ಗುಣಗಾನ
ಜಯಪ್ರಕಾಶ ಪುತ್ತೂರು
ನಿಗದಿತ ಕರ್ತವ್ಯದಲ್ಲಿ ತೊಡಗಿಸಿಕೊಂಡ ವ್ಯಕ್ತಿಯು ತನ್ನ ಸೇವೆಯ ಮೂಲಕ ಹೆಸರು ಸಂಪಾದಿಸುವುದು ತುಂಬಾ ಕಠಿಣವಾದ ಬಾಬತ್ತು. ಆದರೆ, ಅಂಥವರಲ್ಲಿ ಒಳ್ಳೆಯ ಮನಸ್ಸು ಮತ್ತು ಹೃದಯವಂತಿಕೆ ಎರಡೂ ಇದ್ದಾಗ, ಸಮರ್ಥ-ಸದೃಢ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಅವರು ಯಶಸ್ವಿಯಾದಾಗ, ಅದಕ್ಕೆ ಜನಮನ್ನಣೆ ದೊರೆಯುತ್ತದೆ.
ಅಂಥ ಓರ್ವ ಸಾಧಕರಾಗಿ ಸಮಾಜದಲ್ಲಿ ಗುರುತಿಸಿಕೊಂಡವರು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಡೆನ್ನಿಸ್ ಡಿಸೋಜಾ. ಅವರು ಇಂದು ನಮ್ಮ ಕಣ್ಣಮುಂದೆ ಇಲ್ಲದಿದ್ದರೂ, ಅವರ ಸೇವೆಯ
ಮಹತ್ತರ ಮುಖಗಳು ಇಂದಿಗೂ ಅವರ ಗುಣಗಾನ ಮಾಡುತ್ತಿವೆ. ಪುತ್ತೂರಿನ ಸೇಂಟ್ ಫಿಲೋಮಿನಾ ಬಾಲಕರ ಶಾಲೆಯ ಪ್ರಧಾನ ಗುರುಗಳಾಗಿದ್ದ ಡೆನ್ನಿಸ್ ಡಿಸೋಜಾ ಅವರದ್ದು ೩೨ ವರ್ಷಗಳ ಅವಿರತ ಸೇವೆ. ಶಿಷ್ಯರಿಗೆಲ್ಲಾ ಅವರು ಗುರು ‘ದ್ರೋಣ’ರೆಂದರೆ ಹೆಚ್ಚು ಸಮಂಜಸ. ಏಕೆಂದರೆ, ಅವರ ಗರಡಿಯಲ್ಲಿ ಪಳಗಿದವರೆಲ್ಲರೂ ಅರ್ಜುನರೇ! ಜೀವನದ ಕಠಿಣ ದಿನಗಳಲ್ಲೂ
ಡಿಸೋಜಾ ಅವರು ಮಾಡಿದ ಸಾಧನೆಗೆ ಸರಿಸಾಟಿಯಾಗಬಲ್ಲ ಸಾಧನೆ ಮಾಡಿದವರು ಬೇರೊಬ್ಬರು ಇಲ್ಲವೆಂದೇ ಹೇಳಬೇಕು.
‘ಏಳಿರೆಲ್ಲಾ ಭಾರತದ ವೀರಯೋಧರೇ, ರಾಷ್ಟ್ರಕ್ಕಾಗಿ ಒಂದುಗೂಡಿ ಬನ್ನಿರೆಲ್ಲರೂ..’ ಎಂಬ ಅವರ ಹಾಡು ಶಾಲೆಯ ಗೋಡೆಗಳ ಮೇಲೆ ಈಗಲೂ ರಾರಾಜಿಸುತ್ತಿರುವುದಲ್ಲದೆ, ಸಾವಿರಾರು
ಹಳೆಯ ವಿದ್ಯಾರ್ಥಿಗಳ ಕಿವಿಗಳಲ್ಲಿ ಇಂದಿಗೂ ಅನುರಣಿಸುತ್ತಿರುವುದು ವಿಸ್ಮಯ! ಯುವಕರಾಗಿದ್ದಾಗಲೇ ಶಾಲೆಯ ಚುಕ್ಕಾಣಿ ಹಿಡಿದವರು ಡಿಸೋಜಾ. ಶಾಲೆಗೆ ಅದಮ್ಯ ನಾಯಕತ್ವ ನೀಡಿದ ಮಹಾಚೈತನ್ಯದ ಸೆಲೆಯಾಗಿದ್ದ ಅವರು ಸ್ವತಃ ಕ್ರೀಡಾಪಟುವಾಗಿದ್ದರ ಜತೆಗೆ ಸಂಗೀತ, ಗಾಯನ ಹೀಗೆ ಹತ್ತು ಹಲವು ವಿಚಾರಗಳಲ್ಲಿ ಅತೀವ ಆಸಕ್ತಿ ಹೊಂದಿದ್ದ ಅಪರೂಪದ ವ್ಯಕ್ತಿ. ಅದೇನೋ ಒಂದು ಛಲ ಅವರೊಳಗೆ ತುಡಿಯುತ್ತಿತ್ತು. ಅಪರಿಮಿತವಾದ ಜೀವನೋತ್ಸಾಹದಿಂದಲೇ ತಮ್ಮೊಳಗಿನ ಕನಸುಗಳನ್ನು ನನಸಾಗಿಸುತ್ತಿದ್ದ ಅವರು, ತಮ್ಮ ಶಾಲೆಯನ್ನು ಪ್ರಗತಿಪಥದೆಡೆಗೆ ಒಯ್ಯುವ ನಿಟ್ಟಿನಲ್ಲಿ ದಣಿವರಿಯದೆ ದುಡಿದ ಆದರ್ಶ ಜೀವಿ ಮತ್ತು ಛಲಗಾರ. ತಮ್ಮ ಸೇವಾವಽಯಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿ, ಅವರು ಎಲ್ಲಾ ಚಟುವಟಿಕೆಗಳಲ್ಲಿಯೂ ಪ್ರತಿಭಾವಂತರಾಗಿ ಬೆಳೆಯುವಂತೆ ಹುರಿದುಂಬಿಸಿದ ಡಿಸೋಜಾ ತನ್ಮೂಲಕ ಶಾಲೆಯ ಖ್ಯಾತಿ ರಾಜ್ಯದ ಉದ್ದಗಲಕ್ಕೆ ಹಬ್ಬುವಂತೆ ಮಾಡಿದರು.
ಡಿಸೋಜಾ ಅವರ ಪಾದರಸದಂಥ ವ್ಯಕ್ತಿತ್ವ, ಮಾತುಗಳು ಹಾಗೂ ವಿಚಾರಗಳಿಗೆ ಮಾರುಹೋಗದವರೇ ಇರಲಿಲ್ಲ. ಗ್ರಾಮೀಣ ಶಾಲೆಯೊಂದರ ಪ್ರಧಾನ ಗುರುಗಳು ಜ್ಞಾನ ಬೆಳಗುವ ಕೇಂದ್ರವಾಗಿಬಿಟ್ಟರೆ ವಿದ್ಯಾರ್ಥಿಗಳು ಮಾತ್ರವಲ್ಲ ಸಹಶಿಕ್ಷಕರು ಕೂಡ ಪ್ರಭಾವಿತರಾಗುತ್ತಾರೆ ಮತ್ತು ಶಾಲೆಗಾಗಿ ಉತ್ತಮ ಸೇವೆ ಸಲ್ಲಿಸುತ್ತಾರೆ ಎಂಬುದನ್ನು ತೋರಿಸಿಕೊಟ್ಟವರು ಡಿಸೋಜಾ ಅವರು. ಶಾಲೆ ಎಂದರೆ ಕೇವಲ ನಾಲ್ಕು ಗೋಡೆಗಳಿಗೆ ಸೀಮಿತವಾಗಿರುವಂಥ ವ್ಯವಸ್ಥೆಯಲ್ಲ ಎಂಬುದು ಸರ್ವವಿದಿತ. ತಮ್ಮನ್ನು ನಂಬಿದವರಿಗೆ ಮಹತ್ತರವಾದುದನ್ನು ಬಿಟ್ಟುಹೋಗ ಬೇಕು
ಎಂಬ ವಿಚಾರಧಾರೆ ಡಿಸೋಜಾ ಅವರಲ್ಲಿ ಮನೆಮಾಡಿತ್ತು. ಹೀಗಾಗಿ, ತಾವು ಸೇವೆ ಸಲ್ಲಿಸುವವರೆಗೂ ಶಾಲೆಯ ಪರಿಪೂರ್ಣತೆಗೆ ಬೇಕಾದ ಎಲ್ಲಾ ಅವಶ್ಯಕ ಸೌಲಭ್ಯಗಳನ್ನು ಆಯಾ
ಕಾಲಕ್ಕೆ ಒದಗಿಸುವ ನಿಟ್ಟಿನಲ್ಲಿ ಶ್ರಮ ವಹಿಸಿದರು ಡಿಸೋಜಾ. ಈ ಕಾರಣದಿಂದಾಗಿಯೇ ಆ ಶಾಲೆಯು ಸರ್ವಾಂಗೀಣ ಪ್ರಗತಿಯನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಯಿತು, ಜಿಲ್ಲೆಯಲ್ಲಿ
ಹಾಗೂ ರಾಜ್ಯದಲ್ಲಿ ಎಲ್ಲರೂ ಮೆಚ್ಚಿಕೊಳ್ಳುವಂಥ ಒಂದು ಆದರ್ಶ ಶಾಲೆಯಾಗಿ ರೂಪಾಂತರಗೊಂಡಿತು. ಇಂಥ ಅಪರೂಪದ ಸಾಧಕ, ಹೃದಯವಂತ ಹಾಗೂ ಛಲಗಾರ ಶಿಕ್ಷಕರನ್ನು ಎಂದಿಗೂ ಮರೆಯಲಾಗದು.
(ಲೇಖಕರು ಮಾಜಿ ಮುಖ್ಯ ಸಾರ್ವಜನಿಕ
ಸಂಪರ್ಕಾಧಿಕಾರಿ, ಎಡಿಎ ಮತ್ತು ಡಿಆರ್‌ಡಿಒ)