Thursday, 12th December 2024

ನದಿ ಜೋಡಣೆ: ಐತಿಹಾಸಿಕ ಪ್ರಮಾದವಾಗದಿರಲಿ

ಅಭಿಪ್ರಾಯ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ನೀರಾವರಿ ವಿಚಾರದಲ್ಲಿ ಸಾಕಷ್ಟು ರಾಜ್ಯಗಳು ಪಕ್ಕದ ರಾಜ್ಯಗಳೊಂದಿಗೆ ವಿವಾದದಲ್ಲಿ ತೊಡಗಿದ್ದು, ಕೇಂದ್ರ ಸರಕಾರದ ನದಿ ಜೋಡಣೆ ಯೋಜನೆಗಳಿಗೆ ತೆರೆ ಬೀಳಲೂಬಹುದು. ಐತಿಹಾಸಿಕ ಪ್ರಮಾದ ಆಗಲೂಬಹುದು. ಇದು ಭಾವನಾತ್ಮಕವಾದ ವಿಚಾರ.

ದೇಶದ ನದಿಗಳ ಜೋಡಣೆಯೆಂಬ ಪರಿಕಲ್ಪನೆ ತುಂಬಾ ಅಪ್ಯಾಯಮಾನವಾಗಿದ್ದರೂ, ವಿವಿಧ ಭಾಷೆಗಳ, ಗಡಿಗಳ ತಂಟೆ ತಕರಾರುಗಳ ಮಧ್ಯೆ ಅದರ ಪ್ರಾಯೋ ಗಿಕ ಅನುಷ್ಠಾನ ಸುಲಭವಲ್ಲ.

ಇಲ್ಲಿ ರಾಜಕೀಯವನ್ನು ಬದಿಗಿಡಬೇಕಾಗುತ್ತದೆ ಮತ್ತು ರಾಜಕೀಯ ಇಚ್ಛಾಶಕ್ತಿಯನ್ನು ಮೆರೆಯಬೇಕಾಗುತ್ತದೆ. ಸಾಧಕ, ಬಾಧಕಗಳನ್ನು ಬಹು ಎಚ್ಚರಿಕೆಯಿಂದ ನಿಭಾಯಿಸಿ ಸಾತ್ವಿಕವಾಗಿ ಒಪ್ಪಿಕೊಳ್ಳಬೇಕು. ಇದೀಗ ಈ ಯೋಜನೆಗೆ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿಸಿದೆ. ಕೇಂದ್ರ ಬಜೆಟ್ ಮಂಡನೆಯ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ ಅವರು ಮಹತ್ವದ ನದಿ ಜೋಡಣೆಯನ್ನು ಘೋಷಣೆ ಮಾಡಿದ್ದಾರೆ.

ಫಲಾನುಭವಿ ರಾಜ್ಯಗಳ ಸಮ್ಮತಿ ದೊರೆತ ಕೂಡಲೇ ಕೇಂದ್ರ ಸರಕಾರ ಯೋಜನೆಯ ಅನುಷ್ಠಾನಕ್ಕೆ ನೆರವು ನೀಡಲಿದೆ. ನೀರಾವರಿ ವಿಚಾರದಲ್ಲಿ ಸಾಕಷ್ಟು ರಾಜ್ಯಗಳು ಪಕ್ಕದ ರಾಜ್ಯಗಳೊಂದಿಗೆ ವಿವಾದದಲ್ಲಿ ತೊಡಗಿದ್ದು, ಕೇಂದ್ರ ಸರಕಾರದ ನದಿ ಜೋಡಣೆ ಯೋಜನೆಗಳಿಗೆ ತೆರೆ ಬೀಳಲೂಬಹುದು. ಐತಿಹಾಸಿಕ ಪ್ರಮಾದ ಆಗಲೂ ಬಹುದು. ಇದು ಭಾವನಾತ್ಮಕವಾದ ವಿಚಾರ. ಇದನ್ನು ಕೆಣಕಿದರೆ ರಕ್ತದ ಕೋಡಿಯೇ ಹರಿದೀತು. ರಕ್ತ ಕೊಟ್ಟೇವು ಆದರೆ ಒಂದು ಹನಿ ನೀರನ್ನೂ ಕೊಡುವುದಿಲ್ಲ ಎಂಬ ಮನಸ್ಥಿತಿ ಹೋಗಬೇಕು.

ಇದು ಕಷ್ಟದ ಕೆಲಸವೂ ಹೌದು. ನದಿ ಜೋಡಣೆ ಹಲವು ದಶಕಗಳ ಕನಸು. ಇದು ಸಾಕಾರವಾಗಬೇಕಾದರೆ ಪ್ರತಿ ಪ್ರಜೆಯಲ್ಲೂ ರಾಷ್ಟ್ರ ಪ್ರಜ್ಞೆ ಜಾಗೃತಗೊಳ್ಳ ಬೇಕು. ಎಲ್ಲ ನದಿಗಳೂ ದೇಶದ ಆಸ್ತಿ. ಒಂದು ಸೀಮೆ ಒಂದು ರಾಜ್ಯಕ್ಕೆ ಸೀಮಿತವಲ್ಲ. ಒಂದು ಪ್ರದೇಶ, ಒಂದು ರಾಜ್ಯ ಹರಿಯುವ ನದಿಯ ಎಲ್ಲಾ ಹಕ್ಕು ತಮ್ಮ ಜನ್ಮಸಿದ್ಧ ಹಕ್ಕು ಮತ್ತು ಆಸ್ತಿ ಎಂದು ಭಾವಿಸುವುದು ಬದಲಾಗಬೇಕು. ನಿಸರ್ಗದ ಸಂಪತ್ತು ಎಲ್ಲರಿಗೂ ಹಂಚಿಕೆ ಯಾಗಬೇಕು ಎಂಬ ಭಾವನೆ ಮೂಡಬೇಕು. ಆದರೆ ಹಲವು ರಾಜ್ಯಗಳಲ್ಲಿ ಈ ವಿಷಯವೇ ತಕಾರರಿನ ಪ್ರಮುಖ ಅಧ್ಯಾಯವಾಗಿದೆ. ಜನರಲ್ಲಿ ರಾಷ್ಟ್ರಪ್ರಜ್ಞೆ ಮೂಡಬೇಕು. ವಿರೋಧಕ್ಕಾಗಿ ವಿರೋಧಿಸುವವರ ತಂಡ ಮತ್ತು ಅವರಿಗೆ ಸಾಕಷ್ಟು ಹಿಂಬಾಲಕರಿರುವವರೆಗೆ ಇದು ಸಾಧ್ಯವೇ?

ನದಿ ಜೋಡಣೆ ಕಾರ್ಯಕ್ರಮದಲ್ಲಿ ಪ್ರಾರಂಭದಲ್ಲಿ ಈ ಹಿಂದೆ ಹಿಮಾಲಯ ಕಣಿವೆಯಲ್ಲಿ 14, ದಕ್ಷಿಣದಲ್ಲಿ 16, ಮತ್ತು ಅಂತಾರಾಜ್ಯಗಳಲ್ಲಿ 37 ಯೋಜನೆಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿತ್ತು. ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೀರಿನ ಸಮರ್ಪಕ ಬಳಕೆಗೆ ನದಿಗಳ ಜೋಡಣೆ ಉಪಯುಕ್ತ. ಹಲವು ಕಡೆ ಈ
ನಿಟ್ಟಿನಲ್ಲಿ ಸಮೀಕ್ಷೆಗಳು ನಡೆದಿವೆ. ಸಾಧಕ ಬಾಧಕಗಳ ಬಗ್ಗೆ ಈ ಹಿಂದೆಯೇ ಸಾರ್ವಜನಿಕವಾಗಿ ಬಹು ವಿಧದಲ್ಲಿ ಚರ್ಚೆ ನಡೆದಿತ್ತು. ಆಗಾಧ ಪ್ರಮಾಣದ ನೀರು ಹೊಂದಿರುವ ನದಿಗಳನ್ನು ನೀರಿನ ಅಭಾವ ಎದುರಿಸುತ್ತಿರುವ ನದಿಗಳ ಜತೆಗೆ ಸಂಪರ್ಕಿಸುವ ಮಹತ್ವಾಕಾಂಕ್ಷಿ ಯೋಜನೆ ಇದು.

ನದಿಗಳ ಜೋಡಣೆಯಿಂದ ಪ್ರವಾಹವನ್ನು ತಡೆಯಬಹುದು ಎಂಬ ಅಭಿಪ್ರಾಯವೂ ಇದೆ. ಇನ್ನೊಂದು ತಂಡ ನಿಸರ್ಗಕ್ಕೆ ವಿರುದ್ಧವಾಗಿರುವ ಯೋಜನೆಯಂದ
ಪರಿಸರದ ಅಸಮತೋಲನ ಉಂಟಾಗಿ ಹೊಸ ಸಮಸ್ಯೆ ಸೃಷ್ಟಿಯಾಗಬಹುದು, ಸಮುದ್ರದ ನೀರಿನ ಉಷ್ಣಾಂಶ ಅಧಿಕಗೊಳ್ಳುವ ಅಪಾಯವೂ ಇದೆ ಎಂದು ಹೇಳಲಾಗಿದೆ. ಪರಿಸರವಾದಿಗಳು ನದಿಜೋಡಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ವಲ್ಪ ಮಟ್ಟಿಗೆ ಇದರಿಂದ ಪ್ರಕೃತಿ ನಾಶದ ಗಂಡಾಂತರ ಇರದೇ ಇರಲಾರದು. ಪರಿಸರ ಅಸಮತೋಲನದಿಂದ ಕಳೆದ ವರ್ಷ ಕೆಲವು ರಾಜ್ಯಗಳು ಪ್ರವಾಹದಿಂದ ತತ್ತರಿಸಿ ಹೋದವು. ಇದಕ್ಕೆ ಜಲಾಶಯ ನಿರ್ಮಾಣ ಕಾರಣ ವೆಂದು ಕೆಲವರು ಆಡಿಕೊಂಡರು. ಇದಕ್ಕೆಲ್ಲ ಪರಿಹಾರ ಮುಕ್ತ ಚರ್ಚೆ, ನದಿ ಜೋಡಣೆ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ಮುನ್ನೆಚ್ಚರಿಕೆ ಮತ್ತು ಅಧ್ಯಯನ ಕೈಗೊಂಡು ಮುಂದುವರಿಯಬೇಕು.

ಇಲ್ಲವಾದಲ್ಲಿ ಐತಿಹಾಸಿಕ ಪ್ರಮಾದಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಗಂಗಾ, ಬ್ರಹ್ಮಪುತ್ರಾ, ಮೇಘನಾ ನದಿ ಜೋಡಣೆ ಮೊದಲ ಯೋಜನೆಯಾಗಿತ್ತು. ಅದೇ ರೀತಿ ಅಲಮಟ್ಟಿ, ಪನ್ನಾರ್, ಮಹಾನದಿ-ಗೋದಾವರಿ, ಶ್ರೀಶೈಲಂ-ಪೆನ್ನಾರ್, ನೇತ್ರಾವತಿ-ಹೇಮಾವತಿ, ಬೇಡ್ತಿ-ವರದಾ ಜೋಡಣೆಗಳು ಕಡತದಲ್ಲಿವೆಯಂತೆ. 19ನೆಯ ಶತಮಾನದಲ್ಲಿಯೇ ಪ್ರಖ್ಯಾತ ಎಂಜಿನಿಯರ್‌ಗಳ ತಂಡ ನದಿಗಳ ಜೋಡಣೆಯ ಬಗ್ಗೆ ಚಿಂತನೆ ನಡೆಸಿದ್ದರಂತೆ.

ಹಿಮಾಲಯದಲ್ಲಿ ಹುಟ್ಟುವ ನದಿಗಳ ನೀರನ್ನು ದಕ್ಷಿಣಕ್ಕೆ ಹೋಗುವಂತೆ ಮಾಡಬೇಕೆಂಬುದೇ ಇದರ ಗುರಿಯಾಗಿತ್ತಂತೆ. ಗಂಗಾ ಮತ್ತು ಬ್ರಹ್ಮಪುತ್ರಾ ನದಿಗಳ ನೀರನ್ನು ದಕ್ಷಿಣಕ್ಕೆ ತರಬೇಕೆಂಬುದು ಇದರ ಗುರಿ. ಇದರಿಂದ ಜಲಸಾರಿಗೆ ಉತ್ತಮಗೊಳ್ಳುತ್ತದೆಂಬುದು ಆಕಾಂಕ್ಷೆಯಾಗಿತ್ತು. 2002ರಲ್ಲಿ ಈ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಚರ್ಚೆ ನಡೆದ ವಿಚಾರ ಬಹಿರಂಗವಾಗಿ ಪ್ರಚಾರವಾಗಿತ್ತು. ಈ ನಿರ್ಣಯಕ್ಕೆ ರಾಜಕೀಯ ತೀರ್ಮಾನದ ಅಗತ್ಯವೆಂದು ತೀರ್ಪು ಕೊಟ್ಟಿರಲಿಲ್ಲ. ವಾಜಪೇಯಿ, ಕರುಣಾನಿಧಿ ಈ ಯೋಜನೆಗೆ ಪರವಾಗಿದ್ದರಂತೆ. ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅಧ್ಯಯನ ನಡೆಸಿ ಒಲವು ತೋರಿದುದರ ಬಗ್ಗೆ
ಪ್ರಕಟವಾಗಿತ್ತು.

ದೇಶಲ್ಲಿ 4 ತಿಂಗಳು ಮಳೆಯಾಗುತ್ತದೆ. ನಮ್ಮ ಮಣ್ಣಿಗೆ 4 ತಿಂಗಳು ನೀರನ್ನು ತಡೆಯುವ ಶಕ್ತಿ ಇದೆ. ಶೇ. 50 ಬೇಸಾಯ ಮಳೆ ನೀರನ್ನು ಅವಲಂಬಿಸಿದೆ. 20 ದಶಲಕ್ಷ ಕೊಳವೆ ಬಾವಿಗಳಿವೆ. ನದಿಗಳ ಜೋಡಣೆಯಿಂದ 35 ದಶಲಕ್ಷ ಹೆಕ್ಟೇರ್ ಹೊಸ ಭೂಮಿ ನೀರಾವರಿಗೆ ಒಳಪಡಲಿದೆ. 40 ಸಾವಿರ ಮೆಗಾವ್ಯಾಟ್ ಜಲ ವಿದ್ಯುತ್ ಪಡೆಯಬಹುದು. ಸಮುದ್ರದ ಮುಖಜ ಭೂಮಿಯಲ್ಲಿ ಸಿಹಿನೀರು ಉಪ್ಪು ನೀರಾಗುವುದನ್ನು ತಪ್ಪಿಸುವುದೇ ಮುಕ್ತ ಚರ್ಚೆಯ ವಿಚಾರ. ಇದೀಗ ಕೆನ್‌ಬೆಟ್ಟು ಯೋಜನೆ ಚಾಲ್ತಿಯಲ್ಲಿದ್ದು ರಾಜ್ಯಗಳ ಸಮ್ಮತಿ ಬಳಿಕ ಉಳಿದ ಯೋಜನೆಗಳು ಜಾರಿಯಾಗಲಿವೆ. ಕೃಷಿ ಪ್ರದೇಶದ ವಿಸ್ತರಣೆ, ನೀರಿನ ಲಭ್ಯತೆ ಹೆಚ್ಚಳ, ನೀರಿನ ಸದ್ಬಳಕೆ, ಅಂತರ್ಜಲ ಮರುಪೂರಣ ಮತ್ತು ವರ್ಷವಿಡೀ ಕುಡಿಯುವ ನೀರು ಪೂರೈಸುವ ನದಿ ಜೋಡನೆಯ ಯೋಜನೆಗಳನ್ನು ತ್ವರಿತಗತಿಯಲ್ಲಿ ಜಾರಿಗೆ ತರಲು ಬದ್ಧವಾಗಿರುವುದಾಗಿ ಕೇಂದ್ರ ಸರಕಾರ ಹೇಳಿದೆ.

ಗಂಗಾ ನದಿಯ ಬಳಿಕ ಅತೀ ಉದ್ದದ ನದಿ ಎಂದೆನಿಸಿಕೊಂಡ ಗೋದಾವರಿಯನ್ನು ಕೃಷ್ಣಾ ಜತೆ, ಕೃಷ್ಣಾವನ್ನು ಪೆನ್ನಾರ್ ಜತೆ ಜೋಡಣೆಯಾಗಲಿದೆ. ಧಮನ್ ಗಂಗಾ-ಪಿಂಜಾಲ್, ಪರ್ ತಾಸಿ-ನರ್ಮದಾ, ಗೋದಾವರಿ-ಕೃಷ್ಣಾ, ಕೃಷ್ಣಾ-ಪೆನ್ನಾರ್ ಮತ್ತು ಪೆನ್ನಾರ್-ಕಾವೇರಿ ನದಿ ಜೋಡಣೆಯ ವಿಸತ ವರದಿ ಈಗಾಗಲೇ ಸಿದ್ಧವಾಗಿದೆ. ಈ ಯೋಜನೆಯ ವ್ಯಾಪ್ತಿಗೆ ಒಳಬರುವ ರಾಜ್ಯಗಳ ನಡುವೆ ಸಹಮತ ಮೂಡಿದ ಬಳಿಕ ಆಶ್ವಾಸನೆ ನೀಡಲಾಗುವುದು. ಕಾವೇರಿ-ಕೃಷ್ಣಾ ಜತೆ ಇದೀಗ ದೊಡ್ಡ ಹೋರಾಟವೇ ನಡೆಯುತ್ತಿದೆ. ಈ ಯೋಜನೆಗಳಿಗೆ ಆಗಾಧ ಸಂಪನ್ಮೂಲಗಳ ಜತೆಗೆ ರಾಜಕೀಯ ಇಚ್ಛಾಶಕ್ತಿ ಮತ್ತು ಎಲ್ಲರಲ್ಲೂ ರಾಷ್ಟ್ರಪ್ರಜ್ಞೆ
ಜಾಗೃತಗೊಳ್ಳಬೇಕು.

(ಲೇಖಕರು: ವಿಜಯಾ ಬ್ಯಾಂಕ್‌ನ ನಿವೃತ್ತ ಮುಖ್ಯ ಪ್ರಬಂಧಕರು ಮತ್ತು ಸಂದರ್ಶಕ ಪ್ರಾಧ್ಯಾಪಕರು)