Tuesday, 26th November 2024

Mohan Vishwa Column: ನೆಹರು ಅಚಾತುರ್ಯಗಳ ಪಿತಾಮಹ

ವೀಕೆಂಡ್‌ ವಿತ್‌ ಮೋಹನ್‌

ಮೋಹನ್‌ ವಿಶ್ವ

camohanbn@gmail.com

ನರೇಂದ್ರ ಮೋದಿಯವರು ಕಳೆದ ವಾರ ಅಮೆರಿಕ ದೇಶಕ್ಕೆ ಪ್ರವಾಸ ಹೋದ ಸಂದರ್ಭದಲ್ಲಿ ಅಧ್ಯಕ್ಷ ಜೋ ಬೈಡನ್, ಘಟಾನುಘಟಿ ಕಂಪನಿಗಳ ಮುಖ್ಯಸ್ಥರು, ವಿಜ್ಞಾನಿಗಳು, ಅನಿವಾಸಿ ಭಾರತೀ ಯರನ್ನು ಭೇಟಿಯಾಗಿ ಭಾರತ ಮತ್ತು ಅಮೆರಿಕಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಚರ್ಚೆ ಮಾಡಿದ್ದಾರೆ.

2014 ರಲ್ಲಿ ಮೋದಿಯವರು ಪ್ರಧಾನಮಂತ್ರಿಯಾದ ನಂತರ ಅಮೆರಿಕದಲ್ಲಿ ಮೂರನೇ ಅಧ್ಯಕ್ಷರ ಆಡಳಿತ ನಡೆಯು ತ್ತಿದೆ. ಕಳೆದ ಮೂರು ಬಾರಿಯ ಅಮೆರಿಕ ಚುನಾವಣಾ ಪ್ರಚಾರದ ಕೇಂದ್ರ ಬಿಂದುವಾಗಿ ಮೋದಿ ಕಾಣಿಸಿ ಕೊಂಡಿ ದ್ದಾರೆ, ಚುನಾವಣಾ ಕಣದಲ್ಲಿರುವ ಘಟಾನುಘಟಿ ನಾಯಕರು ಮೋದಿಯವರನ್ನು ಭೇಟಿ ಮಾಡಲು ಇಚ್ಛಿಸುತ್ತಾರೆ. ಅಧಿಕಾರಕ್ಕೆ ಬಂದ ನಂತರ ಭಾರತದೊಂದಿಗಿನ ಸಂಬಂಧವನ್ನು ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಮೂರೂ ಅಧ್ಯಕ್ಷರು ಪ್ರಯತ್ನ ಮಾಡಿದ್ದರು. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಮಧ್ಯಸ್ಥಿಕೆ ವಹಿಸುವ ಕೆಲಸವನ್ನು ಭಾರತ ಸರಾಗವಾಗಿ ಮಾಡುತ್ತಿರುವುದು ಇದಕ್ಕೆ ಸಾಕ್ಷಿ. ಜಗತ್ತಿನ ದೊಡ್ಡಣ್ಣ ಅಮೆರಿಕ, ರಷ್ಯಾದೊಂದಿಗೆ ತನ್ನ ಶೀತಲಸಮರ ಮುಂದುವರೆಸಿದ್ದರೂ ಭಾರತ ಎರಡೂ ದೇಶಗಳ ನಡುವೆ ಉತ್ತಮ ಭಾಂದವ್ಯ ಹೊಂದುವುದರಲ್ಲಿ ಯಶಸ್ವಿಯಾಗಿದೆ.

ಮೊನ್ನೆ ಅಮೆರಿಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿಯವರು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧ ಗಳ ಬಗ್ಗೆ ಉಲ್ಲೇಖಿಸುತ್ತಾ, ಯುದ್ಧಕ್ಕಿಂತಲೂ ಮನುಷ್ಯತ್ವಕ್ಕೆ ಹೆಚ್ಚಿನ ಬೆಲೆ ನೀಡುವುದು ಉತ್ತಮವೆಂಬ ಸಂದೇಶ ವನ್ನು ನೀಡಿದರು. ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡುವುದರ ಬಗ್ಗೆ ಉಲ್ಲೇಖಿಸಿ ಮಾತನಾಡಿ ದರು, ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾರತದ ಪರವಾಗಿ ವಿಶ್ವಸಂಸ್ಥೆಯಲ್ಲಿ ನಿಲ್ಲುವುದಾಗಿ ಹೇಳಿದ್ದಾರೆ.

ಭಾರತ ಸ್ವತಂತ್ರಗೊಂಡ ಏಳು ದಶಕಗಳ ನಂತರವೂ ಪದೇ ಪದೇ ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವದ ವಿಷಯ ಚರ್ಚೆಗೆ ಬರುತ್ತಲೇ ಇದೆ. 1955 ರಲ್ಲಿ ನೆಹರು ಪ್ರಧಾನಿಯಾಗಿದ್ದಾಗ ಅಮೆರಿಕ ಭಾರತಕ್ಕೆ, ಚಿನ್ನದಂತಹ ಅವಕಾಶ ನೀಡಿತ್ತು. ಚೀನಾವನ್ನು ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್‌ನಿಂದ ಹೊರಗಿಟ್ಟು ಭಾರತವನ್ನು ಶಾಶ್ವತ ಸದಸ್ಯ ಆಗುವಂತೆ ಹೇಳಿತ್ತು. ಅವಕಾಶವನ್ನು ಬಳಸಿಕೊಳ್ಳದ ನೆಹರು ಅಮೆರಿಕದ ಸೂಚನೆಯನ್ನು ಗಂಭೀರವಾಗಿ
ಪರಿಗಣಿಸದೆ ತಿರಸ್ಕರಿಸಿದರು. ಅಂದು ದೇಶದ ಪ್ರತಿಯೊಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ
ನೆಹರು, ‘ನಾವು ಚೀನಾವನ್ನು ಭದ್ರತಾ ಕೌನ್ಸಿಲ್‌ನಿಂದ ದೂರವಿಡುವುದು ಅನ್ಯಾಯದ ಕೆಲಸ, ಆದ್ದರಿಂದ ಅಮೆರಿಕದ ಸಲಹೆಯನ್ನು ನಾವು ತಿರಸ್ಕರಿಸಬೇಕು. ಭಾರತದ ಈಗಿನ ಪರಿಸ್ಥಿತಿಯಲ್ಲಿ ಭದ್ರತಾ ಕೌನ್ಸಿಲ್‌ನ ಸದಸ್ಯ ರಾಗುವುದು ಸರಿಯಲ್ಲ, ಮೊದಲು ಚೀನಾಗೆ ದಕ್ಕಬೇಕಿರುವ ಅಧಿಕಾರವನ್ನು ನೀಡಿದ ಮೇಲಷ್ಟೇ ಅಮೆರಿಕವು
ಭಾರತವನ್ನು ಪರಿಗಣಿಸಲಿ’ ಎಂದು ಹೇಳಿದ್ದರು.

ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಅಧಿಕಾರವಿರುವ ಇಂದಿನ ಕಾಂಗ್ರೆಸ್ಸಿನ ಮುಖ್ಯಮಂತ್ರಿಗಳು ಸೋನಿಯಾ ಗಾಂಧಿ ಮಾತನ್ನು ಚಾಚೂ ತಪ್ಪದೆ ಕೇಳುವಾಗ, ನೆಹರು ಕಾಲದಲ್ಲಿ ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್
ಅಧಿಕಾರ ದಲ್ಲಿದ್ದಾಗ ಅವರ ಮಾತಿಗೆ ಇಲ್ಲ ಎನ್ನುವರೆ? ನೋ ಚಾ ಇಲ್ಲವೇ ಇಲ್ಲ.ಕೇವಲ ಹೆಸರಿಗಷ್ಟೇ ನೆಹರು ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಅಷ್ಟುಹೊತ್ತಿಗಾಗಲೇ ನೆಹರು ತನ್ನ ನಿರ್ಧಾರವನ್ನು ತೆಗೆದು ಕೊಂಡಾಗಿತ್ತು.

ನೆಹರು ಬರೆದಿರುವ ಪತ್ರವನ್ನೊಮ್ಮೆ ಗಮನಿಸಿದರೆ, ಅವರ ಭಾರತದ ಬಗೆಗಿನ ದೂರದೃಷ್ಟಿಯು ಎಷ್ಟು ದುರ್ಬಲ ವಾಗಿತ್ತೆಂದು ತಿಳಿಯುತ್ತದೆ. ಅಂದಿನ ಕಾಲದಲ್ಲಿ ಅಮೆರಿಕ ಎರಡನೇ ಮಹಾಯುದ್ಧದಲ್ಲಿ ವಿಜಯಶಾಲಿಯಾಗಿ ಜಗತ್ತಿನ ದೊಡ್ಡಣ್ಣನಾಗಿ ಹೊರಹೊಮ್ಮಿತ್ತು. ಜಗತ್ತಿನ ದೊಡ್ಡಣ್ಣನ ಮಾತನ್ನು ಅಂದು ಕೇಳಿದ್ದರೆ ಇಷ್ಟು ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿರುತ್ತಿತ್ತು. ಜಗತ್ತಿನಲ್ಲಿ ಚೀನಾ ದೇಶದ ಗುರುತೇ ಇಲ್ಲದ ಸಮಯದಲ್ಲಿ, ಅಮೆರಿಕದ ಮಾತನ್ನು ನೆಹರು ಕೇಳಲಿಲ್ಲ, ಅಂದು ಚೀನಾ ದೇಶದ ಪರವಾಗಿ ನಿಂತ ಭಾರತಕ್ಕೆ ಸಿಕ್ಕ ಉಡುಗರೆ ಏನು? 1962 ರಲ್ಲಿ ಕಾಲು ಕೆದರಿಕೊಂಡು ಚೀನಾ ಯುದ್ಧಕ್ಕೆ ಬಂತು.

ಇಂದಿಗೂ ಡೋಕ್ಲಾಮ್ ವಿಚಾರದಲ್ಲಿ ಕಾಲು ಕೆದರಿಕೊಂಡು ಜಗಳವಾಡುತ್ತಿದೆ. ಈಗ ನೇಪಾಳ, ಮಾಲ್ಡೀವ್ಸ್‌,
ಬಾಂಗ್ಲಾದೇಶ ಮತ್ತು ಶ್ರೀಲಂಕಾ ದೇಶಗಳಿಗೆ ಹಿಂದೆಯಿಂದ ಕುಮ್ಮಕ್ಕು ನೀಡುತ್ತಿದೆ. ಅಂದು ಚೀನಾ ದೇಶದ ಪರವಾಗಿ
ನೆಹರು ನಿಂತರು, ಆದರೆ ಇಂದು ಚೀನಾ ಭಾರತದ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಸದಸ್ಯತ್ವಕ್ಕೆ ಅಡ್ಡಗಾಲು ಹಾಕುತ್ತಿದೆ.

ಪ್ರತಿಯೊಂದು ಬಾರಿಯೂ ಜಗತ್ತಿನ ಇತರ ದೇಶಗಳು ಭಾರತದ ಪರವಾಗಿ ನಿಂತರೂ ಚೀನಾ ಮಾತ್ರ ಭಾರತದ
ಪರವಾಗಿ ನಿಲ್ಲುತ್ತಿಲ್ಲ. ನೆಹರು ಮಾಡಿದ್ದ ತಪ್ಪನ್ನು ಅವರದ್ದೇ ಪಕ್ಷದ ಶಶಿ ತರೂರ್ ಒಪ್ಪಿಕೊಂಡಿದ್ದರು, ಒಬ್ಬ ಪ್ರಧಾನಿ ತನ್ನ ದೇಶವನ್ನು ಮುಂದುವರೆಸಲು ಬಯಸುತ್ತಾನೋ ಅಥವಾ ಬೇರೆಯವರಿಗೆ ಸಹಾಯಮಾಡಿ ತಾನು ಹಿಂದೆ ಹೋಗಲು ಬಯಸುತ್ತಾನೋ? ಅಷ್ಟು ತಿಳಿವಳಿಕೆ ಇಲ್ಲದ ಪ್ರಧಾನಿಯನ್ನು ನಮ್ಮ ದೇಶದ ಮೊದಲ ಪ್ರಧಾನಿ ಯನ್ನಾಗಿ ಪಡೆದದ್ದು ನಮ್ಮ ದೌರ್ಭಾಗ್ಯ.

ಇವರು ಮಾಡಿದ ತಪ್ಪಿನಿಂದ ಜಗತ್ತಿನಲ್ಲಿ ಭಾರತವು ತನ್ನ ಸ್ಥಾನವನ್ನು ದಶಕಗಳೇ ಕಳೆದರೂ ಮೇಲೇರಿಸಿಕೊಳ್ಳಲು
ಸಾಧ್ಯವಾಗಲಿಲ್ಲ. ಮಾತು ಮಾತಿಗೂ ನರೇಂದ್ರ ಮೋದಿಯನ್ನು, ವಿದೇಶ ಸುತ್ತುವ ಶೋಕಿದಾರ ಎನ್ನುವವರಿಗೆ,
ಇಂದು ನರೇಂದ್ರ ಮೋದಿ ಯಾಕೆ ವಿದೇಶ ಸುತ್ತುತ್ತಿದ್ದಾರೆಂಬುದು ಅರ್ಥವಾಗಿರಬೇಕು.

ನರೇಂದ್ರ ಮೋದಿ ಅಮೆರಿಕಾದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿದ್ದರ ಪರಿಣಾಮ, ಪಾಕಿಸ್ತಾನದ ಭಯೋತ್ಪಾದಕರ ನೆಲೆಗಳ ಮೇಲೆ ಬಾಂಬ್ ಹಾಕಿದಾಗ, ಚೀನಾ ತುಟಿಕ್ ಪಿಟಕ್ ಅನ್ನಲಿಲ್ಲ. 2008 ರಲ್ಲಿ ಮುಂಬೈನ ಬೀದಿ ಬೀದಿಗಳಲ್ಲಿ ನಾಗರೀಕರ ಮೇಲೆ ಭಯೋತ್ಪಾದಕರು ದಾಳಿ ಮಾಡಿದಾಗ, ಚೀನಾಕ್ಕೆ ಹೆದರಿ ಪ್ರಧಾನಿ ಮನಮೋಹನ್ ಸಿಂಗ್ ಪಾಕಿಸ್ತಾನಕ್ಕೆ ಸರಿಯಾದ ವಾರ್ನಿಂಗ್ ಸಹ ನೀಡಲಿಲ್ಲ.

2011ರಲ್ಲಿ ಅಮೆರಿಕವು ತನ್ನ ವಿದ್ಯುತ್ ಅಣುಸ್ಥಾವರದ ತ್ಯಾಜ್ಯವನ್ನು ಭಾರತದಲ್ಲಿ ಸುರಿಯಲು ಮುಂದಾದಾಗ,
ಮನಮೋಹನ್ ಸಿಂಗ್ ಒಪ್ಪಿಗೆ ನೀಡಲು ತಯಾರಾಗಿದ್ದರು. ಇಂದು ಭಾರತ ದೇಶ ಕರೋನ ನಿಯಂತ್ರಿಸಲು ಅಮೆರಿಕ
ದೇಶಕ್ಕೆ ಬೇಕಾದಂತಹ ಹೈಡ್ರೋಕ್ಲೋರೋಕ್ವಿಂನ್ ಮಾತ್ರೆಗಳನ್ನು ಟನ್ ಗಟ್ಟಲೆ ನೀಡಿದೆ. ಒಂದು ಸಲವಾದರೂ
ಜಗತ್ತಿನ ಮುಂದುವರೆದ ರಾಷ್ಟ್ರಗಳು ಕಾಂಗ್ರೆಸ್ ಆಡಳಿತ ಅವಧಿಯಲ್ಲಿ, ಈ ಮಟ್ಟಿಗೆ ಭಾರತವನ್ನು ಹೊಗಳಿದ್ದವೆ?
ಭಾರತವು ದೊಡ್ಡಣ್ಣನ ದೊಡ್ಡ ಸಮಸ್ಯೆಗೆ ನೆರವಾಗುತ್ತದೆ ಎಂದು ಕಾಣಸಿನದರೂ ಯೋಚಿಸಿದ್ದರ? ಇಡೀ ಜಗತ್ತಿಗೆ
ಗೊತ್ತಿರುವ ಸಂಗತಿಯೆಂದರೆ ಚೀನಾ ಜಗತ್ತಿನಲ್ಲಿ ಪ್ರತಿಯೊಬ್ಬರೂ, ತನ್ನ ಮೇಲೆಯೇ ಅವಲಂಬಿತರಾಗುವಂತಹ
ಪರಿಸ್ಥಿತಿಯನ್ನು ತಂದಿತ್ತು. ಕರೋನ ವಿಚಾರದಲ್ಲಿ ತನ್ನ ಸ್ವಾರ್ಥಕ್ಕಾಗಿ ಇಡೀ ಜಗತ್ತನ್ನೇ ನಾಶ ಮಾಡಲು ಹೊರ ಟಿದ್ದ ಚೀನಾದ ಮುಖವಾಡ ಕಳಚಿತ್ತು. ಇಡೀ ಜಗತ್ತು ಚೀನಾವನ್ನು ನಿಧಾನವಾಗಿ ಬಹಿಷ್ಕರಿಸಲು ಪ್ರಾರಂಭಿಸಿದೆ. ಆಗ ವಿಶ್ವಕ್ಕೆ ಏಷ್ಯಾ ಖಂಡದಲ್ಲಿ ವಿಶ್ವಾಸದಿಂದ ಕಂಡ ಏಕೈಕ ದೇಶ ಭಾರತ.

1991 ರಲ್ಲಿ ಭಾರತದ ಆರ್ಥಿಕತೆ ಯಾವ ಪರಿಸ್ಥಿತಿಯಲ್ಲಿತ್ತೆಂದರೆ, ನಮ್ಮಲ್ಲಿನ ಚಿನ್ನವನ್ನು ಲಂಡನಿನಲ್ಲಿ ಅಡವಿಟ್ಟು ಸಾಲ ತಂದು ದೇಶವನ್ನು ನಡೆಸಬೇಕಾಯಿತು. ಮಾತು ಮಾತಿಗೂ ನಾವು 1991ರ ಬಿಕ್ಕಟ್ಟನ್ನು ಪರಿಹರಿಸಿದೆವೆಂದು ಹೇಳಿಕೊಳ್ಳುವ ಕಾಂಗ್ರೆಸ್ಸಿಗರಿಗೆ, ಆ ಬಿಕ್ಕಟ್ಟು ಹೇಗೆ ಸೃಷ್ಟಿಯಾಯಿತೆಂದು ಹೇಳಲು ಧೈರ್ಯವಿಲ್ಲ. ಚಿನ್ನವನ್ನು ಅಡವಿಟ್ಟ ಭಾರತವೆಲ್ಲಿ, ಕರೋನ ಸಂದರ್ಭದಲ್ಲಿ ವಿಶ್ವ ಅರೋಗ್ಯ ಸಂಸ್ಥೆಯನ್ನು ಮುನ್ನಡೆಸಿದ ಭಾರತವೆಲ್ಲಿ? ಯಾವಾಗ ಚೀನಾ ದೇಶವು ತನ್ನಲ್ಲಿನ ಕರೋನ ಕೇಸುಗಳು ಕೇವಲ 80000 ವೆಂದು ಸುಳ್ಳು ಹೇಳಿತೋ ಅಂದೇ ಅದರ ಬಣ್ಣ ಇಡೀ ಜಗತ್ತಿಗೆ ತಿಳಿಯಿತು. ಚೀನಾದ ತಾಳಕ್ಕೆ ತಕ್ಕಂತೆ ವಿಶ್ವ ಅರೋಗ್ಯ ಸಂಸ್ಥೆ ಕುಣಿಯಲು ಪ್ರಾರಂಭವಾದ ಮೇಲಂತೂ ಚೀನಾ ತನ್ನನ್ನು ಸಮರ್ಥಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತದೆಯೆಂಬುದು ಮತ್ತೊಮ್ಮೆ ಸಾಬೀತಾಯಿತು. ಯೂ

ರೋಪಿನ ರಾಷ್ಟ್ರಗಳು ಅಮೆರಿಕ ದೊಂದಿಗೆ ಸೇರಿ ವಿಶ್ವ ಅರೋಗ್ಯ ಸಂಸ್ಥೆಯ ಬಂಡವಾಳ ಬಯಲು ಮಾಡಿದ ಮೇಲೆ, ಬಲಿಷ್ಠ ರಾಷ್ಟ್ರಗಳ ಕಣ್ಣಿಗೆ ಬಿದ್ದದ್ದು ಭಾರತ, 130 ಕೋಟಿ ಜನಸಂಖ್ಯೆ ಇರುವ ದೇಶವನ್ನು 45 ದಿನಗಳ ಕಾಲ ಲಾಕ್‌ ಡೌನ್ ಮಾಡುವುದು ಸುಲಭದ ಮಾತಲ್ಲ. ಅಮೆರಿಕದಂತಹ ಬಲಿಷ್ಠ ದೇಶವೇ ಲಾಕ್‌ಡೌನ್ ಮಾಡಲಿಲ್ಲ, ಅಂತಹ ಅಸಾಧ್ಯವಾದ ಕೆಲಸವನ್ನು ಭಾರತ ಮಾಡಿತು. ಆರ್ಥಿಕತೆಯು ಪಾತಾಳಕ್ಕಿಳಿಯುತ್ತದೆ ಎಂಬ ವಿಷಯ ತಿಳಿದಿದ್ದರೂ ಸಹ, ಆರೋಗ್ಯವೇ ಭಾಗ್ಯವೆಂಬಂತೆ ಜನರ ಜೀವ ಉಳಿಸಲು ಹೆಚ್ಚಿನ ಒತ್ತುನೀಡಲಾಯಿತು. ಕಾಂಗ್ರೆಸ್ಸಿನ ಆಡಳಿತ ಯಾವ ರೀತಿ ಇತ್ತೆಂದರೆ, ಭಾರತದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ವಿಶ್ವ ನಾಯಕರ ಅನುಮತಿ ಬೇಕಿರುತ್ತಿತ್ತು. ಕಾಶ್ಮೀರದ ವಿಷಯವನ್ನು ಆಂತರಿಕವಾಗಿ ಬಗೆಹರಿಸಿಕೊಳ್ಳುವ ಬದಲು ನೆಹರು ವಿಶ್ವಸಂಸ್ಥೆಗೆ ಕೊಂಡೊಯ್ದರು, ಇದರ ಪರಿಣಾಮ ಕಾಶ್ಮೀರ ಸಮಸ್ಯೆ ಅಂತಾರಾಷ್ಟ್ರೀಯ ಸಮಸ್ಯೆಯಾಗಿ ಬಿಟ್ಟಿತ್ತು.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಮೂಲಕ ಒಂದು ದೇಶದಲ್ಲಿ ಎರಡು ಸಂವಿಧಾನವಿರುವಂತೆ ಮಾಡಿ ಬಿಟ್ಟರು, 2019 ರಲ್ಲಿ ಸಂವಿಧಾನದ ಪರಿಚ್ಛೇದ 370ನ್ನು ರದ್ದು ಮಾಡಲಾಯಿತು. ಆದರೆ ಜಮ್ಮು ಮತ್ತು ಕಾಶ್ಮೀರದ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು, ತಾವು ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಹೇಳಿದ್ದಾರೆ.

ನೆಹರು ಅಂದು ಮಾಡಿದ್ದ ಪ್ರಮಾದವನ್ನು ಮತ್ತೊಮ್ಮೆ ಮಾಡಲು ಸಜ್ಜಾಗಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷ ತನ್ನ ಆಡಳಿತಾವಧಿಯಲ್ಲಿ ಪಾಕಿಸ್ತಾನಕ್ಕೆ ಹೆದರಿ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಿಲ್ಲ, ಯಾಕೆಂದರೆ ಪಾಕಿಸ್ತಾನಕ್ಕೆ ಚೀನಾದ ಅಭಯ ಹಸ್ತವಿದೆ. ಏಳು ದಶಕಗಳ ಕಾಶ್ಮೀರ ಸಮಸ್ಯೆಯನ್ನು, ಎರಡನೇ ಬಾರಿ ಅಧಿಕಾರಕ್ಕೆ ಬಂದ ೬ ತಿಂಗಳೊಳಗೆ ಮೋದಿ ಬಗೆಹರಿಸಿದರು. ನಂತರ ಚೀನಾ ಕೂಡ ತುಟಿ ಬಿಚ್ಚಲಿಲ್ಲ, ಅಮೆರಿಕವಂತೂ ಕಡ್ಡಿ ಎರಡು ತುಂಡಾದ ಹಾಗೆ ಇದು ಭಾರತದ ಆಂತರಿಕ ಸಮಸ್ಯೆಯೆಂದು ಹೇಳಿತು.

ಚೀನಾ ದೇಶದೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕೆಂಬ ನಿಟ್ಟಿನಲ್ಲಿ ನೆಹರು ಭಾರತದ ಸೈನ್ಯವನ್ನು ನಿಶ್ಶಸ್ತ್ರೀ ಕರಣ ಮಾಡಿಬಿಟ್ಟರು, ಇಂಡಿಯಾ ಚೀನಾ ಭಾಯ್ ಭಾಯ್ ಎನ್ನುವ ಮೂಲಕ ಭಾರತೀಯ ಸೈನ್ಯವನ್ನು ಆಧುನೀಕರಣಗೊಳಿಸುವ ಕೆಲಸ ಮಾಡಲಿಲ್ಲ. ಅತ್ತ ನರಿಬುದ್ಧಿ ಚೀನಾ ತನ್ನ ಸೈನ್ಯವನ್ನು ಬಲಗೊಳಿಸುತ್ತಾ ಸಾಗಿತ್ತು, ಕಾಂಗ್ರೆಸ್ಸಿನ ಅವಧಿಯಲ್ಲಿ ಭಾರತೀಯ ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ಇರಲಿಲ್ಲ. ‌

ಸೇನೆಗೆ ಬೇಕಿದ್ದಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿರಲಿಲ್ಲ, ಅತ್ಯಾಧುನಿಕ ಯುದ್ಧವಿಮಾನಗಳಿರಲಿಲ್ಲ. ಚೀನಾ ಜತೆಗಿನ ಸಂಬಂಧ ಉಳಿಸಿಕೊಳ್ಳಲು ದಶಕಗಳ ಕಾಲ ನೆಹರು ಅವಧಿಯಲ್ಲಿ ಭಾರತೀಯ ಸೇನೆಯನ್ನು ಕಡೆಗಣಿಸ ಲಾಯಿತು. ಅಂದು ನೆಹರು ಭಾರತೀಯ ಸೇನೆಯನ್ನು ಬಲಪಡಿಸುವ ಕೆಲಸ ಮಾಡಿದ್ದರೆ, ಇಂದು ಭಾರತೀಯ ಸೈನ್ಯ ಜಗತ್ತಿನಲ್ಲಿ ಉತ್ತುಂಗದಲ್ಲಿರುತ್ತಿತ್ತು. ನೆಹರು ಮಾಡಿದ ಸೈನ್ಯದ ನಿಶ್ಶಸ್ತ್ರೀಕರಣದ ಪರಿಣಾಮ ಭಾರತ 1962ರ ಚೀನಾ ವಿರುದ್ದದ ಯುದ್ಧದಲ್ಲಿ ಸೋಲ ಬೇಕಾಯಿತು.

ಚೀನಾ ಭಾರತದ ವಿರುದ್ಧ ಕಾಲು ಕೆದರಿಕೊಂಡು ತಕರಾರು ಮಾಡುತ್ತಿರುತ್ತದೆ, 2021 ರಲ್ಲಿ ಕರೋನ ಸಂದರ್ಭದಲ್ಲಿ ಗಡಿಯಲ್ಲಿ ತನ್ನ ಸೇನೆಯನ್ನು ಹೆಚ್ಚಾಗಿ ಜಮಾಯಿಸುವ ಮೂಲಕ ಮತ್ತೊಮ್ಮೆ ತನ್ನ ಕಂತ್ರಿ ಬುದ್ಧಿಯನ್ನು ಪ್ರದರ್ಶಿ ಸಿತ್ತು. ಕಳೆದ ಮೂರು ವರ್ಷಗಳ ಮಾತುಕತೆಯಿಂದ ಸುಮಾರು ಶೇ.75 ರಷ್ಟು ಸೈನಿಕರ ಜಮಾವಣೆಯನ್ನು ಹಿಂದಕ್ಕೆ ಕಳುಹಿಸಲಾಗಿದೆ, ಚೀನಾ ದೇಶಕ್ಕೆ ಅಂದು ಸರಿಯಾದ ಬುದ್ಧಿ ಕಲಿಸಿದ್ದರೆ, ಪದೇ ಪದೇ ಭಾರತದ ತಂಟೆಗೆ ಬರುವ ಧೈರ್ಯ ಮಾಡುತ್ತಿರಲಿಲ್ಲ. ನೆಹರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮಾಡಿದ ಅಚಾತುರ್ಯಗಳು, ಭಾರತದ ಅಭಿವೃದ್ಧಿಯ ವಿಚಾರದಲ್ಲಿ ಅವರ ದೂರದೃಷ್ಟಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ.

ಆಂತರಿಕ ವಿಷಯಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರು, ಶತ್ರು ದೇಶಗಳ ಪರವಾಗಿ ನಿಂತರು,
ಭಾರತದ ಅಭಿವೃದ್ಧಿಗೆ ಉತ್ತಮ ಬುನಾದಿಯನ್ನು ಹಾಕಲಿಲ್ಲ. ನೆಹರೂವಿನ ಅಚಾತುರ್ಯಗಳ ಋಣಾತ್ಮಕ ಪರಿಣಾಮವನ್ನು ಭಾರತ ದಶಕಗಳ ಕಾಲ ಎದುರಿಸಬೇಕಾಯಿತು. ಅದರ ಪರಿಣಾಮಗಳು ಇಂದಿಗೂ ಸಂಪೂರ್ಣ ವಾಗಿ ಹತೋಟಿಗೆ ಬಂದಿಲ್ಲ. ನಾಯಕನಾದವನಿಗೆ ದೂರದೃಷ್ಟಿ ಇಲ್ಲದಿದ್ದರೆ ದೇಶದಲ್ಲಿ ಉಂಟಾಗಬಹುದಾದ ಅನಾಹುತಗಳಿಗೆ ನೆಹರು ತೆಗೆದುಕೊಂಡಂತಹ ನಿರ್ಧಾರಗಳನ್ನು ಅಧ್ಯಯನ ಮಾಡಬಹುದು.

ಇದನ್ನೂ ಓದಿ: Mohan Vishwa Column: ಅಂದು ಅಣುಬಾಂಬ್‌ ಇಂದು ಪೇಜರ್‌