ರಾಜಬೀದಿ
ವಿನಾಯಕ ಮಠಪತಿ
ಆಕೆಗೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾರತದ ಬಾವುಟವನ್ನು ಬಾನೆತ್ತರಕ್ಕೆ ಹಾರಿಸಬೇಕೆನ್ನುವ ಅದಮ್ಯ ಉತ್ಸಾಹ. ಕೈಗೆ ಪಿಸ್ತೂಲ್ ಸಿಕ್ಕರೆ ಗುರಿಯಿಟ್ಟು ಹೊಡೆಯಬೇಕೆನ್ನುವ ಚಡಪಡಿಕೆ. ಕೊನೆಗೂ ಅವಳ ಕೈಗೆ ಸಿಕ್ಕಿದ್ದು ಬಾಡಿಗೆ ಪಿಸ್ತೂಲು. ಆದರೆ ಪಿಸ್ತೂಲ್ ಬಳಕೆಗೆ ಪರವಾನಗಿ ಪಡೆಯಲು ಮತ್ತದೇ ಸಂಕಷ್ಟ. ಕಚೇರಿಗೆ ಅಲೆದಲೆದು ಆಕೆಯ ತಂದೆಯ ಚಪ್ಪಲಿ ಸವೆದಿತ್ತಾದರೂ, ಒಪ್ಪಿಗೆ ಪತ್ರ ಸಿಕ್ಕಿರಲಿಲ್ಲ. ಇಷ್ಟೆಲ್ಲ ಹೋರಾಟದ ನಂತರ ಆಕೆ ತನ್ನ ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆಯನ್ನು ಬಾಡಿಗೆ ಪಿಸ್ತೂಲಿನಿಂದಲೇ ಪ್ರಾರಂಭಿಸಿದ್ದಳು.
ಇಷ್ಟೆಲ್ಲ ಪೀಠಿಕೆ ಹಾಕಲು ಕಾರಣ, ಕಳೆದ ಒಂದು ವಾರದಿಂದ ಭಾರತೀಯರ ಪಾಲಿಗೆ ಯಶಸ್ಸಿನ ಶಿಖರದಂತೆ ಪ್ರಜ್ವಲಿಸುತ್ತಿರುವ ಮನು ಭಾಕರ್ ಎಂಬ ಹರಿಯಾಣ ಮೂಲದ ಕ್ರೀಡಾಪಟುವಿನ ಸಾಧನೆಯ ಮೈಲಿಗಲ್ಲು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕ ಗೆದ್ದು ಶೂಟಿಂಗ್ ವಿಭಾಗದಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ಮನು ಭಾಕರ್ ಅವರ ಕ್ರೀಡಾಬದುಕಿನ ಆರಂಭಿಕ ಹಾದಿ ಅಷ್ಟೇನೂ ಸರಾಗವಾಗಿರಲಿಲ್ಲ. ಆದರೆ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಸಾಧನೆಯ ಶಿಖರವೇರಿದಾಕೆ ಮನು ಭಾಕರ್.
ಮನು ಭಾಕರ್ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದು ಬಾಡಿಗೆ ಪಿಸ್ತೂಲ್‌ನಿಂದ. ಆದರೆ ಅದೇ ಪಿಸ್ತೂಲಿನ ಪರವಾನಗಿ ಪಡೆಯಲು ಅವರ ತಂದೆ ಕಚೇರಿ ಅಲೆಯುತ್ತಿದ್ದುದರ ಕುರಿತು ತಾಯಿ ಸುಮೇಧಾ ಭಾಕರ್ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಇತ್ತ ಏಷ್ಯನ್ ಗೇಮ್ಸ್ ಸಮೀಪಿಸುತ್ತಿತ್ತು, ಅತ್ತ ಪಿಸ್ತೂಲ್ ಪರವಾನಗಿ ನೀಡಲು ಅಧಿಕಾರಿಗಳು ಸತಾಯಿಸು ತ್ತಿದ್ದರು. ಅವರ ಈ ನಡೆಗೆ ಬೇಸತ್ತ ಮನು ತಂದೆ ರಾಮ್‌ಕಿಶನ್ ಭಾಕರ್ ಹರಿಯಾಣ ಸಿಎಂ ಕಚೇರಿ, ಶಿಕ್ಷಣ ಸಚಿವರು ಮತ್ತು ಕ್ರೀಡಾ ಸಚಿವರಿಗೆ ಟ್ವೀಟ್ ಮೂಲಕ ತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದರು. ಇದಾದ ೨ ತಿಂಗಳ ನಂತರ ಮನು ಭಾಕರ್‌ಗೆ ಪರವಾನಗಿ ಪತ್ರ ಲಭಿಸಿತು.
ಶೂಟಿಂಗ್ ವಿಭಾಗದಲ್ಲಿ ಮನು ಅವರದ್ದು ಯಶಸ್ವಿ ಪಯಣವೇ. ಆದರೆ ೨೦೨೦ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪಿಸ್ತೂಲ್ ಕೈಕೊಟ್ಟ ಕಾರಣ ಮನು ಭಾಕರ್ ಹೀನಾಯವಾಗಿ ಸೋತು ಸ್ಪರ್ಧೆಯಿಂದ ಹೊರನಡೆಯಬೇಕಾಯಿತು. ಅದಕ್ಕೂ ಮುಂಚಿನ ಕಾಮನ್‌ವೆಲ್ತ್ ಕ್ರೀಡಾಕೂಟ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಗೆದ್ದಿದ್ದರೂ, ಟೋಕಿಯೋ ಒಲಿಂಪಿಕ್ಸ್‌ನಲ್ಲಿನ ಸೋಲಿನಿಂದಾಗಿ ಮನು ಕುಸಿದಿದ್ದರು. ಶೂಟಿಂಗ್ ಬಿಟ್ಟು ಬೇರಾವುದಾದರೂ ಆಯ್ಕೆಯೆಡೆಗೆ ಕಣ್ಣುಹಾಯಿಸಬೇಕು ಎಂದುಕೊಂಡ ಅವರಿಗೆ ಮರು ಉತ್ಸಾಹ ನೀಡಿದ್ದು ಭಗವದ್ಗೀತೆ.
‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’ ಎಂಬ ಗೀತೆಯ ಒಂದು ಸಾಲು ಮನುವನ್ನು ಗುರಿಯೆಡೆಗೆ ಸಾಗುವಂತೆ ಮಾಡಿತು. ಒಂದು ಸೋಲು ಮನುವಿನ ಗುರಿಯನ್ನೇ ಬದಲಿಸುವಷ್ಟು ಸಂಕಟ ಕೊಟ್ಟಿತ್ತು, ಆದರೆ ಭಗವದ್ಗೀತೆಯ ಓದಿನಿಂದ ಉತ್ಸಾಹಿತರಾದ ಮನು ಮೊದಲಿನಂತೆ ಪುಟಿದೆದ್ದರು. ಸೋಲನ್ನು ಮರೆತು ಗೆಲುವಿಗಾಗಿ ನಿರಂತರ ಅಭ್ಯಾಸ
ಮಾಡಿದ ಫಲವಾಗಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದಾಖಲೆ ನಿರ್ಮಿಸಿದರು. ಜೋಡಿಪದಕ ಗೆಲ್ಲುವ ಮೂಲಕ ಸಾಧನೆಯ ಶಿಖರವೇರಿದ ಮಹಿಳೆಯಾಗಿ ಹೊರಹೊಮ್ಮಿದರು. ‘ಬದುಕಿನಲ್ಲಿ ಎಲ್ಲವೂ ಮುಗಿಯಿತು’ ಎಂದು ಹತಾಶರಾಗುವವರಿಗೆ ಮನು ಭಾಕರ್ ಸ್ಪೂರ್ತಿಯ ಚಿಲುಮೆ. ‘ನನಗೆ ಹೇಗೆ ಶೂಟ್ ಮಾಡಬೇಕೆಂಬುದು ತಿಳಿದಿತ್ತು.
ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಬಹುದು ಎಂದು ನಾನು ಭಾವಿಸಿದೆ. ನೀವು ಉತ್ಸಾಹವನ್ನು ಹೊಂದಿದ್ದರೆ ಯಾವುದೇ ಕಷ್ಟವನ್ನು ಜಯಿಸಬಹುದು’ ಎಂದು ಅತ್ಯಂತ ಧೈರ್ಯದಿಂದ ಹೇಳುವ ಮನು ಭಾಕರ್, ಗೆಲುವಿಗೆ ಏಕಾಗ್ರತೆ ಮುಖ್ಯ, ನಿರಂತರ ಪರಿಶ್ರಮ ನಮ್ಮನ್ನು ಉಚ್ಛ್ರಾಯ ಸ್ಥಿತಿಗೆ ಕರೆದೊಯ್ಯುತ್ತದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದ್ದಾರೆ. ಭಾರತವು ಸ್ವತಂತ್ರಗೊಂಡ ನಂತರದಲ್ಲಿ, ಒಂದೇ ಒಲಿಂಪಿಕ್ ಕ್ರೀಡಾಕೂಟದಲ್ಲಿ ಎರಡು ಪದಕ ಗೆದ್ದು ಇತಿಹಾಸ ನಿರ್ಮಿಸಿದ ಮನು ಭಾಕರ್‌ರನ್ನು ಸದ್ಯ ಇಡೀ ದೇಶವೇ ಕೊಂಡಾಡುತ್ತಿದೆ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಒಂದೇ ಅವಽಯಲ್ಲಿ ಎರಡು ಒಲಿಂಪಿಕ್ ಪದಕ ಗೆದ್ದ ಕ್ರೀಡಾಪಟು ನಾರ್ಮನ್ ಪ್ರಿಚರ್ಡ್ ಅವರನ್ನು ಈ ಸಂದರ್ಭದಲ್ಲಿ ನೆನೆಯಬೇಕು.
ನಾರ್ಮನ್ ಪ್ರಿಚರ್ಡ್ ಮೂಲತಃ ಭಾರತೀಯ. ೧೮೭೫ರ ಜೂನ್ ೨೩ರಂದು ಕಲ್ಕತ್ತಾದಲ್ಲಿ ಜನಿಸಿದ ಇವರು ಕ್ಸೇವಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿ, ಹರ್ಡಲ್ಸ್ ಮತ್ತು ಸ್ಪ್ರಿಂಟ್ (ಓಟ) ಆಟಗಳಲ್ಲಿ ಖ್ಯಾತರೆನಿಸಿಕೊಂಡರು. ೧೯೦೦ರ ವರ್ಷದಲ್ಲಿ ಪ್ಯಾರಿಸ್ ನಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಭಾರತದ ಪರವಾಗಿ ಭಾಗವಹಿಸಿದ್ದ ಇವರು, ೨೦೦
ಮೀಟರ್ ಸ್ಪ್ರಿಂಟ್ ಹಾಗೂ ೨೦೦ ಮೀಟರ್ ಹರ್ಡಲ್ ನಲ್ಲಿ ಎರಡು ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದರು. ನಾರ್ಮನ್ ಪ್ರಿಚರ್ಡ್ ಇಷ್ಟು ದೊಡ್ಡ ಸಾಧನೆ ಮಾಡಿದರೂ
ಅದು ಒಂದು ಸಣ್ಣ ವಿವಾದಕ್ಕೆ ಕಾರಣವಾಯಿತು. ಇದಕ್ಕೆ ಪ್ರಮುಖ ಕಾರಣ, ೧೯೦೦ರ ಕಾಲಘಟ್ಟದಲ್ಲಿ ಭಾರತವು ಬ್ರಿಟಿಷ್ ವಸಾಹತುಶಾಹಿ ಆಡಳಿತಕ್ಕೆ ಒಳಪಟ್ಟಿತ್ತು. ಹೀಗಾಗಿ ನಾರ್ಮನ್
ಪ್ರಿಚರ್ಡ್ ಗೆದ್ದ ಒಲಿಂಪಿಕ್ ಪದಕಗಳು ಇಂಗ್ಲೆಂಡ್‌ಗೆ ಸಲ್ಲಬೇಕು ಎಂದು ಬ್ರಿಟಿಷ್ ಒಲಿಂಪಿಕ್ ಇತಿಹಾಸಕಾರ ಇಯಾನ್ ಬುಕಾನನ್ ತಕರಾರು ತೆಗೆದ.
ಆದರೆ ಒಲಿಂಪಿಕ್ಸ್ ಸಮಿತಿ ಮಾತ್ರ ನಾರ್ಮನ್ ಪ್ರಿಚರ್ಡ್ ಗಳಿಸಿದ್ದ ಪದಕ ಭಾರತಕ್ಕೆ ಸಲ್ಲುತ್ತದೆ ಎಂದು ಸ್ಪಷ್ಟಪಡಿಸಿತು. ಫುಟ್ಬಾಲ್ ಕ್ರೀಡೆಯಲ್ಲೂ ಆಸಕ್ತಿ ಹೊಂದಿದ್ದ ನಾರ್ಮನ್ ಪ್ರಿಚರ್ಡ್ ೧೯೦೦-೧೯೦೨ರ ಅವಧಿಯಲ್ಲಿ ಭಾರತೀಯ ಫುಟ್ಬಾಲ್ ಅಸೋಸಿಯೇಷನ್‌ನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ನಂತರ ಅಮೆರಿಕಕ್ಕೆ ತೆರಳಿ ಚಿತ್ರರಂಗದಲ್ಲಿ ಗುರುತಿಸಿಕೊಂಡ ಅವರು ನಾರ್ಮನ್ ಟ್ರೆವರ್ ಎಂಬ ಹೆಸರಿನಲ್ಲಿ ನಟನೆಯಲ್ಲಿಯೂ ತಮ್ಮ ವೃತ್ತಿಬದುಕು ಪ್ರಾರಂಭಿಸಿದರು. ಮಿದುಳು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ನಾರ್ಮನ್ ಪ್ರಿಚರ್ಡ್ ೧೯೨೯ರ ಅಕ್ಟೋಬರ್ ೩೦ರಂದು ಲಾಸ್ ಏಂಜಲೀಸ್‌ನಲ್ಲಿ ನಿಧನರಾದರು.
ಭಾರತ ಬದಲಾಗಿದೆ. ಸ್ವಾತಂತ್ರ್ಯಾನಂತರದಲ್ಲಿ ಇಡೀ ಜಗತ್ತು ಸದ್ಯ ಭಾರತವನ್ನು ನೋಡುವ ದೃಷ್ಟಿಕೋನ ಮೊದಲಿನಂತಿಲ್ಲ. ಈ ಹಿಂದೆ ಭಾರತೀಯ ಕ್ರೀಡಾಪಟುಗಳು ಮತ್ತು ಸೈನಿಕರು ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ, ಕ್ರಮವಾಗಿ ಕ್ರೀಡಾಂಗಣ ಮತ್ತು ಯುದ್ಧಭೂಮಿಯಲ್ಲಿ ಹೋರಾಡಿ ಇತಿಹಾಸ ನಿರ್ಮಿಸಿದ್ದು ಗೊತ್ತಿರುವಂಥದ್ದೇ. ಆದರೆ ವರ್ತಮಾನ
ದಲ್ಲಿ, ಒಲಿಂಪಿಕ್ಸ್ ಕ್ರೀಡಾಕೂಟದಂಥ ಮಹತ್ವದ ವೇದಿಕೆಯಲ್ಲಿ ಭಾರತದ ಪ್ರದರ್ಶನ ಹೇಳಿಕೊಳ್ಳುವಷ್ಟು ಸಮಾಧಾನಕರವಾಗಿಲ್ಲ. ಕ್ರಿಕೆಟ್ ಆಟದಲ್ಲಿ ನಮಗೆ ದಕ್ಕುತ್ತಿರುವ ಪರಿಣತಿ, ಯಶಸ್ಸು ಮತ್ತು ಖ್ಯಾತಿ, ಬೇರೆ ಕ್ರೀಡಾವಿಭಾಗದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ಎಂಬುದು ನಿಜಕ್ಕೂ ಯಕ್ಷಪ್ರಶ್ನೆಯಾಗಿದೆ.
ಇದೇ ವರ್ಷದಲ್ಲಿ ಭಾರತ ಕ್ರಿಕೆಟ್ ತಂಡವು ಚುಟುಕು ಕ್ರಿಕೆಟ್ ವಿಭಾಗದಲ್ಲಿ ವಿಶ್ವಕಪ್ ಗೆದ್ದು ಬೀಗಿತು. ದೇಶದ ೧೪೦ ಕೋಟಿ ಜನರು ಕುಣಿದು ಕುಪ್ಪಳಿಸಿ ಈ ಗೆಲುವನ್ನು ಸಂಭ್ರಮಿಸಿದರು. ಆದರೆ ಒಲಿಂಪಿಕ್ಸ್‌ನಲ್ಲಿ ನಮ್ಮ ಸಾಧನೆ ಹೇಳಿಕೊಳ್ಳುವಂತಿಲ್ಲ. ಕ್ರಿಕೆಟ್‌ನಂಥ ಹೊಡಿ-ಬಡಿ ಆಟವನ್ನು ಭಾರತೀಯರು ಹೆಚ್ಚು ಸಂಭ್ರಮಿಸುತ್ತಾರೆ. ಆದರೆ ಟೆನಿಸ್, ಬಾಸ್ಕೆಟ್ ಬಾಲ್, ಆರ್ಚರಿ, ಶೂಟಿಂಗ್, ಓಟದ ಸ್ಪರ್ಧೆ ಸೇರಿದಂತೆ ಮಿಕ್ಕ ಕ್ರೀಡೆಗಳಲ್ಲಿ ಭಾರತೀಯರದ್ದು ನಿರಾಸಕ್ತಿ ಎನ್ನಬೇಕಾ? ಅಥವಾ ಈ ಆಟಗಳ ಕುರಿತಾದ ಸಾಮಾನ್ಯ ಜ್ಞಾನ, ಮೂಲಸೌಕರ್ಯ, ಪ್ರೋತ್ಸಾಹ
ಇಲ್ಲದಿರುವುದೇ ಒಲಿಂಪಿಕ್ಸ್‌ನಲ್ಲಿನ ನಮ್ಮ ಕಳಪೆ ಸಾಧನೆಗೆ ಕಾರಣವಾ? ಬಲ್ಲವರು ಈ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ.
ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಹೇಳುವುದಾದರೆ, ಈಗಿನ ಶಾಲಾ ಮಕ್ಕಲಲ್ಲಿ ಬಹುತೇಕರು ಕ್ರಿಕೆಟ್ ಬಗ್ಗೆ ತಿಳಿದುಕೊಂಡಷ್ಟು ಬೇರೆ ಕ್ರೀಡೆಗಳ ಬಗ್ಗೆ ಅರಿತಿಲ್ಲ. ಬಾಲ್ಯದಿಂದಲೇ ವಿವಿಧ ಕ್ರೀಡೆಗಳ ಕುರಿತು ಆಸಕ್ತಿ ಮೂಡಿದರೆ ಭವಿಷ್ಯದಲ್ಲಿ ಆ ಕುರಿತು ಒಲವು ವರ್ಧನೆಯಾಗಲು ಸಾಧ್ಯ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಕ್ರೀಡೆಗಳ ಬಗೆಗಿನ ಸಂಕ್ಷಿಪ್ತ
ತಿಳಿವಳಿಕೆ ನೀಡಿದ ನಂತರ, ಅವರ ಆಸಕ್ತಿಯ ಆಟದ ಆಯ್ಕೆಗೆ ಅವಕಾಶ ಕಲ್ಪಿಸುತ್ತಾರೆ ಮತ್ತು ತರಬೇತಿಗೆ ಅನುವು ಮಾಡಿಕೊಡುತ್ತಾರೆ. ಆದರೆ ನಮ್ಮಲ್ಲಿ ಹಾಗಿಲ್ಲ. ಬಾಲ್ಯದಲ್ಲಿ ಕ್ರೀಡೆಗಳ ಕುರಿತು ಸಾಮಾನ್ಯ ಜ್ಞಾನವನ್ನು ನೀಡುವುದಿಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡೆಗೆ ಸಂಬಂಧಿಸಿದ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಭಾರತವು
ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕಗಳನ್ನು ಗೆಲ್ಲಲಿ ಎಂದು ಆಶಿಸುವುದು ಎಷ್ಟು ಸರಿ?
(ಲೇಖಕರು ಪತ್ರಕರ್ತರು)