Friday, 20th September 2024

ಜ್ಯೋತಿರ್ವಿಜ್ಞಾನ ಮತ್ತು ತಾರಾ – ಮನೋವಿಜ್ಞಾನ ಎಂಬ ಹುಸಿ ವಿಜ್ಞಾನಗಳು

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

nasomeshwara@gmail.com

ಮನುಷ್ಯನ ವಿಕಾಸ ಪಥದಲ್ಲಿ ವಿಜ್ಞಾನವು ಹಾಗೂ ಹುಸಿವಿಜ್ಞಾನವು ಜೊತೆ ಜೊತೆಯಲ್ಲಿ ಬೆಳೆದು ಬರುತ್ತಿವೆ. ಇಂತಹವುಗಳಲ್ಲಿ ಜ್ಯೋತಿರ್ವಿಜ್ಞಾನ ಅಥವ ಜ್ಯೋತಿಷವೂ (ಅಸ್ಟ್ರಾಲಜಿ) ಒಂದು. ಜ್ಯೋತಿರ್ವಿಜ್ಞಾನ ಎಲ್ಲಿ, ಎಂದು, ಯಾರಿಂದ ಆರಂಭವಾಯಿತು ಎನ್ನುವುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲದಿದ್ದರೂ, ಬಹುಶಃ ಕ್ರಿ.ಪೂ.5000 ವರ್ಷಗಳ ಹಿಂದಿನ ಈಜಿಪ್ಟಿನಲ್ಲಿ ಆರಂಭವಾಯಿತು ಎನ್ನಬಹುದು.

ಪ್ರಕೃತಿಯನ್ನು ನಿಕಟವಾಗಿ ಅಧ್ಯಯನವನ್ನು ಮಾಡಿದ ಈಜಿಪ್ಷಿಯನ್ನರು ನೈಲ್ ನದಿಯಲ್ಲಿ ಯಾವಾಗ ಪ್ರವಾಹ ಬರುತ್ತದೆ ಎನ್ನುವುದನ್ನು ನಿಖರವಾಗಿ ಭವಿಷ್ಯ ವನ್ನು ನುಡಿದರು. 360 ದಿನಗಳ ಪಂಚಾಂಗವನ್ನು (ಕ್ಯಾಲೆಂಡರ್) ರೂಪಿಸಿದರು. ಜನರು ತಮ್ಮ ಧಾರ್ಮಿಕ ವಿಽಗಳನ್ನು ಹಾಗೂ ಹಬ್ಬಗಳನ್ನು ವರ್ಷದ ಯಾವ ದಿನಗಳಂದು ನಡೆಸಬೇಕು ಎಂಬುದನ್ನು ಮುಂಚಿತವಾಗಿ ತಿಳಿಯಲು ಸಾಧ್ಯವಾಯಿತು. ರಾಜಮಹಾರಾಜರ ಪರಲೋಕದ ಜೀವನಕ್ಕಾಗಿ ಪಿರಮಿಡ್ಡುಗಳನ್ನು ಕಟ್ಟಿದರು. ಭೂಲೋಕದಿಂದ ಪರಲೋಕಕ್ಕೆ ಹೋಗಲು ಪಿರಮಿಡ್ಡುಗಳು ಧೃವನಕ್ಷತ್ರಕ್ಕೆ ಅಭಿಮುಖವಾಗಿರುವಂತೆ ನಿರ್ಮಿಸುವಲ್ಲಿ ಯಶಸ್ವಿಯಾದರು.

ಜ್ಯೋತಿವಿಜ್ಞಾನದ ಎರಡನೆಯ ಘಟ್ಟವು ಕ್ರಿ.ಪೂ.3000 ವರ್ಷಗಳ ಬ್ಯಾಬಿಲೋನಿಯನ್ ಸಂಸ್ಕೃತಿಯಲ್ಲಿ ಆರಂಭವಾಗಿ, ಈಜಿಪ್ಟ್, ಗ್ರೀಕ್ ಹಾಗೂ ಭಾರತೀಯ ಜ್ಯೋತಿರ್ವಿಜ್ಞಾನಗಳ ಮೇಲೆ ಅಪಾರ ಪ್ರಭಾವವನ್ನು ಬೀರಿದವು. ಕ್ರಿ.ಪೂ.1600ರ ಕಾಲದ 70 ಜೇಡಿಮಣ್ಣಿನ ಹಲಗೆಗಳು ನಮಗೆ ದೊರೆತಿವೆ. ಇವುಗಳಲ್ಲಿ ಭವಿಷ್ಯವನ್ನು ಸೂಚಿಸುವ 700 ಲಕ್ಷಣಗಳ ವಿವರವಿದೆ. ಅಂದರೆ ಈ ವೇಳೆಗೆ ಜ್ಯೋತಿರ್ವಿಜ್ಞಾನವು ಅರಮನೆಯನ್ನು ಬಿಟ್ಟು ಶ್ರಿಶ್ರೀ ಸಾಮಾನ್ಯನ ಗುಡಿಸಲನ್ನು ಪ್ರವೇಶಿಸಿಬಿಟ್ಟಿತ್ತು. ಜ್ಯೋತಿರ್ವಿಜ್ಞಾನವು ಹವಾಮಾನ, ರಾಜಕೀಯ, ರಸವಿದ್ಯೆ (ಆಲ್ಕೆಮಿ) ಹಾಗೂ ಆರೋಗ್ಯದ ಬಗ್ಗೆ ಮುನ್ಸೂಚನೆಯನ್ನು ಕೊಡಬಲ್ಲವು ಎಂಬ ನಂಬಿಕೆಯು ಸಾಮಾನ್ಯವಾಗಿತ್ತು.

ಭಾರತ: ಭಾರತದಲ್ಲಿ ಜ್ಯೋತಿಷವು ವೇದಗಳ ಕಾಲದಲ್ಲಿ ಒಂದು ಸ್ಪಷ್ಟ ರೂಪವನ್ನು ಪಡೆದು, ವೇದಾಂಗ ವಾಯಿತು. ಕ್ರಿ.ಪೂ.2000ದಲ್ಲಿ ರಚಿತವಾಗಿರಬಹುದಾದ ವೇದಾಂಗ ಜ್ಯೋತಿಷವು ಅತ್ಯಂತ ಪ್ರಾಚೀನ ಗ್ರಂಥ. ಭೃಗು ಮಹರ್ಷಿಗಳ ಭೃಗು ಸಂಹಿತೆಯು ಮತ್ತೊಂದು ಪ್ರಖ್ಯಾತ ಗ್ರಂಥ. ಈ ಅವಽಯಲ್ಲಿ ಸಪ್ತರ್ಷಿಗಳನ್ನು ಸಪ್ತ ನಕ್ಷತ್ರಗಳಲ್ಲಿ (ಸಪ್ತರ್ಷಿ ಮಂಡಲ, ಅರ್ಸ ಮೇಜರ್) ಗುರುತಿಸುವ ಪದ್ಧತಿಯು ಆರಂಭ ವಾಯಿತು.

ಕ್ರಿ.ಶ.2ನೆಯ ಶತಮಾನದಲ್ಲಿ ಯವನೇಶ್ವರನು ಸಂಸ್ಕೃತದಲ್ಲಿ ರಚಿಸಿದ ಯವನ ಜಾತಕವು ಸಂಪೂರ್ಣವಾಗಿ ಗ್ರೀಕ್ ಜ್ಯೋತಿರ್ವಿಜ್ಞಾನದ ಸಾರಾಂಶವಾಗಿತ್ತು. ನಂತರ ಭಾರತೀಯ ಜ್ಯೋತಿರ್ವಿಜ್ಞಾನವು ಸ್ವತಂತ್ರವಾಗಿ ಬೆಳೆಯಿತು. ಆರ್ಯಭಟನ ಆರ್ಯಭಟೀಯಯವು ಇಂದಿಗೂ ಮಾನ್ಯತೆಯನ್ನು ಪಡೆದ ಖಗೋಳ ವಿಜ್ಞಾನ ಗ್ರಂಥವಾಗಿದೆ. ಹಾಗೆಯೇ ವರಾಹಮಿಹಿರನ ಪಂಚ ಸಿದ್ಧಾಂತಿಕವು ಸಮಕಾಲೀನ ಜ್ಯೋತಿರ್ವಿಜ್ಞಾನದದಲ್ಲಿ ಪ್ರಚಲಿತವಾಗಿದ್ದ ಐದು ಮತಗಳ ಸಾರಾಂಶ ವಾಗಿದೆ.

ರಾಶಿಚಕ್ರ: ಕ್ರಿ.ಪೂ.525ರಲ್ಲಿ ಪರ್ಷಿಯನ್ನರು ಈಜಿಪ್ಟನ್ನು ಗೆದ್ದುಕೊಂಡಾಗ ಮೆಸೊಪೊಟೋಮಿಯನ್-ಗ್ರೀಕ್  ಜ್ಯೋತಿಷ್ಯವು ಈಜಿಪ್ಟ್ ಜ್ಯೋತಿಷ್ಯದ ಮೇಲೆ ಪ್ರಭಾವವನ್ನು ಬೀರಿತು. ಬಹುಶಃ ಕ್ರಿ.ಪೂ.700ರಲ್ಲಿ ನಿರ್ಮಿಸಿರಬಹುದಾದ ಹಾಥೋರ್ ದೇವಾಲಯದ ಸೂರಿನಲ್ಲಿ ಡೆಂಡೇರಾ ಜ಼ೋಡಿಯಾಕ್ ರಚನೆಯಿದೆ. ಇದು ರಾಶಿಚಕ್ರ. 12 ರಾಶಿಗಳ ಮಂಡಲ. ಒಂದೊಂದು ರಾಶಿಯನ್ನು ಒಂದೊಂದು ಪ್ರಾಣಿಯು ಪ್ರತಿನಿಧಿಸುತ್ತವೆ. ಆ ಪ್ರಾಣಿಯ ಗುಣಲಕ್ಷಣಗಳು ಆಯಾ ರಾಶಿಯಲ್ಲಿ ಹುಟ್ಟಿದವರಲ್ಲಿ ಇರುತ್ತವೆ ಎನ್ನುವ ನಂಬಿಕೆಯು ಬೆಳೆಯಿತು.

ಅಲೆಗ್ಸಾಂಡಿಯದಲ್ಲಿದ್ದ ಕ್ಲಾಡಿಯಸ್ ಟಾಲಮಿ (ಕ್ರಿ.ಶ.100-170) ಸಮಕಾಲೀನ ಜ್ಯೋತಿರ್ವಿಜ್ಞಾನವನ್ನೆಲ ಸಂಗ್ರಹಿಸಿ ಟೆಟ್ರಾಬಿಬ್ಲೋಸ್ ಎಂಬ ನಾಲ್ಕು ಸಂಪುಟ ಗಳನ್ನು ರಚಿಸಿದ. ಇವು ಮುಂದಿನ ಜ್ಯೋತಿರ್ವಿಜ್ಞಾನದ ಮೇಲೆ ಸಾಟಿಯಿಲ್ಲದ ಪ್ರಭಾವವನ್ನು ಬೀರಿ ತಾರಾ-ಮನೋವಿಜ್ಞಾನ (ಸೈಕಲಾಜಿಕಲ್ ಅಸ್ಟ್ರಾಲಜಿ/ ಆಸ್ಟ್ರೋಸೈಕಾಲಜಿ) ಎನ್ನುವ ಹೊಸ ವಿಜ್ಞಾನ ಶಾಖೆಯು ಹುಟ್ಟಲು ಕಾರಣವಾಯಿತು. ಒಬ್ಬ ವ್ಯಕ್ತಿಯ ಶಾರೀರಿಕ, ಮಾನಸಿಕ, ಸಾಮಾಜಿಕ ಹಾಗೂ ಅಧ್ಯಾತ್ಮಿಕ ಆಯಾಮಗಳು ಪೂರ್ವ ನಿರ್ಧರಿತವಾಗಿ, ಅವನ ನಕ್ಷತ್ರ/ರಾಶಿಯಲ್ಲಿ ಅಡಗಿರುತ್ತವೆ ಎನ್ನುವುದನ್ನು ಮೊದಲ ಬಾರಿಗೆ ಟೆಟ್ರಾಬಿಬ್ಲೋಸ್ ವಿವರಿಸಿತು.

ವ್ಯಕ್ತಿಯ ಕುಂಡಲಿಯಲ್ಲಿ ಗ್ರಹಗಳ ಸ್ಥಾನವನ್ನು ಗುರುತಿಸಿ, ವ್ಯಕ್ತಿಯ ವ್ಯಕ್ತಿತ್ವ ಹಾಗೂ ಭವಿಷ್ಯವನ್ನು ಸೂಚಿಸುವ ವಿದ್ಯೆಯು ಜಗತ್ತಿನಾದ್ಯಂತ ಜನಪ್ರಿಯವಾಯಿತು. ಈ ಭವಿಷ್ಯವು ಸದಾ ಕಾಲಕ್ಕೂ ಯಾವಾಗಲೂ ನಿಜವಾಗುತ್ತಿರಲಿಲ್ಲ. ನಾಣ್ಯವನ್ನು ಮೇಲಕ್ಕೆ ಎಸೆದಾಗ – ಹೆಡ್ ಅಥವ ಟೇಲ್ ಎರಡರಲ್ಲಿ ಒಂದು ಬೀಳಲೇಬೇಕು. ಅಂದರೆ ಜ್ಯೋತಿಷಿಗಳು ನುಡಿಯುವ ಭವಿಷ್ಯವು 50% ನಿಜವಾಗಿಯೇ ತೀರುತ್ತದೆ. ಈ ಸತ್ಯ ಗೊತ್ತಿದ್ದರೂ ಸಹ, ಜನಸಾಮಾನ್ಯರು ಹತಾಶರಾದಾಗ, ಇಂದಿಗೂ ಜ್ಯೋತಿಷಕ್ಕೆ ಮೊರೆಹೋಗುವುದು ಸಾಮಾನ್ಯವಾಗಿದೆ.

ಕುಂಡಲಿಯಲ್ಲಿ ವ್ಯಕ್ತಿತ್ವ: ತಾರಾ-ಮನೋವಿಜ್ಞಾನವನ್ನು ಮಾನಸಿಕ ಜ್ಯೋತಿರ್ವಿಜ್ಞಾನ ಎಂದೂ ಕರೆಯುವರುಂಟು. ಮನೋವಿಜ್ಞಾನ ಮತ್ತು ಜ್ಯೋತಿರ್ವಿಜ್ಞಾನಗಳ ಸಂಯುಕ್ತ ರೂಪವಿದು. ತಾರಾ- ಮನೋವಿಜ್ಞಾನವು ಜಾಗತಿಕ ಗಮನವನ್ನು ಸೆಳೆಯಲು ಕಾರಣ ಸ್ವಿಸ್ ಮನೋವೈದ್ಯ ಕಾರ್ಲ್ ಗುಸ್ತಾವ್ ಯೂಂಗ್ (1875- 1961). ಒಂದು ಮಗುವು ಹುಟ್ಟಿದಾಗ, ಅದರ ಕ್ರೋಮೋಸೋಮುಗಳಲ್ಲಿ, ಆ ಮಗುವಿನ ಗುಣಲಕ್ಷಣಗಳನ್ನು ನಿರ್ಧರಿಸುವ ವಂಶವಾಹಿಗಳು ಇರುತ್ತವೆ ಎನ್ನು ವುದು ನಮಗೆ ತಿಳಿದಿರುವ ವಿಚಾರ. ಆದರೆ ಮಗುವಿನ ಮನಸ್ಸು, ವರ್ತನೆ, ವ್ಯಕಿತ್ವ ಇತ್ಯಾದಿಗಳು ಅದೇ ವಂಶವಾಹಿಗಳಲ್ಲಿ ಪೂರ್ವ ನಿರ್ಧಾರಿತವಾಗಿ ಇರುತ್ತ ವೆಯೆ? ಈ ಪ್ರಶ್ನೆಗೆ ಇದೆ ಅಥವ ಇಲ್ಲ ಎನ್ನಲು ನಮ್ಮ ಬಳಿ ಸೂಕ್ತ ಆಧಾರಗಳು ಸಧ್ಯಕ್ಕೆ ಇಲ್ಲ.

ಒಂದು ಉದಾಹರಣೆ. ಧನುರ್ ರಾಶಿಯಲ್ಲಿ (ಸಜಿಟಾರಿಯಸ್) ಹುಟ್ಟಿದವರು ಜ್ಞಾನ ಪಿಪಾಸುಗಳಾಗಿರುತ್ತಾರೆ, ದೇಶ ವಿದೇಶಗಳ ಪ್ರವಾಸವನ್ನು ಇಷ್ಟ
ಪಡುತ್ತಾರೆ ಹಾಗೂ ತಾತ್ವಿಕರಾಗಿರುತ್ತಾರೆ (ಫಿಲಾಸಫಿಕಲ್) ಎನ್ನುತ್ತದೆ ಜ್ಯೋತಿರ್ವಿಜ್ಞಾನ. ಅಂದರೆ ಧನುರ್ ರಾಶಿಯಲ್ಲಿ ಹುಟ್ಟಿದ ಎಲ್ಲರಿಗೂ ಇಂತಹ ಲಕ್ಷಣಗಳು ಹುಟ್ಟಿನಿಂದಲೇ ಬರುತ್ತವೆ ಎಂದಾಯಿತು. ಹೀಗೆ ಜನ್ಮದತ್ತವಾಗಿ ಬರುವ ಲಕ್ಷಣಗಳನ್ನು ಆಧಿಪತ್ಯ ವರ್ಗ ಸಿದ್ಧಾಂತ (ಆರ್ಕಿಟೈಪಲ್ ಹೈಪಾಥೆಸಿಸ್) ಎನ್ನುವರು.
ಸಿಗ್ಮಂಡ್ ಫಾಯ್ಡ್ ಪ್ರತಿಯೊಬ್ಬ ಮನುಷ್ಯನಲ್ಲಿ ಒಂದು ಸುಪ್ತಪ್ರಜ್ಞೆಯಿರುತ್ತದೆ ಹಾಗೂ ಆ ಸುಪ್ತಪ್ರಜ್ಞೆಯು ಮನುಷ್ಯನ ಮನಸ್ಸಿನ ಚಟುವಟಿಕೆಗಳನ್ನು ನಿರ್ಧರಿಸುತ್ತವೆ
ಎಂದ.

ಕಾರ್ಲ್ ಯೂಂಗ್ ಒಂದು ಹೆಜ್ಜೆ ಮುಂದಕ್ಕೆ ಹೋಗು, ಮನುಷ್ಯನ ಮನಸ್ಸಿನಲ್ಲಿ ಮೂರು ಘಟಕಗಳಿವೆ. ಅಹಂ (ಈಗೋ) ವ್ಯಕ್ತಿಯ ಸುಪ್ತಪ್ರಜ್ಞೆ (ಪರ್ಸನಲ್ ಅನ್
ಕಾನ್ಷಿಯಸ್) ಮತ್ತು ಸಾಮೂಹಿಕ ಸುಪ್ತಪ್ರಜ್ಞೆ (ಕಲೆಕ್ಟಿವ್ ಅನ್‌ಕಾನ್ಷಿಯಸ್). ಯೂಂಗ್‌ರವರು ಈಗೋ ಎನ್ನುವುದು ನಮ್ಮ ಜಾಗೃತ ಪ್ರಜ್ಞೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಅವನದ್ದೇ ಆದ ಸುಪ್ತ ಪ್ರಜ್ಞೆಯಿರುತ್ತದೆ ಹಾಗೂ ಪ್ರತಿಯೊಬ್ಬರಲ್ಲೂ ಸಾಮೂಹಿಕ ಪ್ರಜ್ಞೆಯಿರುತ್ತದೆ. ಧನುರ್ ರಾಶಿಯಲ್ಲಿ ಹುಟ್ಟುವ ಎಲ್ಲರ ಸಾಮೂಹಿಕ ಪ್ರeಯ ವಿವರವನ್ನು ನೋಡಿದೆವು. ಆದರೆ ಧನುರ್ ರಾಶಿಯಲ್ಲಿ ಹುಟ್ಟುವ ಪ್ರತಿಯೊಬ್ಬರ ದೈನಂದಿನ ವರ್ತನೆಯು ಏಕರೂಪವಾಗಿರುವುದಿಲ್ಲ.

ಅದಕ್ಕೆ ವ್ಯಕ್ತಿಯ ವೈಯುಕ್ತಿಕ ಕುಂಡಲಿಯಲ್ಲಿರುವ ವಿವಿಧ ಗ್ರಹಗಳ ಪೂರಕ ಹಾಗೂ ಮಾರಕ ಪ್ರಭಾವಗಳು ಕಾರಣವಾಗಿರುತ್ತವೆ. ಹೀಗೆ ವೈಯುಕ್ತಿಕ ಮತ್ತು ಸಾಮೂಹಿಕ ಧನುರ್ ರಾಶಿಯ ಫಲಗಳು ವ್ಯಕ್ತಿಯ ಜಾಗೃತ ಪ್ರeಯ ಮೇಲೆ ಪ್ರಭಾವವನ್ನು ಬೀರಿ ಅವನ ವರ್ತನೆಗಳನ್ನು ನಿಯಂತ್ರಿಸುತ್ತವೆ. ಸಾಮೂಹಿಕ
ಪ್ರeಯು ಜನ್ಮದತ್ತವಾದದ್ದು, ಸಾರ್ವತ್ರಿಕವಾದದ್ದು ಹಾಗೂ ಆನುವಂಶಿಕವಾದದ್ದು. ಕಾರ್ಲ್ ಯೂಂಗ್ ತಮ್ಮ ಈ ಸಿದ್ಧಾಂತಕ್ಕೆ ಪ್ರಾಯೋಗಿಕ ಪುರಾವೆಯನ್ನು ನೀಡಲಿಲ್ಲ.

ಹಾಗಾಗಿ ಅನೇಕರು ತಾರಾ-ಮನೋವಿಜ್ಞಾನವನ್ನು ಹುಸಿವಿಜ್ಞಾನವೆಂದು ಪರಿಗಣಿಸಿರುವರು. ಕಥೆಗಳನ್ನು ಹೇಳುವ ಕಲೆ ಅನಾದಿ ಕಾಲದ್ದು. ಈ ಜಗತ್ತಿನಲ್ಲಿ ಅದೆಷ್ಟು ಕಥೆಗಳಿವೆಯೋ! ಜನರು ಇಂದಿಗೂ ಕಥೆಗಳನ್ನು ಕಟ್ಟುತ್ತಿದ್ದಾರೆ, ಮುಂದೆಯೂ ಕಟ್ಟುತ್ತಾರೆ. ಕ್ರಿಸ್ಟೋಫರ್ ಜಾನ್ ಪೆನ್ರೀಸ್ ಬೂಕರ್ (1937-2019)
ಎನ್ನುವ ಇಂಗ್ಲಿಷ್ ಲೇಖಕ ಹಾಗೂ ಪತ್ರಕರ್ತನು ಜಗತ್ತಿನ ಎಲ್ಲಾ ಕಥೆಗಳ ಕಥಾವಸ್ತುಗಳನ್ನು 7 ಶೀರ್ಷಿಕೆಗಳಲ್ಲಿ ಸಂಗ್ರಹಿಸಬಹುದು ಎಂದ. 1. ದುಷ್ಟರನ್ನು ಕೊಂದು ಶಿಷ್ಟರನ್ನು ರಕ್ಷಿಸುವುದು. 2. ಬಡತನದಿಂದ ಸಿರಿವಂತರಾಗುವುದು. 3. ಹೊಸ ಶೋಧನೆ ಅಥವಾ ಅನ್ವೇಷಣೆಯನ್ನು ನಡೆಸುವುದು. 4. ಸಾಹಸ
ಪ್ರಯಾಣವನ್ನು ಮಾಡಿ ಸುರಕ್ಷಿತವಾಗಿ ಹಿಂದಿರುಗುವುದು. 5. ನಗುವನ್ನು ಉಕ್ಕಿಸಿ ಉಲ್ಲಸಿತರನ್ನಾಗಿ ಮಾಡುವುದು. 6.ದುರಂತದಲ್ಲಿ ಮುಕ್ತಾಯವಾಗುವುದು ಹಾಗೂ 7.ಪುನರ್ಜನ್ಮದ ಕಥೆಗಳು. (ಸಾಮೂಹಿಕ ಸುಪ್ತಪ್ರಜ್ಞೆ).

ಮನುಷ್ಯನು ಹೊಸೆಯುವ ಎಲ್ಲ ಕಥೆಗಳು ಈ ಏಳು ನಮೂನೆಗಳಲ್ಲಿ ಯಾವುದಾದರೂ ಒಂದನ್ನು ಅಥವಾ ಒಂದಕ್ಕಿಂತ ಹೆಚ್ಚಿನ ವಿಷಯವನ್ನು ಒಳಗೊಂಡಿರುತ್ತವೆ.
ದುಷ್ಟರನ್ನು ಕೊಲ್ಲುವ ಶಿಷ್ಟರನು ಕೊಲ್ಲುವ ಕಥೆಯು ರಾಮಾಯಣ ಹಾಗೂ ಮಹಾಭಾರತಗಳೆರಡರಲ್ಲೂ ಬರುತ್ತವೆ. ಕಥಾ ಮೂಲ ಒಂದೇ ಆದರೂ, ವಾಲ್ಮೀಕಿ ಮತ್ತು ವ್ಯಾಸರ ಕಥನ ಶೈಲಿ ಭಿನ್ನವಾಗಿದೆ (ವ್ಯಕ್ತಿ ಸುಪ್ತಪ್ರಜ್ಞೆ). ಕಾರ್ಲ್ ಯೂಂಗ್‌ರವರ ಆದಿಪತ್ಯ ವರ್ಗ ಸಿದ್ಧಾಂತವನ್ನು ಪರಿಷ್ಕರಿಸುವ ಪ್ರಯತ್ನಗಳು ನಡೆದಿವೆ. ಕೆರೋಲ್ ಪಿಯರ್ಸನ್ ಮತ್ತು ಮಾರ್ಗರೆಟ್ ಮಾರ್ಕ್ ಅನ್ವಯ, ಆದಿಪತ್ಯ ವರ್ಗ ಸಿದ್ಧಾಂತದಲ್ಲಿ ಪ್ರಧಾನವಾಗಿ ಮೂರು ವರ್ಗಗಳಿದ್ದು, ಒಂದೊಂದು ವರ್ಗದಲ್ಲಿ ನಾಲ್ಕು ಉಪವರ್ಗಗಳಿವೆಯಂತೆ.

ಮಾರ್ಗರೆಟ್ ಹಾರ್ಟ್ವೆಲ್ ಮತ್ತು ಜೋಶುವ ಶೆನ್‌ರವರ ಅನ್ವಯ ಒಟ್ಟು 12 ವರ್ಗಗಳಿದ್ದು, ಒಂದೊಂದು ವರ್ಗದಲ್ಲಿ ಐದೈದು ಉಪವರ್ಗಗಳಿವೆಯಂತೆ. ಕಾರ್ಲ್ ಯೂಂಗ್ ಅವರ ಸಿದ್ಧಾಂತವನ್ನು ಹಲವು ರೀತಿಯಲ್ಲಿ ಮಂಡಿಸುವ ಪ್ರಯತ್ನಗಳು ನಡೆದಿವೆ. ಉದಾ: ಒಬ್ಬ ವ್ಯಕ್ತಿಯು ಇಷ್ಟ ಪಡುವ ಬಣ್ಣಗಳು ಮತ್ತು ವ್ಯಕ್ತಿತ್ವವನ್ನು ಸೂಚಿಸುತ್ತವೆ, ಒಬ್ಬ ವ್ಯಕ್ತಿ ಹುಟ್ಟಿದ ದಿನಾಂಕದಿಂದ ಮತ್ತು ಅವನ ವ್ಯಕ್ತಿತ್ವವನ್ನು ತಿಳಿಯಬಹುದು, ಒಬ್ಬ ವ್ಯಕ್ತಿಯ ಹಸ್ತಬರಹವು ಅವನ ವ್ಯಕ್ತಿತ್ವದ ಪ್ರತೀಕ ಇತ್ಯಾದಿ. ಇವೆಲ್ಲವನ್ನು ನೋಡಿದರೆ ತಾರಾಮನೋವಿಜ್ಞಾನವು ಹುಸಿವಿಜ್ಞಾನವೇ ಆಗಿರಬೇಕು ಎನ್ನಿಸುತ್ತದೆ. ಏಕೆಂದರೆ ಇವು ಆಧುನಿಕ ವಿಜ್ಞಾನದ ನಿಕಷದ ಮುಂದೆ ಸೋಲುತ್ತವೆ.