Monday, 4th November 2024

ಸರ್ವಮಾನ್ಯನಾದ ಒಬ್ಬ ಅ’ಸಾಮಾನ್ಯ’ ನೊಂದಿಗಿನ ಕೆಲ ನೆನಪುಗಳು !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

ಇತ್ತೀಚೆಗೆ ನಮ್ಮನ್ನಗಲಿದ ಉದ್ಯಮಿ ಆರ್.ಎನ್.ಶೆಟ್ಟಿಯವರನ್ನು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನನಗೆ ಪರಿಚಯಿಸಿ ದವರು ರಾಮಕೃಷ್ಣ ಹೆಗಡೆಯವರು. ಸ್ಥಳ – ಕೃತ್ತಿಕಾ (ಹೆಗಡೆಯವರ ಮನೆ).

ಅಂದು ಹೆಗಡೆಯವರು ಹೇಳಿದ ಮಾತು ನನ್ನ ಕಿವಿಯಲ್ಲಿದೆ – ‘ನನಗೆ ಶೆಟ್ಟಿಯವರ ಬಗ್ಗೆ ಅತೀವ ಅಭಿಮಾನ. ಮೊದಲ ಸಲ ಶಿರಸಿಯಲ್ಲಿ ನನ್ನನ್ನು ನೋಡಲು ಅವರು ಸ್ಕೂಟರಿನಲ್ಲಿ ಬಂದಿದ್ದರು. ಅದೇ ದೃಶ್ಯವೇ ನನ್ನ ಮನಸ್ಸಿನಲ್ಲಿದೆ. ಅಲ್ಲಿಂದ
ಇವತ್ತಿನವರೆಗೆ ಅವರು ಕ್ರಮಿಸಿದ ಹಾದಿ ಅದ್ಭುತ. ಮನುಷ್ಯನಿಗೆ ಶಿಕ್ಷಣವಿಲ್ಲದಿದ್ದರೂ, ತನ್ನ ಛಲದಿಂದ ಯಾವ ಎತ್ತರಕ್ಕೂ ಏರಬಹುದು ಎಂಬುದಕ್ಕೆ ಅವರೇ ಸಾಕ್ಷಿ.

ಶೆಟ್ಟಿಯವರ ಬಾಯಿಂದ ಅಸಾಧ್ಯ ಎಂಬ ಮಾತನ್ನು ಕೇಳಿಯೇ ಇಲ್ಲ. ಒಂದು ದಿನ ನಾನು ಶೆಟ್ಟಿಯವರ ಬಳಿ ಈಗ ವಿಧಾನ ಸೌಧದಂಥ ಕಟ್ಟಡವನ್ನು ಕಟ್ಟಲು ಎಷ್ಟು ದಿನ ಬೇಕು ಮತ್ತು ಎಷ್ಟು ಹಣ ಬೇಕು ಎಂದು ಕೇಳಿದ್ದೆ. (ಆಗ ವಿಕಾಸಸೌಧ ಇರಲಿಲ್ಲ) ಆಗ ಶೆಟ್ಟಿಯವರು ಒಂದು ನಿಮಿಷ ಯೋಚಿಸಿ, ಇನ್ನೂರೈವತ್ತು ಕೋಟಿ ರುಪಾಯಿಗಳಲ್ಲಿ, ಎರಡು ವರ್ಷಗಳಲ್ಲಿ ಕಟ್ಟಿಕೊಡು ತ್ತೇನೆ ಎಂದು ಹೇಳಿದರು.

ನನಗೆ ಆಶ್ಚರ್ಯವಾಗಿದ್ದು ಅವರ ಕಲ್ಪನೆ ಮತ್ತು ಅಂದಾಜು ಲೆಕ್ಕಾಚಾರ.’ ಅಂದು ಹೆಗಡೆಯವರ ಮನೆಯಲ್ಲಿ ಮಧ್ಯಾಹ್ನ ಊಟದ ಟೇಬಲ್ಲಿನಲ್ಲಿ ನಾವು ಮೂವರೇ ಇzವು. ‘ಭಟ್ಟರೇ, ಇನ್ನೊಂದು ಸಂಗತಿ ಗೊತ್ತಿದೆಯಾ? ಶೆಟ್ಟಿಯವರು ಐದನೇ
ಕ್ಲಾಸನ್ನು ಸಹ ಮುಗಿಸಿದವರಲ್ಲ. ಆದರೆ ತಮಗೆ ಬಂದ ರೀತಿಯಲ್ಲಿ ಬ್ರಿಟಿಷರಿಗೂ ಅರ್ಥವಾಗುವಂತೆ ಇಂಗ್ಲಿಷ್ ಮಾತಾಡುತ್ತಾರೆ. ಸಾವಿರಾರು ಎಂಜಿನಿಯರುಗಳನ್ನು ಕೆಲಸಕ್ಕೆ ಇಟ್ಟುಕೊಂಡಿzರೆ. ಹತ್ತಾರು ಸಂಸ್ಥೆಗಳನ್ನು ಸ್ಥಾಪಿಸಿದ್ಧಾರೆ.

ಹತ್ತಾರು ಸಾವಿರ ಜನರಿಗೆ ಕೆಲಸ ಕೊಟ್ಟಿದ್ಧಾರೆ. ಅವರಿಗೆ ಯಾವುದಾದರೂ ಒಂದು ಕೆಲಸವನ್ನು ಕೊಟ್ಟು ನೋಡಿ, ಅವರು ನಮಗೇ ಅಚ್ಚರಿಯಾಗುವಂತೆ ಮಾಡಿ ಮುಗಿಸಿರುತ್ತಾರೆ’ ಎಂದು ಹೆಗಡೆಯವರು ಹೇಳಿದ್ದರು. ಶೆಟ್ಟಿಯವರು ಈ ಮಾತುಗಳನ್ನು ಸಂಕೋಚದಿಂದ ಕೇಳಿಸಿಕೊಂಡರು, ಆದರೆ ಅಪ್ಪಿತಪ್ಪಿಯೂ ಮಾತಾಡಲಿಲ್ಲ. ‘ನಾನು ಹೇಗೆಯೇ ಇರಲಿ, ನನ್ನಲ್ಲಿ ಒಳ್ಳೆಯದನ್ನು ಕಂಡ ಹೆಗಡೆಯವರು ಗ್ರೇಟ್’ ಎಂದು ಹೇಳಿದ್ದರು.

ಶೆಟ್ಟಿಯವರು ಅಂದು ಮಾತಾಡಿದ್ದಕ್ಕಿಂತ ನಕ್ಕಿದ್ದೇ ಹೆಚ್ಚು. ಊಟವಾದ ಮೇಲೆ ನಾವು ಕೈತೊಳೆದು ಕೊಂಡಾಗ, ಹೆಗಡೆಯವರೇ ಕೈ
ಒರೆಸಿಕೊಳ್ಳಲು ಟವೆಲನ್ನು ನೀಡಿದರು. ‘ಹೆಗಡೆಯವರೇ, ನೀವು ನನಗೆ ಹೀಗೆ ಮಾಡಬಾರದು. ನನಗೆ ಬಹಳ ಕಷ್ಟವಾಗುತ್ತದೆ. ನಿಮ್ಮಿಂದ ಇಷ್ಟೆ ಉಪಚರಿಸಿಕೊಳ್ಳಬಾರದು’ ಎಂದು ಶೆಟ್ಟಿಯವರು ಹೇಳಿದರು. ಆಗ ಹೆಗಡೆಯವರು ನನ್ನನ್ನು ನೋಡುತ್ತಾ, ‘ಶೆಟ್ಟಿಯವರೇನಾದರೂ ರಾಜಕಾರಣಕ್ಕೆ ಬಂದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?’ ಎಂದು ಹೇಳಿ ಗಾಂಭೀರ್ಯಭರಿತ ಹಾಸ್ಯ
ಚಟಾಕಿ ಹಾರಿಸಿದ್ದರು.

ಶೆಟ್ಟಿಯವರೊಂದಿಗೆ ಅಂದು ಮೊಳಕೆಯೊಡೆದ ನಮ್ಮ ಪರಿಚಯ, ಸ್ನೇಹಕ್ಕೆ ತಿರುಗಿ ಅದು ಅವರ ಕೊನೆಯ ತನಕ ಸಾಗಿ ಬಂದಿತು. ಅಂದಿನ ಕೇಂದ್ರ ಸಚಿವ ಅನಂತಕುಮಾರ ಅವರ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದಾಗ, ಮೊದಲ ಬಾರಿಗೆ ನಾನು ಶೆಟ್ಟರನ್ನು ಭೇಟಿಯಾಗಿದ್ದರೂ, ವಿಧಿವತ್ತಾಗಿ ಪರಿಚಯಿಸಿದವರು ಹೆಗಡೆಯವರು. ನಾನು (ಕುಮಟಾದಲ್ಲಿ) ಬಾಲ್ಯದಲ್ಲಿದ್ದಾಗಲೇ ಶೆಟ್ಟಿಯವರ ಸರನ್ನು ಕೇಳಿದ್ದೆ. ‘ಮುರ್ಡೇಶ್ವರ’ ಎಂದು ಬರೆದ ಲಾರಿ ಬಗ್ಗೆ ನನ್ನ ತಂದೆಯವರಲ್ಲಿ ಕೇಳಿದಾಗ ಅದು ಆರ್.ಎನ್.
ಶೆಟ್ಟಿಯವರದು ಎಂದು ಹೇಳಿದ್ದರು. ನನ್ನ ತಂದೆಯವರೂ, ಶೆಟ್ಟಿಯವರೂ ಒಂದೇ ವಾರಗೆಯವರು, ಸ್ನೇಹಿತರು.

ಶೆಟ್ಟಿಯವರ ಕಾರ್ಯಕ್ಷೇತ್ರ ವಿಸ್ತಾರವಾದಂತೆ ತಂದೆಯವರ ಸಂಪರ್ಕ ಕಟ್ ಆಯಿತು. ಅವರ ಬಗ್ಗೆ ಆ ದಿನಗಳ ನನ್ನ
ತಂದೆಯವರು ಅಭಿಮಾನದಿಂದ ಮಾತಾಡುತ್ತಿದ್ದರು. ಶೆಟ್ಟಿಯವರೇನೂ ಅನುಕೂಲಸ್ಥ ಕುಟುಂಬದವರಲ್ಲಿ ಹುಟ್ಟಿದವರಲ್ಲ. ಆ ದಿನಗಳಲ್ಲಿ ಕುಂದಾಪುರ, ಶಿರಾಲಿ, ಮಂಕಿ, ಮುರ್ಡೇಶ್ವರ ಸುತ್ತಮುತ್ತಲಿನ ಕೆಲಸಗಾರರನ್ನು ಕರೆದುಕೊಂಡು ಶಿರಸಿಗೆ ಹೋಗು ತ್ತಿದ್ದರು. ಅಲ್ಲಿನ ದೊಡ್ಡ ದೊಡ್ಡ ಹೆಗಡೆಗಳ ಅಡಕೆ ತೋಟದಲ್ಲಿ ಈ ಕೂಲಿ ಕೆಲಸಗಾರರನ್ನು ಪೂರೈಸುತ್ತಿದ್ದರು. ಇವರು ಆ ಕೆಲಸಗಾರರಿಗೆ ಮುಖಂಡ.

ಇಂಥವರಿಗೆ ಶೇರುಗಾರರು ಅಂತ ಹೆಸರು. ಇಪ್ಪತ್ತು – ಇಪ್ಪತ್ತೈದು ಕೆಲಸಗಾರರ ತಂಡವನ್ನು ಕಟ್ಟಿ ಅದಕ್ಕೆ ಮುಖ್ಯಸ್ಥನಾಗಿ, ಶೇರುಗಾರ ಶೆಟ್ರು’ ಎಂದೇ ಅವರು ಪರಿಚಿತರಾಗಿದ್ದರು. ಆ ದಿನಗಳಲ್ಲಿ ಶೆಟ್ಟರು ಅದೆಷ್ಟು ಪ್ರಸಿದ್ಧರಾದರೆಂದರೆ, ಒಂದು ‘ತಂಡ’ ದಿಂದ ಹತ್ತಕ್ಕೂ ಅಧಿಕ ‘ತಂಡ’ಗಳನ್ನು ಕಟ್ಟಿ ಶಿರಸಿ ಭಾಗದಲ್ಲಿ ಅಡಕೆ ತೋಟದ ಮಾಲೀಕರಿಗೆ ಆಪ್ತರಾದರು. ಒಂದು ಸಂದರ್ಭ ದಲ್ಲಿ ಶೆಟ್ಟಿಯವರು ಇಪ್ಪತ್ತೈದು ‘ತಂಡ’ಗಳನ್ನೂ ನಿರ್ವಹಿಸುತ್ತಿದ್ದರು. ಇದನ್ನು ಅವರೇ ಸುಮಾರು ಹದಿನೈದು ವರ್ಷಗಳ ಹಿಂದೆ ನನ್ನಲ್ಲಿ ಹೇಳಿದ್ದರು. ಅಂದಿನಿಂದ ಆರಂಭವಾದ ಅವರ ಯಾತ್ರೆ, ‘ಆರೆನ್ನೆಸ್’ ಎಂಬ ಸಾಮ್ರಾಜ್ಯದ ಶೇರುಗಾರ (ಷೇರುದಾರ) ರಾಗುವ ತನಕ ಮುಂದುವರಿದಿದ್ದು ಒಂದು ಅಮೋಘ ಕತೆ.

ಒಂದು ವೇಳೆ ಶೆಟ್ಟಿಯವರು ಶೇರುಗಾರರಾಗಿಯೇ ಮುಂದುವರಿದಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹಿಸುವುದು ಕಷ್ಟ. ‘ನೀವು ಒಂದು ವೇಳೆ ಅದೇ ವೃತ್ತಿಯಲ್ಲಿ ಮುಂದುವರಿದಿದ್ದರೆ, ಶಿರಸಿ ಸುತ್ತಮುತ್ತಲ ಹೆಗಡೆಗಳ ಅಡಕೆ ತೋಟವಗಳನ್ನೆಲ್ಲ ನೀವು
ಖರೀದಿಸಿ ಬಿಡುತ್ತಿದ್ದಿರಿ’ ಎಂದು ನಾನು ಒಂದೆರಡು ಬಾರಿ ಅವರ ಮುಂದೆ ಹೇಳಿದಾಗ, ಅವರು ನಕ್ಕಿದ್ದರು. ಆ ಕೆಲಸ ಮಾಡಿದ್ದರೂ ಅವರು ಶೇರುಗಾರರಾಗಿ, ಕೂಲಿ ಕೆಲಸಗಾರರ ತಂಡಕ್ಕೆ ಮುಖಂಡ’ರಾಗಿದ್ದು ವಿಶೇಷ.

ಅಲ್ಲಿಂದ ಶೆಟ್ಟಿಯವರು ತಿರುಗಿ ನೋಡಿದ್ದೇ ಇಲ್ಲ. ಹೇಗಿದ್ದರೂ ಅವರ ಬಳಿ ಸಾವಿರಾರು ಕೆಲಸಗಾರರು ಇದ್ದರಲ್ಲ, ಶೆಟ್ಟಿಯವರು ರಸ್ತೆ, ಸೇತುವೆ ಮುಂತಾದ ಸಣ್ಣ ಪುಟ್ಟ ಗುತ್ತಿಗೆ ಕೆಲಸವನ್ನು ಕೈಗೆತ್ತಿಕೊಳ್ಳಲಾರಂಭಿಸಿದರು. ಇದು ಅವರ ಕೈ ಹಿಡಿಯಿತು. ಕೆಲಸಗಾರರನ್ನು ಸರಿಯಾಗಿ ನಿರ್ವಹಿಸುವವ ಉತ್ತಮ ಗುತ್ತಿಗೆದಾರನಾಗಬಲ್ಲ. ಶೆಟ್ಟಿಯವರ ಸೌಮ್ಯ, ಸಂಭಾವಿತ ಸ್ವಭಾವ ಅವರನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಹತ್ತಿರಕ್ಕೆ ಕೊಂಡೊಯ್ಯಿತು. ಆರಂಭಿಕ ದಿನಗಳ ಒಳ್ಳೆಯ ಗುತ್ತಿಗೆಗಳು ಅವರಿಗೆ ಒಲಿದು ಬಂದವು. ಗುತ್ತಿಗೆ ಕೆಲಸಕ್ಕೆ ಬೇಕಾದ ಲಾರಿ, ಇನ್ನಿತರ ವಾಹನಗಳನ್ನು ಖರೀದಿಸಲಾರಂಭಿಸಿದರು.

ಶೆಟ್ಟಿಯವರು ಎಲ್ಲಿಯೇ ಗುತ್ತಿಗೆ ಹಿಡಿಯಲಿ, ಕೆಲಸಗಾರರು, ಉಪಕರಣ ಮತ್ತು ವಾಹನಗಳೆ ಅವರದ್ದೇ ಆಗಿರುತ್ತಿತ್ತು. ತಮ್ಮ ಗುತ್ತಿಗೆ ವೃತ್ತಿಗೆ ಸಾಂಸ್ಥಿಕ ಮತ್ತು ಉದ್ಯಮ ರೂಪ ನೀಡಲು ಇದು ಸಹಾಯಕವಾಯಿತು. ಆ ದಿನಗಳಲ್ಲಿ ಶೆಟ್ಟಿಯವರು ನಾನೂರಕ್ಕೂ ಹೆಚ್ಚಿನ ಲಾರಿಗಳನ್ನು ಹೊಂದಿದ್ದರು. ತಮ್ಮ ಹುಟ್ಟೂರಾದ ‘ಮುರ್ಡೇಶ್ವರ’ವನ್ನೇ ತಮ್ಮ ಸಂಸ್ಥೆಯ ಬ್ರಾಂಡ್ ನೇಮ್ ಆಗಿ ತೆಗೆದುಕೊಂಡ ಶೆಟ್ಟಿಯವರು, ಆ ಪುಟ್ಟ ಊರನ್ನು ಇಂದು ಕರ್ನಾಟಕದ ಭೂಪಟದಲ್ಲಿ ಪ್ರಮುಖ ಧಾರ್ಮಿಕ ಮತ್ತು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಿದ್ದೂ ಇನ್ನೊಂದು ಸಾಹಸಗಾಥೆ.

ತಾವೊಬ್ಬ ಯಶಸ್ವಿ ಗುತ್ತಿಗೆದಾರರಾಗಿ ಸ್ಥಾಪಿತವಾದ ಬಳಿಕ ಶೆಟ್ಟಿಯವರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಲಾರಂಭಿಸಿದರು. ಮುರ್ಡೇಶ್ವರದಿಂದ ಹುಬ್ಬಳ್ಳಿಗೆ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿದರು. ಜತೆಗೆ ಬೇರೆ ಬೇರೆ ಉದ್ಯಮಗಳತ್ತ ಕೈಹಾಕಿದರು. ಮುರ್ಡೇಶ್ವರ ಸಿರಾಮಿಕ್ಸ್, ನವೀನ ಟೈಲ್ಸ್, ಆರೆನ್ನೆಸ್ ಮೋಟಾರ್ಸ್, ಆರೆನ್ನೆಸ್ ಹೋಟೆಲ್ಸ, ಹಾಸ್ಪಿಟಲ್ .. ಹೀಗೆ ಬೇರೆ ಬೇರೆ ಕ್ಷೇತ್ರಗಳತ್ತ ಗಮನಹರಿಸಿದರು. ಶೆಟ್ಟಿಯವರು ಮುಟ್ಟಿದ್ದೆಲ್ಲವೂ ಚಿನ್ನವೇ.

ನಂತರ ಬೆಂಗಳೂರಿಗೂ ತಮ್ಮ ಸಾಮ್ರಾಜ್ಯ ವಿಸ್ತರಿಸಿದರು. ಮುರ್ಡೇಶ್ವರವನ್ನು ಅಂತಾರಾಷ್ಟ್ರೀಯ ದರ್ಜೆಯ ಪ್ರವಾಸಿ ತಾಣ ವಾಗಿ ಮಾಡಿದರು. ಅಂದು ಗಾಲ ಕೋರ್ಸ್ ಮಾಡಿದರು. ಅತಿ ಎತ್ತರದ ಈಶ್ವರನ ಪ್ರತಿಮೆಯನ್ನು ಸ್ಥಾಪಿಸಿದರು. ದೇವಾಲಯದ ಗೋಪುರವನ್ನು ಮುಗಿಲಿಗೆತ್ತರಿಸಿದರು. ಸಮುದ್ರದ ಮೇಲೆ ಹೋಟೆಲ್ ಕಟ್ಟಿದರು. ಮುರ್ಡೇಶ್ವರದ ಚಹರೆಯನ್ನೇ ಬದಲಿಸಿದರು.
೨೦೦೬ ರ ಒಂದು ದಿನ. ಒಂದು ದಿನ ಶೆಟ್ಟಿಯವರು ಅದೇ ಮುರ್ಡೇಶ್ವರದ ಹೋಟೆಲಿನಲ್ಲಿ ನನ್ನನ್ನು ಮಾತುಕತೆಗೆ ಕರೆದಿದ್ದರು.

ಆಗ ನಾನು ‘ವಿಜಯ ಕರ್ನಾಟಕ’ ಸಂಪಾದಕನಾಗಿದ್ದೆ. ಶೆಟ್ಟಿಯವರ ಜತೆ ಸ್ಥಳೀಯ ಪತ್ರಕರ್ತ ಹಾಗೂ ಅವರ ಆಪ್ತರಾದವರ ಜಿ.ಯು.ಭಟ್ ಸಹ ಇದ್ದರು. ‘ಭಟ್ರೇ, ಇಂದು ಒಂದು ವಿಶೇಷ ಪ್ರಸ್ತಾಪದೊಂದಿಗೆ ನಿಮ್ಮನ್ನು ಇಲ್ಲಿಗೆ ಆಹ್ವಾನಿಸಿದ್ದೇನೆ’ ಎಂದು ಪೀಠಿಕೆ ಹಾಕಿದರು. ನಾನು ಮುಂದಿನ ಅರ್ಧ ಗಂಟೆ ಅವರ ಮಾತುಗಳನ್ನು ಕೇಳಿಸಿಕೊಂಡೆ. ಮಧ್ಯೆ ಮಧ್ಯೆ ಜಿ.ಯು.ಭಟ್
ಸಹ ಮಾತಾಡುತ್ತಿದ್ದರು. ಅವರ ಮಾತಿನ ಮುಖ್ಯಾಂಶ ಇಷ್ಟೇ – ‘ನಾನೊಂದು ಕನ್ನಡ ದಿನಪತಿಕೆಯನ್ನು ಆರಂಭಿಸಬೇಕು
ಎಂದು ತೀರ್ಮಾನಿಸಿದ್ದೇನೆ. ವಿಜಯ ಕರ್ನಾಟಕವನ್ನು ಮೀರಿಸಬೇಕು. ನೀವೇ ಸಂಪಾದಕರಾಗಬೇಕು.

ಎಷ್ಟೇ ಹಣ ಖರ್ಚಾದರೂ ಆಗಲಿ. ನೀವು ಯಸ್ ಅಂದ್ರೆ ನನಗೆ ಒಂದು ತಿಂಗಳು ಅವಕಾಶ ಕೊಡಿ. ಪೂರ್ವ ಸಿದ್ಧತೆ ಮಾಡಿಕೊಳ್ಳು ತ್ತೇವೆ. ನಿಮಗೆ ಈಗ ಎಷ್ಟು ಸಂಬಳವಿದೆಯೋ ಅದಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಸಂಬಳ ಕೊಡುತ್ತೇನೆ. ನಿಮ್ಮ ನೇತೃತ್ವದಲ್ಲಿ ಪತ್ರಿಕೆ ಕಟ್ಟೋಣ. ಆಗಬಹುದಾ?’ ಅದಕ್ಕೆ ಜಿ.ಯು.ಭಟ್, ‘ಭಟ್ರು-ಶೆಟ್ರು ಒಳ್ಳೆಯ ಜೋಡಿ’ ಎಂದರು.

ಶೆಟ್ಟಿಯವರು ಬಹಳ ಜೋಶ್‌ನಲ್ಲಿದ್ದರು. ಆ ದಿನಗಳಲ್ಲಿ  ವಿಜಯ ಕರ್ನಾಟಕ’ ಮಾಡಿದ ಪವಾಡ ಅವರ ಮುಂದಿತ್ತು. ಅದನ್ನೂ ಮೀರಿಸುವ ಒಂದು ಪತ್ರಿಕೆಯನ್ನು ಕಟ್ಟುವ ಅದಮ್ಯ ಉತ್ಸಾಹ ಅವರಲ್ಲಿತ್ತು. ಅವರು ಹೇಳುವುದೆಲ್ಲವನ್ನೂ ಕೇಳಿಸಿಕೊಂಡೆ. ನಿಧಾನವಾಗಿ ಅವರ ಉತ್ಸಾಹಕ್ಕೆ ತಣ್ಣೀರನ್ನು ಎರಚಿದೆ. ಆದರೆ ಅವರ ಜೋಶ್ ಸ್ವಲ್ಪವೂ ಕಮ್ಮಿಯಾಗಲಿಲ್ಲ. ‘ನಾನಂತೂ ಪತ್ರಿಕೆ ಮಾಡಲೇಬೇಕು ಎಂದು ತೀರ್ಮಾನಿಸಿದ್ದೇನೆ, ಆದರೆ ನೀವಿರಬೇಕು. ನೀವು ನಮ್ಮ ಊರಿನವರು.

ನನಗೆ ಹತ್ತಿರದವರು. ಇಬ್ಬರ ಸ್ವಭಾವವೂ ಹೊಂದುತ್ತದೆ. ಈಗಲೇ ಏನನ್ನೂ ಹೇಳಬೇಡಿ. ಯೋಚಿಸಿ, ನಿಮ್ಮ ನಿರ್ಧಾರ ತಿಳಿಸಿ’ ಎಂದು ಹೇಳಿದರು. ಅದಾಗಿ ಹದಿನೆಂಟು ದಿನಗಳ ನಂತರ, ನಾನು ಮತ್ತು ಶೆಟ್ಟಿಯವರು ವಿಂಡ್ಸರ್ ಮ್ಯಾನರ್ ಹೋಟೆಲಿನಲ್ಲಿ
ಮಾತುಕತೆ ಮುಂದುವರಿಸಲು ಕುಳಿತುಕೊಂಡೆವು. ಆಗ ನಾನು ಶುರು ಹಚ್ಚಿಕೊಂಡೆ. ಪತ್ರಿಕೆ ಮಾಡುವ ಕಷ್ಟವನ್ನು ವಿವರಿಸಿದೆ. ವಿಜಯ ಕರ್ನಾಟಕವನ್ನು ಮೀರಿಸುವ ಸವಾಲುಗಳನ್ನು ಅವರಿಗೆ ಮನವರಿಕೆ ಮಾಡಿಕೊಟ್ಟೆ.

ಆದರೂ ಶೆಟ್ಟಿಯವರು ಜೋಶ್ ಕಳೆದುಕೊಂಡಿರಲಿಲ್ಲ. ಅವರನ್ನು ನಿರಾಸೆಗೊಳಿಸಿದೆ ಎಂದು ನನಗೆ ಅನಿಸುತ್ತಿತ್ತು. ‘ಭಟ್ಟರೇ,
ಇನ್ನೂ ಆರು ತಿಂಗಳು ಟೈಮ್ ಕೊಡ್ತೇನೆ. ನಿಮ್ಮ ನಿರ್ಧಾರ ತಿಳಿಸಿ. ನಾನಂತೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಆದರೆ ನೀವು ನನ್ನ ಜತೆಗಿರಬೇಕಷ್ಟೆ’ ಎಂದು ಹೇಳಿ ಎದ್ದರು. ಅದಾಗಿ ಎಂಟು ತಿಂಗಳ ನಂತರ, ಮಂಗಳೂರಿನಲ್ಲಿ ಶೆಟ್ಟಿಯವರು ಒಂದು ಮದುವೆಯಲ್ಲಿ ಸಿಕ್ಕಿದರು. ಆಗಲೂ ಅವರು ಇದನ್ನು ಮನಸ್ಸಿನಿಂದ ತೆಗೆದಿರಲಿಲ್ಲ. ನನ್ನ ನಿರುತ್ಸಾಹದಲ್ಲಿ ಅವರಿಗೆ ಉತ್ತರ ಸಿಕ್ಕಿತ್ತು. ಆದರೆ ಅದಾದ ನಂತರ, ಅನೇಕ ಸಂದರ್ಭಗಳಲ್ಲಿ ಸಿಕ್ಕಿದಾಗಲೆಲ್ಲ, ‘ನೀವು ನನ್ನ ಜತೆ ಕೈ ಜೋಡಿಸಲಿಲ್ಲ. ಸಿಕ್ಕಿದ್ದರೆ ಅದು ಬೇರೆ ಕತೆಯಾಗುತ್ತಿತ್ತು’ ಎಂದು ಹೇಳುತ್ತಿದ್ದರು.

ನಾನು ಅವರ ಜತೆ ಹೋಗಲಿಲ್ಲ ಎಂಬ ಸಣ್ಣ ಬೇಸರ ಅವರ ಒಳಮನಸ್ಸಿನಲ್ಲಿತ್ತು. ಆದರೆ ಇವೆ ನನ್ನ ಮತ್ತು ಅವರ ಸ್ನೇಹವನ್ನು ಸ್ವಲ್ಪವೂ ಬಾಧಿಸಲಿಲ್ಲ. ಎ ಸಿಕ್ಕರೂ ಹರಟೆ, ನಗು, ಕಾಫಿಗೆ ಮೋಸವಿರಲಿಲ್ಲ. ಸಂಘ – ಸಂಸ್ಥೆಗಳ ಮಿತ್ರರು ಹಣಕಾಸಿನ
ಸಹಾಯ ಅಪೇಕ್ಷಿಸಿ ಬಂದಾಗ, ನಾನು ಶೆಟ್ಟಿಯವರ ಹತ್ತಿರ ಕಳಿಸಿಕೊಟ್ಟಾಗ ಅವರೆಂದೂ ಇಲ್ಲ ಎಂದು ಹೇಳಿದವರಲ್ಲ.
ನಾನು ಯಾರನ್ನೇ ಕಳಿಸಿಕೊಟ್ಟರೂ, ನನ್ನ ನಿರೀಕ್ಷೆಗೂ ಮೀರಿ ಸಹಾಯ ಮಾಡುತ್ತಿದ್ದರು. ನನಗೆ ಗೊತ್ತಿದೆ, ಈ ಅನುಭವ
ಅನೇಕರಿಗೂ ಆಗಿರಲಿಕ್ಕೆ ಸಾಕು.

ಒಮ್ಮೆ ನನ್ನ ಸ್ನೇಹಿತರೊಬ್ಬರ ಮಗನಿಗೆ ವಿದೇಶ ವಿದ್ಯಾಭ್ಯಾಸಕ್ಕೆ ಶೆಟ್ಟಿಯವರು ಎರಡು ಲಕ್ಷ ರುಪಾಯಿ ನೀಡಿದ್ದರು. ಶಿರಸಿಯಲ್ಲಿ ಸ್ಥಾಪಿಸುವ ಹೆಗಡೆಯವರ ಪುತ್ಥಳಿಗೆ ಬೇಕಾದ ಸಕಲ ವೆಚ್ಚವನ್ನೂ ಭರಿಸುವಂತೆ ನಾನು ಅವರನ್ನು ವಿನಂತಿಸಿಕೊಂಡಾಗ, ಮರು ಮಾತಾಡದೇ ಒಪ್ಪಿಕೊಂಡು ಆ ಕೆಲಸ ನೆರವೇರಿಸಿದ್ದರು. ‘ರಾಜರಾಜೇಶ್ವರಿ ನಗರದಲ್ಲಿ ನಾನೊಂದು ಕ್ಯಾಂಪಸ್ ಮಾಡಿದ್ದೇನೆ. ಈ ಸಲ ನೀವೇ ಶೈಕ್ಷಣಿಕ ಚಟುವಟಿಕೆ ಆರಂಭಕ್ಕೆ ಮುಖ್ಯ ಅತಿಥಿಯಾಗಿ ಬರಬೇಕು’ ಎಂದು ಹೇಳಿದಾಗ, ನಾನು ಅಲ್ಲಿಗೆ ಹೋಗಿದ್ದೆ.

ಕಾಲೇಜಿನ ಪ್ರಿನ್ಸಿಪಾಲರು, ‘ಶೆಟ್ಟರು ಕಾಲೇಜಿನ ಎ ಕಾರ್ಯಕ್ರಮಗಳಿಗೆ ಬರುವುದಿಲ್ಲ. ಸಂತೋಷ ಹೆಗಡೆ ಯವರು ಬಂದಾಗ ಬಂದಿದ್ದರು. ಅದು ಬಿಟ್ಟರೆ ನಿಮ್ಮ ಜತೆಗೇ ವೇದಿಕೆ ಹಂಚಿಕೊಳ್ಳುತ್ತಿರುವುದು’ ಎಂದು ಹೇಳಿದ್ದರು. ಸುಮಾರು ಹತ್ತು ತಿಂಗಳ ಹಿಂದೆ, ಶೆಟ್ಟಿಯವರನ್ನು ಅವರ ಬೆಂಗಳೂರು ಆಫೀಸಿನಲ್ಲಿ ಭೇಟಿಯಾದಾಗ, ‘ಭಟ್ರೇ, ಈಗ ನೀವು ಶಿರಸಿಯಲ್ಲಿದ್ದೀರಾ? ಯಾವಾಗ ಬಂದಿರಿ?’ ಎಂದು ಕೇಳಿದರು. ನನಗೆ ಆಶ್ಚರ್ಯವಾಯಿತು. ಅವರ ಶ್ರವಣಶಕ್ತಿ ಮಂದವಾಗಿದ್ದು ಗೊತ್ತಿತ್ತು. ಅವರ ಸಹಾಯಕ ಮೆಲ್ಲಗೆ, ‘ಶೆಟ್ಟರಿಗೆ ನೆನಪು ಕೈಕೊಡುತ್ತಿದೆ.’ ಎಂದರು.

ಅವರ ಮಾತಿನಲ್ಲಿ ಹೊಂದಾಣಿಕೆಯಿರಲಿಲ್ಲ. ತಕ್ಷಣ ಸುಧಾರಿಸಿಕೊಂಡವರಂತೆ, ಏನನ್ನೋ ನೆನಪಿಸಿಕೊಂಡವರಂತೆ, ಮಾತು
ಮುಂದುವರಿಸುತ್ತಿದ್ದರು. ಆದರೆ ಅವರ ಮುಖದಲ್ಲಿ ತೇಜಸ್ಸು ಮಾತ್ರ ಹಾಗೆ ಇತ್ತು. ಮೊನ್ನೆ ಅವರ ಪಾರ್ಥಿವ ಶರೀರದ ಮುಂದೆ
ನಿಂತು ನಮಿಸಿ, ಭಾರವಾದ ಹೆಜ್ಜೆಗಳನ್ನಿಡುತ್ತಾ ಹೊರ ಬರುವಾಗ, ನಾಲ್ಕೆ ದು ಜನ ಮಾತಾಡಿಕೊಳ್ಳುತ್ತಿದ್ದರು, ‘ಪುಣ್ಯಾತ್ಮ.. ದೊಡ್ಡ ಮನುಷ್ಯ.. ಹತ್ತಾರು ಸಾವಿರ ಮಂದಿ ಬದುಕನ್ನು ಬೆಳಗಿದವರು.. ಅವರಿಂದಲೇ ನಾವು ಬದುಕು ಕಟ್ಟಿಕೊಂಡಿದ್ದು..
ಬದುಕು ಸಾರ್ಥಕ್ಯ, ಧನ್ಯತೆ ಪಡೆಯಲು ಇಷ್ಟು ಸಾಕು.