ಸಂಗತ
ಡಾ.ವಿಜಯ್ ದರಡಾ
ಹಬ್ಬಗಳು ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಚರಣೆಗಳೇ ಇರಬಹುದು. ಆದರೆ ಭಾರತದಲ್ಲಿ ಆಚರಿಸ ಲ್ಪಡುವ ಪ್ರತಿಯೊಂದು ಹಬ್ಬದ ಹಿನ್ನೆಲೆಯಲ್ಲೂ ವೈಜ್ಞಾನಿಕ ಕಾರಣಗಳಿವೆ ಮತ್ತು ಅವೆಲ್ಲವೂ ಅತ್ಯಂತ ಪ್ರಸ್ತುತವಾಗಿವೆ. ಎಲ್ಲಕ್ಕಿಂತ ಹೆಚ್ಚಾಗಿ ಅವು ಭಾರತೀಯರನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತವೆ.
ಇತ್ತೀಚೆಗಷ್ಟೇ ನಾನು ಪರ್ಯೂಷಣ ಪರ್ವ ಆಚರಿಸಿದೆ. ಈಗ ಗಣೇಶೋತ್ಸವ ಆಚರಿಸಿ ಭಕ್ತಿಯ ನಿರುಮ್ಮಳ ಭಾವದಲ್ಲಿ ಕುಳಿತಿದ್ದೇನೆ. ಹಬ್ಬಗಳನ್ನು ಆಚರಿಸುವುದು ನನಗೆ ಬಹಳ ಖುಷಿ. ಬೇರೆ ಯಾವುದಾದರೂ ದೇಶದಲ್ಲಿ ಜನಿಸಿದ್ದರೆ ಈ ಖುಷಿ ನನಗೆ ಸಿಗುತ್ತಿತ್ತೇ? ಯಾವಾಗಲೂ ಇದೊಂದು ಪ್ರಶ್ನೆ ನನ್ನ ಮನಸ್ಸಿನಲ್ಲಿ ಏಳುತ್ತಿರುತ್ತದೆ.
ಇದಕ್ಕೆ ನನಗೆ ನಾನೇ ಉತ್ತರ ಕೊಟ್ಟುಕೊಂಡಾಗ ಮನಸ್ಸು ಹೆಮ್ಮೆಯಿಂದ ಬೀಗುತ್ತದೆ. ಭಾರತದಲ್ಲಿ ಹುಟ್ಟಿರುವು ದಕ್ಕೆ ನಾನೆಷ್ಟು ಪುಣ್ಯ ಮಾಡಿದ್ದೇನೆ, ನಾವೆಲ್ಲಾ ಎಷ್ಟು ಅದೃಷ್ಟವಂತರು ಎಂದು ಯೋಚಿಸುತ್ತೇನೆ. ಭಾರತೀಯ ಸಂಸ್ಕೃತಿ ಯಾವಾಗಲೂ ನನ್ನಲ್ಲಿ ಹೆಮ್ಮೆಯನ್ನು ಮೂಡಿಸುತ್ತದೆ. ನನಗೆ ಜಗತ್ತಿನ ಸಾಕಷ್ಟು ದೇಶಗಳಿಗೆ ಭೇಟಿ ನೀಡುವ ಅವಕಾಶ ಲಭಿಸಿದೆ. ಬಹಳಷ್ಟು ದೇಶಗಳಲ್ಲಿ ನನಗೆ ಸ್ನೇಹಿತರಿದ್ದಾರೆ. ಅವರೆಲ್ಲರೂ ನಾನಾ ಸಂಸ್ಕೃತಿ, ವಿಭಿನ್ನ ಧರ್ಮ ಹಾಗೂ ಬೇರೆ ಬೇರೆ ನಂಬಿಕೆಗಳಿಗೆ ಸೇರಿದವರು. ಅವರಲ್ಲಿ ಅನೇಕರು ನನ್ನಲ್ಲೊಂದು ಪ್ರಶ್ನೆ ಕೇಳುವುದುಂಟು: ‘ಭಾರತದಲ್ಲಿ ಎಷ್ಟು ಹಬ್ಬಗಳಿವೆ? ಯಾಕೆ ಭಾರತೀಯರು ಅಷ್ಟೊಂದು ಹಬ್ಬಗಳನ್ನು ಆ ಪರಿ ಪ್ರೀತಿಯಿಂದ, ಅಷ್ಟೇ ಉತ್ಸಾಹದಿಂದ ಆಚರಿಸುತ್ತಾರೆ?’ ಈ ಪ್ರಶ್ನೆಗೆ ನಾನು ನೀಡುವ ಉತ್ತರ ಸಾಮಾನ್ಯವಾಗಿ ಯಾವಾಗಲೂ ಒಂದೇ ಆಗಿರುತ್ತದೆ.
‘ನೋಡಿ, ನಮ್ಮ ದೇಶ ದಲ್ಲಿರುವ ಹಬ್ಬಗಳನ್ನು ಲೆಕ್ಕ ಹಾಕುವುದು ಬಹಳ ಕಷ್ಟ. ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹಬ್ಬಗಳನ್ನು ಆಚರಿಸುತ್ತಾರೆ. ಅವುಗಳನ್ನೆಲ್ಲ ಎಣಿಸುವುದು ಅಸಾಧ್ಯವೇ ಸರಿ. ಹೀಗಾಗಿ ನಾವು ಇಲ್ಲಿಯವರೆಗೂ ಭಾರತದಲ್ಲಿ ಆಚರಿಸುವ ಹಬ್ಬಗಳನ್ನು ಲೆಕ್ಕಹಾಕಲು ಹೋಗಿಲ್ಲ. ಕೆಲ ಹಬ್ಬಗಳನ್ನು ರಾಷ್ಟ್ರ ಮಟ್ಟದಲ್ಲಿ, ಎಲ್ಲಾ ರಾಜ್ಯಗಳಲ್ಲೂ ಆಚರಿಸುತ್ತಾರೆ. ಇನ್ನು ಕೆಲ ಹಬ್ಬಗಳು ಪಕ್ಕಾ ಲೋಕಲ್. ಅವುಗಳನ್ನು ಆಯಾ ರಾಜ್ಯಗಳಲ್ಲಿ, ಕೆಲವೊಮ್ಮೆ ರಾಜ್ಯದೊಳಗೂ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿ ಆಚರಿಸುತ್ತಾರೆ’ ಎಂದು ಅವರಿಗೆ ಹೇಳುತ್ತೇನೆ.
ಹಬ್ಬಗಳು ಎಲ್ಲಿಯೇ ಆಚರಿಸಲ್ಪಡಲಿ ಅಥವಾ ಯಾವ ಮಟ್ಟದಲ್ಲೇ ಆಚರಣೆಯಾಗಲಿ, ನಮ್ಮ ದೇಶದ ಪ್ರತಿ ಯೊಂದು ಹಬ್ಬವೂ ಪ್ರಕೃತಿಯೊಂದಿಗೆ ಬೆರೆತುಕೊಂಡಿದೆ ಎಂಬುದು ಮಾತ್ರ ಸತ್ಯ. ಪರಿಸರಕ್ಕೆ ಪೂರಕವಾಗಿ ಹಬ್ಬಗಳು ಆಚರಿಸಲ್ಪಡುವುದು ಒಂದೆಡೆಯಾದರೆ, ಇನ್ನೊಂದೆಡೆ ನಮ್ಮ ಹಬ್ಬಗಳೆಲ್ಲವೂ ವೈಜ್ಞಾನಿಕ ಹಿನ್ನೆಲೆ ಕೂಡ ಹೊಂದಿವೆ. ಉತ್ತರ ಭಾರತದಲ್ಲಿ ಪರ್ಯೂಷಣ ಪರ್ವ ಆಚರಿಸುತ್ತಾರಲ್ಲವೇ? ಅದರ ಕೊನೆಯ ದಿನ ಸಂವತ್ಸರಿ ಎಂಬ ಆಚರಣೆಯಿರುತ್ತದೆ. ಆ ದಿನ ನಾನು ‘ಪ್ರತಿಕ್ರಮಣ್’ ಎಂಬ ಬಹಳ ಅರ್ಥಪೂರ್ಣವಾದ ವಿಽಯೊಂ
ದನ್ನು ಆಚರಿಸುತ್ತೇನೆ.
ಆ ವಿಧಿ ಆಚರಿಸುವಾಗ ನಾವು ೮೪ ಲಕ್ಷ ಜೀವಕೋಟಿಗಳ ಕ್ಷಮೆ ಕೇಳಬೇಕು. ಏಕೆ ಕ್ಷಮೆ ಕೇಳಬೇಕು ಅಂದರೆ, ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ಅವುಗಳಿಗೆ ಯಾವತ್ತಾದರೂ ಹಾನಿ ಉಂಟುಮಾಡಿರಬಹುದು. ಅವುಗಳಿಗೆ ನೋವು ನೀಡಿರಬಹುದು. ಅವುಗಳಿಗೆ ಬೇಸರವಾಗುವಂತೆ ಕಠೋರವಾಗಿ ಮಾತನಾಡಿರಬಹುದು ಅಥವಾ ಅವುಗಳಿಗೆ ನಮ್ಮ ಸ್ವಾರ್ಥಕ್ಕಾಗಿ ಶಿಕ್ಷೆ ನೀಡಿರಬಹುದು. ಈ ಎಲ್ಲ ತಪ್ಪುಗಳಿಗೆ ನಾನು ಅವುಗಳನ್ನು ಮನಸಾರೆ ಸ್ಮರಿಸಿಕೊಂಡು, ಕೈಮುಗಿದು, ಕ್ಷಮಾಪಣೆ ಕೇಳುತ್ತೇನೆ. ಹೀಗೆ ಕ್ಷಮೆ ಕೇಳುವುದು ಕೇವಲ ಪ್ರಾಣಿ, ಪಕ್ಷಿಗಳು ಹಾಗೂ ಜೀವಜಂತುಗಳ
ಬಳಿ ಮಾತ್ರವಲ್ಲ, ಮನುಷ್ಯರ ಬಳಿ ಕೂಡ. ಅದರಲ್ಲೂ ಕೇವಲ ಹಿರಿಯರ ಬಳಿ ಮಾತ್ರ ಕ್ಷಮೆ ಕೇಳುವುದಲ್ಲ, ಕಿರಿಯರಲ್ಲೂ ಕೇಳುತ್ತೇವೆ. ಹೀಗೆ ಕ್ಷಮೆ ಯಾಚಿಸುವ ನಮ್ಮ ಪಟ್ಟಿಯಲ್ಲಿ ನಮ್ಮ ಮನೆಮಂದಿ, ಮಕ್ಕಳು, ಹಿರಿಯರು, ಸಹೋದ್ಯೋಗಿಗಳು, ನಮ್ಮ ಮನೆಯ ಕೆಲಸಗಾರರು, ಮನೆಯ ಮುಂದಿನ ರಸ್ತೆ ಗುಡಿಸುವವರು, ನಮ್ಮ ಕಾರು ಓಡಿಸುವವರು, ಕಾರು ಒರೆಸುವವರು ಹೀಗೆ ಎಲ್ಲರೂ ಸೇರಿರುತ್ತಾರೆ!
ಆಹಾ, ಎಷ್ಟೊಂದು ಉದಾತ್ತ ಆಚರಣೆಯಿದು. ಜಗತ್ತಿನಲ್ಲಿ ಕ್ಷಮೆಗಿಂತ ದೊಡ್ಡ ಮೌಲ್ಯಯುತ ವಸ್ತು ಯಾವುದೂ ಇಲ್ಲ. ಕ್ಷಮೆಗಿರುವಷ್ಟು ಶಕ್ತಿ ಬೇರಾವುದಕ್ಕೂ ಇಲ್ಲ. ಕ್ಷಮೆ ಕೇಳುವುದಕ್ಕೂ ಶಕ್ತಿ ಬೇಕು, ಕ್ಷಮಿಸುವುದಕ್ಕೂ ಶಕ್ತಿ ಬೇಕು. ಭಗವಾನ್ ಮಹಾವೀರರು ನಮಗೆ ಕ್ಷಮೆ, ಅಹಿಂಸೆ, ಅಪರಿಗ್ರಹ ಹಾಗೂ ಸತ್ಯದ ಮಂತ್ರವನ್ನು ನೀಡಿದರು. ಜಗತ್ತಿ ನಲ್ಲಿರುವ ಪ್ರತಿಯೊಬ್ಬರೂ ಈ ತತ್ವಗಳನ್ನು ಆಚರಿಸಿದರೆ ಎಲ್ಲೆಡೆ ಸುಖ ಸಂತೋಷಗಳು ತುಂಬಿರುತ್ತವೆ ಎಂದು ಅವರು ಹೇಳಿದರು. ಆದ್ದರಿಂದಲೇ ಅವರು ‘ಅನೇಕಾಂತವಾದ’ ಎಂಬ ಸಿದ್ಧಾಂತವನ್ನು ಹುಟ್ಟುಹಾಕಿದರು.
ಸ್ಥೂಲವಾಗಿ ಹೇಳುವುದಾದರೆ, ಜಗತ್ತಿನಲ್ಲಿರುವ ಪ್ರತಿಯೊಂದು ಸಂಗತಿಗೂ ಬೇರೆ ಬೇರೆ ಆಯಾಮಗಳಿರುತ್ತವೆ ಎಂಬುದು ಇದರ ಅರ್ಥ. ನಿಮ್ಮ ದೃಷ್ಟಿಯಲ್ಲಿ ನೀವು ಮಾಡಿರುವುದು ಸರಿಯಿರಬಹುದು, ಆದರೆ ನನ್ನ ದೃಷ್ಟಿಯಲ್ಲಿ
ನಾನು ಮಾಡಿರುವುದೇ ಸರಿ ಮತ್ತು ನೀವು ಮಾಡಿದ್ದು ತಪ್ಪಿರಬಹುದು. ಸರಿ-ತಪ್ಪುಗಳು ಸಾಪೇಕ್ಷ. ಯಾರು, ಯಾವ ದೃಷ್ಟಿಯಿಂದ ನೋಡುತ್ತಾರೋ ಅದಕ್ಕೆ ಅನುಗುಣವಾಗಿ ಸರಿ-ತಪ್ಪುಗಳು ನಿರ್ಧಾರವಾಗುತ್ತವೆ ಎಂಬುದು ಅನೇಕಾಂತವಾದದ ಸಾರ. ವೈಜ್ಞಾನಿಕವಾಗಿ ನೋಡಿದರೆ ಇದೇ ‘3ಡಿ’ ಪರಿಕಲ್ಪನೆ. ಅಂದರೆ ಒಂದೇ ವಿಷಯವನ್ನು ನಾನಾ ದೃಷ್ಟಿಕೋನದಿಂದ ನೋಡಿ ಸಮಗ್ರವಾಗಿ ಅರಿತುಕೊಳ್ಳುವುದು. ಎಲ್ಲರೂ ಈ ರೀತಿಯ ಚಿಂತನೆಯನ್ನು
ಮೈಗೂಡಿಸಿಕೊಂಡರೆ ಜಗತ್ತಿನಲ್ಲಿರುವ ಎಲ್ಲಾ ಸಮಸ್ಯೆಗಳೂ ಬಗೆಹರಿಯುತ್ತವೆ. ಏಕೆಂದರೆ ಅನೇಕಾಂತವಾದವನ್ನು ಪಾಲಿಸುವವರು ಯಾವತ್ತೂ ನಾನೇ ಸರಿ ಎಂದು ಹೇಳುವುದಿಲ್ಲ.
ನಾನೂ ಸರಿ, ನೀನೂ ಸರಿ ಎಂದೇ ಅವರು ನಂಬುತ್ತಾರೆ. ಹೀಗಾಗಿ ಬೇರೆಯವರು ಏನು ಮಾಡುತ್ತಾರೋ ಅದನ್ನು
ಗೌರವಿಸುತ್ತಾರೆ. ಹೀಗೆ ಬದುಕಿದರೆ ಸಂಘರ್ಷಕ್ಕೆ ಜಾಗವೆಲ್ಲಿ? ಭಗವಾನ್ ಬುದ್ಧ ನಮ್ಮ ಪ್ರಜ್ಞೆಯನ್ನು ಜಾಗ್ರತ ಗೊಳಿಸಿಕೊಳ್ಳುವ ಬಗ್ಗೆ ಹಾಗೂ ಜ್ಞಾನೋದಯದ ಬಗ್ಗೆ ಹೇಳಿದರು.
ನಾವೆಲ್ಲರೂ ಹೆಚ್ಚೆಚ್ಚು ಪ್ರಜ್ಞಾವಂತರಾದೆವು ಎಂದಿಟ್ಟುಕೊಳ್ಳೋಣ, ಆಗ ನಮ್ಮ ಸಮಾಜ ಎಷ್ಟು ಪ್ರೌಢವಾಗಿ ಹಾಗೂ ತರ್ಕಬದ್ಧವಾಗಿ ವರ್ತಿಸುತ್ತದೆಯಲ್ಲವೇ! ಆಗ ಯಾರೂ ಇನ್ನೊಬ್ಬರ ಮೇಲೆ ಜಿದ್ದು ಸಾಧಿಸುವುದಿಲ್ಲ. ಅಂಥ
ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಅಥವಾ ಅಪರಾಧಗಳನ್ನು ನಿಯಂತ್ರಿಸುವ ಪ್ರಶ್ನೆಯೇ ಬರುವುದಿಲ್ಲ.
ಈಗಷ್ಟೇ ನಾವು ಗಣೇಶೋತ್ಸವವನ್ನು ಆಚರಿಸಿದ್ದೇವೆ. ಈ ಹಬ್ಬದಲ್ಲಿ ಒಂದು ಪ್ರಾರ್ಥನೆ ನನ್ನ ಗಮನ ಸೆಳೆಯಿತು: ‘ಹೇ ಸಿದ್ಧಿಬುದ್ಧಿ ಪ್ರದಾಯಕನೇ, ನನಗೆ ಪ್ರೀತಿಯಿಂದ ತುಂಬಿದ ಕಣ್ಣುಗಳನ್ನು ನೀಡು, ಶ್ರದ್ಧೆಯಿಂದ ತುಂಬಿದ ಮನಸ್ಸನ್ನು ನೀಡು, ಸಹಯೋಗದ ಹಸ್ತಗಳನ್ನು ನೀಡು, ಸನ್ಮಾರ್ಗದಲ್ಲಿ ನಡೆಯುವ ಪಾದಗಳನ್ನು ನೀಡು,
ಧ್ಯಾನದಲ್ಲಿ ಮುಳುಗಿರುವ ಮನಸ್ಸು ನೀಡು, ಸತ್ಯವನ್ನೇ ಆಡುವ ನಾಲಗೆಯನ್ನು ನೀಡು, ಹೇ ಪರಮೇಶ್ವರ, ನಿನ್ನೆಲ್ಲಾ ಭಕ್ತರನ್ನೂ ಕೃಪಾದೃಷ್ಟಿಯಿಂದ ನೋಡು’. ಎಷ್ಟೊಂದು ಸುಂದರ ಪ್ರಾರ್ಥನೆಯಿದು. ಇಲ್ಲಿ ಯಾರೂ ಕೇವಲ ತಮಗಾಗಿ ಪ್ರಾರ್ಥಿಸುತ್ತಿಲ್ಲ, ಬದಲಿಗೆ ಜಗತ್ತಿನ ಸಮಸ್ತ ಜನರ ಒಳಿತಿಗಾಗಿ ಪ್ರಾರ್ಥಿಸುತ್ತಿದ್ದಾರೆ.
ಮೇಲ್ನೋಟಕ್ಕೆ ‘ನನಗೆ ನೀಡು’ ಎಂದು ಕೇಳುತ್ತಿದ್ದರೂ, ದೇವರು ‘ನನಗೆ’ ಈ ಒಳ್ಳೆಯ ಸಂಗತಿಗಳನ್ನೆಲ್ಲಾ ನೀಡಿದರೆ
ಅದರಿಂದ ಒಳಿತಾಗುವುದು ‘ನನಗೆ’ ಮಾತ್ರವಲ್ಲ, ಜಗತ್ತಿನ ‘ಎಲ್ಲರಿಗೂ’. ಇಂಥ ಉದಾರ ಚಿಂತನೆಯೇ ನಮ್ಮ ಸಂಸ್ಕೃತಿಯು ನಮಗೆ ನೀಡಿರುವ ವರ. ಈ ಪರಂಪರೆಯು ನಮಗೆ ಎಲ್ಲಾ ಚರಾಚರ ಸಂಗತಿ ಗಳನ್ನೂ ಗೌರವಿಸಲು ಹೇಳಿಕೊಡುತ್ತದೆ. ಹಬ್ಬಗಳಲ್ಲಿ ನಾವು ಕೇವಲ ಪ್ರಾಣಿ, ಪಕ್ಷಿಗಳನ್ನು ಮಾತ್ರ ಪೂಜಿಸುವುದಿಲ್ಲ, ಅವುಗಳ ಜತೆಗೆ ಕಲ್ಲು, ಬಂಡೆಗಳನ್ನೂ ಪೂಜಿಸುತ್ತೇವೆ. ಏಕೆಂದರೆ ಈ ವಿಶ್ವದಲ್ಲಿರುವ ಪ್ರತಿಯೊಂದು ವಸ್ತುವೂ ಗೌರವಕ್ಕೆ ಯೋಗ್ಯವಾಗಿದೆ
ಎಂದು ನಾವು ನಂಬುತ್ತೇವೆ. ಈ ಭೂಮಂಡಲ ದಲ್ಲಿರುವ ಪಂಚಭೂತಗಳು ನಮಗೆ ಪೂಜ್ಯ.
ಭೂಮಿ, ಆಕಾಶ, ಗಾಳಿ, ನೀರು ಮತ್ತು ಅಗ್ನಿ ಇವುಗಳನ್ನು ನಾವು ಪೂಜ್ಯ ಭಾವನೆಯಿಂದ ನೋಡುತ್ತೇವೆ. ಏಕೆಂದರೆ ಎಲ್ಲಾ ವಸ್ತುಗಳೂ ಇವುಗಳಿಂದಲೇ ಆಗಿವೆ ಮತ್ತು ಇವುಗಳಲ್ಲೇ ಲೀನವಾಗುತ್ತವೆ. ಇಲ್ಲಿ ನನಗೊಂದು ಸಂಗತಿ ನೆನಪಾಗುತ್ತಿದೆ. ನನ್ನ ವಿದೇಶಿ ಸ್ನೇಹಿತನೊಬ್ಬ ಒಮ್ಮೆ ಗಣೇಶ ಚತುರ್ಥಿ ವೇಳೆ ಮುಂಬೈಗೆ ಬಂದಿದ್ದ. ಇಲ್ಲಿ ಈ ಹಬ್ಬವನ್ನು ಆಚರಿಸುವ ಅದ್ಭುತ ರೀತಿ ಹಾಗೂ ಉತ್ಸಾಹವನ್ನು ನೋಡಿ ಅವನು ಬೆರಗಾಗಿದ್ದ. ನಂತರ ಗಣೇಶನ
ಮೂರ್ತಿಯನ್ನು ನೋಡಿ, ಅದಕ್ಕೆ ಆನೆಯ ಮುಖ ಮತ್ತು ಮನುಷ್ಯನ ದೇಹ ಏಕಿದೆ ಎಂದು ಚಕಿತಗೊಂಡ.
ಯಾರಿಗಾದರೂ ಆನೆಯ ಮುಖ ಮತ್ತು ಮನುಷ್ಯನ ದೇಹವಿರುವುದು ಸಾಧ್ಯವೇ ಎಂದು ಕೇಳಿದ. ಆಗ ನಾನು ಇದರ ಹಿಂದಿನ ಪೌರಾಣಿಕ ಕತೆಯನ್ನು ಹೇಳಿ, ನಮ್ಮ ಸಂಸ್ಕೃತಿಯಲ್ಲಿ ಅದಕ್ಕಿರುವ ಮಹತ್ವವನ್ನು ವಿವರಿಸಿದೆ. ಹೇಗೆ ನಾವು ಎಲ್ಲಾ ಚರಾಚರ ವಸ್ತುಗಳಿಗೂ ಸಮಾನ ಗೌರವ ನೀಡುತ್ತೇವೆ ಎಂಬುದನ್ನು ತಿಳಿಸಿದೆ. ಆದ್ದರಿಂದಲೇ ಗಣೇಶನ ವಾಹನವಾದ ಇಲಿಯನ್ನು ಕೂಡ ನಾವು ಪೂಜಿಸುತ್ತೇವೆ ಎಂದು ಹೇಳಿದೆ! ನಂತರ ಹೋಳಿಹಬ್ಬದ ಹಿಂದಿನ ಕತೆ, ದಸರಾ ಕತೆ, ದೀಪಾವಳಿಯ ಕತೆ ಹೀಗೆ ಬೇರೆ ಬೇರೆ ಹಬ್ಬಗಳ ಹಿನ್ನೆಲೆಯನ್ನು ವರ್ಣಿಸಿದೆ. ರಾವಣ ಎಷ್ಟೊಂದು ಶಕ್ತಿಶಾಲಿಯೂ, ಜ್ಞಾನವಂತನೂ ಆಗಿದ್ದ. ಅವನನ್ನು ಕಂಡರೆ ದೇವತೆಗಳೂ ಹೆದರುತ್ತಿದ್ದರು.
ಆದರೂ ತನ್ನದೇ ದುರಹಂಕಾರದಿಂದಾಗಿ ಅವನು ದುಷ್ಟಶಕ್ತಿಯಾಗಿ ರೂಪಾಂತರಗೊಂಡ. ಭಾರತೀಯ ಸಂಸ್ಕೃತಿ ಯಲ್ಲಿ, ರಾವಣ ದಹನವು ನಮ್ಮೊಳಗಿರುವ ದುಷ್ಟ ಯೋಚನೆಗಳನ್ನು ಸುಟ್ಟುಹಾಕುವುದರ ಪ್ರತೀಕ ಎಂದು ವಿವರಿಸಿದೆ. ಅದೇ ರೀತಿ, ಪೋಲಾ, ಲೋರಿ, ಬಿಹು ಮುಂತಾದ ಹಬ್ಬಗಳ ಬಗ್ಗೆ ಹೇಳಿದೆ. ಇದನ್ನೆಲ್ಲ ಕೇಳಿ ನನ್ನ ವಿದೇಶಿ
ಗೆಳೆಯ ಎಷ್ಟು ಪ್ರಭಾವಿತನಾಗಿದ್ದ ಅಂದರೆ, ಭಕ್ತಿಯಿಂದ ನನ್ನ ಮುಂದೆಯೇ ಕೈಮುಗಿದುಕೊಂಡು ನಿಂತುಬಿಟ್ಟಿದ್ದ! ಭಾರತೀಯ ಹಬ್ಬಗಳು ಪ್ರಕೃತಿಯನ್ನು, ಮಾನವತೆಯನ್ನು ಹಾಗೂ ಸಮಸ್ತ ವಿಶ್ವವನ್ನು ಗೌರವಿಸುವ ಸಂದೇಶ ಹೊಂದಿವೆ ಎಂದು ಅವನು ಹೇಳಿದ.
ಭಾರತೀಯ ಸಮಾಜದಲ್ಲಿ ಮಾನವೀಯತೆ ಹಾಗೂ ಸಹಬಾಳ್ವೆಯ ಪ್ರವಾಹವೊಂದು ಸದಾ ಮುಕ್ತವಾಗಿ ಹರಿಯುತ್ತಿ ರುತ್ತದೆ. ಚಿಕ್ಕವನಿದ್ದಾಗ ನಾನು ಮೊಹರಂ ಹಬ್ಬದಲ್ಲಿ ಸಿಂಹದ ವೇಷ ಹಾಕಿಕೊಂಡು ತಾಜಿಯಾ ಎದುರು ಕುಣಿಯು ತ್ತಿದ್ದೆ. ಅದೇ ರೀತಿ, ಕ್ರಿಸ್ಮಸ್ ಹಬ್ಬ ಬಂದಾಗ ನಮ್ಮ ಮನೆಯಲ್ಲಿ ಸಂಭ್ರಮಾಚರಣೆ ನಡೆಯುತ್ತಿತ್ತು. ಇವತ್ತಿಗೂ ನಮ್ಮ ಮನೆಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಹಿಂದೂ ಹಬ್ಬಗಳನ್ನು ಆಚರಿಸಿದಷ್ಟೇ ಭಕ್ತಿಯಿಂದ ಆಚರಿಸುತ್ತೇವೆ. ಇದು ನಮ್ಮ ಸಂಸ್ಕೃತಿ ಕಲಿಸಿಕೊಟ್ಟ ಪಾಠ.
ನಮ್ಮ ಸಂಸ್ಕೃತಿಯ ಹಿರಿಮೆಯನ್ನು ವಿದೇಶಿಗರು ಗುರುತಿಸಿ ಗೌರವಿಸಿದಾಗ ನನಗೆ ಬಹಳ ಹೆಮ್ಮೆಯೆನಿಸುತ್ತದೆ. ಆದರೆ, ಭಾರತೀಯರೇ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮ ಸಂಸ್ಕೃತಿಯನ್ನು ಮರೆಯುವುದನ್ನು ನೋಡಿ ಬೇಸರವಾಗುತ್ತದೆ. ನಮ್ಮದು ಹಿಂದುಳಿದ ಸಂಸ್ಕೃತಿ ಎಂದು ಇವರೆಲ್ಲ ಯಾಕಾಗಿ ಭಾವಿಸುತ್ತಾರೆ? ಇವರು ತಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿಯನ್ನು ಸರಿಯಾಗಿ ಕಲಿಸಿಕೊಡುತ್ತಿಲ್ಲ. ಯಾವುದೇ ಸಮಾಜ ತನ್ನ ಸಂಸ್ಕೃತಿಯನ್ನು ಮರೆತರೆ ಆ ಸಮಾಜದ ತಳಪಾಯವೇ ದುರ್ಬಲವಾಗುತ್ತದೆ ಎಂಬುದನ್ನು ಇವರೆಲ್ಲ ಅರಿಯಬೇಕು.
ಈಗ ಹಬ್ಬದ ಋತು ಶುರುವಾಗಿದೆ. ಭಾರತೀಯರೆಲ್ಲರೂ ನಮ್ಮ ಸಂಸ್ಕೃತಿಯಲ್ಲಿ ಪರಂಪರಾಗತವಾಗಿ ಬೆಳೆದುಬಂದ ಹಬ್ಬಗಳನ್ನು ಸಂಭ್ರಮದಿಂದ ಆಚರಿಸೋಣ. ಈ ಸಂಭ್ರಮದಲ್ಲಿ ನಮ್ಮ ಮಕ್ಕಳನ್ನೂ ಸೇರಿಸಿಕೊಳ್ಳೋಣ. ಅವರಿಗೆ ನಮ್ಮ ಹಬ್ಬಗಳ ಮಹತ್ವದ ಬಗ್ಗೆ ತಿಳಿಸೋಣ. ನಮ್ಮ ಧಾರ್ಮಿಕ ನಂಬಿಕೆಗಳಲ್ಲಿ ಹಾಸುಹೊಕ್ಕಾಗಿರುವ ಹಬ್ಬಗಳಿಗೆ ಸಂಬಂಧಿಸಿದ ಕತೆಗಳನ್ನು ಮಕ್ಕಳಿಗೆ ಹೇಳೋಣ. ಏಕೆಂದರೆ ಹಬ್ಬಗಳು ನಮ್ಮಲ್ಲಿ ಸಾಮರಸ್ಯವನ್ನು ಮೂಡಿಸುತ್ತವೆ.
ಹಬ್ಬಗಳು ನಮ್ಮನ್ನು ಹತ್ತಿರ ತರುತ್ತವೆ. ಹಬ್ಬಗಳಲ್ಲಿ ಆರ್ಥಿಕ ಪ್ರಗತಿಯ ಅವಕಾಶಗಳೂ ಇವೆ. ಹಬ್ಬಗಳ ಆಚರಣೆ ಯನ್ನು ಜೀವನದ ಸಂಭ್ರಮಾಚರಣೆಯನ್ನಾಗಿ ನೋಡೋಣ. ಆಗ ಹಬ್ಬಗಳು ನಮ್ಮಲ್ಲಿ ಹೊಸ ಚೈತನ್ಯವನ್ನು ಮೂಡಿಸುತ್ತವೆ! ಇಷ್ಟಕ್ಕೂ ಹಬ್ಬಗಳ ಆಚರಣೆಯ ಉದ್ದೇಶವೇ ಇದಾಗಿದೆ.