Thursday, 28th November 2024

ಕಾಡಿಂದ ಬಂದು ನಾಡಿಗರ ರಕ್ಷಿಸುವ ಊದಲು

ಆಲೂರು ಸಿರಿ

ಡಾ.ಅಶೋಕ್‌ ಆಲೂರು

alurashok@gmail.com

ಊದಲು ಉತ್ತಮ ಪ್ರೋಟೀನ್ ಹಾಗೂ ನಾರಿನಂಶವನ್ನು ಹೊಂದಿರುವು ದರಿಂದ ಹಾಗೂ ಇದರಲ್ಲಿನ ಸತು ಹಾಗೂ  ಅಂಶಗಳಿಂದಾಗಿ ನೀಧಾನವಾಗಿ ಜೀಣಿಸುವ ಸಾಮರ್ಥ್ಯವನ್ನು (ಲೋ ಜಿಐ) ಇದು ಹೊಂದಿದೆ. ಶರ್ಕರ ಪಿಷ್ಟವೂ ಕಡಿಮೆ ಇರುವುದರಿಂದ ನಿರ್ವಿವಾದವಾಗಿ ಇದು ಮಧುಮೇಹದಂಥ ಸಮಸ್ಯೆ ಪೀಡಿತರಿಗೆ ಹೇಳಿ ಮಾಡಿಸಿದ ಆಹಾರ.

ಹಾಗೆ ನೋಡಿದರೆ ಇದು ಕಾಡಲ್ಲಿ ಸಹಜವಾಗಿ ಬೆಳೆಯುವು ಒಂದು ಧಾನ್ಯ. ಕಾಡಿನ ಕಾಳೆಂದೇ ಗ್ರಾಮೀಣ ಭಾಗದಲ್ಲಿ ಜನಪ್ರಿಯ. ತೀವ್ರ ಬರಗಾಲದ ಸಂದರ್ಭದಲ್ಲಿ ತಿನ್ನುಲು ಏನೂ ಸಿಕ್ಕದಾಗ, ಹಿಂದೆ ಬಹಳಷ್ಟು ಕಡೆಗಳಲ್ಲಿ ಹಳ್ಳಿಯ ಹೆಂಗಸರು ಕಾಡಿಗೆ ಹೋಗಿ
ಅಲ್ಲಿನ ತೆನೆಗಳನ್ನು ಕೊಯ್ದು, ಇಲ್ಲವೇ ಉದುರಿದ ಕಾಳುಗಳನ್ನು ಒಟ್ಟು ಮಾಡಿ ತಂದು ಸಂಸ್ಕರಿಸಿ, ಅಡುಗೆ ಮಾಡಿ ಬಡಿಸುತ್ತಿದ್ದ ರೆನ್ನಲಾಗಿದೆ.

ಕನಡನದಲ್ಲಿ ಊದಲು ಎಂದು ಕರೆಯುವ ಈ ಕಿರುಧಾನ್ಯದ ವೈಜ್ಞಾನಿಕ ಹೆಸರು, ಬಾರ್ನ್ಯಾರ್ಡ್ ಮಿಲೆಟ್ (ಎಕಿನೋಕ್ಲೋವಾ -ಮಾಂಟೇಸಿಯಾ). ಭಾರತದ ಉತ್ತರದ ಬೆಟ್ಟ ಪ್ರದೇಶಗಳಲ್ಲಿ, ವಿಶೇಷವಾಗಿ ಹಿಮಾಲಯ ಶ್ರೇಣಿಯ ತಪ್ಪಲಿನಲ್ಲಿ ಇದು ಯಥೇಚ್ಛ ವಾಗಿ ಕಂಡು ಬರುತ್ತದೆ. ಅತಿ ಕಡಿಮೆ ನೀರಿನಲ್ಲಿ, ಒಣ ಭೂಮಿಯಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ಬೆಳೆ ಇದು. ಕೃಷಿಗೆ ಇದನ್ನು ಒಗ್ಗಿಸಿಕೊಂಡ ನಂತರ ಸೂಕ್ತವಾದ ಹವಾಮಾನ ಪರಿಸ್ಥಿತಿಗಳಲ್ಲಿ ಬಿತ್ತನೆಯ ಸಮಯದಿಂದ ೪೫ ದಿನಗಳಲ್ಲಿ ಮಾಗಿದ ಧಾನ್ಯಗಳನ್ನು ಉತ್ಪಾದಿಸಲಾಗುತ್ತದೆ.

ಬೆಟ್ಟ ಗುಡ್ಡಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು ಅತಿ ಪ್ರಮುಖ ಕೃಷಿ ಬೆಳೆ. ಬಡವರ ಕಾಳೆಂದೇ ಕರೆಯಲಾಗುವ ಈ ಸಿರಿಧಾನ್ಯ, ಪೌಷ್ಟಿಕಾಂಶದ ದೃಷ್ಟಿಯಿಂದ ಮಾತ್ರ ಅತ್ಯಂತ ಶ್ರೀಮಂತ. ಊದಲಿನ ಕಾಳನ್ನು ಬೇಯಿಸಿದಾಗ ನುಚ್ಚಕ್ಕಿಯ ಅನ್ನದ ರುಚಿಯನ್ನು ಹೊಂದಿರುತ್ತದೆ. ಗಾತ್ರದಲ್ಲಿ ಚಿಕ್ಕದಾಗಿದ್ದು, ಬಿಳಿ, ದುಂಡಗಿನ ಧಾನ್ಯ ಇದಾಗಿದ್ದು, ಗಾತ್ರದಲ್ಲಿ ಸೂಜಿ (ರವೆ) ಗಿಂತ ದೊಡ್ಡದಾಗಿರುತ್ತದೆ. ರೋಗ ಮತ್ತು ಕೀಟ ನಿರೋಧಕ ಶಕ್ತಿ ದರ ಹೆಗ್ಗಳಿಕೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಕಡಿಮೆ ಆಳದ, ಕಡಿಮೆ ಫಲವತ್ತತೆಯುಳ್ಳ ಮಣ್ಣಿನಲ್ಲೂ ಇದನ್ನು ಬೆಳೆಯಬಹುದು. ಈಗಾಗಲೇ ನಮೂದಿಸಿರುವಂತೆ ಎಲ್ಲ ಸಿರಿಧ್ಯಾನಗಳ ಹಾಗೆ ಈ ಧಾನ್ಯವೂ ಕೂಡ ಬರನಿರೋಧಕ ಹಾಗೂ ಪೌಷ್ಟಿಕಾಂಶಭರಿತ ಆಹಾರ.

ಉತ್ತರಾಖಂಡ ಪ್ರದೇಶದಲ್ಲಿ ಈ ಬೆಳೆಯನ್ನು ಇಂದಿಗೂ ಸಾಕಷ್ಟು ಪ್ರಮಾನದಲ್ಲಿ ಬೆಳೆಯಲಾಗುತ್ತದೆ. ನಮ್ಮ ರಾಜ್ಯದಲ್ಲೂ
ಇತ್ತೀಚೆಗೆ ರೈತರು ಊದಲನ್ನು ಬೆಳೆಯುತ್ತಿದ್ದು, ಸುಮಾರು ೩೨ ಸಾವಿರ ಹೆಕ್ಟೇರ್‌ಗಳಲ್ಲಿ ಕೃಷಿ ಮಾಡಲಾಗುತ್ತಿದೆ. ಸರಾಸರಿ ಇಳುವರಿ ಪ್ರತಿ ಹೆಕ್ಟೇರ್‌ಗೆ ೩೭೯ ಕೆ.ಜಿ. ಇದ್ದು, ೧೨ ಸಾವಿರ ಟನ್ ನಷ್ಟು ಉತ್ಪಾದನೆಯಾಗುತ್ತಿದೆ. ಆಧುನಿಕ ಕೃಷಿ ಸನ್ನಿವೇಶದಲ್ಲಿ ಊದಲು ಸಾಮಾನ್ಯವಾಗಿ ೫೦-೬೦ ದಿನಗಳಲ್ಲಿ ಫಸಲು ಕೈಗೆ ಸಿಗುವಂತಾಗಿದೆ. ಎಕರೆಗೆ ೧೦-೧೫ ಕೆ.ಜಿ. ಬಿತ್ತನೆ ಬೀಜ ಅಗತ್ಯವಿದ್ದು, ಸರಾಸರಿ ೬ ಕ್ವಿಂಟಾಲ್ ಇಳುವರಿ ಬರುವುದು ವಿಶೇಷ. ಬೇಗನೆ ಫಸಲು ಬರುವುದರಿಂದ ಮುಂಗಾರು ತಡವಾದಾಗ ಇದನ್ನು ಬಿತ್ತಿ, ಯೋಗ್ಯ ಬೆಳೆಯನ್ನು ಪಡೆಯಬಹುದು. ಕೃಷಿಯಲ್ಲಿ ನಷ್ಟವನ್ನು ತಪ್ಪಿಸಲು ರೈತರು ಇಂಥ ಸುಲಭೋಪಾಯಗಳನ್ನು ಕಂಡು ಕೊಳ್ಳುವುದು ವಿಹಿತ.

ಇನ್ನು ಊದಲಿನ ಪೌಷ್ಟಿಕಾಂಶದ ವಿಚಾರಕ್ಕೆ ಬಂದರೆ, ಪಿಷ್ಟ, ಕೊಬ್ಬು, ಕ್ಯಾಲ್ಸಿಯಂ ಮತ್ತು ರಂಜಕಗಳಿಂದ ಸಮೃದ್ಧವಾಗಿರುವ ಈ ಧಾನ್ಯದ ಆಹಾರದಲ್ಲಿನ ಬಳಕೆ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ, ಪಾಲಿಷ್ ಮಾಡದೇ ಬಳಸುವ ಧಾನ್ಯದಲ್ಲಿ ‘ವಿಟಮಿನ್ ಬಿ’ ಅಧಿಕವಾಗಿದ್ದು ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ. ನೂರು ಗ್ರಾಮ್ ಊದಲಿನಲ್ಲಿ ಕೇವಲ ೩೦೭ ಕಿ.ಕ್ಯಾಲೋರಿ ಇದ್ದು ತೂಕ ಇಳಿಸಿಕೊಳ್ಳುವವರಿಗೆ, ಮಧುಮೇಹಿಗಳೂ ಹೃದ್ರೋಗಿಗಳಿಗೆ ಹೇಳಿ ಮಾಡಿಸಿದ ಆಹಾರ.

ಉಳಿದಂತೆ, ೧೧.೨ ಗ್ರಾಂ ಪ್ರೋಟಿನ್, ಕೇವಲ ೨.೨ಗ್ರಾಂ ಕೊಬ್ಬಿನಂಶ, ೬೫.೫ಗ್ರಾಂ ಶರ್ಕರಪಿಷ್ಟ, ೧೦.೧ ಗ್ರಾಂ ನಾರಿನಂಶ, ೪.೪
ಗ್ರಾಂ ಖನಿಜಾಂಶ, ೧೫.೨ ಗ್ರಾಂ ಕ್ಯಾಲ್ಷಿಯಂ ೨೮೦ ಮಿಲಿಗ್ರಾಂ ರಂಜಕ ಹಾಗೂ ೨ ಮಿಲಿ ಗ್ರಾಂ ಸತು ಇದರಲ್ಲಿದೆ. ಈಗಾಗಲೇ ಹೇಳಿದಂತೆ ಊದಲು ಉತ್ತಮ ಪ್ರೋಟೀನ್ ಹಾಗೂ ನಾರಿನಂಶವನ್ನು ಹೊಂದಿರುವುದರಿಂದ ಹಾಗೂ ಇದರಲ್ಲಿನ ಸತು ಹಾಗೂ ಮ್ಯಾಂಗನೀಸ್ ಅಂಶಗಳಿಂದಾಗಿ ನೀಧಾನವಾಗಿ ಜೀಣಿಸುವ ಸಾಮರ್ಥ್ಯ ವನ್ನು (ಲೋ ಜಿಐ) ಇದು ಹೊಂದಿದೆ.

ಶರ್ಕರ ಪಿಷ್ಟವೂ ಕಡಿಮೆ ಇರುವುದರಿಂದ ನಿರ್ವಿವಾದವಾಗಿ ಇದು ಮಧುಮೇಹದಂಥ ಸಮಸ್ಯೆ ಪೀಡಿತರಿಗೆ ಹೇಳಿ ಮಾಡಿಸಿದ
ಆಹಾರ. ಹೇಗೇ ನೋಡಿದರೂ ಇದು ನಮಗೆ ನಿಸರ್ಗ ನೀಡಿದ ಸ್ವಾಭಾವಿಕ ಉಡುಗೊರೆ. ಕಡಿಮೆ ಶ್ರಮವುಳ್ಳ ಆಧುನಿಕ ಜೀವನ ಶೈಲಿಯಲ್ಲಿ ಜತೆಗೆ ಹದಗೆಟ್ಟ ಆಹಾರ ಪದ್ಧತಿಯನ್ನು ಸರಿದಾರಿಗೆ ತರಲು ಊದಲು ನಿಜಕ್ಕೂ ಸಹಕಾರಿ. ಊದಲಿನಲ್ಲಿ ಪ್ರಮುಖ ಕೊಬ್ಬಿನಾಮ್ಲವೆಂದರೆ ಲಿನೋಲಿಕ್, ಪಾಲ್ಮಿಟಿಕ್ ಮತ್ತು ಒಲೀಕ್ ಆಮ್ಲ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದರಿಂದಾಗಿಯೇ ಊದಲನ್ನು ಬೇಯಿಸಿದಾಗ ಗಡುಸು ರೀತಿಯ ಗಂಜಿ ಉತ್ಪಾದನೆಯಾಗಿ, ಆಹಾರವಾಗಿ ಸೇವಿಸಿದಾಗ ಸರಾಗ ವಾಗಿ ರಕ್ತದಲ್ಲಿ ಕರಗಿ, ಹೆಚ್ಚಿನ ಪ್ರಮಾಣದ ನಿರೋಧಕ ಪಿಷ್ಟಗಳನ್ನು ರಚನೆಯನ್ನು ಸುಗಮಗೊಳಿಸುತ್ತದೆ. ಆದ್ದರಿಂದ ಹೃದಯ ರಕ್ತನಾಳದ ಕಾಯಿಲೆ ಮತ್ತು ಮಧುಮೇಹ, ಮೆಲ್ಲಿಟಸ್ ರೋಗಿಗಳಿಗೆ ಇದನ್ನು ಶಿಫಾರಸು ಮಾಡಲಾಗುತ್ತದೆ. ಇದಲ್ಲದೇ ರಕ್ತದಲ್ಲಿನ ಗ್ಲೂಕೋಸ್ ಮತ್ತು ಲಿಪಿಡ್ ಮಟ್ಟವನ್ನು ಕಡಿಮೆ ಮಾಡಲು ಊದಲು ಪರಿಣಾಮಕಾರಿ.

ಉದರದ ಕಾಯಿಲೆಗೆ ಕಾರಣವಾಗುವ ಗ್ಲುಟನ್ ಅನ್ನು ನಿಯಂತ್ರಿಸುವುದರಲ್ಲೂ ಊದಲು ಹೇಳಿ ಮಾಡಿಸಿದ್ದು. ಊದಲನ್ನು ಯಾಕೆ ಬಳಸಬೇಕೆಂಬುದಕ್ಕೆ ಕಾರಣಗಳನ್ನು ಪಟ್ಟಿ ಮಾಡುತ್ತ ಹೋದರೆ, ಮೇಲ್ನೋಟಕ್ಕೆ ಐದು ಪ್ರಮುಖ ಸಂಗತಿಗಳು ಕಂಡು ಬರುತ್ತದೆ.

ಕಡಿಮೆ ಕ್ಯಾಲೋರಿ: ಸುಲಭದಲ್ಲಿ ಕರಗಬಲ್ಲ, ಅಥವಾ ಜೀರ್ಣವಾಗುವ (ಡೈಜೆಸ್ಟಿಬಲಿಟಿ) ಪ್ರೋಟೀನ್‌ನ ಉತ್ತಮ ಮೂಲ. ಇತರ ಸಿರಿಧಾನ್ಯಗಳಿಗೆ ಹೋಲಿಸಿದರೆ ಕಡಿಮೆ ಕ್ಯಾಲೋರಿಕ್ ಸಾಂದ್ರತೆ ಹೊಂದಿದೆ.

ಕಡಿಮೆ ಗೈಸೆಮಿಕ್ಸ್ ಇಂಡೆಕ್ಸ್: ಊದಲಿನಲ್ಲಿ ಕಾರ್ಬೋಹೈಡ್ರೇಟ್ ಅಂಶವು ಸಾಕಷ್ಟು ಕಡಿಮೆ. ಆದ್ದರಿಂದ ಹೃದಯರಕ್ತನಾಳದ ಕಾಯಿಲೆ ಮತ್ತು ಟೈಪ್ ೨ ಮಧುಮೇಹ ಹೊಂದಿರುವ ರೋಗಿಗಳಿಗೆ ಇದನ್ನು ಶಿಫಾರಸು ಮಾಡಬಹುದು.

ಡಯೆಟರಿ ಫೈಬರ್: ನಾರಿನ ಅಂಶವು ಇತರೆಲ್ಲ ಧಾನ್ಯಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದ್ದು, ಕರಗಬಲ್ಲ (೪.೨%) ಮತ್ತು ಕರಗದ (೮.೪%) ಎರಡೂ ರೀತಿಯ ಫೈಬರ್‌ಅನ್ನು ಹೊಂದಿದೆ. ಹೀಗಾಗಿ ಮಲಬದ್ಧತೆ, ಹೆಚ್ಚುವರಿ ಅನಿಲ, ಹೊಟ್ಟೆ ಉಬ್ಬರ ಮತ್ತು ಸೆಳೆತವನ್ನು ತಡೆಯಲು ಸಹಾಯ ಮಾಡುತ್ತದೆ.

ಗ್ಲುಟೆನ್ ಮುಕ್ತ: ಇದನ್ನು ಸಹಜವಾಗಿ ಸಿರಿಧಾನ್ಯಗಳಂತೆ ಗ್ಲುಟೆನ್ ಮುಕ್ತವಾಗಿದೆ.

ಕಬ್ಬಿಣದ ಉತ್ತಮ ಮೂಲ: ಇದರ ಕೆಲವು ತಳಿಗಳಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣದಂಶ (೧೮.೬ ಮಿಗ್ರಾಂ/೧೦೦ ಗ್ರಾಂ ಹಸಿ ಧಾನ್ಯದಲ್ಲಿ) ಇದ್ದು, ಮಿಕ್ಕೆಲ್ಲ, ಸಿರಿಧಾನ್ಯ ಮತ್ತು ಏಕದಳ ಧಾನ್ಯಗಳಿಗಿಂತ ಶ್ರೀಮಂತವಾಗಿದೆ. ಇನ್ನು ಕೃಷಿಯ ವಿಚಾರಕ್ಕೆ ಬಂದರೆ, ಕರ್ನಾಟಕದಲ್ಲಿ ವಿ.ಎಲ್.ಎಮ್-೧೭೨, ವಿ.ಎಲ್.ಎಮ್- ೧೮೧, ಡಿ. ಎಚ್.ಬಿ ೯೩-೨ (ವಲಯ-೩), ಸುಶ್ರುತ್ (ವಲಯ-೮) ಮತ್ತು ಆರ್.ಎ.ಯು -೧೧ಹೆಚ್ಚಾಗಿ ಬಳಕೆಯಲ್ಲಿವೆ.

ಇವೆಲ್ಲವೂ ರಾಸಾಯನಿಕ ಗೊಬ್ಬರಗಳಿಗೆ ಹೆಚ್ಚಾಗಿ ಸ್ಪಂದಿಸುವ ಗುಣವನ್ನು ಹೊಂದಿರುವುದರಿಂದ ಯಾವುದೇ ಬೇಸಾಯ ಕ್ರಮದಲ್ಲೂ ಬೆಳೆಯಬಹುದು. ಮಳೆ ಚೆನ್ನಾಗಿ ಹಂಚಿಕೆಯಾಗುವ ಪ್ರದೇಶಗಳಲ್ಲಿ ಮುಂಗಾರಿನಲ್ಲಿ ಜೂನ್ ನಿಂದ ಜುಲೈ ಮತ್ತು ಹಿಂಗಾರಿನ ಋತುವಾದರೆ ಇದು ಸೆಪ್ಟೆಂಬರ್‌ನಿಂದ ಅಕ್ಟೋಬರ್‌ನಲ್ಲಿ ಉದಲಿನ ಬಿತ್ತನೆಗೆ ಸೂಕ್ತ ಸಮಯ. ಸಾಲಿನ ಬಿತ್ತನೆ ಪದ್ಧತಿಯಾದರೆ ೮-೧೦ ಕೆ.ಜಿ., ಬ್ರಾಡ್ ಕಾಸ್ಟಿಂಗ್ ಪದ್ಧತಿಗೆ ೧೫ ಕೆಜಿ/ಹೆ. ಬೀಜವನ್ನು ಬಿತ್ತುವ ಮೊದಲು ಪ್ರತಿಕೇಜಿಗೆ ೩ ಗ್ರಾಂ
ಸೆರೆಸಾನ್ ನಿಂದ ಬೀಜೋಪಚಾರ ಮಾಡಬೇಕು.

೨೫ ಸೆಂ. ಮೀ ಅಂತರದ ಸಾಲುಗಳಲ್ಲಿ, ಪೈರಿನಿಂದ ಪೈರಿಗೆ ೧೦ ಸೆಂ. ಮೀ ಅಂತರವಿರುವಂತೆ ೩.೫ ಸೆಂ.ಮೀ ರಿಂದ ೪ ಸೆಂ.ಮೀ
ಗಿಂತ ಹೆಚ್ಚು ಆಳವಿಲ್ಲದ ಬಿತ್ತಬೇಕು. ಕೊಟ್ಟಿಗೆ ಗೊಬ್ಬರವನ್ನು ಬಿತ್ತನೆಗೆ ೩-೪ ವಾರಗಳ ಮೊದಲು ಮಣ್ಣಿನಲ್ಲಿ ಸೇರಿಸಿಕೊಳ್ಳ
ಬೇಕು. ಚೆನ್ನಾಗಿ ಮಾಗಿದ ಗೊಬ್ಬರವಿದ್ದಲ್ಲಿ ಎಕರೆಗೆ ೧೦ ಟನ್ ಎರಡು ವಾರಗಳ ಮುಂಚೆ ಸಹ ಭೂಮಿಗೆ ಸೇರಿಸಬಹುದು.

ಬೀಜವನ್ನು ಸಂಯುಕ್ತ ಕೂರಿಗೆ ಬಳಸಿ ಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ಒಟ್ಟಾಗಿ ಕೂರಿಗೆಯಿಂದ ಬಿತ್ತುವುದು ಉತ್ತಮ. ರಸಗೊಬ್ಬರವಾದಲ್ಲಿ ಹೆಕ್ಟೇರಿಗೆ ೪೦ ಕೆಜಿ ಸಾರಾಜನಕ, ೨೦ ಕೆಜಿ ರಂಜಕ ಮತ್ತು ೨೦ ಕೆಜಿ ಪೊಟ್ಯಾಶ್ ಅಗತ್ಯವಿದೆ. ಆಗ್ರೊಬ್ಯಾಕ್ಟೀರಿಯಂ ರೇಡಿಯೊ-ಬ್ಯಾಕ್ಟರ್ ಮತ್ತು ಆಸ್ಪರ್ಜಿಲಸ್ ಅವಮೊರಿಗಳಂತಹ ಜೈವಿಕ ಗೊಬ್ಬರಗಳೊಂದಿಗೆ ಬೀಜವನ್ನು ಬೀಜೋಪಚಾರ ಮಾಡಲು ಶಿಫಾರಸು ಮಾಡಬಹುದಾಗಿದೆ.

ನೀರನ್ನೇ ಬೇಡದ ಬೆಳೆಯಿದು ಎಂಬುದು ಗಮನಾರ್ಹ ಸಂಗತಿ. ಸಾಮಾನ್ಯವಾಗಿ, ಊದಲಿಗೆ ಯಾವುದೇ ನೀರಾವರಿ ಅಗತ್ಯವಿಲ್ಲ. ಆದಾಗ್ಯೂ, ಶುಷ್ಕ ವಾತಾವರಣವು ದೀರ್ಘಾವಧಿಯವರೆಗೆ ಚಾಲ್ತಿಯಲ್ಲಿದ್ದರೆ, ಬಿತ್ತನೆಯಾದ ೨೫-೩೦ ನಂತರ ಒಂದು ನೀರು ಮತ್ತು ತೆನೆ ಬರುವ ಹಂತ ಅಂದರೆ ಬಿತ್ತನೆಯಾದ ೪೫-೫೦ ನಂತರ ಂದು ಬಾರಿ ನೀರನ್ನು ಹಾಯಿಸಬೇಕು. ಊದಲನ್ನು ಮೇವಿನ ಉದ್ದೇಶಕ್ಕಾಗಿಯೂ ಬೆಳೆಯಲಾಗುತ್ತದೆ; ಇದನ್ನು ಹೂಬಿಡುವ ಹಂತ ಅಥವಾ ಹಾಲಿನ ಹಂತಕ್ಕೆ ಮುಂಚಿತವಾಗಿ ಕೊಯ್ಲು ಮಾಡಲಾಗುತ್ತದೆ.

ಇನ್ನೂ ವಿಶೇಷೆಂದರೆ ಊದಲು ಅತ್ಯುತ್ತಮ ಮಿಶ್ರ ಬೆಳೆ. ತೊಗರಿ, ಹೆಸರು, ಗೋವಿನ ಜೋಳ ಮತ್ತು ಕರಿಬೇವು ಮುಂತಾದ
ಬೆಳೆ ಗಳನ್ನು ಊದಲಿನ ಜೊತೆಗೆ ಮಿಶ್ರ ಬೆಳೆಯಾಗಿ ೪:೧ಅನುಪಾತದಲ್ಲಿ ಬೆಳೆಯಬಹುದು. ಇಂಥ ಶ್ರೀಮಂತ ಸಿರಿಧಾನ್ಯವಾದ ಊದಲು, ಆಹಾರ ವೈವಿಧ್ಯದಲ್ಲೂ ಎತ್ತಿದ ಕೈ. ಊದಲು ಬಳಸಿ ಚಕ್ಕುಲಿ, ಇಡ್ಲಿ, ಪೊಂಗಲ್, ದೋಸೆ, ಹಪ್ಪಳ, ಕೇಕ್, ಬಿಸ್ಕತ್ತು, ಕಟ್ಲೆಟ್, ಪಾಯಸ ಹಾಗೂ ಪಿಜ್ಜಾ ಇತರೆ ರುಚಿಕರವಾದ ತಿನಿಸುಗಳನ್ನೂ ಮಾಡಬಹುದು.

(ಲೇಖಕರು ನೂತನ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳು)