ವೀಕೆಂಡ್ ವಿತ್ ಮೋಹನ್
ಮೋಹನ್ ವಿಶ್ವ
ಎರಡನೇ ಮಹಾಯುದ್ಧದ ಅಂತ್ಯದ ಮೊದಲು ಬ್ರಿಟನ್, ರಷ್ಯಾ, ಜಪಾನ್ ಮತ್ತು ಜರ್ಮನಿ ದೇಶಗಳು ಜಾಗತಿಕ ಪಟ್ಟಕ್ಕಾಗಿ ಕಾದಾಡುತ್ತಿದ್ದವು. ವಸಾಹತುಶಾಹಿ ನೀತಿಯಿಂದ ಜಗತ್ತಿನ ಅನೇಕ ದೇಶಗಳಲ್ಲಿ ಕಾಲೋನಿಗಳನ್ನು ನಿರ್ಮಿಸಿ ಸಾಮ್ರಾಜ್ಯ ವಿಸ್ತರಿಸಿದ್ದ ಬ್ರಿಟಿಷರು ಒಂದೆಡೆಯಾದರೆ, ಸರ್ವಾಧಿಕಾರಿಯಾಗಿ ಕುಖ್ಯಾತಿ ಪಡೆದು ಜಗತ್ತನ್ನು ಗೆಲ್ಲಲು ಹೊರಟಿದ್ದ ಹಿಟ್ಲರ್ ಒಂದೆಡೆ, ಕಮ್ಯುನಿಸ್ಟ್ ಸಿದ್ಧಾಂತವನ್ನು ಜಗತ್ತಿಗೆ ವಿಸ್ತರಿಸಲು ಕಾದಾಡುತ್ತಿದ್ದ ಸೋವಿಯತ್ ರಷ್ಯಾ ಒಕ್ಕೂಟ ಮತ್ತೊಂದೆಡೆ.
ಆದರೆ ಎರಡನೇ ಮಹಾಯುದ್ಧದಲ್ಲಿ ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಣುಬಾಂಬು ಗಳನ್ನು ಹಾಕುವ ಮೂಲಕ ಅಮೆರಿಕ ಅಧಿಕೃತವಾಗಿ ಯುದ್ಧವನ್ನು ಕೊನೆಗೊಳ್ಳುವಂತೆ ಮಾಡಿ, ಜಗತ್ತಿನ ದೊಡ್ಡಣ್ಣ ನಾಗಿ ಹೊರಹೊಮ್ಮಿತು.
ಎರಡನೇ ಮಹಾಯುದ್ಧದ ಅಂತ್ಯದ ಬಳಿಕ ಜಾಗತಿಕ ಮಟ್ಟದಲ್ಲಿ ಅನೇಕ ಬದಲಾವಣೆಗಳಾದವು, ದೊಡ್ಡಣ್ಣ
ಅಮೆರಿಕ ಜಗತ್ತನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ವಿಶ್ವದ ಅನೇಕ ದೇಶಗಳು ತಮಗೆ ತಲೆಬಾಗುವಂತಹ ನೀತಿಗಳನ್ನು ಜಾರಿಗೆ ತಂದಿತು. ಜಾಗತಿಕ ಮಟ್ಟದಲ್ಲಿ ಅನೇಕ ಸಂಸ್ಥೆಗಳನ್ನು ಹುಟ್ಟುಹಾಕಿ ಅದರಲ್ಲಿ ತನ್ನ ದೇಶದ ಪ್ರತಿನಿಧಿಗಳು ಹೆಚ್ಚಾಗಿ ಪಾಲ್ಗೊಳ್ಳುವಂತೆ ಮಾಡಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಯಿತು.
ಎರಡನೇ ಮಹಾಯುದ್ಧದ ನಂತರ ಪಾಶ್ಚಿಮಾತ್ಯ ದೇಶಗಳನ್ನು ಜಗತ್ತಿನ ಜನರು ನೋಡುವ ಪರಿ ಬದಲಾಯಿತು, ಅನೇಕ ದೇಶಗಳ ನೈಸರ್ಗಿಕ ಸಂಪತ್ತುಗಳನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವಲ್ಲಿ ಅಮೆರಿಕ ಯಶಸ್ವಿಯಾಯಿತು. ಪಾಶ್ಚಿಮಾತ್ಯರೆಂದರೆ ಜಗತ್ತಿನ ಅತೀ ಬುದ್ಧಿವಂತ ಜನರೆಂಬ ನಂಬಿಕೆ ಯನ್ನು ಏಷ್ಯಾ ಖಂಡದ ಜನರ ಮನಸ್ಸಿನಲ್ಲಿ ಆಳವಾಗಿ ಬಿತ್ತಲಾಯಿತು. ಕಚ್ಚಾತೈಲ ನಿಕ್ಷೇಪಗಳಿದ್ದ ದೇಶಗಳ ಜತೆ ಒಪ್ಪಂದ ಮಾಡಿಕೊಂಡು ಜಾಗತಿಕ ಮಟ್ಟದಲ್ಲಿ ಅಮೆರಿಕದ ಡಾಲರ್ಅನ್ನು ಅಂತಾರಾಷ್ಟ್ರೀಯ ಮಟ್ಟದ ವ್ಯವಹಾರಗಳ ಕರೆನ್ಸಿಯನ್ನಾಗಿಸಿತು. ಜಗತ್ತಿನ ಬಹುತೇಕ ದೇಶಗಳ ವ್ಯಾಪಾರ ವಹಿವಾಟುಗಳು ಅಮೆರಿಕದ ಡಾಲರ್ ಮೂಲಕ ನಡೆಸಬೇಕಾದಂತಹ ಸನ್ನಿವೇಶ ಸೃಷ್ಟಿ ಯಾಯಿತು.
ಎರಡು ದೇಶಗಳ ನಡುವೆ ಹಣದ ವರ್ಗಾವಣೆ ನಡೆಸಲು 1973 ರಲ್ಲಿ ಪಾಶ್ಚಿಮಾತ್ಯ ದೇಶಗಳ ಒಕ್ಕೂಟಗಳು ಸ್ವಿಫ್ಟ್
(SWIFT) ಎಂಬ ಸಂಸ್ಥೆಯನ್ನು ಬೆಲ್ಜಿಯಂ ದೇಶದಲ್ಲಿ ಹುಟ್ಟುಹಾಕಿದವು. ಬ್ಯಾಂಕಿನ ವ್ಯವಹಾರಗಳ ಅರಿವಿರು ವವರಿಗೆ ‘SWIFT TRANSFER’ ಬಗ್ಗೆ ತಿಳಿದಿರುತ್ತದೆ. ಜಗತ್ತಿನ ಬಹುತೇಕ ದೇಶಗಳ ನಡುವೆ ನಡೆಯುವ ವ್ಯವಹಾರಗಳ ಹಣ ವರ್ಗಾವಣೆ ಇದರ ಮೂಲಕವೇ ಆಗುವಂತೆ ಮಾಡಲಾಯಿತು. ನಂತರ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡುಗಳ ವ್ಯವಹಾರಗಳು ಅಮೆರಿಕಾದ ಸಂಸ್ಥೆಗಳಾದ ‘ವೀಸಾ’ ಅಥವಾ ‘ಮಾಸ್ಟರ್ ಕಾರ್ಡ್’ಗಳ ಮೂಲಕ ನಡೆಯಲಾರಂಭಿಸಿದವು.
ಜಗತ್ತಿನ ಯಾವುದೇ ಮೂಲೆಯಲ್ಲಿ ಬಳಕೆದಾರರು ನಡೆಸುವ ವ್ಯವಹಾರಗಳ ಮೇಲೆ ಶೇ.1 ರಿಂದ ಶೇ.2 ವರೆಗೂ ಶುಲ್ಕ ವಿಧಿಸುವ ಮೂಲಕ, ಕೂತ ಜಾಗದಲ್ಲಿ ಬಿಲಿಯನ್ ಗಟ್ಟಲೆ ಹಣವನ್ನುಈ ಸಂಸ್ಥೆಗಳು ಮಾಡಿದ್ದವು. ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ನ್ಯಾಟೋ ದೇಶಗಳು ರಷ್ಯಾ ಮೇಲೆ ನಿರ್ಬಂಧ ಹೇರಿದ್ದರ ಪರಿಣಾಮ, ರಷ್ಯಾ ದೇಶದ ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ’SWIFT’ ಮೂಲಕ ವ್ಯವಹಾರ ನಡೆಸಲಾಗಲಿಲ್ಲ.
ನ್ಯಾಟೋ ದೇಶಗಳ ಈ ನಡೆಯಿಂದ ರಷ್ಯಾ ಅಧ್ಯಕ್ಷ ಪುಟಿನ್ ಆಕ್ರೋಶಗೊಂಡಿದ್ದರು, ಜಾಗತಿಕ ಮಟ್ಟದಲ್ಲಿ ಅನೇಕ ದೇಶಗಳ ಜೊತೆ ರಷ್ಯಾ ವ್ಯವಹಾರ ನಡೆಸಲು ಸಾಧ್ಯವಾಗಿರಲಿಲ್ಲ. ಪಾಶ್ಚಿಮಾತ್ಯ ದೇಶಗಳ ಅಂತಾ ರಾಷ್ಟ್ರೀಯ ಮಟ್ಟದ ವ್ಯಾವಹಾರಿಕ ಪ್ರಾಬಲ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ರಷ್ಯಾ ಅಧ್ಯಕ್ಷ ಪುಟಿನ್ ’BRICS’ ಒಕ್ಕೂಟ ದೇಶಗಳ ನಡುವಣ ವ್ಯವಹಾರಗಳಿಗೆ ಸಂಬಂಧ ಪಟ್ಟ ಅನೇಕ ವಿಷಯಗಳನ್ನು ಕಾಜನ್ನಲ್ಲಿ ನಡೆಯು ತ್ತಿರುವ ಬ್ರಿಕ್ಸ್ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಭಾರತದಲ್ಲಿ ನಡೆದ ಡಿಜಿಟಲ್ ಕ್ರಾಂತಿ ಅಮೆರಿಕದ ವೀಸಾ ಮತ್ತು ಮಾಸ್ಟರ್ ಕಾರ್ಡ್ ಸಂಸ್ಥೆಗಳಿಗೆ ದೊಡ್ಡ ಪೆಟ್ಟನ್ನು ನೀಡಿದೆ. ’UPI’ ಮೂಲಕ ಭಾರತದ ಸಣ್ಣ ಸಣ್ಣ ಹಳ್ಳಿಗಳಲ್ಲಿ ಹಣದ ವರ್ಗಾವಣೆ ನಡೆಯುತ್ತಿದೆ, ಜೇಬಿನಲ್ಲಿ ಹಣವಿಟ್ಟುಕೊಂಡು ಓಡಾಡುವ ಪರಿಸ್ಥಿತಿ ಬಹುತೇಕ ಕಡೆಗಳಲ್ಲಿ ಇಲ್ಲದಂತಾಗಿದೆ. ಡೆಬಿಟ್ ಕಾರ್ಡುಗಳನ್ನು ಬಳಸಿ ಅನೇಕ ತಿಂಗಳುಗಳು ಕಳೆದಿವೆ, ವೀಸಾ ಮತ್ತು ಮಾಸ್ಟರ್ ಕಾರ್ಡ್ ಕಂಪನಿಗಳು ಭಾರತದಲ್ಲಿ ಕ್ರಿಕೆಟ್ ಪಂದ್ಯಾವಳಿಗಳ ಪ್ರಾಯೋಜಕರಾಗಿ ಜಾಹೀರಾತು ನೀಡುವ ಪರಿಸ್ಥಿತಿ ಎದುರಾ ಗಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಪಾಶ್ಚಿಮಾತ್ಯ ದೇಶಗಳು ನ್ಯಾಟೋ ಮೂಲಕ ಉಕ್ರೇನ್ಗೆ ಸಹಾಯ ಮಾಡುತ್ತಿವೆ. ಅತ್ತ ಚೀನಾ ಮತ್ತು ಉತ್ತರ ಕೊರಿಯಾ ದೇಶಗಳು ರಷ್ಯಾಕ್ಕೆ ಸಹಾಯ ಮಾಡುತ್ತಿವೆಯೆಂದು ಉಕ್ರೇನ್ ಹೇಳಿದೆ. ಭಾರತ ಮಾತ್ರ ತನ್ನ ತಟಸ್ಥ ವಿದೇಶಾಂಗ ನೀತಿಯ ಮೂಲಕ ಶಾಂತಿಯ ಮೂಲಕ ಎರಡೂ ದೇಶಗಳು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೆಂದು ಹೇಳುತ್ತಿದೆ. ರಷ್ಯಾಕ್ಕೂ ಭೇಟಿ ನೀಡಿ ನಂತರ ಉಕ್ರೇನ್ ದೇಶಕ್ಕೂ ಭೇಟಿ ನೀಡಿದ ಮೋದಿ, ಎರಡೂ ದೇಶಗಳ ನಡುವಿನ ಸಮಸ್ಯೆಯನ್ನು ಆಲಿಸಿದ್ದಾರೆ.
2020 ರ ನಂತರ ಭಾರತ ಮತ್ತು ಚೀನಾ ಗಡಿಯಲ್ಲಿ, ಚೀನಾ ತನ್ನ ಸೈನಿಕರನ್ನು ಹೆಚ್ಚು ನಿಯೋಜಿಸುವ ಮೂಲಕ
ಗಡಿಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗುವಂತೆ ಮಾಡಿತ್ತು. ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ
ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದ್ದ ಚೀನಾದ ಸೈನಿಕರನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಗಡಿಯಲ್ಲಿ ಚೀನಾ ಜಮಾವಣೆಗೊಳಿಸಿದ್ದಂತಹ ಸೈನ್ಯವನ್ನು ತನ್ನ ಮೂಲ ನೆಲೆಗಳಿಗೆ ವಾಪಾಸ್ ಕರೆಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಸಭೆಯಲ್ಲಿ ಧನಾತ್ಮಕ ಬೆಳವಣಿಗೆ ಕಂಡುಬಂದಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ ಚೀನಾದ ಅಧಿಕಾರಿಗಳ ಜೊತೆ ನಡೆಸಿದ ಸಭೆ ಯಶಸ್ವಿಯಾಗಿದ್ದು, ವಿದೇಶಾಂಗ ಸಚಿವರಾದ ಜೈಶಂಕರ್ ನಡೆಸಿದ ಸರಣಿ ಸಭೆಗಳ ಫಲವಾಗಿ ಚೀನಾ ಗಡಿಯಲ್ಲಿ ಜಮಾಯಿಸಿದ್ದ ತನ್ನ ಸೈನಿಕರನ್ನು ವಾಪಾಸ್ ಕರೆಸಿಕೊಳ್ಳಲು ನಿರ್ಧರಿಸಿದೆ.
ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸುಮಾರು ಎರಡು ಗಂಟೆಗಳ ಕಾಲ ಎರಡೂ ದೇಶಗಳ ನಡುವಿನ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಚೀನಾದಿಂದ ತಮಗೆ ಬರುವ ವಿದೇಶಿ ಬಂಡವಾಳಗಳ ಮೇಲೆ ಜಗತ್ತಿನ ಅನೇಕ ದೇಶಗಳು ಹಲವು ಬಗೆಯ ನಿರ್ಬಂಧಗಳನ್ನು ಹೇರಿವೆ. ಚೀನಾದಿಂದ
ಭಾರತಕ್ಕೆ ಹರಿದು ಬರುವ ಬಂಡವಾಳದ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹದ್ದಿನ ಕಣ್ಣಿಟ್ಟಿರುತ್ತದೆ.
ಭಾರತದ ಒಟ್ಟಾರೆ ವಿದೇಶಿ ಬಂಡವಾಳದ ಹರಿವಿನಲ್ಲಿ ಚೀನಾ ದೇಶದ ಪ್ರಮಾಣ ಶೇ. 1ಕ್ಕಿಂತಲೂ ಕಡಿಮೆ ಇದೆ.
2015 ರಲ್ಲಿ ಕೆನಡಾದಲ್ಲಿ ಲಿಬರಲ್ ಪಕ್ಷದ ಮೂಲಕ ಅಧಿಕಾರಕ್ಕೆ ಬಂದ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರೂಡೋ ತನ್ನ ಮೊದಲ ಅವಧಿಯಲ್ಲಿ ಉಳಿಸಿಕೊಂಡ ವರ್ಚಸ್ಸನ್ನು ಎರಡನೇ ಅವಧಿಯಲ್ಲಿ ಉಳಿಸಿಕೊಂಡಿಲ್ಲ. ತನ್ನ ತಂದೆಯ ಹಾದಿಯಲ್ಲಿ ಪಕ್ಷವನ್ನು ಮುನ್ನಡೆಸಿಕೊಂಡು ಬಂದು ಪ್ರಧಾನಿಯಾದ ಜಸ್ಟಿನ್ ಟ್ರೂಡೋ ಮೊದ ಮೊದಲು ಉತ್ತಮ ಹೆಸರನ್ನು ಗಳಿಸಿದ್ದರು.
ಆದರೆ ಕೆನಡಾ ದೇಶದ ಸಮಸ್ಯೆಗಳನ್ನು ತನ್ನ ಎರಡನೇ ಅವಧಿಯಲ್ಲಿ ಬಗೆಹರಿಸಲು ಸಂಪೂರ್ಣವಾಗಿ ವಿಫಲವಾಗಿ ತನ್ನದೇ ಸಂಸದರ ಟೀಕೆಗೆ ಗುರಿಯಾಗಿದ್ದಾರೆ. ಲಿಬರಲ್ ಪಕ್ಷದ 24 ಸಂಸದರು ಜಸ್ಟಿನ್ ಟ್ರೂಡೋ ಅವರ ವಿರುದ್ಧ ನಿರ್ಣಯ ಕೈಗೊಂಡು, ಪ್ರಧಾನಿ ಪಟ್ಟದಿಂದ ಕೆಳಗಿಳಿಯಲು ಮೂರು ದಿನಗಳ ಗಡುವು ನೀಡಿದ್ದಾರೆ.
ಕೆನಡಾ ದೇಶದಲ್ಲಿರುವ ಅನೇಕ ಸಮಸ್ಯೆಗಳ ಬಗ್ಗೆ ಮಾತನಾಡದ ಜಸ್ಟಿನ್ ಟ್ರೂಡೋ ಸದಾ ರಾಜಕೀಯದಲ್ಲಿ ಮಗ್ನರಾಗಿರುವ ವಿಷಯ ಅಲ್ಲಿನ ಜನರ ಕೋಪಕ್ಕೆ ಗುರಿಯಾಗಿದೆ. ಇತ್ತೀಚಿಗೆ ಕೆನಡಾದ ಸುದ್ದಿಸಂಸ್ಥೆ ನಡೆಸಿದ ಜನಪ್ರಿಯತೆಯ ಸಮೀಕ್ಷೆಯಲ್ಲಿ ವಿರೋಧ ಪಕ್ಷ ಕನ್ಸರ್ವೇಟಿವ್ ಪಾರ್ಟಿ ಆಡಳಿತ ಪಕ್ಷಕ್ಕಿಂತಲೂ ಶೇಕಡಾ 20
ರಷ್ಟು ಮುಂದಿದೆ. ಲಿಬರಲ್ ಪಕ್ಷ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳಲು ಜಸ್ಟಿನ್ ಟ್ರೂಡೋ ವಿರುದ್ಧದ ಜನಾಕ್ರೋಶವೆಂದು ತಿಳಿದು ಬಂದಿದೆ. ಭಾರತದ ವಿರುದ್ಧ ಸಾಕ್ಷಿಯಿಲ್ಲದೆ ಸುಖಾಸುಮ್ಮನೆ ಹೇಳಿಕೆ ನೀಡುವ ಮೂಲಕ ಜಸ್ಟಿನ್ ಟ್ರೂಡೋ ನಗೆಪಾಟಲಿಗೆ ಗುರಿಯಾಗಿದ್ದಾರೆ.
ನಿಜ್ಜರ್ ಹತ್ಯೆಯನ್ನು ತಡೆಯುವಲ್ಲಿ ವಿಫಲರಾದ ಕೆನಡಾ ಸರಕಾರ ಭಾರತದ ಮೇಲೆ ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿ ಗೂಬೆ ಕೂರಿಸುವ ಕೆಲಸ ಮಾಡಿತ್ತು. ಕೆನಡಾದ ಪ್ರಧಾನಮಂತ್ರಿಯಾಗಿರುವ ಜಸ್ಟಿನ್ ಟ್ರೂಡೋ ನೇರವಾಗಿ ಜಾಗತಿಕ ವೇದಿಕೆಗಳಲ್ಲಿ ಭಾರತವನ್ನು ಟೀಕಿಸುವ ಕೆಲಸ ಮಾಡಿದ್ದರು. ಖಲಿಸ್ತಾನಿ ಬೆಂಬಲಿಗರ ವಿರುದ್ಧ ಕಠಿಣಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿರುವ ಜಸ್ಟಿನ್ ಟ್ರೂಡೋ, ತಮ್ಮ ಪಕ್ಷದ ಮತಬ್ಯಾಂಕಿಗಾಗಿ ಖಲಿಸ್ತಾನಿಗಳ ಪರವಾಗಿ ನಿಂತಿದ್ದಾರೆ.
ಕೆನಡಾದಲ್ಲಿರುವ ಖಲಿಸ್ತಾನಿ ಬೆಂಬಲಿಗ ಪನ್ನು ನೇರವಾಗಿ ಭಾರತಕ್ಕೆ ಧಮ್ಕಿ ಹಾಕಿದ ನಂತರವೂ, ಆತನ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಜಸ್ಟಿನ್ ಟ್ರೂಡೋ ವಿಫಲರಾಗಿದ್ದಾರೆ. ಮೊದಮೊದಲು ಭಾರತಕ್ಕೆ ನಿಜ್ಜರ್ ಹತ್ಯೆಯಲ್ಲಿ ಬೇಕಿರುವ ಸಾಕ್ಷಿಗಳನ್ನು ನೀಡಿರುವುದಾಗಿ ಹೇಳಿದ್ದ ಜಸ್ಟಿನ್ ಟ್ರೂಡೋ, ನಂತರ ತನಗೆ ಬಂದಿರುವ ಗುಪ್ತಚರ ಇಲಾಖೆಯ ಮಾಹಿತಿಯ ಆಧಾರದ ಮೇರೆಗೆ ಹೇಳಿಕೆ ನೀಡಿರುವುದಾಗಿ ಹೇಳಿzರೆ. ಕೆನಡಾ ದೇಶದ ಪ್ರಧಾನಿ ಯಾಗಿರುವ ವ್ಯಕ್ತಿ ಕೇವಲ ಗುಪ್ತಚರ ಇಲಾಖೆಯ ಮಾಹಿತಿಯ ಮೇರೆಗೆ ಭಾರತದ ಮೇಲೆ ಆರೋಪ ಮಾಡುವುದನ್ನು ಯಾರೂ ಸಹ ಒಪ್ಪುವುದಿಲ್ಲ, ಅವರ ಹೇಳಿಕೆಗಳಲ್ಲಿ ಅಲ್ಲಿನ ಜನರಿಗೆ ಪ್ರಬುದ್ಧತೆ ಕಾಣುತ್ತಿಲ್ಲ. ಕೆನಡಾ ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇಕಡಾ 6.80 ಗೆ ತಲುಪಿದೆ, ಜಸ್ಟಿನ್ ಟ್ರೂಡೋ ಸರಕಾರ ಅಲ್ಲಿನ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ. 2020 ರಿಂದ 2025 ರ ನಡುವೆ ಟ್ರೂಡೋ ಸರಕಾರ ಶೇಕಡಾ 21ರಷ್ಟು ವಲಸಿಗರಿಗೆ ಕೆನಡಾ ಪೌರತ್ವ ನೀಡುವ ಯೋಜನೆಯನ್ನು ಜಾರಿಗೆ ತರುವುದಾಗಿ ಹೇಳಿತ್ತು.
ಆದರೆ ಈಗ ಆ ಸಂಖ್ಯೆಯನ್ನು ಶೇಕಡಾ 11ಕ್ಕೆ ಇಳಿಸಿದೆ, ವಲಸಿಗರಿಗೆ ಪೌರತ್ವ ನೀಡುವ ಸಂಖ್ಯೆ ಇಳಿಕೆಯಾಗಿರುವುದು
ಲಿಬರಲ್ ಪಕ್ಷದ ಜನಪ್ರಿಯತೆ ಕಡಿಮೆಯಾಗಿರುವುದಕ್ಕೆ ಮತ್ತೊಂದು ಕಾರಣವಾಗಿದೆ. ಬಹಿರಂಗವಾಗಿ ತನ್ನದೇ ಪಕ್ಷದ ಸಂಸದರು ಟ್ರೂಡೋ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಜಸ್ಟಿನ್ ಟ್ರೂಡೋರನ್ನು ಕೆಳಗಿಳಿಸಲು ವಿರೋಧ ಪಕ್ಷ ಅವಿಶ್ವಾಸಮತ ನಿರ್ಣಯವನ್ನು ಮಂಡನೆ ಮಾಡಬಹುದೆಂದು ಹೇಳಲಾಗುತ್ತಿದೆ. ಲಿಬರಲ್ ಪಕ್ಷದ ಮತ್ತಷ್ಟು ಸಂಸದರು ಬಹಿರಂಗವಾಗಿ ಹೇಳಿಕೆ ನೀಡುವ ಬದಲು ಒಳಗೊಳಗೆ ಟ್ರೂಡೋ ವಿರುದ್ಧ ಅಸಮಾಧಾನ ಗೊಂಡಿದ್ದಾರೆ. ಅಮೆರಿಕ ಚುನಾವಣೆಯಲ್ಲಿ ಜೋ ಬೈಡೆನ್ ಹೆಸರನ್ನು ಕೈಬಿಟ್ಟು ಕಮಲಾ ಹ್ಯಾರಿಸ್ ಹೆಸರನ್ನು ಮುನ್ನೆಲೆಗೆ ತಂದು ಚುನಾವಣೆ ಎದುರಿಸುತ್ತಿರುವ ಮಾದರಿಯಲ್ಲಿ ಜಸ್ಟಿನ್ ಟ್ರೂಡೋ ಹೆಸರನ್ನು ಕೈಬಿಟ್ಟು ಮತ್ತೊಬ್ಬ ಲಿಬರಲ್ ಪಕ್ಷದ ಅಭ್ಯರ್ಥಿಯನ್ನು ಮುನ್ನೆಲೆಗೆ ತರಬೇಕೆಂಬ ಕೂಗು ಕೇಳಿಬರುತ್ತಿದೆ.
ಕಳೆದ ಕೆಲವು ತಿಂಗಳಿಂದ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಅನೇಕ ಬದಲಾವಣೆಗಳು ಚರ್ಚೆಗೆ ಬರುತ್ತಿವೆ, ಪಾಶ್ಚಿಮಾತ್ಯ ದೇಶಗಳ ಅಂತಾರಾಷ್ಟ್ರೀಯ ಪ್ರಾಬಲ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಷ್ಯಾ ಮತ್ತು ಚೀನಾ ಒಟ್ಟಾಗಿ ಬಂದಿವೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ನಿಂತಿಲ್ಲ, ಕೆನಡಾದಲ್ಲಿ ನಡೆಯುತ್ತಿರುವ ರಾಜಕೀಯ ಬದಲಾವಣೆ ಗಳು. ಭಾರತ ಮಾತ್ರ ತನ್ನ ತಟಸ್ಥ ನೀತಿಯ ಮೂಲಕ ಏಷ್ಯಾ ಮತ್ತು ಪಶ್ಚಿಮದ ದೇಶಗಳ ನಡುವಿನ ಸಂಬಂಧ ವನ್ನು ಗಟ್ಟಿಗೊಳಿಸುವ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ.
ಇದನ್ನೂ ಓದಿ: Mohan Vishwa Column: ಕಾಶ್ಮೀರದ ಮತದಾನ: ಪ್ರಜಾಪ್ರಭುತ್ವದ ಗೆಲುವು