿಸಿzರೆ. ‘ಈ ಯೋಜನ ಭರ್ಜರಿ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ವಂದನೆಗಳು.
ನಿಮ್ಮಲ್ಲಿ ಪ್ರತಿಯೊಬ್ಬರೂ ದಾರ್ಶನಿಕ, ವರ್ತಕ, ಸೃಜನಶೀಲ ಮತ್ತು ನವೋದ್ಯಮಿಗಳು. ನಿಮ್ಮೆಲ್ಲರ ಸತತ ಸಹಕಾರ,
ಪ್ರಯತ್ನಗಳು ಮೇಕ್ ಇನ್ ಇಂಡಿಯಾದ ಯಶಸ್ಸಿಗೆ ಕೊಡುಗೆ ನೀಡಿವೆ. ಜಾಗತಿಕ ಲಕ್ಷ್ಯ, ಕುತೂಹಲ ಮತ್ತು ಕೌತುಕದ ಕೇಂದ್ರವಾಗಿ ಭಾರತ ಮಾರ್ಪಟ್ಟಿದೆ. ನಾವು ಕೇವಲ ಆಮದುದಾರರಾಗಿ ಮಾತ್ರ ಇರದೆ, ರಫ್ತುದಾರ ರಾಗಿಯೂ ನಿರ್ಣಾಯಕ ಪಾತ್ರ ನಿರ್ವಹಿಸುವ ಅಜೇಯ ಗುರಿಯೊಂದಿಗೆ ದಶಕದ ಹಿಂದೆ ಈ ಮಹತ್ವಾಕಾಂಕ್ಷಿ ಯೋಜನೆ ಪ್ರಾರಂಭವಾಯಿತು.

10 ವರ್ಷಗಳಲ್ಲಿ ನಾವು ಕನಸು-ಮನಸಿನಲ್ಲೂ ಯೋಚಿಸಿರದ ಕ್ಷೇತ್ರಗಳೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮೇಕ್ ಇನ್ ಇಂಡಿಯಾದ ಪ್ರಗತಿ ಮತ್ತು ಛಾಪು ಗೋಚರಿಸುತ್ತದೆ. ನಮ್ಮ ಅಗತ್ಯಗಳನ್ನು ನಾವೆಲ್ಲ ಒಟ್ಟಾಗಿ ಪೂರೈಸುವ ಜತೆಗೆ ಜಗತ್ತಿನ ಉತ್ಪಾದನಾ ಕ್ಷೇತ್ರದಲ್ಲಿ ನಾವೀನ್ಯತೆ, ಆವಿಷ್ಕಾರ ಮತ್ತು ಶಕ್ತಿಕೇಂದ್ರ ಆಗುವ ಮತ್ತು ಎಲ್ಲ ವಿಭಾಗಗಳಲ್ಲೂ ಗರಿಷ್ಠ ರಫ್ತಿನ ದೇಶವಾಗಿ ಹೊರಹೊಮ್ಮುವ ಶ್ರೇಷ್ಠ ಭಾರತದ ನಿರ್ಮಾಣವನ್ನು ಮುಂದು ವರಿಸೋಣ.’

ಮೇಲಿನ ಸಂದೇಶ ಈ ಯೋಜನೆ ನಡೆದುಬಂದ ದಾರಿಯ ಸಣ್ಣ ಮತ್ತು ಸ್ಪಷ್ಟ ಸಾರಾಂಶ. ಭಾರತ ಈಗ ಜಗತ್ತಿನ
ಎರಡನೆಯ ಅತಿದೊಡ್ಡ ಮೊಬೈಲ್ ತಯಾರಿಸುವ ದೇಶ. ದಶಕದ ಹಿಂದೆ ಕೇವಲ 200ಕ್ಕೂ ಹೆಚ್ಚು. ಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಲ್ಲಿ ಆದ ಪ್ರಗತಿ ನೂರು ಪಟ್ಟು! ದೇಶದಲ್ಲಿ ಬಳಕೆಯಲ್ಲಿರುವ ಶೇ.99 ಮೊಬೈಲುಗಳು ಮೇಡ್/ಮೇಕ್ ಇನ್ ಇಂಡಿಯಾ ಉತ್ಪನ್ನಗಳು.

ಅತ್ಯಾಧುನಿಕ ಕೋಚ್, ತಂತ್ರಜ್ಞಾನ ಹೊಂದಿರುವ ದೇಶೀ ನಿರ್ಮಿತ semi speed ವಂದೇ ಭಾರತ್ ರೈಲುಗಳು
ಮೇಕ್ ಇನ್ ಇಂಡಿಯಾ ಯೋಜನೆಯಡಿ ತಯಾರಿಸಲ್ಪಟ್ಟಿವೆ. 100ಕ್ಕೂ ಹೆಚ್ಚಿನ ಈ ರೈಲುಗಳು ದೇಶದಾದ್ಯಂತ ಚಲಿಸುತ್ತಾ ರೈಲ್ವೇ ಟೂರಿಸಂಗೆ ಹೊಸ ಭಾಷ್ಯ ಬರೆದಿವೆ. ಈಗಾಗಲೇ ಎರಡು ಕೋಟಿಗಿಂತ ಅಧಿಕ ಪ್ರಯಾಣಿಕರು ವಂದೇ ಭಾರತ್ ರೈಲು ಸೇವೆ ಉಪಯೋಗಿಸಿ ಪ್ರಯಾಣಿಸಿದ್ದಾರೆ. ಈ ರೈಲುಗಳ ಮತ್ತು ಪ್ರಯಾಣಿಕರ ಸಂಖ್ಯೆ ಮುಂದಿನ ದಿನಗಳಲ್ಲಿ ಕ್ಷಿಪ್ರವಾಗಿ ವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ. ಸ್ಲೀಪರ್ ಕೋಚ್ ಸೌಲಭ್ಯದೊಡನೆ, ವರ್ಧಿತ ಸೌಕರ್ಯಗಳೊಂದಿಗೆ ವಂದೇ ಭಾರತ್ ರೈಲುಗಳು ವರ್ಷಾಂತ್ಯಕ್ಕೆ ಜನರ ಸೇವೆಗೆ ಲಭ್ಯವಾಗಲಿವೆ.

ಮೇಕ್ ಇನ್ ಇಂಡಿಯಾ ಯೋಜನೆಯ ಮತ್ತೊಂದು ಗರಿಮೆ ಎಂದರೆ ಭಾರತವೀಗ ತಂತ್ರಜ್ಞಾನ ಆಧಾರಿತ ಸ್ಟಾರ್ಟ್‌ಅಪ್ ಹಬ್‌! ಜಾಗತಿಕವಾಗಿ ಮೂರನೆಯ ಅತಿ ದೊಡ್ಡ ಟೆಕ್ ಚಾಲಿತ ಸ್ಟಾರ್ಟ್ ಅಪ್ ಇಕೊ ಸಿಸ್ಟಮ್ ಹೊಂದಿರುವ ಹೆಗ್ಗಳಿಕೆ ನಮ್ಮದು. 2023ರಲ್ಲಿ 950 ಹೊಸ ಸ್ಟಾರ್ಟ್ ಅಪ್ ಕಂಪೆನಿಗಳು ಸ್ಥಾಪನೆಯಾಗಿವೆ. ಕಳೆದೊಂದು ದಶಕದಲ್ಲಿ ಹೀಗೆ ಸ್ಥಾಪನೆಯಾಗಿ ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಸ್ಟಾರ್ಟ್ ಅಪ್‌ಗಳ ಸಂಖ್ಯೆ 31000! ಭಾರತದ ನಿಪುಣ ಪ್ರತಿಭಾವಂತರು ಇ ಕೆಲಸ ನಿರ್ವಹಿಸಿ, ದೇಶದ ಆರ್ಥಿಕ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಸೇವೆ ಸಹಕಾರ ನೀಡುತ್ತಾ ಆ ಕ್ಷೇತ್ರವನ್ನು ಮತ್ತಷ್ಟು ಸಮೃದ್ಧಗೊಳಿಸುತ್ತಿದ್ದಾರೆ.

ಸೆಮಿ ಕಂಡಕ್ಟರ್ ವಲಯವು ಮೇಕ್ ಇನ್ ಇಂಡಿಯಾ ಯೋಜನೆಯ ಮೂಲಕ ನಿರೀಕ್ಷೆಗಿಂತ ಹಲವು ಪಟ್ಟು ಹೆಚ್ಚು ಫಲಿತಾಂಶ ನೀಡಿ ದೇಶದ ಉತ್ಪಾದನಾ ಕ್ಷೇತ್ರಕ್ಕೆ ಬಹುತರ ಕೊಡುಗೆ ನೀಡಿದೆ. ಈ ವಲಯವು ರುಪಾಯಿ 1.5 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಹೂಡಿಕೆಯನ್ನು ಆಕರ್ಷಿಸಿದೆ. ದಿನಕ್ಕೆ ಬರೋಬ್ಬರಿ ಎರಡು ಕೋಟಿಗೂ ಹೆಚ್ಚು ಸಂಖ್ಯೆಯಲ್ಲಿ ಚಿಪ್ ಗಳನ್ನು ಉತ್ಪಾದಿಸುಲಾಗುತ್ತಿದೆ! ಸದ್ಯಕ್ಕೆ ಸೆಮಿ ಕಂಡಕ್ಟರ್ ಸಂಸ್ಥೆಗಳು ಗುಜರಾತ್, ಕರ್ನಾಟಕ, ಒಡಿಶಾ, ತಮಿಳುನಾಡು ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಮುಂದಿನ ದಿನಗಳಲ್ಲಿ ಸೆಮಿ ಕಂಡಕ್ಟರ್ ವಲಯದ ಜಾಗತಿಕ ಮುಖಂಡ ಭಾರತ ಎನ್ನುವುದು ಸೂರ್ಯ ಚಂದ್ರರಷ್ಟೇ ದಿಟ! ಭಾರತದ ರಕ್ಷಣಾ ಕ್ಷೇತ್ರದಲ್ಲೂ ಮೇಕ್ ಇನ್ ಇಂಡಿಯಾ ಮಹತ್ತರ ಕೊಡುಗೆ ನೀಡಿದೆ. ರಕ್ಷಣಾ ಕ್ಷಿಪಣಿ, ತಂತ್ರಜ್ಞಾನ ಮತ್ತಿತರ ಪರಿಕರಗಳಿಗೆ ಅಮೆರಿಕ, ರಷ್ಯಾ, – ಮುಂತಾದ ರಾಷ್ಟ್ರಗಳ ಅವಲಂಬನೆ ಅನಿವಾರ್ಯವಾಗಿತ್ತು.

2023-24ರಲ್ಲಿ ಭಾರತದ ರಕ್ಷಣಾ ಉತ್ಪಾದನೆಯು 1.27 ಲಕ್ಷಕೋಟಿ ರುಪಾಯಿಗಳು! ದಶಕದ ಹಿಂದೆ ನಷ್ಟದಿಂದಾಗಿ ಮುಚ್ಚುವ ಹಂತದಲ್ಲಿದ್ದ ಹಿಂದುಸ್ತಾನ್ ಏರೋನಾಟಿಕ್ಸ್ ಸಂಸ್ಥೆ‌ (HAL) 2023-24ರಲ್ಲಿ 7905.04 ಕೋಟಿ ರುಪಾಯಿ ಗಳಷ್ಟು ಲಾಭ ಗಳಿಸಿದೆ! ಅಗ್ನಿ, ಪೃಥ್ವಿ, ಬ್ರಹ್ಮೋಸ್, ನಿರ್ಭಯ, ಆಕಾಶ್, ಅಸ್ತ್ರ, ನಾಗ್ ಮುಂತಾದ ಆಧುನಿಕ ಮತ್ತು ಶಕ್ತಿಯುತ ಕ್ಷಿಪಣಿ ಮತ್ತು ಯುದ್ಧ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಿ ದೇಶದ ರಕ್ಷಣಾ ವಿಭಾಗಕ್ಕೆ ನೀಡಿರುವುದು ಏಅಔ ವಿಜ್ಞಾನಿಗಳ ಸಾಧನೆ ಮತ್ತು ಹೆಮ್ಮೆ.

ಇದಿಷ್ಟು ಮೇಕ್ ಇನ್ ಇಂಡಿಯಾ ಯೋಜನೆಯ ಸ್ಯಾಂಪಲ್, ಟೀಸರ್ ಅಷ್ಟೇ! ‌ಜಾಗತಿಕವಾಗಿ ನವೀಕರಿಸಬಹು
ದಾದ ಇಂಧನದ ನಾಲ್ಕನೇ ಅತಿದೊಡ್ಡ ಉತ್ಪಾದಕ ದೇಶವಾಗಿ ಭಾರತ ಗುರುತಿಸಿಕೊಂಡಿದೆ. ಕೇವಲ ಒಂದು ದಶಕದಲ್ಲಿ ಈ ಕ್ಷೇತ್ರದ ಸಾಮರ್ಥ್ಯ ಶೇ.400 ಹೆಚ್ಚಾಗಿದೆ. ದಶಕಗಳ ಹಿಂದೆ ಅಸ್ತಿತ್ವದ ಇಲ್ಲದ ಎಲೆಕ್ಟ್ರಿಕ್ ವಾಹನ ಉದ್ಯಮವು ಈಗ 250 ಲಕ್ಷ ಕೋಟಿ ರುಪಾಯಿ ಮೌಲ್ಯ ಹೊಂದಿದೆ. ಮುಂದಿನ ದಶಕಗಳಲ್ಲಿ ಈ ಕ್ಷೇತ್ರ ಗರಿಷ್ಠ ಪ್ರಮಾಣದಲ್ಲಿ ಬೆಳೆಯಲಿದೆ. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯ ಮೂಲಕ 12 ಹೊಸ ಕೈಗಾರಿಕಾ ಸ್ಮಾರ್ಟ್ ಸಿಟಿಗಳನ್ನು ಅನುಮೋದಿಸಲಾಗಿದೆ. ಈ ಯೋಜನೆ 10 ಲಕ್ಷ ನೇರ ಉದ್ಯೋಗ ಮತ್ತು 30 ಲಕ್ಷ ಪರೋಕ್ಷ ಉದ್ಯೋಗ ಕಲ್ಪಿಸಲಿದೆ. 15 ಉತ್ಪಾದನಾ ವಲಯಗಳು, 12 ಸೇವಾ ವಲಯಗಳು ಈ ಯೋಜನೆಯ ಪಾಲುದಾರರು. ದೆಹಲಿ-ಮುಂಬಯಿ ಕೈಗಾರಿಕಾ ಕಾರಿಡಾರ್, ಅಮೃತಸರ-ಕೋಲ್ಕತ್ತಾ ಇಂಡಸ್ಟ್ರಿಯಲ್ ಕಾರಿಡಾರ್, ಬೆಂಗಳೂರು-ಮುಂಬಯಿ ಆರ್ಥಿಕ ಕಾರಿಡಾರ್, ಚೆನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್, ವಿಶಾಖಪಟ್ಟಣ-ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್ ಹೀಗೆ ಐದು ಪ್ರಮುಖ ಕಾರಿಡಾರುಗಳು ಈ ಯೋಜನೆಯ ಪ್ರಮುಖ ವೈಶಿಷ್ಟ್ಯಗಳು. ಕೌಶಲ್ಯ ಭಾರತ, ಸ್ಟಾರ್ಟ್‌ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಪ್ರಧಾನಮಂತ್ರಿ ಜನ-ಧನ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ, ಅಮೃತ್ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಸಾಗರಮಾಲಾ, ಅಂತಾರಾಷ್ಟ್ರೀಯ ಸೌರ ಒಕ್ಕೂಟ, ಅಗ್ನಿ (AGNII) ಯೋಜನೆಗಳು ಮೇಕ್ ಇನ್ ಇಂಡಿಯಾ ಕಾರ್ಯಕ್ರಮಗಳನ್ನು ಬೆಂಬಲಿಸಿ-ಸಶಕ್ತಗೊಳಿ ಸಲು ಅನುಷ್ಠಾನ ಗೊಳಿಸಲಾದ ಉಪ ಯೋಜನೆಗಳು. ಎಲ್ಲವೂ ಗರಿಷ್ಠ-ಅತ್ಯುತ್ತಮ ರೀತಿಯಲ್ಲಿ ದೇಶದ ಸರ್ವಾಂಗೀಣ ಪ್ರಗತಿ, ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ.

ಮೇಕ್ ಇನ್ ಇಂಡಿಯಾ ಯೋಜನೆಯು ಸವಾಲು ಮುಕ್ತವಾಗಿಲ್ಲ. ಭಾರತದಲ್ಲಿ ಸುಮಾರು ಶೇ.೬೦ರಷ್ಟು ಕೃಷಿ ಯೋಗ್ಯ ಭೂಮಿಯಿದೆ. ಉತ್ಪಾದನಾ ಕ್ಷೇತ್ರದ ಮೇಲಿನ ಒತ್ತಡ ಕೃಷಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರ ಬಹುದು. ಕ್ಷಿಪ್ರ ಕೈಗಾರಿಕೀಕರಣವು ಪ್ರಕೃತಿ ನಾಶ, ಪರಿಸರ ಮಾಲಿನ್ಯದ ಆರೋಪದೊಡನೆ ನೈಸರ್ಗಿಕ ಸಂಪನ್ಮೂಲ ಗಳ ನಾಶ- ಸವಕಳಿಗೆ ಕಾರಣವಾಗಬಹುದು. ಈ ಯೋಜನೆ ದೊಡ್ಡ ಪ್ರಮಾಣದಲ್ಲಿ ವಿದೇಶಿ ನೇರ ಹೂಡಿಕೆ ಆಹ್ವಾನಿಸುತ್ತಿರುವುದರಿಂದ ಸ್ಥಳೀಯ ರೈತರು, ಸಣ್ಣ ಉದ್ಯಮಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಎದುರಿಸಲು ಸಾಧ್ಯವಾಗಲಾರದು. ಭಾರತದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವುದು ಅತ್ಯಂತ ಕಠಿಣ ಸವಾಲು. ಜತೆಗೆ ಎಡೆ ಹಾಸುಹೊಕ್ಕಾಗಿರುವ ಭ್ರಷ್ಟಾಚಾರದಂತಹ ಸಮಸ್ಯೆಗಳೂ ಮೇಕ್ ಇನ್ ಇಂಡಿಯಾ ಯೋಜನೆಯ ಯಶಸ್ಸಿಗೆ ನೇರ ಸವಾಲು.

ಪ್ರಪಂಚವು ‘ಜಾಗತಿಕ ಅಭಿವೃದ್ಧಿಯ ಹರಿಕಾರ’ನಾಗಿ ಭಾರತವನ್ನು ನೋಡುತ್ತಿದೆ. ನಾವೆಲ್ಲರೂ ನಮ್ಮ ಕೆಲಸ,
ಕರ್ತವ್ಯದಲ್ಲಿ ಶ್ರೇಷ್ಠತೆಗಾಗಿ ಶ್ರಮಿಸಿ, ಗುಣಮಟ್ಟವನ್ನು ಒದಗಿಸಿ, ಶೂನ್ಯ ದೋಷ (Zero Error)ಮಂತ್ರದೊಂದಿಗೆ
ಕಟಿಬದ್ಧರಾಗಿ ದುಡಿದರೆ ‘ಸರ್ವಶಕ್ತ ಭಾರತ’ ನಿರ್ಮಾಣ ಸಾಧ್ಯ. ದೇಶದ ಅಗತ್ಯತೆಯನ್ನು ಪೂರೈಸಿ, ಜಗತ್ತಿನ
ಆವಿಷ್ಕಾರ, ತಂತ್ರeನ ಉತ್ಪಾದನಾ ಕ್ಷೇತ್ರದ ಬೇಡಿಕೆಗಳನ್ನು ರಫ್ತು ಮಾಡುವ ಬಲಿಷ್ಠ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಸಾಗುತಿರಲಿ. ಜೈ ಹಿಂದ್.

(ಲೇಖಕರು ಸಾಫ್ಟ್ ವೇರ್ ಉದ್ಯೋಗಿ)

ಇದನ್ನೂ ಓದಿ: Shishir Hegde Column: ಮನೆ ಮಂತ್ರಾಲಯವಾದರಷ್ಟೇ ಮನ ದೇವಾಲಯವಾದೀತು