Friday, 22nd November 2024

ಮೀನುಗಾರಿಕಾ ವಲಯವನ್ನು ಸಬಲೀಕರಿಸಿದ ಮೋದಿ ಸರಕಾರ

-ಡಾ. ಎಲ್. ಮುರುಗನ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ವಿಶ್ವದ ೩ನೇ ಅತಿದೊಡ್ಡ ಆರ್ಥಿಕತೆಯಾಗಲು ಆತ್ಮ ವಿಶ್ವಾಸದಿಂದ ಬೀಗುತ್ತಿರುವಾಗ, ಮೀನುಗಾರಿಕೆ ವಲಯವು ಈ ರಾಜಮಾರ್ಗದಲ್ಲಿ ಮುನ್ನಡೆಯಲು ಕವಚ ತೊಟ್ಟಿದೆ. ಪ್ರಧಾನಿಯವರ ‘ಸೇವಾ, ಸುಶಾ ಸನ್ ಮತ್ತು ಗರೀಬ್ ಕಲ್ಯಾಣ್’ ಪರಿಕಲ್ಪನೆಗೆ ಧನ್ಯವಾದಗಳು. ಕಳೆದ ೯ ವರ್ಷಗಳಲ್ಲಿ ಭಾರತೀಯ ಮೀನುಗಾರಿಕೆಯು ಉದಯೋನ್ಮುಖ ವಲಯವಾಗಿ ಹೊರಹೊಮ್ಮಿದೆ, ದೇಶವನ್ನು ಪ್ರಮುಖ ನೀಲಿ ಆರ್ಥಿಕತೆಯ ಹಾದಿಯಲ್ಲಿ ಕೊಂಡೊಯ್ಯಲು ಸದೃಢವಾಗಿ ನಿಂತಿದೆ. ಭಾರತವು ೮,೦೦೦ ಕಿ.ಮೀ.ಗಿಂತಲೂ ಹೆಚ್ಚಿನ ಸಮುದ್ರ ತೀರಗಳು, ವ್ಯಾಪಕವಾದ ವಿಶೇಷ ಆರ್ಥಿಕ ವಲಯ, ಕೆಲವು ದೊಡ್ಡ ನದಿಗಳು ಮತ್ತು ಜಲಾಶಯಗಳನ್ನು ಹೊಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಶ್ರಮ ಶೀಲ ಮಾನವ ಸಂಪನ್ಮೂಲವು ಸದಾ ಕಾಲವೂ ಮೀನುಗಾರಿಕೆ ಅಭಿವೃದ್ಧಿಗೆ ಅಗತ್ಯವಾದ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಬಹುಶಃ ಹಿಂದಿನ ಆಡಳಿತಗಳ ನಿರ್ಲಕ್ಷ್ಯ, ನಿರಾಸಕ್ತಿ ಮತ್ತು ನೀತಿ ವೈಫಲ್ಯಗಳಿಂದಾಗಿ ಅದನ್ನು ಸಂಪೂರ್ಣವಾಗಿ ಅರಿತುಕೊಳ್ಳಲು ಸಾಧ್ಯವಾಗಿರಲಿಲ್ಲ. ಸ್ವಾತಂತ್ರ್ಯದ
ನಂತರ ೨೦೧೪ರವರೆಗೆ ಕೇಂದ್ರ ಸರಕಾರವು ಮೀನಗಾರಿಕೆ ಅಭಿವೃದ್ಧಿಗೆ ೪,೦೦೦ ಕೋಟಿ ರುಪಾಯಿಗಳಿಗಿಂತ ಕಡಿಮೆ ಮೊತ್ತವನ್ನು ಬಿಡುಗಡೆ ಮಾಡಿವೆ ಎಂಬುದನ್ನು ಅನೇಕ ವರದಿಗಳು ಸೂಚಿಸುತ್ತಿವೆ.

ಅನೇಕ ಹಾಡುಗಳು ಮತ್ತು ಕಥೆಗಳಲ್ಲಿ ಒಬ್ಬ ಮೀನುಗಾರನು ‘ಸಾಗರದ ರಾಜ’ ಎಂದು ಶ್ಲಾಘಿಸಲ್ಪಟ್ಟಿದ್ದಾನೆ. ಆದರೆ ವಾಸ್ತವದಲ್ಲಿ ಅವನು ತನ್ನ ಬದುಕು ಕಟ್ಟಿಕೊಳ್ಳಲು ಪ್ರತಿದಿನ ಸಾಗರದೊಳಗೆ ಸಾವು-ಬದುಕಿನೊಡನೆ ಹೋರಾಡುತ್ತಾನೆ. ತಮಿಳಿನ ದಿಗ್ಗಜ ನಟ ಎಂ.ಜಿ. ರಾಮಚಂದ್ರನ್ (ಎಂಜಿಆರ್) ತಮ್ಮ ‘ಪಡಗೊಟ್ಟಿ’ ಚಿತ್ರದಲ್ಲಿ ಮೀನುಗಾರರ ಈ ದುಸ್ಥಿತಿಯನ್ನು ಸೂಕ್ಷ್ಮವಾಗಿ ಸೆರೆಹಿಡಿದಿದ್ದಾರೆ. ಮೀನುಗಾರರ ಸಂಕಟ ಮತ್ತು ಹೋರಾಟಗಳ ಹೃದಯವಿದ್ರಾವಕ ಚಿತ್ರಣ, ಅವರ ಶೋಷಣೆ ಮತ್ತು ಅಸಹಾಯಕತೆಯ ಸಂವೇದನಾಶೀಲ ವ್ಯವಸ್ಥೆಯು ಸಿನಿಮಾ ವೀಕ್ಷಕರ ಮೇಲೆ ಅಳಿಸಲಾಗದ ಛಾಪು ಮೂಡಿಸಿದೆ. ನಮ್ಮ ಮೀನುಗಾರ ಸಮುದಾಯಗಳಿಗೆ ಇರುವ ನೀಲಿ ಆರ್ಥಿಕತೆಯ ಅಪಾರ ಸಾಮರ್ಥ್ಯವನ್ನು ಅರ್ಥಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಈ ವಲಯದ ವ್ಯವಸ್ಥಿತ ಅಭಿವೃದ್ಧಿಗೆ ನಿರ್ಧರಿಸಿದರು. ಅವರ ನಾಯಕತ್ವದಲ್ಲಿ, ಕೇಂದ್ರ ಸರಕಾರವು ನೀಲಿ ಕ್ರಾಂತಿ ಯೋಜನೆಗೆ (೨೦೧೫: ೫೦೦೦ ಕೋಟಿ ರು.) ಹಾಗೂ ಮೀನುಗಾರಿಕೆ ಮತ್ತು ಜಲಕೃಷಿ ಮೂಲಸೌಕರ್ಯ ಅಭಿವೃದ್ಧಿ ನಿಧಿಗೆ (೨೦೧೭: ೭೫೨೨ ಕೋಟಿ ರೂ.) ಗಣನೀಯ ನೆರವು
ಒದಗಿಸುವ ಮೂಲಕ ಸುಧಾರಣೆಗಳ ಸರಣಿ ಪ್ರಾರಂಭಿಸಿದರು.

ಈ ಯೋಜನೆಗಳು ಭಾರತೀಯ ಮೀನುಗಾರಿಕೆಯಲ್ಲಿ ಚಟುವಟಿಕೆಗಳ ಸರಣಿಯಾಗೇ ಅನಾವರಣಗೊಂಡವು, ನೆಲಮಟ್ಟದಲ್ಲಿ ಮೂಲ ಸೌಕರ್ಯಗಳನ್ನು ಸೃಷ್ಟಿಸಿದವು, ಇವೆಲ್ಲವೂ ೨.೮ ಕೋಟಿ ಮೀನುಗಾರರ ಜೀವನವನ್ನು ಮುಟ್ಟಿದವು. ಭಾರತೀಯ ಮೀನುಗಾರಿಕೆ ಮುಂದುವರಿಯಲು ಪ್ರಾರಂಭಿಸಿದಾಗ, ಪ್ರಧಾನಿ ಮೋದಿ ೨೦೧೯ರಲ್ಲಿ ಕೇಂದ್ರೀಕೃತ ಅಥವಾ ಗುರಿಯಾಧಾರಿತ ಅಭಿವೃದ್ಧಿ ಗಾಗಿ ಹೊಸ ಮೀನುಗಾರಿಕೆ ಸಚಿವಾಲಯ ಪ್ರಾರಂಭಿಸಿದರು. ಭಾರತೀಯ ಮೀನುಗಾರಿಕೆಯು ದೊಡ್ಡ ಮಟ್ಟದ ಚೇತರಿಕೆಗೆ ತಯಾರಿ ನಡೆಸುತ್ತಿರುವಾಗ, ಕೋವಿಡ್-೧೯ ಸಾಂಕ್ರಾಮಿಕ ರೋಗದಿಂದಾಗಿ ಜಗತ್ತು ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತು. ಆದರೆ, ಮೋದಿ ನಾಯಕತ್ವವು ಈ ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸಿತು. ಮೀನುಗಾರಿಕಾ ವಲಯಕ್ಕೆ ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ ಘೋಷಿಸಿತು. ೨೦೨೦ರ ಸೆಪ್ಟೆಂಬರ್‌ನಲ್ಲಿ ೨೦,೦೫೦ ಕೋಟಿ ರುಪಾಯಿ ಮೊತ್ತದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು (ಪಿಎಂಎಂಎಸ್‌ವೈ) ಜಾರಿಗೆ ತಂದಿತು. ಇದು ಭಾರತೀಯ ಇತಿಹಾಸದಲ್ಲಿ ಮೀನುಗಾರಿಕೆ ವಲಯಕ್ಕೆ ಆದ ಅತಿದೊಡ್ಡ ಹೂಡಿಕೆ ಎನಿಸಿಕೊಂಡಿದೆ.

ಈ ತಾಜಾ ಹೂಡಿಕೆ ಮತ್ತು ಕೇಂದ್ರೀಕೃತ ಗಮನಕ್ಕೆ ಧನ್ಯವಾದಗಳನ್ನು ಸಲ್ಲಿಸಲೇಬೇಕು. ಪಿಎಂಎಂಎಸ್ ವೈ ಯೋಜನೆಯು ಮೀನುಗಾರಿಕೆ ಮೌಲ್ಯ ಸರಪಳಿಯಲ್ಲಿ ಮೀನು ಉತ್ಪಾದನೆ, ಉತ್ಪಾದಕತೆ ಮತ್ತು ಗುಣಮಟ್ಟದ ತಂತ್ರಜ್ಞಾನ, ಸುಗ್ಗಿ ಕಾಲದ ನಂತರದ ಮೂಲಸೌಕರ್ಯ ಮತ್ತು ಮಾರುಕಟ್ಟೆಯವರೆಗಿನ ನಿರ್ಣಾಯಕ ಅಂತರ ಅಥವಾ ಕಂದಕ ನಿವಾರಿಸಲು ಪ್ರಾರಂಭಿಸಿತು. ಇದು ಪ್ರಮುಖ ಕಾರ್ಯತಂತ್ರದ
ಆದ್ಯತೆಯ ಕ್ಷೇತ್ರಗಳನ್ನು ಗುರುತಿಸಿದೆ. ಸಾಗರ ಮೀನುಗಾರಿಕೆ, ಒಳನಾಡು ಮೀನುಗಾರಿಕೆ, ಮೀನುಗಾರರ ಕಲ್ಯಾಣ, ಮೂಲಸೌಕರ್ಯ ಮತ್ತು ಸುಗ್ಗಿಯ ನಂತರದ ನಿರ್ವಹಣೆ, ತಣ್ಣೀರು ಮೀನುಗಾರಿಕೆ, ಅಲಂಕಾರಿಕ ಮೀನುಗಾರಿಕೆ, ಜಲವಾಸಿ ಆರೋಗ್ಯ ನಿರ್ವಹಣೆ, ಸಮುದ್ರ ಕಳೆ ಕೃಷಿ ಇತ್ಯಾದಿ ಇದರಲ್ಲಿ ಸೇರಿವೆ. ಕಳೆದ ೯ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಸಂಸ್ಥೆಗಳು ಮತ್ತು ಮೀನು ಗಾರರನ್ನು ಒಳಗೊಂಡ ಕೇಂದ್ರ ಸರಕಾರದ ನಿರಂತರ ಪ್ರಯತ್ನಗಳು ಭಾರತೀಯ ಮೀನುಗಾರಿಕೆಯ ಸ್ಥಿತಿಯನ್ನು ನಾಟಕೀಯವಾಗಿ ಬದಲಾಯಿಸಿವೆ.

೧೦೭ಕ್ಕೂ ಹೆಚ್ಚು ಮೀನುಗಾರಿಕೆ ಬಂದರುಗಳು ಮತ್ತು ಸುರಕ್ಷಿತ ಲ್ಯಾಂಡಿಂಗ್, ಬರ್ತಿಂಗ್ ಮತ್ತು ಲೋಡಿಂಗ್-ಇನ್‌ಲೋಡಿಂಗ್‌ಗೆ ಅಗತ್ಯವಾದ ಫಿಶ್ ಲ್ಯಾಂಡಿಂಗ್ ಕೇಂದ್ರಗಳಂಥ ಪ್ರಮುಖ ಮೂಲ ಸೌಕರ್ಯಗಳನ್ನು ನಿರ್ಮಿಸಲಾಗಿದೆ ಮತ್ತು ಆಧುನೀಕರಿಸಲಾಗಿದೆ. ಕೊಚ್ಚಿನ್, ಚೆನ್ನೈ, ಮುಂಬೈ, ವಿಶಾಖ ಪಟ್ಟಣಂ ಮತ್ತು ಪಾರಾದೀಪ್‌ನಲ್ಲಿ ಪ್ರಮುಖ ಮೀನುಗಾರಿಕೆ ಬಂದರುಗಳ ಆಧುನೀಕರಣವನ್ನು ಸಕ್ರಿಯಗೊಳಿಸಲಾಗಿದೆ.
ಮೀನುಗಾರರ ಆದಾಯವು ಬೆಳೆಗಳ ಸುಗ್ಗಿಯ ನಂತರದ ನಿರ್ವಹಣೆಗೆ ನೇರವಾಗಿ ಸಂಬಂಧಿಸಿದೆ. ಅಂದರೆ ಮೀನುಗಳನ್ನು ಹೇಗೆ ಸಂಗ್ರಹಿಸಲಾಗುತ್ತದೆ, ಸಂರಕ್ಷಿಸಲಾಗುತ್ತದೆ, ಸಾಗಿಸಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ ಎಂಬುದನ್ನು ಕುರಿತಾದದ್ದು. ೨೫೦೦೦ಕ್ಕೂ ಹೆಚ್ಚಿನ ಮೀನು ಸಾರಿಗೆ ಸೌಲಭ್ಯಗಳು, ೬,೭೦೦ ಮೀನು ಗೂಡಂಗಡಿಗಳು/ಮಾರುಕಟ್ಟೆಗಳು ಮತ್ತು ೫೬೦ ಕೋಲ್ಡ್ ಸ್ಟೋರೇಜ್‌ಗಳಿಗೆ ಮಂಜೂರಾತಿ ನೀಡಲಾಗಿದ್ದು, ತಳಮಟ್ಟದಲ್ಲಿ ಈ ಮೀನುಗಾರಿಕೆ ಮೂಲಸೌಕರ್ಯವು ಹೆಚ್ಚು ಬಲಗೊಳ್ಳುತ್ತಿದೆ.

ಮೀನುಗಾರರು ಸಾಗರದಲ್ಲಿ ಅಪಾಯಗಳು ಮತ್ತು ಗಂಡಾಂತರಕಾರಿ ಕೆಲಸದ ಪರಿಸ್ಥಿತಿಗಳನ್ನು ಎದುರಿಸುತ್ತಾರೆ. ಈ ಅಪಾಯಗಳನ್ನು ತಗ್ಗಿಸಲು, ಪ್ರಸ್ತುತ ಇರುವ ೧,೦೪೩ ಮೀನುಗಾರಿಕಾ ಹಡಗುಗಳ ಉನ್ನತೀಕರಣ, ೬,೪೬೮ ದೋಣಿಗಳು ಮತ್ತು ೪೬೧ ಆಳ ಸಮುದ್ರ ಮೀನುಗಾರಿಕೆ ಹಡಗುಗಳ ಬದಲಾವಣೆ ಮತ್ತು ಉಪಗ್ರಹ ಆಧಾರಿತ ಸಂವಹನ ಬಳಸಿಕೊಂಡು ಸಮುದ್ರ ಮೀನುಗಾರಿಕೆ ಹಡಗುಗಳಲ್ಲಿ ೧ಲಕ್ಷ ಟ್ರಾನ್ಸ್‌ಪಾಂಡರ್‌ಗಳನ್ನು ಅಳವಡಿಸಲು ಅನುಮೋದನೆ ನೀಡಲಾಗಿದೆ.  ಪಿಎಂಎಂಎಸ್‌ವೈ ಯೋಜನೆಯು ಸಾಂಪ್ರದಾಯಿಕ ನೀರಿನಲ್ಲಿ ಒಳನಾಡು ಮೀನುಗಾರಿಕೆಯನ್ನು ಹೊರತೆಗೆದು ತಂತ್ರಜ್ಞಾನವನ್ನು ತುಂಬಿದ್ದು, ಇದು ಅನೇಕ ಪ್ರತಿಭಾವಂತ ಮತ್ತು ಉದ್ಯಮಶೀಲ ಯುವಕರನ್ನು ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದೆ. ಇಂದು ಕಾಶ್ಮೀರ ಕಣಿವೆಯ ಯುವ ಮಹಿಳಾ ಉದ್ಯಮಿಗಳು ಮರುಪರಿಚಲನಾ
ಅಕ್ವಾಕಲ್ಚರ್ ವ್ಯವಸ್ಥೆ ಬಳಸಿಕೊಂಡು ತಣ್ಣೀರಿನ ಮಳೆಬಿಲ್ಲು ಟ್ರೌಟ್‌ಗಳನ್ನು ಸಮರ್ಥವಾಗಿ ಸಾಕುತ್ತಿದ್ದಾರೆ. ನೆಲ್ಲೂರಿನ ಸಾಗರ ಉತ್ಪನ್ನಗಳ ಉದ್ಯಮ ಶೀಲರು (ಅಕ್ವಾಪ್ರೆನಿಯರ್‌ಗಳು) ಯಶಸ್ವಿ ರಫ್ತುದಾರರಾಗಿದ್ದಾರೆ.

ಬಯೋಫ್ಲೋಕ್ ಮೂಲಕ ಸೀಗಡಿ ಕೃಷಿ ಮಾಡುತ್ತಿರುವುದಕ್ಕೆ ಇವರಿಗೆ ಧನ್ಯವಾದಗಳನ್ನು ಸಲ್ಲಿಸಬೇಕು. ಸಾಂಪ್ರದಾಯಿಕವಲ್ಲದ ಪ್ರದೇಶಗಳಿಗೆ ಮೀನು ಗಾರಿಕೆಯನ್ನು ವಿಸ್ತರಿಸಲು ಪಿಎಂಎಂಎಸ್‌ವೈ ಸಹಾಯ ಮಾಡಿದೆ. ಸುಮಾರು ೨೦,೦೦೦ ಹೆಕ್ಟೇರ್ ತಾಜಾ ಕೊಳದ ಪ್ರದೇಶವನ್ನು ಒಳನಾಡು ಜಲಚರಗಳ ಅಡಿ ತರಲಾಗುತ್ತಿದೆ. ಹರಿಯಾಣ ಮತ್ತು ರಾಜಸ್ಥಾನದ ರೈತರು ತಮ್ಮ ಲವಣಯುಕ್ತ ತ್ಯಾಜ್ಯ ಭೂಮಿಯನ್ನು ಜಲಚರಗಳ ಮೂಲಕ ಸಂಪತ್ತಿನ ಭೂಮಿಯಾಗಿ ಯಶಸ್ವಿಯಾಗಿ ಪರಿವರ್ತಿಸುತ್ತಿದ್ದಾರೆ. ಪಿಎಂಎಂಎಸ್‌ವೈ ಯೋಜನೆಯು ಮೀನುಗಾರ ಮಹಿಳೆಯರಿಗೆ ಅಲಂಕಾರಿಕ ಮೀನುಗಾರಿಕೆ, ಮುತ್ತು ಕೃಷಿ ಮತ್ತು ಕಡಲಕಳೆ ಕೃಷಿಯಂಥ  ಲಾಭದಾಯಕ ಆಯ್ಕೆಗಳು ಹಾಗೂ ಪರ್ಯಾಯ ಜೀವನೋಪಾಯ ಅನ್ವೇಷಿಸಲು ಅವಕಾಶ ನೀಡಿದೆ.

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ಇತ್ತೀಚೆಗೆ ೧೨೭ ಕೋಟಿ ರುಪಾಯಿ ವೆಚ್ಚದಲ್ಲಿ ಆರಂಭಿಸಲಾದ ಕಡಲಕಳೆ ಪಾರ್ಕ್ ಮೋದಿ ಸರಕಾರದ ನಿಜವಾದ ಪ್ರವರ್ತಕ ಹೆಜ್ಜೆಯಾಗಿದೆ. ಬೀಜ, ಆಹಾರ ಅಥವಾ ಮೇವು (ಫೀಡ್) ಮತ್ತು ತಳಿ ಮೀನುಗಾರಿಕೆ ಕ್ಷೇತ್ರದ ಪ್ರಮುಖ ಅಂಶಗಳಾಗಿವೆ. ಪಿಎಂಎಂಎಸ್‌ವೈ ಯೋಜನೆಯು ೯೦೦ ಫಿಶ್ ಫೀಡ್ ಘಟಕಗಳು (ಪ್ಲಾಂಟ್‌ಗಳು), ೭೫೫ ಹ್ಯಾಚರಿಗಳನ್ನು ಸಕ್ರಿಯಗೊಳಿಸಿದೆ. ಚೆನ್ನೈನಲ್ಲಿ ಭಾರತೀಯ ಬಿಳಿ ಶ್ರಿಂಪ್‌ನ ಸಂಶೋಧನೆ ಮತ್ತು ಆನುವಂಶಿಕ ಸುಧಾರಣೆ, ನಿರ್ದಿಷ್ಟ ರೋಗಕಾರಕ ಮುಕ್ತ ತಳಿಗಳ ಅಭಿವೃದ್ಧಿ ಮತ್ತು ಅಂಡಮಾನ್‌ನಲ್ಲಿ ಹುಲಿ ಸೀಗಡಿಗಳ ಪಳಗಿಸುವಿಕೆಯನ್ನು ಬೆಂಬಲಿಸುತ್ತಿದೆ.
ಮೀನುಗಾರರು ಮತ್ತು ಮೀನುಗಾರಿಕೆ ಉದ್ಯಮಿಗಳ ಕಲ್ಯಾಣ ಹಾಗೂ ಅವರ ಜೀವನ ಸುಧಾರಣೆಯು ನೀಲಿ ಆರ್ಥಿಕತೆಯ ಉದ್ದೇಶಗಳಿಗೆ ಕೇಂದ್ರಬಿಂದುವಾಗಿದೆ. ಹಿಂಗಾರು ಮತ್ತು ನಿಷೇಧಿತ ಅವಧಿಯಲ್ಲಿ ಮೀನುಗಾರರಿಗೆ ಪೌಷ್ಟಿಕಾಂಶದ ಬೆಂಬಲ, ಸಮಗ್ರ ಕರಾವಳಿ ಗ್ರಾಮಗಳ ಅಭಿವೃದ್ಧಿ, ಮೀನುಗಾರರಿಗೆ ಸಹಾಯಮಾಡುವ ನೂರಾರು ಯುವ ಸಾಗರ ಮಿತ್ರರು, ಗುಂಪು ಅಪಘಾತ ವಿಮಾ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಸಾಂಸ್ಥಿಕ ಹಣಕಾಸು ನೆರವು ಮುಂತಾದ ಹಲವು ಕ್ರಮಗಳು ಭಾರತೀಯ ಮೀನುಗಾರಿಕೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿವೆ.

ಭಾರತೀಯ ಮೀನುಗಾರರ ಜತೆಗಿನ ಮೋದಿ ಸರಕಾರದ ಸಹಭಾಗಿತ್ವವು ಅವರನ್ನು ಸಬಲೀಕರಣಗೊಳಿಸಿದೆ. ಅವರಿಗೆ ಆತ್ಮವಿಶ್ವಾಸ ಮತ್ತು ಹೆಮ್ಮೆಯ ಭಾವನೆ ಮೂಡಿಸಿದೆ. ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಗೆ ದೇಶಾದ್ಯಂತದ ಮೀನುಗಾರರನ್ನು ಆಹ್ವಾನಿಸಲಾಯಿತು. ಸಾಗರ ಪರಿಕ್ರಮದ ವಿಶಿಷ್ಟ ಉಪಕ್ರಮದ ಮೂಲಕ ಭಾರತದ ಮೀನುಗಾರರೊಂದಿಗೆ ಮೀನುಗಾರಿಕಾ ಸಚಿವ ಪರ್ಶೋ ತ್ತಮ್ ರೂಪಾಲಾ ಅವರ ನೇರ ಸಂವಾದದಿಂದ ಈ ಪಾಲು ದಾರಿಕೆಯನ್ನು ನಿರಂತರವಾಗಿ ಬಲಪಡಿಸಲಾಗಿದೆ. ಸಮುದ್ರ ಮತ್ತು ಕರಾವಳಿ ಮಾರ್ಗದ ೮,೦೦೦ ಕಿ.ಮೀ. ಪ್ರಯಾಣದ ಮೂಲಕ ಮೀನುಗಾರರ ಹಳ್ಳಿಗಳಿಗೆ ಭೇಟಿ ನೀಡಲು ಮತ್ತು ಸಂವಾದ ನಡೆಸಲು ಇದು ಸಾಕ್ಷಿಯಾಯಿತು. ಕೆಳ ಮಟ್ಟದಲ್ಲಿ ನೀತಿಗಳು ಮತ್ತು ಯೋಜನೆಗಳ ಅನುಷ್ಠಾನವಾಗುತ್ತಿರುವುದಕ್ಕೆ ಇದು ದ್ಯೋತಕ. ಇತ್ತೀಚೆಗೆ ಕರಾವಳಿಯ ಜಲಚರಗಳ ಮೇಲೆ
ಅನಿಶ್ಚಿತತೆಯ ಕಾರ್ಮೋಡಗಳು ಸುಳಿದಾಡಿದಾಗ, ಸೂಕ್ಷ ಸಂವೇದನೆಯ ಮೋದಿ ಸರಕಾರವು ಕ್ಷಿಪ್ರವಾಗಿ ಕಾರ್ಯ ನಿರ್ವಹಿಸಿತು. ಕರಾವಳಿ ಜಲಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಲಕ್ಷಗಟ್ಟಲೆ ಜನರ ಕಳವಳಗಳನ್ನು ಪರಿಹರಿಸಲು ‘ಕರಾವಳಿ ಜಲಕೃಷಿ ತಿದ್ದುಪಡಿ ಕಾಯ್ದೆ ೨೦೨೩’ನ್ನು ಜಾರಿಗೆ ತಂದಿತು.

ಈ ಸೆಪ್ಟೆಂಬರ್‌ನಲ್ಲಿ ನಾವು ಪಿಎಂಎಂಎಸ್‌ವೈ ಯೋಜನೆಯ ೩ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಭಾರತೀಯ ಮೀನು ಗಾರಿಕೆಯ ಬದಲಾದ ದೃಷ್ಟಿಕೋನವನ್ನು ಯಾರು ಬೇಕಾದರೂ ಗಮನಿಸಬಹುದು. ಭಾರತವು ಮೀನು ಮತ್ತು ಜಲಚರಗಳನ್ನು ಉತ್ಪಾದಿಸುವ ಪ್ರಮುಖ ೩ ದೇಶಗಳಲ್ಲಿ ಒಂದಾಗಿದೆ. ಇಂದು ಭಾರತವು ವಿಶ್ವದ ಅತಿದೊಡ್ಡ ಸೀಗಡಿ ರಫ್ತುದಾರ ದೇಶವಾಗಿದೆ. ಸರಕಾರವು ಇತ್ತೀಚೆಗೆ ಪಿಎಂಎಂಎಸ್‌ವೈ ಯೋಜನೆ ಅಡಿ, ೬,೦೦೦ ಕೋಟಿ ರು. ಹೂಡಿಕೆಯನ್ನು ಉಪ ಯೋಜನೆಯಾಗಿ ಘೋಷಿಸಿದೆ, ಕಳೆದ ೯ ವರ್ಷಗಳಲ್ಲಿ ಮೀನುಗಾರಿಕೆ ವಲಯಕ್ಕೆ ಒಟ್ಟು ಹೂಡಿಕೆಯನ್ನು ೩೮,೫೦೦ ಕೋಟಿ ರು.ಗಳಿಗೆ ಹೆಚ್ಚಿಸಿದೆ. ಇಂದು ಭಾರತೀಯ ಮೀನುಗಾರಿಕೆ ಉತ್ಪಾದನೆ (೧೭೪ ಲಕ್ಷ ಟನ್ ತಾತ್ಕಾಲಿಕ ಅಂಕಿ-ಅಂಶ: ೨೦೨೨-೨೩) ಮತ್ತು ರಫ್ತು ಗಳಿಕೆಯು ಸಾರ್ವಕಾಲಿಕ ದಾಖಲೆಯಾಗಿದೆ. ೨೦೧೪ರಿಂದ ಕಳೆದ ೯ ವರ್ಷಗಳ
ಒಟ್ಟಾರೆ ಮೀನು ಉತ್ಪಾದನೆಯು ಹಿಂದಿನ ೩೦ ವರ್ಷಗಳ (೧೯೮೪-೨೦೧೪) ಮೀನು ಉತ್ಪಾದನೆಗಿಂತ ಹೆಚ್ಚಿದೆ. ಸೀಗಡಿ ಉತ್ಪಾದನೆಯು ೨೦೧೩-೧೪ರಲ್ಲಿ ೩.೨೨ ಲಕ್ಷ ಟನ್‌ಗಳಿಂದ ೨೦೨೨-೨೩ರಲ್ಲಿ ೧೧.೮೪ ಲಕ್ಷ
ಟನ್‌ಗಳಿಗೆ ಏರಿಕೆ ಕಂಡು ಶೇ.೨೬೭ರಷ್ಟು ಹೆಚ್ಚಳ ಕಂಡಿದೆ. ಭಾರತದ ಸಮುದ್ರ ಆಹಾರ ರ- ೨೦೧೩- ೧೪ರಲ್ಲಿ ಇದ್ದ ೩೦,೨೧೩ ಕೋಟಿ ರು.ನಿಂದ ೨೦೨೨- ೨೩ರಲ್ಲಿ ೬೩,೯೬೯ ಕೋಟಿ ರು.ಗೆ ದ್ವಿಗುಣಗೊಂಡಿದೆ.

ಕಳೆದ ೯ ವರ್ಷಗಳಲ್ಲಿ ಅಭಿವೃದ್ಧಿಪಡಿಸಿದ ಮೀನುಗಾರಿಕೆ ಪರಿಸರ ವ್ಯವಸ್ಥೆಯು ವೇಗವಾಗಿ ಪಕ್ವಗೊಳ್ಳುತ್ತಿದೆ, ಅದ್ಭುತ -ಲಿತಾಂಶಗಳನ್ನು ತೋರಿಸುತ್ತಿದೆ, ನಮ್ಮ ಮೀನುಗಾರ ಸಮುದಾಯಗಳಿಗೆ ಸಂಪತ್ತನ್ನು
ತರುತ್ತಿದೆ. ನೀಲಿ ಆರ್ಥಿಕತೆಯ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮೀನುಗಾರರು ಮತ್ತು ಸರಕಾರದ ನಡುವಿನ ಅಭಿವೃದ್ಧಿ ಪಾಲುದಾರಿಕೆ ಬಲಗೊಳ್ಳುತ್ತಿರುವುದರಿಂದ, ದಿವಂಗತ ಎಂಜಿಆರ್ ಅವರು ಇಂದು ಬದುಕಿದ್ದಾರೆ ಎಂದು ನಾನು ಬಯಸುತ್ತೇನೆ. ಪ್ರಧಾನಿ ಮೋದಿ ಅವರು ತಮ್ಮ ಪ್ರಾಮಾಣಿಕ ಪ್ರಯತ್ನ ಮತ್ತು ಸ್ಪಷ್ಟ ದೂರ ದೃಷ್ಟಿಯಿಂದ ‘ಪಡಗೊಟ್ಟಿ’ ಸಿನಿಮಾದಲ್ಲಿ ಬಿಂಬಿಸಿ ರುವ ಮೀನುಗಾರರ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸಿ, ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್’ ಎಂಬ ಮಂತ್ರದ ಮೂಲಕ ಅವರನ್ನು ಅಭಿವೃದ್ಧಿಯ ಪಥದಲ್ಲಿ ಹೇಗೆ ಬೆಂಬಲಿಸುತ್ತಿದ್ದಾರೆ ಎಂಬುದನ್ನು ನೋಡಿದರೆ ಎಂಜಿಆರ್ ಖಂಡಿತವಾಗಿಯೂ ಸಂತೋಷ ಪಡುತ್ತಾರೆ.
(ಲೇಖಕರು ಕೇಂದ್ರ ಮೀನುಗಾರಿಕೆ, ಪಶುಪಾಲನೆ ಮತ್ತು ಹೈನುಗಾರಿಕೆ, ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರು)