Monday, 25th November 2024

ಬಿಟ್ಟಿಳಿಯುತ ಬಿಟ್ಟಾಳೇ ಚಾಮುಂಡಿ !

ರಾವ್ ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ನನ್ನ ಹುಟ್ಟೂರಾದ ಬೆಂಗಳೂರಿಗೆ ಹಿಂತಿರುಗುವ ತವಕ ಹೆಚ್ಚಾಗುತ್ತಿದೆ. ಘರ್ ವಾಪಸಿಯಾದರೆ, ಅಲ್ಲಿನ ಹೊಸಕೆರೆಹಳ್ಳಿಯಲ್ಲಿ ಬೆಟ್ಟದ ಮೇಲೆ ಟಾಟಾ ಕಂಪನಿ ನಿರ್ಮಿಸಿರುವ ವಸತಿ ಸಮುಚ್ಚಯದಲ್ಲಿ ನೆಲೆ ಕಂಡುಕೊಳ್ಳುವ ಮನಸ್ಸಿದೆ.

ಬೆಟ್ಟದ ಮೇಲೊಂದು ಫ್ಲಾಟ್ ಕೊಂಡು, ಮೃಗಗಳಿಗಂಜುವ ಪರಿಸ್ಥಿತಿ ಬರಲಾರದೆಂಬ ವಿಶ್ವಾಸ. ಕಾಂಕ್ರೀಟ್ ಕಾಡಿನಲ್ಲಿರುವ ಮೃಗಗಳೇ ಬೇರೆ. ಉರ್ದು ಬಾರದಿರುವುದಕ್ಕೆ ನಾನು ಅಪಾಯದಿಂದ ದೂರವಿರಬಯಸುವ ಉಪಾಯವಿದೆಂದು ಕುಹಕಿಗಳು ಆಡಿಕೊಂಡರೇನಂತೆ!

ಮೃಗಗಳ ಸ್ವರೂಪ ಯಾವುದೇ ಇರಲಿ, ಅಪಾಯವಿರದ ಉದ್ಯೋಗವೇ ಇಲ್ಲ. ಕೋಟ್ಯಂತರ ಹಣಗಳಿಸುವ ಸಿನೆಮಾ ತಾರೆಯರಿಗೂ ಅದು ತಪ್ಪಿದ್ದಲ್ಲ. ವಿಶ್ವಾದ್ಯಂತ ಎದ್ದ ಮಿಟೂ ಅಲೆಯಲ್ಲಿ ನನಗೂ ಆಯಿತು, ನನಗೂ ಹಾಗೇ ಆಯಿತು ಎಂದು ಅನೇಕ ಸಂತ್ರಸ್ತರ, ಸಂತ್ರಸ್ತರೆನ್ನಲಾದ, ಸಂತ್ರಸ್ತರಾಗಬಯಸಿದ ದನಿಗಳು ಕೇಳಿಬಂದವು.

ಅಂತಹ ಆರೋಪವನ್ನೆದುರಿಸಿದ ಪುರುಷರಲ್ಲೂ ಕೆಲವರು ದೊಡ್ಡ ಪ್ರಮಾಣದ ಬೆಲೆ ತೆತ್ತರು, ಮತ್ತೆ ಕೆಲವರ ವಿರುದ್ಧ ಆರೋಪ ಆರೋಪ ವಾಗಿಯೇ ಉಳಿಯಿತು. ಆದರೆ ಇಮೇಜಿಗೆ ಧಕ್ಕೆಯಾಯಿತು. ಇಮೇಜನ್ನು ಹಾನಿ ಮಾಡಿಕೊಂಡವರಲ್ಲಿ ಆರೋಪವನ್ನು ಸಾಬೀತು ಗೊಳಿಸಲಾಗದ ಕೆಲವು ಲಲನಾಮಣಿಗಳೂ ಇದ್ದಾರೆ.

ಮಿಟೂ ಪ್ರಕರಣಗಳು ಚಿತ್ರರಂಗದ ಹೆಚ್ಚು. ಬೆಟ್ಟದ ಮೇಲೆ ಮನೆ ಮಾಡಿ ಮೃಗಗಳಿಗೆ ಹೆದರಲಾರದು ಎಂಬಂತೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಮೃಗಂಗಳಿಗಂಜಿ ದೊಡೆಂತಯ್ಯ! ಮಿಟೂ ಭಯಕ್ಕೆ ಲಿಂಗಭೇದವಿಲ್ಲ – ಪುರುಷರಿಗೂ ಆರೋಪಕ್ಕೆ ಗುರಿಯಾಗುವ ಭಯ ಕಾಡಿರ ಲಿಕ್ಕೂ ಸಾಕು. ಒಮ್ಮೆ ಆರೋಪಕ್ಕೆ ಗುರಿಯಾಗುವ ಪುರುಷನನ್ನು ಆರೋಪದ ಛಾಯೆ ಜನ್ಮಕ್ಕಂಟಿದ ರೋಗದಂತೆ ಬಾಧಿಸುತ್ತದೆ.

ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಅಭೂತಪೂರ್ವ ಯಶಸ್ಸಿನ ನೆಪದಲ್ಲಿ ಅದರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಟಿ ತನುಶ್ರೀ ದತ್ತಾರನ್ನು ಮಿಟೂಗೆ ಸಿಲುಕಿಸಿದ್ದರೆಂಬ ಆರೋಪವನ್ನು ಮಾಧ್ಯಮ ಕೆದಕಿತು. ವ್ಯಕ್ತಿಯೊಬ್ಬನ ಚಾರಿತ್ರ್ಯ ಮಾಧ್ಯಮಕ್ಕೆ ನೆನಪಾಗುವುದೇ ಆ ವ್ಯಕ್ತಿ ಪ್ರಸಿದ್ಧಿ ಗಳಿಸಿದಾಗ.

ಆತ/ಆಕೆ ಖ್ಯಾತಿಗೆ ಭಾಜನರಲ್ಲ ಅಥವಾ ಖ್ಯಾತಿ ಗಳಿಸಿದ ವ್ಯಕ್ತಿಯ ಊಟದಲ್ಲೂ ಉಪ್ಪು-ಖಾರ-ಹುಳಿ ಇರುತ್ತದೆ ಎಂಬುದನ್ನು ಸಮಾಜಕ್ಕೆ ತಿಳಿಸಿಕೊಡುವ ಉತ್ಕಟ ಬಯಕೆ ಮಾಧ್ಯಮಕ್ಕೆ ಕಾಡುವುದೇ ಅವರ ಶೇಯಸ್ಸು ಅಭ್ಯುದಯವನ್ನು ಕಂಡಾಗ. ಇರಲಿ, ವಿವೇಕ್ ಮೇಲೆ ಆ ಮಾಜಿ ಮಿಸ್ ಇಂಡಿಯಾ ಹೊರಿಸಿದ ಆರೋಪ ನಿಲ್ಲಲಿಲ್ಲ. ವಾಸ್ತವದಲ್ಲಿ, ಮಿಟೂ ಪ್ರಕರಣಗಳಿಂದ ಚಿತ್ರಗಳಲ್ಲಿ ಅಭಿನಯಕ್ಕಾಗಿ ಅವಕಾಶ ಗಿಟ್ಟಿಸಿಕೊಳ್ಳಲು ರೂಪವತಿಯರು ತವಕಿಸುವುದು ಕಡಿಮೆಯೇನಾಗಿಲ್ಲ. ಭೀಕರ ಅಪಘಾತವಾದ ಕಾರಣಕ್ಕೆ ವಾಹನಗಳ ಮಾರಾಟವೇನು ಕುಸಿಯುವುದಿಲ್ಲ.

ಮಾನಸಿಕವಾಗಿ ಘಾಸಿಗೊಳಿಸುವಂಥ ಮಿಟೂ ಪ್ರಕರಣಗಳು ಚಿತ್ರೀಕರಣದಲ್ಲಿ ನಡೆಯುತ್ತಲೇ ಇರುತ್ತವೆಂಬುದು ತಿಳಿದ ವಿಷಯವೇ. ಅಪರೂಪಕ್ಕೆ, ಬೆಂಗಳೂರಿನಲ್ಲಿ ಇಟಟ್ಝಜಿಛಿ ಚಿತ್ರ ನಿರ್ಮಾಣಗೊಳ್ಳುವಾಗ ಮೇರುನಟ ಅಮಿತಾಭ್ ಬಚ್ಚನ್‌ಗೆ ದೈಹಿಕವಾಗಿಯೂ ಪೆಟ್ಟು ಬಿದ್ದು ಅವರು ಉಳಿದದ್ದೇ ಹೆಚ್ಚು. ಕೂಲಿ ಚಿತ್ರಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶೂಟಿಂಗ್ ನಡೆಯುತ್ತಿತ್ತು.

ದಿ ಫೈಲ್ಸ್ ಚಿತ್ರದಲ್ಲಿ ಡಿಜಿಪಿ ಪಾತ್ರ ದಲ್ಲಿ ಕಾಣಿಸಿಕೊಂಡ ಪುನೀತ್ ಇಸ್ಸಾರ್ ಕೂಲಿಯಲ್ಲಿ ಖಳನಾಯಕ. ಅಮಿತಾಭ್‌ರೊಂದಿಗೆ ಸೆಣಸುವ ದೃಶ್ಯ. ಕರಾಟೆ ಪಟುವೂ ಆದ ಇಸ್ಸಾರ್ ಅಮಿತಾಭ್‌ಗೆ ಹೊಡೆಯುವಂತೆ ನಟಿಸಬೇಕಾಗಿತ್ತು, ಆದರೆ ಹೊಡೆದೇ ಬಿಟ್ಟರು. ಆಯತಪ್ಪಿದ
ನಾಯಕ ನಟ ಅಮಿತಾಭ್ ಕಬ್ಬಿಣದ ಮೇಜಿನ ಮೇಲೆ ಹಾರುವುದಿತ್ತು, ನಿಜವಾದ ಪೆಟ್ಟು ತಿಂದು ಆಯ ತಪ್ಪಿದ್ದರಿಂದ ಮೇಜಿನ ಮೂಲೆ ಪಕ್ಕೆಗೆ ತಿವಿದು ಮಾರಣಾಂತಿಕವಾಗಿ ಪೆಟ್ಟು ತಿಂದರು. ದೇಶಾದ್ಯಂತ ರಾರಾಜಿಸುತ್ತಿದ್ದ ಸೂಪರ್ ಸ್ಟಾರ್‌ಗೆ ಹೊಡೆದದ್ದಕ್ಕಾಗಿ ಇಸ್ಸಾರ್‌ಗೆ ಸಿಗಬೇಕಿದ್ದ ಮತ್ತಷ್ಟು ಅವಕಾಶಗಳು ಕೈತಪ್ಪಿಹೋದವು. ತೆರೆಯ ಮೇಲಿನ ಖಳನಾಯಕ ನಿಜ ಜೀವನದಲ್ಲೂ ಖಳನಾಯಕನಾಗಿ ಪರಿಗಣಿ ಸಲ್ಪಟ್ಟಿದ್ದ.

ಸತ್ತೇ ಹೋದರೆಂದು ನಂಬಲಾಗಿದ್ದ ಅಮಿತಾಭ್ ಪವಾಡಸದೃಶರಾಗಿ ಗುಣವಾದರು. ಉದ್ದೇಶ ಪೂರ್ವಕವಾಗಿ ಹೊಡೆಯದಿದ್ದರೂ, ಅವರಲ್ಲಿ ಇಸ್ಸಾರ್ ಕ್ಷಮೆ ಕೋರಿದರು. ವಿಶಾಲ ಹೃದಯದ ಅಮಿತಾಭ್ ತಾವೂ ಒಮ್ಮೆ ಸಹನಟ ವಿನೋದ್ ಖನ್ನಾಗೆ ನಿಯಂತ್ರಣತಪ್ಪಿ ಹೊಡೆದು, ಗಾಯಗೊಂಡ ಖನ್ನಾ ಹೊಲಿಗೆ ಹಾಕಿಸಿಕೊಳ್ಳಬೇಕಾದ ಪ್ರಸಂಗವನ್ನು ನೆನೆದರು. ಚಿತ್ರೀಕರಣದ ಸಂದರ್ಭದಲ್ಲಿ ಹೊಡೆಯು ವಾಗ- ಅದು ಹೊಡೆಯುವಾಗ ಅಲ್ಲ, ಹೊಡೆದಂತೆ ಮಾಡುವಾಗ- ನಿಯಂತ್ರಣ ತಪ್ಪಬಲ್ಲರಾದರೆ ಪ್ರೀತಿಸುವಾಗಲೂ- ಪ್ರೀತಿಸುವಾಗ ಅಲ್ಲ ಪ್ರೀತಿಸುವಂತೆ ನಟಿಸುವಾಗಲೂ ಎಚ್ಚರ ತಪ್ಪಿ ನಿಜವಾಗಿಯೂ ಪ್ರೀತಿಸಿಬಿಟ್ಟರೆ ಹೇಗೆ.

ಹೊಡೆದಾಟದ ದೃಶ್ಯದದರೋ, ಹೊಡೆದವನು ಹೊಡೆದಂತೆ ಮಾಡುವುದು, ಹೊಡೆಸಿಕೊಂಡವನು(ಳು) ಪ್ರತಿಯಾಗಿ ಹೊಡೆದಂತೆ ಮಾಡುವುದೋ, ಸತ್ತಂತೆ ನಟಿಸುವುದೋ (ಅಥವಾ ಅತ್ತಂತೆ ತೋರುವುದೋ) ನಿರೀಕ್ಷಿತವೇ. ಪ್ರೀತಿಸುವ ದೃಶ್ಯಾವಳಿಯಲ್ಲಿ, ಪ್ರೀತಿಸ ಲ್ಪಟ್ಟವರು ಪ್ರತಿಪ್ರೀತಿಸಿದಂತೆ ಅಭಿನಯಿಸುವುದು ಅಥವಾ ಪ್ರೀತಿಯನ್ನು ನಿರಾಕರಿಸಿದಂತೆ ನಟಿಸುವುದು ಬಹುತೇಕ ಚಿತ್ರಗಳಲ್ಲಿ ಕಂಡುಬರುವಂಥದ್ದು. ಬಹುತೇಕ ಎ ಸಿನೆಮಾ ನಟನಟಿಯರೂ ಸುಂದರಸುಂದರಿಯರೇ.

(ಚಿತ್ರದ ಕಥೆಗನುಸಾರವಾಗಿ) ಪ್ರೇಮದ ಪಾಶಕ್ಕೆ ಕಾರ್ಯ ನಿಮಿತ್ತವಾಗಿರುವಾಗಲೇ ಸಿಲುಕಲು ಅವಕಾಶ ನೀಡುವ ಅಪರೂಪದ ವೃತ್ತಿ ಸಿನೆಮಾ ಉದ್ಯಮ. ಸೌಂದರ್ಯ ರಾಶಿಯ ಬಿದ್ದು ಹೊರಳಾಡುವಾಗಲೂ ಇದು ನಿಜಜೀವನವೇ ಹೌದೋ, ಅಥವಾ ಕಾಣುವ ನಿರ್ಮಾಪಕ ನಿಗೋ/ನಿರ್ದೇಶಕನಿಗೋ ಅಥವಾ ಕಾಣದ ಪ್ರೇಕ್ಷಕನಿಗೋ ಒದಗಿಸಬೇಕಾದ ಅತಿ ತಾತ್ಕಾಲಿಕ ಪ್ರಣಯ ಫಲನವೋ ಎಂಬ ಗೊಂದಲ ಮೂಡಿಸಬಲ್ಲ ಏರ್ಪಾಡು ಇಲ್ಲಷ್ಟೇ ಸಾಧ್ಯ.

ಅಭಿನಯವೆಂದರೆ, ಆಯಾ ಪಾತ್ರವನ್ನು ಪ್ರವೇಶಿಸುವುದು. ಪ್ರೇಮಿಯ ಪಾತ್ರವಹಿಸುವುದೆಂದರೆ ಪ್ರೇಮಿಯೇ ಆಗಿ ಬಿಡುವುದು. ಪ್ರೇಮಿಯೇ ಆಗಿಬಿಡುವ ಪ್ರಯತ್ನ ಮಿಟೂ ಆರೋಪದ ಕುಣಿಕೆಗೆ ಕತ್ತು ಒಡ್ಡಿದಂತೆ. ಸಂಭವನೀಯ ಆರೋಪದ ಭಯ ಸಮರ್ಥ ಪ್ರೇಮಿ ಯಾಗಬಿಡದು. ಒಳದನಿ ಎಚ್ಚರದ ಗಂಟೆಯನ್ನು ಮೊಳಗಿಸುತ್ತಲೇ ಇರುತ್ತದೆ. ಏಕಾಗ್ರತೆಯನ್ನು ಭಂಗಗೊಳಿಸುವ, ಬೇರಾರಿಗೂ ಕೇಳದ (ಒಳ)ಕಿವಿಗಡಚಿಕ್ಕುವ ಸದ್ದದು. ಆ ಸದ್ದಿನಿಂದ ವಿಚಲಿತವಾದ ಮನಸ್ಸು ದೊರೆತ ಪ್ರೇಮಿಯ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯವೇ? ಅಂಟಿಯೂ ಅಂಟದಂತಿರಲು ಅದು ನೀರಿನ ಮೇಲಿನ ಕಮಲವೇ ಆಗಿರಬೇಕು ಅಥವಾ ನಾನ್-ಸ್ಟಿಕ್ ತವದಲ್ಲಿ ಹರಡಿದ ದೋಸೆಯೇ ಆಗಿರಬೇಕು.

ನಾಯಕ ನಟಿಯ ಬಾಹುಬಂಧನಕ್ಕೆ ಸಿಕ್ಕ (ಸಿಲುಕಿದಂತೆ ಕಾಣುವ) ನಟ ಆಕೆಯನ್ನು ಪ್ರತಿ-ಬಂಧಿಸಿದಂತೆ ನಟಿಸಬಲ್ಲನಷ್ಟೇ ಹೊರತು
ಪ್ರೇಮಿಯಾಗಲಾರ. ಒಂದು ವೇಳೆ, ನೈಜ ಅಭಿನಯದ ಒತ್ತಡದ ಪರಾಕಾಷ್ಠೆಯಲ್ಲಿ ಮೈಮರೆತು ಸಮರ್ಥ ಪ್ರೇಮಿಯಾಗಹೊರಟರೆ ಮಿಟೂ ಆರೋಪ ಶತಃಸ್ಸಿದ್ಧ. ಆತ ಪ್ರೇಮಿಯಾದರಷ್ಟೇ ಅವನ ಅಭಿನಯ ಸೃಜಿಸುವ ರಸ ಕಲಾಭಿಮಾನಿ ಪ್ರೇಕ್ಷಕರತ್ತ ಹರಿಯುವುದು. ಮಿ-ಟೂ ಆತಂಕ ಆ ರಸವನ್ನು ಬತ್ತಿಸಿಬಿಟ್ಟಿದೆ. ಚಲನ ಚಿತ್ರಗಳನ್ನು ಮಿಟೂ ಪೂರ್ವ ಹಾಗೂ ಉತ್ತರ ಮಿಟೂ ಎಂದು ವಿಂಗಡಿಸಿದ್ದೇ ಆದಲ್ಲಿ, ಹಿಂದಿನ ಹಾಗೂ ಇಂದಿನ ನಾಯಕ ನಟರ ಅಭಿನಯದಲ್ಲಿ ಗಣನೀಯ ವ್ಯತ್ಯಾಸವನ್ನು ಕಾಣಬಹುದೇನೊ!

ಒಬ್ಬನೇ ನಟ ಮಿಟೂ ನಂತರದಲ್ಲಿ (ಪ್ರೇಮಪ್ರಮುಖ ದೃಶ್ಯಗಳಲ್ಲಿ) ತಡೆದೋ ಹಿಡಿದೋ ನಟಿಸುವಂತೆ ಕಂಡು ಬರತೊಡಗಿದ್ದರೆ ಅದು
ಅವನ ತಪ್ಪಲ್ಲ. ರಸಭಂಗವಾದರೂ ಸರಿ, ಇಲ್ಲಿ ವಾಟಾಳ್ ನಾಗರಾಜರನ್ನು ಪ್ರಸ್ತಾಪಿಸಿಯೇ ಬಿಡುತ್ತೇನೆ. ನಾಡನ್ನು ಕಿತ್ತು ತಿನ್ನುವ ಅದೆಂತಹ ಸಮಸ್ಯೆಯೇ ಆದರೂ ನಾಗರಾಜರು ಎಂಟ್ರಿ ಕೊಡಲಿಲ್ಲವೆಂದರೆ ಅದು ಸಮಸ್ಯೆಯೇ ಅಲ್ಲ. ಅವರು ಪ್ರತಿಭಟನೆ ಮಾಡಿದ ರೆಂದರೆ ಸಮಸ್ಯೆ ಅರ್ಧ ಬಗೆಹರಿದಂತೆಯೇ.

ಉಳಿದರ್ಧವನ್ನು ಬಗೆಹರಿಸುವುದು ಸರಕಾರದ ಜವಾಬ್ದಾರಿ. ನಾಡಿನ ಅರ್ಧ ಜನಕ್ಕೆ ತಿಳಿದಿರದ ಗುಟ್ಟೊಂದಿದೆ. ನಾಗರಾಜರು ಪ್ರತಿಭಟಿಸುವುದಿಲ್ಲ, ಪ್ರತಿಭಟಿಸಿದಂತೆ ಆಡುತ್ತಾರೆ. ಮಾಧ್ಯಮದವರು ತಮ್ಮ ಕೆಲಸ ಮುಗಿಸಿ ಹೋದರೆಂದರೆ ನಾಗರಾಜರೂ ಅಲ್ಲಿಂದ ಕಾಲ್ತೆಗೆಯುತ್ತಾರೆ. ಮತ್ತೊಂದು ಹೋರಾಟ ಅವರನ್ನು ಹುಡುಕಿಕೊಂಡು ಬರುವವರೆಗೂ ಅವರು ನಿರಾತಂಕ. ಊಟ ನಿದ್ರೆಗೆ ಅಡ್ಡಿಯಿಲ್ಲ.
ಅವರ ನಿರುಮ್ಮಳತೆ, ನಿರಾತಂಕ ಕರ್ನಾಟಕದ ಬಹುಸಂಖ್ಯಾತ ಹಿಂದೂಗಳಿಗಿಲ್ಲವಾಗಿದೆ. ಹೇಳಿಕೊಳ್ಳುವುದಕ್ಕೆ ನಮ್ಮಲ್ಲಿ ಹಿಂದೂ ರಾಷ್ಟ್ರೀಯವಾದಿಗಳದ್ದೇ ಸರಕಾರ. ಆದರೆ, ಅದಕ್ಕೆ ಬೆಂಬಲವಾಗಿ ನಿಂತ ಹಿಂದೂಗಳಿಗೆ ಸುರಕ್ಷತೆ ಇಲ್ಲ.

ಯಾವ ಹಿಂದೂ ಯುವಕ ಯಾವಾಗ ಯಾವ ಮತಾಂಧ ಮುಸ್ಲಿಮನ ಆಕ್ರಮಣಕ್ಕೆ ಒಳಗಾಗುತ್ತಾನೋ ಎಂಬ ಭಯ. ಹಲ್ಲೆಗೊಳಗಾಗ ದಿರಲು ಹನುಮ ಜಯಂತಿ ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂದಿಲ್ಲ, ಜೈ ಶ್ರೀರಾಮ್ ಎಂದು ಘೋಷಣೆ ಕೂಗಬೇಕಿಲ್ಲ. ನನ್ನ ಹುಟ್ಟೂರಿನಲ್ಲಿ ಉರ್ದು ಬಾರದಿದ್ದರೆ ಮೃತ್ಯುವಿಗೆ ಆಹ್ವಾನ! ಹಿಂದಿನ ರಾಜರು ಕೋಟೆ ಕಟ್ಕೊಂಡು ಬೆಟ್ಟದ ಮೇಲೆ ವಾಸ ಮಾಡ್ತಾ ಇದ್ದದ್ದು ವೈರಿಗಳಿಂದ ರಕ್ಷಣೆ ಪಡೆಯೋದಕ್ಕೇ ಅಲ್ವೇ? ಕೋಟೆ ಅಲ್ದಿದ್ರೂ ಬೆಟ್ಟದ ಮೇಲೆ ಇದ್ದೀನ ಅಂತ ಒಂದು ಹತ್ತು ಪರ್ಸೆಂಟ್ ಭದ್ರತಾಭಾವ ಸಿಗಬಹುದು. ಆದರೆ ಬೆಟ್ಟದ ಕೆಳಗಿರೋರರನ್ನ ಕಾಪಾಡೋ ಜವಾಬ್ದಾರಿ ಬಿಜೆಪಿದಲ್ವೇನ್ರೀ? ಬೊಮ್ಮಾಯಿ ಅಥವಾ ಆರಗ ಜ್ಞಾನೇಂದ್ರರನ್ನು ನೋಡಿದ್ರೆ ಹಿಂದೂ ಮತದಾರರನ್ನ ಜೋಪಾನ ಮಾಡೋರ ಥರ ಕಾಣೋಲ್ಲ. ಹಿಂದೂಗಳನ್ನ ಪ್ರೀತಿ ಮಾಡೋ ಥರ ಕಾಣ್ತಾರೆ ಅಷ್ಟೆ. ಅಪ್ಪಿತಪ್ಪಿ, ಇಸ್ಸಾರ್ ಅಂದಾಜು ತಲೆಕೆಳಗಾಗಿ ನಿಜವಾಗ್ಲೂ ಅಮಿತಾಭ್‌ಗೆ ಹೊಡೆದುಬಿಟ್ಟಂಗೆ ಬಿಜೆಪಿಗೂ ಕರ್ನಾಟಕದ ಮತದಾರ ಮಣ್ಣು ಮುಕ್ಕಿಸಿಬಿಟ್ರೆ ಏನು ಗತಿ ಅನ್ನೋದರ ಅರಿವು ಪಕ್ಷದ ನಾಯಕರುಗಳಿಗಿರಲಿ.

ಅದು ಆಕಸ್ಮಿಕವೇ ಆದರೂ, ಇಸ್ಸಾರ್ ಗೆ ಅವಕಾಶಗಳೇ ತಪ್ಪಿಹೋದ ಹಾಗೆ ಹಿಂದೂ ಮತದಾರರೂ ಇಸ್ಸಾರ್‌ನಂತೆ ಅನುಭವಿಸ ಬೇಕಾಗುತ್ತದೆಂಬ ಜಾಗ್ರತಿ ಮತದಾರರಿಗೂ ಅವಶ್ಯ. ಮುಸ್ಲಿಂ ಮತದಾರರನ್ನು ಪ್ರೀತಿಸುವವರು- ಅಲ್ಲ, ಪ್ರೀತಿಸಿದಂತೆ ನಟಿಸುವವರು- ಬೇರೆಯವರಿದ್ದಾರೆ. ಪ್ರೀತಿಸುವವರ- sorry, ಪ್ರೀತಿಸಿದಂತೆ ನಟಿಸುವವರ- ಪೈಪೋಟಿಯೂ ಇದೆ. ಅವರು ಏನು ಬೇಕಾದರೂ ಮಾಡಿ ಕೊಳ್ಳಲಿ. ಅವರ ಹಣೆಬರಹ. ಬಹುಸಂಖ್ಯಾತ ಹಿಂದೂಗಳ ರಕ್ಷಣೆ ಬಿಜೆಪಿಯ ಆದ್ಯ ಕರ್ತವ್ಯ.

ಅವರನ್ನು ಪ್ರೀತಿಸಿದಂತೆ ನಟಿಸಿದ್ದಾಯಿತು, ಇನ್ನಾದರೂ ನೈಜವಾಗಿ ಪ್ರೀತಿಸಿ. ಅದಕ್ಕಿನ್ನೇನೂ ಮಾಡಬೇಕಿಲ್ಲ. ಶಾಂತಿ ಭಂಜಕರ ಮೇಲೆ ಕಾನೂನಿನ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ತೆಗೆದುಕೊಳ್ಳಿ. ಸಾಧ್ಯವಾಗದಿದ್ದರೆ, ಎಲ್ಲ ಹಿಂದೂಗಳಿಗೂ ಬೆಟ್ಟದ ಮೇಲೆ ಮನೆ ಕಟ್ಟಿಕೊಡಿ. ಆತ್ಮರಕ್ಷಣೆಗೆ ವೈಯಕ್ತಿಕ ಶಸ ಹೊಂದಲು ಅನುಮತಿ ಕೊಡಿ. ಸಂದರ್ಭೋಚಿತವಾಗಿ ಅದನ್ನು ಬಳಸಲು ತರಬೇತಿಯನ್ನೂ ನೀಡಿ. ಏಕೆಂದರೆ, ಅದು ಅವರಿಗೆ ಮರೆತುಹೋದಂತಿದೆ. ಭಯೋತ್ಪಾದನೆ ಹಿಂದೂಗಳ ರಕ್ತದಲ್ಲಿಲ್ಲದಿರುವುದರಿಂದ, ಅವರನ್ನು ಭಯೋತ್ಪಾದನೆ ಯಲ್ಲಿ ತೊಡಗಿಸಿಕೊಳ್ಳಲು ಪ್ರಚೋದಿಸುವವರನ್ನು ನಿಗ್ರಹ ಮಾಡುವುದು ಚುನಾಯಿತ ಸರಕಾರದ ಹೆಗಲ ಮೇಲಿದೆ.

ಮಾತೊಂದ ಹೇಳುವೆ ಹತ್ತಿರ ಹತ್ತಿರ ಬಾ- ಬಿಜೆಪಿಯರಿಗೆ ನಾಡಿನ ಶಾಂತಿಪ್ರಿಯ ಬಹುಸಂಖ್ಯಾತರ ಕರೆಯಿದು. ಮತದಾನಕ್ಕೆ ಮುಂಚೆಯೇ ಕರೆಗೆ ಓಗೊಟ್ಟು ಮತದಾರರಿಗೆ ಹತ್ತಿರವಾಗುವ ಸುವರ್ಣಾವಕಾಶ. ಹತ್ತಿರವಾದರೆ, ಯಾವುದೇ ಮಿಟೂ ಆರೋಪದ ಅಂಕೆ ಶಂಕೆಯಿಲ್ಲ.