ನವಪರ್ವ
ಮಿರ್ಲೆ ಚಂದ್ರಶೇಖರ
ಡಿಸೆಂಬರ್ ಅಂತ್ಯದಲ್ಲಿ ಎಲ್ಲರನ್ನೂ ಕಾಡುವ ಕಟ್ಟಕ ಡೆಯ ಪ್ರಶ್ನೆ- ‘ಹೊಸ ವರ್ಷದಲ್ಲಿ ನನ್ನ ನಿರ್ಣಯಗಳು (ರೆಸಲ್ಯೂಷನ್ಸ್) ಏನಾಗಿರಬೇಕು?’ ಎಂಬುದು. ಹೊಸವರ್ಷದ ಸಂಭ್ರಮಾಚರಣೆಯಲ್ಲಿ ತೊಡಗುವ ಪ್ರತಿಯೊಬ್ಬರ ಮನದಲ್ಲೂ, ‘ಈ ಬಾರಿ ನನ್ನ ಹವ್ಯಾಸ, ನಡವಳಿಕೆ ಹಾಗೂ ಗುಣಗಳಲ್ಲಿ ಏನು ಬದಲಾವಣೆ ತಂದುಕೊಳ್ಳಬೇಕು, ಆ ನಿಟ್ಟಿನಲ್ಲಿ ಯಾವ ನಿರ್ಣಯವನ್ನು ಕೈಗೊಳ್ಳಬೇಕು?’ ಎಂಬುದೊಂದು ಪ್ರಶ್ನೆಯೋ ಗೊಂದಲವೋ ಉದ್ಭವಿಸುವುದುಂಟು.
ಕೆಲವರಂತೂ, ಡಿಸೆಂಬರ್ ಕೊನೆಯ ವಾರ ಮತ್ತು ತರುವಾಯದ ಜನವರಿಯ ಮೊದಲ ವಾರದ ದಿನಗಳಲ್ಲಿ, ಶಾಂತಿ ಹಾಗೂ ಸತ್ಯದ ಮಾರ್ಗ ಹಿಡಿದು ಗೌತಮ ಬುದ್ಧರೇ ಆಗಿಬಿಡುವ ಸಂಕಲ್ಪವನ್ನು ಹುರುಪು-ಹುಮ್ಮಸ್ಸಿನಿಂದ ತಳೆಯುವುದುಂಟು. ಹಿಂದಿನ ವರ್ಷಗಳಲ್ಲಿ ತೆಗೆದುಕೊಂಡ ನಿರ್ಣಯಗಳು ಈಗಷ್ಟೇ ಸೋತು ಮಲಗಿವೆ, ನಾವೂ ಅವುಗಳನ್ನು ಮರೆತಾಗಿದೆ. ಈಗ ಹೊಸದಕ್ಕೆ ನಮ್ಮ ಮನಸ್ಸುಗಳು (ಪಾರ್ಟಿಯ ಗುಂಗಿನಲ್ಲಿ) ತುಡಿಯುತ್ತಿವೆ. ಡಿಸೆಂಬರ್ ನಲ್ಲಿ ಹುಟ್ಟಿ ಜನವರಿಯಲ್ಲೇ ಸಾಯುವ ಹೊಸವರ್ಷದ ನಿರ್ಣಯಗಳಿಗೆ ದೀರ್ಘಾಯಸ್ಸು ಇರಬೇಕಿತ್ತು, ಆಗಲಾದರೂ ನೆಮ್ಮದಿಯ ಬದುಕು ನಮ್ಮದಾಗಿರುತ್ತಿತ್ತು!
ಕೆಲವರಂತೂ, ತಿಂದು-ಕುಡಿದು-ಕುಣಿದು, ರಾತ್ರಿ ಪೂರಾ ನಿದ್ರೆಗೆಟ್ಟು, ಕುಡಿದ ಮಂಪರಿನಲ್ಲಿ ಹೊಸವರ್ಷದ ಮೊದಲನೇ ದಿನವೇ ನಿತ್ರಾಣರಾಗಿ ಬೀಳುವ ಸ್ಥಿತಿಗೆ ಬರುವುದಕ್ಕೆಂದು, ಎಲ್ಲೆಲ್ಲಿಗೋ ಹೋಗಿ ಹಣ ಖರ್ಚು ಮಾಡು ತ್ತಾರೆ. ಹೊಸವರ್ಷದ ಸಂಭ್ರಮಾಚರಣೆಗೆ ತಾವು ‘ಪುಣ್ಯಸ್ಥಳ’ವಾಗಿ ಆಯ್ಕೆಮಾಡಿಕೊಳ್ಳುವ ಬೆಂಗಳೂರಿನ ಎಂ.ಜಿ.ರೋಡ್, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರೋಡ್‌ಗಳಲ್ಲಿ ತರುಣರು ಕಿಕ್ಕಿರಿದು, ಜೋಶ್‌ನಿಂದ ಅಸಭ್ಯವಾಗಿ ವರ್ತಿಸುತ್ತಾ ನಲಿಯು ವುದು -ಷನ್ ಆಗಿಬಿಟ್ಟಿದೆ. ದುರ್ಘಟನೆಗಳು ನಡೆಯದಿರಲೆಂದು ಪೊಲೀಸ್ ಇಲಾಖೆಯು
ಕೆಲವು ದಿನಗಳ ಮುಂಚೆಯಿಂದಲೇ ಕಟ್ಟೆಚ್ಚರ ವಹಿಸುತ್ತದೆ, ಆದರೂ ಕೆಲ ದುರ್ಘಟನೆಗಳನ್ನು ತಪ್ಪಿಸಲಾಗದು.
ಆಚರಣೆಯ ದಿನ ಕೆಲವೆಡೆ ಕುರಿ-ಕೋಳಿ-ಮೇಕೆಗಳ ತಲೆಗಳು ಬೀಳುತ್ತವೆ, ಮದ್ಯವು ಹೊಳೆಯಾಗಿ ಹರಿ
ಯುತ್ತದೆ. ಡಿಜೆ ಸೌಂಡ್ ಹಿನ್ನೆಲೆಯಲ್ಲಿ ಕೆಲ ಗಂಡು- ಹೆಣ್ಣುಗಳು ಯಾವುದೇ ಭೇದಭಾವವಿಲ್ಲದೆ, ಸಮಾನತೆ
ಯನ್ನು ಸಾಕಾರಗೊಳಿಸಿಕೊಂಡು, ಮೈಮೇಲಿನ ಬಟ್ಟೆಯ ಪರಿವೆಯೇ ಇಲ್ಲದಂತೆ ಕುಣಿಯುತ್ತಾರೆ. ಹೋಟೆಲ್ಲು ಮತ್ತು ರೆಸಾರ್ಟುಗಳಲ್ಲಿ ವ್ಯಾಪಾರ- ವಹಿವಾಟು ಬಂಪರ್! ತೆರಿಗೆಯ ರೂಪದಲ್ಲಿ ಸರಕಾರಿ ಬೊಕ್ಕಸಕ್ಕೆ ಹೆಚ್ಚೆಚ್ಚು ರೆವಿನ್ಯೂ!
ನಮ್ಮ ಸಮಾಜದಲ್ಲಿ ಏನೇ ಚಟುವಟಿಕೆಗಳು ನಡೆಯಲಿ, ನೇಪಥ್ಯದಲ್ಲಿರುವ ಉದ್ದೇಶ ವ್ಯಾಪಾರವೇ. ಇಂಥ ವ್ಯಾಪಾರಿ ಗಿಮಿಕ್ ಗಳಿಂದಾಗಿ, ಭಾರತೀಯ ಪದ್ಧತಿಯಲ್ಲಿ ಆಚರಣೆಯಲ್ಲಿ ಇಲ್ಲದಂಥವೂ ಆಚರಣೆಗೆ ಬರು ವಂತಾಗಿಬಿಟ್ಟಿದೆ! ಇವುಗಳು ಏನೇ ಇರಲಿ, ಪಾರ್ಟಿ ಮಾಡಿ ಮಜಾ ಮಾಡುವುದರ ಜತೆಗೆ ಬಹುತೇಕರು, ಹೊಸ ವರ್ಷದಲ್ಲಿ ತಾವು ಹೀಗೆ ಇರಬೇಕು ಎಂಬ ಗುರಿಯಿಟ್ಟುಕೊಂಡು ಕೈಗೊಳ್ಳುವ ನಿರ್ಣಯಗಳಲ್ಲಿ, ‘ಕೋಪ ಮಾಡಿ ಕೊಳ್ಳುವುದಿಲ್ಲ, ಎಣ್ಣೆ ಬಿಡುತ್ತೇನೆ, ಬೀಡಿ-ಸಿಗರೇಟನ್ನು ಮುಟ್ಟುವುದಿಲ್ಲ, ಮುಂಜಾನೆ ಬೇಗನೆದ್ದು ಯೋಗಾಭ್ಯಾಸ ಮಾಡುತ್ತೇನೆ, ಹೊಸ ಉದ್ಯಮ ಪ್ರಾರಂಭಿಸುತ್ತೇನೆ, ಹೊಸ ಕೋರ್ಸಿಗೆ ಸೇರುತ್ತೇನೆ’ ಎಂಬುದೆಲ್ಲಾ ಸೇರಿರುತ್ತವೆ.
ಹೊಸವರ್ಷದ ನಿರ್ಣಯಗಳನ್ನು ಕೈಗೊಳ್ಳುವವರ ಪೈಕಿ, ದುಶ್ಚಟಗಳನ್ನು ಮೈಗೂಡಿಸಿಕೊಂಡಿರುವ ಮಹಾಶಯರ
ಸಂಖ್ಯೆಯೇ ಹೆಚ್ಚು. ಸ್ವಭಾವದಲ್ಲಿ ಬದಲಾವಣೆ ಮಾಡಿಕೊಳ್ಳದೆಯೇ ಹೀಗೆ ತೆಗೆದುಕೊಳ್ಳುವ ಪೊಳ್ಳು ನಿರ್ಣ
ಯಗಳಿಂದ ಜೀವನಕ್ರಮ ಬದಲಾಗದು ಎಂಬ ಸತ್ಯ ತಿಳಿಯದ ಜನರಿವರು. ‘ನಿರ್ಣಯಗಳನ್ನು ಅನುಸರಿಸಲು
ಅವೇನು ಸರಕಾರಿ ಆದೇಶಗಳೇ, ಆಚರಿಸದಿದ್ದರೆ ದಂಡ-ಶುಲ್ಕಗಳೇನೂ ಇಲ್ಲವಲ್ಲ?’ ಎಂಬ ಧೋರಣೆ
ಇವರದ್ದು.
ಶಕ್ತಿ ಹಾಗೂ ಸಾಮರ್ಥ್ಯ ಮೀರಿ ತೆಗೆದುಕೊಳ್ಳುವ ರೆಸಲ್ಯೂಷನ್‌ಗಳು ಅನುಷ್ಠಾನದಲ್ಲಿ ವಿಫಲವಾಗುತ್ತವೆ.
ಸಾಮರ್ಥ್ಯಕ್ಕೆ ಅನುಗುಣವಾದ ರೆಸಲ್ಯೂಷನ್‌ಗಳಿದ್ದರೆ, ಅವುಗಳಲ್ಲಿ ಯಶಸ್ಸು ಕಾಣಲಿಕ್ಕೆ ಸಾಧ್ಯವಿದೆ. ನಮ್ಮ
ನಡವಳಿಕೆಯನ್ನು ತಿದ್ದಿಕೊಳ್ಳುವುದಕ್ಕೆ ಸಂಕಲ್ಪಿಸಲು ಡಿಸೆಂಬರ್ ತಿಂಗಳ ಕೊನೆಯ ದಿನವೇ ಏಕೆ? ವರ್ಷದ
ಎಲ್ಲಾ ದಿನಗಳಲ್ಲೂ ಜನಮೆಚ್ಚುವ ರೀತಿಯಲ್ಲಿ ಬದುಕುವಂತಾಗಲು ನಮ್ಮ ಗುಣ-ಸ್ವಭಾವಗಳನ್ನು ತಿದ್ದಿಕೊಳ್ಳುತ್ತಾ
ನಡೆಯುವುದು ಒಳ್ಳೆಯದಲ್ಲವೇ? ಹಾಗೆಯೇ, ಹಿಂದಿನ ವರ್ಷಗಳಲ್ಲಿ ತೆಗೆದುಕೊಂಡ ರೆಸಲ್ಯೂಷನ್‌ಗಳಲ್ಲಿ ಎಷ್ಟು
ಕಾರ್ಯರೂಪಕ್ಕೆ ಬಂದವು, ಅದೆಷ್ಟು ಹಳ್ಳ ಹಿಡಿದವು ಎಂಬ ವಿಮರ್ಶೆಯಾಗಲಿ. ಇದು ಈಗ ತೆಗೆದುಕೊಳ್ಳುವ
ಹೊಸ ರೆಸಲ್ಯೂಷನ್‌ಗಳಿಗೆ ಸಹಕಾರಿ ಆಗಬಲ್ಲದು.
ದಿನಕ್ಕೆ 10-15 ಸಿಗರೇಟು ಸೇದುತ್ತಿದ್ದವನು, ಮದ್ಯಪಾನದ ಅಭ್ಯಾಸವಿರುವವನು ಆ ಚಟವನ್ನು ಒಮ್ಮೆಲೇ ಬಿಡಲಿಕ್ಕೆ ಆಗುವುದಿಲ್ಲ; ಹಾಗಾಗಿ ಅನುಸರಿಸಲು ಸಾಧ್ಯವಾದುದನ್ನು ಮಾತ್ರ ಪರಿಗಣಿಸಿ ಅದರಂತೆ ಹೊಸ ವರ್ಷದ ನಿರ್ಣಯ ಗಳನ್ನು ತಳೆಯೋಣ. ತೆಗೆದುಕೊಳ್ಳುವ ನಿರ್ಣಯಗಳು ಆರೋಗ್ಯಕ್ಕೆ ಹಾಗೂ ಪರಿಸರಕ್ಕೆ ಪೂರಕವಾಗಿರಲಿ. ಹೊಸವರ್ಷಕ್ಕೆ ಒಂದಷ್ಟು ಗಿಡಗಳನ್ನು ನೆಡಬಹುದಲ್ಲಾ? ಅದಕ್ಕೆ ನಿಮ್ಮದೇ ಜಮೀನು/ಜಾಗ ಇರಬೇಕೆಂದೇನೂ ಇಲ್ಲ.
ಸಮೀಪದ ಸಾರ್ವಜನಿಕ ಉದ್ಯಾನದಲ್ಲಿ ಕೈಯಾರೆ ಒಂದು ಗಿಡ ನೆಟ್ಟು, ಸಂರಕ್ಷಿಸಿ, ಅದರಲ್ಲಿ ಸಿಗುವ ಖುಷಿಯನ್ನು ಅನುಭವಿಸಿ. ಇದರಿಂದ ಪರಿಸರವೂ ಸ್ವಚ್ಛ ಮತ್ತು ನಾವು ನೆಟ್ಟ ಗಿಡಗಳು ಬೆಳೆಯುತ್ತಿದ್ದಂತೆ ಅವನ್ನು ನೋಡ ನೋಡುತ್ತ ನಮ್ಮ ಮನಸ್ಸು ಕೂಡ ಬದಲಾವಣೆಗೆ ತೆರೆದುಕೊಳ್ಳುವುದು. ಹೀಗೆ ಮಾಡುವುದರಿಂದ ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಕನಿಷ್ಠವೆಂದರೂ 500 ಗಿಡಗಳನ್ನು ನೆಡಬಹುದು. ಅಲ್ಲಿಗೆ ಭೂಮಿಯಲ್ಲಿ ಹಸಿರುಕ್ರಾಂತಿ ಯಾವ ಮಟ್ಟಕ್ಕೆ ಬೆಳೆಯಬಹುದು, ನೂರಾರು ಪಕ್ಷಿಗಳಿಗೆ ಆಶ್ರಯ ಹೇಗೆ ಸಿಗಬಹುದು ಮತ್ತು ಬಿಸಿಲ ಬೇಗೆಯಲ್ಲಿ ದಣಿದವರಿಗೆ ಎಷ್ಟೊಂದು ನೆರಳು ಸಿಗಬಹುದು ಎಂಬುದನ್ನು ಕಲ್ಪಿಸಿಕೊಳ್ಳಿ. ಹೊಸವರ್ಷಕ್ಕೆ ಹತ್ತಾರು ನಿರ್ಣಯ ಗಳನ್ನು ಕೈಗೊಳ್ಳುವ ಬದಲು, ಒಂದು ಅಥವಾ ಎರಡನ್ನಷ್ಟೇ ಪರಿಗಣಿಸುವುದರಿಂದ ಆಚರಣೆಗೆ ತರಲು ಸಾಧ್ಯವಾಗುತ್ತದೆ. ಹೊಸ ವರ್ಷ ನಿಮಗೆಲ್ಲರಿಗೂ ಮುದ ನೀಡಲಿ…
(ಲೇಖಕರು ಹವ್ಯಾಸಿ ಬರಹಗಾರರು)
ಇದನ್ನೂ ಓದಿ: PatitaPavana Das Column: ಬಾಂಗ್ಲಾ ಗಲಭೆ ಮತ್ತು ಕೃಷ್ಣ ಪ್ರಜ್ಞೆಯ ಪ್ರಚಾರ