Friday, 29th November 2024

ತ್ಯಾಗ, ಕರುಣೆಯ ಮಹಾಸಾಗರ ತಾಯಿ

ವಾತ್ಸಲ್ಯ

ಪ್ರೊ.ಸಿ.ಶಿವರಾಜು

ನಗರ ಪ್ರದೇಶಗಳಲ್ಲಿ ಹೆಣ್ಣೆಂಬ ತಾಯಿ ಬೆಳಿಗ್ಗೆ ಎದು, ತಮ್ಮ ಮಕ್ಕಳಿಗೆ ತಿಂಡಿಯನ್ನು ಮಾಡಿ ಅವರನ್ನು ಶಾಲೆಗೆ ಕಳುಹಿಸಿ, ಗಂಡನಿಗೆ ಮಧ್ಯಾಹ್ನದ ಊಟದ ಡಬ್ಬಿ ಕಟ್ಟಿ ತಾನು ತಿನ್ನಲು ಸಮಯ ಇಲ್ಲದೆ ತಿಂಡಿಯನ್ನು ಡಬ್ಬಿಗೆ ಹಾಕಿಕೊಂಡು ಓಡೋಡಿ ರೈಲು ಅಥವಾ ಬಸ್ಸನ್ನು ಏರಿ ಫ್ಯಾಕ್ಟರಿ ಅಥವಾ ಕಂಪನಿ ಕೆಲಸಗಳಿಗೆ ಹೋಗುವ ದಾರಿಯಲ್ಲಿ ತಿಂಡಿಯನ್ನು ತಿಂದು ಸಾಯಂಕಾಲ ಮನೆಗೆ ಬರುವಾಗ ತರಕಾರಿ ಹಣ್ಣುಗಳನ್ನು ಚೀಲಕ್ಕೆ ಹಾಕಿಕೊಂಡು ಬಂದು ಮನೆಯಲ್ಲಿ ಅಡುಗೆ ಮಾಡಿ ಮಕ್ಕಳಿಗೆ ತಿನ್ನಿಸುತ್ತಾ ಮಕ್ಕಳ ಮನೆಯ ಪಾಠವನ್ನು ಗಮನಿಸು ತ್ತಾಳೆ.

ಅಮ್ಮ ಎಂಬ ಎರಡಕ್ಷರದ ಮಹತ್ವ ಅತಿಶ್ರೇಷ್ಠವಾದುದ್ದು. ಸೃಷ್ಟಿಕರ್ತೆ, ಜನ್ಮದಾತೆ, ಜನನಿ, ತಾಯಿ, ಅವ್ವ ಎಂಬಿತ್ಯಾದಿ ಹೆಸರುಗಳಿಂದ ಅಮ್ಮನನ್ನು ಕರೆಯುತ್ತೇವೆ. ಆಕೆಯು ಮಕ್ಕಳ ಮೇಲೆ ತೋರುವ ಪ್ರೀತಿಯನ್ನು, ಜೀವನದುದ್ದಕ್ಕೂ ಮಾಡಿದ ತ್ಯಾಗವನ್ನು, ಸಾಕು ಸಾಕೆನಿಸುವಷ್ಟು ನೀಡುವ ವಾತ್ಸಲ್ಯ ವನ್ನು ಕೆಲವು ಪದಗಳಲ್ಲಿ ಹಿಡಿದಿಡುವುದು ಸಾಧ್ಯವಿಲ್ಲ.

ಅಮ್ಮ ಎಂದರೆ ನಮ್ಮನ್ನು ಹಡೆದವ್ವ ಒಂಭತ್ತು ತಿಂಗಳು ಹೆತ್ತು ಹೊತ್ತು ಬೆಳೆಸಿದ್ದಾಳೆ. ಅಮ್ಮನ ಪ್ರೀತಿ ವಿಶ್ವದಲ್ಲೇ ಅತಿದೊಡ್ಡ ಪ್ರೀತಿ. ನಮ್ಮನ್ನು ಕಷ್ಟಪಟ್ಟು ಬೆಳೆಸಿದವಳು. ಅಮ್ಮ ಕೊಡುವ ರಕ್ಷಣೆಗೆ, ಪ್ರೀತಿಗೆ, ಸಮಯದ ಮಿತಿ ಇಲ್ಲ. ನಿದ್ದೆ ಇಲ್ಲದ ರಾತ್ರಿಗಳು ಮತ್ತು ದಣಿವರಿಯದ ದಿನಗಳನ್ನು ಕಳೆದಿರುವುದೆಷ್ಟು? ಅವಳ ಆಲಿಂಗ ನವು ನೆಮ್ಮದಿಯ ಅಭಯಾರಣ್ಯವೇ ಆಗಿದೆ. ಅಮ್ಮ ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ
ಶಕ್ತಿ ಇದೆ.

ಸದಾ ಮಕ್ಕಳ ಸುಖ ಬಯಸುವ ತ್ಯಾಗಮಯಿ. ಅವಳ ಖುಣ ತೀರಿಸಲು ಒಂದು ಜನ್ಮ ಸಾಕಾಗುವುದಿಲ್ಲ. ಕೋಟಿ ದೇವರ ಹಿಂದಿಕ್ಕಿ ಕಾಣುವ ಮೊದಲ
ದೇವತೆ, ‘ತಾಯಿಗಿಂತ ಬಂಧುವಿಲ್ಲ’ ಈ ವಿಷಯದಲ್ಲಿ ನಮ್ಮನ್ನು ಜಗತ್ತಿಗೆ ಕರೆತರುವ ಮೊದಲ ವ್ಯಕ್ತಿ ಅವಳು. ನಮ್ಮ ಜಿವನದ ಮೊದಲ ಶಿಕ್ಷಕಿ, ಅಕ್ಷರ ದಾತೆ, ಯಾವಾಗಲೂ ನಮ್ಮ ಪಾಲನೆಯಲ್ಲಿ ಮೊದಲ ಪಾತ್ರ ವಹಿಸುವ ಮಹಾಕರುಣಾಮಯಿ, ಅವಳ ಪ್ರೀತಿ ಕಾಳಜಿ ಮತ್ತು ಬೆಂಬಲ ಬಹಳ ದೊಡ್ಡದು. ಅಮ್ಮನ ವಿನಮ್ರ ನುಡಿ ಮತ್ತು ದಯೆಯ ಸ್ವಭಾವವೇ ಅಚ್ಚು ಮೆಚ್ಚು.

ಆದ್ದರಿಂದಲೇ ಸ್ವಾಮಿ ವಿವೇಕಾನಂದರವರು ‘ತಾಯಿಯ ಹೃದಯವು ಮಗುವಿನ ಶಾಲಾ ಕೋಣೆಯಾಗಿದೆ’ ಎಂಬ ಸತ್ಯದ ನುಡಿಯನ್ನು ನಮಗೆ ತಿಳಿಸಿದ್ದಾರೆ. ಜೀವನದಲ್ಲಿ ನಮಗೆ ನುಡಿಯಲು ಬರುವಂತಹ ಮೊದಲ ಪದ ಅಮ್ಮ. ತಾಯಿ ಮತ್ತು ಮಕ್ಕಳ ಮಧ್ಯೆ ಇರುವುದು ಬೆಲೆಕಟ್ಟಲಾಗದ ಪ್ರೀತಿ, ಮಮತೆ, ವಾತ್ಸಲ್ಯ, ಮಮಕಾರ. ಮಕ್ಕಳನ್ನು ಹೆತ್ತು, ಹೊತ್ತು, ಸಾಕಿ, ಸಲುಹಿ ಉತ್ತಮ ಭವಿಷ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಪ್ರಧಾನವಾದುದ್ದು.

ಅವಳು ಮಕ್ಕಳ ಭವಿಷ್ಯ ರೂಪಿಸುವ ಮಹಾಶಿಲ್ಪಿ ಎಂಬುದು ಸಾರ್ವಕಾಲಿಕ ಸತ್ಯ. ಅದು ಯಾವ ಕಾಲಕ್ಕೂ ಬದಲಾಗಲು ಸಾಧ್ಯವೇ ಇಲ್ಲ. ಅಮ್ಮಂದಿರ ಪ್ರಪಂಚ ಚಿಕ್ಕದು, ಆದರೆ ತಾಯಿಯ ಪ್ರೀತಿ ಅಳತೆಗೆ ಮೀರಿದ್ದು. ಅಮ್ಮ ಮೊದಲ ಗುರು, ಮಾರ್ಗದರ್ಶಿ, ಪಾಲನೆ ಪೋಷಣೆಯ ಮೇರುಶಿಖರ, ಸ್ಪೂರ್ತಿ ದಾತೆ, ವಿನಮ್ರತೆಯ ಮತ್ತು ದಯೆಯ ಮತ್ತೊಂದು ಹೆಸರೇ ತಾಯಿ. ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಮಹಾಮಾತೆ. ಮಕ್ಕಳ ದೊಡ್ಡ ಶಕ್ತಿ, ಜೀವನ ದಲ್ಲಿ ಕುಟುಂಬದ ಸನ್ನಿವೇಶವನ್ನು ಸಮರ್ಪಕವಾಗಿ ನಿಭಾಯಿಸುವ ಮಹಾಚಾಣಾಕ್ಷೆ, ಮಗುವಿಗೆ ಸಾಮಾಜಿಕ ಜೀವನದ ಮೌಲ್ಯವನ್ನು ಹಾಗೂ ಹೇಗೆ ಬದುಕಬೇಕೆಂಬ ರೀತಿ, ರಿವಾಜುಗಳನ್ನು ತಮ್ಮಲ್ಲಿರುವ ಸಾಮರ್ಥ್ಯವನ್ನು ತುಂಬುವ ಶಕ್ತಿ ಅವಳಿಗೆ ಮಾತ್ರ ಇರುತ್ತದೆ.

ಅಮ್ಮನ ಬಗ್ಗೆ ವರ್ಣಿಸುವುದಕ್ಕೆ ಪದಗಳೇ ಸೋತು ಬಿಡುತ್ತವೆ. ಅಕ್ಷರದಿಂದ ಅಮ್ಮನನ್ನು ವರ್ಣಿಸಲು ಸಾಧ್ಯವಿಲ್ಲ. ತಾಯಿ ಎಂಬ ಶಿಲ್ಪಿಗೆ ಆಕಾರವಿಲ್ಲದ ಕಲ್ಲನ್ನು ಸಂಸ್ಕಾರವೆಂಬ ಉಳಿಪೆಟ್ಟಿನಿಂದ ಪೂಜನೀಯ ಮೂರ್ತಿಯನ್ನಾಗಿಸುವ ತಾಕತ್ತಿದೆ. ವಿಶ್ವದಲ್ಲಿ ಮಹೋನ್ನತವಾದುದ್ದನ್ನು ಸಾಧಿಸಿದ ಶೇ. ೯೫ ರಷ್ಟು ಜನರ ಸಾಧನೆಯಲ್ಲಿ ನಿಸ್ಸಂದೇಹವಾಗಿ ಅಮ್ಮನ ಬೆವರಿದೆ ಎಂದೇಳಬಹುದು. ಹಸಿದ ಹೊಟ್ಟೆಯ ತ್ಯಾಗವಿದೆ. ಮೈ ಮೇಲೆ ಮನೆ ಬಿದ್ದರೂ ಮಗುವನ್ನು ಹೊಟ್ಟೆಯಲ್ಲಿ ರಕ್ಷಿಸಿದ ಮಹಾತಾಯಿ ಅವಳು.

ಮಕ್ಕಳು ಬೆಳೆದು ತಮ್ಮ ಸ್ವಂತ ಪ್ರಯಾಣವನ್ನು ಪ್ರಾರಂಭಿಸಿದಾಗ ತಾಯಿಯ ಪಾತ್ರವು ವಿಶ್ವಾಸಾರ್ಹ ಮತ್ತು ಸ್ನೇಹಪೂರ್ಣವಾಗಿ ವಿಕಸನಗೊಳ್ಳುತ್ತದೆ. ತೆರೆದ ತೋಳುಗಳು ಮತ್ತು ತೆರೆದ ಹೃದಯದಿಂದ ಅವಳು ನಗು ಮತ್ತು ಕಣ್ಣೀರನ್ನು ಸಮಾನವಾಗಿ ಸ್ವಾಗತಿಸುತ್ತಾಳೆ. ಸೋಲಿನ ಕ್ಷಣಗಳಲ್ಲಿ ಸಾಂತ್ವಾನ ವನ್ನು ನೀಡುತ್ತಾಳೆ. ಅಮ್ಮನ ಪ್ರೀತಿಯು ತಲೆಮಾರುಗಳಾದ್ಯಂತ ಹೃದಯಗಳನ್ನು ಬಂಧಿಸುವ ಎಳೆಯಾಗಿದೆ. ಜೀವನವನ್ನು ರೂಪಿಸುವಲ್ಲಿ ಅಮ್ಮನ
ಪರಿಶ್ರಮವು ಅಗಾಧವಾದುದ್ದು. ಸ್ವಂತ ಮಕ್ಕಳಿಂದ ಪರಿತಪ್ತಳಾಗಿ ವೃದ್ಧಾಶ್ರಮದ ಮೂಲೆಯೊಂದರಲ್ಲಿ ಕೂತರು, ಅದೇ ಮಗನ ಬಾಲ್ಯವನ್ನು ನೆನಪಿಸಿ ಕೊಂಡು ನಸು ನಗೆ ಬೀರುತ್ತಾ ಆತನ ಭವಿಷ್ಯ ಚೆನ್ನಾಗಿರಬೇಕೆಂದು ಎರಡು ಕೈಯೆತ್ತಿ ಹಾರೈಸುವ ಅಮ್ಮನನ್ನು ಲೇಖನದಿಂದ ಕಟ್ಟಿ ಹಾಕುವು ದಕ್ಕೆ ಸಾಧ್ಯವೇ? ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಒಂದು ಸಣ್ಣ ಕುಟುಂಬ. ಆ ಕುಟುಂಬಕ್ಕೆ ಒಬ್ಬಳೇ ಹೆಣ್ಣು ಮಗು. ಆ ಮಗುವಿಗೆ ಹುಟ್ಟಿನಿಂದಲೇ ಕಿವಿ ಕೇಳಿಸುವುದಿಲ್ಲ ಮಾತನಾಡಲು ಬರುವುದಿಲ್ಲ, ಆದರೂ ತನ್ನ ಮಗಳನ್ನು ವಿದ್ಯಾಭ್ಯಾಸ ಮಾಡಿಸಿ ಬಹಳ ಎತ್ತರಕ್ಕೆ ಬೆಳೆಸ ಬೇಕೆಂಬ ಹಂಬಲ ತಂದೆ ತಾಯಿಗೆ ಇರುತ್ತದೆ.

ತನ್ನ ತಾಯಿ ಆ ಮಗುವಿನ ಬೆಳವಣಿಗೆಗೋಸ್ಕರ ತನ್ನ ಜೀವನವನ್ನೇ ಮುಡುಪಾಗಿಟ್ಟು ವಿದ್ಯಾಭ್ಯಾಸ ಕೊಡಿಸುವ ಜತೆಗೆ ಭರತನಾಟ್ಯ ಶಾಲೆಗೆ ಸೇರಿಸಿ ಭರತನಾಟ್ಯವನ್ನು ಕಲಿಸುತ್ತಾಳೆ. ಆ ಮಗು ಭರತನಾಟ್ಯದಲ್ಲಿ ಪ್ರಸಿದ್ಧಿಯನ್ನು ಪಡೆದು ಕರ್ನಾಟಕದಲ್ಲೇ ಅಲ್ಲದೇ ದೇಶ ವಿದೇಶಗಳಲ್ಲಿ ಹೆಸರನ್ನು ಗಳಿಸುತ್ತಾಳೆ. ಆಕೆಯ ಅಮ್ಮನಿಗೆ ಮಗಳ ಬೆಳವಣಿಗೆಯನ್ನು ನೋಡಿ ಅವಳಿಗೆ ಆಗುವ ಆನಂದ ಹೇಳಲಿಕ್ಕೆ ಸಾಧ್ಯವಿಲ್ಲ. ಅಮ್ಮ ಎಂದರೆ ಮಹಾತ್ಯಾಗಿ ಎಂಬುದನ್ನು ನಾವು ಇಲ್ಲಿ ಅರಿಯಬೇಕಾಗಿದೆ.

ತಮ್ಮ ಮಗುವಿಗೆ ಸತ್ಯದ ಮಾರ್ಗವನ್ನು ತೋರಿಸುವ ಮೊದಲ ಶಿಕ್ಷಕಿ ತಾಯಿ ಹಾಗೂ ಅತೃಪ್ತಳಾಗಿರುವ ಹೆಣ್ಣಿನ ಕುಟುಂಬವು ಎಂದಿಗೂ ಸಂತೋಷ ದಿಂದಿರಲು ಸಾಧ್ಯವಿಲ್ಲ ಎಂಬ ಅರಿವನ್ನು ನಮಗೆ ಬಸವಣ್ಣನವರು ನೀಡಿದ್ದಾರೆ. ತಮಿಳುನಾಡಿನ ಕೊಳಗೇರಿಯಲ್ಲಿ ಹುಟ್ಟಿ ಬೆಳೆದು ತನ್ನ ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗೆ ಶಿಕ್ಷಣ ಮುಗಿಸಿ ಉನ್ನತ ವಿದ್ಯಾಭ್ಯಾಸಕ್ಕೆ ಹೈದ್ರಾಬಾದಿನ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್’ (IIಒ) ಗೆ ಪ್ರವೇಶ ಪಡೆದು ಎಂ.ಬಿ.ಎ ಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿ ಸಹಜವಾಗಿ ಖಾಸಗಿ ಕಂಪನಿಗೆ ಉದ್ಯೋಗಕ್ಕೆ ಸೇರಬೇಕೆಂಬುದು ಸಾಮಾನ್ಯರ ಬಯಕೆ ಯಾಗಿರುತ್ತದೆ.

ಆದರೆ ವಿಭಿನ್ನವಾಗಿ ಯೋಚಿಸಿದ ಶರತ್‌ಬಾಬು ತನ್ನ ತಾಯಿ ತಾನು ಚಿಕ್ಕ ವಯಸ್ಸಿನಲ್ಲಿರುವಾಗಲೆ ತನ್ನ ವಿದ್ಯಾಭ್ಯಾಸಕ್ಕೆ ಹಾಗೂ ಕುಟುಂಬದ
ನಿರ್ವಹಣೆಗಾಗಿ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಇಡ್ಲಿಯನ್ನು ಬೇಯಿಸಿ ತನ್ನ ಕೊಳಗೇರಿಯಲ್ಲಿ ವ್ಯಾಪಾರ ಮಾಡಿ ಸಂಸಾರ ಸಾಗಿಸುತ್ತಿದ್ದ ಅಮ್ಮನ ಸ್ಪೂರ್ತಿಯನ್ನು ಶರತ್‌ಬಾಬು ಮೆಲುಕು ಹಾಕಿಕೊಂಡು ನಾನು ಕೂಡ ಹೊಟೇಲ್ ಬ್ಯುಸಿನೆಸ್ ಮಾಡಬೇಕೆಂದು ಬ್ಯಾಂಕಿನಿಂದ ಸಾಲ ಪಡೆದು, ಹೈದರಾಬಾದಿನಲ್ಲೇ ಹೊಟೇಲ್ ತೆಗೆದು ಕೈ ಸುಟ್ಟುಕೊಂಡು ಸಾಲವಂತನಾಗಿರುವಾಗ ಗೋವಾದ ವಿಶ್ವವಿದ್ಯಾಲಯದ ಕ್ಯಾಂಟೀನ್ ಒಂದರಲ್ಲಿ ೧೫೦೦
ವಿದ್ಯಾರ್ಥಿಗಳಿಗೆ ತಿಂಡಿ ಊಟ ತಯಾರು ಮಾಡಿ ಕೊಡುವ ಟೆಂಡರ್ ತನ್ನದಾಗಿಸಿಕೊಂಡು ಹಗಲೂ ರಾತ್ರಿ ದುಡಿದು ಕೆಲವೇ ತಿಂಗಳುಗಳಲ್ಲಿ ಬ್ಯಾಂಕಿನ ಸಾಲ ತೀರಿಸಿ ಬಂಡವಾಳ ಮಾಡಿಕೊಂಡು ಈಗ ಹತ್ತಾರು ಹೊಟೇಲ್ ಗಳನ್ನು ತೆರೆದು ದೊಡ್ಡಉದ್ಯಮವನ್ನಾಗಿ ಮಾಡಿ ಸಾವಿರಾರು ಕೊಳಗೇರಿ ಜನಗಳಿಗೆ ಉದ್ಯೋಗವನ್ನು ನೀಡುವುದರ ಮೂಲಕ ದೇಶದ ದೊಡ್ಡಉದ್ಯಮಿಯಾಗಿದ್ದಾರೆ.

ತನ್ನ ತಾಯಿಯು ಸಂಸಾರ ನೀಗಿಸಲಿಕ್ಕೋಸ್ಕರ ಹಾಗೂ ತನ್ನ ಮಗನ ವಿದ್ಯಾಭ್ಯಾಸ ಮಾಡಿಸುವುದಕ್ಕೋಸ್ಕರ ಮಾಡುತ್ತಿದ್ದ ಇಡ್ಲಿ ತಯಾರಿಕೆ ಮತ್ತು ಮಾರಾಟದಿಂದ ಸೂರ್ತಿ ಪಡೆದ ಬಾಬು ರವರು ತಾನು ಎಂ.ಬಿ.ಎ ಪದವಿಯನ್ನು ಪಡೆದು ಹೊಟೇಲ್ ಉದ್ಯಮವನ್ನು ಮಾಡಿ ಸಾವಿರಾರು ಕೊಳಗೇರಿ ಜನರಿಗೆ ಉದ್ಯೋಗ ನೀಡಿ ಇಂದಿಗೂ ಕೋಟಿ ಕೋಟಿ ವಿದ್ಯಾವಂತರಿಗೆ ಸಾಮಾನ್ಯ ಜನರಿಗೆ ಮಾದರಿಯಾಗಿ ಸ್ಪೂರ್ತಿಯಾಗಿ ನಮ್ಮ ಮುಂದೆ ಆದರ್ಶ ವ್ಯಕ್ತಿಯಾಗಿ ಬದುಕುತ್ತಿದ್ದಾರೆ. ಅಂದರೆ ತಾಯಿ ಯಾವ ವಿಚಾರದಲ್ಲಿ ಸ್ಪೂರ್ತಿಯಾಗಿಲ್ಲ? ಆಸರೆಯಾಗಿಲ್ಲ? ಮಾದರಿಯಾಗಿಲ್ಲ? ಎಂಬುದನ್ನು ಹುಡುಕಿದರೂ ಸಿಗುವುದಿಲ್ಲ.

ಅಮ್ಮ ಎಂಬ ಆ ಮಹಾತಾಯಿಯಿಂದಲೇ ಈ ಜಗತ್ತು ಬದಲಾವಣೆಯನ್ನು ಕಂಡಿದೆ ಬೆಳವಣೆಯಾಗುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಆದ್ದರಿಂದಲೇ ಲೇಖಕ, ಚೇತನ್ ಭಗತ್ ರವರು ‘ತಾಯಿಯ ಪ್ರೀತಿಯು ಸಾಮಾನ್ಯ ಮನುಷ್ಯನಿಗೆ ಅಸಾಧ್ಯವಾದುದನ್ನು ಮಾಡಲು ಅನುವು ಮಾಡಿಕೊಡುವ ಇಂಧನ ವಾಗಿದೆ’ ಎಂಬುದಾಗಿ ತಾಯಿಯನ್ನು ಕುರಿತು ವರ್ಣಿಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಆಸ್ಧಾನದಲ್ಲಿ ಒಂದು ಬಾರಿ ಯುದ್ಧದ ಪ್ರಸಂಗ ಬಂದೊ ದಗುತ್ತದೆ. ಆಗ ಮಹಾರಾಜರು ಸೈನ್ಯಾಧಿಪತಿಯನ್ನು ಕರೆದು ಯುದ್ಧಕ್ಕೆ ಸನ್ನದ್ಧರಾಗುವಂತೆ ಆಜ್ಞಾಪಿಸುತ್ತಾರೆ.

ಯುದ್ಧಕ್ಕೆ ಸಿದ್ಧರಾಗುವ ಸಂದರ್ಭದಲ್ಲಿ ಮಹಾರಾಜರು ತಲೆಗೆ ಹಾಕಿಕೊಳ್ಳುವ ಶಿರಸಾಣವನ್ನು ತೆಗೆದುಕೊಳ್ಳಲು ಹೋದಾಗ ಆ ಶಿರಸ್ತ್ರಾಣದ ಒಳಗಡೆ ಗುಬ್ಬಚ್ಚಿವೊಂದು ಗೂಡನ್ನು ಕಟ್ಟಿ ಮರಿಗಳನ್ನು ಪೋಷಣೆ ಮಾಡುತ್ತಿರುತ್ತದೆ. ಅದನ್ನು ಕಂಡ ಶಿವಾಜಿ ಮಹಾರಾಜರ ತಾಯಿ ಜೀಜಾಬಾಯಿಯವರು ಶಿರಸ್ತ್ರಾಣವನ್ನು ತೆಗೆದುಕೊಳ್ಳಬೇಡ ಎಂದು ಆದೇಶಿಸುತ್ತಾರೆ. ಏಕೆಂದರೆ ಅದರಲ್ಲಿ ಗುಬ್ಬಚ್ಚಿ ಮರಿಗಳನ್ನು ಹಾಕಿ ಪೋಷಣೆ ಮಾಡುತ್ತಿದೆ. ನನ್ನ ಮಗನಾಗಿ ನೀನು ನನಗೆ ಎಷ್ಟು ಮುಖ್ಯವೋ ಅಷ್ಟೇ ಆ ಗುಬ್ಬಚ್ಚಿ ಮರಿಗಳು ಕೂಡ ಮುಖ್ಯ, ಏಕೆಂದರೆ ಅದರ ಮರಿಗಳ ರಕ್ಷಣೆ ನಮ್ಮ ಕರ್ತವ್ಯ. ಆದ್ದರಿಂದ ನೀನು ಶಿರಸ್ತ್ರಾಣವಿಲ್ಲದೇ ನನ್ನ ಆಶೀರ್ವಾದದಿಂದ ಯುದ್ಧದಲ್ಲಿ ಗೆಲ್ಲುತ್ತಿಯಾ ಎನ್ನುವ ನಂಬಿಕೆಯಿಂದ ಯುದ್ಧಕ್ಕೆ ಸನ್ನದ್ಧನಾಗು ಎಂದು ತಾಯಿ ಜೀಜಾ ಬಾಯಿ ಯವರು ಆಜ್ಞಾಪಿಸುತ್ತಾರೆ.

ಅದರಂತೆ ಶಿವಾಜಿ ಮಹಾರಾಜರು ತನ್ನ ತಾಯಿಯ ಆಶೀರ್ವಾದವೇ ನನಗೆ ಶ್ರೀರಕ್ಷೆ, ಅದುವೇ ಶಿರಸ್ತ್ರಾಣ ಎಂದು ಭಾವಿಸಿ, ಯುದ್ಧಕ್ಕೆ ತೆರಳಿ ಯುದ್ಧದಲ್ಲಿ ಜಯಶೀಲರಾಗಿ ಆಸ್ಥಾನಕ್ಕೆ ಹಿಂತಿರುಗುತ್ತಾರೆ. ಇದನ್ನು ಕಂಡ ತಾಯಿ ಜೀಜಾಬಾಯಿಯವರು ಶಿರಸಾಣವಿಲ್ಲದೆ ಯುದ್ಧವನ್ನು ಗೆದ್ದ ಮಗನನ್ನು ಅಪ್ಪಿ ಕೊಂಡು ಆನಂದ ಭಾಷ್ಪವನ್ನು ಸುರಿಸುತ್ತಾರೆ. ಇಲ್ಲಿ ಜೀಜಾಬಾಯಿಯವರಿಗೆ ತನ್ನ ಮಕ್ಕಳಂತೆ ಗುಬ್ಬಚ್ಚಿ ಮರಿಗಳ ಮೇಲಿರುವ ಪ್ರೀತಿ, ವಾತ್ಸಲ್ಯ, ಮಾನವೀಯತೆ, ಹಾಗೂ ತನ್ನ ಮಗ ಶಿವಾಜಿ ಶಿರಸಾಣವಿಲ್ಲದೆ ಯುದ್ಧವನ್ನು ಮಾಡಲು ಪ್ರೇರೇಪಿಸುವುದರ ಮೂಲಕ ಅವನ ಶೌರ್ಯ, ಪರಾಕ್ರಮ, ಚಾಣಾಕ್ಷತೆ, ಎದೆಗಾರಿಕೆಯನ್ನು ಜಗತ್ತಿಗೆ ತೋರಿಸುವ ತಾಯಿಯ ಹೃದಯವಂತಿಕೆಯು ಆದರ್ಶವಾಗಿದೆ ಮತ್ತು ಪ್ರಶಂಸನೀಯವೂ ಆಗಿದೆ.

ಹಾಗಾಗಿ ರವೀಂದ್ರನಾಥ ಟ್ಯಾಗೋರ್ ರವರು ದೇವರು ಎಂಬ ನಂಬಿಕೆಯ ಒಂದು ಶಕ್ತಿ ಎಲ್ಲೆಡೆ ಇರಲು ಸಾಧ್ಯವಿಲ್ಲ, ಆದ್ದರಿಂದ ತಾಯಿಯ ರೂಪದಲ್ಲಿ ಇದ್ದು ಎಲ್ಲವನ್ನು ನಿರ್ವಹಿಸುತ್ತಾಳೆ. ಎಂಬ ಸತ್ಯವನ್ನು ನಮಗೆ ತಿಳಿಸಿದ್ದಾರೆ. ಜೀವನವೆಂಬ ಪಯಣದಲ್ಲಿ ಅಮ್ಮನ ಪಾತ್ರಗಳನ್ನು ವಿವರಿಸಲಿಕ್ಕೆ ಪದಗಳಿಂದ ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ಕಾಣಿಸುವ ಅಥವಾ ಮಾಡಲು ಸಾಧ್ಯವಾಗುವ ಎಲ್ಲಾ ಕೆಲಸಗಳನ್ನು ಒಂದು ಹೆಣ್ಣು ಮಾಡುತ್ತಾಳೆ. ಹಳ್ಳಿ ಗಳಲ್ಲಾಗಲೀ ನಗರ ಪ್ರದೇಶಗಳಲ್ಲಾಗಲೀ ಹೆಣ್ಣೆಂಬ ತಾಯಿ ಬೆಳಿಗ್ಗೆ ಎದು, ತಮ್ಮ ಮಕ್ಕಳಿಗೆ ತಿಂಡಿಯನ್ನು ಮಾಡಿ ಅವರನ್ನು ಶಾಲೆಗೆ ಕಳುಹಿಸಿ, ಗಂಡನಿಗೆ ಮಧ್ಯಾಹ್ನದ ಊಟದ ಡಬ್ಬಿ ಕಟ್ಟಿ ತಾನು ತಿನ್ನಲು  ಸಮಯ ಇಲ್ಲದೆ ತಿಂಡಿಯನ್ನು ಡಬ್ಬಿಗೆ ಹಾಕಿಕೊಂಡು ಓಡೋಡಿ ರೈಲು ಅಥವಾ ಬಸ್ಸನ್ನು ಏರಿ ಫ್ಯಾಕ್ಟರಿ ಅಥವಾ ಕಂಪನಿ ಕೆಲಸಗಳಿಗೆ ಹೋಗುವ ದಾರಿಯಲ್ಲಿ ತಿಂಡಿಯನ್ನು ತಿಂದು ಸಾಯಂಕಾಲ ಮನೆಗೆ ಬರುವಾಗ ತರಕಾರಿ ಹಣ್ಣುಗಳನ್ನು ಚೀಲಕ್ಕೆ ಹಾಕಿಕೊಂಡು ಬಂದು ಮನೆಯಲ್ಲಿ ಅಡುಗೆ ಮಾಡಿ ಮಕ್ಕಳಿಗೆ ತಿನ್ನಿಸುತ್ತಾ ಮಕ್ಕಳ ಮನೆಯ ಪಾಠವನ್ನು ಗಮನಿಸಿ ಗಂಡನಿಗೂ ಊಟ ಬಡಿಸು ವಾಗ, ಆತ ಕುಡುಕನಾದರೆ ಅವನಿಂದ ಏಟುಗಳನ್ನು ತಿಂದು ಕೊನೆಗೆ ತಡರಾತ್ರಿ ಉಳಿದು ಬಳಿದದ್ದನ್ನು ಸ್ವಲ್ಪ ಊಟ ಮಾಡಿ, ಮಧ್ಯ ರಾತ್ರಿಗೆ ಮಲಗಿ ತನ್ನೆಲ್ಲಾ ನೋವುಗಳನ್ನು ತಡೆದುಕೊಂಡು ಮಕ್ಕಳಿಗೆ ನಮ್ಮಂತಹ ಬದುಕು ಬರಬಾರದು, ಹೇಗಾ ದರೂ ವಿದ್ಯಾಭ್ಯಾಸ ಮಾಡಿಸಬೇಕೆಂಬ ಹಂಬಲದಿಂದ ಹಗಲು ರಾತ್ರಿ ಶ್ರಮಪಟ್ಟು ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿ ಅವರು ಚೆನ್ನಾಗಿ ಬದುಕುವುದನ್ನು ನೋಡುವುದೇ ಅಮ್ಮನ ಅಂತಿಮ ಗುರಿಯಾಗಿರುತ್ತದೆ.

ಈ ಜಗತ್ತು ಕಂಡ ಅಪ್ರತಿಮ ಸಮಾಜಸೇವಕಿ ಮದರ್ ತೆರೇಸಾ ಕೂಡ ಒಬ್ಬರು ಆದರ್ಶ ಅಮ್ಮ. ತಾಯಿಯಾದವರು ಕೆಲವು ಮಕ್ಕಳಿಗೆ ಮಾತ್ರ ಜನ್ಮ
ನೀಡುತ್ತಾಳೆ. ಆದರೆ ತೆರೆಸಾ ರವರು ಕೋಟಿ ಕೋಟಿ ಜನರಿಗೆ ಜನ್ಮ ನೀಡದಿದ್ದರೂ ಅವರಿಗೆ ಆಸರೆಯಾಗಿ ಅವರಿಗೆ ಶಿಕ್ಷಣ ನೀಡುವಮೂಲಕ ಅನಾಥ ಮಕ್ಕಳಿಗೆ ಆಸರೆಯಾಗಿ ವಿದ್ಯಾಭ್ಯಾಸ ನೀಡಿ, ವೃದ್ಧರಿಗೆ ಆಶ್ರಯದಾತೆಯಾಗಿ, ಕುಷ್ಠರೋಗಿಗಳ ದಾರಿದೀಪವಾಗಿ, ಅಬಲೆಯರ, ಹೆಣ್ಣು ಮಕ್ಕಳ ಮಾರ್ಗ ದರ್ಶಿಯಾಗಿ, ಬೀದಿ ಮಕ್ಕಳ, ಕೊಳಗೇರಿಮಕ್ಕಳ, ಬೆಳಕಾಗಿ ಜನ್ಮದಾತೆಯಂತೆ ಮಹಾತಾಯಿಯಾಗಿ, ತಾಯಂದಿರ ತಾಯಿಯಾಗಿ ಇಡೀ ಜಗತ್ತನ್ನೇ ಕಣ್ತೆರೆಸಿರುವ ಇವರು ಕೂಡ ಈ ಸಮಾಜದ ಎಲ್ಲಾ ದುರ್ಬಲರ ಅಮ್ಮ ಎಂದೇ ಖ್ಯಾತಿಯನ್ನು ಪಡೆದಿದ್ದಾರೆ.

ಅಮ್ಮನ ಕರ್ತವ್ಯ ಜವಾಬ್ದಾರಿಗಳು ಬಹಳಷ್ಟು ಇವೆ ಅದಕ್ಕೆ ಕಾಲಮಿತಿ ಇಲ್ಲ. ಸಮಯದ ನಿಯಮವಿಲ್ಲ. ಹಗಲು ರಾತ್ರಿ ಎನ್ನದೆ ಆ ಮಕ್ಕಳ ಶ್ರೇಯಸ್ಸಿ ಗಾಗಿ ಅವರ ಭವಿಷ್ಯಕ್ಕಾಗಿ ದುಡಿಯುವ ಮನೊಭಾವನೆ, ನಿಷ್ಕಲ್ಮಶವಾದ ಮನಸ್ಸು ಹೆಣ್ಣಿಗೆ ಮಾತ್ರ ಇರುತ್ತದೆ, ಎಂಬುದನ್ನು ಮದರ್ ತೆರೆಸಾ ರವರಿಂದ ನಾವು ತಿಳಿಯಬಹುದಾಗಿದೆ. ಹೀಗೆ ಅಮ್ಮ ಎಂಬ ಒಬ್ಬ ಹೆಣ್ಣು ಗಂಡನಿಗೆ ಹೆಂಡತಿಯಾಗಿ, ಅಣ್ಣನಿಗೆ ತಂಗಿಯಾಗಿ, ಮಕ್ಕಳಿಗೆ ಅಮ್ಮನಾಗಿ, ದೇಶ ರಕ್ಷಕಿ ಯಾಗಿ, ಸಮಾಜ ಸೇವಕಿಯಾಗಿ, ಸಂಸಾರವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಛಲಗಾತಿಯಾಗಿ, ಉತ್ತಮ ಆಡಳಿತ ನೀಡುವ ಅಧಿಕಾರಿಯಾಗಿ, ಮಾದರಿ ರಾಜಕಾರಣಿಯಾಗಿ, ಚಂದ್ರಲೋಕಕ್ಕೆ ಹಾರಿದ ವೀರವನಿತೆಯಾಗಿ, ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ, ಶಕ್ತಿಯೆಲ್ಲಾ ಇರುವುದು ಅಮ್ಮನಿಗೆ ಮಾತ್ರ.

ಇಷ್ಟೆಲ್ಲಾ ಸಮರ್ಪಕವಾಗಿ ನಿರ್ವಹಣೆ ಮಾಡುವ ಹೆಣ್ಣಿನ ಭ್ರೂಣಹತ್ಯೆ ಮಾಡುತ್ತಿರುವ ಈ ಸಮಾಜಕ್ಕೆ ಏನನ್ನಬೇಕು? ಹೆಣ್ಣೆಂದರೆ ಅಸಡ್ಡೆ, ತುಚ್ಛ ಮನೋಭಾವ, ತಿರಸ್ಕಾರ ಅಮ್ಮ ಎಂದರೆ ವಿಪರೀತ ಸಲುಗೆ, ತಾಯಿಯನ್ನು ಕಂಡರೆ ವಿನಾಕಾರಣ ಸಿಟ್ಟು, ಹೆಣ್ಣೆಂದರೆ ಕನಿಷ್ಠ ಎಂಬ ಮನಃಸ್ಥಿತಿಗೆ ಧಿಕ್ಕಾರವಿರಲಿ. ಸಮಾಜದಲ್ಲಿ ಈ ರೀತಿಯ ಆಲೋಚನೆಗಳು, ಮನೋಭಾವನೆ ಬದಲಾಗಬೇಕಿದೆ. ಈ ಆಲೋಚನಾ ರೀತಿ ಬದಲಾಗದೆ ಅಮ್ಮನ ಮಹತ್ವ ಅರಿಯಲಿಕ್ಕೆ ಸಾಧ್ಯವಾಗುವುದಿಲ್ಲ.

(ಲೇಖಕರು: ಬೆಂಗಳೂರು ವಿಶ್ವವಿದ್ಯಾಲಯದ
ಸಂಸ್ಕೃತ ವಿಭಾಗದ ಅಧ್ಯಕ್ಷರು)