ವೀಕೆಂಡ್ ವಿತ್ ಮೋಹನ್
ಮೋಹನ್ ವಿಶ್ವ
ಚುನಾವಣೆಯಲ್ಲಿ ಸೋಲು, ಗೆಲುವನ್ನು ಸಮನಾಗಿ ಸ್ವೀಕರಿಸಿದವರು ಮಾತ್ರ ಸುದೀರ್ಘ ರಾಜಕಾರಣ ಮಾಡಲು ಸಾಧ್ಯ. ಗೆದ್ದಾಗ ವ್ಯವಸ್ಥೆಯನ್ನು ಹೊಗಳಿ, ಸೋತಾಗ ವ್ಯವಸ್ಥೆಯನ್ನು ತೆಗಳಬಾರದು. ಸೋಲಿನ ಸರಿಯಾದ ಪರಾಮರ್ಶೆಯಾದರೆ ಮುಂದಿನ ಗೆಲುವಿಗೆ ಸಹಕಾರಿಯಾಗುತ್ತದೆ, ಅದನ್ನು ಬಿಟ್ಟು ವ್ಯವಸ್ಥೆಯನ್ನು ದೂರುತ್ತಾ ಕೂತರೆ ಜನ ಪದೇ ಪದೇ ಸೋಲಿಸುತ್ತಿರುತ್ತಾರೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 99 ಸೀಟು ಗಳು ಬಂದಾಕ್ಷಣ, ಜಗತ್ತನ್ನು ಗೆದ್ದಂತೆ ವರ್ತಿಸಿದರು.
ಪ್ರಜಾಪ್ರಭುತ್ವದ ಗೆಲುವು, ಸಂವಿಧಾನದ ಗೆಲುವು, ಎಂದೆಲ್ಲ ದೊಡ್ಡ ದೊಡ್ಡ ಮಾತುಗಳನ್ನಾಡಿದರು. ಚುನಾವಣಾ ಆಯೋಗಕ್ಕೆ ವಂದನೆ ಸಲ್ಲಿಸಿ, ಇಡೀ ಇಂಡಿ ಒಕ್ಕೂಟ ತಮ್ಮ ಬೆನ್ನನ್ನು ತಾವು ತಟ್ಟಿಕೊಂಡವು. ಆದರೆ ಕೆಲವೇ ಕೆಲವು ತಿಂಗಳ ನಂತರ ನಡೆದ ಹರಿಯಾಣ ಮತ್ತು ಮಹಾರಾಷ್ಟ್ರದ ಚುನಾವಣಾ ಫಲಿತಾಂಶದಂದು ಸೋತು ಸುಣ್ಣವಾದ ವಿರೋಧ ಪಕ್ಷಗಳು ಚುನಾವಣಾ ಆಯೋಗವನ್ನು ದೂರಿ ’EVM’ ಸರಿಯಿಲ್ಲ, ಆಯೋಗ ಸರಿಯಾದ ಚುನಾವಣೆ ನಡೆಸಿಲ್ಲವೆಂದು ಹೇಳುತ್ತಾ ರಸ್ತೆ ರಸ್ತೆಗಳಲ್ಲಿ ಅಳುತ್ತಿದ್ದಾರೆ.
ಕಾಂಗ್ರೆಸ್ಸಿನ ಗೋಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಮತದಾರ ಮಾತ್ರ ಒಳಗೊಳಗೆ ಇವರ ಹಣೆಬರಹ ಇಷ್ಟೇ ಎಂದು ನಗುತ್ತಿದ್ದಾನೆ. ಸೋಲನ್ನು ಒಪ್ಪಿಕೊಳ್ಳದ ಕಾಂಗ್ರೆಸ್ ಪಕ್ಷ EVM ಬದಲಿಗೆ ಹಳೆಯ ‘ಬ್ಯಾಲಟ್ ಪೇಪರ್’ ಬಳಸಿ ಚುನಾವಣೆ ನಡೆಸಬೇಕೆಂಬ ಮಾತುಗಳನ್ನಾಡುತ್ತಿದೆ. ಇಡೀ ಜಗತ್ತು ಮುಂದುವರೆಯುತ್ತಿದ್ದರೆ, ಕಾಂಗ್ರೆಸ್ಸಿಗರಿಗೆ ಮಾತ್ರ ದೇಶ ಹಿಂದೆ ಹೋಗಬೇಕು. ಭಾರತದ ಚುನಾವಣಾ ಇತಿಹಾಸದಲ್ಲಿ ಬ್ಯಾಲಟ್ ಪೇಪರ್ ಚುನಾವಣೆಯಲ್ಲಿ ನಡೆದಿರು ವಷ್ಟು ಅಕ್ರಮ EVM ವ್ಯವಸ್ಥೆಯಲ್ಲಿ ನಡೆದಿಲ್ಲ.
ಒಂದು ಕಾಲದಲ್ಲಿ ಬಿಹಾರ, ಕಾಶ್ಮೀರ ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಸಮಯದಲ್ಲಿ ಬ್ಯಾಲಟ್ ಪೇಪರ್‌ಗಳನ್ನು ಸುಟ್ಟು ಹಾಕುವುದು ಸಾಮಾನ್ಯ ವಿಷಯವಾಗಿತ್ತು. ಬ್ಯಾಲಟ್ ಪೇಪರ್‌ಗಳನ್ನು ಕದ್ದೊಯುವುದು, ಬೂತುಗಳನ್ನು ವಶಪಡಿಸಿಕೊಳ್ಳುವುದು, ಬಲವಂತವಾಗಿ ಮತ ಹಾಕಿಸಿದ್ದ ಅನೇಕ ಪ್ರಕರಣಗಳು ಬ್ಯಾಲಟ್ ಪೇಪರ್
ಚುನಾವಣಾ ಇತಿಹಾಸದಲ್ಲಿ ನಡೆದು ಹೋಗಿದೆ. ಮಾರ್ಚ್ 20 -1971 ರಲ್ಲಿ ಮುಂಬೈನ ’BLITZ TABLOID’ ನಲ್ಲಿ ಪ್ರಕಟವಾದ ಒಂದು ವರದಿಯಲ್ಲಿ ಬ್ಯಾಲಟ್ ಪೇಪರ್‌ಗಳನ್ನು ಕೆಮಿಕಲ್ ಬಳಸಿ ಬದಲಾಯಿಸಬಹುದೆಂದು ಹೇಳಲಾಗಿತ್ತು, ಯಾವ ರೀತಿ ಬದಲಾಯಿಸಬಹುದೆಂಬುದನ್ನು ಹೇಳಲಾಗಿತ್ತು. ಇವರ ಪ್ರಕಾರ 200 ರಿಂದ 250 ಕ್ಷೇತ್ರಗಳಲ್ಲಿ ಕೆಮಿಕಲ್ ಬಳಸಿ ಕಣ್ಣಿಗೆ ಕಾಣದ ರೀತಿಯಲ್ಲಿ ಮತವನ್ನು ಒಂದು ಪಕ್ಷಕ್ಕೆ ಬೀಳುವಂತೆ ಮಾಡಲಾಗಿದೆ ಯೆಂದು ಹೇಳಲಾಗಿತ್ತು.
ಮತದಾನವಾಗಿ 72 ಗಂಟೆಯ ನಂತರ ನಿಜವಾದ ಮತ ಹಾಕಿದ್ದ ಶಾಹಿಯ ಮಾರ್ಕ್ ಅಳಿಸಿ ಹೋಗುತ್ತಿತ್ತೆಂದು ಹೇಳಲಾಗಿತ್ತು. ಕೆಮಿಕಲ್ ಬಳಸಿರುವ ಬ್ಯಾಲಟ್ ಪೇಪರ್ ಗಳನ್ನು ರಷ್ಯಾ ದೇಶದಿಂದ ಆಮದು ಮಾಡಿಕೊಂಡು ಚುನಾವಣೆಗೆ ಬಳಸಲಾಗಿತ್ತೆಂದು ಆರೋಪಿಸಲಾಗಿತ್ತು. ಆದರೆ ಪಶ್ಚಿಮ ಬಂಗಾಳ ಮತ್ತು ಅಲಿಘಡದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನ ಗಳಿಸಲಿಲ್ಲ, ಕಾರಣ ಚುನಾವಣೆ ನಡೆದ 72 ಗಂಟೆಗಳ ಒಳಗೆ ಈ ಕ್ಷೇತ್ರಗಳಲ್ಲಿ ಎಣಿಕೆ ನಡೆದಿತ್ತು. ಚುನಾವಣೆಯಲ್ಲಿ ಬಳಸುತ್ತಿದ್ದ ಬ್ಯಾಲಟ್ ಪೇಪರ್ ಮೇಲೆ ಇದ್ದಂತಹ ಅನುಮಾನಕ್ಕೆ ಪುಷ್ಟಿ ಕೊಡುವಂತ್ತಿತ್ತು, ಈ ಕ್ಷೇತ್ರಗಳ ಫಲಿತಾಂಶ. ದಕ್ಷಿಣ ದೆಹಲಿ ಕ್ಷೇತ್ರದಿಂದ ಚುನಾವಣೆಯಲ್ಲಿ ಸೋತಿದ್ದಂತಹ ಜನ ಸಂಘದ ಅಭ್ಯರ್ಥಿ ಬಾಲರಾಜ್ ಮಾಧೋಕ್ ಅಭ್ಯರ್ಥಿಯ ವಿರುದ್ಧ, ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.
ಚುನಾವಣೆಯಲ್ಲಿ ನಡೆದಿರುವ ಅಕ್ರಮವನ್ನು ಪ್ರಶ್ನಿಸಿದ್ದರು, ಆದರೆ ನ್ಯಾಯಾಲಯದಲ್ಲಿ ‘ಬ್ಯಾಲಟ್ ಪೇಪರ್’ನ ದುರ್ಬಳಕೆಯ ಪ್ರಶ್ನೆಗಳನ್ನು ಚುನಾವಣಾ ಆಯೋಗ ಸಂಪೂರ್ಣವಾಗಿ ತಳ್ಳಿ ಹಾಕುವ ಮೂಲಕ ಪಾರದರ್ಶಕವಾಗಿ ಚುನಾವಣೆ ನಡೆಸಿರುವುದಾಗಿ ಹೇಳಿತ್ತು. ಚುನಾವಣಾ ಫಲಿತಾಂಶ ಬಂದ ನಂತರ ಈ ರೀತಿಯ ಹೇಳಿಕೆಗಳು ಬರುತ್ತಿದ್ದು, ಇವೆಲ್ಲವೂ ಕಟ್ಟು ಕಥೆಯೆಂದು ಹೇಳಿತ್ತು.
ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಕಮ್ಯುನಿಸ್ಟ್ ಬೆಂಬಲಿತ ಪಕ್ಷದ ಕಾರ್ಯಕರ್ತರು ಇಡೀ ರಾಜ್ಯದ
‘ಬ್ಯಾಲಟ್ ಪೇಪರ್’ ಬೂತುಗಳನ್ನು ವಶಪಡಿಸಿಕೊಂಡು ಚುನಾವಣಾ ಫಲಿತಾಂಶಗಳನ್ನು ಆಡಲು ಬದಲು ಮಾಡಿರುವ ಉದಾಹರಣೆಗಳಿವೆ. EVM ಬಳಸಿದರೆ ಬೂತುಗಳನ್ನು ವಶಪಡಿಸಿಕೊಳ್ಳಲಾಗುವುದಿಲ್ಲ, ಚುನಾವಣಾ
ಫಲಿತಾಂಶವನ್ನು ಬದಲಾಯಿಸಲು ಸಾಧ್ಯವಿಲ್ಲವೆಂಬ ಸ್ಪಷ್ಟತೆ ಅವರಿಗಿದೆ.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಚುನಾವಣೆ ಬಂತೆಂದರೆ, ಜನರು ಹೊರಬಂದು ಮತ ಹಾಕುವುದು ಕಷ್ಟವಾಗಿತ್ತು. ಕಾಶ್ಮೀರದ ಅನೇಕ ಬೂತುಗಳಲ್ಲಿ ಶೇಕಡಾ ಸೊನ್ನೆ ಮತದಾನವಾಗಿರುವ ಉದಾಹರಣೆಗಳಿವೆ. ಜನ ಮತಹಾಕಲು ಹೊರಬಂದರೆ ಹೆದರಿಸಲಾಗುತ್ತಿತ್ತು, ಅಪ್ಪಿ ತಪ್ಪಿ ಹೊರಬಂದು ಮತಹಾಕಿದರೆ ಇಡೀ ಬೂತನ್ನು ವಶಪಡಿಸಿಕೊಳ್ಳ ಲಾಗುತ್ತಿತ್ತು. ವಶಪಡಿಸಿಕೊಂಡ ಬ್ಯಾಲಟ್ ಪೇಪರ್‌ಗಳಿಗೆ ಬೆಂಕಿ ಹಚ್ಚಿ ಸುಟ್ಟಿ ಹಾಕಲಾಗುತ್ತಿತ್ತು. ಚುನಾವಣಾ ಫಲಿತಾಂಶ ತಮ್ಮ ವಿರುದ್ಧವಾಗಿ ಬರಬಹುದೆಂಬ ಅನುಮಾನ ಬಂದರೆ ಸಾಕು ಬ್ಯಾಲಟ್ ಪೇಪರ್‌ಗಳಿಗೆ ಬೆಂಕಿ
ಇಡುವ ಕೆಲಸವನ್ನು ದುಷ್ಕರ್ಮಿಗಳು ಮಾಡುತ್ತಿದ್ದರು.
ಚುನಾವಣೆ ಗೆಲ್ಲಲು ಹಣದ ಆಮಿಷದ ಜೊತೆಗೆ, ಬೂತ್ ವಶಪಡಿಸಿಕೊಳ್ಳುವುದು ಅವರ ಚುನಾವಣಾ ತಂತ್ರಗಾರಿಕೆ ಯ ಭಾಗವಾಗಿತ್ತು. ಪಶ್ಚಿಮ ಬಂಗಾಳದಲ್ಲಿ 2019 ರಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅನೇಕ ಕಡೆ ಬೂತುಗಳನ್ನು ವಶಪಡಿಸಿಕೊಂಡು ಬೆಂಕಿ ಹಚ್ಚಿರುವ ಘಟನೆಗಳು ವರದಿಯಾಗಿದ್ದವು. ಚುನಾವಣಾ ಹಿಂಸಾಚಾರ ದಲ್ಲಿ 13 ಜನ ಸತ್ತಿದ್ದರು, ಅನೇಕ ಕಡೆಗಳಲ್ಲಿ ಕಚ್ಚಾ ಬಾಂಬುಗಳನ್ನು ಸ್ಪೋಟಿಸಲಾಗಿತ್ತು. ವರದಿ ಮಾಡಲು ಬಂದಿದ್ದ ಪತ್ರಕರ್ತರ ಮೇಲೆ ಹಗಳಾಗಿದ್ದವು, ಬ್ಯಾಲಟ್ ಬಾಕ್ಸ್ ಗಳಿಗೆ ಬೆಂಕಿ ಹಚ್ಚಲಾಗಿತ್ತು.
1990 ರಲ್ಲಿ ಕಮ್ಯುನಿಸ್ಟ್ ಆಡಳಿತದ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯಲ್ಲಿ 400 ಜನರು ಜೀವ ಕಳೆದು ಕೊಂಡಿದ್ದರು. ಮತ ಹಾಕಿದ ನಂತರ ಮತಪತ್ರಗಳನ್ನು ಕಸಿದು ಚುನಾವಣಾ ಫಲಿತಾಂಶವನ್ನು ಬದಲಾಯಿಸು ವುದು ಅವರ ಬಹುದೊಡ್ಡ ತಂತ್ರಗಾರಿಕೆಯಾಗಿತ್ತು. ಗೆದ್ದ ನಂತರ ಅಧಿಕಾರದಲ್ಲಿ ಏನು ಮಾಡಬೇಕಾದರೂ ಮಾಡಬಹುದೆಂಬ ಭಂಡ ಧೈರ್ಯ ಅವರಲ್ಲಿತ್ತು, EVM ಬಳಕೆಯ ನಂತರ ಸತತವಾಗಿ ಚುನಾವಣೆಗಳನ್ನು ಸೋಲು ತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ದಿಕ್ಕು ತೋಚದಂತಾಗಿದೆ, ತನ್ನ ಪಕ್ಷದ ಹಿರಿಯರ ಕಾಲದ ಚುನಾವಣಾ ತಂತ್ರಗಾರಿಕೆ ಯನ್ನು ಬಳಸಿಕೊಂಡಾದರೂ ಅಧಿಕಾರ ಹಿಡಿಯಬೇಕೆಂಬ ಹಠಕ್ಕೆ ಬಿದ್ದು ತಾನು ಸೋತ ಚುನಾವಣೆಗೆ EVM ಯಂತ್ರವನ್ನು ನೇರವಾಗಿ ಹೊಣೆಮಾಡುತ್ತಿದೆ.
1982 ರಲ್ಲಿ ಮೊದಲ ಬಾರಿಗೆ EVM ಯಂತ್ರಗಳನ್ನು ಬಳಸಲು ನಿರ್ಧರಿಸಲಾಯಿತು, ಆದರೆ ಸರ್ವೋಚ್ಛ ನ್ಯಾಯಾ ಲಯ ಕಾನೂನಿನ ಮಾನ್ಯತೆಯಿಲ್ಲದೆ ಬಳಸಲಾಗುವುದಿಲ್ಲವೆಂದು ಹೇಳಿತ್ತು. ನ್ಯಾಯಾಲಯದ ತೀರ್ಪಿನ ನಂತರ ಸುಮಾರು ಎರಡು ವರ್ಷಗಳ ಕಾಲ EVM ಬಳಕೆ ಸಾಧ್ಯವಾಗಲಿಲ್ಲ. 1986 ರಲ್ಲಿ, ಅಂದಿನ ಚುನಾವಣಾ ಆಯೋಗದ ಆಯುಕ್ತರು ರಾಜೀವ್ ಗಾಂಧಿಯವರ ಕ್ಯಾಬಿನೆಟ್ ಮುಂದೆ EVM ಬಳಕೆಯ ಬಗ್ಗೆ ವಿವರಿಸಿ ಡೆಮೋ ನೀಡಿದ್ದರು.
ರಾಜೀವ್ ಗಾಂಧಿ ಸಂಪುಟ ಸಚಿವರು ಸಭೆಯಲ್ಲಿ ಚುನಾವಣೆಯಲ್ಲಿ EVM ಬಳಕೆಯನ್ನು ಪ್ರಶಂಸಿಸಿದ್ದರು. 1988 ರಲ್ಲಿ ರಾಜೀವ್ ಗಾಂಧಿ ನೇತೃತ್ವದಲ್ಲಿ ಸಂಸತ್ತಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಚುನಾವಣೆಯಲ್ಲಿ EVM ಬಳಕೆಯನ್ನು ಜಾರಿಗೆ ತರಲಾಯಿತು. 2004 ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ EVM ಯಂತ್ರ ಗಳನ್ನು ಬಳಸಲಾಯಿತು, 2004 ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ UPA ಸರಕಾರ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಿತು.
ಇಂದು EVM ವಿರುದ್ಧ ಮಾತನಾಡುವ ಕಾಂಗ್ರೆಸ್ಸಿನ ಜೈರಾಮ್ ರಮೇಶ್, ಅಂದಿನ ಕಾಲದ ರಾಜೀವ್ ಗಾಂಧಿಯವರ
ಸ್ನೇಹಿತ. ಅವರ ಸ್ನೇಹಿತರು ಪ್ರಧಾನಿಯಾಗಿದ್ದಾಗ ಒಪ್ಪಿಗೆ ನೀಡಿದ್ದ ನಿರ್ಣಯದ ವಿರುದ್ಧವೇ ಇಂದು ಮಾತನಾಡು ತ್ತಾರೆ, ರಾಹುಲ್ ಗಾಂಧಿ ಸ್ವತಃ ತಮ್ಮ ತಂದೆಯವರ ನಿರ್ಧಾರವನ್ನೇ ಪ್ರಶ್ನಿಸುತ್ತಾರೆ. ಇಂಡಿ ಒಕ್ಕೂಟದ ಅನೇಕ ಸದಸ್ಯ ಪಕ್ಷಗಳಿಗೆ ಕಾಂಗ್ರೆಸ್ಸಿನ ಅದಲು ಬದಲು ಆಟದ ಬಗ್ಗೆ ಗೊತ್ತಿದೆ.
ಜಮ್ಮು ಮತ್ತು ಕಾಶ್ಮೀರ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದಿರುವ ನ್ಯಾಷನಲ್ ಕಾನರೆ ನಾಯಕ ಒಮರ್ ಅಬ್ದು ಬಹಿರಂಗವಾಗಿ, EVM ಬಗೆಗಿನ ಕಾಂಗ್ರೆಸ್ಸಿನ ಇಬ್ಬಂಗಿ ನೀತಿಯ ವಿರುದ್ಧ ಮಾತನಾಡಿದ್ದಾರೆ.
ಗೆದ್ದಾಗ EVM ಸರಿ ಇದೆಯೆಂದು ಹೇಳಿ, ಸೋತಾಗ EVM ಸರಿಯಿಲ್ಲವೆಂಬುದು ನ್ಯಾಯವಲ್ಲವೆಂಬುದನ್ನು ಹೇಳಿ
ದ್ದಾರೆ. ಚುನಾವಣೆಗಳ ಸೋಲಿನ ಹಿಂದಿನ ಕಾರಣಗಳನ್ನು ಪರಾಮರ್ಶಿಸುವ ಬದಲು EVM ಯಂತ್ರಗಳನ್ನು ದೋಷಿಸಿದರೆ ನಗೆಪಾಟಲಿಗೆ ಗುರಿಯಾಗಬೇಕಾಗುತ್ತದೆಯೆಂಬುದು ಅನೇಕ ಇಂಡಿ ಒಕ್ಕೂಟದ ಸದಸ್ಯರಿಗೆತಿಳಿದಿದೆ. ಉತ್ತರಪ್ರದೇಶದಲ್ಲಿ ನೆಲೆ ಕಾಣದಂತಾಗಿರುವ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಅಖಿಲೇಶ್ ಯಾದವ್ ಮಾತನಾಡು ತ್ತಿದ್ದಾರೆ, ಇಂಡಿ ಒಕ್ಕೂಟದ ಸದಸ್ಯೆ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಪಕ್ಷ ಒಕ್ಕೂಟದ ನೇತೃತ್ವ ವಹಿಸಿಕೊಳ್ಳಬಾರ ದೆಂದು ಹೇಳಿದ್ದಾರೆ. ಇಂಡಿ ಒಕ್ಕೂಟದ ಹಲವು ಸದಸ್ಯರು ‘ಮಮತಾ’ ಇಂಡಿ ಒಕ್ಕೂಟದ ಸಾರಥ್ಯ ವಹಿಸಿಕೊಳ್ಳ ಬೇಕೆಂದು ಹೇಳಿದ್ದಾರೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಗೆದ್ದಾಗ EVM ವಿರುದ್ಧ ಮಾತನಾಡದ ಕಾಂಗ್ರೆಸ್ ಪಕ್ಷದ ಸದಸ್ಯರು, ಸೋತಾಗ ಮಾತ್ರ ಮತ್ತದೇ ಹಳೇ ರಾಗವನ್ನಾಡುತ್ತಾರೆ.
ಭಾರತದ ಚುನಾವಣಾ ಇತಿಹಾಸದಲ್ಲಿ ಬಹುಮುಖ್ಯವಾಗಿ ನೆನಪಿನಲ್ಲಿಡಬೇಕಾದಂತಹ ಹೆಸರು ಟಿ.ಎನ್.
ಶೇಷನ್, ಲಾಲು ಪ್ರಸಾದ್ ಅವಧಿಯಲ್ಲಿ ಚುನಾವಣಾ ಅಕ್ರಮಗಳಿಗೆ ಹೆಸರುವಾಸಿಯಾಗಿದ್ದ ಬಿಹಾರದಲ್ಲಿ 1995ರ
ಚುನಾವಣೆಯಲ್ಲಿ ಶೇಷನ್ ಅನೇಕ ಬದಲಾವಣೆಗಳನ್ನು ತಂದರು. ಮೊದಲ ಬಾರಿಗೆ ವಿವಿಧ ಹಂತಗಳಲ್ಲಿ ಚುನಾವಣೆ ನಡೆಸುವ ಪ್ರಕ್ರಿಯೆ ಜಾರಿಗೆ ತಂದರು, ಇದರಿಂದ ಬ್ಯಾಲಟ್ ಪೇಪರ್ ಬಳಕೆಯಿಂದ ಉಂಟಾಗುತ್ತಿದ್ದಂತಹ ಬೂತ್ ವಶಪಡಿಕೆ ಕಡಿಮೆಯಾಯಿತು. ಹೆಚ್ಚಿನ ಅಧಿಕಾರಿಗಳನ್ನು ವಿವಿಧ ಹಂತಗಳಲ್ಲಿ ನಿಯೋಜಿಸಿ ಶಾಂತಿಯುತ ವಾಗಿ ಚುನಾವಣೆ ನಡೆಸಲು ಅನುಕೂಲವಾಯಿತು.
ಲಾಲೂ ಪ್ರಸಾದ್ ಯಾದವ್ ಅವರಿಗೆ ಶೇಷನ್ ಕಂಡರೆ ಆಗುತ್ತಿರಲಿಲ್ಲ, ಅವರು ಬಿಹಾರದಲ್ಲಿ ಜಾರಿಗೆ ತಂದಂತಹ
ಸುಧಾರಣೆಗಳ ಬಗ್ಗೆ ಚಕಾರವೆತ್ತುತ್ತಿದ್ದ ಲಾಲು, ಅವರ ವಿರುದ್ಧ ಕಿಡಿಕಾರುತ್ತಿದ್ದರು. ಆದರೆ ಅಂದು ಬಿಹಾರದಲ್ಲಿ
ನಡೆದ ಚುನಾವಣೆಯಲ್ಲಿ ಲಾಲು ಪುನಃ ಆಯ್ಕೆಯಾಗಿ ಅಧಿಕಾರಕ್ಕೆ ಬಂದರು. ಶೇಷನ್ ಅಂದು ಜಾರಿಗೆ ತಂದಂತಹ
ಅನೇಕ ಸುಧಾರಣೆಗಳನ್ನು ಇಂದಿಗೂ ರಾಜ್ಯ ಮತ್ತು ದೇಶದ ಚುನಾವಣೆಗಳಲ್ಲಿ ಬಳಸಲಾಗುತ್ತಿದೆ.
ಶೇಷನ್ ಅವಧಿಯಲ್ಲಿ EVM ಯಂತ್ರದ ಮೂಲಕವೂ ಚುನಾವಣೆಗಳು ನಡೆದವು, ಅವರು ಎಂದಿಗೂ EVM ಯಂತ್ರಗಳ ವಿರುದ್ಧ ಮಾತನಾಡಲಿಲ್ಲ. ಅಮೆರಿಕದಲ್ಲಿ ಇಂದಿಗೂ ಬ್ಯಾಲಟ್ ಪೇಪರ್ ಬಳಸುತ್ತಾರೆ, 2019 ರಲ್ಲಿ ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ‘ರಿಗ್ಗಿಂಗ್’ ಆಗಿತ್ತೆಂಬುದು ಡೊನಾಲ್ಡ್ ಟ್ರಂಪ್ ಬೆಂಬಲಿಗರ ವಾದವಾಗಿತ್ತು. ೨೦೨೪ ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹಲವು ವಾರಗಳ ಕಾಲ ಅಮೆರಿಕಾದ ಕೆಲವು ರಾಜ್ಯಗಳ ಚುನಾವಣಾ ಮತ ಎಣಿಕೆ ನಡೆದಿತ್ತು.‘ಟೆಸ್ಲಾ’ ಕಂಪನಿಯ ಸಂಸ್ಥಾಪಕ ಎಲಾನ್ ಮಸ್ಕ್ ಮಹಾರಾಷ್ಟ್ರ ಚುನಾವಣಾ ಎಣಿಕೆಯ ದಿವಸ, ಭಾರತದಲ್ಲಿ ಬಳಕೆಯಾಗುತ್ತಿರುವ EVM ಗಳ ಪರವಾಗಿ ನಿಂತು,
ಅಮೆರಿಕದಲ್ಲಿ ತಿಂಗಳುಗಟ್ಟಲೆ ನಡೆಯುವ ಎಣಿಕೆಯ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು. ಸತತ ಚುನಾವಣಾ
ಸೋಲುಗಳಿಂದ ಕೆಂಗೆಟ್ಟಿರುವ ವಿರೋಧ ಪಕ್ಷಗಳು EVM ಯಂತ್ರವನ್ನು ದೂಷಿಸಿ ಚುನಾವಣಾ ಆಯೋಗವನ್ನು
ಪ್ರಶ್ನಿಸುವುದು ಸಾಮಾನ್ಯವಾಗಲಿ ಬಿಟ್ಟಿದೆ, ಹಿಂದಿನ ಬ್ಯಾಲಟ್ ಪೇಪರ್ ಪದ್ಧತಿ ಮತ್ತೊಮ್ಮೆ ಜಾರಿಗೆ ಬಂದರೆ.
ಚುನಾವಣೆಯಲ್ಲಿ ಅಕ್ರಮ ನಡೆಸಿ ಸಲೀಸಾಗಿ ಗೆಲ್ಲಬಹುದೆಂಬ ಭಂಡ ಮನಸ್ಥಿತಿಯಲ್ಲಿದ್ದಾರೆ.
ಇದನ್ನೂ ಓದಿ: Mohan Vishwa Column: ಅಮೆರಿಕದ ʼಇಕಾನಾಮಿಕ್ ಹಿಟ್ ಮ್ಯಾನ್ʼ