Thursday, 28th November 2024

ಕಳೆದ ವರ್ಷದ ವೈದ್ಯಕೀಯ ವೈಚಿತ್ರ‍್ಯಗಳು

ವೈದ್ಯ ವೈವಿಧ್ಯ

drhsmohan@gmail.com

ಈತ ಒಬ್ಬ ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿ. ತನಗೆ ತಾನೇ ಚಿಕಿತ್ಸೆ ಮಾಡಿಕೊಳ್ಳುತ್ತೇನೆ ಎಂದು ಈತ ಹಲವು ವಿಧಗಳ ಅಣಬೆಗಳ ಮಿಶ್ರಣ ವನ್ನು ಮಾಡಿ ತಾನೇ ರಕ್ತಕ್ಕೆ ನೇರವಾಗಿ ಇಂಜೆಕ್ಷನ್ ಮೂಲಕ ಚುಚ್ಚಿಕೊಂಡ. ಇದು ಆತನನ್ನು ಮರಣಕ್ಕೆ ತೀರಾ ಹತ್ತಿರ ತೆಗೆದುಕೊಂಡು ಹೋಗುವ ಸೋಂಕಾಗಿ ಪರಿಣಮಿಸಿತು.

ವೈದ್ಯಕೀಯದಲ್ಲಿನ ಅಪರೂಪದ ಘಟನೆಗಳನ್ನು ವೈದ್ಯರು ಜಗತ್ತಿನಾದ್ಯಂತ ದಾಖಲಿಸು ತ್ತಿರುತ್ತಾರೆ. ಈ ರೀತಿಯ ವರದಿಗಳು ಕೆಲವೊಮ್ಮೆ ಬಹಳ ದೊಡ್ಡ ವೈಜ್ಞಾನಿಕ ಸಂಶೋ ಧನೆಗೆ ನೆರವಾಗಬಹುದು. ಮತ್ತೆ ಕೆಲವೊಮ್ಮೆ ವೈದ್ಯಕೀಯ ರಂಗದಲ್ಲಿನ ಇತರರಿಗೆ ಮಾರ್ಗ ದರ್ಶಿ ಅಥವಾ ದಾರಿದೀಪ ವಾಗ ಬಲ್ಲದು. ಕೆಲವೊಮ್ಮೆ ಮನುಷ್ಯನ ದೇಹ ಮತ್ತು ಮನಸ್ಸು ತೀರಾ ಭಿನ್ನ ರೀತಿಯಲ್ಲಿ ವರ್ತಿಸಬಹುದು. ಹೀಗೆ ಕ್ರೋಢೀಕರಣಗೊಂಡ 2022ರ ಅಪರೂಪದ ವೈದ್ಯಕೀಯ ರಂಗದ ಕೆಲವು ಘಟನೆಗಳು ಇಲ್ಲಿವೆ.

೧. ‘ವಿಟಮಿನ್ ಡಿ’ಯ ಅತಿಯಾದ ಸೇವನೆ : ಅತಿಯಾದರೆ ಅಮೃತವೂ ವಿಷವಾಗ ಬಲ್ಲದು. ಈ ಗಾದೆ ಬಹಳ ಬಾರಿ ನಮಗೆ ನಿಜವೆನಿಸುತ್ತದೆ. ವಿಟಮಿನ್‌ಗಳು ಅಥವಾ ಕೆಲವು ಆಹಾರದ ಅಂಶಗಳು ದೇಹಕ್ಕೆ ಕಡಿಮೆಯಾದಾಗ ಅವುಗಳನ್ನು ಹೆಚ್ಚುವರಿಯಾಗಿ ಸೇವಿ ಸಲು ವೈದ್ಯರು ಶಿಫಾರಸು ಮಾಡುತ್ತಾರೆ. ದೇಹಕ್ಕೆ ಹಲವು ರೀತಿಯ ಕಾಯಿಲೆಗಳು ಬಂದಾಗ ಮತ್ತು ಗರ್ಭಿಣಿ ಮಹಿಳೆಯರಲ್ಲಿ ಇಂತಹ ಸಂದರ್ಭಗಳು ಬರುತ್ತವೆ. ಆದರೆ ಅದೇ ವಿಟಮಿನ್‌ಗಳು ತೀರಾ ಜಾಸ್ತಿಯಾದಾಗ ಕೆಟ್ಟ ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿದೆ.

2022ರ ಜುಲೈನಲ್ಲಿ ಯುನೈಟೆಡ್ ಕಿಂಗ್ಡಂನಲ್ಲಿ ಅಂತಹ ಒಂದು ಅಪರೂಪದ ವಿಟಮಿನ್ ಡಿಯ ಅತಿಯಾದ ಸೇವನೆಯಿಂದ ಉಂಟಾದ ಕೆಟ್ಟ ಪರಿಣಾಮಗಳ ರೋಗಿಯ ಬಗ್ಗೆ ದಾಖಲಿಸಿದ್ದಾರೆ. ವೈದ್ಯರ ಸೂಕ್ತ ಸಲಹೆ ಇಲ್ಲದೆ ಈ ವ್ಯಕ್ತಿ ವಿಟಮಿನ್ ಡಿ ಅನ್ನು ಅತಿಯಾಗಿ ಸೇವಿಸಿದ್ದನು. ಒಮ್ಮೆಲೇ ಈತನಲ್ಲಿ ಹೊಟ್ಟೆ ನೋವು, ಅತಿಯಾದ ಭೇದಿ, ಕೈ ಕಾಲುಗಳಲ್ಲಿ ನಡುಕ, ತೀವ್ರವಾದ ವಾಂತಿ – ಈ ರೀತಿಯ ಲಕ್ಷಣಗಳು ಆರಂಭವಾಗಿ ಮೂರು ತಿಂಗಳುಗಳ ಕಾಲ ಮುಂದುವರೆಯಿತು. ಈ ಅವಧಿಯಲ್ಲಿ ಈತನ ತೂಕ ೩೦ ಪೌಂಡುಗಳಷ್ಟು ಕಡಿಮೆಯಾಯಿತು.

ತುರ್ತಾಗಿ ಆಸ್ಪತ್ರೆಗೆ ದಾಖಲಾದ ಈತನು ಎಂಟು ದಿನಗಳ ಕಾಲ ಆಸ್ಪತ್ರೆಯಲ್ಲಿರಬೇಕಾಯಿತು. ಆತನ ರಕ್ತದಲ್ಲಿ ತೀವ್ರ ಅಧಿಕ ಮಟ್ಟದ ಕ್ಯಾಲ್ಸಿಯಂ ಶೇಖರಣೆಗೊಂಡಿತ್ತು. ಇದು ವಿಟಮಿನ್ ಡಿ ಅತಿಯಾದ ಸೇವನೆಯ ಮುಖ್ಯ ಪರಿಣಾಮ. ರಕ್ತದಲ್ಲಿನ ಕ್ಯಾಲ್ಸಿಯಂ ಕಡಿಮೆ ಮಾಡಲು ವೈದ್ಯರು ಚಿಕಿತ್ಸೆ ಕೈಗೊಂಡರು. ಎರಡು ತಿಂಗಳ ನಂತರ ಕ್ಯಾಲ್ಸಿಯಂ ಮಟ್ಟ ಸಹಜ ಸ್ಥಿತಿಗೆ ಬಂದಿತು. ಆದರೆ ಆತನ ದೇಹದಲ್ಲಿ ವಿಟಮಿನ್ ಡಿ ಮಟ್ಟ ಮಾತ್ರ ಜಾಸ್ತಿಯಾಗಿಯೇ ಇತ್ತು.

೨. ಅಪಾಯಕಾರಿ ಬಿಕ್ಕಳಿಕೆ: ಮನುಷ್ಯನಲ್ಲಿ ಬಿಕ್ಕಳಿಕೆ ಆಗಾಗ ಕಾಣಿಸಿಕೊಳ್ಳುವುದುಂಟು. ಹೆಚ್ಚಿನ ಸಂದರ್ಭಗಳಲ್ಲಿ ಅದು ಸ್ವಲ್ಪ ಹೊತ್ತು ಇದ್ದು ಆಮೇಲೆ ತನ್ನಿಂದ ತಾನೇ ಕಡಿಮೆಯಾಗಿ ನಂತರ ಇಲ್ಲವಾಗುತ್ತದೆ. ಅಪರೂಪದಲ್ಲಿ ಅದು ದೇಹದೊಳಗಿನ ತೀವ್ರ ಕಾಯಿಲೆಯ ಲಕ್ಷಣವೂ ಆಗಿ ಪರಿಣಮಿಸ ಬಹುದು. ಇದು ನಮ್ಮ ದೇಶದಲ್ಲಿನ ಅಪರೂಪದ ಘಟನೆ. ಈತ ೬೪ ವರ್ಷದ ವ್ಯಕ್ತಿ. ಈತನಿಗೆ ಬಿಕ್ಕಳಿಕೆ ಆರಂಭವಾಗಿ ಹಲವು ತಿಂಗಳುಗಳು ಕಳೆದ ನಂತರ ಈತ ವೈದ್ಯರಲ್ಲಿಗೆ ಬಂದ. ವೈದ್ಯರು ವಿವಾರವಾಗಿ ಪರೀಕ್ಷಿಸಿ ಹಲವು ಪರೀಕ್ಷೆಗಳನ್ನು ಮಾಡಿದರು. ಮೆದುಳಿನಲ್ಲಿ ಒಂದು ಅಸಹಜವಾದ ಕ್ಯಾನ್ಸರ್ ರೀತಿಯ ಟ್ಯೂಮರ್ ಇರುವುದು ಪತ್ತೆ ಯಾಯಿತು. ಅದಕ್ಕೆ ಸೂಕ್ತವಾದ ಶಸ್ತ್ರಕ್ರಿಯೆ ಮತ್ತು ಎಕ್ಸ್ ರೇ ವಿಕಿರಣ ಚಿಕಿತ್ಸೆ ಕೊಟ್ಟ ನಂತರ ಅದು ಕಡಿಮೆಯಾಗಿ ನಂತರ ಇಲ್ಲವಾಯಿತು.

೩. ಇರಬಾರದ ಸ್ಥಳದಲ್ಲಿ ಬಾಟಲಿ!
ಈ ವಿಚಿತ್ರವಾದ ಘಟನೆ ನಮ್ಮ ದೇಶದಿಂದಲೇ ವರದಿಯಾಗಿದೆ. ತೀವ್ರವಾದ ಹೊಟ್ಟೆ ನೋವು ಮತ್ತು ಬಹಿರ್ದೆಸೆಗೆ ಹೋಗಲು ತೊಂದರೆಯಾಗುತ್ತಿದೆ ಎಂಬ ಲಕ್ಷಣಗಳಿಂದ ೫೦ ವರ್ಷದ ವ್ಯಕ್ತಿಯನ್ನು ಆತನ ಪತ್ನಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆ ತಂದಳು. ವೈದ್ಯರು ವಿವರವಾಗಿ ಪ್ರಶ್ನಿಸಿದಾಗಲೂ ಈತ ಯಾವುದೇ ರೀತಿಯ ಸರಿಯಾದ ವಿವರಗಳನ್ನು ನೀಡಲಿಲ್ಲ. ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಿದಾಗ ಈತನ ಗುದದ್ವಾರದ ಸಮೀಪ ಬಾಟಲಿ ಇರುವುದು ತಿಳಿದುಬಂದಿತು. ಆಗ ಗೊತ್ತಾಗಿದ್ದು ಸುಮಾರು ೨೫೦ ಮಿ.ಲೀ ನೀರಿನ ಬಾಟಲಿ ಆ ಸ್ಥಳದಲ್ಲಿ ೩ ದಿನಗಳ ಕಾಲ ಇತ್ತು. ತೀವ್ರ ಮುಜುಗರವಾಗುತ್ತದೆಂದು ಆ ವ್ಯಕ್ತಿ ವಿಷಯ ಹೊರಗೆಡಹಲಿಲ್ಲ.

ವೈದ್ಯರು ದೊಡ್ಡ ಕರುಳಿನ ಭಾಗಗಳಿಗೆ ಹೆಚ್ಚು ತೊಂದರೆಯಾಗದ ರೀತಿಯಲ್ಲಿ ಹಾಗೂ ಹೆಚ್ಚು ರಕ್ತ ನಷ್ಟವಾಗದಂತೆ ಎಚ್ಚರ ವಹಿಸಿ ಶಸಕ್ರಿಯೆ ಮಾಡಿ ಬಾಟಲಿ ಹೊರ ತೆಗೆದರು. ಐದು ದಿನಗಳ ಕಾಲ ಆಸ್ಪತ್ರೆಯಲ್ಲಿಟ್ಟುಕೊಂಡು ನಂತರ ಆತನನ್ನು ಮನೆಗೆ ಕಳಿಸಲಾಯಿತು.

೪. ಮಹಿಳೆಯ ಉದರ ಮತ್ತು ಕರುಳಿನಲ್ಲಿ ೫೦ ಬ್ಯಾಟರಿಗಳು! 
ವಿಚಿತ್ರ ಮನಸ್ಥಿತಿಯ ಯುರೋಪಿನ ಈ ಮಹಿಳೆ ತನ್ನ ದೇಹಕ್ಕೆ ತಾನೇ ತೊಂದರೆ ಮಾಡಿಕೊಳ್ಳುವ ಉದ್ದೇಶದಿಂದ ಬ್ಯಾಟರಿ ಸೆಲ್‌ಗಳನ್ನು ನುಂಗುತ್ತಾ ಹೋದಳು. ವಿಪರೀತ ತೊಂದರೆಯಾದಾಗ ಆಸ್ಪತ್ರೆಗೆ ಹೋಗುವ ಸಂದರ್ಭ ಬಂದಿತು. ಅಲ್ಲಿಗೆ ಹೋದ ಕೂಡಲೇ ಐದು ಬ್ಯಾಟರಿಗಳು ನನ್ನಿಂದ ತಾನೇ ಹೊರ ಬಂದವು. ನಂತರ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಆಕೆಯ ಹೊಟ್ಟೆ ಮತ್ತು ಕರುಳಿನಿಂದ ೫೦ ಬ್ಯಾಟರಿ ಸೆಲ್ ಹೊರ ತೆಗೆದರು. ನಂತರ ಎಕ್ಸ್ ರೇ ಮತ್ತು ಸ್ಕ್ಯಾನ್ ಮಾಡಲಾಗಿ ಕರುಳು ಮತ್ತು ಹೊಟ್ಟೆ ಬ್ಯಾಟರಿ ರಹಿತ ಎಂದು ವೈದ್ಯರು ಖಾತರಿ ಮಾಡಿಕೊಂಡರು. ನಂತರ ಆಕೆ ಬೇಗನೆ ಚೇತರಿಸಿಕೊಂಡಳು.

೫. ನೈಟ್ರಸ್ ಆಕ್ಸೈಡ್‌ನಿಂದ ಪೆರಾಲಿಸಿಸ್! 

ಹಲವು ಚಿಕಿತ್ಸೆಗಳಿಗೆ ನೈಟ್ರಸ್ ಆಕ್ಸೈಡ್ ಉಪಯೋಗಿಸುವ ಕ್ರಮ ಇದೆ. ಸ್ವಲ್ಪ ಮತ್ತು ಬರಿಸುವ ಹಾಗೂ ಮನಸ್ಸಿಗೆ ಮುದ ಉಂಟು ಮಾಡುವ ಪರಿಣಾಮ ಇದರಲ್ಲಿ ಇರುವುದರಿಂದ ವಿಪಿಟ್ಸ್ ಎಂಬುದನ್ನು ಮೂಗಿನ ಮೂಲಕ ಆಘ್ರಾಣಿಸುತ್ತಾರೆ. ಅದು ಕೆಲವೊಮ್ಮೆ ವಿಪರೀತ ತೊಂದರೆ ಅಥವಾ ತೊಡಕನ್ನು ತರಬಹುದು. ಕಳೆದ ಸೆಪ್ಟಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ಒಬ್ಬಾತ ಇದನ್ನು ವಿಪರೀತವಾಗಿ ಮೂಗಿನಿಂದ ಸೆಂಟ್ಸ್ ಆಘ್ರಾಣಿಸುವ ರೀತಿ ಸೇವಿಸಿ ಆಸ್ಪತ್ರೆಯ ಎಮರ್ಜೆನ್ಸಿ ರೂಮಿಗೆ ತರಲ್ಪಟ್ಟ. ಆ ಹೊತ್ತಿಗೆ ಆತನ ಎರಡೂ ಕಾಲುಗಳು ಶಕ್ತಿ ಕಳೆದುಕೊಂಡು ಕಾಲಿನ ಭಾಗದಲ್ಲಿ ಪೆರಾಲಿಸಿಸ್ ಆಗಿತ್ತು.

ಅಧಿಕ ಪ್ರಮಾಣದ ನೈಟ್ರಸ್ ಆಕ್ಸೈಡ್ ಆತನ ದೇಹದಲ್ಲಿನ ವಿಟಮಿನ್ ಬಿ ೧೨ ಅಂಶವನ್ನು ಗಮನಾರ್ಹವಾಗಿ ಕಡಿಮೆ ಮಾಡಿ ಅದು ನರಗಳ ನಿಶ್ಯಕ್ತ ತೆಗೆ ಕಾರಣವಾಯಿತು. ಈ ಸಂದರ್ಭದಲ್ಲಿ ವೈದ್ಯರು ಅಗತ್ಯವಿರುವ ವಿಟಮಿನ್ ಬಿ ೧೨ ಅನ್ನು ಇಂಜೆಕ್ಷನ್ ರೂಪದಲ್ಲಿ ಕೊಟ್ಟು ಆತನಿಂದ ನೈಟ್ರಸ್ ಆಕ್ಸೈಡ್ ವಿಪೆಟ್ಸ್ ಹವ್ಯಾಸದಿಂದ ದೂರವಿರುವಂತೆ ಮಾಡಿದ್ದರಿಂದ ಆತನಿಗೆ ಇನ್ನೂ ಹೆಚ್ಚಿನ ಅಪಾಯ ತಪ್ಪಿತು. ನಾಲ್ಕು ವಾರಗಳ ನಂತರ ಆತ ನಡೆದಾಡಲು ಸಮರ್ಥನಾದನು.

೬. ಅಣಬೆ ಮನುಷ್ಯ!
ಈತ ಒಬ್ಬ ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿ. ತನಗೆ ತಾನೇ ಚಿಕಿತ್ಸೆ ಮಾಡಿಕೊಳ್ಳುತ್ತೇನೆ ಎಂದು ಈತ ಹಲವು ವಿಧಗಳ ಅಣಬೆ ಗಳ ಮಿಶ್ರಣ ವನ್ನು ಮಾಡಿ ತಾನೇ ರಕ್ತಕ್ಕೆ ನೇರವಾಗಿ ಇಂಜೆಕ್ಷನ್ ಮೂಲಕ ಚುಚ್ಚಿಕೊಂಡ. ಇದು ಆತನನ್ನು ಮರಣಕ್ಕೆ ತೀರಾ ಹತ್ತಿರ ತೆಗೆದುಕೊಂಡು ಹೋಗುವ ಸೋಂಕಾಗಿ ಪರಿಣಮಿಸಿತು. ಖಿನ್ನತೆಗೆ ಚಿಕಿತ್ಸೆಯಾಗಿ ಕೆಲವರು ಅಣಬೆಗಳನ್ನು ಉಪಯೋಗಿ ಸುವ ಕ್ರಮ ಇದೆ.

ಆದರೆ ಈತ ಅಣಬೆಗಳನ್ನು ಕುದಿಸಿ ಟೀ ರೀತಿಯಲ್ಲಿ ಮಾಡಿ ಬಂದ ಮಿಕ್ಸ್ಚರ್ ಅನ್ನು ಹತ್ತಿಯಲ್ಲಿ ಸೋಸಿ ನಂತರ ರಕ್ತನಾಳಕ್ಕೆ ಚುಚ್ಚಿಕೊಂಡಿದ್ದ. ತಕ್ಷಣ ಈತ ಆಸ್ಪತ್ರೆಯ ಕೊಠಡಿಗೆ ಬಂದಾಗ ಆತನಿಗೆ ರಕ್ತದ ವಾಂತಿಯಾಗತೊಡಗಿತು. ಜತೆಗೆ ತೀವ್ರ ರೀತಿಯ ಸುಸ್ತು, ಜಾಂಡಿಸ್ ಲಕ್ಷಣಗಳು ಹಾಗೂ ಭೇದಿ ಲಕ್ಷಣಗಳು ಇದ್ದವು. ರಕ್ತ ಪರಿಕ್ಷೆಯಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಸ್ ಎರಡೂ ರೀತಿಯ ಸೋಂಕು ಕಂಡುಬಂದವು.

ಈತ ಇಂಜೆಕ್ಟ್ ಮಾಡಿಕೊಂಡ ಅಣಬೆಗಳಿಗೆ ರಕ್ತದಲ್ಲಿನ ಫಂಗಸ್ ಗಳು ಹೋಲಿಕೆ ಹೊಂದಿದ್ದವು. ಹಾಗಾಗಿ ಈತನ ದೇಹ ಅಣಬೆ ಗಳಿಗೆ ವೃದ್ಧಿ ಹೊಂದುವ ಫ್ಯಾಕ್ಟರಿ ತರಹ ಪರಿವರ್ತಿತವಾಯಿತು. ಒಂದು ವಾರ ಐಸಿಯು, ನಂತರ ಮೂರುವಾರಗಳ ಕಾಲ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ಕೊಡಲಾಯಿತು. ಆನಂತರವೂ ಆತ ದೀರ್ಘಕಾಲ ಸೋಂಕು ವಿರುದ್ಧದ ಔಷದ ತೆಗೆದುಕೊಳ್ಳ ಬೇಕಾಯಿತು.

೭. ಗುದದಲ್ಲಿ ನೋವು : ಜಪಾನ್‌ನಿಂದ ಒಂದು ಅಪರೂಪದ ಘಟನೆ ವರದಿಯಾಗಿದೆ. ೬೭ ವರ್ಷ ವಯಸ್ಸಾದ ವ್ಯಕ್ತಿ ತನ್ನ ಬಲಭಾಗದ ಅಂಡಿನ ಮತ್ತು ತೊಡೆಯ ಭಾಗದಲ್ಲಿ ಮೂರು ತಿಂಗಳುಗಳಿಂದ ನೋವು ಎಂದು ವೈದ್ಯರೊಂದಿಗೆ ಬಂದ. ಇದು ಬೆನ್ನು ಹುರಿಯ ಸಮಸ್ಯೆ ಇರಬೇಕು ಎಂದು ವೈದ್ಯರು ಸ್ಕ್ಯಾನ್ ಮಾಡಿ ಶಸ್ತ್ರಕ್ರಿಯೆ ಮಾಡುವ ಯೋಚನೆಯಲ್ಲಿದ್ದರು. ಸಿಟಿ ಸ್ಕ್ಯಾನ್ ಮಾಡಿದಾಗ ಅವರಿಗೆ ತೀವ್ರವಾದ ಆಶ್ಚರ್ಯವಾಯಿತು. ಆತನ ದೊಡ್ಡ ಕರುಳಿನ ಕೊನೆಯ ಭಾಗ ರೆಕ್ಟಮ್ (ಗುದದ್ವಾರದ ಸ್ವಲ್ಪ ಮೇಲ್ಭಾಗ ) ಏಳು ಸೆ.ಮೀ ಉದ್ದದ ರಾಡ್ ರೀತಿಯ ಆಕೃತಿ ಕಂಡುಬಂದಿತು. ಕ್ರಮೇಣ ಆತನ ನೋವು ಜಾಸ್ತಿಯಾಗ ತೊಡಗಿತು. ಶಸ್ತ್ರಕ್ರಿಯೆ ಮಾಡಿ ತೆಗೆದಾಗ ಅದು ಟೂತ್ ಪ್ರಿಕ್ (ಹಲ್ಲನ್ನು ಚುಚ್ಚಿಕೊಳ್ಳುವ ಕಡ್ಡಿ) ಆಗಿತ್ತು. ಈ ತರಹದ ಘಟನೆ ತುಂಬಾ ತುಂಬಾ ಅಪರೂಪ ಎಂದು ವೈದ್ಯರ ಅನಿಸಿಕೆ.

ಇದರ ನೀತಿ : ತುಂಬಾ ಚೂಪಾದ ಉದ್ದನೆಯ ವಸ್ತುಗಳನ್ನು ತಿನ್ನಬಾರದು.

೮. ಖೊಟ್ಟಿ ಔಷಧದ ಓವರ್ ಡೋಸ್

ಕಳೆದ ಜೂನ್‌ನಲ್ಲಿ ಜರ್ಮನಿಯಲ್ಲಿ ವೈದ್ಯರು ಹೋಮಿಯೋಪಥಿ ಔಷಧದ ಅತಿಯಾದ ಸೇವನೆಯಿಂದ ತೊಂದರೆಗೆ ಒಳಗಾದ ರೋಗಿಯ ಬಗ್ಗೆ ವರದಿ ಮಾಡಿzರೆ. ಬೆಲ್ಲಡೋನ ಸಸ್ಯದ ಅಂಶವನ್ನು ಒಳಗೊಂಡ ಹೋಮಿಯೋಪತಿ ಔಷಧ ಸೇವಿಸಿ ಆತನಿಗೆ ತೀವ್ರವಾದ ಗೊಂದಲದ ಸ್ಥಿತಿ ಉಂಟಾಗಿ ಆತನ ಮಾತಿನಲ್ಲಿ ವ್ಯತ್ಯಯವಾಯಿತು. ಆತಂಕದ ಮನಸ್ಥಿತಿ ಇತ್ತು. ಹಾಗೆಯೇ ಇನ್ನೂ ಗಂಭೀರವಾದ ಲಕ್ಷಣ ಎಂದರೆ ಏಟಾಕ್ಸಿಯ – ಮಾಂಸಖಂಡ ಗಳ ಹಿಡಿತ ಮತ್ತು ಹೊಂದಾಣಿಕೆ ತೀವ್ರ ರೀತಿಯಲ್ಲಿ ವ್ಯತ್ಯಯ ಗೊಂಡವು.

ಹೋಮಿಯೋಪಥಿ ಔಷಧಿಗಳಲ್ಲಿ ಒಂದು ವಸ್ತುವನ್ನು ನೀರಿನಲ್ಲಿ ಮಿಶ್ರಣ ಮಾಡಿ ಮೂಲ ಔಷಧದ ತುಣುಕು ಸಹಿತ ಇರದಿರು ವಂತೆ ನೋಡಿಕೊಳ್ಳುತ್ತಾರೆ. ನೀರಿನಲ್ಲಿರುವ ನೆನಪಿನ ಅಂಶವನ್ನು ಪಿಲ್ ರೂಪದಲ್ಲಿ ಕೊಟ್ಟು ಅದು ಚಿಕಿತ್ಸೆ ಮಾಡುತ್ತದೆ ಎಂಬುದು ಆ ತಜ್ಞರ ಅಭಿಪ್ರಾಯ. ಆದರೆ ಪಾಶ್ಚಾತ್ಯ ಜಗತ್ತಿನ ಹೆಚ್ಚಿನ ದೇಶಗಳ ಆಧುನಿಕ ವೈದ್ಯಕೀಯದ ವೈದ್ಯರು ಈ ಪದ್ಧತಿ ಯನ್ನೇ ಒಪ್ಪುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಆ ಔಷಧಗಳು ಏನೂ ಔಷದ ಒಳಗೊಳ್ಳದ ಪ್ಲಾಸಿಬೋ ರೀತಿಯಲ್ಲಿ ಕೆಲಸ ಮಾಡುತ್ತವೆ. ಆದರೆ ಮೇಲೆ ವಿವರಿಸಿದ ಸಂದರ್ಭದಂತೆ ಕೆಲವೊಮ್ಮೆ ಗಂಭೀರ ಪರಿಣಾಮ ಗಳಾದ ಉದಾಹರಣೆಗಳೂ ಇವೆ. ಮೇಲಿನ ವ್ಯಕ್ತಿ ಸೂಕ್ತ ಚಿಕಿತ್ಸೆಗೆ ಸ್ಪಂದಿಸಿ ಗುಣಮುಖನಾದನು.

೯.ದೇಹದ ಮೇಲಿನ ಚರ್ಮದ ಕಲೆ ಚಲಿಸಿದಾಗ: ೬೪ ವರ್ಷದ ಸ್ಪೇನ್ ದೇಶದ ವ್ಯಕ್ತಿಗೆ ಬೆನ್ನು ಮತ್ತು ಹೊಟ್ಟೆಯ ಭಾಗದಲ್ಲಿ ಕೆಂಪು ಬಣ್ಣದ ಚರ್ಮದ ಕಲೆ ಕಾಣಿಸಿಕೊಂಡಿತು. ಆಶ್ಚರ್ಯ ಎಂದರೆ ಆ ಕಲೆಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸಲಾರಂಭಿಸಿದವು. ವಿವರವಾಗಿ ಪರೀಕ್ಷಿಸಿದಾಗ ಆತನ ಚರ್ಮದಲ್ಲಿ ಚಲಿಸುತ್ತಿದ್ದ ಉರುಟಾಕೃತಿಯ ಜಂತುಹುಳು (Round Worm) ಎಂದು ಗೊತ್ತಾಗಿ ಸೂಕ್ತ ಚಿಕಿತ್ಸೆ ನೀಡಲಾಯಿತು.