Thursday, 28th November 2024

ನನ್ನದೂ ಅಂಬೇಡ್ಕರರ ಜಾತಿ

ಪ್ರತಿಧ್ವನಿ

ಡಾ.ಸುಧಾಕರ ಹೊಸಳ್ಳಿ

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಈಚೆಗೆ ಸದನದಲ್ಲಿ ರಾಷ್ಟ್ರದಲ್ಲಿ ಜಾತಿಗಣತಿ ಅಗತ್ಯವೆಂದು ಆಗ್ರಹ ಮಾಡಿದ ಸಂದರ್ಭದಲ್ಲಿ, ಸಂಸತ್ ಸದಸ್ಯ ಅನುರಾಗ್ ಠಾಕೂರ್ ಅವರು, ‘ನಿಮ್ಮ ಜಾತಿ ಯಾವುದು?‘ ಎಂದು ಮರುಪ್ರಶ್ನೆ ಹಾಕಿದರು. ಈ ನಡಾವಳಿಯಿಂದ ಇಡೀ ಸದನ ರಣಾಂಗಣವಾಗಿ ಮಾರ್ಪಟ್ಟಿತ್ತು.

ಇಂಥದೊಂದು ಘಟನಾವಳಿ ಸದನದ ಒಳಗಿನ ಹೋರಾಟಕ್ಕೆ ಮಾತ್ರ ಸೀಮಿತವಾಗದೆ, ಸದನದ ಹೊರಗೂ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಭಾರತದಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ಜಾತಿಯ ಚರ್ಚೆ ತನ್ನದೇ ಆದ ವಿಶೇಷ ವ್ಯಾಪ್ತಿಯನ್ನು ಹೊಂದಿದೆ. ಅದರಲ್ಲೂ ಜಾತಿಪದ್ಧತಿ ಎಂಬುದು ಹಿಂದೂ ಧರ್ಮದ ಶ್ರೇಷ್ಠತೆಯ ನಡುವೆಯೂ ಒಂದು ಕಪ್ಪುಚುಕ್ಕಿಯಾಗಿ ಉಳಿದಿದೆ. ಹಲವಾರು ಮಹಾಪುರುಷರು ಈ ವಿಷಕಾರಿ ಪದ್ಧತಿಯ ರದ್ದತಿಗೆ ಹೋರಾಟ ಮಾಡುತ್ತಲೇ ಬಂದಿದ್ದಾರೆ.

ರಾಜಕೀಯದ ನೆಲೆಗಟ್ಟಿನಿಂದ ರಾಹುಲ್ ಗಾಂಧಿಯವರ ಜಾತಿಯ ಪ್ರಶ್ನೆ ಮಾಡಿದ್ದು ವಿವಾದವಾಗಿ ಮಾರ್ಪಟ್ಟಿದೆ. ಆದರೆ ಸಾಮಾಜಿಕ ನೆಲೆಗಟ್ಟಿನಿಂದ ಇದು ಭರತಭೂಮಿಗೆ ಒಂದು ಕಳಂಕ ಎಂಬುದನ್ನು ಸರ್ವರೂ ಅರಿಯಬೇಕಿದೆ. ಎಲ್ಲದಕ್ಕೂ ಜಾತಿಯನ್ನೇ ಮುಂದುಮಾಡಬೇಕಾದ, ಮುಂದುಮಾಡುತ್ತಿರುವ ದೌರ್ಭಾಗ್ಯದ ವಾರಸುದಾರರು ನಾವು. ಸೇನೆ, ಕ್ರೀಡೆಯಲ್ಲಿಯೂ ಜಾತಿ ಎಳೆದು ತರುತ್ತಿರುವ ಮನಸ್ಥಿತಿಯವರು ನಾವು. ಮೂಢನಂಬಿಕೆಗೆ ಸಂಸ್ಕೃತಿ, ಪರಂಪರೆ ಎಂಬ ಹೆಸರನ್ನು ಕೊಟ್ಟಾಕ್ಷಣ ಜಾತೀಯತೆ ಎಂಬ ವಿಷವನ್ನು ಅಮೃತ ಮಾಡಲು ಸಾಧ್ಯವಾಗುವುದಿಲ್ಲ.

ಜಾತಿಯ ಮೇಲಾಟ ಮೇಳೈಸುತ್ತಿರುವ ಕಾಲಘಟ್ಟದಲ್ಲಿ ಅದರ ನಿರ್ಮೂಲನೆಗೆ, ಅದರ ಬುಡವನ್ನೇ ಕಿತ್ತು ಬಿಸಾಡಲು ನಮಗೆ ದಾರಿದೀಪವಾಗಿ ಕಾಣುವುದು ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್. ಪ್ರಜ್ಞಾವಂತರಾದ ನಾವೆಲ್ಲರೂ ಅಂಬೇಡ್ಕರರ ಜಾತಿಯನ್ನು ಅನುಸರಿಸಿದರೆ, ಜಾತಿ ನಿರ್ಮೂಲನೆಯ ಕಾರ್ಯ ವೇಗವನ್ನು ಪಡೆದುಕೊಳ್ಳುತ್ತದೆ. ಅದರ ನಾಶಕ್ಕೂ ಸಮಯ
ಕೂಡಿಬರುತ್ತದೆ. ಜಾತೀಯತೆಯ ಕರುಳಬಳ್ಳಿಯನ್ನೇ ಶಿಥಿಲಗೊಳಿಸಬಲ್ಲ ಶಕ್ತಿ ಅಂಬೇಡ್ಕರರ ಜಾತಿಗೆ ಇದೆ. ಹಾಗಾದರೆ ಅಂಬೇಡ್ಕರ್ ಜಾತಿ ಯಾವುದು? ಸಮಾನತೆಯ ಸ್ಥಾಪನೆ, ಸಮಸಮಾಜದ ನಿರ್ಮಾಣಕ್ಕೆ ಶಿಕ್ಷಣ ಹಾಗೂ ಸ್ವಾವಲಂಬನೆಯನ್ನು ಮೈಗೂಡಿಸಿಕೊಂಡ ದಿವ್ಯಜ್ಞಾನಿ ಅಂಬೇಡ್ಕರರು.

ಅವರದ್ದು ಶಿಕ್ಷಣ ಮತ್ತು ಸ್ವಾಭಿಮಾನದ ಜಾತಿ. ರಾಷ್ಟ್ರದ ಗಂತವ್ಯವನ್ನು (ಗುರಿಯನ್ನು) ನಿರ್ಧಾರ ಮಾಡುವಾಗ, ವ್ಯಕ್ತಿಗಳ, ಪಕ್ಷಗಳ ಗಂತವ್ಯವನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು, ಎಲ್ಲದಕ್ಕೂ ರಾಷ್ಟ್ರವನ್ನೇ ಅಗ್ರಗಣ್ಯವಾಗಿ ತೆಗೆದುಕೊಳ್ಳಬೇಕು ಎಂದು ಅಂಬೇಡ್ಕರ್ ಅವರು ೧೯೪೬ರ ಡಿಸೆಂಬರ್ ೧೭ರಂದು ತಮ್ಮ ಮೊದಲ ಸಂವಿಧಾನ ರಚನಾ ಸಭೆಯ ಭಾಷಣದಲ್ಲಿ ಪ್ರತಿಪಾದನೆ ಮಾಡಿದ್ದರು. ಅಂಬೇಡ್ಕರರದ್ದು ರಾಷ್ಟ್ರೀಯತೆಯ ಜಾತಿ. ಅದೇ ಡಿಸೆಂಬರ್ ೧೭ರಂದು ಅವರು ಮಾತನಾಡುತ್ತಾ, ‘ಸಮಯ ಮತ್ತು ಸನ್ನಿವೇಶ ಸಹಕರಿಸಿದರೆ ಭಾರತವು ಜಾತಿ-ಮತ-ಪಂಥಗಳನ್ನು ಹೊರತು ಪಡಿಸಿ ಒಂದಾಗುವುದನ್ನು ಜಗತ್ತಿನ ಯಾವ ಶಕ್ತಿಯೂ ತಡೆಯಲಾರದು’ ಎಂಬ ಆಶಾವಾದದ ಕರೆನೀಡಿದ್ದರು.

ಅಂಬೇಡ್ಕರರದ್ದು ಐಕ್ಯತೆಯ ಜಾತಿ. ಸದಸ್ಯರೊಬ್ಬರ ಪ್ರಶ್ನೆಗೆ ಅಂಬೇಡ್ಕರರು ಉತ್ತರಿಸುತ್ತಾ, ‘ಈ ಸಂವಿಧಾನ ರಚನಾ ಸಭೆಯು ತನ್ನ ಕಾರ್ಯವನ್ನು ಪ್ರಾರಂಭ ಮಾಡುವ ಮೊದಲೇ
ಬ್ರಿಟನ್ ಸಂಸತ್ತು ನಿರ್ದೇಶಕ ಎಲ್ಲಾ ನಿರ್ದೇಶನಗಳನ್ನು ತಿರಸ್ಕರಿಸಿಯಾಗಿದೆ. ಬ್ರಿಟನ್ ನಿರ್ದೇಶಿಸುವ ಯಾವುದೇ ಅಂಶಗಳನ್ನು ಸಂವಿಧಾನದ ಭಾಗವನ್ನಾಗಿ ಮಾಡಲು ನನ್ನನ್ನು ಸೇರಿದಂತೆ ಯಾವುದೇ ಸದಸ್ಯರು ಅವಕಾಶ ಕೊಡುವುದಿಲ್ಲ’ ಎಂದು ಗುಡುಗಿದ್ದರು. ಅಂಬೇಡ್ಕರರದ್ದು ರಾಷ್ಟ್ರಪ್ರೇಮದ ಜಾತಿ. ಅಂಬೇಡ್ಕರರು, ‘ಆರ್ಯ, ಅನಾರ್ಯ ಎಂಬ ಸಿದ್ಧಾಂತವೇ ಪೊಳ್ಳು. ಅದು ಎಂದೋ ಸತುಹೋಗ ಬೇಕಿತ್ತು. ಇಂಥ ಒಂದು ವಾದವು ವಿದೇಶಿಯರ ತೆಳುವಾದ ಸಿದ್ಧಾಂತದ ಮೇಲೆ ನಿಂತಿದೆ. ಋಗ್ವೇದದ ಆಧಾರದ ಮೇಲೆ ಇದನ್ನು ಹೊಡೆದು ಉರುಳಿಸಬಹುದು’ ಎಂದಿದ್ದರು. ಅಂಬೇಡ್ಕರರದ್ದು ನೆಲಮೂಲ ಪರಂಪರೆಯ ಜಾತಿ.

‘ಏಕರೂಪ ಕಾನೂನು ಸಮಿತಿಯ ಒಳಗಡೆ ಕೆಲವು ಹಿಂದೂ ಕಾನೂನುಗಳನ್ನು ಜೋಡಿಸಿದ್ದೇನೆ, ಅವು ಹಿಂದೂ ಕಾನೂನುಗಳು ಎನ್ನುವುದಕ್ಕಿಂತ ಶ್ರೇಷ್ಠವಾದದ್ದು ಎನ್ನುವ ಕಾರಣಕ್ಕಾಗಿ ಯಾವುದೇ ಧರ್ಮದ ಹಂಗಿಲ್ಲದೆ ಜೋಡಿಸಿದ್ದೇನೆ’ ಎಂದು ಅಂಬೇಡ್ಕರ್ ಝೇಂಕಾರ ಮಾಡಿದ್ದರು. ಅಂಬೇಡ್ಕರ್ ಅವರದ್ದು ಸುಧರ್ಮದ ಜಾತಿ. ಅಂಬೇಡ್ಕರ್ ಅವರು ನಾಸಿಕ್‌ನ ಕಾಳರಾಮನ
ಗುಡಿಯ ಹೋರಾಟದಲ್ಲಿ, ‘ರಾಮ ನನಗೂ ಬೇಕು, ನನ್ನವರಿಗೂ ಬೇಕು’ ಎಂದು ಆಗ್ರಹಿಸಿದ್ದರು. ಅಂಬೇಡ್ಕರರದ್ದು ಸಮಾನತೆಯ ಜಾತಿ. ಅಂಬೇಡ್ಕರರು ೧೨.೫.೧೯೩೯ರಂದು ಪುಣೆಯಲ್ಲಿ
ಆರ್‌ಎಸ್‌ಎಸ್ ಶಿಬಿರವೊಂದರಲ್ಲಿ ಪಾಲ್ಗೊಂಡು, ಅಲ್ಲಿನ ಸ್ವಯಂಸೇವಕರ ಶಿಸ್ತು ಮತ್ತು ನಡವಳಿಕೆ ಯನ್ನು ನೋಡಿ, ‘ಆರ್‌ಎಸ್‌ಎಸ್ ಕಾರ್ಯವಿಸ್ತರಣೆಯು ರಾಷ್ಟ್ರವ್ಯಾಪಿ ಆಗಬೇಕು, ಆ ಮೂಲಕ ಭಾರತ ಬೆಳಕು ಕಾಣಬೇಕು’ ಎಂಬ ಸದಭಿಪ್ರಾಯವನ್ನು ಸಾರಿದ್ದರು. ಅಂಬೇಡ್ಕರರದ್ದು ಸೇವೆಯ ಜಾತಿ.

ಘಜನಿ ಮೊಹಮ್ಮದ್, ಘೋರಿ ಮೊಹಮ್ಮದರ ಭಾರತದ ಮೇಲಿನ ದಾಳಿಯನ್ನು ಅಂಬೇಡ್ಕರರು ಉಲ್ಲೇಖ ಮಾಡಿ, ಮುಸ್ಲಿಂ ಮತಾಂಧತೆಯನ್ನು, ಕಾಫಿರ್ ಪದ್ಧತಿಯನ್ನು ತಿರಸ್ಕರಿಸಿದ್ದರು. ಅಂಬೇಡ್ಕರರದ್ದು ವಿಶ್ವಮಾನವ ಜಾತಿ. ಭಾರತವು ಪ್ರಕೃತಿದತ್ತವಾಗಿಯೇ ಅಖಂಡವಾದದ್ದು. ಭಾರತವನ್ನು ವಿಭಜಿಸುವುದೆಂದರೆ ಭಾರತಾಂಬೆಯ ಒಂದು ಭಾಗವನ್ನು ಕತ್ತರಿಸಿಕೊಡುವುದು ಎಂದೇ ಅರ್ಥ. ಹಾಗಾಗಿ ಭಾರತವನ್ನು ತುಂಡುಮಾಡಬಾರದು ಎಂಬ ಆಶಯವನ್ನು ಅಂಬೇಡ್ಕರ್ ವ್ಯಕ್ತಪಡಿಸಿದ್ದರು. ಅಂಬೇಡ್ಕರರದ್ದು ಅಖಂಡ ಭಾರತ ಜಾತಿ.

ಅಂಬೇಡ್ಕರರು, ‘ನಾನು ಧರ್ಮಾಂತರ ಮಾಡುವುದಿಲ್ಲ. ಒಂದು ವೇಳೆ ಜಾತಿ ನಿರ್ಮೂಲನೆಗಾಗಿ ಧರ್ಮಾಂತರ ಮಾಡುವುದು ಅನಿವಾರ್ಯವೇ ಆದರೆ, ಈ ನೆಲದ ಧರ್ಮವನ್ನೇ ಆಶ್ರಯಿಸುತ್ತೇನೆಯೇ ಹೊರತು ರಾಷ್ಟ್ರಾಂತರ ಮಾಡುವುದಿಲ್ಲ’ ಎಂದು ೧೯೩೬ರಲ್ಲಿ ಘೋಷಿಸಿದ್ದರು. ಅಂಬೇಡ್ಕರರದ್ದು ಭರತಭೂಮಿಯ ಜಾತಿ. ಅಂಬೇಡ್ಕರರು ೧೯೪೮ರ ನವೆಂಬರ್
೪ರಂದು, ಸಂವಿಧಾನ ರಚನಾ ಸಭೆಯಲ್ಲಿ ನಿಂತು, ‘ಕಾಲಕಾಲದ ನಿರೀಕ್ಷೆಗೆ ಅನುಗುಣವಾಗಿ ಪ್ರಜೆಗಳ ಕಲ್ಯಾಣಕ್ಕೋಸ್ಕರ ಸಂವಿಧಾನದ ಮಾರ್ಪಾಟಾಗಬೇಕು, ತಿದ್ದುಪಡಿ ಯಾಗಬೇಕು. ಹಾಗಾಗಿ, ತಿದ್ದುಪಡಿ ಮಾಡುವ ೩೬೮ನೇ ವಿಽಯನ್ನು ದಕ್ಷಿಣ ಆಫ್ರಿಕದಿಂದ ತಂದು ಭಾರತ ಸಂವಿಧಾನಕ್ಕೆ ಜೋಡಿಸಿದ್ದೇನೆ’ ಎಂದಿದ್ದರು.

ಅಂಬೇಡ್ಕರರದ್ದು ಕಲ್ಯಾಣರಾಜ್ಯದ ಜಾತಿ. ೧೯೪೮ರ ನವೆಂಬರ್ ೧೫ರಂದು ಅಂಬೇಡ್ಕರರು, ‘ಜಾತ್ಯತೀತತೆ ಎಂಬುದು ಪಾಶ್ಚಿಮಾತ್ಯ ಚಿಂತನೆ, ಅದು ಈ ನೆಲದ ಗುಣಕ್ಕೆ ಒಗ್ಗುವುದಿಲ್ಲ. ಆದ್ದರಿಂದ ಕೆ.ಟಿ. ಷಾ ಅವರ ಜಾತ್ಯತೀತತೆ ಸೇರ್ಪಡೆ ತಿದ್ದುಪಡಿಯನ್ನು ಒಪ್ಪಲಾರೆ’ ಎಂದು ನಿರಾಕರಿಸಿದ್ದರು. ಅಂಬೇಡ್ಕರರದ್ದು ಸ್ವದೇಶಿ ಜಾತಿ. ೨೧ನೇ ಶತಮಾನದ ಅಂತ್ಯದಲ್ಲಿದ್ದರೂ, ಜಾತಿ, ಅಸ್ಪೃಶ್ಯತೆಗಳೆಂಬ ಸಾಮಾಜಿಕ ಕೆಡುಕುಗಳನ್ನೇ ಮನಸ್ಸಿಗೆ ಇಳಿಸಿಕೊಂಡಿರುವ ನಾವುಗಳು, ಅಂಬೇಡ್ಕರರ ರಾಷ್ಟ್ರಪ್ರೇಮದ ನೆಲೆಗಟ್ಟಿನಲ್ಲಿ ನಿಂತು ಯೋಚಿಸುವುದನ್ನು, ತರ್ಕಿಸುವುದನ್ನು, ವಿವೇಚಿಸುವುದನ್ನು, ಅವಲೋಕಿಸುವುದನ್ನು ಹಾಗೂ ಸಂಶೋಧನಾ ಸತ್ಯವನ್ನು ಒಪ್ಪಿಕೊಳ್ಳುವುದನ್ನು ಮೈಗೂಡಿಸಿಕೊಳ್ಳಬೇಕಿದೆ.

ದಿಟಮಾರ್ಗದಲ್ಲಿ ಜಾತಿ ನಿರ್ಮೂಲನೆಗೆ ಪ್ರಯತ್ನಿಸುವುದೆಂದರೆ ಅದು ಅಂಬೇಡ್ಕರರಂತೆ ರಾಷ್ಟ್ರಜಾತಿ ಪಥದಲ್ಲಿ ನಿಲ್ಲಬೇಕು. ಹಾಗಾಗಿ, ‘ನಾನು ಅಂಬೇಡ್ಕರರಂತೆ ರಾಷ್ಟ್ರಜಾತಿಯವನು’ ಎಂದು ಘೋಷಿಸಿಕೊಳ್ಳಲು ಸಜ್ಜಾಗಬೇಕು.

(ಲೇಖಕರು ಸಂವಿಧಾನತಜ್ಞರು)